- ಅವಳು ಬಂದಿದ್ದಳು - ಜುಲೈ 20, 2021
- ಸಂಜೆಯ ಮಳೆ - ಏಪ್ರಿಲ್ 13, 2021
- ಯಾವ ಮಾಯೆ ಕರೆಯಿತು ನಿನ್ನನು… - ಮಾರ್ಚ್ 13, 2021
ಕುಸುಮಾ ಫ್ಯಾಕ್ಟರಿ ಬಿಡುವಾಗಲೇ ಇಂದು ತುಂಬಾ ತಡವಾಗಿಹೋಯಿತು. ದಸರಾ, ದೀಪಾವಳಿ ಹಬ್ಬದ ಸಲುವಾಗಿ ಒಂದು ತಿಂಗಳಿಂದಲೂ ಬಿಡುವಿಲ್ಲದ ಕೆಲಸ. ಪ್ರತಿ ಭಾನುವಾರವೂ ಓವರ್ ಟೈಂ ಮಾಡಿ ಹೈರಾಣಾಗಿ ಹೋಗಿತ್ತು ಜೀವ. ವಾರಕ್ಕಾರು ದಿನ ಎಂಟು ಗಂಟೆ ಹೊಲಿಗೆ ಮೆಶೀನ್ ತುಳಿಯುವುದೇನೂ ತಮಾಶೆಯಲ್ಲ. ಅಂತದರಲ್ಲಿ ರಜೆಯೇ ಇಲ್ಲದೆ ತಿಂಗಳಿಡೀ ಕೆಲಸ ಮಾಡಲೇಬೇಕಾದ ಒತ್ತಡ ಬಂದಾಗ ಹೆಚ್ಚಿನ ದುಡ್ಡೂ ಸಾಕು, ಈ ಹೆಣಹೊರುವ ಕೆಲಸವೂ ಸಾಕು ಅನ್ನಿಸಿಬಿಟ್ಟಿದೆ. ಇಂದಂತೂ ಕಡೆಯ ಆರ್ಡರ್ ಕಳಿಸಲೇ ಬೇಕಾಗಿದ್ದರಿಂದ, ಸೂಪರ್ವೈಸರ್ ರಾತ್ರಿ ಒಂಭತ್ತು ಗಂಟೆಯಾದರೂ ಸರಿಯೇ ಕೊಟ್ಟಿರುವಷ್ಟು ಕೆಲಸ ಮುಗಿಸಿ, ರಾತ್ರಿ ಪಾಳಿಯ ಪ್ಯಾಕಿಂಗ್ ಸೆಕ್ಷನ್ಗೆ ಕೊಟ್ಟೇ ಹೋಗಬೇಕು ಎಂದು ರಾಜಾಜ್ಞೆಯನ್ನೇ ಹೊರಡಿಸಿ ಹೋಗಿದ್ದ. ಅಕಸ್ಮಾತ್ ಪಾಲಿಸದಿದ್ದರೆ ಮುಂದಿನ ಪರಿಣಾಮವೇನು ಎಂದು ಗೊತ್ತಿದ್ದ ಕುಸುಮಾ ಮರುಮಾತಾಡದೆ, ಊಟಕ್ಕೂ ಎದ್ದುಹೋಗದೆ, ಯೋಚಿಸಲೂ ಪುರಸೊತ್ತಿಲ್ಲದೆ ಬೆಳಗಿನಿಂದಲೂ ಒಂದೇ ಸಮನೆ ಪೆಡಲನ್ನು ತುಳಿದೇ ತುಳಿದಳು… ಅಂತೂ ಕೆಲಸ ಮುಗಿಸಿ, ಎಣಿಸಿ, ಒಟ್ಟುಮಾಡಿ ಪ್ಯಾಕಿಂಗ್ ಸೆಕ್ಷನ್ನಿಗೆ ಡೆಲಿವರಿ ಕೊಟ್ಟು ಹೊರಬರುವಾಗ ಗೋಪುರದ ಗಡಿಯಾರ ಏಳು ಹೊಡೆದಿದ್ದು ಕೇಳಿಸಿತು.
