ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೆ.ಟಿ.ಗಟ್ಟಿಯವರೊಡನೆ ಒಡನಾಟದ ನೆನಪುಗಳು

ಗಿರಿಧರ ಕಾರ್ಕಳ
ಇತ್ತೀಚಿನ ಬರಹಗಳು: ಗಿರಿಧರ ಕಾರ್ಕಳ (ಎಲ್ಲವನ್ನು ಓದಿ)

1976 ರಲ್ಲಿ ಸುಧಾದಲ್ಲಿ ಧಾರಾವಾಹಿಯಾಗಿ ಪ್ರಕಟವಾದ”ಶಬ್ಧಗಳು” ಕಾದಂಬರಿ, ಓದುಗ ವಲಯದಲ್ಲಿ ಸಂಚಲನ ಉಂಟು ಮಾಡಿದ್ದಾಗ ನಾನು ಆಗಷ್ಟೇ ಕಾಲೇಜಿಗೆ ಕಾಲಿಟ್ಟಿದ್ದೆ. ಮಾಮೂಲಿ ಕಾದಂಬರಿಗಳಿಗಿಂತ ತೀರ ಭಿನ್ನವಾದ ಆ ಕಾದಂಬರಿ ಓದಿದವನೇ ಗಟ್ಟಿಯವರ ಅಭಿಮಾನಿಯಾಗಿಬಿಟ್ಟಿದ್ದೆ.

ಆದರೆ ಗಟ್ಟಿಯವರೊಂದಿಗೆ ಆತ್ಮೀಯ ನಂಟೊಂದು ಬೆಳೆದದ್ದು ಮಾತ್ರ ಆಕಸ್ಮಿಕವಾಗಿ. 1984ರಲ್ಲಿ ಹೆಗ್ಗೋಡಿನಲ್ಲಿ ನಡೆದ 10 ದಿನಗಳ ಚಲನಚಿತ್ರ ಸಹೃದಯತಾ ಶಿಬಿರದಲ್ಲಿ ನಾನು ಪಾಲ್ಗೊಂಡಿದ್ದೆ.ಆ ಶಿಬಿರದಲ್ಲಿ ಅವರೂ ಶಿಬಿರಾರ್ಥಿಯಾಗಿ ಪಾಲ್ಗೊಂಡಿದ್ದರು.ಅಷ್ಟೇ ಅಲ್ಲ ಹತ್ತು ದಿನಗಳ ಕಾಲವೂ ನನ್ನ ಸಹ ಚಾಪಿಗರಾಗಿದ್ದರು.ಆಗೆಲ್ಲ ಶಿಬಿರಾರ್ಥಿಗಳಿಗೆ ಮಲಗಲು ಪಕ್ಕದ ಶಾಲೆಯಲ್ಲಿ ಚಾಪೆ ಹಾಸಿ ಕೊಡುತ್ತಿದ್ದರು.ಗಟ್ಟಿಯವರದು ನನ್ನ ಪಕ್ಕದ ಚಾಪೆ!! ಹಾಗಾಗಿ,ಹತ್ತೂ ದಿನ ರಾತ್ರಿ ನಿದ್ದೆ ಬರುವ ತನಕ ನಾನೊಬ್ಬನೇ ಅವರ ಮಾತುಗಳ ಕೇಳುಗ!! ಮೊದಲೇ ನಾನವರ ಕಾದಂಬರಿಗಳ ಅಭಿಮಾನಿ.

