- ಪಂಪಾ ಕ್ಷೇತ್ರದ ಇತಿಹಾಸ ಗಮನ – ೬ - ನವೆಂಬರ್ 19, 2022
- ಪಂಪಾ ಕ್ಷೇತ್ರದ ಇತಿಹಾಸ ಗಮನ – ೫ - ನವೆಂಬರ್ 1, 2022
- ಪಂಪಾ ಕ್ಷೇತ್ರದ ಇತಿಹಾಸ ಗಮನ – ೪ - ಅಕ್ಟೋಬರ್ 28, 2022
ಇಂದು ಮಹರ್ಷಿ ಶ್ರೀ ಅರವಿಂದರ ಜನ್ಮದಿನ. ಅದರ ಪ್ರಯುಕ್ತ ಒಂದು ವಿಶೇಷ ಬರಹ
ಒಬ್ಬ ನರೇಂದ್ರ ತನ್ನ ತಾಯ್ನಾಡಿನ ಅಭ್ಯುದಯಕ್ಕೆಂದು ಸಮುದ್ರೋಲ್ಲಂಘನ ಮಾಡಿ ಪರದೇಶಕ್ಕೆ ತೆರಳಿ ತನ್ನ ನೆಲದ ಸಂಸ್ಕೃತಿಯ ಹಿರಿಮೆಯ ಬಗ್ಗೆ ಅವಿರತ ಶ್ರದ್ಧೆಯಿಂದ ಅರುಹುತ್ತಿದ್ದ.
ಅದೇ ಸಮಯಕ್ಕೆ ಇನ್ನೊಬ್ಬ ಭಾರತದ ನೆಲದಲ್ಲಿ ಜನ್ಮ ತಳೆದೂ, ಪರದೇಶದಲ್ಲಿ ಜೀವನಗೈದು, ಬೇಸತ್ತು, ತನ್ನ ನೆಲದ ಸಂಸ್ಕೃತಿಯ ರಕ್ಷಣೆಗೆಂದು ಮರಳಿ ಮನೆಗೆ ಬಂದು ಅನವರತ ದುಡಿಯುತ್ತಿದ್ದ.
ಅರವಿಂದೋ ಘೋಷ್ ಒಬ್ಬ ಧೀರೋದಾತ್ತ ಮಹರ್ಷಿ ಅರವಿಂದರಾಗಿದ್ದರು. ಎಪ್ಪತ್ತೆಂಟು ವರ್ಷಗಳ ಸಾರ್ಥಕ ಮಹರ್ಷಿ ಸದೃಶ ಬದುಕಾಗಿತ್ತದು. ಮಹರ್ಷಿ ಪದಕ್ಕೆ ಅಷ್ಟು ತೂಕ, ಅರವಿಂದರಂಥವರಿಂದ ಆ ಪದಕ್ಕೆ, ಪದವಿಗೆ ಮತ್ತಷ್ಟು ಮೆರುಗು, ಮತ್ತಷ್ಟು ಸಂಭ್ರಮ.
ಭಾರತದ ಕಲ್ಕತ್ತೆಯಲ್ಲಿ ಜನಿಸಿದರೂ ಅವರ ತಂದೆಯ ಪಾಶ್ಚಿಮಾತ್ಯ ಜೀವನಶೈಲಿಯ ವ್ಯಾಮೋಹಕ್ಕೆ ಬಲಿಯಾದ ದೇಸಿ ಧೇನು. ಕುಕಾರಣಾಂತರಗಳಿಂದ ಅಭಾರತದ ನೆಲದಲ್ಲಿ ಹಲವು ವರ್ಷ ಕಷ್ಟದಾಯಕ ಜೀವನ ನಡೆಸುತ್ತಿದ್ದರು, ಒಂದು ಕಡೆ ಯೂರೋಪಿಯನ್ನರು ಭಾರತಾಂಬೆಯ ಸಂಸ್ಕೃತಿಯ ಕರುಳನ್ನು ಹಿಂಡಿ ಹಿಪ್ಪೆಮಾಡುತ್ತಿದ್ದರೆ, ಇನ್ನೊಂದೆಡೆ ತಾಯಿಂಯಿಂದ ದೂರಾದ ಮಗನ ಕರುಳು ಯಾವಾಗ ತಾಯಿಯ ಮಡಿಲನ್ನು ಸೇರುತ್ತೇನೋ ಎಂದು ಚುರುಗುಡುತ್ತಿತ್ತು.
ಅಂತೂ ಸಕಾಲದ ಸಕಾರಣಗಳಿಂದ ಅರವಿಂದರು ಕಷ್ಟಪಟ್ಟು ಪರದೇಶದಲ್ಲಿ ಅಧ್ಯಯನ ಮಾಡಿ ಸಂಪಾದಿಸಿಕೊಂಡಿದ್ದ ಅತ್ಯುನ್ನತ ಹುದ್ದೆಯನ್ನು ಕಾಲಕಸದಂತೆ ಕಡೆಗಣಿಸಿ ತಾಯ್ನಾಡಿಗೆ ಕೈಂಕರ್ಯಕ್ಕಾಗಿ ವಾಪಸ್ಸಾದರು.
