- ಅವರಿಬ್ಬರೂ ಪ್ರೇಮಿಗಳಲ್ಲ - ನವೆಂಬರ್ 20, 2022
- ಸಿಕ್ಕು - ಮೇ 28, 2022
- ಅಮ್ಮ ನೆನಪಾಗುತ್ತಾಳೆ - ಮೇ 8, 2022
ಬಜೆಟ್, ಮುಂಗಡ ಪತ್ರ, ಆಯ ವ್ಯಯ ಪಟ್ಟಿ ಎಂದೆಲ್ಲಾ ಕರೆಯಲ್ಪಡುವ ಶಬ್ದವೊಂದು ಫೆಬ್ರವರಿ ಬಂತೆಂದರೆ ಶ್ರೀ ಸಾಮಾನ್ಯನ ಕಿವಿ ನಿಮಿರುವಂತೆ ಮಾಡುತ್ತದೆ. ಅದುವರೆಗೂ ತನಗೂ ಸರಕಾರಕ್ಕೂ ಸಂಬಂಧವೇ ಇಲ್ಲವೆಂಬಂತಿದ್ದವನೂ ಕೂಡಾ ಬಜೆಟ್ ಮಂಡನೆಯಾಗುವ ದಿನ ಕುತೂಹಲದಿಂದ ಟಿ. ವಿ ಮುಂದೆ ಪ್ರತಿಷ್ಠಾಪಿಸುತ್ತಾನೆ. ಇಲ್ಲವೇ ಯೂ ಟ್ಯೂಬಿಗೆ ಕಿವಿಯಾಗುತ್ತಾನೆ. ನೌಕರ ವರ್ಗದವರಿಗೆ ಆದಾಯ ತೆರಿಗೆ ದರ ಕಡಿಮೆಯಾಗಬಹುದೆಂಬ ಆಸೆ, ನಿರುದ್ಯೋಗಿಗಳಿಗೆ ಹೆಚ್ಚೆಚ್ಚು ಉದ್ಯೋಗಾವಕಾಶಗಳು ಸೃಷ್ಟಿ ಆಗಬಹುದೆಂಬ ನಿರೀಕ್ಷೆ, ರೈತಾಪಿ ವರ್ಗಕ್ಕೆ ಕೃಷಿಪರ ಯೋಜನೆಗಳ ಪ್ರತೀಕ್ಷೆ, ಕೈಗಾರಿಕೋದ್ಯಮಿಗಳಿಗೆ ತೆರಿಗೆ ಇಳಿಕೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಎದುರು ನೋಡುವಿಕೆ , ನವೋದ್ಯಮಿಗಳಿಗೆ ತೆರಿಗೆ ವಿನಾಯಿತಿಯಂತಹ ಕ್ರಮಗಳ ಮೇಲೆ ದೃಷ್ಟಿ, ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಶಿಕ್ಷಣ ಕಾರ್ಯಕ್ರಮಗಳೇ ಪುಷ್ಟಿ.. ಪ್ರತೀ ವರ್ಷವೂ ಬಜೆಟ್ ಮಂಡನೆಯಾದ ಕೂಡಲೇ ವಿವಿಧ ವರ್ಗದ ಜನರು ತಮ್ಮದೇ ದೃಷ್ಟಿಕೋನದಿಂದ ಬಜೆಟನ್ನು ವಿಶ್ಲೇಷಿಸುವುದು ಸಹಜ. ಈ ಲೇಖನದಲ್ಲಿ ದೇಶದ ಆರ್ಥಿಕ ದೃಷ್ಟಿಯಿಂದ ಪ್ರಸಕ್ತ ಬಜೆಟ್ 2022-23 ನ್ನು ವಿಶ್ಲೇಷಿಸೋಣ. ಅದಕ್ಕಿಂತ ಮೊದಲು ಭಾರತದ ಬಜೆಟ್ ಇತಿಹಾಸಕ್ಕೊಂದು ಇಣುಕು ಹಾಕೋಣ.