ಶಿಬಿರದಲ್ಲಿ ಸುತ್ತಾಡುತ್ತಾ ನಾನು, ಅಲ್ಲಿಗೆ ಬಂದ ಗಣ್ಯರ ಕ್ಯಾರಿಕೇಚರ್ ಬರೆದು ಅವರಿಂದ ಸಹಿ ಪಡೆಯುವುದನ್ನೆಲ್ಲ ಮೆಚ್ಚುಗೆಯಿಂದ ಗಮನಿಸುತ್ತಿದ್ದ ಗಟ್ಟಿಯವರು, “ನಾನು ಹನಿ ಕವಿತೆಗಳನ್ನೂ ಬರೆಯುತ್ತಿದ್ದೇನೆ.ಮಯೂರ ತುಷಾರ ಮಲ್ಲಿಗೆ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆ.ಇನ್ನು ಮುಂದೆ ಬರೆವ ಹನಿಕವಿತೆಗಳನ್ನು ನಿಮ್ಮ ಕೈಬರಹದಲ್ಲಿ ರೇಖಾ ಚಿತ್ರದೊಂದಿಗೆ ಬರೆದು ಕೊಡಬಹುದಾ” ಅಂತ ಕೇಳಿದರು.ಖುಷಿಯಿಂದಲೇ ಆಗಲಿ ಸರ್ ಅಂದೆ. ಅಲ್ಲಿಂದ ಒಂದೆರಡು ವರ್ಷಗಳ ಕಾಲ ಅವರ ಹನಿಕವಿತೆ ನನ್ನ ಕೈಬರಹ+ಚಿತ್ರಗಳ ಜುಗಲ್ ಬಂಧಿ ಶುರುವಾಯಿತು.ಅವರ 40ಕ್ಕೂ ಹೆಚ್ಚು ಹನಿ ಕವಿತೆಗಳನ್ನು ಬರೆದು ಚಿತ್ರ ಬರೆದಿದ್ದೆ.

ಆತ್ಮೀಯ ಒಡನಾಟ ಬೆಳೆದಂತೆ ನಡುವೆ ಒಮ್ಮೆ ಅವರ ಉಜಿರೆಯ ವನಸಿರಿಗೂ ಹೋಗಿ ಒಂದೆರಡು ದಿನ ಇದ್ದು ಬಂದೆ.ನಿಜಕ್ಕೂ ಅವರೊಂದು ತುಂಬಿದ ಕೊಡ.ತಾನೊಬ್ಬ ದೊಡ್ಡ ಜನಪ್ರಿಯ ಲೇಖಕ ಅನ್ನುವ ಯಾವ ಹಮ್ಮು ಬಿಮ್ಮುಗಳಿಲ್ಲದೆ ನನ್ನಂತಹ ಕಿರಿಯನ ಜೊತೆಗೂ ಸಹಜವಾಗಿ ಸರಳವಾಗಿ ಬೆರೆತು ತಮ್ಮ ಬದುಕು ಬರಹಗಳ, ಲೋಕ ಸುತ್ತಾಟಗಳ, ತಮ್ಮದೇ ಕೃಷಿ ಪ್ರಯೋಗಗಳ ಅನುಭವವನ್ನು ಆತ್ಮೀಯವಾಗಿ ಹಂಚಿಕೊಳ್ಳುವ ಪರಿಗೆ ಬೆರಗಾಗಿ ಹೋಗಿದ್ದೇನೆ. ನಂತರ ಅವರ ಭೇಟಿಯಾಗಿದ್ದು ಮೈಸೂರಿನ ಹೆಮ್ಮೆಯ ಸಮತೆಂತೋ ರಂಗ ಸಂಸ್ಥೆಯ ಬೆಳ್ಳಿಹಬ್ಬದ ಸಂದರ್ಭದಲ್ಲಿ ಏರ್ಪಡಿಸಿದ್ದ ನಾಟಕ ರಚನಾ ಸ್ಪರ್ಧೆಯಲ್ಲಿ ಅವರಿಗೆ ಮೊದಲ ಬಹುಮಾನ ಬಂದಾಗ..

ಅನಂತರ,ನಾನು ಮುಂಬೈಗೆ ಹಾರಿ ಆರೇಳು ವರ್ಷಗಳ ಕಾಲ ಅವರ ಸಂಪರ್ಕ ತಪ್ಪಿತೆಂದುಕೊಳ್ಳುವಷ್ಟರಲ್ಲಿ, ಒಮ್ಮೆ ಮುಂಬಯಿಗೇ ಬಂದಾಗ ಲೇಖಕಿ ಸ್ನೇಹಿತೆ ಶ್ಯಾಮಲಾ ಮಾಧವ ಅವರ ಮನೆಯಲ್ಲಿ ಭೇಟಿ ಮಾಡಿದೆವು. ಆಗ ಪತ್ರಕರ್ತ ಗೆಳೆಯ ಶ್ರೀನಿವಾಸ ಜೋಕಟ್ಟೆಯವರೊಂದಿಗೆ ಅವರ ಪತ್ರಿಕೆಗಾಗಿ ಗಟ್ಟಿಯವರ ಸಾಹಿತ್ಯ ಬದುಕಿನ ಕುರಿತು ಸಂದರ್ಶನವನ್ನೂ ನಡೆಸಿದೆವು.

