- ಮಾಯಾನಗರಿಯಲ್ಲೊಂದು ಕನ್ನಡ’ಕ್ಕೆ ಭವನ - ಸೆಪ್ಟೆಂಬರ್ 10, 2021
ಮುಂಬೈ ಎನ್ನುವ ಮಾಯಾನಗರಿ ಜಗತ್ತಿನಲ್ಲಿರುವ ಎಲ್ಲರನ್ನು ಚುಂಬಕದಂತೆ ತನ್ನತ್ತ ಆಕರ್ಷಿಸುವ ನಗರ. ವಾಣಿಜ್ಯ ನಗರವೆಂದೇ ಪ್ರಸಿದ್ಧವಾದ ಈ ನಗರ ತನ್ನನ್ನು ನಂಬಿ ಬಂದ ಪ್ರತಿಯೊಬ್ಬರನ್ನೂ ಒಂದೊಂದು ಕಾರಣದ ನೆಪವೊಡ್ಡಿ ತನ್ನ ತೆಕ್ಕೆಯೊಳಗೆ ಪ್ರೀತಿಯಿಂದ ಆಲಂಗಿಸಿ ಅವರಿಗೆ ಸುರಕ್ಷಿತವಾದ ಯಶಸ್ವಿ ಜೀವನವನ್ನು ಮಾಡಲು ಅವಕಾಶವಿತ್ತಿದೆ. ಪಾರ್ಸಿಗಳು, ಕನ್ನಡಿಗರು, ಉತ್ತರ ಭಾರತದವರು, ಗುಜರಾತಿಗಳು, ಮಾರವಾಡಿಗಳು………. ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ವಿದೇಶಿಯರು ಕೂಡ ಈ ನಗರದ ವರ್ಚಸ್ಸಿಗೆ ಮಾರುಹೋದವರೇ….
ತುಳು-ಕನ್ನಡಿಗರಿಗೆ ಮುಂಬೈಯ ಜೊತೆಗೆ ಒಂದು ಬಿಡಿಸಲಾಗದ ಬಂಧವಿದೆ, ಅನ್ನೋನ್ಯ ಸಂಬಂಧವಿದೆ. ಇದು ಐತಿಹಾಸಿಕವೂ ಹೌದು. ತಮ್ಮ ಜನ್ಮಭೂಮಿಯನ್ನು ಬಿಟ್ಟು ಬಡತನದ ಬೇಗೆ ನೀಗಿಸಲೋ, ವ್ಯಾಪಾರ ಮಾಡಲೋ ಚುಂಬಕ ನಗರಕ್ಕೆ ಬಂದವರು ಈ ತುಳು-ಕನ್ನಡಿಗರು. ಬಂದಂತಹ ಉದ್ದೇಶದ ಈಡೇರಿಕೆಯೊಂದಿಗೆ ತಮ್ಮ ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ, ಶಿಕ್ಷಣದ ಸೊಗಡನ್ನು ಮರಾಠಿ ಮಣ್ಣಿನಲ್ಲಿ ಘಮಘಮಿಸುವಂತೆ ಮಾಡಿದವರು. ಅದೆಷ್ಟೊ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮರಾಠಿ ಮಣ್ಣಿನಲ್ಲಿ ತುಳು-ಕನ್ನಡಿಗರ ಸಾಧನೆಗೆ ಕನ್ನಡಿಯಾಗಿದೆ. ಈ ಯಶಸ್ಸಿನ ದಾರಿ ಅವರಿಗೆ ಹೂವಿನ ಹಾದಿಯಾಗಿರಲಿಲ್ಲ. ಕಠಿಣ ಪರಿಶ್ರಮ, ಹಿಡಿದ ಕಾರ್ಯವನ್ನು ಸಾಧಿಸಿ ತೋರಿಸುವ ತುಳು-ಕನ್ನಡಿಗರ ಕೆಚ್ಚು ಕೋಟೆ ಪರಿಸರದಲ್ಲಿ ಕನ್ನಡ ಶಿಕ್ಷಣ ಸಂಸ್ಥೆಯೊಂದು ಜನ್ಮವೆತ್ತಲು ನಾಂದಿಯಾಯಿತು.
