- ನುಡಿನಮನ ಸಂಚಿಕೆ ಸಂಪಾದಕರ ಮಾತು - ಫೆಬ್ರುವರಿ 26, 2024
- ನಕ್ಷತ್ರ ಮಾರ್ಗ - ಅಕ್ಟೋಬರ್ 23, 2022
- ನೀವಿದನ್ನೆಲ್ಲ ಮಾಡಿದರೆ….. - ಏಪ್ರಿಲ್ 18, 2021
ಕನ್ನಡದ ವಿಭಿನ್ನ ಕವಿ,ಕಥೆಗಾರ ಕೆ,ವಿ. ತಿರುಮಲೇಶರಿಗೆ ಎಂಬತ್ತನೆಯ ವರ್ಷದ ಜನ್ಮದಿನಕ್ಕೆ ಶುಭಾಶಯ ಹೇಳುತ್ತ, ಅವರ ‘ಪರಂಧಾಮಿ ಸ್ವಾಮಿ’ ಎನ್ನುವ ಕತೆಯ ಬಗ್ಗೆ ನನ್ನ ಅನಿಸಿಕೆಗಳನ್ನು ಹೇಳುವ ಪ್ರಯತ್ನ ಮಾಡುತ್ತೇನೆ.
“ಕೆಲವು ಕಥಾನಕಗಳು” ಕಥಾ ಸಂಕಲನದ ಹಲವು ಕಥೆಗಳನ್ನು ಓದಿದಾಗ ನನ್ನ ಗಮನ ಸೆಳೆದಿದ್ದು ಅವರ ‘ಪರಂಧಾಮಿ ಸ್ವಾಮಿ’ ಎನ್ನುವ ಮಜವಾದ ಹೆಸರುಳ್ಳ ಕಥೆ. ಯಾವುದೇ ಊರಿನ ಹೆಸರಿಲ್ಲದ, ಯಾವ ಊರಿನಲ್ಲಾದರೂ ನಡೆಯಬಹುದಾದ, ಹೀಗೆಲ್ಲ ನಡೆದಿರುವುದಕ್ಕೆ ನಾವು ಸಾಕ್ಷಿಯಾದಂತೆನಿಸುವ, ನಾವು ಕೂಡ ಇಂಥ ಪಾತ್ರಗಳನ್ನು ನೋಡಿದ್ದೇವೆ ಅನಿಸುವ ಕಥೆ ಇದು.
ಕಥಾವಸ್ತು ಒಂದು ಕಾದಂಬರಿಗಾಗುವಷ್ಟಿದೆ. ಪುಟಗಳ ಸಂಖ್ಯೆ ಕಡಿಮೆ ಎಂದು ಕಥೆ ಎನ್ನಬೇಕು. ತಿರುಮಲೇಶರು ಇದೇ ಕಥಾವಸ್ತುವನ್ನಿಟ್ಟುಕೊಂಡು ಒಂದು ದೀರ್ಘ ಕಾದಂಬರಿಯನ್ನು ಹೆಣಿಯಬಹುದಿತ್ತೇನೊ….
