- ಕರ್ಪೂರಿ ಠಾಕೂರ್ - ಮಾರ್ಚ್ 3, 2024
- ಗಝಲ್ ಲೋಕದಲ್ಲೊಂದು ಸುತ್ತು - ಮಾರ್ಚ್ 25, 2023
- ಬಿ. ಜಿ. ಎಲ್. ಸ್ವಾಮಿ ಮತ್ತು ಹೀಗೊಂದು ಪ್ರಣಯ ಪ್ರಸಂಗ - ನವೆಂಬರ್ 5, 2022
ಮುಂಬಯಿಯ ಸಾಯನ್ ನಲ್ಲಿ ಸ್ಥಾಪಿಸಲ್ಪಟ್ಟಿರುವ ತುಳು-ಕನ್ನಡಿಗರ ಹಾಗೂ ಸಮಸ್ತ ಕನ್ನಡಿಗರ ಹೆಮ್ಮೆಯ “ಬಿ. ಎಸ್. ಕೆ. ಬಿ. ಅಸೋಸಿಯೇಷನ್, ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಪುನರ್ ಪ್ರತಿಷ್ಠಾಪನೆ, ಮತ್ತು ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದ ಉದ್ಘಾಟನೆ !
ಒಂದು ಪರಿವರ್ತನೆಯ ಘಟ್ಟದಲ್ಲಿರುವ ಭಾರತದ ಅಯೋಧ್ಯೆಯಲ್ಲಿ ‘ರಾಮಮಂದಿರ ‘ಮತ್ತುಭಾರತದ ವಾಣಿಜ್ಯ ನಾಗರಿಯೆಂದೇ ಪ್ರಸಿದ್ಧಿಪಡೆದ ಮುಂಬಯಿನಲ್ಲಿ ಗೋಪಾಲ ಕೃಷ್ಣ ಮಂದಿರಗಳಂತಹ ಸನಾತನ ಧರ್ಮದ ಕುರುಹಾಗಿರುವ ಸಮಾಜ ಸುಧಾರಕ ನೆಲೆಯಲ್ಲಿ ಮಹತ್ವದ ಸ್ಥಾನಗಳಿಸಿರುವ ಈ ಮಂದಿರಗಳು ಭಾರತದ ಭವ್ಯ ಪರಂಪರೆಗೆ ಸಾಕ್ಷಿಯಾಗಿವೆ. ಮಹಾನಗರಕ್ಕೆ ಶ್ರೀಕೃಷ್ಣ ದೇವಾಲಯದ ನಿರ್ಮಾಣ, ಒಂದು ಅಮೋಘ ಮತ್ತು ಅವಿಸ್ಮರಣೀಯ ಕೊಡುಗೆಯಾಗಿದೆ. ಗೋಕುಲದ ಹೆಸರಿನಲ್ಲಿ ನವೀಕೃತವಾಗಿ ಸಿದ್ಧವಾಗಿರುವ ಈ ಈ ಸಾಂಸ್ಕೃತಿಕ ಭವನ ತುಳು-ಕನ್ನಡಿಗರ ಹೆಮ್ಮೆಯ ಕೊಡುಗೆಯಾಗಿದೆ. ಮುಂಬಯಿನಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ ಅನೇಕ ಕನ್ನಡವನ್ನು ಪೋಷಿಸುವ ಮತ್ತು ಪ್ರೋತ್ಸಾಹಿಸುವ ಕನ್ನಡಪರ ಸಂಸ್ಥೆಗಳಲ್ಲಿ ಮುಂಬಯಿನಲ್ಲೇ ಬಹಳ ವರ್ಷಗಳಿಂದ ನೆಲೆಸಿದ್ದ ಬ್ರಾಹ್ಮಣರದೇ ಆದ ಪ್ರತಿಷ್ಠಿತ ದಕ್ಷಿಣ ಕನ್ನಡ ಬ್ರಾಹ್ಮಣರ ಸಂಘ, (“ಬಿ. ಎಸ್. ಕೆ. ಬಿ. ಅಸೋಸಿಯೇಷನ್) ಒಂದಾಗಿರುವುದು ಮುಂಬಯಿ ಮಹಾನಗರದ ಚರಿತ್ರೆಯ ಪುಟಗಳಲ್ಲಿ ದಾಖಲಿಸಲು ಯೋಗ್ಯವಾದ ವಿಷಯವಾಗಿದೆ.
