ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪಾತ್ರದೊಳಗಿನ ಕಲೆಗಳು

ಮಹಾದೇವ ಕಾನತ್ತಿಲ
ಇತ್ತೀಚಿನ ಬರಹಗಳು: ಮಹಾದೇವ ಕಾನತ್ತಿಲ (ಎಲ್ಲವನ್ನು ಓದಿ)

“ಸರಸ್ವತಿ ಪೂಜೆ
ಅಟ್ಟದಲ್ಲಿರೋ ತಂಬಿಗೆ
ಪಾತ್ರಗಳು ಪಗಡಿಗಳು
ತೊಳೆದಿಡುವಿರಾ”
ಮನದಾಕೆಯದ್ದು ಪ್ರೀತಿಯಾಜ್ಞೆ!

ನಿನ್ನೆಯಷ್ಟೇ ರಿಟೈರ್ಮೆಂಟು
ಇಂದಿನದ್ದು ಮೊದಲ ಬೆಳಗು
ಉಪ್ಪರಿಗೆ ಹತ್ತ ಹತ್ತಿದೆ!
ನನ್ನಜ್ಜನ ಹರವಾದ
‘ಎದೆ’ಯಷ್ಟೇ ಅಗಲದ
‘ಭೂತ’ ಆಕೃತಿಯ ಮರದ ಕಾಂಡದಿಂದ
ಕತ್ತರಿಸಿ ಕೊರೆದು ನಾಜೂಕಾದ
ಹಲಗೆ ಮೆಟ್ಟಿಲುಗಳು
ಕಾಲು ಮೇಲೇರಿದಂತೆ
ಕಾಲ ಹಿನ್ನಡೆದಂತೆ..

ನನ್ನ ಬೋಳುಮಂಡೆಯಂಥಾ
ಆ ಹಿತ್ತಾಳೆ ತಂಬಿಗೆ!
ಅದಕ್ಕೆ ನನ್ನದೇ ಕಿವಿಯಂತಹಾ
ಹಿತ್ತಾಳೆ ಹಿಡಿ!
ಹೊರಗೆ ಖಾಲಿ ಅನಿಸಿದರೂ
ಒಳಗೆ ಜೇಡನ ಬಲೆ
ಅಜ್ಜಿಯ ಕಾಲದಿಂದ ಅಡುಗೆ ಮನೆಯ ಹೊಗೆ ದಿನದಿನವೂ ಹರಡಿ
ಡೇಟಿಂಗ್‌ಗೂ ಸಿಗದ ಕಾರ್ಬನ್ ಕೋಟಿಂಗ್ ಅದರೊಳಗೆ

ನನಗಿಷ್ಟದ ಹಳೆಯ ಚಿತ್ರಗೀತೆ
ತಲೆಯೊಳಗೆ ಗುನುಗುನಿಸಿದೆ ತಂಬಿಗೆ ಬಾಯಿಗೆ ಹಿಡಿದು
ಎಷ್ಟೊಂದು ಪ್ರತಿಧ್ವನಿಗಳು!
ಪಿ.ಬಿ.ಶ್ರೀನಿವಾಸ್ ತಂಬಿಗೆಯೊಳಗಿಂದಲೇ
ಹಾಡಿದಂತೆ..

ಬಚ್ಚಲು ಮನೆಯ ಕಲ್ಲಿನ
ಮೇಲಿಟ್ಟು ಪಾತ್ರವನ್ನು
ಮೊದಲು ಒಳಗಿನ ಬಲೆಯನ್ನು ತೆಗೆದಂತೆ..
ಅದು ಗಂಟು ಗಂಟಾಗಿ
ಅಂಟು ಅಂಟಾಗಿ
ನನ್ನ ಅಂಗೈಗೆ ಸುತ್ತಿಕೊಂಡಿತು..
“ನೀ ನನ್ನ ತೊರೆದರೂ ನಾನಿನ್ನ ಬಿಡೆ..”
ಶಿವನ ಹೆಗಲಿಗಂಟಿದ ಬ್ರಹ್ಮಕಪಾಲದಂತೆ..

ಒಳಗಿನ ತಲದಲ್ಲಿ ಕಪ್ಪು ಕಪ್ಪು
ಪದರ ಪದರವಾಗಿ ಅಂಟಿದ್ದವು
ನೀರಿಗೊಡ್ಡಿದೆ..
ಹಗುರವಾದ ಕಣಗಳು
ಪ್ರವಾಹದಲ್ಲಿ ಕೊಚ್ಚಿ ಹೋದವು..

ಉಳಿದ ಪದರಗಳು?..
ಸ್ವಲ್ಪ ನೀರಿನಲ್ಲಿ ‘ನೆನೆ’ಸಿದೆ
“ನೆನೆದಷ್ಟು ತೊಳೆದು ಹೋಗುತ್ತೆ!”
ಅಜ್ಜಿ ಹೇಳಿದ್ದು ನೆನೆದೆ!

ಅರ್ರೇ! ಇದೆಂತ! ಚಿತ್ತಾರ!!
ತೊಳೆದು ಹೋದಷ್ಟು ಹೋದರೂ
ಉಳಿದ ಚಿಹ್ನೆಗಳು..
ಎಂದೂ ಅಳಿಯದ ಶಾಸನಗಳಂತೆ
ಅಚ್ಚು ಉಳಿಸಿ ಹೋದದ್ದು!

ಇಷ್ಟೊಂದು ತೊಳೆದು ಹೊಳೆಯದಿದ್ದರೆ ಹೇಗೆ?..
ಆಧುನಿಕ ರಸಾಯನ ಶಾಸ್ತ್ರದ
ಪುಸ್ತಕದ ಪುಟದಲ್ಲಿ ದಿಟವಾದ
ರಾಸಾಯನಿಕಗಳನ್ನು ತಂದೆ ಅಮೆಜಾನ್ ನಿಂದ..
ಅವುಗಳ ರಸಾಯನವನ್ನು ಕಲೆಸಿ
ಪಾತ್ರೆಯೊಳಗಿನ ಸಂಸ್ಕಾರವನ್ನು
ಸಂಸ್ಕರಿಸ ಹೊರಟೆ..

ಆಹಾ! ಪದರ ಪದರಗಳಾಗಿ
ಕೊರಗಿ ಕರಗಿ
ಎದ್ದು ಹೋದವು..
ತೊಳೆದು ಪಾತ್ರೆಯೊಳಗಿಣುಕಿದೆ
ಹಳೆಯದೆಲ್ಲವೂ ಖಾಲಿಯಾಗಿದ್ದವು..
ರಾಸಾಯನಿಕಗಳ ಕೊರೆತದಿಂದ
ಪಾತ್ರೆಯೊಳಗೆ ತುಂಬಾ
ಮೂಡಿದ್ದವು..
ಅಳಿಸಲಾಗದ ಕಲೆಗಳು