ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸ್ವಾತಂತ್ರ್ಯದ ಅಮೃತೋತ್ಸವ – ೭೫ ರ ಭಾರತ

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಭಾರತ ಈ ವರ್ಷ ತನ್ನ ಸ್ವಾತಂತ್ರ ದಿನದ ಅಮೃತ ಮಹೋತ್ಸವವನ್ನಾರಚರಿಸುತ್ತಿದೆ. ತುಂಭಾ ವೈಭವ ಮತ್ತು ಅಬ್ಬರದಿಂದ ಆಚರಣೆ ಮಾಡುವುದು ಕಾಣುತ್ತಿದೆ. ಪರಕೀಯರ ಆಡಳಿತದಿಂದ ವಿಮುಕ್ತಿ ಪಡೆದು ಸ್ವತಂತ್ರವಾದ ನಮ್ಮ ದೇಶದ ಈ ಹಬ್ಬವನ್ನು ನಾವೆಲ್ಲ ತುಂಬು ಮನಸ್ಸಿನಿಂದ ಆಚರಿಸೋಣ.

ಮುಂಚಿನಿಂದಲೂ ಭಾರತ ಒಂದು ಸoಪದ್ಭರಿತ ದೇಶ. ಸಮೃದ್ಧಿಯ ದೇಶ. ಹಾಗಾಗಿ ಪರಕೀಯರ ವಕ್ರ ದೃಷ್ಟಿ ಇದರ ಸಂಪತ್ತನ್ನು ದೋಚುವ ದೆಸೆಯಲ್ಲಿ ಸಾಗಿತ್ತು. ಸಂಪತ್ತನ್ನು ಕೊಂಡೊಯ್ಯುವ ಉದ್ದೇಶ ಇಲ್ಲದೆ ನಮ್ಮ ದೇಶದ ಪಶ್ಚಿಮದ ಎಲ್ಲೆಗೆ ಮೊದಲು ಲಗ್ಗೆ ಹಾಕಿದ್ದು ವಿಶ್ವ ವಿಜೇತನ ಕನಸನ್ನು ಹೊತ್ತ ಅಲೆಗ್ಜಾಂಡರ್. ಗೆದ್ದರೂ ಇಲ್ಲಿಯ ಆಧ್ಯಾತ್ಮದ ದೃಷ್ಟಿ ಅವನನ್ನೇ ಗೆದ್ದಿತ್ತು. ಮತ್ತೆ ಬಂದದ್ದು ಆರ್ಯರೆಂದು ಕೆಲ ಇತಿಹಾಸ ಪುಟಗಳು ಬರೆದರೂ ಅದು ಸುಳ್ಳೆಂದು ಕೆಲ ವಾದಗಳು ಸಿದ್ಧಪಡಿಸಿವೆ. ಮುಂದೆ ಪಶ್ಚಿಮ ದಿಕ್ಕಿನಿಂದಲೇ ಕ್ರೀ.ಶ 711 ರಲ್ಲಿ ಬಂದ ಮಹಮ್ಮದ್ ಬಿನ್ ಕಾಸೀಮಿನದು. ಅವನು ಸಿಂಧ್ ಪ್ರಾಂತ್ಯವನ್ನು ವಶಪಡೆಸಿಕೊಂಡಿದ್ದ. ನಂತರ ಬಂದ ಮಹಮ್ಮದ್ ಘಜ್ನಿ ರಾಜಸ್ಥಾನ್, ಗುಜರಾತ್ ಗಳಲ್ಲಿನ ದೇವಸ್ಥಾನಗಳನ್ನು ಲೂಟಿ ಮಾಡಿ ಭಾರೀ ಸಂಪತ್ತನ್ನು ದೋಚಿದ. ನಂತರ ಘುರಿದ್ ವಂಶಸ್ಥರು ಕ್ರೀ.ಶ. 1206 ನಲ್ಲಿ ಮುಸಲ್ಮಾನರ ಆಡಳಿತಕ್ಕೆ ನಾಂದಿ ಹಾಡಿದ್ದು ಅದು 1757ರಲ್ಲಿ ಆಂಗ್ಲರ ಜೊತೆ ನಡೆದ ಪ್ಲಾಸಿ ಯುದ್ಧದಲ್ಲಿ ಅವನತಿಗೆ ಬಂತು. ಅಲ್ಲಿಂದ ಪ್ರಾರಂಭವಾದ ವಸಾಹತುಶಾಹಿ ಆಡಳಿತ 1947 ರ ವರೆಗೆ ಮುಂದುವರೆದು ಇದೇ ತಿಂಗಳ 15 ರಂದು ಎಲ್ಲ ದಾಳಿಕೋರ ಸರಕಾರಗಳಿಂದ ಮುಕ್ತಿ ಪಡೆದು ಸ್ವತಂತ್ರವಾಗಿದ್ದ ನಮ್ಮೆಲ್ಲರಿಗೂ ತಿಳಿದಿದ್ದೇ ಇದೆ. ಈಗ ಅದರ ಅಮೃತ ಮಹೋತ್ಸವವೇ ನಾವುಗಳು ಆಚರಿಸುತ್ತಿರುವುದು.