ಹೌದು, ನಾನೀಗ ಹೇಳಹೊರಟಿರುವುದು ಮುಂಬೈ ಎನ್ನುವ ಮಾಯಾನಗರಿಯಲ್ಲಿ ಸುಮಾರು ಅರವತ್ತು ವರ್ಷಗಳಿಂದ ಕೇವಲ ಕನ್ನಡ ಮಾಧ್ಯಮದಲ್ಲಿ ಯಶಸ್ವಿಯಾಗಿ ಶಿಕ್ಷಣವನ್ನು ನೀಡುತ್ತಿರುವ ಶಿಕ್ಷಣ ಸಂಸ್ಥೆ ಕನ್ನಡಭವನ ಎಜುಕೇಶನ್ ಸೊಸೈಟಿ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಬಗ್ಗೆ. ಇದರಲ್ಲಿ ಅದೇನಪ್ಪ ವಿಶೇಷತೆ ಎಂದು ನೀವು ಪ್ರಶ್ನಿಸಿದರೆ?………………… ಉತ್ತರ ಎಣಿಕೆಗೆ ನಿಲುಕದ್ದು! ಹಾಗಾದರೆ ಬನ್ನಿ ಮಾಯಾನಗರಿಯ ಶಿರಕ್ಕೊಂದು ಕೀರಿಟವೆಂಬಂತೆ ರಾರಾಜಿಸುತ್ತಿರುವ ಕನ್ನಡ ಭವನ ಶಾಲೆಯ ಬಗ್ಗೆ ಅಲ್ಲಿಯ ಶಿಕ್ಷಕಿಯಾಗಿರುವ ನಾನು ಹೆಮ್ಮೆಯಿಂದ ಒಂದಷ್ಟು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ.
ಮುಂಬಯಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಮುಂಬೈಯ ಕೋಟೆ ಪರಿಸರದಲ್ಲಿರುವ ಕನ್ನಡ ಭವನ ಎಜುಕೇಶನ್ ಸೊಸೈಟಿ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜ್ ಕೂಡ ಒಂದು. ಯಾವುದೇ ಒಂದು ಸಂಘ ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆಗೆ ಅದರದ್ದೇ ಆದ ಕಾರಣವಿದ್ದೇ ಇರುತ್ತದೆ . ಅದೇ ರೀತಿ ಕನ್ನಡಭವನ ಎಂಬ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಯ ಹುಟ್ಟು ಮತ್ತು ಅದರ ಉದ್ದೇಶ ವಿಶಿಷ್ಟವಾದದ್ದು ಮತ್ತು ವಿಭಿನ್ನವಾದದ್ದು. ವಿಶಿಷ್ಟವಾದದ್ದು ಯಾಕೆಂದರೆ ಕೇವಲ ಹೆಣ್ಣು ಮಕ್ಕಳ ಶೈಕ್ಷಣಿಕ ಅಗತ್ಯತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸ್ಥಾಪನೆಯಾದ ಸಂಸ್ಥೆಯಿದು. ವಿಭಿನ್ನವಾದದ್ದು ಯಾಕೆಂದರೆ ಈ ಶಾಲೆಯ ಸ್ಥಾಪನೆಗೆ ಅಭಿಮಾನದಿಂದ ದುಡಿದ ಅಥವಾ ಶ್ರಮಪಟ್ಟ ತುಳು-ಕನ್ನಡಿಗರರೊಂದಿಗೆ ಒಬ್ಬ ಪಾರ್ಸಿ ನಾಯಕನ ಉದಾತ್ತ ತ್ಯಾಗ ಮತ್ತು ಕೊಡುಗೆ ಇದೆ. ಶಿಸ್ತಿನ ಸಿಪಾಯಿ, ಶ್ರೀ ರಾಮ್ ನಾರಾಯಣ ಐಲ್ ರ (ಮೊದಲ ಪ್ರಾಂಶುಪಾಲರು) ‘ಕನಸಿನ ಕೂಸು’ ಎಂದೇ ಪ್ರಸಿದ್ಧವಾದ ಈ ಸಂಸ್ಥೆಯ ಇತಿಹಾಸ ತಿಳಿಯಲು ಸುಮಾರು ಅರವತ್ತು ವರ್ಷದ ಹಿಂದಕ್ಕೆ ದೃಷ್ಟಿ ಹಾಯಿಸಬೇಕಾಗುತ್ತದೆ.
