- ಬೇಂದ್ರೆಯವರ ನಾಕುತಂತಿಯ ಮರು ಓದು - ಫೆಬ್ರುವರಿ 3, 2025
- ಬೇಂದ್ರೆಸಂಗೀತ: ಒಂದು ವಿಶ್ಲೇಷಣೆ - ಮಾರ್ಚ್ 18, 2024
- ದೂರ ತೀರದಿಂದ ಮುತ್ತುಗಳ ತಂದ ನಾವಿಕ - ಫೆಬ್ರುವರಿ 26, 2024
ಬೇಂದ್ರೆಯವರಿಗೆ ಜ್ಞಾನಪೀಠ ಪುರಸ್ಕಾರವನ್ನು ತಂದು ಕೊಟ್ಟ ‘ನಾಕುತಂತಿ’ ಸಂಕಲನದ ಶೀರ್ಷಿಕೆಯ ಕವಿತೆ ಬಹಳ ಸವಾಲಿನದು. ಅದಕ್ಕೆ ಹಲವು ನೆಲೆಗಳ ಅರ್ಥವನ್ನು ನೀಡಿದ್ದರೂ ಇನ್ನೊಂದು ನೆಲೆಯಲ್ಲಿ ಅರ್ಥ ನೀಡಬಲ್ಲ ಸಾಧ್ಯತೆಗಳನ್ನು ಉಳಿಸಿಕೊಂಡಿರುವುದನ್ನು ಇದರ ವಿಶೇಷತೆ ಎಂದೇ ಹೇಳಬಹುದು. ಒಂದು ರೀತಿಯಲ್ಲಿ ಇದು ಚಿನ್ನದ ಗಣಿ. ‘ನಾಕುತಂತಿ’ ಕವಿತೆಯಲ್ಲಿ ನಾಲ್ಕು ಭಾಗಗಳಿವೆ. ಬೇಂದ್ರೆಯವರು ತಮ್ಮ ಭಾವಸೂಚಿಯಲ್ಲಿ ಹೇಳಿರುವಂತೆ ನಾಕುತಂತಿಯ ನಾಕು ಭಾಗಗಳು ಒಂದೇ ಭಾವದ ನಾಲ್ಕು ಮಗ್ಗಲುಗಳು. ಇಡೀ ಕವಿತೆ ಒಂದು ರೀತಿಯಲ್ಲಿ ಅಂಗವ್ಯವಸ್ಥೆಯ ಮೂರ್ತರೂಪವಾಗಿದೆ. ಇದು ವ್ಯಕ್ತಿಯಲ್ಲಿಯೇ ವಿಶ್ವವನ್ನು ಗುರುತಿಸುತ್ತದೆ. ವಿಶ್ವವನ್ನು ವ್ಯಕ್ತಿಯ ನೆಲೆಯಲ್ಲಿ ಗಮನಿಸುತ್ತದೆ. ಇನ್ನೂ ವಿಸ್ತರಿಸಿ ಹೇಳುವುದಾದರೆ ವಿಶ್ವ ಮತ್ತು ವ್ಯಕ್ತಿ ಈ ದ್ವಂದ್ವವನ್ನು ಮೀರಿ ನಿಲ್ಲುತ್ತದೆ. ಇಡೀ ಕವಿತೆಯ ರೂಪಕಗಳು ಮಾನವ ದೇಹದಲ್ಲಿನ ಚಕ್ರವ್ಯವಸ್ಥೆಗೆ ಸಂವಾದಿಯಾಗಿ ಕಾರ್ಯ ನಿರ್ವಹಿಸುತ್ತವೆ. ಮೂಲಾಧಾರ-ಬೆನ್ನ ಹುರಿಯ ಬುಡದಲ್ಲಿ (ಮೇರುದಂಡ ಬುಡ), ಸ್ವಾಧಿಷ್ಟಾನ (ನಾಭಿಯ ಕೆಳಗೆ), ಅನಾಹತ( ಹೃದಯ), ವಿಶುದ್ಧ (ಕಂಠ) ಮತ್ತು ಆಜ್ಞಾ (ಭ್ರೂ ಮಧ್ಯೆ). ಇವು ಆರು ದಿಗ್ದೇವತೆಗಳಿಂದ ನಿಯಂತ್ರಿಸಲ್ಪಡುವುದನ್ನು ಇವು ಎರಡೆರಡು ಒಂದು ಗುಂಪಾಗಿ ದೇವಿಯ ಮೂರು ಅಂಶಗಳನ್ನು ಪ್ರತಿನಿಧಿಸುವುದನ್ನು ಹೇಳುತ್ತವೆ. ಇದನ್ನೇ ಕವಿತೆಯ ‘ಹಡಗದ ಹುಡುಗಿ’ಯ ರೂಪಕ ಪ್ರತಿನಿಧಿಸುತ್ತದೆ.
ಮಹರ್ಷಿ ಅರವಿಂದರು ಕೀಟ್ಸ್ ಕವಿಯಲ್ಲಿ ಮೂರೇ ಆಯಾಮಗಳು ನಾಲ್ಕನೆಯದು ಇಲ್ಲ ಎಂದು ಆರ್ಯ ಪತ್ರಿಕೆಯಲ್ಲಿ ಬರೆದಿದ್ದನ್ನು ಓದಿದಾಗಿನಿಂದ ‘ನಾಕುತಂತಿ’ ರೂಪ ಪಡೆಯಿತು ಎಂದು ಬನ್ನಂಜೆ ಗೋವಿಂದಾಚಾರ್ಯರು ವಿಶ್ಲೇಷಿಸಿದ್ದಾರೆ. ಅವರ ಪ್ರಕಾರ ಇದರ ಮೂಲ ಭಗವದ್ಗೀತೆಯ,
“ಇಂದ್ರಿಯಾಣಿ ಪರಾಣ್ಯಾ ಹುರಿಂದ್ರೀಯೇಭ್ಯ: ಪರಂ ಮನ
ಮನಸಸ್ತು ಪರಾ ಬುದ್ಧಯೋರ್ವ ಬುದ್ದೇ: ಪರತಸ್ತು ಪ:”
ಶ್ಲೋಕದಲ್ಲಿದೆ. ಸಾಮಾಜಿಕ ಬದುಕಿನ ನಿದ್ರಾ-ಭಯ-ಮೈಥುನದಿಂದ ಹೊರಗಣ್ಣು, ಒಳಗಣ್ಣು, ತೆರೆಗಣ್ಣು, ತಿರುಳುಗಣ್ಣು ಬೇಂದ್ರೆ ಗುರುತಿಸುವ ನಾಕುತಂತಿಗಳು. ಇದನ್ನು ಪರಾ-ಪರ್ಯಂತಿ-ಮಧ್ಯಮಾ-ವೈಖರೀ ವೈದಿಕ ಮಂತ್ರದಲ್ಲಿ ಬರುವ ಚತ್ವಾರಿ, ಶೃಂಗಾ ತ್ರಯೋ ಅಸ್ಯ ಪಾದ: ಹೀಗೆ ಬನ್ನಂಜೆ ಸಾಧಿಸಲು ಯತ್ನಿಸಿದ್ದಾರೆ. ಈ ಕುರಿತು ಎಸ್.ಆರ್.ವಿಜಯಶಂಕರ್ ವಿವರವಾದ ಲೇಖನವನ್ನೂ ಬರೆದಿದ್ದಾರೆ. ಇದು ಹೆಚ್ಚೆಂದರೆ ತಾತ್ವಿಕ ಹಿನ್ನೆಲೆ ನೀಡಬಹುದು. ಆದರೆ ನನಗೆ ಮತ್ತೆ ಮತ್ತೆ ಓದಿದರೂ ಈ ಮೂಲಕ ಕವಿತೆಗೆ ಪ್ರವೇಶ ಸಿಕ್ಕುತ್ತಿಲ್ಲ.
ಡಾ.ಶಂಕರಮೊಕಾಶಿ ಪುಣೇಕರರು ‘ಕಠೋಪನಿಷತ್ತಿ’ನ ಮೂಲಕ ಪ್ರವೇಶದ ದಾರಿಯನ್ನು ಹೇಳಿದ್ದಾರೆ. ನಾನು’ ಎಂದರೆ ದೇಹವೋ ಅಥವಾ ಶರೀರವೋ ಎನ್ನುವುದರ ಕುರಿತು ಅನೇಕ ಚರ್ಚೆಗಳು ಭಾರತೀಯ ವೇದಾಂತದಲ್ಲಿ ನಡೆದಿದೆ. ಕಠೋಪನಿಷತ್ ನಲ್ಲಿ ಇದನ್ನು ‘ದ್ವಾ ಸುಪರ್ಣ ಸಯುಜಾ ಸಖಾಯಾ’ ಎಂಬ ರೂಪಕದಲ್ಲಿ ಹೇಳಲಾಗಿದೆ. ‘ನಾನು’ ಎಂಬ ಒಂದು ಲೋಕ ವ್ಯವಹಾರ ನಡೆಸುತ್ತಿದ್ದರೆ ಇನ್ನೊಂದು ‘ನಾನು’ ಅದನ್ನು ನೋಡುತ್ತಿರುತ್ತದೆ. ನೋಡುವುದು ವ್ಯವಹರಿಸುವುದಿಲ್ಲ, ವ್ಯವಹರಿಸುವುದು ನೋಡುವುದಿಲ್ಲ. ಉದ್ದಾಲಕನು ಶ್ವೇತಕೇತುವಿಗೆ ‘ಅಹಂ ಬ್ರಹ್ಮಾಸ್ಮಿ’ ಎನ್ನುವಾಗ ಒಂಬತ್ತು ಸಲ ಉಪದೇಶಿಸುತ್ತೇನೆ, ಎರಡೂ ಒಂದೇ ಎನ್ನುವುದು ನಿಜವಾದರೂ ಈ ಭೇದ ಹೋಗುವುದು ಅಷ್ಟು ಸುಲಭವಲ್ಲ. ‘ಇದಂ ಸರ್ವಂ ಯದಯಮತಾತ್ಮ’ ಎನ್ನುವ ಶ್ರುತಿ ವಾಕ್ಯ ಈ ಅಬೇಧಸ್ಥಿತಿಯೇ ‘ಬ್ರಹ್ಮಜ್ಞಾನ’ವೆಂದು ತಿಳಿಸುತ್ತದೆ. ಈ ಅಬೇಧ ಸ್ಥಿತಿ ನಮಗೆ ಏಕೆ ತಿಳಿಯುವುದಿಲ್ಲವೆನ್ನುವುದಕ್ಕೆ ‘ಅಧ್ಯಾಸ’ ಎಂದು ಕರೆಯುತ್ತಾರೆ. ಅಧಿ+ಅಸ ಎಂದರೆ ಒಂದು ವಸ್ತುವಿನಲ್ಲಿ ಇನ್ನೊಂದರ ಧರ್ಮವನ್ನು ಹೇರುವುದು. ‘ಅಧ್ಯಾಸೋ ನಾಮ ಅತಸ್ಮಿನ್ ತದ್ ಬುದ್ಧಿ:’ ಎನ್ನುತ್ತದೆ ಕಠೋಪನಿಷತ್. ‘ತತ್ವಮಸಿ’ ಎನ್ನುವ ಮಹಾವಾಕ್ಯವು ‘ನಾನು’ ಎನ್ನುವುದು ‘ಬ್ರಹ್ಮ’ ಎಂದು ತಿಳಿಸುತ್ತದೆ. ಇದು ಅರಿವಾಗಲು ನೇತಿ ನೇತಿ ಎಂದು ಸರ್ವವನ್ನೂ ನಿರಾಕರಿಸುವುದು ಸಾಧ್ಯವಾಗ ಬೇಕು. ದೇಹವು ನಾನಲ್ಲ, ಮನಸ್ಸು ನಾನಲ್ಲ ಹೀಗೆ ಯಾವುದು ಯಾವುದಕ್ಕೆ ವಿಷಯವಾಗುತ್ತದೆಯೋ ಅದು ‘ನಾನಲ್ಲ’. ನಿಷೇಧಕಕ್ಕೆ ಕರ್ತೃವಾಗಿ ತೋರುವ ‘ಬ್ರಹ್ಮವೇ’ ಅಂತಿಮವಾಗಿ ‘ನಾನು’ ಎಂದು ತಿಳಿಯತ್ತದೆ. ‘ತಸ್ಯ ಭಾಸಾ ಸರ್ವಮಿದಂ ವಿಭೂತಿ’ ಎಂಬ ಬೆಳಕಿನಿಂದ ಸರ್ವವೂ ಬೆಳಗುತ್ತದೆ. ಆಗ ದೊರಕುವುವೇ ‘ಅಹಂ ಬ್ರಹ್ಮಾಸ್ಮಿ’ ಎಂಬ ಅರಿವು.