ಕೇಂದ್ರ ಬಜೆಟ್ ನ ಇತಿಹಾಸ
ಸ್ವತಂತ್ರ ಭಾರತದ ಪ್ರಥಮ ಬಜೆಟನ್ನು ಕೇಂದ್ರದ ಪ್ರಥಮ ಹಣಕಾಸು ಸಚಿವರಾಗಿದ್ದ ಷಣ್ಮುಗಂ ಚೆಟ್ಟಿಯವರು 26 ನೇ ನವೆಂಬರ್, 1947 ರಂದು ಮಂಡಿಸಿದ್ದರು. ಅಂದು ಸರಕಾರದ ಒಟ್ಟು ಆದಾಯ 171 ಕೋಟಿಯಿದ್ದು, ವಿತ್ತೀಯ ಕೊರತೆ 24 ಕೋಟಿಗಳಷ್ಟಿತ್ತು. ಭಾರತದಲ್ಲಿ 1999 ರವರೆಗೆ ಕೇಂದ್ರ ಬಜೆಟನ್ನು ಫೆಬ್ರವರಿ ತಿಂಗಳ ಕೊನೆಯ ದಿನದಂದು ಸಂಜೆ 5 ಗಂಟೆಗೆ ( ಬ್ರಿಟಿಷರ ಸಮಯಕ್ಕೆ ಅನುಕೂಲವಾಗುವಂತೆ ) ಸದನದಲ್ಲಿ ಮಂಡಿಸಲಾಗು ತ್ತಿತ್ತು. ಸುಮಾರು 50 ವರ್ಷಗಳ ಕಾಲವೂ ಇದೇ ಸಮಯವನ್ನು ಅನುಸರಿಸಿದ್ದ ದೇಶ 1999 ರಲ್ಲಿ ಯಶವಂತ್ ಸಿಂಗ್ ರವರು ವಿತ್ತೀಯ ಸಚಿವರಾಗಿದ್ದ ಸಂದರ್ಭದಲ್ಲಿ ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡಿಸುವ ಮೂಲಕ ಹಳೆಯ ರೂಢಿಯನ್ನು ಮುರಿಯಿತು. 2017 ರಲ್ಲಿ ಅರುಣ್ ಜೇಟ್ಲಿಯವರು ವಿತ್ತೀಯ ಸಚಿವರಾಗಿದ್ದ ಸಮಯದಲ್ಲಿ ಫೆಬ್ರವರಿ ಒಂದನೇ ತಾರೀಕಿನಂದು ಬಜೆಟ್ ಮಂಡಿಸುವ ಕ್ರಮ ಚಾಲ್ತಿಗೆ ಬಂತು. ಅಲ್ಲದೇ ಅಲ್ಲಿಯವರೆಗೆ ರೈಲ್ವೇ ಬಜೆಟನ್ನು ಪ್ರತ್ಯೇಕವಾಗಿ ಮಂಡಿಸುವ ಪರಿಪಾಠವಿದ್ದಿದ್ದು ಕೇಂದ್ರ ಬಜೆಟ್ ನೊಂದಿಗೇ ವಿಲೀನಗೊಂಡಿತು.
2018 ರವರೆಗೂ ಬ್ರಿಟಿಷ್ ಸಂಪ್ರದಾಯದಂತೆ ವಿತ್ತೀಯ ಸಚಿವರು ಬಜೆಟ್ ಪ್ರತಿಯನ್ನು ಬ್ರೀಫ್ ಕೇಸಿನಲ್ಲಿಟ್ಟು ಸದನಕ್ಕೆ ತರುವ ಪರಿಪಾಠವಿತ್ತು. 2019 ರಂದು ವಿತ್ತೀಯ ಸಚಿವರಾದ ನಿರ್ಮಲಾ ಸೀತಾರಾಮನ್ ರವರು ಬಹಿ ಖಾತಾ ಅಥವಾ ಕೆಂಪು ವಸ್ತ್ರದ ಲೆಡ್ಜರ್ ನಲ್ಲಿ ತರುವ ಮೂಲಕ ಬ್ರಿಟಿಷ್ ಸಂಪ್ರದಾಯವನ್ನು ಮುರಿದರು. 2021 ರಲ್ಲಿ ದೇಶದ ಮೊತ್ತ ಮೊದಲ ಪೇಪರ್ ರಹಿತ ಬಜೆಟನ್ನು ಮಂಡಿಸಿದ ಕೀರ್ತಿಯೂ ಅವರಿಗೇ ಸಲ್ಲುತ್ತದೆ. ಈ ವರ್ಷವೂ ಅದೇ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಈ ಬಾರಿ ಮೇಕ್ ಇನ್ ಇಂಡಿಯಾ ಟ್ಯಾಬ್ ನಲ್ಲಿ ಮಂಡಿಸುವ ಮೂಲಕ ಮೋದಿಯವರ ಡಿಜಿಟಲ್ ಇಂಡಿಯಾ ಹಾಗೂ ಆತ್ಮ ನಿರ್ಭರ್ ಭಾರತ್ ನ್ನು ಸಾಂಕೇತಿಸುವ ಪ್ರಯತ್ನವೆಂದು ಅರ್ಥೈಸಿಕೊಳ್ಳಬಹುದು.
ಬಜೆಟ್ 2022-23
ಪ್ರಸಕ್ತ ಸಾಲಿನ ಬಜೆಟ್ ಭಾರತ ಆರ್ಥಿಕವಾಗಿ ಇನ್ನಷ್ಟು ಬಲಿಷ್ಠವಾಗುವುದನ್ನು ಸಾಧ್ಯವಾಗಿಸಲು ಸೂಕ್ತ ರೂಪು ರೇಷೆಯನ್ನು ಸಿದ್ಧಪಡಿಸಿರುವುದು ಮೇಲ್ನೋಟಕ್ಕೇ ದಕ್ಕುತ್ತದೆ. ಹಿಂದಿನ ಬಜೆಟ್ ಗಳಿಗೆ ಹೋಲಿಸಿದರೆ ಈ ಸಲದ ಬಜೆಟ್ ಹೆಚ್ಚಿನ ದೂರದೃಷ್ಟಿಯಿಟ್ಟುಕೊಂಡು ತಯಾರಿಸಿರುವುದಂತೂ ದಿಟ. ಬಜೆಟ್ 2022 ರ ಆಧಾರ ಸ್ಥಂಭಗಳು.