ಮಾಯಾನಗರಿಯಲ್ಲಿ ತುಳು ಕನ್ನಡಿಗರು ತಮ್ಮ ಮೂಲ ಉದ್ದೇಶವನ್ನು ಈಡೇರಿಸುವುದರ ಜೊತೆಗೆ ಅನೇಕ ಸಂಸ್ಥೆಗಳು, ಶೈಕ್ಷಣಿಕ ದೇಗುಲಗಳು, ರಾತ್ರಿ ಶಾಲೆಗಳನ್ನು ತೆರೆದಿದ್ದರು. ಇಪ್ಪತ್ತರ ಶತಮಾನದ 60ರ ದಶಕದಲ್ಲಿ ಮುಂಬೈಯ ಕೋಟೆ ಪರಿಸರದಲ್ಲಿ ಹಲವಾರು ತುಳು-ಕನ್ನಡಿಗ ಕುಟುಂಬಗಳು ವಾಸವಾಗಿದ್ದರು. ಆದರೆ ಯುವಪೀಳಿಗೆಗೆ, ಅದರಲ್ಲೂ ವಿದ್ಯಾರ್ಥಿನಿಯರಿಗೆ ಏಳನೆಯ ತರಗತಿಯ ನಂತರ ಶಿಕ್ಷಣ ಮುಂದುವರಿಸಲು ಶೈಕ್ಷಣಿಕ ಸಂಸ್ಥೆಯ ಕೊರತೆ ಬಹಳವಾಗಿ ಕಾಡುತ್ತಿತ್ತು. ಪ್ರಾಥಮಿಕ ಶಿಕ್ಷಣದ ಅಗತ್ಯಕ್ಕೆ ಪೂರಕವಾಗಿ ಚೆಂಬೂರು, ಮಹಿಮ್, ಗೊರೆಗಾಂವ್, ಬಾಂದ್ರಾ ಮುಂತಾದ ಕಡೆಗಳಲ್ಲಿ ನಗರಪಾಲಿಕೆ ಅಥವಾ ಮುನ್ಸಿಪಾಲಿಟಿಯ ಶಾಲೆಗಳು ಅದಾಗಲೇ ಕಾರ್ಯನಿರ್ವಹಿಸುತ್ತಿದ್ದರು. ಆದರೆ 7ನೇ ತರಗತಿಯ ನಂತರ ಮುಂದಿನ ಶಿಕ್ಷಣ ಪಡೆಯಲು ದೂರದೂರಿಗೆ ಪ್ರಯಾಣ ಮಾಡಬೇಕಾಗುತ್ತಿತ್ತು. ಅನೇಕ ವಿದ್ಯಾಕಾಂಕ್ಷಿಗಳ ಮುಂದೆ ಮುಂದೇನು? ಎನ್ನುವ ಪ್ರಶ್ನೆ ಬೃಹದಾಕಾರವಾಗಿ ಬೆಳೆದು ನಿಂತಿತ್ತು. ಹೆಚ್ಚಿನ ಸಂಖ್ಯೆಯ ತುಳು-ಕನ್ನಡಿಗರು ತಮ್ಮ ಹೆಣ್ಣುಮಕ್ಕಳ ಶಿಕ್ಷಣವನ್ನು ಅಲ್ಲಿಗೆ ಮೊಟಕುಗೊಳಿಸುವ ಪ್ರಮೇಯ ಬಂದೊದಗಿತು. ಕೆಲವೊಂದು ಸಂಪ್ರದಾಯಸ್ಥ ತುಳು-ಕನ್ನಡಿಗರು ತಮ್ಮ ಹೆಣ್ಣು ಮಕ್ಕಳನ್ನು ದೂರದೂರಿಗೆ ಶಿಕ್ಷಣಕ್ಕಾಗಿ ಕಳಿಸಿ ಕೊಡುವಷ್ಟು ಮುಕ್ತ ಮನಸ್ಸಿನವರಾಗಿರಲಿಲ್ಲ. ಈ ಎಲ್ಲಾ ಕಟ್ಟುಪಾಡಿನ ಒಳಗೆ ಸಿಲುಕಿದ ಅದೆಷ್ಟೋ ಹೆಣ್ಣುಮಕ್ಕಳು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ನಾಲ್ಕು ಗೋಡೆಯ ನಡುವೆ ಉಳಿದು ಅಡುಗೆಮನೆಯ ಉಸ್ತುವಾರಿಗಳಾದರು.
ಈ ಸಂದರ್ಭದಲ್ಲಿ ಕೋಟೆ ಪರಿಸರದಲ್ಲಿರುವ ತುಳು-ಕನ್ನಡಿಗರ, ಅದರಲ್ಲೂ ಹೆಣ್ಣು ಹೆತ್ತವರ ಮನಸ್ಸಿನಲ್ಲಿ ಹತಾಶೆಯೊಂದು ಕಾಡತೊಡಗಿತ್ತು. ಹೆಣ್ಣುಮಕ್ಕಳ ವಿದ್ಯೆಯ ಕನಸು ಕಣ್ಣೆದುರಿನಲ್ಲೇ ಕಮರಿ ಹೋಗುವುದನ್ನು ನೋಡಲಾಗದೆ ಏನಾದರೂ ಮಾಡಿ ಹಗಲು ಕನ್ನಡ ಮಾಧ್ಯಮ ಶಾಲೆಯನ್ನು ಬರೆಯಲೇಬೇಕೆಂಬ ತುಡಿತ ಅವರಲ್ಲಿ ಹೆಚ್ಚಾಗುತ್ತಲೇ ಹೋಯಿತು. ಇಂತಹ ಮನಸ್ಸುಗಳ ಹಪಾಹಪಿಯ ಕಾರಣದಿಂದ ಮುಂದೊಂದು ದಿನ ಕನ್ನಡ ಶಾಲೆ ನಿರ್ಮಾಣವಾದದ್ದು ಕಾಕತಾಳಿಯವೇ ಎನ್ನಬಹುದು. ಕನ್ನಡಿಗರ ಈ ತುಡಿತದ ಕರೆಗೆ ಓಗೊಟ್ಟು, ಹೆಗಲು ನೀಡಿದವರು ಪಾರ್ಸಿ ನಾಯಕನೆನ್ನುವುದು ಸೋಜಿಗವೇ ಸರಿ!