ಕಠೋಪನಿಷತ್ತಿನ ನಾಲ್ಕನೆಯ ವಲ್ಲಿಗೆ ಶಂಕರಾಚಾರ್ಯರು ಬರೆದಿರುವ ಭಾಷ್ಯದಲ್ಲಿ ನಾಲ್ಕು ತಂತಿಗಳ ವಿಶ್ವವೀಣೆಯ ಕಲ್ಪನೆ ಇದೆ. ಅಹಂ, ನಾಹಂ, ಕೋಹಂ, ಸೋಹಂ ಎನ್ನುವುದು ಅಲ್ಲಿ ಸೂಚಿತವಾಗಿರುವ ನಾಕುತಂತಿಗಳು ಇದನ್ನೇ ಬೇಂದ್ರೆ ಆವು ಈವು, ನಾವು ಮತ್ತು ನೀವು ಎಂದು ಕನ್ನಡಕ್ಕೆ ತಂದಿದ್ದಾರೆ. ಕವಿತೆ ಬಂದಿರುವುದು ಇಲ್ಲಿಂದ ಎನ್ನುವುದು ಸ್ಪಷ್ಟ. ಆದರೆ ಕಠೋಪನಿಷತ್ತಿನಲ್ಲಿ ‘ಆತ್ಮವಿದ್ಯೆ’ ತಾತ್ವಿಕತೆ ರೂಪದ್ದು. ಅಲ್ಲಿ ಸಂವಾದವಿದೆ. ‘ನಾಕು ತಂತಿ’ಯ ಮೂರನೆಯ ಭಾಗದಲ್ಲಿ ಮಾತ್ರ ಸಂವಾದವಿದೆ. ಇದು ಮಾತ್ರ ಕಠೋಪನಿಷತ್ತಿನಿಂದ ಪ್ರೇರಿತ ಎನ್ನಬಹುದು, ಬೇಂದ್ರೆಯವರ ‘ಅಣು ಮಹತ್’ ಕವಿತೆ ಹಾಗೆ ನೋಡಿದರೆ ಸಂಪೂರ್ಣ ‘ಕಠೋಪನಿಷತ್ತಿ’ನ ತಾತ್ವಿಕತೆಯನ್ನು ಅನುಸರಿಸುತ್ತದೆ.
ಕವಿತೆಯನ್ನು ನಾನು ಶ್ರೀವಿದ್ಯೆಯ ನೆಲೆಯಲ್ಲಿ ಓದಲು ಪ್ರಯತ್ನಿಸಿದೆ. ಕವಿತೆಯ ಮೊದಲ ಭಾಗದಲ್ಲಿ ಐದು ನುಡಿಗಳಿವೆ. ಮೊದಲ ನುಡಿಯಲ್ಲಿ ‘ಈಯುವ’ ಎಂದರೆ ಸೃಷ್ಟಿಯ ಕಲ್ಪನೆ ಇದೆ. ‘ಆವು’ ಈದಿದ್ದರಿಂದ ‘ನಾವು’ ಆಗಿದ್ದೇವೆ. ‘ನಾನು’ ‘ನೀನಿ’ನ ಜೊತೆಗೆ ಸೃಷ್ಟಿಯ ‘ಈನು’ ಸೇರುವುದರಿಂದ ‘ಆನು’ವಿಗೆ (ಪರಮಾತ್ಮನಿಗೆ) ಸ್ಥಿತಿಯ ಸಾಧ್ಯತೆ ದೊರಕಿದೆ(ಬೇನೆ). ಅದನ್ನು ಬೇಂದ್ರೆ ‘ಜಾಣಿನಾ’ ಎನ್ನುತ್ತಾರೆ. ಇದು ಮಹತ್ವವಾದ(ಚಾರುತಂತ್ರಿಯ) ಪಾದಪಾದವೂ(ಸೃಷ್ಟಿಯ ಪ್ರತಿ ಅಂಶವೂ) ಶ್ರೇಷ್ಠವಾದ ಈ ನಾಲ್ಕನೆಯ ಧ್ವನಿಗೆ ಕಾರಣವಾಗುತ್ತದೆ. ಇದು ಅನಾಹತವಾದರೆ ಅದರೆ ಬೆನ್ನಿಗೇ ‘ತನನನ’ಎನ್ನುವಲ್ಲಿ ‘ನಾದ ವಿನ್ಯಾಸ’ವೂ ಇದೆ. ಇದು ಆತ್ಮವು ಪರಮಾತ್ಮನ ಜೊತೆಗೆ ಲೀನವಾಗಿ ‘ಬ್ರಹ್ಮದ ಶೋಧ’ಕ್ಕೆ ಕಾರಣವಾಗುವ ಸಾಧ್ಯತೆಯನ್ನು ಸೂಚಿಸುತ್ತದೆ. ‘ಆನು’ವಿನಿಂದ ಇಡೀ ಜಗತ್ತು ರೂಪುಗೊಂಡಿದೆ ಎಂಬ ಸಾಧ್ಯತೆ ಅರಿವಾಗುತ್ತದೆ. ಇದು ಕವಿತೆಯ ತಾತ್ವಿಕತೆಗೆ ಅಗತ್ಯವಾದ ಭೂಮಿಕೆಯನ್ನು ರೂಪಿಸುತ್ತದೆ.
