- ಕ್ಯಾಮೆರಾ ಮನ್.. - ಡಿಸಂಬರ್ 31, 2021
- ಯುದ್ಧ ಗೆದ್ದ ನಂತರ - ಜುಲೈ 20, 2021
- ಪುಸ್ತಕ ದಿನ ಮತ್ತು ಚೆಕ್ ರೋಲ್ ಸಾಹಿತ್ಯ - ಏಪ್ರಿಲ್ 23, 2021
ಶೆಡ್ಡು ,ಗೋದಾಮು ,ಕೊಟ್ಟಿಗೆಗಳ ಸೂರಿನ ತುಂಬಾ ಗೂಡು ಕಟ್ಟಿಕೊಂಡಿದ್ದ ಪಾರಿವಾಳಗಳಾದರೂ ಬರುತ್ತವೆ ಎಂದುಕೊಂಡರೆ ಅವೂ ದೂರದ ಬೋರವೆಲ್ಲಿನಲ್ಲಿ ಸೋರುವ ನೀರಿಗೆ ಕೊಕ್ಕೊಡ್ಡುತ್ತಿದ್ದವೇ ಹೊರತು ನಾ ಇಟ್ಟ ಬಟ್ಟಲಿನತ್ತ ತಿರುಗಿಯೂ ನೋಡಲಿಲ್ಲ.ಹಕ್ಕಿ ಬಾಯಾರಿಕೆಯನ್ನು ತಣಿಸುವ ನನ್ನ ಪ್ರಯತ್ನಕ್ಕೆ ಸೋಲಾದ ಕಾರಣ ನನ್ನೊಳಗೆ ನಾನು ನಿರ್ಧರಿಸಿಕೊಂಡಿದ್ದೆ.’ಹಕ್ಕಿಗಳು ಮನುಷ್ಯರಿಟ್ಟ ನೀರು ಕುಡಿಯುವುದಿಲ್ಲ’
…. ಮುಂದೇನಾಯಿತು ಎಂದು ತಿಳಿಯಲು ಈ ಲೇಖನ ಓದಿ.
ಕೆಲವು ಸಂಭ್ರಮಗಳು ಹಾಗೆ.ಅಕಾರಣ ಘಟಿಸುತ್ತವೆ.
ಎಲ್ಲೋ ಓದಿದ, ಯಾರೋ ಹೇಳಿದ ,ಬಾಲ್ಯಕ್ಕೆ ಅಂಟಿದ ಯಾವುದೋ ವಿಚಾರಗಳು ಅಚಾನಕ್ಕು ಒಂದು ದಿನ ಆರಂಭವಾಗಿ ಮುಂದುವರೆದು ನಂತರ ಅವು ಬದುಕಿನ ಅವಿಭಾಜ್ಯವೇ ಆಗಿ ಹೋಗುತ್ತವೆ.
ನಿತ್ಯದ ಈ ಯಾಂತ್ರಿಕತೆಯಲ್ಲಿ ಎಲ್ಲೋ ಕೆಲವರಿಗಷ್ಟೇ ತಮ್ಮ ವೃತ್ತಿಯೇ ಪ್ರವೃತ್ತಿಯಾಗುವ ,ಹವ್ಯಾಸವೇ ಗಳಿಕೆಯ ಮಾರ್ಗವಾಗುವ ಅದೃಷ್ಟ ಸಿಗುತ್ತದೆ.
ಉಳಿದಂತೆ ಬಹುತೇಕ ನಮಗೆ ನಾವೇ ಸಂತೋಷದ ಮಾರ್ಗಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ.
ಹುಡುಕುವ ಈ ನಿಟ್ಟಿನಲ್ಲಿ ಅಭ್ಯಾಸವಾಗುವ ಕೆಲವು ದಿನಚರಿಗಳಿಂದ ಸಿಗುವ ಖುಷಿಗೆ ಬೆಲೆ ಕಟ್ಟಲಾಗದು.
ಈಗ್ಗೆ ನಾಲ್ಕು ವರ್ಷಗಳ ಹಿಂದಿನ ಮಾತಿದು.