ಪಾರ್ಸಿ ನಾಯಕರಾದ ಬೊಮ್ಮನ ಬೆಹರಾಮ್ ರವರು 1957 ದಿಲ್ಲಿ ನಡೆದ ಮುಂಬೈ ಮಹಾನಗರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಕನ್ನಡಿಗರ ಅಪಾರ ಸ್ನೇಹ, ಅಭಿಮಾನವನ್ನು ಗಳಿಸಿರುವ ಬೊಮ್ಮನ್ ಬೆಹರಾಮ್ ರವರು ಈ ಚುನಾವಣೆಯಲ್ಲಿ ವಿಜೇತರಾದರು. ಈ ಸಂದರ್ಭದಲ್ಲಿ ತುಳು-ಕನ್ನಡಿಗರು ಬೊಮ್ಮನ್ ಬೆಹ ರಾಮ್ ರವರ ಸಹಕಾರವನ್ನು ಕೋರಿ ಕೋಟೆ ಪರಿಸರದಲ್ಲಿ ಹಗಲು ಕನ್ನಡ ಮಾಧ್ಯಮ ಶಾಲೆಯ ಮಹತ್ವವನ್ನು ಮತ್ತು ಅದರ ಸ್ಥಾಪನೆಯ ಬಗ್ಗೆ ತಿಳಿಸಿದರು. ತುಳು ಕನ್ನಡಿಗರಲ್ಲಿ ಅಪಾರ ಪ್ರೀತಿ ಇಟ್ಟುಕೊಂಡಿದ್ದಂತಹ ಬೊಮ್ಮನ್ ರವರು ‘ ಮುಂಬೈನಗರದ ತುಳು-ಕನ್ನಡಿಗರ ಸಂಘಟನೆ ಯಾಗಬೇಕು. ಕನ್ನಡಿಗರ ಸಂಯುಕ್ತ ಸಂಸ್ಥೆ ಸ್ಥಾಪನೆ ಮೊದಲು ಆಗಲಿ ಎಂಬ ಸೂಚನೆಯೊಂದಿಗೆ, ಅದಕ್ಕೆ ಪ್ರಾರಂಭದಲ್ಲಿ ಹತ್ತು ಸಾವಿರ ರೂಪಾಯಿಯನ್ನು ಕೊಡುವ ಭರವಸೆಯನ್ನು ನೀಡಿದರು. ಹೀಗೆ 28ನೆಯ ಏಪ್ರಿಲ್ 1963 ರಂದು ಕನ್ನಡ ಭವನ ಸೊಸೈಟಿ ಸದಸ್ಯರ ಮಹಾಸಭೆ ಬೊಮ್ಮನ್ ಬೆಹರಾಮ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಮುಂಬಯಿಯ ಪ್ರಸಿದ್ಧ ಪಾರ್ಸಿ ನಾಯಕನ ಮುಂದಾಳತ್ವದಲ್ಲಿ ಸೊಸೈಟಿ ಸ್ಥಾಪನೆಯಾಗಿ,1963ರ ಜೂನ್ ತಿಂಗಳಿನಿಂದ ತೀವ್ರಗತಿಯಲ್ಲಿ ಕಾರ್ಯಕಲಾಪಗಳು ಪ್ರಾರಂಭವಾದವು.
ಕನ್ನಡ ಭವನ ಸೊಸೈಟಿಯ ನೀತಿ ನಿಯಮದೊಂದಿಗೆ, ಕಠಿಣ ಕಾರ್ಯಗಳನ್ನು ಕೈಗೊಳ್ಳುತ್ತಾ, ಹಗಲು ಕನ್ನಡ ಮಾಧ್ಯಮ ಶಾಲೆಯ ಕನಸು ಮತ್ತು ಮುಖ್ಯ ಉದ್ದೇಶವನ್ನು ಹೊಂದಿದ್ದ ಈ ಸಂಸ್ಥೆಗೆ ಕೋಟೆ ಪರಿಸರದಲ್ಲಿ ಶಾಲೆಯನ್ನು ಸ್ಥಾಪನೆ ಮಾಡಲು ಸ್ಥಳದ ಅಭಾವ ಕಾಡತೊಡಗಿತ್ತು. ಆಗ ಕನ್ನಡಿಗರ ಕಳಕಳಿಗೆ, ಕೋಟೆ ಪರಿಸರದ ಹೆಣ್ಣುಮಕ್ಕಳ ವಿದ್ಯೆಯ ಹಸಿವಿಗೆ ತಲೆಬಾಗಿದ ಬೊಮ್ಮ ನ ಬೆಹರಾಮ್ ರವರು ಮತ್ತೊಮ್ಮೆ ಕನ್ನಡಿಗರಿಗೆ ಹೆಗಲು ನೀಡಿದರು. ಪಾರ್ಸಿ ಮಾಲಕತ್ವದ ಪೊಲೀಸ್ ಕೋರ್ಟ್ ಲೇನ್ ನಲ್ಲಿರುವ ನಾಲ್ಕು ಮಾಳಿಗೆಯ ಹಳೆಯ ಕಟ್ಟಡವನ್ನು ಕನ್ನಡಿಗರಿಗಾಗಿ ಪಡೆಯಲು ನಿರ್ಧಾರ ಮಾಡಿದರು. ಆಗ ತಾನು ಮಾಡಿದ ಆಶ್ವಾಸನೆಯನ್ನು ನೆನೆದು ಹತ್ತು ಸಾವಿರ ರೂಪಾಯಿಯನ್ನು ಪಾರ್ಸಿ ಮಾಲಕನಿಗೆ ನೀಡಿ ಹಳೆಯ ಕಟ್ಟಡದ ಮಾಲಕತ್ವವನ್ನು ಪಡೆದುಕೊಂಡರು. ಇದೊಂದು ತುಳು-ಕನ್ನಡಿಗರ ಜೀವನದಲ್ಲಿ ಮರೆಯಲಾಗದ ಕೊಡುಗೆ. ಮುಂದೆ ಪವಿತ್ರ ಪಾರ್ಸಿ ಕುಟುಂಬದ ಅಗ್ನಿಪೂಜೆ ಮಾಡುತ್ತಿದ್ದ ಭಾವಿ ಈ ಕಟ್ಟಡದ ನಡುವೆ ಇರುವ ಕಾರಣ ಪಾರ್ಸಿ ಕುಟುಂಬಗಳು ಅಲ್ಲಿಂದ ನಿರ್ಗಮಿಸಲು ಒಪ್ಪಲಿಲ್ಲ. ತುಳು-ಕನ್ನಡಿಗರ ಹಗಲು ಕನ್ನಡ ಮಾಧ್ಯಮ ಶಾಲೆಯ ಸ್ಥಾಪನೆಯ ತುಡಿತದ ಅರಿವಿದ್ದ ಬೊಮ್ಮನ್ ರವರು ಎಲ್ಲಾ ಪಾರ್ಸಿ ಕುಟುಂಬಕ್ಕೆ ಉಚಿತ ವಸತಿ ವ್ಯವಸ್ಥೆಯನ್ನು ಮಾಡಿ ಅಲ್ಲಿಂದ ಸಾಗ ಹಾಕುವಲ್ಲಿ ಯಶಸ್ವಿಯಾದರು. ನಂತರ ತನ್ನ ಮಾಲಕತ್ವ ಕ್ಕೆ ಬಂದಂತಹ ಕಟ್ಟಡವನ್ನು ತುಳು ಕನ್ನಡಿಗರಿಗೆ ಉದಾರವಾಗಿ ದಾನದ ರೂಪದಲ್ಲಿ ನೀಡಿದರು. ಮಾಯಾನಗರಿಯ ಹೃದಯವೆಂದು ಹೆಸರುಗಳಿಸಿದ ಕೋಟೆ ಪರಿಸರದಲ್ಲಿ ಒಂದು ಕಟ್ಟಡವನ್ನು ಧರ್ಮಾರ್ಥವಾಗಿ ನೀಡಿರುವ ಬೊಮ್ಮನ್ ಬೆಹಾರಾಮ್ ರವರ ಹೃದಯವಂತಿಕೆ, ಕನ್ನಡ ಪ್ರೇಮ ಕಲ್ಪನೆಗೊ ನಿಲುಕದ್ದು ಎಂದರೆ ತಪ್ಪಾಗಲಾರದು.
