- ರವಿಯಂತೆ ಕವಿಯೂ- ಅಂಬಾರಕೊಡ್ಲದ ವಿಷ್ಣುನಾಯ್ಕರು - ಫೆಬ್ರುವರಿ 27, 2024
- ಎರಡು ಅನುವಾದಿತ ಕವಿತೆಗಳು - ಸೆಪ್ಟೆಂಬರ್ 26, 2020
- ಬೇಲಿಗಳು - ಆಗಸ್ಟ್ 20, 2020
“ಜಗದಗಲ ತುಂಬಿರುವ
ನೋವಿನಲಿ ಪೆನ್ನದ್ದು
ಅರಳುವವು ಅಕ್ಷರಗಳು ಕವನವಾಗಿ
ನೋವು ಸಾಯುವವರೆಗೆ
ಕವನ ಸಾಯುವುದಿಲ್ಲ
ನಿಲ್ಲುವವು ಸಾಂತ್ವನದ ಶಿಲುಬೆಯಾಗಿ’ ಕವಿತೆಯೊಂದು ಅಜರಾಮರವಾಗುವುದು ಹೀಗೆ. ಹೀಗೆ ಬರೆದವರು ಮೊನ್ನೆಯಷ್ಟೆ ನಮ್ಮನ್ನಗಲಿದ ಕವಿ ವಿಷ್ಣು ನಾಯ್ಕರು. ಜಗದ ತುಂಬ ತುಂಬಿರುವ ದುಃಖವನ್ನು ತನ್ನದು ಎಂಬಂತೆ ಸ್ಪಂದಿಸುವ ಮನಸ್ಥಿತಿ ಕವಿ ಹೃದಯದ್ದು. ಮತ್ತು ಕವಿಯಾದವನ ಜವಾಬ್ದಾರಿ ಕೂಡ. ಸಂವೇದನಾಶೀಲ ಕಣ್ಣು ತಾನು ಕಂಡ ಸತ್ಯವನ್ನು, ಸತ್ಯದಾಚೆಗೆ ಹರಡಿದ ಅಸತ್ಯವನ್ನು, ಮೋಸ, ವಂಚನೆ, ಅನ್ಯಾಯಗಳನ್ನು, ಅವುಗಳು ಸೃಷ್ಟಿಸಿದ ದುರಂತಗಳನ್ನು, ಅಲ್ಲಿ ಮಡುಗಟ್ಟಿದ ನೋವನ್ನು ಗ್ರಹಿಸಬಲ್ಲದು. ಕವಿ ವಿಷ್ಣು ನಾಯ್ಕರು ಆ ಸೂಕ್ಷ್ಮ ಮನಸ್ಥಿತಿಯನ್ನು ಕೊನೆಯವರೆಗೂ ಇಟ್ಟುಕೊಂಡವರು.