ಅನಂತರ,ನಾನೂ ಬ್ಯಾಂಕಿನ ಉದ್ಯೋಗ ನಿಮಿತ್ತ ಜವಾಬ್ದಾರಿ ಹೆಚ್ಚಾಗಿ ಹಲವಾರು ಊರು ಸುತ್ತುವ ಧಾವಂತದ ನಡುವೆ ಅವರ ಕೆಲವು ಪತ್ರಿಕಾ ಲೇಖನ,ನಾಟಕಗಳು,ಭಾಷಾ ಕಲಿಕೆಯ ಅಧ್ಯಯನಗಳ ಕೃತಿಗಳನ್ನು ಓದಿದ್ದು ಬಿಟ್ಟರೆ ಭೇಟಿಯೇ ಆಗಲಿಲ್ಲ.ಕಥೆ ಕಾದಂಬರಿಗಳ ಹೊರತಾಗಿಯೂ,ಭಾಷಾ ಅಧ್ಯಯನ ಮತ್ತು ವೈಚಾರಿಕ ಚಿಂತನೆಗಳ ಕುರಿತು ಅವರ ಕೃತಿಗಳ ಹರಹು ವಿಸ್ತಾರ ಮತ್ತು ವೈವಿಧ್ಯಮಯವಾದ್ದು.ಇಂಗ್ಲಿಷ್ ಮತ್ತು ಕನ್ನಡದ ವ್ಯಾಕರಣ ಬದ್ಧ ಅಭ್ಯಾಸಕ್ಕಾಗಿ ಅವರು ಬರೆದ ಐದು ಪುಸ್ತಕಗಳು ಎರಡೂ ಭಾಷೆಗಳಲ್ಲಿ ಅವರಿಗಿರುವ ಅಸಾಧಾರಣ ಪ್ರೌಢಿಮೆಗೆ ಸಾಕ್ಷಿ.

ಕೆಲ ತಿಂಗಳ ಹಿಂದೆ ಮಂಗಳೂರಿನಲ್ಲಿ ಸದಾನಂದ ಸುವರ್ಣರನ್ನು ನಾನು ಭೇಟಿ ಮಾಡಿದ ಪ್ರಸಂಗವನ್ನು ಓದಿದ ಶ್ಯಾಮಲಾ ಅವರು”ನಿಮಗೆ ಗಟ್ಟಿಯವರೂ ಆತ್ಮೀಯರಲ್ವಾ.ಅವರೀಗ ಮಂಗಳೂರಲ್ಲಿದ್ದಾರೆ. ಮುಂದಿನ ಸಲ ಮಂಗಳೂರಿಗೆ ಹೋದಾಗ ಅವರನ್ನೂ ಭೇಟಿ ಮಾಡಿ ಬನ್ನಿ” ಅಂದಿದ್ದರು.ಸರಿ ಅಂತ ಎರಡು ತಿಂಗಳ ಹಿಂದೆ ಮಂಗಳೂರಿಗೆ ಹೋದಾಗ ಬಿಜೈನಲ್ಲಿರುವ ಅವರ ಮನೆಯಲ್ಲೇ ಭೇಟಿ ಮಾಡಿ ಬಂದೆ.ಆದರೆ ಮೆದುಳಿನ ಸ್ಟ್ರೋಕ್ ನಿಂದಾಗಿ ನೆನಪಿನ ಶಕ್ತಿಯನ್ನೇ ಕಳೆದು ಕೊಂಡು ವೃದ್ಧಾಪ್ಯದಿಂದ ಜರ್ಝರಿತರಾಗಿ ಅರೆಜೀವವಾಗಿದ್ದ ಗಟ್ಟಿಯವರ ಈ ಭೇಟಿ ಮಾತ್ರ ನನಗೆ ಅತೀವ ನೋವು ಸಂಕಟದ ಭೇಟಿ ಅನ್ನಿಸಿತು. ನನ್ನನ್ನು ಅವರ ಜೊತೆ ಕೂರಿಸಿ ಅವರ ಪತ್ನಿ ಯಶೋದಕ್ಕ ಫೋಟೋವನ್ನೇನೋ ತೆಗೆದರು.ಆದರೆ ನಾನು ಅವರ ಸ್ಥಿತಿ ಯನ್ನು ಕಂಡು ಮೌನವಾಗಿ ರೋಧಿಸುತ್ತಿದ್ದೆ.