ಸಾಮಾನ್ಯವಾಗಿ ಕಥೆ, ಒಂದು ಗಟ್ಟಿ ಘಟನೆಯ ಸುತ್ತ ತಿರುಗುತ್ತದೆ. ಅದು ಕಥೆಯ ಪ್ರಾರಂಭದಲ್ಲಿ ಬರುತ್ತದೆ. ಅಥವಾ ಕೊನೆಯಲ್ಲಿಯೂ ಬರಬಹುದು. ಪೂರ್ಣ ಕಥೆ, ಅಂಥ ಒಂದು ಘಟನೆಯ ತಯಾರಿಯಾಗಿ ಅಥವಾ ಅಂಥ ಘಟನೆಯ ವಿವರಣೆ, ಪರಾಮರ್ಶೆಯಾಗಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಎನ್ನುವ ಮಾತಿಗೆ ‘ಪರಂಧಾಮಿ ಸ್ವಾಮಿ’ ಅಪವಾದ. ಇಲ್ಲಿ ಅನೇಕ ಘಟನೆಗಳು ಒಂದರ ಹಿಂದೊಂದು ನಡೆಯುತ್ತಲೇ ಹೋಗುತ್ತವೆ. ಅವುಗಳಿಗೊಂದು ಸೂತ್ರ ಇದೆ ಅನ್ನುವ ಹಾಗಿಲ್ಲ. ಅವು ಒಂದೇ ಮನೆಗೆ ಸಂಬಂಧಪಟ್ಟಿದ್ದು ಎಂಬುದೊಂದೇ ಅವುಗಳ ಮಧ್ಯದ ಕೊಂಡಿ
ಪರಂಧಾಮಿ ಎಮ್ಮೆ ವ್ಯಾಪಾರಿ. ವ್ಯಾಪಾರಿ ತತ್ವಕ್ಕನುಗುಣವಾಗಿ ಗಿರಾಕಿಗಳನ್ನು ಬೆಚ್ಚಿಸಿ, ಬೆದರಿಸಿ, ಅವರ ಮಾಲಿಗೆ, ಅಂದರೆ ಎಮ್ಮೆಗೆ, ಮಾರುಕಟ್ಟೆಯಲ್ಲಿ ಈಗ ಬೆಲೆಯೇ ಇಲ್ಲ ಎಂದು ಅವರಮನಸ್ಸಿಗೆ ನಾಟಿಸಿ ಅವರ ಪಾಲಿಗೆ ಬೆಲೆ ಇಳಿಸಿ, ಕೊಳ್ಳುವವರ ಮುಂದೆ ಅವುಗಳ ಬೆಲೆ ಏರಿಸುವುದು ಹೇಗೆ ಎಂದು ಅರಿತ ನಿಷ್ಣಾತಿ. ಮಾತಿನಲ್ಲೇ ಅರಮನೆ ಕಟ್ಟುವ ಚತುರ. ತನ್ನ ನಾಲಿಗೆಯ ಶಕ್ತಿಯಿಂದಲೆ ಕುಟುಂಬದ ಉದರ ಪೆÇೀಷಣೆ ಮಾಡುವ ತಾಕತ್ತುಳ್ಳ ಪರಂಧಾಮಿಗೊಬ್ಬ ಜೋಭದ್ರ ಮಗ. ಬಡಿದು ಬಡಿದು ಅಂದಾನಪ್ಪ ಮಾಸ್ತರ ಕೋಲುಗಳು ಮುರಿದರೂ ವಿದ್ಯೆ ಹತ್ತದೇ ಎಂಟನೆ ಇಯತ್ತೆಗೇ ಸ್ಕೂಲ್ ಬಿಟ್ಟು, ಉಂಡಾಡಿಯಾಗಿ ಅಲೆಯುತ್ತ, ಕಾಲ ಕಳೆದಂತೆ, ಕಂಡ ಕಂಡ ಹೆಣ್ಮಕ್ಕಳ ಸೆರಗಿಗೆ ಕೈ ಹಾಕಿ ಬಡಿಸಿಕೊಳ್ಳುತ್ತ ಅಪ್ಪನಿಗೆ ತಲೆನೋವಾದ ಮಗ ನಟರಾಜ.