ಸಾಯನ್ ನಲ್ಲಿರುವ ದಕ್ಷಿಣ ಕನ್ನಡ ಬ್ರಾಹ್ಮಣರ ಬಿ. ಎಸ್. ಕೆ. ಬಿ. ಅಸೋಸಿಯೇಷನ್ ಮತ್ತು ಶ್ರೀ ಗೋಪಾಲ ಕೃಷ್ಣ ಟ್ರಸ್ಟ್ ನೂತನ ಕಟ್ಟಡ, ಗೋಕುಲ, ಮತ್ತು ‘ಗೋಪಾಲ ಕೃಷ್ಣದೇವರ ಪುನರ್ಪ್ರತಿಷ್ಠಾಪನೆ’ ಹಾಗೂ ‘ಬ್ರಹ್ಮ ಕಲಶೋತ್ಸವ’ ನಿಮಿತ್ತ, ಮೊದಲನೆಯ ದಿನ ೮, ಮೇ, ೨೦೨೨ ರ ರವಿವಾರ ಸಂಜೆ, ಪ್ರಸ್ತುತ ಉತ್ತರ ಮುಂಬಯಿ ನೆರೂಲ್ ನ ‘ಆಶ್ರಯ’ ಬಾಲಾಲಯ ದಲ್ಲಿರುವ ಶ್ರೀ. ಗೋಪಾಲ ಕೃಷ್ಣದೇವರ ದಿವ್ಯ ಮೂರ್ತಿ, ಮೆರವಣಿಗೆಯ ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆಯೊಂದಿಗೆ, ಸಾಯನ್ ನ ಗೋಕುಲ ಕಟ್ಟಡಕ್ಕೆ ವಿಧಿಪೂರ್ವಕವಾಗಿ ಆಗಮಿಸಿತು.
ಗಣ್ಯಾತಿಗಣ್ಯರ ಸಭಾ ಕಾರ್ಯಕ್ರಮ :
ವೇದಿಕೆಯಲ್ಲಿ ಗೋಪಾಲ ಶೆಟ್ಟಿ, ಲೋಕಸಭಾ ಸದಸ್ಯರು, ಮುಂಬಯಿ ಉತ್ತರ ವಲಯ, ನಳಿನ್ ಕುಮಾರ್ ಕಟೀಲು, ಕರ್ನಾಟಕ ರಾಜ್ಯಾಧ್ಯಕ್ಷ, ಭಾರತೀಯ ಜನತಾ ಪಕ್ಷ, ಬಿ. ಎಸ್ ಕೆ. ಬಿ. ಅಸೋಸಿಯೇಷನ್ ನ ಈಗಿನ ಅಧ್ಯಕ್ಷ, ಡಾ. ಸುರೇಶ್ ಎಸ್ ರಾವ್ ಅಲ್ಲದೆ, ಪರಮ ಪೂಜ್ಯ ಶ್ರೀ. ವಿದ್ಯಾಧೀಶ ತೀರ್ಥ ಶ್ರೀಪಾದರು, ಪಲಿಮಾರು ಮಠ, ಪರಮ ಪೂಜ್ಯ, ಶ್ರೀ. ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು, ಪೇಜಾವರ ಮಠ, ಪರಮಪೂಜ್ಯ ಶ್ರೀ. ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಕಾಣಿಯೂರು ಮಠ, ಪರಮಪೂಜ್ಯ ಶ್ರೀ. ಈಶಪ್ರಿಯ ತೀರ್ಥ ಶ್ರೀಪಾದರು, ಕಿರಿಯ ಸ್ವಾಮೀಜಿ, ಅದಮಾರು ಮಠ, ಪರಮ ಪೂಜ್ಯಶ್ರೀ. ಸಚ್ಚಿದಾನಂದ ಭಾರತಿ ತೀರ್ಥ, ಶ್ರೀಪಾದರು, ಎಡನೀರು ಮಠ, ಅತಿಥಿ ಗಣ್ಯರು, ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣ, ಅನುವಂಶಿಕ ಅರ್ಚಕರು, ಶ್ರೀಕ್ಷೇತ್ರ ಕಟೀಲು, ಐಕಳ ಹರೀಶ್ ಶೆಟ್ಟಿ, ಅಧ್ಯಕ್ಷರು ಜಾಗತಿಕ ಬಂಟರ ಸಂಘ, ಶಶಿಧರ ಶೆಟ್ಟಿ, ಉದ್ಯಮಿ, ಬರೋಡ ಶಶಿಧರ ಶೆಟ್ಟಿ, ಅಧ್ಯಕ್ಷರು, ತುಳುಕೂಟ, ವಸಾಯಿ, ಬಂಟರ ಸಂಘದ ಅಧ್ಯಕ್ಷ, ಚಂದ್ರಹಾಸ ಶೆಟ್ಟಿ, ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷ, ಹರೀಶ್ ಜಿ. ಅಮೀನ್, ಸಭೆಯಲ್ಲಿ ಉಪಸ್ಥಿತರಿದ್ದರು.