ಅಲ್ಲಿಗೂ ನಾಲ್ಕಾರು ವರ್ಷ ಹಿಂದಿನಿಂದಲೂ ಪತ್ರಿಕೆಗೆ ಬರೆಯುವ ಲೇಖನಗಳಲ್ಲಿ ಪರಿಸರಕ್ಕೆ ,ಜೀವಸಂಕುಲಕ್ಕೆ ಪೂರಕವಾಗುವ ಸಾಕಷ್ಟು ವಿಚಾರಗಳನ್ನು ನನ್ನ ಮಿತಿಯಲ್ಲಿ ಬರೆಯುತ್ತಿದ್ದೆ.
ಆದರೆ ಬೇಸಿಗೆಯ ದಿನಗಳಲ್ಲಿ ಹಕ್ಕಿಗೆ ನೀರು, ಆಹಾರ ಇಡುವ ವಿಚಾರಕ್ಕೆ ಮಾತ್ರ ನನ್ನದು ಮುಗಿಯದ ತಕರಾರು.
ಬಿರು ಬೇಸಿಗೆಯ ಈ ದಿನಗಳಲ್ಲೂ ಹಕ್ಕಿಗಳಿಗೆ ನೀರಿಟ್ಟರೆ ಅವು ಬಂದು ಕುಡಿಯುವುದಿಲ್ಲ ಎಂಬುದು ನನ್ನ ಖಚಿತ ನಂಬಿಕೆಯಾಗಿತ್ತು.
ಇದಕ್ಕೆ ನನ್ನ ಸ್ವಂತ ಅನುಭವದ ಕಾರಣವೂ ಇತ್ತು.
ಪ್ರತಿದಿನವೂ ನಾನು ನೀರು ತುಂಬಿ ಇಡುತ್ತಿದ್ದ ಬಾಲ್ದಿಗಳಲ್ಲಿ ಒಂದು ಹಕ್ಕಿಯೂ ಜಪ್ಪಯ್ಯ ಎಂದರೂ ಸುಳಿಯಲಿಲ್ಲ.ನನ್ನ ಮರಮರಳಿ ಯತ್ನವೂ ಫಲ ಕೊಡದೆ ನನಗೆ ನಿರಾಸೆ.
ಶೆಡ್ಡು ,ಗೋದಾಮು ,ಕೊಟ್ಟಿಗೆಗಳ ಸೂರಿನ ತುಂಬಾ ಗೂಡು ಕಟ್ಟಿಕೊಂಡಿದ್ದ ಪಾರಿವಾಳಗಳಾದರೂ ಬರುತ್ತವೆ ಎಂದುಕೊಂಡರೆ ಅವೂ ದೂರದ ಬೋರವೆಲ್ಲಿನಲ್ಲಿ ಸೋರುವ ನೀರಿಗೆ ಕೊಕ್ಕೊಡ್ಡುತ್ತಿದ್ದವೇ ಹೊರತು ನಾ ಇಟ್ಟ ಬಟ್ಟಲಿನತ್ತ ತಿರುಗಿಯೂ ನೋಡಲಿಲ್ಲ.
ಹಕ್ಕಿ ಬಾಯಾರಿಕೆಯನ್ನು ತಣಿಸುವ ನನ್ನ ಪ್ರಯತ್ನಕ್ಕೆ ಸೋಲಾದ ಕಾರಣ ನನ್ನೊಳಗೆ ನಾನು ನಿರ್ಧರಿಸಿಕೊಂಡಿದ್ದೆ.
‘ಹಕ್ಕಿಗಳು ಮನುಷ್ಯರಿಟ್ಟ ನೀರು ಕುಡಿಯುವುದಿಲ್ಲ’
ಇದೇ ದಿನಗಳಲ್ಲಿ ನನ್ನ ಮನೆಗೆ ಬಂದಿದ್ದು ನನ್ನ ಪುಟ್ಟ ನಾಯಿ ಬ್ರೂನೋ.ಕಣ್ಣು ಬಿಟ್ಟಿಲ್ಲದ ಮರಿಯನ್ನು ತಂದು ಸೆರಿಲ್ಯಾಕು ರಾಗಿಗಂಜಿಯಿಂದ ಹಾಲು ಅನ್ನಕ್ಕೆ ಶಿಫ್ಟ್ ಆದಮೇಲೆ ಅವನೊಂದು ಅಭ್ಯಾಸ ರೂಢಿಸಿಕೊಂಡ.