- ಪಿಎಂ ಗತಿ ಶಕ್ತಿ ಯೋಜನೆ
- ಎಲ್ಲರನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿ
- ಉತ್ಪಾದನಾ ವಲಯಕ್ಕೆ ವೇಗ
- ಬಂಡವಾಳ ಹೂಡಿಕೆ
2022-23 ನೇ ವರ್ಷದಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯ ಬೆಳವಣಿಗೆ ಶೇಕಡಾ 9.2 ತಲುಪಬೇಕೆಂಬುವುದು ಗುರಿ. ಇದು ವಿಶ್ವದ ಎಲ್ಲ ಬೃಹತ್ ಆರ್ಥಿಕತೆಗಳಲ್ಲೇ ಗರಿಷ್ಠ ಮಟ್ಟದ್ದು ಎಂಬುವುದು ಗಮನಿಸಬೇಕಾದ ಸಂಗತಿ. ದೇಶವು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಅಭಿವೃದ್ಧಿಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದೆ ಎನ್ನುವುದನ್ನು ಇದು ಸ್ಪಷ್ಟ ಪಡಿಸುತ್ತದೆ.
ಸಾರ್ವಜನಿಕ ಆದಾಯದ ಮೂಲಗಳು
ಪ್ರತಿಯೊಬ್ಬ ಪ್ರಜೆಯೂ ಸರಕಾರ ಹೆಚ್ಚೆಚ್ಚು ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಬೇಕೆಂದು ನಿರೀಕ್ಷಿಸುತ್ತಾನೆ. ಯಾವುದೇ ಸರಕಾರ ಹೆಚ್ಚೆಚ್ಚು ಸಾರ್ವಜನಿಕ ವೆಚ್ಚ ಮಾಡಬೇಕೆಂದರೆ ಆದಾಯವೂ ಹೆಚ್ಚಿರಬೇಕು. ಹಾಗಾಗಿ ಈ ಬಾರಿ ಅಂದಾಜಿಸಿದ ಸಾರ್ವಜನಿಕ ಆದಾಯದ ಮೂಲಗಳನ್ನು ಗಮನಿಸೋಣ. ಇದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಸರಕಾರದ ಒಟ್ಟು ಆದಾಯ ಒಂದು ರೂಪಾಯಿ ಎಂದಿಟ್ಟುಕೊಳ್ಳೋಣ. ಪ್ರತೀ ಒಂದು ರುಪಾಯಿಗೆ 58 ಪೈಸೆ ನೇರ ಮತ್ತು ಪರೋಕ್ಷ ತೆರಿಗೆಯಿಂದ, 35 ಪೈಸೆ ಸಾಲ ಮತ್ತು ಇತರ ಬಾಧ್ಯತೆಗಳು, 5 ಪೈಸೆ ತೆರಿಗೆಯೇತರ ಆದಾಯ, 2 ಪೈಸೆ ಸಾಲಯೇತರ ಬಂಡವಾಳ ಸ್ವೀಕೃತಿ (non debt capital receipts ) ಯಿಂದ ಬರುತ್ತದೆ. ತೆರಿಗೆಯಿಂದ ಬರುವ ಒಟ್ಟು 58 ಪೈಸೆಯಲ್ಲಿ ಜಿಎಸ್ ಟಿಯಿಂದ 16 ಪೈಸೆ, ವಾಣಿಜ್ಯ ತೆರಿಗೆಯಿಂದ 15 ಪೈಸೆ, ಆದಾಯ ತೆರಿಗೆಯಿಂದ 15 ಪೈಸೆ, ಕೇಂದ್ರ ಅಬಕಾರಿ ಸುಂಕದಿಂದ 7 ಪೈಸೆ ಹಾಗೂ ಕಸ್ಟಮ್ ಸುಂಕದಿಂದ 5 ಪೈಸೆ ಆದಾಯ ಬರುತ್ತದೆ. ಇವು ಪ್ರತಿಯೊಂದು ವಿಧದ ತೆರಿಗೆಯ ಕೊಡುಗೆಯನ್ನು ತಿಳಿಸುತ್ತದೆ. ಕೋವಿಡ್ ಕಾಲದಲ್ಲೂ ಜನವರಿ ತಿಂಗಳೊಂದರಲ್ಲೇ ರೂಪಾಯಿ 1, 35, 000 ಕೋಟಿ ಜಿಎಸ್ಟಿ ಸಂಗ್ರಹವಾಗಿದೆ ಎಂದರೆ ಸರಕಾರದ ಬೊಕ್ಕಸ ತುಂಬಿಸುವುದರಲ್ಲಿ ಜಿಎಸ್ ಟಿ ಯ ಪಾತ್ರವನ್ನರಿಯಬಹುದು.