ಬಿ.ಎಸ್ ಕೆ. ಬಿ. ಅಸೋಸಿಯೇಷನ್ ನ ಇತಿಹಾಸ :
ಶುರುವಿಗೆ ಕೇವಲ ೧೦ ಸದಸ್ಯರಿಂದ ೧೯೨೫ ರಲ್ಲಿ ಶುರುವಾದ ಮೇಲೆ ತಿಳಿಸಿದ ಸಂಸ್ಥೆ, ಇಂದು ಶತಮಾನೋತ್ಸವದ ಸಡಗರದಲ್ಲಿ ಬ್ಯುಸಿಯಾಗಿದೆ. ಡಾ ಯು ಬಿ. ನಾರಾಯಣ ರಾವ್, ಕೆ. ಭುಜಂಗರಾವ್, ಎಂ. ಶ್ರೀನಿವಾಸರಾವ್, ಯು ರಾಮಚಂದ್ರ ಆಚಾರ್, ಯು.ವಿ. ಉಪಾದ್ಯಾಯ, ಬಿ. ಸುಬ್ಬರಾವ್, ಬಿ. ಎಸ್ ತಂತ್ರಿ, ಡಾ. ಯು. ಆರ್. ರಾವ್, ಕೆ. ಎಸ್ ಏನ್. ಹೆಬ್ಬಾರ್, ಹಾಗೂ ಕೇಶವಯ್ಯ ಮುಂತಾದವರು ನೌಕರಿಗಾಗಿ ಮುಂಬಯಿನಗರಕ್ಕೆ ಬಂದವರು. ಈ ಮಹನೀಯರು ಆಗಲೇ ನೆಲೆಸಿದ್ದ ದಕ್ಷಿಣ ಕನ್ನಡ ಬ್ರಾಹ್ಮಣರನ್ನು ಒಂದುಗೂಡಿಸಿ, ಒಂದು ಸಂಘವನ್ನು ಸ್ಥಾಪಿಸುವ ಯೋಜನೆಯನ್ನು ಹಾಕಿಕೊಂಡು ಆ ಸಮಯದ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬ್ರಾಹ್ಮಣ ಸಮುದಾಯದ ೮ ಪಂಗಡಗಳನ್ನು ಸಂಘಟಿಸಿದರು. ಅದರ ವಿವರ ಹೀಗೆ ಕೆಳಗೆ ಕಂಡಂತಿದೆ.
ಶಿವಳ್ಳಿ, ಸ್ಥಾನಿಕ, ಕೋಟ, ಹವ್ಯಕ, ಕುಂದಾವರ, ಕೋಟೇಶ್ವರ, ಚಿತ್ಪಾವನ ಹಾಗೂ ಕರಾಡ್ ಬ್ರಾಹ್ಮಣರೂ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.
ಡಾ ಯು ಬಿ. ನಾರಾಯಣ ರಾವ್, ಸಂಸ್ಥೆಯ ಪ್ರಥಮ ಅಧ್ಯಕ್ಷರು, ಬಪ್ಪನಾಡು ಸುಬ್ಬರಾವ್, ಗೌರವ ಕಾರ್ಯದರ್ಶಿ, ಬಿ. ಎಸ್ ತಂತ್ರಿ, ಹಾಗೂ ಕೇಶವಯ್ಯನವರು ಕೋಶಾಧಿಕಾರಿಗಳಾಗಿ ಆಯ್ಕೆಗೊಂಡರು. ಅಂದಿನ ದಿನಗಳಲ್ಲಿ ಸದಸ್ಯತ್ವದ ದೇಣಿಗೆ ೩ ರೂಪಾಯಿಗಳಾಗಿತ್ತು. ಅದನ್ನೂ ಸಂಗ್ರಹಿಸುವುದು ಕಷ್ಟವಾಗುತ್ತಿತ್ತು. ಆದ್ದರಿಂದ ಸುಮಾರು ೧೧ ವರ್ಷಗಳ ಕಾಲ ಸಂಘದಲ್ಲಿ ಯಾವ ಚಟುವಟಿಕೆಗಳನ್ನೂ ಆಯೋಜಿಸಲು ಸಾಧ್ಯವಾಗಲಿಲ್ಲ.
