- ನನ್ನ ಈ…ಮನೆ - ಜುಲೈ 25, 2022
- ಬದುಕ ಮಧ್ಯ - ಆಗಸ್ಟ್ 22, 2021
- ಒಂದು ಸ್ವಗತ - ಜೂನ್ 30, 2021
ಸಂಜೆಯಾಯಿತೆಂದು ಮಂಗ
ಮರವನೇರಿ ಕುಳಿತುಕೊಂಡು
ಸುರಿವ ಮಳೆಗೆ ನೆನೆದು,ನೆನೆದು
ಚಳಿಗೆ ನಡುಗಿತು.
ಹೊಟ್ಟೆ ಹಸಿವ ಕಳೆದರೇನು?
ಬೆಚ್ಚಗಿರಲು ಮನೆಯು ಬೇಕು,
ನೆಲೆಯೆ ಇಲ್ಲ ಬದುಕಿಗಿಂದು
ಎಂದು ಮರುಗಿತು.
ತನ್ನ ಕಷ್ಟ ದೊಡ್ಡದಲ್ಲ
ಪುಟ್ಟ ಕಂದ ಮಡದಿ ಬೇರೆ
ಅವರು ಪಡುವ ಪಾಡ ನೆನೆದು
ಕಣ್ಣು ಜಿನುಗಿತು.
ತನ್ನನಪ್ಪಿ ಕುಳಿತುಕೊಂಡು
ಕಳೆದೆವೆಷ್ಟೊ ರಾತ್ರಿಗಳನು
ಮನೆಯ ಕಟ್ಟುವಾಸೆ ಮಾತ್ರ
ಹಾಗೇ ಉಳಿಯಿತು.
ಸುತ್ತ ಕತ್ತಲೊತ್ತೆ ಕತ್ತ-
ಮೇಲೆ ಮಾಡೆ ಬಾನಿನಲ್ಲಿ
ತಾರೆ,ಚಂದ್ರರೆನ್ನ ನೋಡಿ
ನಗುತಲಿದ್ದವು.
ಹಗಲಪೂರ್ತಿ ಹೊಟ್ಟೆಪಾಡು
ರಾತ್ರಿಯೆಲ್ಲ ನಿದ್ದೆ ಗೇಡು
ನೆಲೆಯೆ ಇಲ್ಲ ಬದುಕಿಗೆಂದು
ಜರಿಯುತಿದ್ದವು.
ಬರಿದೆ ಜರಿದರೇನು ಫಲವು
ರಾತ್ರಿಯೊಂದೇ ಧಾತ್ರಿಗೆಲ್ಲ,
ರಾತ್ರಿಕಳೆಯೆ ಹಗಲು ತಾನು
ಬಂದೇ ಬರುವದು.
ಪುಟ್ಟದೊಂದು ಮನೆಯಕಟ್ಟಿ
ಪುಟ್ಟ ಮಗುವ ಅದರೊಳಿಟ್ಟು
ಸಾಕಿ ಸಲಹೆ ಬದುಕ ಹಿರಿಮೆ
ಎಲ್ಲರರಿವುದು.
ಗಟ್ಟಿ ಮನವು ದಿಟ್ಟ ಹೆಜ್ಜೆ
ಹೊಟ್ಟೆ ಹಸಿವ ಬಿಡದೆ ಮೆಟ್ಟಿ
ದಿಟ್ಟಿ ನೆಡಲು ದೂರದಲ್ಲಿ
ಆಸೆ ಮೂಡಿತು.
ಪುಟ್ಟ ರವಿಯು ಮೂಡಿ ಬಂದ
ಬೆಳಕ ರಾಶಿ ಹೊತ್ತು ತಂದ
ಗಟ್ಟಿ ಮನವು ಕತ್ತಲೊಡನೆ
ಕರಗತೊಡಗಿತು.
ಎಲ್ಲ ಬೇಕಿಗಿಂತ ಮೊದಲು
ಹಸಿವದೊಂದೆ ಜೀವಿಗಳಿಗೆ
ಸರ್ವವ್ಯಾಪಿ ಸರ್ವಶಕ್ತ
ಅನ್ನದೇವರು.
ಮಂಗ ಬುದ್ಧಿ ಮೇರೆ ಮೀರಿ
ಮಗುವು ಮಡದಿ ಎಲ್ಲಕೂಡಿ
ಕಣ್ಣ ಸೆಳೆಯೆ ಬಾಳೆತೋಟ
ಲಗ್ಗೆ ಇಟ್ಟರು.
ಬಾಳೆ ಗಿಡದಿ ಹಣ್ಣು ಕಾಯಿ
ನೀರು ಒಸರೆ ಬಾಯಿತುಂಬ
ಹಸಿದ ಹೊಟ್ಟೆ ಹಸಿವ ತಣಿಸು
ಎಂದು ಹೇಳಿತು.
ಹಸಿದ ಬಸಿರ ಮಾತಕೇಳಿ
ಮಂಗ ಮನಸು ಕಷ್ಟ ಮರೆತು
ಅವಸರದಲಿ ಕಿತ್ತ ಹಣ್ಣ
ತಿನಲು ತೊಡಗಿತು.
ಬೇಗ,ಬೇಗ ತಿನ್ನುವಾಗ
ಹೊಂಚು ಹಾಕಿ ಕುಳಿತ ಸಾವು
ಕೋವಿಗುಂಡ ರೂಪದಲ್ಲಿ
ಎದೆಯ ಹೊಕ್ಕಿತು.
ಗುಂಡು ಹೊಕ್ಕಲೆದೆಯು ಚೂರು
ಮಡದಿ,ಮಗುವ ನೆನಪು ಚೂರು
ಮನೆಯ ಕನಸು ನೂರು ಚೂರು
ಧರೆಗೆ ಉರುಳಿತು.
ಕಷ್ಟ,ಸುಖವು,ಹಸಿವು ತೃಷೆ
ಕ್ಷಣಿಕ ಬದುಕ ಕನಸು,ನನಸು
ದೇಹದೊಳಗೆ ಜೀವ ಹಣತೆ
ಉರಿವವರೆಗಷ್ಟೆ
ಇಂದಿನಿರವು ನಿತ್ಯ ಸತ್ಯ
ನಾಳೆಯನ್ನು ಕಾಣರಾರು
ಹುಟ್ಟು ಸಾವು ಜಂಟಿಪಯಣ
ಇರುವವರೆಗಷ್ಟೆ.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