ಆಯ -ವ್ಯಯ
2022-23 ರಲ್ಲಿ ಸರಕಾರದ ಆದಾಯ 22, 83, 713 ಕೋಟಿಯೆಂದು ಅಂದಾಜಿಸಲಾಗಿದೆ. ಇದು 2021-22 ಕ್ಕಿಂತ 4.8 ಶೇಕಡಾ ಹೆಚ್ಚು. 2022-23 ರಲ್ಲಿ ಸರಕಾರದ ವೆಚ್ಚ 39, 44, 909 ಕೋಟಿ. ಇದು ಕಳೆದ ವರ್ಷಕ್ಕಿಂತ 4.6 ಶೇಕಡಾ ಹೆಚ್ಚು. 2022-23 ರ ವಿತ್ತೀಯ ಕೊರತೆ ಜಿಡಿಪಿಯ 6.4 ಶೇಕಡಾದಷ್ಟಿದ್ದರೆ ಕಳೆದ ಬಜೆಟ್ ನಲ್ಲಿ 6.9 ಶೇಕಡಾ ಇತ್ತು. ಹಾಗಾಗಿ ವಿತ್ತೀಯ ಕೊರತೆ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿದೆ ಎನ್ನಬಹುದು.
ಆದಾಯ ತೆರಿಗೆ
ಬಜೆಟ್ ಮಂಡನೆಯ ಸಂದರ್ಭದಲ್ಲಿ ಪ್ರತಿಯೊಬ್ಬ ತೆರಿಗೆದಾರನ ದೃಷ್ಟಿ ನೆಟ್ಟಿರುವುದು ಸಹಜವಾಗಿ ಆದಾಯ ತೆರಿಗೆ ಮಿತಿಯ ಮೇಲೆ. ಈ ಬಾರಿ ನಿರೀಕ್ಷೆಯಂತೆಯೇ ಆದಾಯ ತೆರಿಗೆ ವಿನಾಯಿತಿಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲವೆನ್ನುವುದು ಹೌದಾದರೂ ಯಾವುದೇ ರೀತಿಯ ಹೊಸ ಸೆಸ್ ನ್ನು ಕೂಡ ಹೇರಿಲ್ಲವೆನ್ನುವುದು ಸಮಾಧಾನ ಹೊಂದುವ ಸಂಗತಿ. ಕೋವಿಡ್ ಕಾಲದಲ್ಲಿ ಹಲವರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಕಾರಣ ತೆರಿಗೆ ಮಿತಿಯನ್ನು ಏರಿಸಬೇಕಿತ್ತು ಅನ್ನುವುದು ಹಲವರ ವಾದ. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶಗಳೇನೆಂದರೆ ಕೋವಿಡ್ ಆರ್ಥಿಕ ಸಂಕಷ್ಟ ಸರಕಾರಕ್ಕೂ ಬಲವಾಗಿಯೇ ತಟ್ಟಿದೆ. ಹೆಚ್ಚೆಚ್ಚು ಗ್ರಾಮೀಣ ಮತ್ತು ನಗರ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕೆಂದರೆ ಅದಕ್ಕೆ ಬೇಕಾದ ಬಂಡವಾಳವನ್ನು ಹೂಡುವ ಹೊಣೆಗಾರಿಕೆಯೂ ಸರಕಾರದ್ದೇ ಆಗಿರುತ್ತದೆ. ಅಷ್ಟಕ್ಕೂ ಭಾರತದ 130 ಕೋಟಿ ಜನಸಂಖ್ಯೆಯಲ್ಲಿ ಆದಾಯ ತೆರಿಗೆ ಕಟ್ಟುವವರು ಸುಮಾರು ಏಳೂವರೆಯಿಂದ ಎಂಟು ಕೋಟಿ ಜನರು. ಅವರಲ್ಲೂ ಬಹು ಪ್ರಮಾಣದ ತೆರಿಗೆದಾರರು ತೆರಿಗೆ ರಿಯಾಯಿತಿ ಪಡೆಯುವುದರಿಂದ ನಿಜವಾಗಿಯೂ ತೆರಿಗೆ ಕಟ್ಟುವವರು ಕೇವಲ ಒಂದೂವರೆ ಕೋಟಿ ಜನಸಂಖ್ಯೆ. ಅದೂ ತಪ್ಪಿ ಹೋದರೆ ಸುಮಾರು 15 ಶೇಕಡಾದಷ್ಟು ಆದಾಯ ತಂದುಕೊಡುವ ಆದಾಯ ತೆರಿಗೆಯ ಮೂಲದ ಕೊಡುಗೆ ಕಡಿಮೆಯಾಗಿ ವಿತ್ತೀಯ ಕೊರತೆ ಹೆಚ್ಚಾಗುತ್ತಿತ್ತು. ಹಾಗಾಗಿ ಇದ್ದುದ್ದನ್ನು ಇದ್ದ ಹಾಗೆಯೇ ಇರಿಸಿಕೊಳ್ಳುವ ಜಾಣ ನಡೆಯನ್ನು ಸರಕಾರ ಅನುಸರಿಸಿದೆ ಎನ್ನಬಹುದು.