೧೯೨೫ ರಲ್ಲಿ ಕಾರ್ಯಕಾರಿ ಸಮಿತಿಯೊಂದನ್ನು ರಚಿಸಿ ಕಾರ್ಯಾರಂಭ ಮಾಡಲಾಯಿತು. ಹೀಗೆಯೇ ಮುಂದು ವರೆದ ಸಂಘವು ಸುಮಾರು ಒಂಬತ್ತೂ ವರೆ ದಶಕಗಳ ಅಮೂಲ್ಯ ಸೇವೆಗಳನ್ನು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಮಾಡುತ್ತಾ ಬಂದಿದೆ ಎಂಬುದನ್ನು ತಿಳಿಸಲು ಹರ್ಷವಾಗುತ್ತದೆ.
ಆ ಕಾಲದಲ್ಲಿ ಬೊಂಬಾಯಿನಗರದ ಚೌಪಾಟಿ ಜಿಲ್ಲೆಯಲ್ಲಿ ಡಾಕ್ಟರಾಗಿದ್ದ ಡಾ. ಯು. ಆರ್ ರಾವ್, ಹಾಗು ಕೆ. ಕೃಷ್ಣ ಹೆಬ್ಬಾರ್, ಆರ್ಕುಳ ವೆಂಕಟರಾವ್, ಪಿ. ಮುರಾರಿ ಭಟ್, ಹಾಗೂ ಆರ್. ಕೆ. ಕಾರಂತ್, ಮತ್ತಿತರ ಮಹನೀಯರು ತಮ್ಮ ಕಠಿಣ ಪರಿಶ್ರಮದಿಂದ ಸಂಸ್ಥೆಯನ್ನು ಪುನಃಚೇತನ ಗೊಳಿಸಿದರು.
ಇದುವರೆಗೂ , ಅಸ್ಥಿತ್ವದಲ್ಲಿದ್ದ ಗೋಕುಲ ಕಟ್ಟಡ ನಿರ್ಮಾಣ ೧೯೫೮ ರಲ್ಲಿ ನಡೆಯಿತು. ಆರ್ಥಿಕ ತೊಂದರೆಗಳ ಅಡಚಣೆಯಿಂದಾಗಿ ಕೃಷ್ಣ ಮಂದಿರದ ನಿರ್ಮಾಣವಾಗಲಿಲ್ಲ. ೧೯೬೨ ರಲ್ಲಿ ಯು. ವಿ. ಉಪಾಧ್ಯಾಯರವರ ಮೇಲುಸ್ತವಾರಿಯಲ್ಲಿ ಶ್ರೀ ಕೃಷ್ಣಮಂದಿರವು ಸೇರಿದಂತೆ ಗೋಕುಲ ಕಟ್ಟಡ ನಿರ್ಮಾಣವಾಯಿತು. ೧೯೬೨ ರ ಮಾರ್ಚ್ ೧೨ ರಂದು ಅಮೃತಶಿಲೆಯ ಶ್ರೀ ಗೋಪಾಲ ಕೃಷ್ಣ ಮೂರ್ತಿಯ ಪ್ರತಿಷ್ಠಾಪನೆಯಾಯಿತು. ಅದಮಾರು ಮಠಾಧೀಶ, ಶ್ರೀ ವಿಭುದೇಶ ತೀರ್ಥ ಸ್ವಾಮಿಗಳು ಮತ್ತು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ್ವರ ತೀರ್ಥರ ದೇಣಿಗೆಯಿಂದಾಗಿ ಈ ಕಾರ್ಯ ಸಾಧ್ಯವಾಯಿತು. ೫,೫೦೦ ಜನ ಸದಸ್ಯರನ್ನು ಹೊಂದಿದ ಈ ಸಂಘ, ಮತ್ತು ಬೃಹದ್ ಮುಂಬಯಿನಗರದ ಅಸಂಖ್ಯಾತ ಭಕ್ತಜನರಿಗೆ ಆರಾಧ್ಯ ದೈವವಾಗಿ ಶ್ರೀ ಗೋಪಾಲಕೃಷ್ಣ ಸ್ವಾಮಿ, ಸದಾ ಅಭಯ ಹಸ್ತವನ್ನು ನೀಡಿ ಅನುಗ್ರಹಮಾಡುತ್ತಿದ್ದಾನೆ. ದಾಸವರೇಣ್ಯ ಶ್ರೀ ಪುರುಂದರ ದಾಸರ ಮನಸ್ಸಿನಲ್ಲೇ ಮನೆಮಾಡಿದ ಶ್ರೀ ಗೋಪಾಲ ಕೃಷ್ಣ ಮೂರ್ತಿ, ಹಲವು ದಶಕಗಳ ನಂತರ ಗೋಕುಲದಲ್ಲಿ ನೆಲಸಿ, ಸಮಸ್ತ ಮುಂಬಯಿವಾಸಿಗಳಿಗೆ ಅನುಗ್ರಹ ನೀಡುತ್ತಿದ್ದಾನೆ.