ಹಾಕಿದ ಊಟದಲ್ಲಿ ಯಾವಾಗಲೂ ಅರ್ಧ ಮಾತ್ರ ತಿಂದು ಉಳಿದರ್ಧವನ್ನು ಹಾಗೆ ಬಿಡುವುದು.
ಹಾಲು ಅನ್ನವಾದ್ದರಿಂದ ಕೆಲವು ಬೆಕ್ಕುಗಳು ಆಗೀಗ ಬಂದು ತಿಂದು ಹೋಗುತ್ತಿದ್ದವು.
ಆಗಾಗ ಬೇರೆ ನಾಯಿಗಳೂ ಬಂದು ‘ಅಹಾಹಾ…ದೊರಕಿತೋ ಎನಗೆ ಇಂದು ಸುಭೋಜನ’ಅನ್ನುವ
ಸ್ಟೈಲಿನಲ್ಲಿ ತಟ್ಟೆ ನೆಕ್ಕಿ ಮುಗಿಸುತ್ತಿದ್ದವು.
ಇದೆಲ್ಲವೂ ಕಿರಿಕಿರಿಯಾದರೂ ಸಹಿಸಿಕೊಳ್ಳಲೇಬೇಕಿತ್ತು.
ಅದೊಂದು ದಿನ ಬ್ರೂನೊ ಗೂಡಿನೊಳಗೆ ಇಟ್ಟಿದ್ದ ತಟ್ಟೆಯಲ್ಲಿ ಅರ್ಧ ಬಿಟ್ಟಿದ್ದ ಹಾಲು ಅನ್ನ ಅತಿಥಿ ಬೆಕ್ಕು ನಾಯಿಗಳ ಹೊಟ್ಟೆ ಸೇರದೆ ತಟ್ಟೆಯಲ್ಲೇ ಉಳಿದಿರುವಾಗ ;ಅಚಾನಕ್ಕು ನಾಕಾರು ಗುಬ್ಬಚ್ಚಿಗಳು ಬಂದು ಬಹಳ ಖುಷಿಯಿಂದ ಅನ್ನದ ಅಗುಳನ್ನು ಹೆಕ್ಕಿಹೆಕ್ಕಿ ತಿನ್ನುತ್ತಿದ್ದವು.
ಆಹಾ..
ನನ್ನ ಜೀವ ತುಂಬಿಕೊಂಡ ಹಾಗಾಯ್ತು.
ಗುಬ್ಬಚ್ಚಿಗಳೇ ಹಾಗೆ.ಅವುಗಳನ್ನು ಸುಮ್ಮನೆ ನೋಡುವುದು ಕೂಡ ಸಂಭ್ರಮ. ಇನ್ನೂ ಅನ್ನದ ಅಗುಳಗಳನ್ನು ಮೃಷ್ಟಾನ್ನದಂತೆ ತಿನ್ನುತ್ತಿರುವ ,ಮರಿಹಕ್ಕಿಗೆ ಕೊಕ್ಕಿನಲ್ಲಿ ಒಯ್ದು ಉಣಿಸುತ್ತಿರುವ ದೃಶ್ಯ ಎಷ್ಟು ಆಪ್ಯಾಯಮಾನವಾಗಿರಬಹುದು ನೀವೇ ಊಹಿಸಿಕೊಳ್ಳಿ.
ಇದೊಂಥರ ಅತಿಶಯ ಎನಿಸಿದ್ರೂ
ನನ್ನ ತಂದೆಯಿಂದ ಅನುವಂಶೀಯವಾಗಿ ಬಂದಿರುವ ಪಕ್ಷಿ ಪ್ರೀತಿ ನನ್ನನ್ನು ಹೀಗೆ ಭಾವುಕಳಾಗಿ ಮಾಡಿರಬಹುದೇ?
ಗೊತ್ತಿಲ್ಲ.
ವಿಷಯ ಇದಷ್ಟೇ ಅಲ್ಲ.