ಕೃಷಿಗೆ ಒತ್ತು
ಕೋವಿಡ್ ಕಾಲದಲ್ಲಿ ಎಲ್ಲ ಆರ್ಥಿಕ ವಲಯಗಳು ನೆಲ ಕಚ್ಚಿದರೂ ಕೈ ಹಿಡಿದದ್ದು ಕೃಷಿ ವಲಯವೊಂದೇ. ಈ ಅಂಶವನ್ನು ತಡವಾಗಿಯಾದರೂ ಸರಕಾರ ಮನಗಂಡಿದ್ದು ಬಜೆಟ್ ನಲ್ಲಿ ಗೋಚರಿಸುತ್ತದೆ. ಮಾರುಕಟ್ಟೆಯಲ್ಲಿ ಬೆಳೆಗೆ ಬೆಲೆ ಕುಸಿದರೂ ಸರಕಾರ ಕನಿಷ್ಠ ಬೆಂಬಲ ಬೆಲೆಯನ್ನು ನೀಡುವ ಭರವಸೆ ಇತ್ತಿದೆ. ಅದಕ್ಕೆಂದೇ 2.87 ಲಕ್ಷ ಕೋಟಿಯನ್ನು ಮೀಸಲು ಇಟ್ಟಿದೆ. ಇದು ಸಣ್ಣ ರೈತರಿಗೆ ಅಗತ್ಯ ರಕ್ಷಣೆ ಕೊಡುವುದು ಹೌದಾದರೂ ದೊಡ್ಡ ಹಿಡುವಳಿದಾರರಿಗೂ ಅನ್ವಯವಾದರೆ ಮಾತ್ರ ವ್ಯತಿರಿಕ್ತ ಪರಿಣಾಮಗಳನ್ನೂ ಎದುರಿಸಬೇಕಾದೀತು ಎನ್ನುವುದು ಬೇರೆ ಮಾತು. ನದಿ ಜೋಡಣೆಯಿಂದ 25 ಲಕ್ಷ ಹೆಕ್ಟೇರು ಕೃಷಿ ಪ್ರದೇಶಕ್ಕೆ ಅನುಕೂಲವಾಗಲಿದೆ. ಅದೇ ರೀತಿ ಕೆನ್ ಬೆಟ್ಟಾ ಯೋಜನೆಯಿಂದ ಹೆಚ್ಚಿನ ಕೃಷಿ ಭೂಮಿ ನೀರಾವರಿಯ ಪ್ರಯೋಜನ ಪಡೆಯಬಹುದು. ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವುದು ಒಳ್ಳೆಯ ಬೆಳವಣಿಗೆ. ಸ್ವದೇಶಿಯವಾಗಿ ಉತ್ಪಾದಿಸಲ್ಪಡುವ ‘ವಂದೇ ಭಾರತ್ ರೈಲು ‘ ಕೃಷಿ ಉತ್ಪನ್ನಗಳ ಸಾಗಾಟವನ್ನು ಸುಲಭವಾಗಿಸಲಿದೆ. 2023 ನ್ನು ಅಂತರರಾಷ್ಟೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿರುವುದರಿಂದ ಸಿರಿಧಾನ್ಯಗಳ ಉತ್ಪಾದನೆ, ಮಾರಾಟ ಹಾಗೂ ರಫ್ತುಗಳು ಏರುಗತಿಯಲ್ಲಿ ಸಾಗುವ ನಿರೀಕ್ಷೆಯಿದೆ. ಗ್ರಾಮೀಣ ಮತ್ತು ಕೃಷಿ ಸ್ಟಾರ್ಟ್ ಅಪ್ ಗಳು ನಬಾರ್ಡ್ ನ ಆರ್ಥಿಕ ನೆರವಿನಿಂದ ಒಂದಷ್ಟು ಚಿಗುರಬಹುದು.
ಮೂಲ ಸೌಕರ್ಯ
ಭಾರತವು ಜಾಗತಿಕ ಆರ್ಥಿಕತೆಯ ಕೇಂದ್ರವಾಗಿ ಬೆಳೆಯಬೇಕಾದರೆ ಮೂಲ ಸೌಕರ್ಯಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕೆನ್ನುವುದನ್ನು ಈ ಬಾರಿಯ ಬಜೆಟ್ ಮನಗಂಡಿದೆ. ಸಾರಿಗೆಗೆ 20 ಸಾವಿರ ಕೋಟಿಯಷ್ಟು ಅನುದಾನ ಹಾಗೂ ಹೈಡ್ರೋ ಸೋಲಾರ್ ಪ್ರಾಜೆಕ್ಟ್ ಗೆ 1400 ಕೋಟಿ ಮೀಸಲಿಡಲಾಗಿದೆ. ಪಿ.ಎಂ ಗತಿಶಕ್ತಿ, ಕವಚ್ ಸಾರಿಗೆ ಕ್ಷೇತ್ರಕ್ಕೆ ಮತ್ತಷ್ಟು ಶಕ್ತಿ ತುಂಬಲಿವೆ. ಪ್ರತಿ ಹಳ್ಳಿಗೂ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಸಿಗುವುದು ನಿಜವೋ ಕಾದು ನೋಡಬೇಕು. 5 ಜಿ ಟೆಲಿಕಾಂ ವಲಯದಲ್ಲೇ ಅತ್ಯಂತ ಕ್ರಾಂತಿಕಾರಿ ನಡೆಯಾಗುವುದು ಖಂಡಿತ. ಬ್ಯಾಂಕಿಂಗ್ ವಹಿವಾಟುಗಳು ಶರವೇಗದಲ್ಲಿ ನಡೆಯಲೂ ಇದು ನೆರವಾಗಲಿದೆ.
ಬಂಡವಾಳ ವೆಚ್ಚ
ಬಂಡವಾಳ ವೆಚ್ಚವನ್ನು ಶೇಕಡಾ 35.4 ರಷ್ಟು ಹೆಚ್ಚಿಸಲಾಗಿದೆ. ಒಟ್ಟು ಜಿಡಿಪಿಯ ಶೇಕಡಾ 2.9 ರಷ್ಟು ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ. ಇದು ನಿಜಕ್ಕೂ ಬಹಳ ಅಪೇಕ್ಷಿತ. ಯಾಕೆಂದರೆ ಬಂಡವಾಳ ವೆಚ್ಚ ಹೆಚ್ಚಾದರೆ ಉದ್ಯೋಗ ಸೃಷ್ಟಿಗೂ, ಉದ್ಯಮ ವಲಯದ ಪ್ರಗತಿಗೂ ಅನುಕೂಲ. ಪರಿಣಾಮ ರಾಷ್ಟೀಯ ಆಸ್ತಿಯಲ್ಲಿ ಏರಿಕೆ. ಬಜೆಟ್ ನಲ್ಲಿ ಘೋಷಿಸಿದಂತೆ ಮುಂದಿನ ಐದು ವರ್ಷಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿ ಎಂಬಂತಹ ಹೇಳಿಕೆಗಳು ಅನುಷ್ಠಾನಕ್ಕೆ ಬರುತ್ತದೋ ಗೊತ್ತಿಲ್ಲ. ಆದರೆ ಬಂಡವಾಳ ವೆಚ್ಚದ ಏರಿಕೆ ಉದ್ಯೋಗ ಸೃಷ್ಟಿಗೆ ಪೂರಕ ಎನ್ನುವುದು ಖಚಿತ.
ನವೋದ್ಯಮ (ಸ್ಟಾರ್ಟ್ಅಪ್ )
ನವೋದ್ಯಮ ಎನ್ನುವುದು ಇಂದು ಕೇವಲ ಒಂದು ಕ್ಷೇತ್ರವಾಗಿ ಉಳಿದಿಲ್ಲ. ಅದು ಎಲ್ಲ ಕ್ಷೇತ್ರಗಳೊಳಗೂ ಕ್ರಾಂತಿ ಮಾಡಬಹುದಾದ ಶಕ್ತಿ ಎಂದರೆ ಉತ್ಪ್ರೇಕ್ಷೆಯಲ್ಲ. ಇಂತಹ ನವೋದ್ಯಮಗಳಿಗೆ ಉತ್ತೇಜನ ನೀಡುವ ಕೆಲವೇ ಕೆಲವು ಅಂಶಗಳಷ್ಟನ್ನೇ ಈ ಬಜೆಟ್ ನಲ್ಲಿ ಕಾಣಬಹುದು. ತೆರಿಗೆ ವಿನಾಯಿತಿ ಹಾಗೂ ತುರ್ತು ಸಾಲ ಸೌಲಭ್ಯಗಳನ್ನು ಒಂದು ವರ್ಷಕ್ಕೆ ವಿಸ್ತರಿಸಿರುವುದು, ಉದ್ಯೋಗಿ ಸ್ಟಾಕ್ ಆಯ್ಕೆಗೆ ಶೇಕಡಾ 15 ರಷ್ಟು ಟ್ಯಾಕ್ಸ್ ಕ್ಯಾಪ್, ನಬಾರ್ಡ್ ಮೂಲಕ ಕೃಷಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೂಡಿಕೆ ಮುಂತಾದವುಗಳನ್ನು ಹೆಸರಿಸಬಹುದಾದರೂ ನವೋದ್ಯಮಕ್ಕೆ ಹೆಚ್ಚಿನ ಕಾಯಕಲ್ಪ ಕೊಡುವ ಭರವಸೆಗಳು ಇಲ್ಲವೆಂದೇ ಹೇಳಬಹುದು.
ಕೋವಿಡ್ ಸಂಕಷ್ಟ ಎದುರಿಸುವಲ್ಲಿ ನವೋದ್ಯಮಗಳ ಪಾತ್ರ ದೊಡ್ಡದಿತ್ತು. ಭಾರತ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲು ಅವೂ ಕಾರಣ. ಅಲ್ಲದೇ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅವು ಹೆಚ್ಚಿನ ಕೊಡುಗೆ ನೀಡಿವೆ. ಆದ್ದರಿಂದ ಈ ನಿಟ್ಟಿನಲ್ಲಿ ನವೋದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸಿ ಕೊಡುವ, ಇನ್ನಷ್ಟು ಶಕ್ತಿ ತುಂಬುವ ಕೆಲಸ ಆಗಬೇಕಿತ್ತು.
ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ
ದೇಶದ ಆರ್ಥಿಕ ಪ್ರಗತಿಯಲ್ಲಿ ಮಾನವ ಸಂಪನ್ಮೂಲಗಳ ಪಾತ್ರ ಹಿರಿದು. ಉತ್ಪಾದನೆಯ ಅಂಶಗಳಾದ ಭೂಮಿ, ಕಾರ್ಮಿಕ, ಬಂಡವಾಳ, ಉದ್ಯಮಶೀಲತೆಗಳ ಪೂರ್ಣ ಪ್ರಮಾಣದ ಉಪಯೋಗವಾಗಬೇಕಾದರೆ ಸೂಕ್ತ ಮಾನವ ಸಂಪನ್ಮೂಲ ಬೇಕೇ ಬೇಕು. ಈ ಸಂಪನ್ಮೂಲದ ಗುಣಮಟ್ಟವನ್ನು ಶಿಕ್ಷಣ, ಕೌಶಲ್ಯ ಮತ್ತು ತರಬೇತಿಗಳು ನಿರ್ಧರಿಸುತ್ತವೆ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ 1.04 ಲಕ್ಷ ಕೋಟಿಗಳಷ್ಟು ಅನುದಾನ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಕೊಡಲಾಗಿದೆ.
ಇದು ಕಳೆದ ವರ್ಷಕ್ಕಿಂತ ಶೇಕಡಾ 11.86 ರಷ್ಟು ಹೆಚ್ಚಳವಾಗಿದೆ. ಪ್ರಧಾನಿ ಇ ವಿದ್ಯಾ ಯೋಜನೆಯಡಿಯಲ್ಲಿ ದೂರದರ್ಶನ ಚಾನೆಲ್ ಗಳ ಸಂಖ್ಯೆ 12 ರಿಂದ 200 ಕ್ಕೆ ಏರಿಕೆಯಾಗಿದ್ದು ಇಂಟರ್ನೆಟ್ ವಂಚಿತ ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಗಲಿದೆ. ಆದರೆ ಪ್ರತೀ ಗ್ರಾಮಕ್ಕೂ ಇಂಟರ್ನೆಟ್ ಸೌಲಭ್ಯವನ್ನು ಘೋಷಿಸಿದ ಮೇಲೆ ದೂರದರ್ಶನ ಚಾನೆಲ್ಗಳ ಮೂಲಕ ಶಿಕ್ಷಣ ಎನ್ನುವುದು ಎಷ್ಟು ಪ್ರಸ್ತುತವೆಂಬ ಪ್ರಶ್ನೆ ಏಳುತ್ತದೆ. ಇದು ಯೋಜನೆಗಳ ನಡುವಿನ ದ್ವಂದ್ವವೆನ್ನಬಹುದು. ಈ ಚಾನೆಲ್ ಗಳು ಪ್ರಾದೇಶಿಕ ಭಾಷೆಗಳಲ್ಲಿ ತರಗತಿಗಳನ್ನು ನಡೆಸುವುದು ಸ್ವಾಗತಾರ್ಹ. ವಿಶ್ವ ದರ್ಜೆಯ ಡಿಜಿಟಲ್ ಯೂನಿವರ್ಸಿಟಿಗಳು ಸ್ಥಾಪಿತವಾದರೆ ಕಡಿಮೆ ವೆಚ್ಚದಲ್ಲಿ ಜಾಗತಿಕ ಉದ್ಯೋಗ ಮಾರುಕಟ್ಟೆಗೆ ಪೂರಕವಾದಂತಹ ಶಿಕ್ಷಣ ಮತ್ತು ಕೌಶಲ್ಯಗಳ ಪೂರೈಕೆ ಆಗುವ ಸಾಧ್ಯತೆ ದಟ್ಟವಾಗಿದೆ.