ಕವಿತೆಯ ಎರಡನೆಯ ಭಾಗದಲ್ಲಿ ಈಯುವ ವಸ್ತು ‘ಹಡಗದ ಹುಡುಗಿ’ಯಾಗುತ್ತಾಳೆ. ಇದನ್ನು ‘ಹಡಗು’ ಎಂದೇ ಬಹುತೇಕ ವಿದ್ವಾಂಸರು ವ್ಯಾಖ್ಯಾನ ಮಾಡಿದ್ದಾರೆ. ಈ ಕವಿತೆಯಲ್ಲಿನ ‘ಗೋವಿನ ಕೊಡುಗೆಯ/ಹಡಗದ ಹಡುಗಿ/ಬೆಡಗಿಲೆ ಬಂದಳು/ನಡುನಡುಗಿ’ ಸಾಲಿನಲ್ಲಿ ‘ಹಡಗದ ಹುಡುಗಿ’ಯನ್ನು ಎಲ್ಲರೂ ‘ಹಡಗಿನಿಂದ ಬಂದ ಹುಡುಗಿ’ ಎಂದೇ ವ್ಯಾಖ್ಯಾನಿಸಿದ್ದಾರೆ, ಬೇಂದ್ರೆ ಕೃಷ್ಣಪ್ಪನವರು ಮಾತ್ರ ‘ಗೋವಿನ ಎಂದರೆ ಬ್ರಹ್ಮದ ಕೊಡುಗೆಯ ಈಯುವ ವಸ್ತು, ಈ ಹಡಗದ ಹುಡುಗಿ ಕಟ್ಟುಮಸ್ತಾದ ಜ್ಞಾನ ಕನ್ಯೆ’ ಎಂದು ವ್ಯಾಖ್ಯಾನಿಸಿದ್ದಾರೆ. ಇದಕ್ಕಿಂತಲೂ ಭಿನ್ನ ನೆಲೆ ಸಿಗಬಹುದೇ ಎಂದು ಹುಡುಕುತ್ತಿದ್ದಾಗ ‘ಶ್ರೀಕ್ರಮ’ದ ಮೊದಲ ಕಾಂಡದ ಈ ೩ ಮತ್ತು ೪ನೆಯ ಶ್ಲೋಕಗಳು ಸಿಕ್ಕವು. ಇಲ್ಲಿ ‘ಹಡಗ’ಎನ್ನುವುದು ಕುಂಡಲಿನಿಯ ಉನ್ಮುಖ ಚಲನೆ. ಮುಂದಿನ ಸಾಲುಗಳಲ್ಲಿ ಕುಂಡಲಿನಿಯ ನೇರ ಪ್ರಸ್ತಾಪ ಇರುವುದರಿಂದ ಇದನ್ನು ಹೊಸ ಸಾಧ್ಯತೆಯಲ್ಲಿ ಓದಬಹುದು ‘ಕಾಮ:’ ಎಂಬುದರ ಸಾಮಾನ್ಯ ಅರ್ಥ ಇಚ್ಛೆ. ಆದರೆ ಶಾಸ್ತ್ರೀಯ ನೆಲೆಯಲ್ಲಿ ನೋಡಿದಾಗ ಬಾಹ್ಯ ಪ್ರಚೋದನೆ ಇಲ್ಲದೇ ಲಭಿಸುವ ಚಲನೆ ಎಂಬ ಅರ್ಥವು ಬರುತ್ತದೆ. ಇದನ್ನು “ನಾದ” ಎಂದು ಕರೆಯುತ್ತಾರೆ. ತಾಂತ್ರಿಕ ಸಿದ್ದಾಂತದಂತೆ ಮೂಲಸತ್ಯವಾದ “ಶಿವ” ಕೇವಲ ಪ್ರಕಟ ರೂಪ. ಕರ್ಮದ ಬಂಧನವಿಲ್ಲದ ಸ್ವತಂತ್ರ ಚೈತನ್ಯ. ಈ ಸಂಜ್ಞೆಯು ಶಕ್ತಿಯ ಒಳಗೆ ಸೇರಿದಾಗ ಇಚ್ಚಾ ಅಥವಾ ವೇದನಾ ರೂಪವು ಪ್ರಕಟವಾಗುತ್ತದೆ. ಇದು ಅನುಭವ ಎಂದು ಕರೆಸಿಕೊಳ್ಳುತ್ತದೆ. ಪ್ರಕಾಶದ ಪ್ರಥಮ ಚಲನೆಯು “ಬಿಂದು”ವಿಗೆ ಕಾರಣವಾಗುತ್ತದೆ. ಬ್ರಹ್ಮಾಂಡವು ರೂಪುಗೊಂಡಿದ್ದು ಈ ಬಿಂದುವಿನಿಂದಲೇ. ಈ ಬಿಂದುವು ಕ್ರಮೇಣ ವಿಸ್ತಾರ ಹೊಂದಿ ನಾದವಾಗುತ್ತದೆ. ಬಿಂದು ಸ್ವರೂಪನಾದ ಶಿವನು ವರ್ಣಮಾಲೆಯ ಮೊದಲ ಅಕ್ಷರ “ಅ”ದಿಂದ ಪ್ರತಿನಿಧಿತನಾದರೆ ನಾದಸ್ವರೂಪಿಣಿಯಾದ “ಶಕ್ತಿ”ಯು ಕೊನೆಯ ಅಕ್ಷರ “ಹ”ದಿಂದ ಪ್ರತಿನಿಧಿತಳಾಗುತ್ತಾಳೆ. (ಹೀಗಾಗಿ ಹಡಗ ಎನ್ನುವುದಕ್ಕೆ ಮಹತ್ವ) ಈ ಸಂಯೋಗ ಸ್ವರೂಪಕ್ಕೆ “ಅಹಂ” ಎಂದು ಹೆಸರು. ಅದು ಸ್ವಪ್ರಜ್ಞೆಯೂ ಆಗಿದೆ.
