ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬಿ. ಜಿ. ಎಲ್. ಸ್ವಾಮಿ ಮತ್ತು ಹೀಗೊಂದು ಪ್ರಣಯ ಪ್ರಸಂಗ

ಎಚ್ಚಾರೆಲ್

ಆಗ ಸನ್ನಿವೇಶ ಬಹಳ ಅನುಕೂಲವಾಗಿತ್ತು. ವಸಂತ ಋತು. ಇಳಿಸಂಜೆ, ಕುಸುಮಿತ ಸಮಯ. ಮರದ ಕೊಂಬೆಯಮೇಲೆ ಎರಡು ಹಕ್ಕಿಗಳು, ಪ್ರೇಮ ವಿನಿಮಯದಲ್ಲಿ ತೊಡಗಿದ್ದವು. ಗಂಡು ಹಕ್ಕಿ ತನ್ನ ಗರಿಗಳನ್ನು ಹರಡಿ, ಸೊಬಗು ಬಿನ್ನಾಣಗಳನ್ನು ಮೆರೆಸಿ, ಪ್ರೇಯಸಿಯ ಒಲವನ್ನು ನಿರೀಕ್ಷಿಸುತ್ತಿತ್ತು. ಕೊಂಬೆಯಲ್ಲಿನ ಹೂಗಳು ಅರಳಿ ಸೌರಭವನ್ನು ತಿಳಿಗಾಳಿಯೊಡನೆ ಬೆರೆಸಿ ಮಧುಕೋಶವನ್ನು ತೆರೆದಿಟ್ಟಿದ್ದವು. ವಂಶಾಭಿವೃದ್ಧಿಯನ್ನು ಸಾಧಿಸುವುದಕ್ಕಾಗಿ, ಹುಳುಗಳಿಗೆ ಆಮಂತ್ರಣ ಕೊಟ್ಟಿದ್ದವು. ಈ ಕಾರ್ಯವನ್ನು ಆಗ ಮಾಡಿಸಲು ಬಂದ ಪತಂಗಗಳು ತಮ್ಮ ಪ್ರಿಯರನ್ನು ಸೇರಿಸಿಕೊಂಡು ಪ್ರಣಯ ಲೀಲೆಯಲ್ಲಿ ನಿರತವಾಗಿದ್ದವು. ಸನ್ನಿವೇಶ ಪ್ರೇಮಮಯವಾಗಿತ್ತು.