ಒಂದು ವಾರದಿಂದ ದಿನವೂ ರಾತ್ರಿ ಊಟ ಮಾಡುವ ಹೊತ್ತಿಗೇ ಕಾದಿದ್ದ ಹಾಗೆ ಹೊಡೆಯುತ್ತಿದ್ದ ಮಳೆ ಇಂದು ಈಗಲೇ ಆಗಸವೇ ಕಳಚಿ ಬೀಳುವುದೇನೋ ಎನ್ನಿಸುವಂತೆ ನಕ್ಷತ್ರವೊಂದೂ ಕಾಣಿಸದಂತೆ ಮೋಡಗಳು ದಟ್ಟೈಸಿ ಕವಚಿಕೊಂಡಿದೆ. ಇನ್ನೇನು ಬರುತ್ತಿದ್ದೇನೆ ಎಂದು ಸೂಚಿಸುವಂತೆ ಮಬ್ಬು ಕವಿದು ವಾತಾವರಣವೆಲ್ಲಾ ಉಬ್ಬಸ ಬಂದಂತಾಗಿದೆ. ʻಮಳೆ ಶುರುವಾಗುವುದರೊಳಗೆ ಬಸ್ಸಿನೊಳಗೆ ತೂರಿಕೊಂಡರೆ ಸಾಕುʼ ಎನ್ನಿಸಿ ಕುಸುಮಾ ನೋಯುತ್ತಿದ್ದ ಕಾಲುಗಳಿಗೆ ಚಾಟಿಬೀಸಿದಂತೆ ಚುರುಕು ಮಾಡಿ ಹಾಗೂ ಹೀಗೂ ಬಸ್ಟಾಪನ್ನು ತಲುಪಿದಳು. ನಿಲ್ದಾಣ ನಿರ್ಜನವಾಗಿತ್ತು. ಈ ಪ್ಯಾಕ್ಟರಿಗಾಗಿಯೇ ಇರುವ ನಿಲ್ದಾಣ ಇದು. ಇಂದು ನೈಟ್ ಷಿಫ್ಟಿನ ಒಂದು ಬ್ಯಾಚಿನವರನ್ನು ಬಿಟ್ಟರೆ, ಡೇ ಷಿಫ್ಟಿನವರೆಲ್ಲರೂ ಆಗಲೇ ಮನೆ ಸೇರಿಯಾಗಿದೆ. ಇಡೀ ರಸ್ತೆಯೇ ನಿರ್ಜನವಾಗಿದೆ. ವಾಹನ ಸಂಚಾರ ಬಿಟ್ಟರೆ ಜನವಸತಿ ಇರುವ ಪ್ರದೇಶವಲ್ಲ. ಬಸ್ಟಾಪಿನಿಂದ ಒಂದು ಫರ್ಲಾಂಗ್ ದೂರದಲ್ಲಿ ಕಾಫಿ, ಟೀ ಕೂಡಾ ಸಿಗುವ ಒಂದು ಗೂಡಂಗಡಿಯಿದೆ. ಜನವಿಲ್ಲದ ಮೇಲೆ ಇನ್ನೇನು ಅವನೂ ಬಾಗಿಲು ಹಾಕುವ ಹೊತ್ತೇ. ಆತಂಕದಿಂದ ಅವನಂಗಡಿಯತ್ತಲೇ ದೃಷ್ಟಿ ಹರಿಸಿದಳು. ಅವನೂ ಸಾಮಾನು ಸರಂಜಾಮನ್ನೆಲ್ಲಾ ಒಳಗೆ ಎತ್ತಿಡುತ್ತಿದ್ದ. ಅವಳು ನೋಡುತ್ತಿರುವ ಹಾಗೆಯೇ ಹರಡಿಕೊಂಡಿದ್ದ, ಚಾಚಿಕೊಂಡಿದ್ದ ಸಕಲ ಸಾಮಗ್ರಿಗಳೂ ಒಳಸೇರಿ, ಹಚ್ಚಿಕೊಂಡಿದ್ದ ಪೆಟ್ರೋಮ್ಯಾಕ್ಸ್ ದೀಪವನ್ನು ಆರಿಸಿ ಮೊಬೈಲ್ ಬೆಳಕಲ್ಲಿ ಅಂಗಡಿಯ ಬಾಗಿಲಿಗೆ ಬೀಗ ಜಡಿದು ತನ್ನ ಹಳೆಯ ಮೊಪೆಡನ್ನು ಏರಿ ವಿರುದ್ಧ ದಿಕ್ಕಿಗೆ ಹೊರಟ. ಈಗಂತೂ… ಎಷ್ಟೋ ಹೊತ್ತಿಗೊಮ್ಮೆ… ಎಲ್ಲೋ ಅಲ್ಲೊಂದು, ಇಲ್ಲೊಂದು ಕಾರೋ, ಬೈಕೋ ಬಿಟ್ಟರೆ ಬಸ್ಸಿನ ಸುಳಿವೇ ಇಲ್ಲ, ಸ್ಟಾಪಿಗೆ ಯಾವ ಜನರೂ ಬರಲಿಲ್ಲ. ಕುಸುಮಳ ಆತಂಕ ಹೆಚ್ಚಾಯಿತು. ದೂರದೂರದಲ್ಲಿ ಅಲ್ಲೊಂದು ಇಲ್ಲೊಂದು ಮಿನುಗುತ್ತಿರುವ ಲೈಟುಕಂಬಗಳನ್ನು ಬಿಟ್ಟರೆ ಇಡೀ ರಸ್ತೆಯೆಲ್ಲಾ ಗವ್ವೆನ್ನುತ್ತಿತ್ತು. ʻಅಕಸ್ಮಾತ್ ಕರೆಂಟೂ ಹೋಗಿಬಿಟ್ಟರೆʼ ಎನ್ನಿಸಿ ನಡುಗಿಹೋದಳು.
ನಾಲ್ಕು ದಿನದಿಂದ ಅಪ್ಪನಿಗೆ ಜ್ವರ ಕಾಯುತ್ತಿದೆ. ಮೊನ್ನೆ ಸ್ಟಾಪಿನಲ್ಲಿ ಇಳಿದ ತಕ್ಷಣ, ಬಳಿಯಿದ್ದ ಮೆಡಿಕಲ್ ಷಾಪಿನಿಂದ ಯಾವುದೋ ಜ್ವರದ ಮಾತ್ರೆಯನ್ನು ತೆಗೆದುಕೊಂಡು ಹೋಗಿ ಕೊಟ್ಟಿದ್ದರೂ ಏನೂ ಕಡಿಮೆಯಾಗಿಲ್ಲ. ಬೇಗ ಹೋಗಿದ್ದರೆ ಇಂದಾದರೂ ಡಾಕ್ಟರ ಬಳಿಗೆ ಕರೆದುಕೊಂಡು ಹೋಗಬಹುದಿತ್ತು. ತಮ್ಮ ಸುರೇಶ ದಿನವೂ ಕೆಲಸ ಮುಗಿಸಿ, ಗೆಳೆಯರೊಂದಿಗೆ ಮೆಜೆಸ್ಟಿಕ್ಕೆಲ್ಲಾ ಅಡ್ಡಾಡಿ, ಕುಡಿದು, ಎಷ್ಟೋ ಬಾರಿ ಅಲ್ಲಿನ ಗಾಡಿಗಳಲ್ಲೇ ತಿಂದು ಮನೆಗೆ ಬರುವುದೇ ಹತ್ತರ ಮೇಲೆ. ದುಡಿದದ್ದೆಲ್ಲವನ್ನೂ ಉಡಾಯಿಸಿ ಬರುವ ಅವನು ಅಪ್ಪನನ್ನು ಡಾಕ್ಟರ ಬಳಿ ಕರೆದುಕೊಂಡು ಹೋಗುವ ಕನಸೂ ಇಲ್ಲ. ಪುಣ್ಯಕ್ಕೆ ತನ್ನ ತೆವಲುಗಳಿಗೆ ಕುಸುಮನನ್ನು ಪೀಡಿಸುತ್ತಿಲ್ಲವೆನ್ನುವುದೇ ನೆಮ್ಮದಿಯ ವಿಷಯವೆನ್ನಬೇಕು. ಅವನು ರಾತ್ರಿ ಊಟ ಮಾಡದಿದ್ದರೆ ಅದೇ ಮುದ್ದೆಯನ್ನು ಬೆಳಗ್ಗೆ ಮಜ್ಜಿಗೆಯಲ್ಲಿ ಕಿವುಚಿ ಕುಡಿದು ಅಪ್ಪ, ಸುರೇಶ, ಶಾಲೆಗೆ ಹೋಗುತ್ತಿರುವ ಇನ್ನೊಬ್ಬ ತಮ್ಮ ಶಂಕರ, ತಂಗಿ ಚಂದ್ರಿಕಾಗೆ ಅಡುಗೆ ಮಾಡಿಟ್ಟು ಎಂಟು ಗಂಟೆಗೇ ಮನೆಬಿಡುತ್ತಾಳೆ ಕುಸುಮ. ಸುರೇಶ ಬೆಳಗ್ಗೆಯೂ ತಿಂದರೆ ತಿಂದ, ಇಲ್ಲದಿದ್ದರೆ ಇಲ್ಲ. ಉಳಿದಿದ್ದರೆ ರಾತ್ರಿಗೆ ತಿನ್ನಲು ಹೇಗೂ ಕುಸುಮಾ ಇದ್ದಳಲ್ಲ.