ಈ ‘ಹಡಗದ ಹುಡುಗಿ’ ಕುಂಡಲನಿ ಅವಳು ಮೇಲ್ಮುಖ ಚಲನೆಯಲ್ಲಿ ಇದ್ದಾಳೆ. ಅವಳು ‘ಬೆಡಗಿ ಬಂದಳು ನಡುನಡುಗಿ’ ಎಂಬ ಕ್ರಿಯೆಯ ಮೂಲಕ ವರ್ಣಿತಳಾಗಿದ್ದಾಳೆ. ‘ನಡು’ ಎನ್ನುವುದು ಮೂಲಾಧಾರದ ಚಿತ್ರಣ. ಇಲ್ಲಿಂದ ಸ್ವಾಧಿಷ್ಟಾನಕ್ಕೆ ಬರುವಾಗ ಅವಳು ಸಲಿಗೆಯುಳ್ಳವಳಾಗುತ್ತಾಳೆ. ಆಸೆ (ಬಯಕೆ), ಪ್ರೀತಿ (ಒಲುಮೆ) ಯನ್ನು ಅವಳು ‘ಸುಲಿಗೆ’ ಮಾಡುತ್ತಾಳೆ. ಬಯಲ ನೇಯ್ಗಯ (ಸಿರಿಯುಡುಗೆ) ತೊಟ್ಟಿದ್ದಾಳೆ. ಮೂರನೆಯ ನುಡಿಯ ‘ನಾಡಿಯ ನಡಿಗೆಯ’ ಎಂಬುದು ಕುಂಡಲಿನಿಯ ಉನ್ಮುಖತೆಯನ್ನು ಹೇಳುತ್ತದೆ. ಅನಾಹತಕ್ಕೆ ಬರುವಾಗ ಅದು ‘ನಲಿವಿನ ನಾಲಗೆ’ಯಾಗುತ್ತದೆ. ಸಹಸ್ರಾರದ ಕಡೆಯ ಚಲನೆ ‘ನೆನೆದಿರೆ ಸೋಲುವ’ ಚಲನೆ. ಮಾತನ್ನು ದಾಟಿದ ಮೌನವನ್ನು ಸೂಚಿಸುವ ವರ್ಣನೆ ಇದು. ಅಲ್ಲಿಗೆ ತಲುಪಿದ ಮೇಲೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ‘ಮುಟ್ಟದ ಮಾಟ, ಹುಟ್ಟದ ಹುಟ್ಟಿಗೆ’ ಎಂದು ಬೇಂದ್ರೆ ಅದನ್ನು ಕರೆದಿದ್ದಾರೆ. ಅಂತಹುದರ ಫಲವೆಂದರೆ ‘ಜೇನಿನ ಥಳಿ ಮಳಿ’ ‘ಸಿಹಿಯ ತಳಿಯ ಮಳಿ’ ಅದು ಅಮೃತ ವರ್ಷಣ. ‘ಸನಿಹ ಹನಿ’ಯಾಗಿ ಅದು ಅದು ಸಾಕ್ಷಾತ್ಕಾರದ ಕಡೆಗೆ ನಡೆಯುತ್ತದೆ(ಬಸುರಿನ ಮೊಳಕೆ). ಇಲ್ಲಿ ಪರಮಾನಂದನವನ್ನು ಜೀವನು ಪಡೆಯುತ್ತಾನೆ. ‘ಭೂತದ ಭಾವದಲ್ಲಿ’ ಎಂದರೆ ಜೀವ ಜಗತ್ತಿನಲ್ಲಿ ‘ಉದ್ಭವ ಜಾವ’ವಾಗಿ ಎಂದರೆ ಹೊಸದಾಗಿ ಲಭಿಸಿದ ಜ್ಞಾನದಲ್ಲಿ ಜ್ಞಾನಕನ್ಯೆಯ ಮೊಲೆಯುಣ್ಣುತ್ತಾನೆ ಎನ್ನುವುದು ಸೃಜನಶೀಲತೆಯ ಪ್ರತಿಮಾತ್ಮಕ ವರ್ಣನೆಯಾಗಿದೆ.
ಮೂರನೆಯ ಭಾಗದಲ್ಲಿ ‘ಚಿತ್ತೀ ಮಳೆ’ ಬರುತ್ತದೆ. ‘ಸ್ವಾತಿಮಳೆಯ’ಯಲ್ಲಿ ಹನಿ ಚಿಪ್ಪು ಸೇರಿ ಮುತ್ತಾಗುತ್ತದೆ. ಆದರೆ ಚಿತ್ತೀಮಳೆಯಲ್ಲಿ ಅದು ಸೃಷ್ಟಿಯ ಪ್ರತ್ಯೇಕತೆಯ ಭಾವವನ್ನು ಪಡೆಯುತ್ತದೆ. ಸುಷುಮ್ನ ನಾಡಿಯ ಮೂಲಕ ಮೂಲಾಧಾರವನ್ನು ಪ್ರವೇಶಿಸಿ ಕುಂಡಲಿನಿ ರೂಪದಲ್ಲಿ ಸುಪ್ತವಾಗಿರುತ್ತಾಳೆ. ಶ್ರೀವಿದ್ಯೆಯನ್ನು ಈ ಹಿನ್ನೆಲೆಯಲ್ಲಿ “ಚಂದ್ರಕಲಾ ವಿದ್ಯೆ” ಎಂದೂ ಕರೆಯುತ್ತಾರೆ. ಆಧಾರ ಕುಂಡವು ಗಾಢಕತ್ತಲೆಯಿಂದ ತುಂಬಿದೆ. ಮಣಿಪೂರವು ಅಗ್ನಿಸ್ಥಾನವಾಗಿದ್ದರೂ ಅಲ್ಲಿ ಕತ್ತಲೆ ಇದೆ. ಜಲವನ್ನೂ ಹೊಂದಿದೆ. ಈ ಜಲವು ಸೂರ್ಯನನ್ನು ಪ್ರತಿನಿಧಿಸುತ್ತದೆ. ಹೃದಯ ಭಾಗದಲ್ಲಿರುವ ಅನಹತ ಕೇಂದ್ರವು ಬೆಳಕಿನಿಂದ ತುಂಬಿದ ಜ್ಯೋರ್ತಿಲೋಕ. ಮೇಲ್ಗಡೆಯಲ್ಲಿ ಇರುವ “ವಿಶುದ್ಧ” ಕೇಂದ್ರವು ಚಂದ್ರಲೋಕ. ಹೀಗಿದ್ದರೂ ಸೂರ್ಯನ ಸಂಸರ್ಗದ ಕಾರಣದಿಂದ ಇಲ್ಲಿನ ಚಂದ್ರನ ಬೆಳಕು ಇರುವುದಿಲ್ಲ. ಶಿರೋಗ್ರದಲ್ಲಿರುವ ಸಹಸ್ರದಳ ಕೇಂದ್ರವೇ ಚಂದ್ರಪ್ರಕಾಶದಿಂದ ತುಂಬಿದ ಲೋಕ. ಇಲ್ಲಿ ಆತ್ಮ ಸಾಕ್ಷಾತ್ಕಾರದ ನಂತರದ ಸಾವೀಮಗಳಾದ ಜ್ಞಾನಕನ್ಯೆ ಸಿಕ್ಕುತ್ತಾಳೆ. ಅವಳು ಮೋಕ್ಷದ ಸೂಚನೆಯಲ್ಲಿ ‘ಸತ್ತೀಮಗನೆ’ಎನ್ನುತ್ತಾಳೆ. ‘ಸತ್’ ಒಂದು ಕಡೆ ಪೂರ್ವಾಶ್ರಮವನ್ನು ಕಳೆದು ಕೊಳ್ಳುವ ಸೂಚನೆಯಾದರೆ ಸತ್ವದ ಕಡೆಗೆ ನಡೆಯುವ ಸೂಚನೆ ಕೂಡ ಹೌದು. ಈ ಸೃಷ್ಟಿ ತತ್ವವನ್ನು ಬೇಂದ್ರೆಯವರು ‘ಈ ಜಗ (ಬ್ರಹ್ಮಾಂಡ) ಅಪ್ಪ ಅಮ್ಮನ ಮಗ (ಶಿವ ಶಕ್ತಿಯರ ಸಂಯೋಗ) ಪ್ರಕೃತಿಯಲ್ಲಿ ಪುರುಷನ ಮುಖವಿದೆ. ಈ ಪುರುಷನಿಗೆ ಪ್ರಕೃತಿಯ ಹತೋಟಿ ಬೇಕು (ನೊಗ) ಶ್ರೀಗುರು ಅಂದ’ ಎನ್ನುವುದರಲ್ಲಿ ಹೇಳುವುದು ಮತ್ತು ಸೌಂದರ್ಯ ಎರಡೂ ಅರ್ಥಗಳಿವೆ. ‘ಸತ್ ‘ ಕಡೆಗೆ ನಡೆಯುವ ಸೂಚನೆಯನ್ನು ಇಲ್ಲಿ ನೋಡಬಹುದು.
ನಾಲ್ಕನೆಯ ಭಾಗದಲ್ಲಿ ‘ಓಂಕಾರ’ದ ಪ್ರಸ್ತಾಪ ಬರುತ್ತದೆ. ಅ,ಉ,ಮ್ ಈ ಮೂರು ವಿಭಾಗದಲ್ಲಿ ಅದು ಹುಟ್ಟುವಂತಹದು. ‘ಅ’ಕಾರದಲ್ಲಿ ಪದ್ಮಾಸನ, ‘ಉ’ಕಾರದಲ್ಲಿ ಶರೀರ ಮತ್ತು ‘ಮ್ ‘ ಕಾರದಲ್ಲಿ ವಕ್ರತಂಡ.
‘ಜ್ಞಾನೇಶ್ವರಿ’ಯಲ್ಲಿ,
ಅಕಾರ ಚರಣಯುಗಲ/ ಉಕಾರ ಉದರ ವಿಶಾಲ
ಮಕಾರ ಮಹಾಮಂಡಲ/ಮಸ್ತಕಾಕಾರೇ (ಜ್ಞಾ ೧-೧೯)‘
ಅಂತ ಇದನ್ನು ವರ್ಣಿಸಲಾಗಿದೆ. ನಾಕುತಂತಿಯ ಕಾವ್ಯದ ಗಣನಾಯಕ ಪರಬ್ರಹ್ಮರೂಪಿಯಾಗಿ ‘ಆನು’ ಆಗಿದ್ದಾನೆ. ‘ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ ಅಂಬಿಕಾತನಯನಿವನು’ ಎಂಬ ಅರಿವಿನಲ್ಲಿ ಈ ಕವಿತೆ ಮೂಡಿದೆ. ಪರಮ ಚೈತನ್ಯದಲ್ಲಿ ಹೊಕ್ಕ ನಂತರ ಸಾಧಕನು ಅದನ್ನು ಉಳಿಸಿಕೊಳ್ಳಲು ದೇವಿಯ ನೆರವನ್ನೇ ಕೋರಿಕೊಳ್ಳುತ್ತಾನೆ. ಇದರಿಂದ ‘ತಾನು’ ಕಾಣುವುದು ಸಾಧ್ಯ. ನಂತರ ಸಾಧಕನು ತನ್ನೊಳಗಿನ ಕತ್ತಲೆಯನ್ನು ಕಳೆದುಕೊಂಡು ಬೆಳಕಿನ ಮಹಾಸಮುದ್ರವನ್ನು ಪ್ರವೇಶಿಸುತ್ತಾನೆ. ದೇವಿಗೆ ಹತ್ತಿರವಾಗಿ “ಉಪಾಸನೆ”ಗೆ ತೊಡಗುತ್ತಾನೆ. ಆಗ ‘ನೀನು’ ಎಂಬ ಶರೀರದಲ್ಲಿನ ‘ನಾನು’ ತನ್ನ ಮಿತಿಯನ್ನು ದಾಟಿ ವಿಶ್ವದ ಅರಿವನ್ನು ಪಡೆದುಕೊಳ್ಳುತ್ತದೆ. ‘ಆನು’ವಿನ ಮೂಲಕ ಅದು ‘ತಾನು’ ಎಂಬ ಅರಿವನ್ನು ಪಡೆದುಕೊಳ್ಳುತ್ತದೆ. ‘ಸೊಲ್ಲಿಸಿದರು’ ಮತ್ತು ‘ನಿಲ್ಲಿಸಿದರು’ ಆಧಾರ ಈ ನಾಕುತಂತಿಯೇ.