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ||ಪ||
ಕಷ್ಟಗಳೆಲ್ಲಾ ಪರಿಹರಿಸಿ ಮನ-
ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂಥ || ಅ||
ಮಸ್ತಕದಲಿ ಮಾಣಿಕ್ಯದ ಕಿರೀಟ
ಕಸ್ತೂರಿ ತಿಲಕದಿಂದೆಸೆವ ಲಲಾಟ
ಶಿಸ್ತಿಲಿ ಕೊಳಲನೂದುವ ಓರೆ ನೋಟ
ಕೌಸ್ತುಭ ಎಡಬಲದಲಿ ಓಲಾಟ || ೧||
ಮಘಮಘಿಸುವ ಸೊಬಗಿನ ಸುಳಿಗುರುಳು
ಚಿಗುರು ತುಳಸಿ ವನಮಾಲೆಯ ಕೊರಳು
ಬಗೆ ಬಗೆ ಹೊನ್ನುಂಗುರವಿಟ್ಟ ಬೆರಳು
ಸೊಬಗಿನ ನಾಭಿಯ ತಾವರೆ ಯರಳು ||೨||
ಉಡುದಾರ ವಡ್ಡ್ಯಾಣ ನಿಖಿಲಾಭರಣ
ಉಡುಗೆ ಪೀತಾಂಬರ ರವಿಶತ ಕಿರಣ
ಕಡಗ ನೂಪುರ ಗೆಜ್ಜೆಗಳನಿಟ್ಟ ಚರಣ
ಒಡೆಯ ಶ್ರೀಪುರಂದರ ವಿಠಲನ ಕರುಣ || ೩||
ಸಂಸ್ಥೆಯು ೧೯೫೩ ರಲ್ಲಿ ರಜತ ಮಹೋತ್ಸವ, ೧೯೭೫ ರಲ್ಲಿ ಸ್ವರ್ಣಮಹೋತ್ಸವ, ೧೯೮೫ ರಲ್ಲಿ ವಜ್ರ ಮಹೋತ್ಸವ, ವರ್ಷ ೨೦೦೦ ದಲ್ಲಿ ಅಮೃತ ಮಹೋತ್ಸವಗಳನ್ನು ಕ್ರಮವಾಗಿ ಆಚರಿಸುತ್ತ ಬಂದಿದೆ. ೨೦೨೫ ರಲ್ಲಿ ಶತಮಾನೋತ್ಸವದ ಹಾದಿ ಕಾಯುತ್ತಿದೆ. ಯುವ ವಿಭಾ, ಮಹಿಳಾ ವಿಭಾಗ, ಕಲಾ ವೃಂದ, ಭಜನ ಮಂಡಳಿ, ಯಕ್ಷಗಾನ ಮಂಡಳಿ, ಸಂಘದ ಮುಖವಾಣಿ ಗೋಕುಲ ವಾಣಿ ಪತ್ರಿಕೆಯನ್ನು ಡಾ. ವ್ಯಾಸರಾವ್ ನಿಂಜೂರ್ ನಿರ್ವಹಿಸುತ್ತಿದ್ದಾರೆ. ಹಿರಿಯ ನಾಗರಿಕರಿಗೆ ಒಂದು ನೆಮ್ಮದಿಯ ತಾಣವನ್ನು ನಿರ್ಮಾಣಮಾಡುವ ಯೋಜನೆ ಹಮ್ಮಿಕೊಳ್ಳಲಾಯಿತು.
