- ಸಮಯ,ಗಡಿಯಾರ ನಿಲ್ಸಿ ಮತ್ತು ಇತರ ಕವಿತೆಗಳು - ಆಗಸ್ಟ್ 21, 2022
- MCMXIV ಸಹಿತ ಚಂಪೋ ಅನುವಾದಿಸಿದ ೪ ಕವಿತೆಗಳು - ಮಾರ್ಚ್ 6, 2022
- ಖಲೀಲ್ ಝೀಬ್ರಾನ್ ಕವಿತೆ! - ಫೆಬ್ರುವರಿ 5, 2022
ತೆರೆ ಬಿದ್ದಮೇಲೆ
ಮುಗಿಯಿತೆಂದೆನಬೇಡಿ ಜೀವನ ತೆರೆ ಬಿದ್ದಮೇಲೆ
ಇನ್ನೂ ಬಹಳ ಬಾಕಿಯಿದೆ ಬದುಕು ತೆರೆ ಬಿದ್ದಮೇಲೆ
ನೆನೆಸಿ ನೆನಪಿಸಿ ನನ್ನ ಸೆಳೆಯುವಿರಿ ಮತ್ತೆ ಮತ್ತೆ
ಮುಗಿದ ಕಥೆಯ ಜೀವಂತವಾಗಿಸಿ ತೆರೆ ಬಿದ್ದಮೇಲೆ
ಸುಖದಿಂದ ಹೋದವರು ಬಹಳ ಕಡಿಮೆ ಇಲ್ಲಿ
ಈ ಹಾಳು ಲೌಕಿಕಕ್ಕೆ ನನ್ನ ಜಗ್ಗಬೇಡಿ ತೆರೆ ಬಿದ್ದಮೇಲೆ
ನಿಮ್ಮ ನೆಮ್ಮದಿ ನಿಮದು ನಿಮ್ಮ ದುಃಖ ನನದು
ಮುಗಿಯದ ವಿಷಾದಗಳ ಹಂಗೇಕೆ ತೆರೆ ಬಿದ್ದಮೇಲೆ
ಒಂದಿಲ್ಲೊಂದು ನೋವು ನಿರಂತರ ಈ ಬದುಕಲಿ
ನನ್ನ ವಿಯೋಗದಲಿ ನೆಲೆನಿಲ್ಲದಿರಿ ತೆರೆ ಬಿದ್ದಮೇಲೆ
ನಾನೆದ್ದು ಬರಲಾರೆ ಆದರೆ ಇರುವೆ ನಿಮ್ಮ ಜೊತೆ
ಅತ್ತು ಕರೆದು ಸತ್ತಿರುವೆ ಎನಿಸದಿರಿ ತೆರೆ ಬಿದ್ದಮೇಲೆ
ನಿಮ್ಮ ಪ್ರತಿ ಹೆಜ್ಜೆಯಲಿ ಮಮತೆ ಪ್ರೀತಿಗಳಿರಲಿ
ಸರಿ-ತಪ್ಪುಗಳ ಸಮರಕ್ಕೆಳೆಯದಿರಿ ತೆರೆ ಬಿದ್ದಮೇಲೆ
ಜೀವಿಸಿ ನಿಮ್ಮದೀಗ ಬದುಕು ತೆರೆ ಬೀಳುವ ಮುನ್ನ
ಮತ್ತೆ ಸಿಗದು ಈ ಭುವಿಯ ಜೀವನ ತೆರೆ ಬಿದ್ದಮೇಲೆ
ಇಹದ ಜಾತ್ರೆ ಮುಗಿದ ಮೇಲೇನಿದೆ ಹೇ ಚಂದ್ರ
ನವರಂಧ್ರಗಳ ಖುಲಾಸೆಯಷ್ಟೇ ತೆರೆ ಬಿದ್ದಮೇಲೆ
—-*—-
ನಿಂತಿದೆ
ಬದುಕು ಕಟ್ಟುವ ಬಯಕೆ ಮನೆಮಾಡಿ ನಿಂತಿದೆ
ತನ್ನಾಟ ಆಡಲು ವಿಧಿ ಸಂಚುಮಾಡಿ ನಿಂತಿದೆ
ಬಯಕಗಳೇನು ಕಳೆಯಂತೆ ಎಲ್ಲಂದರಲ್ಲಿ
ಸತ್ವಗಳಿರುವ ತತ್ವಗಳ ಬೆಳವಣಿಗೆ ನಿಂತಿದೆ
ನೆನೆಯುವ ನಾಲಿಗೆಗಳಿಗೇನು ಕಮ್ಮಿಯಿಲ್ಲಿ