ಅಚಾನಕ್ ಬೆದೆ ಬಂದ ಎಮ್ಮೆಯೊಂದು ಒದ್ದ ನೆವದಿಂದ ಒಂದು ಕಣ್ಣನ್ನು ಕಳೆದುಕೊಂಡು ಅಲ್ಲೇ ವ್ರಣವಾಗಿ ನೋವು ತಾಳಲಾಗದೇ ಒದರಿ, ಒದರಿ ಮನೆಯವರಿಗೆಲ್ಲ ಬೇಡದವನಾಗಿ ಒಂದು ರಾತ್ರಿ ಅವರಲ್ಲೊಬ್ಬರಿಂದಲೇ ಶ್ವಾಸ ಅದುಮಿಸಿಕೊಂಡು ಕೊಲೆಯಾಗಿ ಸತ್ತುಹೋಗುತ್ತಾನೆ. ಸತ್ತ ಅಪ್ಪನನ್ನು ಮಗ ನಟರಾಜ, ತನ್ನ ಅಪ್ಪ ಕಡಿಯದೇ ಇಟ್ಟಿದ್ದ ಮನೆಯ ಅಂಗಳದಲ್ಲಿದ್ದ ಆಲ, ಅಶ್ವತ್ಥ, ಬೇವು, ಈ ತ್ರಿವಳಿ ಮರಗಳ ಬುಡದಲ್ಲಿ ಹುಗಿದು, ಅದರ ಮೇಲೊಂದು ಕಲ್ಲು ನೆಡುತ್ತಾನೆ. ಕಲ್ಲಿನ ಪಕ್ಕ ದಿನಾ ದೀಪ ಹಚ್ಚತೊಡಗುತ್ತಾನೆ. ದೀಪ ನೋಡಿದ್ದೇ ಪಕ್ಕದ ರಸ್ತೆಯಲ್ಲಿ ಹೋಗುವ ಜನ ಒಳ ಬಂದು ಕಲ್ಲಿಗೆ ಕೈ ಮುಗಿಯತೊಡಗುತ್ತಾರೆ. ದಿನ ಹೋದಂತೆ ಜನಹೆಚ್ಚಾಗುತ್ತಿರುವುದನ್ನು ಗಮನಿಸಿದ ನಟರಾಜ ಅಲ್ಲೇ ಒಂದು “ ಪರಂಧಾಮ ಕ್ಷೇತ್ರ” ಎಂದು ಬೋರ್ಡು ನೇತು ಹಾಕಿ, ಕಾಣಿಕೆ ಡಬ್ಬಿ ಇಟ್ಟು ತಾನು ಪೂಜೆ ಶುರುಮಾಡುತ್ತಾನೆ. ಪಕ್ಕದಲ್ಲಿ ಹೆಂಡತಿ ಗಿರಿಕನ್ಯೆಗೊಂದು ಅಂಗಡಿ ಹಾಕಿಕೊಡುತ್ತಾನೆ. ಕಾಣಿಕೆ, ಪೂಜೆ, ವ್ಯಾಪಾರ ಎಲ್ಲ ಜೋರಾಗಿನಡೆಯತೊಡಗುತ್ತದೆ. ಅಷ್ಟರಲ್ಲಿ ಅಲ್ಲಿಗೆ ಹೊಸದಾಗಿ ಬಂದ ಎಸ್.ಐ ಧನಂಜಯನಾಗನ ದೃಷ್ಟಿ ನಟರಾಜನ ಮೇಲೆ ಬೀಳುತ್ತದೆ. ಸ್ಟೇಶನ್ನಿಗೆ ಕರೆಸಿ ನಟರಾಜನ ಕಪಾಳಕ್ಕೆ ಕೊಟ್ಟ ಹೊಡೆತದ ಪರಿಣಾಮ ನಟರಾಜ ಕಿವುಡನಾಗಿ, ಮಂಕನಾಗಿ, ಪರದೇಸಿಯಾಗಿ ತಿರುಗುತ್ತ, ತಿರುಗುತ್ತ ಒಂದು ದಿನ ಮಾಯವಾಗುತ್ತಾನೆ. ಆತನ ಹೆಂಡತಿ ಗಿರಿಕನ್ಯೆ, ಗಂಡನ ಪೂಜೆಯನ್ನು ಎಸ್. ಐ ಧನಂಜಯನ ತನು ಮನ ತುಂಬಿದ ಪೆÇ್ರೀತ್ಸಾಹ ಮತ್ತು ಮಾಸ್ತರ್ ಅಂದಾನಪ್ಪನ ಸಹಾಯದಿಂದ ನಡೆಸುತ್ತ, ಪರಂಧಾಮ ಕ್ಷೇತ್ರವನ್ನು ಅಭಿವೃದ್ಧಿಗೊಳಿಸತೊಡಗುತ್ತಾಳೆ ಎಂಬಲ್ಲಿಗೆ ಕಥೆ ಮುಗಿಯುತ್ತದೆ.