ಪ್ರಕೃತಿ ತರುವ ‘ಅಂಬಿಯನ್ಸ್’ ಗ್ರಹಿಸುವ ಶಕ್ತಿ ಅಗಾಧ. ಆ ಮರದ ಕಾಂಡ ಕವಲೊಡೆದ ಎಡೆಯಲ್ಲಿ ಹೆಣ್ಣು ಜೇಡ ಬಲೆಬೀಸಿದೆ. ಅದು ಉಭಯ ಪಂಡಿತೆ ; ಬಲೆ ಬೀಸುವುದರಲ್ಲಿ ಗಂಡು-ಜೇಡಕ್ಕಿಂತ ಹೆಚ್ಚು ನೈಪುಣ್ಯತೆ ಅದಕ್ಕಿತ್ತು. ನಿವಾಸವನ್ನು ಕಟ್ಟಿಕೊಳ್ಳುವುದರಲ್ಲಿ ಮಾನವ ವಾಸ್ತ ಶಿಲ್ಪಿಗಳಿಗಿಂತ ಹೆಚ್ಚು ಕೌಶಲವನ್ನು ಅದು ಹೊಂದಿತ್ತು. ಅದು ನಿರ್ಮಿಸಿಕೊಂಡ ಕಟ್ಟಡ ತನಗೆ ಮಾತ್ರ ವಾಸಸ್ಥಾನ ; ಮಿಕ್ಕವರಿಗೆ ಅದು ‘ಮೃತ್ಯು ಪಂಜರ’. ಸುಮಾರು ಎರಡು ಅಡಿಗಳಷ್ಟು ಅಗಲವಿರುವ ಆ ಮನೆಯಮಧ್ಯದಲ್ಲಿ ಅದು ಆಹಾರಕ್ಕಾಗಿ ಹೊಂಚುಹಾಕುತ್ತ ಕುಳಿತಿದೆ. ಗಂಡು ಜೇನು ಈ ಪ್ರೇಮಮಯವಾದ ಈ ಸನ್ನಿವೇಶದಲ್ಲಿ ಬಲೆಯ ಎಡೆಗೆ ಹರಿದುಬಂದಿತು. ಬಲೆಯ ಒಂದು ತಂತುವನ್ನು ಅಲುಗಿಸಿ, ತಾನು ಬಂದಿರುವ ಸಂದೇಶವನ್ನು ಬಲೆಯ ಮಧ್ಯದಲ್ಲಿ ಕುಳಿತಿರುವ ರಾಣಿಗೆ ತಿಳಿಸಿತು. ಗಂಡು ಜೇಡ ತಂತುವನ್ನು ಇನ್ಯಾರಿಂದಲೂ ಸಾಧ್ಯವಾಗದ ಒಂದು ಪ್ರತ್ಯೇಕವಾದ ರೀತಿಯಲ್ಲಿ ಮಾತ್ರ ಅಲುಗಿಸಿತು. ಇದರಿಂದ ಪ್ರೇಯಸಿಗೆ ತನ್ನ ಪ್ರಾಣನಾಥನ ಆಗಮನ ತಿಳಿಯಿತು. ಹೆಣ್ಣು ಜೇಡ ಒಮ್ಮೆ ಎರಡು ಹೆಜ್ಜೆ ಗಂಡು ಜೇಡಿನ ಕಡೆಗೆ ಸರಿಯಿತು. ಗಂಡು ಜೇಡ ಮುಂದೆ ಬಂದು ಹೆಣ್ಣನ್ನು ಸೇರಿತು. ಸಮಾಗಮವಾಯಿತು ! ‘ವಿಶ್ವ ಸಂಕಲ್ಪ ನೆರೆವೇರಿತು’. ! ಕೆಲವು ನಿಮಿಷಗಳ ತರುವಾಯ, ಒಂದನ್ನೊಂದು ಅಗಲಿದವು. ಗಂಡು ಜೇಡು ಕೃತಾರ್ಥತೆಯಿಂದ ಆ ಜಾಗವನ್ನು ಬಿಟ್ಟು ಹೊರಹೊರಡುವುದಕ್ಕೆ ಒಂದೆರಡು ಹೆಜ್ಜೆ ಮುಂದಿಟ್ಟಿತು. ಅಷ್ಟರಲ್ಲಿಯೇ ಹೊಂಚುಹಾಕಿ ಕಾಯುತ್ತಿದ್ದ ಹೆಣ್ಣು ಜೇಡ ಅದರಮೇಲೆ ಹಾರಿ, ಕಚ್ಚಿತು, ಕೊಂದಿತು, ತಿಂದಿತು !