ನೂರು ಮನೆಗಳಿರುವ ನಮ್ಮ ಹಳ್ಳಿಯಲ್ಲಿ ಎಲ್ಲೋ ಒಂದೆರಡು ಮನೆಯ ಅಂಗಳದಲ್ಲಿ ಮಾತ್ರ ಗುಬ್ಬಚ್ಚಿಗಳು ಹಾರಾಡುತ್ತಿದ್ದವು.
ಈ ಪುಟಾಣಿ ಮುದ್ದು ಹಕ್ಕಿಗಳು ನನ್ನ ಅಂಗಳಕ್ಕೂ ಬರಬೇಕೆಂದು ಕೊಂಡಾಗಲೆಲ್ಲಾ ನೆರೆಹೊರೆಯವರು
‘ಕರುಬಾಟ(ಅಸೂಯೆ)’
ಇಲ್ಲದವರ ಮನೆಗೆ ಮಾತ್ರ ಗುಬ್ಬಚ್ಚಿ ಬರುವುದು ಅನ್ನುತ್ತಿದ್ದರು.ಆಗ ನನಗಿನ್ನೂ ಕಸಿವಿಸಿ.
ಆನಂತರದ್ದು,
ಯೋಗಾಯೋಗ..
ರಾತ್ರಿ ಕಂಡ ಕನಸು ಹಗಲು ಎದುರು ಬಂದ ಹಾಗೆ.
ನನ್ನ ಪ್ರೀತಿಯ ಗುಬ್ಬಚ್ಚಿಗಳು ಬೆಳಗು ಬೈಗು ದಂಡು ಕಟ್ಟಿಕೊಂಡು ಹಾರಿ ಬಂದು ನಮ್ಮ ಬ್ರೂನೋ ತಟ್ಟೆಯಲ್ಲಿ ಉಳಿದಿರುತ್ತಿದ್ದ ಹಾಲು ಅನ್ನವನ್ನು ಇಷ್ಟಪಟ್ಟು ತಿನ್ನಲಾರಂಬಿಸಿದವು.
ಇದೇ ಅವಕಾಶಕ್ಕಾಗಿ ಕಾಯ್ದವಳಂತೆ ನಾನು ಪುಟ್ಟ ಬಟ್ಟಲಿನಲ್ಲಿ ನೀರಿಟ್ಟೆ.
ನಾಕಾರು ದಿನ ಕಳೆದ ಮೇಲೆ ಅವು ನೀರು ಕುಡಿಯುವುದನ್ನು ಕೂಡ ಆರಂಭಿಸಿದವು.
ನನ್ನ ದಿನದ ಕಾಲಂಶದ ಸಮಯ ಈ ಮುದ್ದು ಹಕ್ಕಿಗಳು ಕುಪ್ಪಳಿಸುವುದನ್ನೂ ,ಕತ್ತು ಕೊಂಕಿಸುವುದನ್ನೂ,ಇದ್ದಕ್ಕಿದ್ದಂತೆ ಜಗಳ ಹತ್ತಿಸಿಕೊಳ್ಳುವುದನ್ನೂ ನೋಡುತ್ತಾ ಕಳೆಯುವುದು ನನಗೆ ಪ್ರಿಯವಾಯಿತು.
ನನ್ನ ಬ್ರೂನೋ ನಾಯಿಯೂ ಅಷ್ಟೇ.
ಅದೇನೋ ಭಾಂದವ್ಯವಿದ್ದವರಂತೆ ಅನ್ನ ತಿನ್ನಲು ಬರುತ್ತಿದ್ದ ಗುಬ್ಬಚ್ಚಿಗಳಿಗೆ ಕಿಂಚಿತ್ ತೊಂದರೆಯೂ ಆಗದಂತೆ ಎಚ್ಚರಿಕೆ ವಹಿಸುತ್ತದೆ.
ಕೊನೆಕೊನೆಗೆ ಬ್ರೂನೋ ಕಾಲಮೇಲೆ ,ಬಾಲದ ಮೇಲೆ ಗುಬ್ಬಚ್ಚಿಗಳು ಕೂರುವಷ್ಟು ಸದರ ಕೊಟ್ಟು ತನ್ನ ಜೀವದ ಅಕ್ಕರೆಯನ್ನು ಧಾರೆ ಎರೆದ ಫಲವಾಗಿ ಅವನ ಗೂಡಿನ ತುಂಬೆಲ್ಲ ಗುಬ್ಬಚ್ಚಿ ಹಿಕ್ಕೆಯ ನವ್ಯ ಚಿತ್ರಗಳು.
