ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ೧೯೨೩ ಜನವರಿ ೨೦ರಂದು ಜನಿಸಿದ ಶ್ರೀಯುತ ಸುಬ್ಬಣ್ಣ ರಂಗಣ್ಣ (ಸು.ರಂ.) ಎಕ್ಕುಂಡಿ ಕನ್ನಡದ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿಗಳಲ್ಲೊಬ್ಬರು. ೧೯೪೪ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕ ವೃತ್ತಿಯಲ್ಲಿ ತೊಡಗಿಸಿಕೊಂಡವರು. ಇವರ ಕೃತಿಗಳು ಕವನ ಸಂಕಲನ: ಶ್ರೀ ಆನಂದ ತೀರ್ಥರು , ಸಂತಾನ, ಹಾವಾಡಿಗರ ಹುಡುಗ ನೆರಳು, ಮುಂತಾದವು.

ಜನವರಿ ೨೦, ೨೦೨೩ ಗೆ ಅವರಿಗೆ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಡಾ.ಗೋವಿಂದ ಹೆಗಡೆ ಅವರಿಂದ ವಿಶೇಷ ಗಜಲ್ ಕಾವ್ಯ ನಮನ. ಇದರ ವಿಶೇಷತೆಯೆಂದರೆ ದಿ. ಸು ರಂ ಎಕ್ಕುಂಡಿ ಅವರ ಮೂವತ್ತಕ್ಕೂ ಹೆಚ್ಚು ಕವಿತೆಗಳ ಶೀರ್ಷಿಕೆಗಳನ್ನು ಇಲ್ಲಿ ಸಂಯೋಜಿಸಲಾಗಿದೆ.

ನಸುಕು ಸಂಪಾದಕ ವರ್ಗ

ಗೋದಿಯ ತೆನೆಗಳ ಮೇಲೆ ಕುಳಿತಿವೆ ಹಕ್ಕಿಗಳು
ರೊಟ್ಟಿ ಮತ್ತು ಕೋವಿಯ ಕಂಡಿವೆ ಹಕ್ಕಿಗಳು

ಹೊಳೆಯ ಬಳಿಯ ಒಂಟಿ ಮರದ ಕಥೆ ಗೊತ್ತೇ
ಅಲ್ಲಿದೆ, ಅಲ್ಲಿದೆ ನಮ್ಮ ಮನೆ – ಸಾರಿವೆ ಹಕ್ಕಿಗಳು

ಹಸೆಯ ರಥದ ಮೇಲೆ ಅದೋ ಬೆಳ್ಳಕ್ಕಿ ಹಿಂಡು
ಹಣತೆಯಿಡು ಏಳು, ಬೇಗ- ಕರೆದಿವೆ ಹಕ್ಕಿಗಳು

ಬಕುಲದ ಹೂವುಗಳ ಪ್ರೀತಿಯ ಸ್ವಸ್ತಿಸೂಕ್ತ
ಹೂ ಬಿಟ್ಟ ಮರವ ಹಂಬಲಿಸಿವೆ ಹಕ್ಕಿಗಳು

ಮಿಥಿಲೆಯ ಹಾದಿಯಲ್ಲಿ ನವ ಚೈತ್ರಾಗಮ
ಕಡಿದು ಬಿದ್ದವು ಕೋಳ, ಹಾರಿವೆ ಹಕ್ಕಿಗಳು

ಅತಿಥಿಯ ಹಸಿವಿಗೆ ಹಿಟ್ಟು ಮತ್ತು ಮಲ್ಲಿಗೆ
ಮುಗುಳುನಗೆ ಬೀರಿ ಶರಣೆಂದಿವೆ ಹಕ್ಕಿಗಳು

ದೀಪಸ್ತಂಭವೆ ಇವರು ದಿವ್ಯಾಗ್ನಿ ತಂದವರು
ನೆನೆಯುವೆವು ಮಹಾತ್ಮರ – ನಮಿಸಿವೆ ಹಕ್ಕಿಗಳು

ಮಿಸುನಿಜಿಂಕೆಯ ಸೆಳೆತದಾಚೆ ಮೈಯಿರದ ದನಿಗಳು
ಅಗ್ನಿಗೀತೆಯ ದಿವ್ಯ ಪವಾಡ ಮೆರೆದಿವೆ ಹಕ್ಕಿಗಳು

ಶ್ರಾವಣದ ಮುಗಿಲಿಂದ ವರ್ಷಾಮೃತ ‘ಜಂಗಮ’
‘ಪರಿಗ್ರಹಿಸಿರೀ ಪಾರಿಜಾತ’, ಪೂಜಿಸಿವೆ ಹಕ್ಕಿಗಳು

★ ಡಾ.ಗೋವಿಂದ ಹೆಗಡೆ