ದಿ/ ಬೈಲೂರು ಬಾಲ ಚಂದ್ರರಾವ್, ದಿ/ ಎ. ಕೆ. ಹೆಬ್ಬಾರ್, ಮತ್ತಿತರ ಪ್ರಾಮಾಣಿಕ ಪ್ರಯತ್ನದ ಫಲವಾಗಿ, ನವಿ ಮುಂಬಯಿನಲ್ಲಿ ‘ಸಿಡ್ಕೊ ಜಾಗ’ವನ್ನು ಪಡೆಯಲಾಯಿತು. ಸುಮಾರು ೧೦ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾದ ಕಟ್ಟಡಕ್ಕೆ ಎ. ಕೆ. ಹೆಬ್ಬಾರ್, ಡಾ. ಸುರೇಶ ಎಸ್. ರಾವ್, ಕಟೀಲು, ಲಕ್ಷ್ಮೀಶ್ ಆಚಾರ್ಯ, ವಿಖ್ಯಾತ್ ಹೆಬ್ಬಾರ್, ಗುರುರಾಜ್ ಹೆಬ್ಬಾರ್, ಪಿ, ಎಚ್. ಶ್ರೀನಿವಾಸ ಆಚಾರ್ಯ, ಮುಂತಾದ ಗಣ್ಯಾಥಿ- ಗಣ್ಯ ಸಮಾಜ ಬಾಂಧವರ ಹಾಗೂ ಇತರ ಸಮುದಾಯದ ಉದಾರಿ ದಾನಿಗಳ ತನು-ಮನ-ಧನದ-ಉದಾರ ದಾನದಿಂದ ದೇಣಿಗೆಗಳಿಂದ ಹವಾನಿಯಂತ್ರಿತ ಸಭಾಗೃಹ, ಕಿರು ಸಭಾಗೃಹ, ಹಾಗೂ ಸುಮಾರು ೫೦ ಹಿರಿಯ ನಾಗರಿಕರು ನೆಮ್ಮದಿಯಿಂದ ನೆಲೆಸಲು ಅನುಕೂಲವಾಗುವಂತಹ ‘ಆಶ್ರಯ’ ತಲೆಯೆತ್ತಿ ನಿಂತಿತು.
ಗೋಕುಲ್ ಕಟ್ಟಡದ ಪುನರ್ ನಿರ್ಮಾಣ ಯೋಜನೆ ಬಹಳ ಸಮಯದಿಂದ ಸದಸ್ಯರ ಹೃದಯದಲ್ಲಿತ್ತು. ೫೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ೭ ಅಂತಸ್ತಿನ ಮಹಡಿ ಕಟ್ಟಡದ ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳುವ ಹಂತದಲ್ಲಿದೆ. ೨೨೫ ಆಸನಗಳ ಹವಾ ನಿಯಂತ್ರಿಕ ಸಭಾ ಗೃಹ ತಯಾರಾಗಿದೆ. ಎರಡು ದೊಡ್ಡ ಸಭಾಂಗಣಗಳು, ಭೋಜನ ಗೃಹ, ೩ ಆಧುನಿಕ ಪಾಕಶಾಲೆಗಳು, ಸುಸಜ್ಜಿತ ವಾಚನಾಲಯ, ೫೦ ಆಸನದ ಸುಸಜ್ಜಿತ ಸಮಾಲೋಚನಾ ಕೊಠಡಿ, ೧೨ ಅತಿಥಿ ಕೊಠಡಿಗಳು, ಆಡಳಿತ. ಕಚೇರಿ, ಒಲಕ್ರೀಡಾಂಗಣ,ವಿಶಾಲ ವಾದ ಟೆರೇಸ್, ಅತ್ಯಾಧುನಿಕ ಲಿಫ್ಟ್ ವ್ಯವಸ್ಥೆ,ಎರಡು ತಳಮಹಡಿಗಳಲ್ಲಿ ವಾಹನಗಳ ನಿಲುಗಡೆಗಾಗಿ ವ್ಯವಸ್ಥೆ ಮಾಡಲಾಗಿದೆ.