ಸ್ವಾಮಿಯವರು ಒಬ್ಬ ಅಸಾಮಾನ್ಯ ವಿಜ್ಞಾನಿ. ಮನೆಯ ವಾತಾವರಣದಲ್ಲಿದ್ದುಕೊಂಡೇ ತಂದೆಯವರ (ಡಿವಿಜಿ) ಮಾರ್ಗದರ್ಶನದಲ್ಲಿ ದೊರೆತ ಹಳೆಯ ವೈಜ್ಞಾನಿಕ ಉಪಕರಣಗಳನ್ನು ಬಳಸಿ ಸಂಶೋಧನೆ ಮಾಡಿ ೧೯೪೭ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ‘ಡಿ. ಎಸ್ಸಿ. ಪದವಿ ಗಳಿಸಿದರು. ಮುಂದೆ ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿಶ್ವವಿಖ್ಯಾತ ಸಸ್ಯವಿಜ್ಞಾನಿ ‘ಡಾ. ಇರ್ವಿನ್ ಬೈಲಿ’ ಯವರ ಮಾರ್ಗದರ್ಶನದಲ್ಲಿ ಕೆಲಸಮಾಡಿ ಪಿ. ಎಚ್. ಡಿ. ಪದವಿಗಳಿಸಿ’ದರು. ಸ್ವಲ್ಪ ಸಮಯದನಂತರ ಅವರು ತಂದೆಯವರ ಆಣತಿಯಂತೆ ಭಾರತಕ್ಕೆ ಬಂದು ಮದ್ರಾಸ್ ನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನಿಯುಕ್ತರಾದರು. ೨೫ ವರ್ಷಗಳ ಪ್ರೆಸಿಡೆನ್ಸಿ ಕಾಲೇಜ್ ಜೀವನದಲ್ಲಿ ೩ ವರ್ಷಗಳ ಕಾಲ ಪ್ರಾಂಶುಪಾಲರಾಗಿಯೂ ದುಡಿದು ನಿವೃತ್ತರಾದರು. ಮುಂದೆ ೧೯೭೯ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿ ಅನೇಕ ಮಹತ್ವದ ಸಂಶೋಧನೆಗಳನ್ನು ಮಾಡಿದರು. ಹಲವಾರು ಪುಸ್ತಕಗಳನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆದರು.

ಬಿ. ಜಿ. ಎಲ್ ಸ್ವಾಮಿಯವರು ಒಟ್ಟಾರೆ ಬರೆದದ್ದು ೨೦ ಪುಸ್ತಕಗಳು. ೧೯೮೦ ರಲ್ಲಿ ಸ್ವಾಮಿಯವರು ತೀರಿಕೊಂಡ ಬಳಿಕ ಅವರ ಸ್ನೇಹಿತರು, ಹಿಂಬಾಲಕರು, ಸೇರಿ ಹಲವರ ಹತ್ತಿರ ಸಿಕ್ಕ ಹಸ್ತಪ್ರತಿ ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸಿದ ಪುಸ್ತಕಗಳ ಸಂಖ್ಯೆ ಅನೇಕ. ಅದರಲ್ಲಿ ಅವರ ಇತ್ತೀಚಿನ ಪುಸ್ತಕ ‘ಮೀನಾಕ್ಷಿ ಸೌಗಂಧ’ವೆಂಬ ಹೊತ್ತಿಗೆ ಪ್ರಮುಖವಾದುದು. ಈ ಪುಸ್ತಕವನ್ನು ಓದಿದಮೇಲೆ ಸ್ವಾಮಿಯವರ ವ್ಯಕ್ತಿತ್ವದ ದರ್ಶನವಾಗುತ್ತದೆ. ಅವರ (Intense life) ಬದುಕಿನ ತೀವ್ರ ವಿಸ್ತಾರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.

ಬಿ.ಜಿ.ಎಲ್ ಸ್ವಾಮಿಯವರ ಸಾಹಿತ್ಯ ಕೃಷಿ ಅನನ್ಯ, ಅನುಪಮ ಮತ್ತು ಮತ್ತೆ ಮತ್ತೆ ನೆನೆಯುವಂತಹದು. ಅವರೇ ಹೇಳುವಂತೆ ತಮಗೆ ಇಷ್ಟವಿಲ್ಲದ್ದನ್ನು ಮಾಡಲೇ ಇಲ್ಲ. ಇಷ್ಟವಾದುದನ್ನು ತೀವ್ರವಾಗಿ ತಲೆಗೆ ಹಚ್ಚಿಕೊಂಡು ಅದರಲ್ಲಿ ಅದ್ವಿತೀಯ ಸಾಧನೆಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ವೃತ್ತಿಯಿಂದ ಒಬ್ಬ ಸಸ್ಯಶಾಸ್ತ್ರಜ್ಞ. ಬಿ.ಎಸ್ಸಿ ಮಾಡಿ ‘ಮನೆಯನ್ನೇ ಲ್ಯಾಬೋರೇಟೋರಿ’ಯಾಗಿ ಮಾಡಿಕೊಂಡು ಸಂಶೋಧನೆ ಮಾಡಿ, ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಪಿ. ಎಚ್. ಡಿ ಮಾಡಿ, ತಂದೆ ಡಿ. ವಿ. ಜಿ. ಯವರ ಆದೇಶದ ಮೇಲೆ ಭಾರತಕ್ಕೆ ವಾಪಸ್ಸಾಗಿ, ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ೩೭ ವರ್ಷಗಳ ಕಾಲ ದುಡಿದು, ನಿವೃತ್ತರಾದಮೇಲೆ ಮೈಸೂರಿಗೆ ವಾಪಸ್ಸಾದರು.