ಕಠಿಣ ಪರಿಶ್ರಮ, ಹಣಕಾಸಿನ ಸಮಸ್ಯೆ, ಕೆಲವೊಂದು ಭಿನ್ನಾಭಿಪ್ರಾಯಗಳು …….. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಮೀರಿ ಬೊಮ್ಮನ ಬೆಹರಾಮ ರವರ ಅಮೃತ ಹಸ್ತದಿಂದ 1964 ಜೂನ್ 15 ನೇ ತಾರೀಕು ಹಗಲು ಕನ್ನಡ ಮಾಧ್ಯಮ ಶಾಲೆ ಉದ್ಘಾಟನೆಗೊಂಡಿತು. ಮುಂದೆ ಬೇರೆ ಬೇರೆ ಸಂಸ್ಥೆಯಿಂದ, ದಾನಿಗಳ ಸಹಕಾರದಿಂದ ಶಾಲೆಯಲ್ಲಿ ಮಕ್ಕಳು, ವಿಶೇಷವಾಗಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಪಡೆದರು. ಹೀಗೆ ಮುಂಬಯಿ ನಗರದಲ್ಲಿ ಪ್ರಸಿದ್ಧ ಕನ್ನಡ ಶಾಲೆ ಎಂದು ಬೆಳೆದ ಕನ್ನಡ ಭವನದಲ್ಲಿ ಸೀಟು ಗಿಟ್ಟಿಸಿಕೊಳ್ಳುವುದು ಒಂದು ಸಾಧನೆಯೆಂಬಾತಾಯಿತು. ಕಾಲಕ್ರಮೇಣ ಸಾಧನೆಯ ಶಿಖರವನ್ನೇರಿ ವಿದ್ಯಾರ್ಥಿನಿಯರ ಬಾಳಿಗೆ ಬೆಳಕಾದ ಕನ್ನಡಭವನ ಶಾಲೆಗೆ ಕಿರಿಯ ಮಹಾವಿದ್ಯಾಲಯದ ಕೊರತೆ ಕಾಡ ತೊಡಗಿತ್ತು. ಮುಂದೆ ತಮ್ಮ ಕಾರ್ಯಸಾಧನೆಯಿಂದ ತುಳು ಕನ್ನಡಿಗರು ಕಿರಿಯ ಮಹಾವಿದ್ಯಾಲಯ, ಸಂಜೆ ಕಾಲೇಜು ಎಂಬ ವಿಭಾಗವನ್ನು ಸ್ಥಾಪಿಸಿಕೊಂಡು ಈ ಮಹದಾಸೆಯನ್ನೂ ಕೈಗೂಡಿಸಿಕೊಂಡರು. .
ಹುಟ್ಟೂರಿನಲ್ಲಿಯೇ ಕನ್ನಡ ಶಾಲೆಗಳು ನಶಿಸುತಿರುವ ಸಂದರ್ಭದಲ್ಲಿ ಕೇವಲ ಕನ್ನಡ ಮಾಧ್ಯಮದಲ್ಲಿಯೇ ಯಶಸ್ವಿಯಾಗಿ ವಿದ್ಯೆಯನ್ನು ನೀಡಿ ಸುವರ್ಣ ಮಹೋತ್ಸವವನ್ನು ಆಚರಣೆಯ ಘಮಲನ್ನು ಸುತ್ತಲೂ ಪಸರಿಸಿಕೊಂಡು, ವಜ್ರಮಹೋತ್ಸವದತ್ತ ದಾಪುಗಾಲು ಹಾಕುತ್ತಿದೆ ನಮ್ಮ ಕನ್ನಡ ಭವನ.