ಆಮೇಲಿನ ದಿನಗಳಲ್ಲಿ ಗುಬ್ಬಚ್ಚಿಗಳು ನನ್ನ ಜೀವದ ಗೆಳೆಯರು.
ಮನೆಯ ಜಗಲಿಯಲ್ಲಿ ಯಾವಾಗಲೂ ಒಂದು ದೊಡ್ಡ ಡಬ್ಬಿಯಲ್ಲಿ ಅಕ್ಕಿ ತುಂಬಿಟ್ಟು ನಾನು ಕಾಯುವುದು ಅವುಗಳಿಗೆ ತಿಳಿಯುತಿತ್ತು.
ನಿಜಕ್ಕೂ ತಿಳಿಯುತ್ತದೆ. ಯಾಕೆಂದರೆ ಗುಬ್ಬಚ್ಚಿಗಳು ಮನುಷ್ಯ ಸಂಪರ್ಕದಲ್ಲಿ ಹೆಚ್ಚು ಹೆಚ್ಚು ಇರಲು ಇಷ್ಟಪಡುತ್ತವೆ.
ಅದರಲ್ಲೂ ಅವುಗಳನ್ನು ಮಾತಾಡಿಸಿದರೆ,ಕಾಳು ಕೊಟ್ಟರೆ ಅವರನ್ನು ಗುರುತಿಸುವುದು ಕೂಡ ಅವುಗಳಿಗೆ ಸಾಧ್ಯ.
ಇದನ್ನೆಲ್ಲ ಯಾವುದೋ ಬರಹದ ಮೂಲಕವೋ ಗೂಗಲಿಸಿಯೋ ಹೇಳುತ್ತಿಲ್ಲ.
ನನ್ನ ನಡೆದಾಡುವ ಸದ್ದು, ಮಾತನಾಡುವ ಸದ್ದು ಕೇಳಿದೊಡನೆ ಪುರ್ರನೆ ಮಕ್ಕಳು ಮೊಮ್ನಕ್ಕಳು ಮರಿಮಕ್ಕಳೊಡನೆ ಹಾರಿ ಬರುವುದು ಅವುಗಳಿಗೆ ಸಂಭ್ರಮ.
ನಾನು ಅಕ್ಕಿ ಉಗ್ಗಿದೊಡನೆ ಚಿಲಿಪಿಲಿಗುಟ್ಟುತ್ತಾ ಒಂದೆರಡು ನಿಮಿಷದಲ್ಲಿ ತಿಂದು ಮುಗಿಸಿ ಮತ್ತೆ ಕತ್ತು ಕೊಂಕಿಸುವಾಗ ಎಂಥ ಕಟು ಹೃದಯಿಗಾದರೂ ಮುದ್ದು ಉಕ್ಕುದಿದ್ದರೆ ನನ್ನಾಣೆ.
ನಮ್ಮ ಹೆಬ್ಬೆರಳ ದಪ್ಪದ ಹೊಟ್ಟೆಯಿರುವ ಗುಬ್ಬಚ್ಚಿಗಳಿಗೆ ಮುಕ್ಕಿದ ಕಾಳು-ಕಡ್ಡಿ ಸಾಕಾಗದೇ ಹೋದರೆ ಒಂದಿಷ್ಟು ಸಿಟ್ಟು.
ನನ್ನ ಮುಖದ ಮೇಲೆ ಹಾರಿ ರಚ್ಚೆ ತೆಗೆದು ಮತ್ತಷ್ಟು ಕಾಳು ಹಾಕುವವರೆಗೆ ಪೋರ್ಟಿಕೋ ಬದಿಗೇ ಹಿಕ್ಕೆ.
ಒಂಥರಾ ,ಇದು ನಿಂಗೆ ಪನಿಷ್ಮೆಂಟು ಅಂತನ್ನುವ ಹಾಗೆ.