ಅಪಾರ ಶಿಷ್ಯ ವೃಂದದ ಪ್ರೇಮದ ಗುರುವಾಗಿ, ಸಮಯ ನಿಷ್ಠೆಯ ಇನ್ನೊಂದು ರೂಪಕದಂತೆ, ಕಂಚಿನ ಕಂಠದ, ಸ್ಪಷ್ಟ ಅಭಿವ್ಯಕ್ತಿಯ, ಗಟ್ಟಿ ನಿರ್ಧಾರಗಳ ವ್ಯಕ್ತಿತ್ವವಾಗಿ ಸಾಹಿತಿ ವಿಷ್ಣು ನಾಯ್ಕರು ಸುಮಾರು ಐದಾರು ದಶಕಗಳಿಂದ ಕಾವ್ಯದ ಎಲ್ಲ ಪರಂಪರೆಗಳನ್ನು ನೋಡುತ್ತಾ, ಎಲ್ಲ ಕಾಲಘಟ್ಟಗಳಿಗೂ ಸೂಕ್ಷ್ಮವಾಗಿ ಸ್ಪಂದಿಸುತ್ತಾ, ನವೋದಯ, ನವ್ಯ, ಬಂಡಾಯ, ಪ್ರಗತಿಶೀಲ ಈ ಎಲ್ಲ ಕಾಲದ ಕಾವ್ಯದ ರೂಹುಗಳನ್ನು ಹೊತ್ತ ಕಾವ್ಯ ಬರೆದವರು. ಕಾವ್ಯ ಮಾರ್ಗದಲ್ಲಿ ಉತ್ತರ ಕನ್ನಡದ ಮೊದಲ ಸಾಲಿನಲ್ಲೇ ನಿಲ್ಲುವವರು. ಸಮಾಜವಾದಿ ಧೋರಣೆಯಿಂದ ಪ್ರಭಾವಿತರಾಗಿದ್ದ ಅವರು ಬಡವರು, ನಿರ್ಗತಿಕರು ಅಸಹಾಯಕರ ದನಿಗೆ ಮಿಡಿದವರೂ ಕೂಡ. ಹೊರ ತೋರಿಕೆಗೆ ಘನ ಗಾಂಭೀರ್ಯದ ಅನೇಕ ಕವಿಗಳು ಒಳಮುಖದಲ್ಲಿ ಕರಗುವ ಮೇಣದಂತೆ ಮೃದು ಮನಸ್ಸಿನವರಿರುವುದು ಸತ್ಯ ಎಂಬುದಕ್ಕೆ ವಿಷ್ಣು ನಾಯ್ಕರು ಸರಳ ಉದಾಹರಣೆಯಂತೆ ತೋರುತ್ತಾರೆ. ಅಲ್ಲದೇ ಉತ್ತರ ಕನ್ನಡದ ಕಾವ್ಯ ಜಗತ್ತಿನಲ್ಲಿ ತಮ್ಮ ಅಂಕೋಲೆಯ ಹಳೆಪೈಕರ ಭಾಷಾ ಸೊಗಡನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಕೂಡಾ ಇವರಿಗೆ ಸಲ್ಲಬೇಕು.
ವಿಷ್ಣು ನಾಯ್ಕರನ್ನು ನಾನು ಮೊಟ್ಟ ಮೊದಲು ನೋಡಿದ್ದು ನಾನು ಕಲಿತ ಶಾಲೆಯಲ್ಲಿ .ನಾನಾಗ ಏಳನೆ ತರಗತಿಯ ವಿದ್ಯಾರ್ಥಿನಿ. ಉತ್ತರ ಕನ್ನಡದ ಅಗಸೂರಿನ ಮಾದರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆ ದಿನ ಹಬ್ಬದ ವಾತಾವರಣ. ಕಾರಣ ನಮ್ಮ ಹೆಡ್ ಮಾಸ್ಟರರಾದ ಶಾಂತಾರಾಮ ಬಾಳೆಗುಳಿಯವರ ಕವನ ಸಂಕಲನದ ಉದ್ಘಾಟನಾ ಸಮಾರಂಭವಿತ್ತು. ಕವನ ಸಂಕಲನದ ಹೆಸರು ಬಹುಶಃ ‘ಕೋಲ ಸಂಪಿಗೆ’ ಎಂಬ ನೆನಪು. ಉದ್ಘಾಟನೆಗೆ ಆಗಮಿಸಿದ್ದರು ಕವಿ ವಿಷ್ಣು ನಾಯ್ಕರು. ಅವರ ಗಡಸು ಧ್ವನಿ, ಜೊತೆಗೆ ನಿರರ್ಗಳತೆಗೆ ನಾವು ಬಿಟ್ಟ ಬಾಯಿ ಬಿಟ್ಟಂತೆ ಕೂತು ಕೇಳಿದ್ದ ನೆನಪು. ಒಂದು ಕಡೆ ಅವರನ್ನು ನೋಡಿದರೆ ಭಯವೂ. ಇನ್ನೊಂದು ಕಡೆ ಆ ಧ್ವನಿಯಲ್ಲಿನ ಆಕರ್ಷಣೆಯೂ ಒಟ್ಟಿಗೆ ಇದ್ದ ಪರಿಣಾಮವೋ ಮಕ್ಕಳು ಗದ್ದಲ ಮಾಡದೇ ಕೆಳಗೆ ಹಾಸಿದ ತಾಡಪತ್ರೆಯ ಮೇಲೆ ಕೂತು ಗಂಟೆಗಟ್ಟಲೆ ಭಾಷಣ ಕೇಳಿದ್ದೆವು. ಸಂಜೆ ಊರಿನಲ್ಲಿ ಬೀದಿ ನಾಟಕವನ್ನು ಆಡಿಸಿದ್ದರು. ಸಾಮಾಜಿಕ ಅಸಮಾನತೆಯ ಕುರಿತು ಅವರೇ ಬರೆದ ಬೀದಿ ನಾಟಕವನ್ನು ನಮ್ಮ ಮನೆಯ ಸಮೀಪದಲ್ಲಿರುವ ಅಂಗನವಾಡಿಯ ಪಕ್ಕ ಆಡಿದ್ದರು. ಅದನ್ನು ನೋಡಲು ನಾ ಮುಂದು ನೀ ಮುಂದು ಎಂದು ಒಬ್ಬರನ್ನೊಬ್ಬರು ತಳ್ಳುತ್ತಾ ನೂಕುತ್ತಾ ನಿಂತಿದ್ದೆವು.
ಆನಂತರ ಕಾಲೇಜು ದಿನಗಳಲ್ಲಿ ಹಲವು ವೇದಿಕೆಗಳಲ್ಲಿ ಅವರನ್ನು ಕಂಡದ್ದಿದೆ. ಆದರೆ ನಿಕಟ ಸಂಪರ್ಕ ಯಾವತ್ತೂ ಬಂದಿರಲಿಲ್ಲ. ನಾನು ದಾಂಡೇಲಿಗೆ ಬಂದ ನಂತರದ ದಿನಗಳಲ್ಲಿ ಅವರ ಮಗಳೂ ದಾಂಡೇಲಿಯಲ್ಲಿ ಇದ್ದ ಕಾರಣ ಮತ್ತೆ ಒಂದೆರಡು ಬಾರಿ ದಾಂಡೇಲಿಯ ಕಾರ್ಯಕ್ರಮಗಳಲ್ಲಿ ನೋಡಿದ್ದಿದೆ. ಅನಂತರ ಪ್ರವೀಣ ನಾಯಕರು ಸಂಪಾದಿಸಿದ ‘ಅವ್ವನೆಂಬ ಹೊಂಗೆಯ ನೆರಳು’ ಕೃತಿಗೆ ಲೇಖನ ಬರೆದುಕೊಡುವಂತೆ ವಿನಂತಿಸಿದ್ದೆವು. ವಾರದ ಗಡುವು ಕೇಳಿದ ನಾಯ್ಕರು ವಾರದೊಳಗೆ ಲೇಖನ ಕಳಿಸಿಕೊಟ್ಟಿದ್ದರು. ಪತ್ನಿ ಕವಿತಾ ಮೇಡಂ ಅಗಲಿಕೆಯ ನಂತರ ಅವರ ಬರಹಗಳನ್ನು ಟೈಪಿಸಿ ಕಳಿಸುವುದು ಕಷ್ಟವಾಗಿದೆಯೆಂದೂ ಕೈ ಬರಹದಲ್ಲೇ ಕಳಿಸುವೆನೆಂದು ಹೇಳಿ ನಮ್ಮ ಮುದ್ರಣದಲ್ಲಿ ತಪ್ಪಾಗದಂತೆ ಎಚ್ಚರ ವಹಿಸಲು ಹೇಳಿದ್ದರು. ಮಾಡಿದ ಪ್ರತಿ ಕೆಲಸದಲ್ಲೂ ಪರಫೆಕ್ಷನ್ ಬೇಡುವುದು ಅವರ ಸ್ವಭಾವ. ವಿಷ್ಣು ನಾಯ್ಕರು ಭಾಗವಹಿಸುವ ಸಭಾ ಕಾರ್ಯಕ್ರಮಗಳು ಸಮಯದೊಂದಿಗೆ ಎಂದೂ ಹೊಂದಾಣಿಕೆಯ ಪರಿಪಾಠವನ್ನು ಬೆಳೆಸಿಕೊಂಡಿರಲಿಲ್ಲ. ಅವರೊಂದು ಸದಾ ಜಾಗ್ರತ ಪ್ರಜ್ಞೆಯ ಪ್ರತಿರೂಪದಂತಿದ್ದರು.