ಕನ್ನಡ ಭವನ ಈ ಅರವತ್ತು ವರ್ಷದಲ್ಲಿ ಸಾಕಿತ್ತು ಅದೆಷ್ಬೊ ಕಲಾ ಸಾಧಕರನ್ನು, ಉದ್ಯಮಿಗಳನ್ನು, ಸಾಹಿತಿಗಳನ್ನು, ವಿಜ್ಞಾನಿಗಳನ್ನು, ಉನ್ನತ ಹುದ್ದೆಯ ಅಧಿಕಾರಿಗಳನ್ನು ಸೃಷ್ಟಿಸಿದೆ. ಕನ್ನಡ ಭವನದಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ತಮ್ಮ ಸಂಬಂಧಪಟ್ಟ ಕ್ಷೇತ್ರದಲ್ಲಿ ವಿಶೇಷ ಕೊಡುಗೆಯನ್ನು ನೀಡಿ ಶಾಲೆಗೆ ಹೆಮ್ಮೆ ತಂದಿದ್ದಾರೆ. ಬೊಮ್ಮನ್ ಬೆಹರಾಮ್ ರವರ ಅಧ್ಯಕ್ಷತೆಯ ನಂತರ, ಈಗ ಉದ್ಯಮಿ, ಸಮಾಜಸೇವಕ ಶ್ರೀಯುತ ಎ.ಬಿ. ಶೆಟ್ಟಿಯ ವರ ಸಮರ್ಪಕ ಅಧ್ಯಕ್ಷತೆಯಲ್ಲಿ, ಉತ್ತಮ ಆಡಳಿತ ಮಂಡಳಿಯನ್ನು ಹೊಂದಿದ್ದು, ನುರಿತ ಶಿಕ್ಷಕ ವೃಂದ, ಪ್ರಾಮಾಣಿಕ ಮಕ್ಕಳನ್ನೂ, ಹೃದಯವಂತ ದಾನಿಗಳ ಸಹಕಾರವನ್ನು ಪಡೆದ ಅನುದಾನಿತ ಶಾಲೆ ಕನ್ನಡ ಭವನ ಪ್ರಸಕ್ತವಾಗಿ ಕಲಿಯುವ ಎಲ್ಲಾ ಮಕ್ಕಳಿಗೆ ಉಚಿತ ಸಕಲ ಸೌಕರ್ಯವನ್ನು ದಾನಿಗಳ ಸಹಕಾರದೊಂದಿಗೆ ನೀಡುತ್ತಾ, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಭವನ ಸತತವಾಗಿ ನಿರಂತರವಾಗಿ ತಾಯಿ ಭುವನೇಶ್ವರಿಯ, ದೇವಿ ಶಾರದೆಯ ತೇರನ್ನು ಯಶಸ್ವಿಯಾಗಿ ಎಳೆದು, ಶತಮಾನೋತ್ಸವದ ಘಮಲನ್ನು ಮಾಯಾನಗರಿಗೆ ಹಂಚುತ್ತದೆ ಎನ್ನುವ ಭರವಸೆ, ಆಶಾವಾದ ನಮ್ಮದು. ಅದರೊಟ್ಟಿಗೆ ನಿಮ್ಮೆಲ್ಲರ ಸಹಕಾರ, ಪ್ರೀತಿ ಸದಾ ನಮ್ಮೊಂದಿಗೆ ಇದ್ದು, ನಮ್ಮನ್ನು ಪ್ರೋತ್ಸಾಹಿಸುತ್ತಾ ಇರಲಿ ಎನ್ನುವ ಚಿಕ್ಕ, ಪ್ರೀತಿಯ ಕೋರಿಕೆ.
ಹೆಚ್ಚಿನ ಬರಹಗಳಿಗಾಗಿ
ಎಸಳು 3 ಮುಂಬಾ ಆಯಿಯ ಮಡಿಲಲ್ಲಿ
ಗೌರವ ಸಂಪಾದಕರ ಮಾತು – ಡಾ. ಜಿ. ಎನ್. ಉಪಾಧ್ಯ
ಬರ್ಮಾ ದೇಶದ ರಾಮಾಯಣ