ಕಥೆಯ ಉದ್ದಕ್ಕೂ ಒಂದರ ಹಿಂದೊಂದರಂತೆ ಸಂಭವಿಸುವ ಘಟನೆಗಳು, ದುರಂತಗಳು ಓದುಗನನ್ನು ಸ್ತಂಭೀüಭೂತನನ್ನಾಗಿಸುತ್ತವೆ. ಈ ಕಥೆಯ ಮೂಲಕ ತಿರುಮಲೇಶರು ಮುಖ್ಯವಾಗಿ ತರ್ಕಕ್ಕೆ ಸಿಗದ ಮನುಷ್ಯ ಜೀವನದ ನಶ್ವರತೆಯ ಮೇಲೆ ಒತ್ತುಕೊಡುತ್ತಾರೆ . ಒಳ್ಳೆ ವ್ಯಾಪಾರ , ಸಾಪಾರ ಮಾಡಿಕೊಂಡಿದ್ದ ಪರಂಧಾಮಿ, ಎಮ್ಮೆಯೊಂದು ಒದ್ದಿದ್ದೇ ನೆವವಾಗಿ ಕಣ್ಣು ಕಳೆದುಕೊಂಡು ವ್ರಣವಾಗಿ ಕೊಲೆಯಾಗಿಬಿಡುವುದು ( ಕಥೆಯ ಕೊನೆಯನ್ನು ನೋಡಿದರೆ ಪರಂಧಾಮಿಯನ್ನು ಕೊಂದಿದ್ದು ಸೊಸೆ ಗಿರಿಕನ್ಯೆಯೇ ಅನಿಸುತ್ತದೆ), ಉಂಡಾಡಿ ಗುಂಡನಾಗಿ, ಬೀದಿ ಕಾಮಣ್ಣನಾಗಿ ಅಡ್ಡಾಡಿಕೊಂಡಿದ್ದ ಮಗ ನಟರಾಜ ನೋಡನೋಡುತ್ತಿದ್ದಂತೆ ಪೂಜಾರಿಯಾಗಿ, ಗಣಕಾರನಾಗಿ ಬದಲಾಗಿಬಿಡುವುದು ತರ್ಕಕ್ಕೆ ಸಿಗದ್ದಾಗಿಯೂ, ತುಸು ನಾಟಕೀಯವಾಗಿಯೂ ಕಾಣುತ್ತದೆ. ಸಂದರ್ಭಕ್ಕನುಗುಣವಾಗಿ ಮಾತನಾಡಿ ವ್ಯಾಪಾರ ದಕ್ಕಿಸುತ್ತಿದ್ದ ಅಪ್ಪ ಪರಂಧಾಮಿಯ ವ್ಯವಹಾರ ಕೌಶಲ್ಯ, ಅಪ್ಪನನ್ನು ಹುಗಿದ ಜಾಗದಲ್ಲಿ ನೆಟ್ಟ ಕಲ್ಲ ಮಹಿಮೆ ಮನವರಿಕೆಯಾದದ್ದೇ ಅದನ್ನು ಲಾಭದಾಯಕವಾದ ಧಾರ್ಮಿಕ ಕ್ಷೇತ್ರವನ್ನಾಗಿ ಮಾರ್ಪಡಿಸುವ ಮಗನ ನೈಪುಣ್ಯತೆಯಲ್ಲಿ ಆನುವಂಶಿಕವಾಗಿ ಹರಿದು ಬಂದಿದೆ. ಎಸ್. ಐ ಹೊಡೆತಕ್ಕೆ ಸಿಕ್ಕು ಗಂಡ ಕಿವುಡಾಗಿ, ಮಂಕಾಗಿ, ಬುದ್ಧಿ ಭ್ರಮಣೆಯಾಗಿ ರಿಪೇರಿಯಾಗದ ಸ್ಥಿತಿ ತಲುಪಿದ್ದಾನೆ ಎಂಬುದನ್ನು ಕಂಡುಕೊಂಡಿದ್ದೇ ಎಸ್. ಐ ಯನ್ನೂ, ಮಾಸ್ತರರನ್ನೂ ಒಳಹಾಕಿಕೊಂಡು ಲಾಭದಾಯಕ ಪೂಜೆ ದಂಧೆಯನ್ನು ಮರುಸ್ಥಾಪಿಸುತ್ತ, ಎಂಥ ವಿರುದ್ಧ ಸ್ಥಿತಿಗೂ ಕೂಡ ಹೊಂದಿಕೊಂಡು, ಅದನ್ನೇ ತನ್ನ ಲಾಭಕ್ಕೆ ತಿರುಗಿಸಿಕೊಂಡು ಬದುಕಲೆಳಸುವ ಮಾನವನ ಜೀವಿಸುವಾಸೆಗೆ, ಅಸ್ತಿತ್ವದಾಸೆಗೆ ಒಂದು ದೃಷ್ಟಾಂತವಾಗುತ್ತಾಳೆ ಗಿರಿಕನ್ಯೆ. ಅವಳು ಮೊದಲು ಮಾವನನ್ನು, ನಂತರ ಗಂಡನನ್ನು,- ಅವರು ನಿರುಪಯುಕ್ತ, ಸಹಿಸಲಸಾಧ್ಯ ಅನ್ನಿಸಿದ ಕೂಡಲೇ – ಕೊಂದುಬಿಡುವುದು ಮನುಷ್ಯ್ಯನೊಳಗೆ ಹುದುಗಿರಬಹುದಾದ ತಣ್ಣನೆಯ ಕ್ರೌರ್ಯಕ್ಕೆ ಸಾಕ್ಷಿಯಾಗಿ ಉಳಿಯುತ್ತದೆ.