ನಾನು ಹಿಂದೆ ಗಟ್ಟಿಯವರ ಕವಿತೆಗಳಿಗೆ ಚಿತ್ರ ಬರೆದುದನ್ನು ನೆನಪಿಸಿದಾಗ, ಯಶೋದಕ್ಕ ಒಂದು ಆಲ್ಬಂ ತಂದು ನನ್ನೆದುರಿಗಿಟ್ಟರು. ಅದು ಪತ್ರಿಕೆಗಳಲ್ಲಿ ನನ್ನ ಕೈಬರಹ ಚಿತ್ರಗಳೊಂದಿಗೆ ಪ್ರಕಟವಾದ ಗಟ್ಟಿಯವರ ಎಲ್ಲಾ ಹನಿಕವಿತೆಗಳ ಕಟಿಂಗನ್ನು ಗಟ್ಟಿಯವರ ಮಗಳು ನೀಟಾಗಿ ಅಂಟಿಸಿ ಜೋಪಾನವಾಗಿಟ್ಟುಕೊಂಡಿದ್ದ ಆಲ್ಬಂ.!! ನಿಜ ಹೇಳಬೇಕೆಂದರೆ, ನನ್ನ ಬಳಿ ನಾನು ಚಿತ್ರ ಬರೆದ ಅವರ ಒಂದೇ ಒಂದು ಹನಿಕವಿತೆಗಳ ಕಟಿಂಗ್ ಕೂಡ ಇರಲಿಲ್ಲ.ಪ್ರತೀ ಮೂರು ವರ್ಷಗಳಿಗೊಮ್ಮೆ ನಡೆವ ಬ್ಯಾಂಕಿನ ಟ್ರಾನ್ಸ್ ಫರ್ ಯಜ್ಞಕ್ಕೆ ಅವೆಲ್ಲ ಆಹುತಿಯಾಗಿದ್ದವು..!!

ಖುಷಿಯಿಂದ ಆಲ್ಬಂ ನ ಕೆಲವು ಪುಟಗಳನ್ನು ನೆನಪಿಗಾಗಿ ಫೋಟೋ ತೆಗೆದಿಟ್ಟುಕೊಂಡೆ.

ಭೇಟಿ ಮಾಡಿ ವಾಪಸ್ ಬಂದ ನಂತರ ಶ್ಯಾಮಲಾ ಅವರಿಗೆ ಫೋನ್ ಮಾಡಿದಾಗ ಗಟ್ಟಿಯವರು ಹೇಗಿದ್ದಾರೆ, ಫೋಟೋ ತೆಗೆದಿರಾ,ಅವರ ಭೇಟಿ ಬಗ್ಗೆ ಬರೀತಿರಾ ಅಂತೆಲ್ಲ ಕೇಳಿದರು.ನೋಡೋಣ ಪ್ರಯತ್ನಿಸುವೆ ಅಂದಿದ್ದೆ.ಆದರೆ ಈ ಭೇಟಿಯಲ್ಲಿ ಗಟ್ಟಿಯವರ ಬಗ್ಗೆ ಏನೆಂದು ಬರೆಯಬೇಕು.ಅವರ ಈಗಿನ ದೈಹಿಕ ಅನಾರೋಗ್ಯ ಸ್ಥಿತಿಯ ಬಗ್ಗೆ ಬರೆಯಲು ಸುತರಾಂ ಮನಸೊಪ್ಪಲಿಲ್ಲ. ಬರೆದರೂ,ಅವರೊಂದಿಗೆ ತೆಗೆದ ಫೋಟೋ ಮಾತ್ರ ಯಾವ ಕಾರಣಕ್ಕೂ ಹಾಕಬಾರದು ಅಂದುಕೊಂಡೆ.ಗಟ್ಟಿಯವರ ಅಭಿಮಾನಿಗಳು,ಓದುಗರ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿರುವ, ಸ್ಪುರದ್ರೂಪಿಯಾದ ನೀಳದೇಹದ ಗಟ್ಟಿಯವರ ಸುಂದರ ಬಿಂಬವನ್ನು ನಾನು ಹಾಕುವ ಚಿತ್ರ ಅಳಿಸಿ ಹಾಕದಿರಲಿ ಅನ್ನುವ ಯೋಚನೆ ನನ್ನದಿತ್ತು.