ಗೋಪಾಲಕೃಷ್ಣ ಗೋಖಲೆ

ಸುಮಾರು 800 ವರ್ಷಗಳು ನಮ್ಮನ್ನು ಆಳಿದ್ದರೂ ದೆಹಲಿಯ ಮೊಘಲ್ ಸಾಮ್ರಾಜ್ಯದ ವಿರುದ್ಧ ನಮ್ಮ ದೇಶದ ಜನ ದಂಗೆ ಎದ್ದ ದಾಖಲೆಗಳಿಲ್ಲ. ಆದರೆ ಆಂಗ್ಲರ ವಿರುದ್ಧ ಮಾತ್ರ 1857 ನಲ್ಲಿ ದಂಗೆ ಎದ್ದ ಸಿಪಾಯಿ ದಂಗೆ ಮೊದಲನೆ ಸ್ವಾತಂತ್ರ್ಯ ಯುದ್ಧವೆನ್ನಬಹುದಾಗಿದೆ. ಅದನ್ನು ಯಶಸ್ವಿಯಾಗಿ ಹತ್ತಿಕ್ಕಿದ ಆಂಗ್ಲರು ಮುಂದೆ ಮುಂದೆ ಸ್ವದೇಶಿಗಳ ಬಗ್ಗೆ ತುಂಬಾ ಕಠಿಣವಾದರು. ಆಗ ಪ್ರಾರಂಭವಾದದ್ದೇ ಸ್ವಾತಂತ್ರ್ಯ ಸಮರ. ಅದನ್ನು ಮುಂಚೆ ಗೋಪಾಲಕೃಷ್ಣ ಗೋಖಲೆಯವರು ನಡೆಸಿಕೊಂಡು ಬಂದು ನಂತರ ಗಾಂಧಿಯವರಿಗೆ ವಹಿಸಿಕೊಟ್ಟರು. ನಂತರ ಗಾಂಧಿಯವರ ಕೈಗೊಂಡ ಅಹಿಂಸಾ ಪದ್ಧತಿ, ಅಸಹಕಾರ ಚಳುವಳಿ,ಉಪವಾಸ, ಸತ್ಯಾಗ್ರಹ ಮುಂತಾದವುಗಳು ಪ್ರಮುಖ ಪಾತ್ರ ವಹಿಸಿ ನಮಗೆ ಇಂದಿನ ಸ್ವತಂತ್ರ ಭಾರತದ ಕನಸು ನನಸಾಗಿಸಿತು.