ಪದಗಳ ಮಿತಿಯುಳ್ಳ ಸಣ್ಣ ಕಥೆಗಾಗಿ ಕಾದಂಬರಿಗಾಗುವಷ್ಟು ವಿಸ್ತಾರದ ವಸ್ತುವನ್ನಾಯ್ದುಕೊಂಡ ತಪ್ಪಿಗೆ ತಿರುಮಲೇಶರು ಹಲ ಕಿರಿಕಿರಿಗಳನ್ನನುಭವಿಸಿದ್ದಾರೆ. ವಿರಾಮವಾಗಿ, ವಿಸ್ತಾರವಾಗಿ ವಸ್ತುವಿನ ನವಿರತೆ, ಸೂಕ್ಷ್ಮತೆ ಎಲ್ಲವುಗಳನ್ನೂ ಮೇಳೈಸಿಕೊಂಡು ಸ್ವಾಭಾವಿಕವಾಗಿ ಬೆಳೆಯುವ ಎಲ್ಲ ತಾಕತ್ತಿದ್ದ ವಸ್ತುವೊಂದು, ಕೃತಿಕಾರನ ಅವಿಶ್ರಾಂತ ನಾಗಾಲೋಟಕ್ಕೆ, ಅನಿರೀಕ್ಷಿತ ತಿರುವುಗಳಿಗೆ ಸಿಕ್ಕು ತನ್ನ ಸೂಕ್ಷತೆ, ಆಳ, ವಿಸ್ತಾರಗಳನ್ನೆಲ್ಲಾ ಒಳಗೊಂಡೂ, ಇಕ್ಕಟ್ಟಾಗುತ್ತದೆ. ಹಾಗಾಗಿ ಕೆಲವು ಕಡೆ “ಮೆಲೊಡ್ರಾಮಾ” ಆದಂತನಿಸುತ್ತದೆ. ಈ ಕಥೆಯ ಮೂಲಕ ತಿರುಮಲೇಶರು, ಯಾರ ಜೀವನದಲ್ಲಿ ಕೂಡ ಘಟಿಸಬಹುದಾದ ಅತಾರ್ಕಿಕ, ವಿವರಣೆಗೆ ಸಿಕ್ಕದ ದುರಂತಗಳ ಸರಮಾಲೆಯನ್ನು ಎದುರಿಗಿಟ್ಟು, ಮಾನವ ಜೀವನದ ನಶ್ವರತೆ ಮತ್ತು ನಿರರ್ಥಕತೆಯನ್ನು ಓದುಗನೆದುರಿಗೆ ಇಡುವುದರಲ್ಲಿ ಯಶಸ್ವಿಯಾಗುತ್ತಾರೆ. ಕಥೆ ಓದಿದಮೇಲೆ “ಮನುಷ್ಯನ ಗತಿ ಇಷ್ಟೇೀನಾ ?! ” ಎಂಬ ಒಂದು ತೀವ್ರ ವಿಷಾದ ನಮ್ಮನ್ನಾವರಿಸುತ್ತದೆ.
ವಿದ್ಯಾ ಭರತನಹಳ್ಳಿ
ಹೆಚ್ಚಿನ ಬರಹಗಳಿಗಾಗಿ
ಹಣತೆ – ನಸುಕು ಕವಿಗೋಷ್ಠಿ
ತಿರುಮಲೇಶ್ ಮೇಷ್ಟ್ರಿಗೆ
ತಿರುಮಲೇಶ್- ೮೦:ವಿಶೇಷ ಸಂಚಿಕೆ