ಆದರೆ,ಅದಾಗಿ ಕೇವಲ ಎರಡೇ ತಿಂಗಳ ನಂತರ, ನಿನ್ನೆ ಗಟ್ಟಿಯವರು ನಮ್ಮನ್ನೆಲ್ಲ ಅಗಲಿದರು.ಬದುಕಿನುದ್ದಕ್ಕೂ ಸಹೃದಯ ಸಜ್ಜನಿಕೆಯನ್ನು ಮೆರೆದ ಗಟ್ಟಿಯವರು ತಮ್ಮ ಕಣ್ಣುಗಳನ್ನು ಮತ್ತು ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ಮೂಲಕ ಸಾವಿನಲ್ಲೂ ಅಪ್ಪಟ ಮಾನವೀಯತೆಯನ್ನು ಮೆರೆದಿದ್ದಾರೆ.

ಗಟ್ಟಿ ಎಂದರೆ ಕನ್ನಡದ ಬಂಗಾರದ ಗಟ್ಟಿ ಎಂದು ಅವರನ್ನು ವರ್ಣಿಸಿರುವುದು ಸಹಜವಾಗಿಯೇ ಇದೆ.!!

ಈಗ ಅವರ ನೆನಪಿನಲ್ಲಿ ಅವರೊಂದಿಗೆ ತೆಗೆಸಿಕೊಂಡ ಫೋಟೋ,ನಮ್ಮ ಚಿತ್ರ -ಕವಿತೆಗಳ ಜುಗಲ್ ಬಂಧಿಯ ತುಣುಕುಗಳನ್ನು ಇಲ್ಲಿ ಹಾಕಬಹುದೇನೋ.

ಗಟ್ಟಿಯವರಂತೆ ಬದುಕಿನಲ್ಲಿ ಗಟ್ಟಿಯಾಗಿ ನಿಂತು, ಬರಹವನ್ನೇ ನೆಚ್ಚಿಕೊಂಡು ಸಮಾಜಮುಖಿ ಚಿಂತನೆಗಳ ವೈಚಾರಿಕತೆಯ ಗಟ್ಟಿ ಕಾಳುಗಳನ್ನೇ ಹಂಚಿದ ಸರಳ ಸಜ್ಜನಿಕೆಯ ಬಹುಶ್ರುತ ಲೇಖಕರ ಸಂಖ್ಯೆ ತೀರ ಕಡಿಮೆ.ಅಂತಹ ಹಿರಿಯರ ಆತ್ಮೀಯ ಒಡನಾಟ ಕೆಲ ಸಮಯವಾದರೂ ನನಗೆ ದೊರೆಯಿತೆನ್ನುವುದು ನನಗೆ ದೊರೆತ ಭಾಗ್ಯವೆಂದೇ ಭಾವಿಸಿದ್ದೇನೆ.

ಮತ್ತೊಮ್ಮೆ ಆ ಹಿರಿಯ ಚೇತನಕ್ಕೆ ಸಾವಿರದ ನಮನಗಳು.

– ಗಿರಿಧರ ಕಾರ್ಕಳ

20.02.2024