1944 ಜುಲೈ 1 ರಂದು ಅಂಕೋಲೆಯ ಅಂಬಾರಕೊಡ್ಲದಲ್ಲಿ ತೀರ ಬಡ ಕುಟುಂಬದಲ್ಲಿ ಜನಿಸಿದ ವಿಷ್ಣು ನಾಯ್ಕರು ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಬೆಳೆದರು. ತಮ್ಮ ಬಧ್ಧತೆಗಳನ್ನು ಶ್ರದ್ಧೆಯಿಂದ ನಿರ್ವಹಿಸಿದವರು. ಅಕ್ಷರದ ಸಾಂಗತ್ಯದಲ್ಲಿ ರಾಜಿಯಾದವರಲ್ಲ. ಅವರ ಕತೆ, ಕಾವ್ಯಗಳು ಅವರ ಸಮಕಾಲೀನ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡೆ ಬರೆದಂತಹುಗಳು.
ಎರಡು ಕಥಾ ಸಂಕಲನಗಳು, ಹಲವು ವಿಮರ್ಶಾ ಕೃತಿಗಳು, ‘ಜಂಗುಂ ಜುಕ್ಕುಂ’ ಎಂಬ ಕಾದಂಬರಿ, ‘ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ, ನೂರೆಂಟು ಕಿಟಕಿಗಳು, ಸಂಜೆ ಸೂರ್ಯ, ದುಡಿಯುವ ಕೈಗಳ ಹೋರಾಟದ ಕಥೆ ಹೀಗೆ ಸಾಗುವ ವಿಷ್ಣು ನಾಯ್ಕರ ಸಾಹಿತ್ಯದ ಅಸ್ತಿತ್ವಕ್ಕೆ ಅಂಕೋಲೆಯ ಅಂಬಾರಕೊಡಲು ಬಹುಮುಖ್ಯ ಸಾಕ್ಷಿಪ್ರಜ್ಞೆ. ಅಂಕೋಲೆ ಎಂಬುದೆ ಹೋರಾಟದ ಕಿಚ್ಚನ್ನು ರಕ್ತದಲ್ಲೆ ಬೆರೆಸಿಕೊಂಡ ಹುಟ್ಟು ಹೋರಾಟಗಾರರ ನೆಲೆ. ಹಾಗಾಗಿ ವಿಷ್ಣು ನಾಯ್ಕರಲ್ಲೂ ಆ ಹೋರಾಟದ ಗುಣ, ಛಲವಿತ್ತು. ಸಮಾಜವಾದಿ ನಿಲುವನ್ನು ಬೆಂಬಲಿಸುವ ಮೂಲಕ ಅಕ್ಷರ ಕ್ರಾಂತಿಯಲ್ಲಿ ಅದನ್ನು ಪ್ರತಿಬಿಂಬಿಸಿದವರು.