ನನ್ನ ಮತ್ತು ಈ ಪುಟ್ಟ ದೇವತೆಗಳ ಬಾಂಧವ್ಯ ಆರಂಭವಾದ ಮೇಲೆ ಗುಬ್ಬಚ್ಚಿಗಳದ್ದು ಆರು ಏಳನೇ ಜನರೇಷನ್ ಆಗಿರಬಹುದು.ಅಥವಾ ಇನ್ನೂ ಹೆಚ್ಚಾಗಿರಬಹುದು
ಒಂದು ಸಂತಾನದಲ್ಲಿ ಒಂಟಿಕಾಲಿನ ಗುಬ್ಬಿಯೊಂದು ಇತ್ತು.
ಇನ್ನೊಮ್ಮೆ ರೆಕ್ಕೆ ಸ್ವಲ್ಪ ಬೇರೆಥರ ಬಾಗಿರುವ ಗುಬ್ಬಚ್ಚಿ ಇತ್ತು.
ಬಹುತೇಕ ಇವೆಲ್ಲವೂ ವಿಶೇಷ ಚೇತನ ಪುಟ್ಟಾಣಿಗಳು. ಅವು ಬಂದಾಗ ನಾಕಾರು ಮುಷ್ಟಿ ಹೆಚ್ಚಾಗಿಯೇ ಅಕ್ಕಿ ಚಲ್ಲುವುದು ನಂಗೆ ಅನೂಚಾನ.
ಗುಬ್ಬಚ್ಚಿಗಳು ನನ್ನ ಫೋಟೋಗಳಲ್ಲಿ ಇರುವುದನ್ನು ಕಂಡು ಪ್ರೀತಿಯುಕ್ಕಿ ಸಾಕಷ್ಟು ಮಂದಿ ತಾವೂ ಕಾಳು ಕೊಟ್ಟು ಗುಬ್ಬಚ್ಚಿ ಸೆಳೆಯುತ್ತಿದ್ದಾರೆ.
ಅದೇನೋ ಗೊತ್ತಿಲ್ಲ.
ಇಲ್ಲಿಯವರೆಗೂ ಗುಬ್ಬಚ್ಚಿಗಳ ಆಯಸ್ಸು ಎಷ್ಟು?
ಅವುಗಳ ಮೂಲ ಯಾವುದು?
ಮೊಟ್ಟೆ ಯಾವ ಸಮಯದಲ್ಲಿ ಇಡುತ್ತವೆ?
ಅವುಗಳ ಜೀವನಚಕ್ರ ,ಸಂಸಾರ ಹೇಗೆ ಎನ್ನುವುದರ ಕುರಿತು ಗೂಗಲಿಸಹೋಗಿಲ್ಲ.
ನನ್ನ ಪ್ರಕಾರ ಜೀವ ವ್ಯವಸ್ಥೆಯ ಕಡೆಗಿನ ಅತಿ ಜ್ಞಾನ /ಪರಿಸರವನ್ನು ಅತಿಯಾಗಿ ಅರಿಯುವುದು ಎಂದೆಂದಿಗೂ ಮಾರಕವೇ.ಯಾವುದೇ ಜೀವಜಾಲದ ಸಹಜತೆಯನ್ನು ಉಳಿಸಿದಷ್ಟೂ ಅದರ ಆಯಸ್ಸು ಹೆಚ್ಚು.
ಇದಕ್ಕೊಂದು ಲೇಖನ ಬರೆಯಬಹುದೇ ?
ಅದರ ಕುರಿತು ಬರೆಯಲು ಸಾಧ್ಯವೇ ಅಂತ ನನ್ನ ಅಕ್ಷರದ ಆತ್ಮೀಯರು ಕೇಳಿದಾಗೆಲ್ಲ ನನಗೆ ದಿಗಿಲಾಗುತ್ತದೆ.