Mahatma Gandhi – Wikipedia

ಗಾಂಧಿಯವರು ಅನುಸರಿಸಿದ ಅಹಿಂಸಾ ವಾದದ ಜೊತೆಯಲ್ಲೇ ಕೋವಿಯ ತುದಿಯಿಂದ ಸ್ವಾತಂತ್ರ್ಯಸಾಧಿಸುವ ಹುಮ್ಮಸ್ಸಿನಿಂದ ಕೆಲ ಆಸಕ್ತರು ಹಿಂಸಾ ಪದ್ಧತಿಯನ್ನು ಹಿಡಿದರು. ಕೆಲವರು ಪ್ರತ್ಯಾಮ್ನಾಯ ಸೈನ್ಯವನ್ನು ಕಟ್ಟಿದರು ಎಂಬುದೆಲ್ಲ ಇತಿಹಾಸ ಕಂಡಿದೆ. ಹಾಗೆ ತಮ್ಮ ವಾದವನ್ನೇ ಅನುಸರಿಸಿ ಮಡಿದ ಅನೇಕ ದೇಶಭಕ್ತರು ಇತಿಹಾಸದ ಮೂಲೆಯ ಪುಟಗಳಲ್ಲಿದ್ದು, ಪಠ್ಯ ಪುಸ್ತಕಗಳಲ್ಲಿ ಕಾಣದಾಗಿ ಮುಂದಿನ ಪೀಳಿಗೆಗಳಿಗೆ ಕಾಣದವರಾಗಿದ್ದಾರೆ. ಸ್ವಾತಂತ್ರ್ಯ ಸಮರದ ಮುಂದಾಳತ್ವದ ಜೊತೆಗೆ ರಾಜಕೀಯವಾಗಿ ಸಹ ಮುಂದಕ್ಕೆ ಬಂದು ಸ್ವಾತಂತ್ರ್ಯ ಸಿಕ್ಕಿದ ನಂತರ ಆಡಳಿತದಲ್ಲಿ ಮುಂದಾದ ನಾಯಕರ ಜೊತೆಗೆ ನಾವು ಈ ತರದ ಪ್ರಾಣ ತ್ಯಾಗ ಮಾಡಿದ ವೀರರನ್ನೂ ನೆನೆಸಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ. ಯಾವುದೇ ಪದ್ಧತಿ ಇರಲಿ, ಅವರುಗಳು ಸಹ ಪರಕೀಯರ ಆಡಳಿತ ವಿರುದ್ಧವೇ ಅಲ್ಲವೇ ಹೋರಾಡಿದ್ದು ? ಅವರ ಜೀವನ ಚರಿತ್ರೆಯನ್ನು ಓದಿ, ತಿಳಿದುಕೊಂಡು ನಾವು ಅವರಿಗೆ ಒಂದು ಕಂಬನಿಯ ಮೂಲಕ ಶ್ರದ್ಧಾಂಜಲಿಯನ್ನು ಈ ಅಮೃತ ಮಹೋತ್ಸವದ ದಿನದಂದು ಅರ್ಪಿಸಬೇಕಾಗಿದೆ. ಅಹಿಂಸಾ ಪದ್ಧತಿಯಲ್ಲಿ ನಡೆದವರು ಸೆರೆವಾಸ ಮಾಡಿದ್ದಾರೆ, ಮಡದ ಮಕ್ಕಳಿಗೆ ದೂರವಿದ್ದಾರೆ, ಅನೇಕ ಕಷ್ಟಗಳನ್ನು ಎದುರಿಸಿದ್ದಾರ. ಆದರೆ ಬೇರೊಂದು ದಾರಿ ಹಿಡಿದವರು ಪ್ರಾಣವನ್ನೇ ಲೆಕ್ಕಿಸದೇ ಧೈರ್ಯವಾಗಿ ಸಾವನ್ನು ಅಪ್ಪಿದ್ದಾರೆ.

ದೂರದರ್ಶನದ ಮೂಲಕ ಧೀರಜ್ ಕುಮಾರ್ ಅವರು ತುಂಬಾ ಹಿಂದೆ ’ಕಹಾ ಗಯೆ ವೋ ಲೋಗ್” ಎಂಬ ಧಾರಾವಾಹಿಯಲ್ಲಿ ಈ ತರದ ವೀರರ ಪರಿಚಯ ಮಾಡಿದ್ದರು. ಈಗ ಅಂತರ್ಜಾಲದಲ್ಲಿ ಸಹ ಇವರುಗಳ ಮಾಹಿತಿ ಉಪಲಭ್ಯವಿದೆ. ಈ ಸಂದರ್ಭವನ್ನು ನೆನೆಯುತ್ತ ನಮಗೆಲ್ಲ ಮುಕ್ತವಾಗಿ ಜೀವಿಸಬಲ್ಲ ವಾತಾವರಣ ನೀಡಿದ ಅನೇಕ ಅಜ್ಞಾತ ವೀರರಿಗೆ ಮತ್ತು ನಮ್ಮ ಅರಿವಿಗೆ ಬಂದ ನಾಯಕರಿಗೆ ನಮ್ಮ ನಮನ ಸಲ್ಲಿಸೋಣ.


ಜೈ ಹಿಂದ್ ! ಜೈ ಭಾರತ್ !! ಜೈ ಭರತಮಾತೆ !!!
ಮೇರಾ ಭಾರತ್ ಮಹಾನ್ !!