DIVINE FEELING: B. G. L. Swamy (Kannada: ಬಿ.ಜಿ.ಎಲ್. ಸ್ವಾಮಿ)

ನಿವೃತ್ತರಾದಮೇಲೆಯೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಸ್ಯಶಾಸ್ತ್ರದ ಮೇಲೆ ಅನೇಕ ಮಹತ್ವದ ಸಂಶೋಧನೆಗಳನ್ನು ಮಾಡಿ, ಅಲ್ಲಿಯೇ ನಿಧನರಾದರು. ಆ ಸಮಯದಲ್ಲಿ ತಮ್ಮ ಮನದಾಳದಲ್ಲಿ ನೆಲೆಕಾಣದೆ ಹುದುಗಿದ್ದ ಅಸಕ್ತಿಗಳನ್ನು ಸಾಕಾರಗೊಳಿಸಿಕೊಂಡರು. ಶಾಸನಗಳ ಅಧ್ಯಯನ, ಸಾಹಿತ್ಯ, ಸಂಗೀತ, ಕಲೆ ಮೊದಲಾದ ಹಲವಾರು ವಿಷಯಗಳು ಆ ಸಾಲಿನಲ್ಲಿವೆ. ಈ ನಿಟ್ಟಿನಲ್ಲಿ “ಮೀನಾಕ್ಷಿ ಸೌಗಂಧ” ವೆಂಬ ಪುಸ್ತಕದ ಬಗ್ಗೆ ಹೇಳಲು ಹೆಮ್ಮೆಯಾಗುತ್ತದೆ. ೨೨ ಬಿಡಿ ಲೇಖನಗಳನ್ನು ಹಲವಾರು ಪ್ರಕಟಿತ ಬಿಡಿ ಲೇಖನಗಳನ್ನು ಒಳಗೊಂಡ ಸಂಪಾದಿಸಿ ಬರೆದ ಈ ಪುಸ್ತಕಮಾಲೆಯಲ್ಲಿ ಪ್ರಕಟವಾಗದೆ ಹಸ್ತಪ್ರತಿಯ ರೂಪದಲ್ಲಿರುವ ಲೇಖನಗಳು ಎಷ್ಟೋ ಇವೆ. ಎಲ್ಲೋ ಕಳೆದುಹೋಯಿತೆಂದು ನಿರ್ಧರಿಸಿ ಕೈಬಿಟ್ಟ ಲೇಖನಗಳು, ಒಮ್ಮೆಲೇ ಯಾರೋ ಒಬ್ಬರ ಮನೆಯಲ್ಲಿ ಸಿಕ್ಕಮೇಲೆ ಅವನ್ನು ಸೇರಿಸಿ ಬರೆದದ್ದೂ ಇದೆ. ಇವೆಲ್ಲವನ್ನೂ ಒಂದು ಕಡೆ ಕಲೆಹಾಕಿ, ನಿಷ್ಠೆ, ಪ್ರೀತಿ ಮತ್ತು ಅಭಿಮಾನದಿಂದ ಪುಟಕರೂಪದಲ್ಲಿ ಪ್ರಾಮಾಣಿಕವಾಗಿ ಹೊರತಂದ ಭೂಗರ್ಭ ಶಾಸ್ತ್ರಜ್ಞ, ಮತ್ತು ಪ್ರಭಾವಿ ವಿಜ್ಞಾನ ಲೇಖಕರಾಗಿರುವ ಟಿ. ಆರ್ ಅನಂತರಾಮು ಮತ್ತು ಗೆಳೆಯರನ್ನು ಇಲ್ಲಿ ನಾವು ನೆನೆಯಬೇಕು. ಅವರಿಂದಾಗಿ ಈ ಲೇಖನಮಾಲೆ ನಮ್ಮೆಲ್ಲರಿಗೆ ಓದಲು ಇಂದು ಲಭ್ಯವಾಗಿದೆ.