ದಿನದ ಕಾಲು ಭಾಗ ಸಮಯವನ್ನು ಈ ಗುಬ್ಬಚ್ಚಿಗಳ ಸಾಂಗತ್ಯಕ್ಕೆ ಮುಡುಪಿಟ್ಟು ಒಂದು ತೀವ್ರತರನಾದ ಆತ್ಮತೃಪ್ತಿಯನ್ನು ,ಪರಿಪೂರ್ಣತೆಯನ್ನು ಅನುಭವಿಸುತ್ತಿರುವ ನಾನು ಮೇಲಿನ ಎಲ್ಲ ಕೋರಿಕೆಗಳಿಗೂ ‘ಇಲ್ಲ ಇಲ್ಲ ನಾನೀಗ ಬಹಳ ಬಿಜಿ ಇದ್ದೇನೆ, ಮತ್ತೆ ಯಾವಾಗಾದರೂ ಪ್ರಯತ್ನಿಸುತ್ತೇನೆ’ ಅಂತ ನೆಪವೊಡ್ಡಿ ಮತ್ತೆ ಮತ್ತೆ ಗುಬ್ಬಚ್ಚಿಗಳ ಸಾಂಗತ್ಯಕ್ಕೆ ಇಳಿಯುತ್ತೇನೆ.
ಮಕ್ಕಳೂ ಮನೆಯವರೂ ಸಣ್ಣ ಹುಚ್ಚು ಅಂತಾರೆ.
ಅಚ್ಚರಿಯ ಮತ್ತೊಂದು ಮಾತಿದೆ.
ನಾಕಾರು ದಿನ ನಾನು ಮನೆಯಲ್ಲಿಲ್ಲದ ಸಂದರ್ಭದಲ್ಲಿ ಬಂದೊಡನೆ ನನ್ನ ನಾಯಿಮರಿಯನ್ನು ಮಾತನಾಡಿಸಿ ದಾಸವಾಳ ನೇವರಿಸಿ ಮೆಟ್ಟಿಲು ಹತ್ತುವುದು ಅಭ್ಯಾಸ.
ಗುಬ್ಬಚ್ಚಿಗಳನ್ನು ಹಚ್ಚಿಕೊಂಡ ಮೇಲೆ ಇದು ಇಷ್ಟಕ್ಕೇ ಮುಗಿಯುವುದಿಲ್ಲ.
ನಾನು ಒಳಗೆ ಬಂದೊಡನೆ ಅವೂ ಹಾರಿಹಾರಿ ಬರುತ್ತವೆ.
ಅದೂ ಸುಮ್ಮನೆ ಹಾರುವುದಲ್ಲ.
‘ನೀ ಇಷ್ಟು ದಿನ ನಮ್ಮನ್ನು ಬಿಟ್ಟು ಹೋಗಿದ್ದು ಯಾಕೆ’
ಎಂಬ ಸಿಟ್ಟು ತೋರುವಂತ ಹಾರಾಟ.
‘ಇಲ್ಲಾ ಚುಲ್ಟು ,ಏನೋ ಮುದ್ದು ,ಈಗ ಬಂದಿಲ್ವಾ’ ಅಂತ ಮುದ್ದುಗರೆವ ಧ್ವನಿಯಲ್ಲಿ ಮಾತನಾಡಿಸಿ ನೀರಿನ ಬಟ್ಟಲನ್ನು ತೊಳೆದು ಹೊಸ ನೀರು ತುಂಬಿ ಒಂದು ಮುಷ್ಟಿ ಅಕ್ಕಿ ಚೆಲ್ಲುವವರೆಗೂ ಅದೇ ಹಠ.
ಆಮೇಲೆ ‘ಅದು ನನಗೆ ಹಾಕಿದ್ದು ಇದು ನಿನಗೆ’ ಅಂತ ಕಿತ್ತಾಡಿಕೊಂಡು ತಿನ್ನುತ್ತಾ ಮತ್ತೆ ಕಾಂಪೌಂಡಿನ ಮೇಲೆ ಕುಳಿತು ಕತ್ತು ಕೊಂಕಿಸುತ್ತವೆ.
ನಿಜ ಹೇಳಬೇಕೆಂದರೆ ಈ ಪುಟ್ಟ ದೇವರುಗಳಿಂದ ನನ್ನ ದಿನಗಳು ಪ್ರಫುಲ್ಲವಾಗಿವೆ.