ಗೋಕುಲದ ಕೃಷ್ಣದೇವಾಲಯ
ತ್ರಿಭಂಗಿಯಲ್ಲಿ ನಿಂತು ಕೊಳಲೂದುತ್ತಿರುವ ಹಾಲು ಬಿಳುಪಿನ ಅಮೃತಶಿಲೆಯ ಶ್ರೀ ಗೋಪಾಲ ಕೃಷ್ಣ ಮೂರ್ತಿಯ ಪ್ರತಿಷ್ಠಾಪನೆಯಾಗಿದೆ. ನೂತನ ಕಟ್ಟಡದ ಶಿಲಾನ್ಯಾಸ ೨೦೧೯ ರ ಜೂನ್ ೧೨ ರಂದು ವಿಧಿಪೂರ್ವಕವಾಗಿ ಜರುಗಿತು. ಹೊಸ ಗೋಕುಲ ಕಟ್ಟಡದಲ್ಲಿ ದಕ್ಷಿಣ ಕನ್ನಡ ಶೈಲಿಯಲ್ಲಿ ನಿರ್ಮಿಸಲ್ಪಟ್ಟ ದೇವಸ್ಥಾನ ಹಲವು ವಿಶೇಷಗಳ ನೆಲೆವೀಡಾಗಿದೆ. ಸದ್ಯ ಬಾಲಾಲಯದಲ್ಲಿರುವ ಶ್ರೀ ಗೋಪಾಲ ಕೃಷ್ಣ ಮೂರ್ತಿ, ಸುಪ್ರಸಿದ್ಧ ವಾಸ್ತುತಜ್ಞರ ಮೇಲ್ವಿಚಾರಣೆಯಲ್ಲಿ ರೂಪುಗೊಂಡು ಕುಸುರಿ ಕೆತ್ತನೆಗಳು, ದಾರು. ಶಿಲ್ಪಗಳು,ನಯನ ಮನೋಹರ ಗೋಪುರ ವಿನ್ಯಾಸದಿಂದ ವಿಜೃಂಭಿಸುವ ಪ್ರತಿಷ್ಠಾಪನೆ ಗೊಳ್ಳಲಿದ್ದಾನೆ.
ಒಟ್ಟು ೪೪ ನಾಮಾಂಕಿತ ದೇವತಾ ಮೂರ್ತಿಗಳೊಂದಿಗೆ ಮಂದಿರ ಗರ್ಭ ಗೃಹ, ದ್ವಾರಕಂಬದ ಗೋಪುರದ ಹಾಗೂ ಮುಖದ್ವಾರದ ಪ್ರತಿಯೊಂದೂ ಶಿಲೆಗಳೂ ಸದಾಕಾಲ ಕೃಷ್ಣ ಕೃಷ್ಣ ಎಂದು ನಾಮಸ್ಮರಣೆ ಮಾಡುತ್ತಿವೆಯೋ ಎನ್ನುವ ವಾತಾವರಣ ಮೂಡಿದೆ. ಆಧುನಿಕ ಸೌಲಭ್ಯಗಳು, ಸವಲತ್ತು ಗಳನ್ನೊಳಗೊಂಡ ಸುಸಜ್ಜಿತ ನವೀಕೃತ ಸಾಂಸ್ಕೃತಿಕ ಭವ್ಯ ಭವನ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣಗೊಂಡ ಈ ಶ್ರೀಕೃಷ್ಣ ದೇವಾಲಯ ಮುಂಬಯಿಯ ಆಸ್ತಿಕ ಭಕ್ತಸ್ತೋಮಕ್ಕೆ ಗೋಕುಲದ ಅಮೂಲ್ಯ ಕೊಡುಗೆಯಾಗಿದೆ.
ಹೆಚ್ಚಿನ ಬರಹಗಳಿಗಾಗಿ
ಗಾಂಧಿ-ಸಿದ್ಧಾರೂಢರ ಭೇಟಿಗೆ ನೂರಾ ಮೂರು ವರ್ಷ
ಚಿಂತಾಮಣಿ ಕೊಡ್ಲೆಕೆರೆ ಹೊಸ ಕಥಾ ಸಂಕಲನ
ಮಾರನಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಸನ್ಮಾನ