ಭಾರತದ ಬ್ರಿಟಿಷರ ಆಳ್ವಿಕೆಯಲ್ಲಿ ಆ ದಬ್ಬಾಳಿಕೆಗೆ ನರಳಿತು. ಹಾಗೆಂದು ಇಂದು ಈ ಶೋಷಣೆ ನಿಂತಿದೆಯೇ? ಎಂದು ಕೇಳಿಕೊಂಡರೆ ಶೋಷಣೆ ಮಾಡುವ ಜನ ಬದಲಾಗಿದ್ದಾರೆ ಹೊರತು ಶೋಷಣೆ ಬದಲಾಗಿಲ್ಲ ಎಂಬ ಉತ್ತರ ಚಿಕ್ಕ ಮಗುವಿನಿಂದಲೂ ಬರುವಷ್ಟು ವ್ಯವಸ್ಥೆ ಹದಗೆಟ್ಟಿದೆ. ಅದನ್ನು ಕವಿ “ಕೊರಗು” ಎಂಬ ಕವಿತೆಯಲ್ಲಿ ಹೀಗೆ ಕನ್ನಡಿ ಹಿಡಿಯುತ್ತಾರೆ.
“ಬಿಳಿ ಎತ್ತುಗಳೇ ಬಹುಕಾಲ
ಒಕ್ಕಿದ್ದ ನೆಲದಲ್ಲೀಗ
ಒಕ್ಕುತ್ತಿವೆ ಚಿತ್ರ ವಿಚಿತ್ರ ಹೋರಿಗಳು
ತ್ರಾಣವೂ ಒಂದೇ ಪುರಾಣವೂ ಒಂದೇ
ಬಣ್ಣ ಮಾತ್ರ ಬೇರೆ ಬೇರೆ.”
ಪ್ರಸ್ತುತಕ್ಕೂ ಎಷ್ಟು ಹೊಂದಿಕೆಯಾಗುತ್ತದೆ ಇದರ ಸಾಲುಗಳು. ಬಿಳಿಯರ ಶೋಷಣೆ ಮುಗಿದರೂ, ಬಿಳಿಯರ ಮನಸ್ಥಿತಿಯ ನಮ್ಮವರಿಂದಲೇ ಬಡ ಜನ ನರಳುವುದು ಕವಿಯಲ್ಲಿ ನೋವನ್ನು ಹುಟ್ಟಿಸಿದೆ. ಆಕ್ರೋಶ ಹುಟ್ಟಿಸಿದೆ.
ಉತ್ತರ ಕನ್ನಡದ ಪ್ರಾದೇಶಿಕ ಚೆಲವು, ಇಲ್ಲಿಯ ಪಾರಂಪರಿಕ ಬದುಕಿನ ವಿಧಾನಗಳು,ಸಾಂಸ್ಕ್ರತಿಕ ಚಹರೆಗಳು, ಇವರ ಕವನಗಳಲ್ಲಿ ಬಹುಮುಖ್ಯ ಸಂಗತಿಗಳು. ‘ನನ್ನ ಅಂಕೋಲೆ’, ಅವ್ವ ಮತ್ತು ನಾನು, ನನ್ನ ಅಂಬಾರಕೊಡ್ಲು’ ಮುಂತಾದ ಕವಿತೆಗಳು ಅವರ ಇಡೀ ಬದುಕನ್ನು, ಮತ್ತು ಅಂಕೋಲೆಯನ್ನು ಪರಿಚಯಿಸುತ್ತವೆ. ಅವರ ‘ಅವ್ವ ಮತ್ತು ನಾನು’ ಎಂಬ ಕಥನ ಗೀತೆ ಓದಿದರೆ ಉತ್ತರ ಕನ್ನಡದ ಸಂಸ್ಕೃತಿ, ಭಾಷೆ ಮತ್ತು ಬಡತನದ ಬದುಕಿನ ಇಡೀ ಚಿತ್ರಣ ದಕ್ಕುತ್ತದೆ. ಒಂದು ನುಡಿಯನ್ನಷ್ಟೇ ಉದಾಹರಿಸ ಬಯಸುತ್ತೇನೆ.
