ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಾಸ್ತವ

ಡಾ.ತನುಶ್ರೀ ಹೆಗಡೆ
ಇತ್ತೀಚಿನ ಬರಹಗಳು: ಡಾ.ತನುಶ್ರೀ ಹೆಗಡೆ (ಎಲ್ಲವನ್ನು ಓದಿ)

ಅರೆ ಸ್ವತಂತ್ರರು ನಾವು
ಅರೆ ಸ್ವಯಂಚಾಲಿತರು

ಉಟ್ಟ ಸೀರೆಗೆ ಇಟ್ಟ ನೆರಿಗೆಗೆ
ಉಂಟು ನಮಗೆ ಆಯ್ಕೆಯು
ನೆಟ್ಟ ಕಂಗಳು ಬಿಟ್ಟ ಟೀಕೆಯು
ಉಳಿಸಿಟ್ಟ ಅವಕಾಶವು

ಅರೆ ಸ್ವತಂತ್ರರು ನಾವು
ಅರೆ ಸ್ವಯಂಚಾಲಿತರು

ತೋಚುವ ಮಾತಿಗೆ ಆಡುವ ನುಡಿಗೆ
ಉಂಟು ನಮಗೆ ಸಮ್ಮತ
ಇದಿರಾಡದ ಸುಸಂಸ್ಕಾರವು
ಉಳಿಸಿಟ್ಟ ಅಭಿಮತ

ಅರೆ ಸ್ವತಂತ್ರರು ನಾವು
ಅರೆ ಸ್ವಯಂಚಾಲಿತರು

ಸೂಸುವ ನಗೆಗೆ ಸುರಿಸುವ ಕಂಬನಿಗೆ
ಉಂಟು ನಮಗೆ ಭಾಗ್ಯವು
ಮರೆ-ತೆರೆಯ ಅಡೆ-ತಡೆಯ ಮೈಮನಸುಗಳು
ಉಳಿಸಿಟ್ಟ ಸುಯೋಗವು

ಅರೆ ಸ್ವತಂತ್ರರು ನಾವು
ಅರೆ ಸ್ವಯಂಚಾಲಿತರು

ಮೆಚ್ಚಿದ ಹಾದಿ ಒಪ್ಪಿದ ನಡೆ
ಉಂಟು ನಮಗೆ ಪ್ರಾಪ್ತಿಗೆ
ಅಭದ್ರತೆಯ ಅವಲಂಬನೆಯ ರೇಖೆ
ಉಳಿಸಿಟ್ಟ ವ್ಯಾಪ್ತಿಗೆ

ಅರೆ ಸ್ವತಂತ್ರರು ನಾವು
ಅರೆ ಸ್ವಯಂಚಾಲಿತರು

ಕಾಣುವ ಕನಸಿಗೆ ಹಿಡಿಯುವ ನನಸಿಗೆ
ಉಂಟು ನಮಗೆ ಪರಿಸರ
ಅಸಮತೆಗಳು ವಿಷಮತೆಗಳು
ಉಳಿಸಿಟ್ಟ ವಾಸ್ತವ

ಅರೆ ಸ್ವತಂತ್ರರು ನಾವು
ಅರೆ ಸ್ವಯಂಚಾಲಿತರು

ಸ್ವಪ್ರಜ್ಞೆಗೆ ಸ್ವಚಿಂತನೆಗೆ
ಉಂಟು ನಮಗೆ ಆಸ್ಪದವು
ಅಹಮಿಕೆಯು ದಬ್ಬಾಳಿಕೆಯು
ಉಳಿಸಿಟ್ಟ ಅಸ್ಮಿತೆಯು

ಅರೆ ಸ್ವತಂತ್ರರು ನಾವು
ಅರೆ ಸ್ವಯಂಚಾಲಿತರು
ಅರಿತೆವೆಂದು ? ಕಲಿತೆವೆಂದು ?
ಹರಡಿದಷ್ಟು ರೆಕ್ಕೆ ಹಗುರ
ಬೆಳೆಸಿದಷ್ಟು ಬಲ ನಿಗುರ
ಕಳಚಿದಷ್ಟು ಬಂಧ ಸಡಿಲ
ಸವೆಸಿದಷ್ಟು ದಾರಿ ಸಲೀಲ

ಅರೆ ಸ್ವತಂತ್ರರು ನಾವು
ಅರೆ ಸ್ವಯಂಚಾಲಿತರು
ಆಗಬಹುದೇ ?
ಖರೆ ಅನಧೀನರು
ಖರೆ ಅಭಿನ್ನತೆಯರು?!