ಅವರೇ ಹೇಳುವಂತೆ, ಯೂರೋಪಿನಿಂದ ವಾಪಸ್ಸಾಗಿ ಆರ್ಯನೆಲದ ಸ್ಪರ್ಶವಾದಾಗ ಆದ ಆನಂದಾನುಭವ ಅತುಲ್ಯವಾಗಿತ್ತು, ಅತ್ಯಂತ ಶ್ರೇಷ್ಠಮಟ್ಟದ ಶಾಂತಿಯ ಅನುಭೂತಿ ಅಂದು ನನಗಾಗಿತ್ತೆಂದು ಮುಂದೊಮ್ಮೆ ನೆನೆಯುತ್ತಾರೆ.
ಕೋ. ಚೆನ್ನಬಸಪ್ಪನವರು ಅರವಿಂದರ ಯೋಗಿಯ ಜೀವನ ಹಾಗೂ ಯೋಧನ ಜೀವನವನ್ನು ಸಮ್ಯಕ್ಕಾಗಿ, ಸಮದರ್ಶಿಯಾಗಿ ಹೃದಯಕ್ಕೆ ನಾಟುವಂತೆ ಗ್ರಂಥಿಸಿದ್ದಾರೆ. ಈ ಕೃತಿಯ ಹೆಸರು ‘ಸ್ವಾತಂತ್ರ್ಯಯೋಧ ಶ್ರೀ ಅರವಿಂದ’
ಭಾರತಕ್ಕೆ ಮರಳಿ ಬಂದಾಗಿನಿಂದ ಅರವಿಂದರ ಮನ ಬಹುಪಾಲು ಅಧ್ಯಾತ್ಮದೆಡೆಗೆ ವಾಲಿದ್ದರೂ, ಅಧ್ಯಾತ್ಮ ಸಾಧನೆಗೈಯ್ಯುತ್ತ, ಯೋಗ್ಯತಾನುಸಾರ ಶಕ್ತಿಸಂಚಯನ ಮಾಡಿ ಅದನ್ನು ರಾಷ್ಟ್ರಕಾರ್ಯಕ್ಕೆ ಸದ್ವಿನಿಯೋಗಗೊಳಿಸುತ್ತಿದ್ದರು, ಆ ಕಲೆ, ಆ ಸಮಾವೇಶ, ಆ ಸಮೀಕರಣ ಸುಲಭಕ್ಕೆ ಎಲ್ಲರಿಗೂ ದಕ್ಕುವುದಿಲ್ಲ. ಎರಡನ್ನೂ ಮೇಳೈಸಿಕೊಂಡು ಸಾಧನೆಗೈದ ಪರಿ ಅದ್ಭುತ.
ಅರವಿಂದರು ಉತ್ಕಟ ಕ್ರಾಂತಿಕಾರಿಯಾಗಿದ್ದರೂ ಹೊರನೋಟಕ್ಕೆ ಅವರ ಕಾರ್ಯಾಚರಣೆಗಳೇ ಬೇರೆಯಾಗಿರುತ್ತಿದ್ದವು, ಅವರು ಬಹುತೇಕ ಸಮಯ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದು, ಕ್ರಾಂತಿಕಾರ್ಯಕ್ಕೆ ಯುವಕರ ಮನಸ್ಸನ್ನು ಅಣಿಗೊಳಿಸುತ್ತಿದ್ದರು, ಅಷ್ಟು ಭಾವೋದ್ವೇಗ ಅವರ ಆ ಅಕ್ಷರಗಳಲ್ಲಿರುತ್ತಿತ್ತು.
ಅರವಿಂದರು ಬಹುಭಾಷಾ ಪಂಡಿತರಾಗಿದ್ದರು, ಅವರೊಬ್ಬ ಅತ್ಯುನ್ನತ ಕವಿಯಾಗಿದ್ದರು, ತತ್ತ್ವಜ್ಞಾನಿಯಾಗಿದ್ದರು, ಕ್ರಾಂತಿಕಾರಿಯಾಗಿದ್ದರು, ಮಾನವತಾವಾದಿಯಾಗಿದ್ದರು. ಅವರದು ಶಸ್ತ್ರ – ಶಾಸ್ತ್ರ ಎರಡರಲ್ಲೂ ಸಮಾನ ಶ್ರದ್ಧೆ, ಸಮಾನ ಸಾಧನೆ.
ಹೀಗೆ ಕೊನೆಯುಸಿರಿರುವವರೆಗೂ ಮಹರ್ಷಿ ಅರವಿಂದರು ಅಧ್ಯಾತ್ಮ ಸಾಧನೆ, ರಾಷ್ಟ್ರ ಕೈಂಕರ್ಯವನ್ನು ಸಮಾನವಾಗಿ ತೂಗಿಸಿಕೊಂಡು, ಎರಡರಲ್ಲೂ ಉನ್ನತ ಸಾಧನೆಗೈದವರು, ಅದಕ್ಕೆಂದೇ ಈ ಕೃತಿಯ ಉಪಶೀರ್ಷಿಕೆ “ಯೋಗಿ ಪುರುಷನ ಯೋಧ ಜೀವನ”.
ಇದು ಮಹರ್ಷಿ ಅರವಿಂದರ ಬಗೆಗಿನ ಕನ್ನಡದಲ್ಲಿರುವ ಉತ್ತಮ ಕೃತಿಗಳಲ್ಲೊಂದು, ರಾಷ್ಟ್ರಾರಾಧಕರೆಲ್ಲರಿಗೂ ಅಧ್ಯಯನ ಯೋಗ್ಯವಾದುದು
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಹಾಲಾಡಿಯಲ್ಲಿ ಹಾರುವ ಓತಿ