“ಒಂದೇ ಕೊತ್ಲದ ಚೀಲದೊಳಗೆ ಇಬ್ಬರ
ನಿದ್ದೆ: ಗಾಂಡಿಯಲಿ ತಮ್ಮನನು
ತುರುಕಿಕೊಂಬೆ:
ಹಂಚಿರೊಟ್ಟಿಯ ಲಂಚ ಕೊಡಬೇಕು ಅವ
ನನಗೆ: ಅಂದರೇನೆ ಒಳಗೆ
ಇಲ್ಲ,- ನೆಲಕೆ”
ವಿಷ್ಣು ನಾಯ್ಕರು ಕವನ ಬರೆಯುವ ತುಡಿತವನ್ನು ಮೊದಲು ಅನುಭವಿಸಿದ್ದೇ ಅವರ ತಾಯಿಯಿಂದ.ತನಗೆ ಕವಿತೆ ಬರೆಯುವ ಹುಚ್ಚು ಹಿಡಿಸಿದವಳು ತನ್ನ ನಿರಕ್ಷರಿಯಾದ ತನ್ನ ತಾಯಿ ಎಂದಿದ್ದಾರೆ ಕವಿ.
‘ಬೆಟ್ಟಕ್ಕೆ ಹೋದವ್ವ, ಸೊಪ್ಪು- ಸದೆ
ತಂದವ್ವ, ಒಣಜಿಗ್ಗು ಹಸಿ ಸೆಗಣ
ಹೆಕ್ಕಿದವ್ವ:
ಬೆಲಗೆಂಡೆ ಬೆಳೆದವ್ವ, ಸೊರೆ- ಸೌತೆ
ಕೊಯ್ದವ್ವ, ಈ ಎಲ್ಲವನು ನನಗೆ
ಕಲಿಸಿದವ್ವ.’
ಈ ಅವ್ವ ನಮ್ಮ ನಿಮ್ಮೆಲ್ಲರ ಅವ್ವನಂತೆ ಕಾಣುತ್ತಾಳೆ. ದಿನಕರ ದೇಸಾಯಿಯವರು ಚೌಪದಿಗಳಲ್ಲಿ ಉತ್ತರ ಕನ್ನಡದ ಬದುಕು ಬವಣೆಗಳ ಬಣ್ಣಿಸಿದರೆ ಕವಿ ವಿಷ್ಣು ನಾಯ್ಕರು ಕವಿತೆಗಳಲ್ಲಿ ಉತ್ತರ ಕನ್ನಡದ ಪರಿಸರ, ಜೀವನದ ರೀತಿಗಳು, ಬಡತನ, ಹಾಡು ಹಸೆ ಹಬ್ಬ ಹರಿದಿನಗಳು ದೇವರುದಿಂಡರು ಹೀಗೆ ಉದ್ದಕ್ಕೂ ಇಡೀ ಸಂಸ್ಕೃತಿಯನ್ನು ಕಣ್ಣ ಮುಂದಿಡುವಂತೆ ಬರೆದಿದ್ದಾರೆ. ಕವಿ ಭೌತಿಕವಾಗಿ ದೂರವಾದರೂ ಅವರ ಕವಿತೆಗಳು ನಮ್ಮೊಂದಿಗಿವೆ. ವೈಚಾರಿಕತೆಯ ಕಿಡಿಯನ್ನು ಬೆಳಗಿಸಿ ಮುಂದಿನವರಿಗೆ ಬೆಳಕಾಗುವ ಭರವಸೆಯ ಸೂಡಿ ಹಿಡಿದಿವೆ.
–
ನಾಗರೇಖಾ ಗಾಂವಕರ
ಸಕಾಲಿಕ ನುಡಿ ನಮನ ಚೆನ್ನಾಗಿದೆ.