ಬೇಂದ್ರೆಯವರೇ ‘ಕನಸಿನಲ್ಲಿ ಬ್ರಹ್ಮಚೈತ್ಯನರು ಬಂದು ಈ ಕವಿತೆ’ ನೀಡಿದರು ಎಂದು ಹೇಳಿಕೊಂಡಿದ್ದಾರೆ. ಬ್ರಹ್ಮಚೈತನ್ಯರ ತಾತ್ವಿಕತೆಯ ನೆಲೆಯಲ್ಲಿ ಈ ಕವಿತೆಗೆ ಪ್ರವೇಶ ಮಾಡಲು ಪ್ರಯತ್ನಿಸಬಹುದು. ‘ಅಂಬಿಕಾ ಮಾತೆಯ ತಪಸ್ಸಿನಿಂದ ‘ದತ್ತ’ನಲ್ಲಿ ಭಾವಪ್ರಜ್ಞೆ ಉದ್ದೀಪವಾಗಿಯೇ ಇತ್ತು. ಬೇಂದ್ರೆಯ ಹೃದಯ ಕಂಠ, ನಾಲಗೆ, ಕರಗಳಿಂದ ಪಾಕಗೊಂಡು ಬರಲು ಕಾಲ ಹಿಡಿಯಿತು’ (ಸಾಹಿತ್ಯದ ವಿರಾಟ್ ಸ್ವರೂಪ ೮೯) ಎಂದು ಬೇಂದ್ರೆಯವರೇ ಹೇಳಿಕೊಂಡಿದ್ದಾರೆ. ‘ನಾಕುತಂತಿ’ ಕವಿತೆಗೆ ೧೩ ಬೀಜಸಂಖ್ಯೆ. ಇದು ಬ್ರಹ್ಮಚೈತನ್ಯರು ಉಪದೇಶಿಸಿದ ಶ್ರೀಸಹಿತ ‘ರಾಮತಾರಕ ಮಂತ್ರ’ದ ಬೀಜಾಕ್ಷರ ಕೂಡ ಹೌದು. ಅಲ್ಲಿಯೂ ಮೂರು ರಾಮರು ವ್ಯಕ್ತರು. ನಾಲ್ಕನೆಯ ರಾಮ ಅವ್ಯಕ್ತ; ಇದನ್ನು ಬೇಂದ್ರೆ ‘ಈ ಮೂರರ ರಾಮನೊಳಗಿದೆ ನಾಲ್ಕನೆಯ ಆಯಾಮ’ ಎಂದು ವರ್ಣಿಸಿದ್ದಾರೆ. ಬ್ರಹ್ಮಚೈತನ್ಯರು ಹೇಳುವ ಬ್ರಹ್ಮಪ್ರಜ್ಞೆಯ ವಿಕಾಸದ ಹಾದಿ ‘ನಾಕು ತಂತಿ’ ಕವಿತೆಯಲ್ಲಿ ಬಹು ಸ್ಪಷ್ಟವಾಗಿದೆ.
“ಅಂಬಿಕಾತನಯಾ ಔದಂಬರದತ್ತ
ಶ್ರೀರಾಮ ಬ್ರಹ್ಮಚೈತನ್ಯದ
ಸಜೀವ ಸಂಜೀವನ ಸಮಾಧಿ
ತಾನು ದ.ರಾ.ಬೇಂದ್ರೆ”
ಎಂದು ಅವರು ವರ್ಣಿಸಿಕೊಂಡಿರುವ ರೀತಿಯಲ್ಲಿ ಕವಿತೆಯನ್ನು ಓದಬಹುದು.
ಇನ್ನು ಈ ಕವಿತೆಯ ಕುರಿತು ಬೇಂದ್ರೆ ನಿರ್ದೇಶಿಸಿದ ಸಂಖ್ಯೆಗಳ ಮೂಲಕ ಹೀಗೆ ಓದಬಹುದು.
ನಾಕು ತಂತಿಯ ಸಂಖ್ಯಾಸೂತ್ರ ೪+೩+೨+೪=೧೩
ನಾಕು ಎನ್ನುವುದು ಆರಂಭವಾಗುವುದು ಆವು, ಈವು, ನಾವು ಮತ್ತು ನೀವು ಇದಕ್ಕೆ ಸೇರುವ ಮೂರು ಸೃಷ್ಟಿ, ಸ್ಥಿತಿ, ಲಯ ಅಲ್ಲಿಗೆ ಏಳಾಯಿತು. ಈ ಏಳು ಸಪ್ತಸ್ವರಗಳು ಎಂದರೆ ‘ನಾದ’ ದಕ್ಕಿತು. (ಇದು ಸಂಗೀತದ ಸಪ್ತಸ್ವರಗಳಲ್ಲ ಸಪ್ತ ಮಾತೃಕೆಯರಿಂದ ನಿರ್ದೇಶಿತವಾದದ್ದು). ಅದಕ್ಕೆ ಸೇರುವ ಎರಡು ಶಿವ ಮತ್ತು ಶಕ್ತಿ, ಪ್ರಕೃತಿ ಮತ್ತು ಪುರುಷ. ಅದನ್ನೇ ಬೇಂದ್ರೆ ‘ಅಪ್ಪ’ ಮತ್ತು ‘ಅಮ್ಮ’ ಎಂದು ಕರೆಯುತ್ತಾರೆ. ಅಲ್ಲಿಗೆ ಒಂಬತ್ತಾಯಿತು. ಈ ಒಂಬತ್ತು ನವಮಾಸ, ನವರಂದ್ರ, ನವಗ್ರಹ ಹೀಗೆ ಸೃಷ್ಟಿಯನ್ನು ಹೇಳುವುದು. ಇದರಿಂದ ಬರುವವನು ‘ನಾ ಅವರ ಕಂದ’ ಶ್ರೀ ಗುರುದತ್ತ ಅಂದ’; ಅವನಿಗೆ ಎದುರಾಗುವುದು ನಾನು, ನೀನು , ಆನು ಮತ್ತು ತಾನು ಎನ್ನುವ ನಾಲ್ಕು ತಂತಿಗಳು. ಅಲ್ಲಿಗೆ ಒಟ್ಟು ಸಂಖ್ಯೆ ೧೩ ಆಯಿತು. ಈ ಹದಿಮೂರೇ ‘ಓಂ’ ಎಲ್ಲವೂ ಅದರಲ್ಲಿಯೇ ಸೇರಿದೆ ಅದನ್ನೇ ಬೇಂದ್ರೆ
ಗಣ ನಾಯಕ
ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ
ಕುರಿಯ ಕಣ್ಣು
ಧಾತು ಮಾತು ಕೂಡಿ’ ಎನ್ನುತ್ತಾರೆ.