ಡಿಜಿಟಲ್ ಭಾರತ
ಮೋದಿಯವರ ಡಿಜಿಟಲ್ ಭಾರತಕ್ಕೆ ಇಂಬು ಕೊಡುವಂತಹ ಹಲವು ಪ್ರಯತ್ನಗಳು ಬಜೆಟ್ ನಲ್ಲಿ ಕಾಣಸಿಗುತ್ತವೆ. 2023 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊರತರಲು ಉದ್ದೇಶಿಸಿರುವ ಬ್ಲಾಕ್ ಚೈನ್ ತಂತ್ರಜ್ಞಾನ ಆಧಾರಿತ ಡಿಜಿಟಲ್ ಕರೆನ್ಸಿ ಇತರ ಕ್ರಿಪ್ಟೊ ಕರೆನ್ಸಿಗಳಿಂದ ಆರ್ಥಿಕತೆಗೆ ಆಗಲಿರುವ ಸಂಭವನೀಯ ಅಪಾಯವನ್ನು ಕಡಿಮೆ ಮಾಡಬಲ್ಲುದು. ಪ್ರತಿ ಗ್ರಾಮಕ್ಕೂ ಆಪ್ಟಿಕಲ್ ಫೈಬರ್ ಇಂಟರ್ನೆಟ್, 5 ಜಿ ಇಂಟರ್ನೆಟ್, ಆಸ್ತಿ ನೋಂದಣಿಗೆ ಏಕರೂಪ ಇ ವ್ಯವಸ್ಥೆ, 75 ಜಿಲ್ಲೆಗಳಲ್ಲಿ ಸ್ಥಾಪಿಸಲು ಉದ್ದೇಶಿಸಿದ ಡಿಜಿಟಲ್ ಬ್ಯಾಂಕ್ ಗಳು, ಒಂದೂವರೆ ಲಕ್ಷ ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ, ಇ ಪಾಸ್ ಪೋರ್ಟ್, ರಾಜ್ಯಗಳಿಗೆ ಐವತ್ತು ವರ್ಷಗಳವರೆಗೆ ಡಿಜಿಟಲೈಸೇಷನ್ ಹಾಗೂ ನಗರ ಯೋಜನೆಗಳಿಗಾಗಿ ಒಂದು ಲಕ್ಷ ಕೋಟಿ ರೂಪಾಯಿ ಬಡ್ಡಿ ರಹಿತ ಸಾಲ… ಇತ್ಯಾದಿ ಯೋಜನೆಗಳು ಭಾರತ ಡಿಜಿಟಲೀಕರಣದೆಡೆಗೆ ಕೈಗೊಂಡಿರುವ ದಿಟ್ಟ ಹೆಜ್ಜೆಗಳು ಎನ್ನುವುದು ನಿಚ್ಚಳ.
ಸಾರಾಂಶ ಮತ್ತು ಮುಕ್ತಾಯ
ಪ್ರತೀ ವರ್ಷದ ಬಜೆಟ್ ನ್ನು ಗಮನಿಸಿದಾಗಲೂ ಅದರದ್ದೇ ಆದ ಗುಣಾವಗುಣಗಳು ಕಾಣ ಸಿಗುತ್ತವೆ. 2022-23 ರ ಬಜೆಟ್ ಕೂಡಾ ಅದಕ್ಕೆ ಹೊರತಲ್ಲ.
ಆದರೆ ಈ ಬಾರಿ ಹೆಚ್ಚಿನ ರಾಜಕೀಯ ಲೆಕ್ಕಾಚಾರಗಳಿಲ್ಲದೇ, ‘ಜನಪ್ರಿಯ ‘ ಸ್ಲೋಗನ್ ಗೆ ಜೋತು ಬೀಳದೇ ದೇಶದ ದೀರ್ಘಾವಧಿಯ ಆರ್ಥಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಬಜೆಟ್ ಎನ್ನಬಹುದು. ಯಾವುದೇ ದೇಶ ಆರ್ಥಿಕ ಪ್ರಗತಿಯನ್ನು ಸಾಧಿಸುವ ಹಾದಿಯಲ್ಲಿರುವಾಗ ಸಾರ್ವಜನಿಕ ವೆಚ್ಚ ಆದಾಯಕ್ಕಿಂತ ಹೆಚ್ಚಾಗುವುದು ಹಾಗೂ ಪರಿಣಾಮವಾಗಿ ವಿತ್ತೀಯ ಕೊರತೆ ಜಾಸ್ತಿಯಾಗುವುದೂ ಸಹಜ. ಕಳೆದೆರಡು ವರ್ಷಗಳಲ್ಲಿ ಕೋವಿಡ್ ಕಾರಣದಿಂದ ಇದು ಇನ್ನಷ್ಟು ಹೆಚ್ಚಾಗುತ್ತಿದೆ. ದೇಶದ ದೀರ್ಘಾವಧಿಯ ಆರ್ಥಿಕ ಹಿತ ದೃಷ್ಟಿಯಿಂದ ನೋಡಿದರೆ ವಿತ್ತೀಯ ಕೊರತೆ 6.4 ನಷ್ಟು ಇರುವುದು ಒಳ್ಳೆಯ ಲಕ್ಷಣವಲ್ಲ. ಆರ್ಥಿಕ ನಿಯಮಗಳ ಪ್ರಕಾರ ಇದು ಜಿಡಿಪಿಯ ಶೇಕಡಾ 3ಕ್ಕಿಂತ ಜಾಸ್ತಿ ಇರಬಾರದು. ಅಷ್ಟರೊಳಗೆ ನಿಭಾಯಿಸುವುದು ಕಷ್ಟ ಸಾಧ್ಯವಾದರೂ ಕಡಿಮೆ ಮಾಡುವ ಪ್ರಯತ್ನಗಳಾಗಬೇಕು. ಈ ಬಾರಿಯ ವಿತ್ತೀಯ ಕೊರತೆ ಕಳೆದ ಬಾರಿಗಿಂತ ಹೋಲಿಸಿದರೆ ಕೊಂಚ ಇಳಿಕೆಯಾಗಿದ್ದರೂ ಅದನ್ನು ಇನ್ನಷ್ಟು ಕಡಿಮೆ ಯಾಗಿಸುವ ಹೊಣೆಗಾರಿಕೆಯೂ ಸರಕಾರದ ಮೇಲಿದೆ.
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