‘ಮೀನಾಕ್ಷಿಸೌಗಂಧ’ ಪುಸ್ತಕವನ್ನು ನಾಲ್ಕು ಭಾಗವಾಗಿ ವಿಂಗಡಿಸಿದ್ದಾರೆ. ೧. ವಿಜ್ಞಾನ, ೨. ಸಾಹಿತ್ಯ, ೩. ಇತಿಹಾಸ, ೪. ಕಲೆ, ಸಂಗೀತ, (ಚಿತ್ರಕಲೆ) ಒಂದು ವಿಚಾರವಂತೂ ನಮ್ಮೆಲ್ಲರಿಗೂ ಗಮನಕ್ಕೆ ಬರುವುದು, ಮೇಲೆ ತಿಳಿಸಿದ ಯಾವುದೇ ವಿಶಯದಲ್ಲೂ “ಇದಮಿತ್ಥಂ” ಎಂದು ಹೇಳುವಷ್ಟು ರೀತಿಯಲ್ಲಿ ಸ್ವಾಮಿಯವರು ಕೃಷಿಮಾಡಿ ಮಹತ್ವದ ಕೆಲಸ ಮಾಡಿದ್ದಾರೆ. ಯಾರೊಬ್ಬರಿಗೂ ಇವುಗಳಲ್ಲಿ ಕುಂದು ಕೊರತೆಗಳಿವೆ ಎಂದು ಬೆರಳು ತೋರಿಸಿ ಹೇಳಲು ಸಾಧ್ಯವಾಗದ ಮಟ್ಟಿಗೆ ಕೃಷಿ ನಡೆದಿದೆ.

ತಮ್ಮ ಮರಣದ ಬಳಿಕವೂ ಕನ್ನಡ ಸಾಹಿತ್ಯಾಸಕ್ತರಿಗೆ ಬಹುದೊಡ್ಡ ಅಮೂಲ್ಯವಾದ ಸಾಹಿತ್ಯ ಸಂಪತ್ತನ್ನು ಕನ್ನಡಿಗರಿಗೆ ಬಿಟ್ಟುಹೋಗಿ, ತಮ್ಮ ಹೆಸರನ್ನು ಅಜರಾಮರವಾಗಿಸಿದ್ದಾರೆ.

ವಿಜ್ಞಾನದ ಹೊರತಾಗಿ ಬೇರೆ ಕ್ಷೇತ್ರಗಳಲ್ಲೂ ಅನನ್ಯವಾದ ಕೆಲಸಮಾಡಿದ್ದಾರೆ. ಆದರೆ ನಮ್ಮನ್ನು ಕಾಡುವ ವಿಚಾರವೆಂದರೆ ಜೇಡರ ದಾಸಿಮಯ್ಯನವರ ಮತವಿಚಾರವೆನ್ನುವ ಬಗ್ಗೆ ಅಷ್ಟು ಮಾಹಿತಿಪೂರ್ಣ ಲೇಖನವನ್ನು ಬರೆದದ್ದಾರೂ ಹೇಗೆ ? ಅದಕ್ಕೆ ತಯಾರಿ ಎಲ್ಲಿ, ಹೇಗೆ, ಮಾಡಿಕೊಂಡರು ? ಸಮಯವನ್ನು ಹೇಗೆ ಹೊಂದಿಸಿಕೊಂಡರು? ಆ ಕಾಲದ ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತು, ಕಲಾವಿದ ಕೆ. ವೆಂಕಟಪ್ಪನವರ ಬಗ್ಗೆ ಸಮೀಕ್ಷೆ ಇತ್ಯಾದಿ. ಸ್ವಾಮಿಯವರು ವೆಂಕಟಪ್ಪನವರ ಜತೆ ಒಡನಾಟ ಬೆಳೆಸಿಕೊಂಡಿದ್ದರಂತೆ.