ಹೀಗೆ ಶ್ರೀವಿದ್ಯೆ, ಕಠೋಪನಿಷತ್ತು ಮತ್ತು ತಾರಕ ರಾಮನಾಮಗಳಿಂದ ‘ನಾಲ್ಕು ತಂತಿ’ಯನ್ನು ವಿಶ್ಲೇಷಿಸಬಹುದು. ಇದಲ್ಲದೆ ಇನ್ನೂ ಒಂದು ತಂತಿ ಇದೆ ಅಂದೆಂದರೆ ಸಾಧನೆ. ಇದು ಬರೀ ಅರ್ಥ ಹೇಳುವ ಕವಿತೆಯಲ್ಲ,. ಸಾಧನೆಯಿಂದ ಅನುಭೂತಿಯನ್ನು ಪಡೆಯ ಬೇಕು, ಪ್ರತಿಸಾಲಿನ ಓದಿಗೂ ನಮ್ಮೊಳಗಿನ ಚಕ್ರಗಳು ತೆರೆದು ಕೊಳ್ಳುತ್ತಾ ಹೋಗಬೇಕು. ‘ಇರವು ಅರಿವಿನೊಳು ಹರವಿಕೊಳ್ಳುತ್ತಿದೆ ಹಿಗ್ಗನೊಂದು ಬಟ್ಟೆ’ (ಬೆಳಗ ಬೇಕು) ಎಂದು ಅವರು ಅದನ್ನು ಕರೆದಿದ್ದಾರೆ.
ಕೊನೆ ಹನಿ: ಬೇಂದ್ರೆಯವರಿಗೆ ನಾಲ್ಕು ಮುಖಗಳಿವೆ, ಮೊದಲ ಮುಖ ಕನ್ನಡ ಮೇಷ್ಟ್ರುಗಳು, ವಿಮರ್ಶಕರು ಅರ್ಥದ ಮೂಲಕ ಹಿಡಿಯುವಂತಹದು. ಈ ಕುರಿತು ಟನ್ ಗಟ್ಟಲೆ ಪುಸ್ತಕಗಳು ಬಂದಿವೆ. ಈ ಮೂಲಕ ಬೇಂದ್ರೆ ಸಿಕ್ಕಲಾರರು ಎಂದಲ್ಲ ಅದು ಒಂದು ಮುಖವನ್ನು ಮಾತ್ರ ಹಿಡಿಯಬಲ್ಲದು. ಎರಡನೆಯ ಮುಖಕ್ಕೆ ನಾದದ್ದು ಎಂದರೆ ಹಾಡಿನದ್ದು ಎಂದಲ್ಲ. ನಾದದ ತಾತ್ವಿಕತೆಯ ಮೂಲದ್ದು. ಈ ಮೂಲಕ ಕೂಡ ಬೇಂದ್ರೆಯವರನ್ನು ಹಿಡಿಯುವ ಪ್ರಯತ್ನಗಳು ನಡೆದಿವೆ. ಮೂರನೆಯದು ಸಂಖ್ಯೆಯದು. ಇದು ತಂತ್ರಮಾರ್ಗದ್ದು, ಬೇಂದ್ರೆಯವರ ಎಲ್ಲಾ ಕವಿತೆಗಳಲ್ಲಿಯೂ ಇಂತಹ ಸಾಧ್ಯತೆ ಇದ್ದೇ ಇದೆ. ಈ ಕುರಿತು ಪ್ರಯತ್ನ ಅಷ್ಟಾಗಿ ನಡೆದಿಲ್ಲ. ಈ ಮೂರು ವ್ಯಕ್ತ ಮುಖಗಳು. ನಾಲ್ಕನೆಯದು ಅವ್ಯಕ್ತ ಮುಖ ಅದು ಬೇಂದ್ರೆಯವರ ಸಾಧನೆಯದು. ಅವರು ಅವಧೂತ ಪಂಥದ ಸಾಧಕರು. ಈ ಸಾಧನೆಯಲ್ಲಿ ಎಷ್ಟು ದೂರ ಹೋಗಿದ್ದರು ಎಂದು ತಿಳಿಯಲು ಈ ಮೂರು ಮುಖಗಳನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ.
ನಾಕು ತಂತಿ – ಸಾಮಾನ್ಯ ಓದುಗ ಚಪ್ಪರಿಸಿಕೊಂಡು ಓದುವ ಕವನವಲ್ಲ – ಬೇಂದ್ರೆಯವರ ಸಾಧನೆಯ ಬೇರೆಬೇರೆ ಮುಖದ ಪರಿಚಯವಿದ್ದವರು ಮಾತ್ರ ಇಂಥ ವಿಶ್ಲೇಷಣೆ ಮಾಡಲು ಸಾಧ್ಯ – ಒಂದರ್ಥದಲ್ಲಿ ನಿಗೂಢ ನಿಧಿಯನ್ನು ಹುಡುಕುವ ಪತ್ತೇದಾರಿಕೆ ಇದು -ಬಹುಶಃ ಯಾವ ಕನ್ನಡ ಕವನವೂ ಈ ಬಗೆಯ ಮೆಹನತ್ತನ್ನು ಬಯಸಿರಲಿಲ್ಲ – ಶ್ರೀಧರ ಮೂರ್ತಿ ಹಠ ಬಿಡದ ತ್ರಿವಿಕ್ರಮನಂತೆ ಕವನದ ಬೆಂಬತ್ತಿ ಗೋಡೆ ಒಡೆದು ತತ್ವದರ್ಶನ ಮಾಡಿಸಿದ್ದಾರೆ -ಟಿ ಆರ್ ಅನಂತರಾಮು