ನುಡಿದಂತೆ ನಡೆವುದನೇ ಮರೆತು ನಿಂತಿದೆ
ವಿಷಯವಾಸಿ ಕಟ್ಟಡಗಳಿಗೆ ಬರವಿಲ್ಲಯಿಲ್ಲಿ
ಖುಷಿ ಕಸಿ ಮಾಡೋ ಕೌಲಿ ಒಣಗಿ ನಿಂತಿದೆ
ಜ್ಞಾನಕ್ಕೆ ಗುರುವಿಗೆ ಗುಣಕ್ಕೆ ಬಾಗುವುದೆಲ್ಲಿ
ಅಹಮ್ಮಿನ ಕೋಟೆಯಲಿ ಬದುಕು ನಿಂತಿದೆ
ಪ್ರತ್ಯಕ್ಷ-ಪ್ರಮಾಣಿಸಿ ನೋಡುವುದೆಲ್ಲಿ ಚಂದ್ರ
ಸಾಮರಸ್ಯ ಭಕ್ತಿಯ ರಸಹರಿವು ನಿಂತಿದೆ
—–*—–
ಏನೋ ಹೇಳಿದೆ ನನಗೆ
ಬರೆಯದೇ ಉಳಿದ ಆ ಸಾಲು ಏನೋ ಹೇಳಿದೆ ನನಗೆ
ಅಳಿಯದೇ ಉಳಿದ ಆ ನೆನಪು ಏನೋ ಹೇಳಿದೆ ನನಗೆ
ತಿಳಿಯದೇ ಹೋದ ವಿಷಯಗಳೆಷ್ಟೊ ಹಾದಿಯಲಿ
ಕವಲಾದ ದಾರಿಯ ಆರಂಭ ಏನೋ ಹೇಳಿದೆ ನನಗೆ
ಬದುಕಿನುದ್ದಕ್ಕೂ ಹಬ್ಬಿದ ನೋವಬಳ್ಳಿ ಕಲಿಸಿದವು
ಅಲ್ಲಿಯೇ ಅರಳಿದ ಹೂ ಏನೋ ಹೇಳಿದೆ ನನಗೆ
ಹೊಸತೇನಿಲ್ಲ ಜಗದಲಿ ಎಂದರಿತಾದ ಮೇಲೆಯೂ
ಹೊಸದಾಗಿ ಹಳೆಯ ನೆನಪು ಏನೋ ಹೇಳಿದೆ ನನಗೆ
ಬದುಕು ಕಷ್ಟವೆನಿಸಿದಾಗ ಸ್ಪೂರ್ತಿ ತುಂಬಲೇ ಇದ್ದ
ಜೀವವೊಂದು ಇಲ್ಲದೆಯೂ ಏನೋ ಹೇಳಿದೆ ನನಗೆ
ಜೀವನದ ಜೈಲಿಗೆ ಬೀಗಹಾಕಿ ಕೀಲಿ ಕಳೆದುಕೊಂಡ
ಆ ಅಲೆಮಾರಿಯ ಪಾಡು ಏನೋ ಹೇಳಿದೆ ನನಗೆ
ಅತ್ತರೂ ನಗುಮುಖವನೇ ತೋರಿಸುವ ಆ ಕನ್ನಡಿ
ಜೋಡು ಕಂಗಳ ವೇದನೆ ಏನೋ ಹೇಳಿದೆ ನನಗೆ
ಸಿಕ್ಕಾಗ ಸುಖಿಸಿ ಮತ್ತೆ ತಪಸ್ಸಿಗಿ ಕೂಡುವ ಸನ್ಯಾಸಿ
ಮನದೊಳ ಚಂಚಲ ಕ್ರಾಂತಿ ಏನೋ ಹೇಳಿದೆ ನನಗೆ
ಕಲಿಯಿಲ್ಲದ ಬಾಳು ಕಲೆಯಿಲ್ಲದ ಬದುಕಿಲ್ಲ ಜಗದಿ
ಪರಿಶುಭ್ರ ಬಾನು ಆ ಬಿಸಿಲು ಏನೋ ಹೇಳಿದೆ ನನಗೆ
ಸುಡು ಬಿಸಿಲಿಗೂ ಕರಗದ ಮಂಜಾಗು ನೀ ಚಂದ್ರ
ಉದುರಿದ ಎರಡನಿಗಳು ಏನೋ ಹೇಳಿದೆ ನನಗೆ
—–*—–
ಹೆಚ್ಚಿನ ಬರಹಗಳಿಗಾಗಿ
ಗಜಲ್
ಗಜಲ್
ಉತ್ತಮ ಯಲಿಗಾರ ಅವರ ಎರಡು ಗಜಲ್ಗಳು