‘ಸತ್ತವರ ನೆರಳು’ ಎಂಬ ನಾಟಕದಲ್ಲಿ ರಂಗತಜ್ಞ, ನಟ, ಬಿ. ವಿ. ಕಾರಂತ್, ಕೀರ್ತನಕಾರ ಪುರುಂದರ ದಾದಸರ ಹಲವಾರು ಕೀರ್ತನೆಗಳನ್ನು ಬಳಸಿಕೊಂಡಿದ್ದಾರೆ.

ಬರೆದ ಲೇಖನಗಳು :

  • ತಮಿಳುನಾಡಿನ ಕೋಡುಂಬಾಳುವಿನಲ್ಲಿ ಕನ್ನಡ,
  • ಕೊಂಗು ದೇಶದ ರಾಜರು.
  • ಬಸವಣ್ಣನವರ ವಚನಗಳ ಉಲ್ಲೇಖಗಳಲ್ಲಿ ಬರುವ ಸಸ್ಯಧಾನ್ಯಗಳ ಬಗ್ಗೆ ವಿಸೃತ ಅಧ್ಯಯನ. ಕಲ್ಲಿನ ಶಾಸನಗಳಲ್ಲಿ ಸಸ್ಯಗಳ ಉಲ್ಲೇಖಕವನ್ನು ಗಮನದಲ್ಲಿರಿಸಿ ನಡೆಸಿದ ಸಂಶೋಧನೆಗಳು.

ಈ ಕಾರ್ಯವನ್ನು ಕರಾರುವಾಕ್ಕಾಗಿ ಮಾಡಲು ಶಾಸನಗಳ ಅಧ್ಯಯನವನ್ನು ಕೈಗೆತ್ತಿಕೊಂಡರು. ಇದಾದಮೇಲೆ ಶಾಸ್ತ್ರೀಯ ಸಂಗೀತಕೇಳುವುದರಲ್ಲಿ ಆಸಕ್ತರಾಗಿದ್ದ ಸ್ವಾಮಿಯವರು ಅದನ್ನೂ ವಿಧಿವತ್ತಾಗಿ ಕಲಿತರು. ಪಿಟೀಲು ವಾದ್ಯವನ್ನು ಬಾರಿಸುವುದನ್ನು ಕಲಿತು ಅಭ್ಯಾಸಮಾಡಿದರು. ಇಂತಹ ಬಹುಮುಖಿ ವ್ಯಕ್ತಿತ್ವದ ಬಿ. ಜಿ. ಎಲ್ ಸ್ವಾಮಿಯವರು, ಅನೇಕ ಸಾಹಿತಿಗಳಿಗೆ ಭೂಗರ್ಭ ಶಾಸ್ತ್ರಜ್ಞ, ಮತ್ತು ಪ್ರಭಾವಿ ವಿಜ್ಞಾನ ಲೇಖಕರಾಗಿದ್ದ ಟಿ. ಆರ್ ಅನಂತರಾಮು ರವರಂತಹ ಮೇರು ವ್ಯಕ್ತಿಗಳಿಗೆ ಸ್ಫೂರ್ತಿದಾಯಕರಾಗಿದ್ದರು.