…
ಗುಬ್ಬಚ್ಚಿಗಳು ಅತಿವೇಗವಾಗಿ ಅಳಿವಿನತ್ತ ಸಾಗುತ್ತಿರುವ ಜೀವಿಗಳು ಎನ್ನುವುದನ್ನು ಉಚ್ಚರಿಸಲು ಕೂಡ ಕಷ್ಟವಾಗುತ್ತದೆ.
ಈ ಕುರಿತು ಹೆಚ್ಚು ಚರ್ಚಿಸದಿದ್ದರೂ ದಿನೇದಿನೇ ಹೆಚ್ಚುತ್ತಿರುವ
ಕೀಟನಾಶಕ ,ಕಳೆನಾಶಕಗಳ ಬಳಕೆಯನ್ನು ಉದಾಹರಿಸಬಹುದು.
ಕೃಷಿಯನ್ನು ಸುಧಾರಿತ ಕ್ರಮಗಳಿಂದ ಹೊರತಾಗಿಸಿಕೊಂಡರೆ ಆಗುವ ನಷ್ಟವನ್ನು ಮೂಲತಃ ಒಬ್ಬ ರೈತಳಾಗಿ ಅನುಭವಿಸಿದ್ದೇನೆ.
ಮಾಯವಾದ ಗೂಡಂಗಡಿಗಳು,ಕಿರಾಣಿ ಹಿಟ್ಟಿನಂಗಡಿಗಳು ಕೂಡ ಇದಕ್ಕೆ ಕಾರಣವಿರಬಹುದು.
ಈಗ ಸರ್ವವ್ಯಾಪಿಯಾಗಿರುವ ಮಾಲ್ ಸಂಸ್ಕೃತಿಯಲ್ಲಿ ಗುಬ್ಬಚ್ಚಿಗಳಿಗೇನು ಕೆಲಸ.ಅಲ್ಲವೇ?.
ಕೊನೆಯಲ್ಲಿ ಒಂದೇ ಆಶಯ.
ಪರಿಸರದ ಈ ಎಲ್ಲ ಬದಲಾವಣೆಗಳಿಗೂ ನಮ್ಮ ಪುಟ್ಟ ಗುಬ್ಬಚ್ಚಿಗಳ ದೇಹ ಹೊಂದಿಕೊಳ್ಳಲಿ.
ತಾನು ಸರ್ವೈವ್ ಆಗಲೇಬೇಕೆಂಬ ಇಚ್ಛಾಶಕ್ತಿ ಪುಟ್ಟ ಹಕ್ಕಿಗಳ ಸಾಸಿವೆ ಗಾತ್ರದ ಮೆದುಳಿನಲ್ಲೂ ಹೃದಯದಲ್ಲೂ ಗಟ್ಟಿಯಾಗಲಿ.
ಇವತ್ತು ಗುಬ್ಬಚ್ಚಿ ಡೇ ಅಂತ ಮಗಳಿಗೆ ಹೇಳಿದ್ದಕ್ಕೆ..
‘ವಾವ್ ಏನ್ ಪಾರ್ಟಿ ಕೊಡಿಸ್ತಿಯಮ್ಮಾ,ನಿನ್ ಫ್ರೆಂಡ್ಸಿಗೆ ‘
ಅಂದಳು.
ನಾನು ಹೆಚ್ಚು ಯೋಚಿಸದೆ ಹಾಲು ಅನ್ನ ಎಂದೆ.
ಇಷ್ಟು ಹೊತ್ತು ಇದನ್ನು ಬರೆದುಕೊಂಡು ಒಳಗೇ ಕುಳಿತಿದ್ದಕ್ಕೆ ಆಗಲೇ ಗುಬ್ಬಚ್ಚಿಗಳು ನನ್ನ ಪೋರ್ಟಿಕೋ ಬದಿಯಲ್ಲಿ ಹಿಕ್ಕೆ ಹಾಕುತ್ತಾ ಆಚೀಚೇ ಜೋರುಜೋರು ಹಾರಾಡ್ತಾ ತಮ್ಮ ಅಸಮಾಧಾನವನ್ನು ತೋರಿಸಿಕೊಳ್ತಿವೆ.
ಮಾತಾಡಿಸಿ ನುಚ್ಚು ಹಾಕಬೇಕಿದೆ.
ಇರಿ.
…
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