ಅಮ್ಮನೂ ಇದೇ ಫ್ಯಾಕ್ಟರಿಯಲ್ಲೇ ಇಪ್ಪತ್ತು ವರ್ಷ ದುಡಿದು ದುಡಿದು ಸತ್ತಿದ್ದು. ಅಪ್ಪನ ಗಾರೆ ಕೆಲಸದಲ್ಲಿ ದುಡಿಮೆಯ ನೆಚ್ಚಿಗೆಯಿಲ್ಲ. ಅಮ್ಮನ ದುಡಿತವಿಲ್ಲದಿದ್ದರೆ ಮನೆಯವರೆಲ್ಲರೂ ಉಪವಾಸದಿಂದ ಸಾಯಬೇಕಿತ್ತಷ್ಟೇ. ತಂಗಿ ಚಂದ್ರಿಕಾ ಹುಟ್ಟಿದ ಮೇಲೆ ಅಮ್ಮನ ಆರೋಗ್ಯ ಹದಗೆಟ್ಟಿದ್ದು ಸುಧಾರಿಸಲೇ ಇಲ್ಲ. ಕ್ಷಯ ಬಂದು ಕೈಮಗುವನ್ನು ಬಿಟ್ಟು ಸತ್ತೇಹೋದಳು. ಅವಳಮ್ಮನಿಗೆ ಕೆಂಪಗೆ ಲಕ್ಷಣವಾಗಿದ್ದ ಕುಸುಮಳನ್ನು ಕೆಲಸಕ್ಕೆ ಹಾಕುವ ಯೋಚನೆಯಿರಲಿಲ್ಲ. ದುಡಿಯುವ ಗಂಡೊಂದನ್ನು ನೋಡಿ ಆದಷ್ಟು ಬೇಗನೇ ಮದುವೆ ಮಾಡುವುದೆಂದುಕೊಂಡಿದ್ದಳು. ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದ ಮೇಲೆ ಶಾಲೆ ಬಿಟ್ಟು ಕುಸುಮಾ ಹೊಲಿಗೆ ಮೆಶಿನ್ ತುಳಿಯುವುದನ್ನು ಕಲಿತು ಮನೆಯಲ್ಲೇ ಹಳೆಯ ಮೆಶೀನಿಟ್ಟುಕೊಂಡು ಬಟ್ಟೆ ರಿಪೇರಿ ಮಾಡಿ ಅಷ್ಟೋ ಇಷ್ಟೋ ಸಂಪಾದಿಸುತ್ತಿದ್ದಳು. ಆದರೆ ಅಮ್ಮ ಇದ್ದಕ್ಕಿದ್ದ ಹಾಗೆ ತೀರಿಕೊಂಡಾಗ, ದಿನದ ಪಥ ಜರುಗಿಸಲು ಹತ್ತೊಂಭತ್ತು ವರ್ಷದ ಕುಸುಮಾ ಸಂಪಾದನೆ ಮಾಡುವುದು ಅನಿವಾರ್ಯವಾಗಿ ಅಮ್ಮನ ಕೆಲಸವನ್ನೇ ಮುಂದುವರೆಸಿದ್ದಳು. ಕಳೆದ ಹನ್ನೆರಡು ವರ್ಷಗಳಿಂದ ಅವಳ ದಿನಚರಿಯಲ್ಲಿ ಯಾವ ಬದಲಾವಣೆಯೂ ಕಂಡಿಲ್ಲ. ಇನ್ನೂ ಸ್ಕೂಲಿಗೆ ಹೋಗುತ್ತಿರುವ ತಮ್ಮ, ತಂಗಿಯಿಬ್ಬರೂ ಒಂದು ಹಂತಕ್ಕೆ ಬರುವವರೆಗೆ ಮದುವೆಯ ಕನಸನ್ನೂ ಕಾಣಲು ಸಾಧ್ಯವಿಲ್ಲ. ಹಾಗೆಂದು ವಯಸ್ಸು ಅಲ್ಲೇ ಕುಳಿತಿರುತ್ತದೆಯೇ. ಮೂವತ್ತು ದಾಟಿಹೋದ ಅವಳ ಮುಖದ ಮೆರುಗು ಮಾಸತೊಡಗಿದೆ. ಕಷ್ಟ ಕಾರ್ಪಣ್ಯಗಳು ಮುಖಕ್ಕಿಷ್ಟು ಬಿರುಸಿನ ಲಕ್ಷಣವನ್ನು ಲೇಪಿಸಿವೆ. ಚಿಕ್ಕವರಿಬ್ಬರೂ ದೊಡ್ಡವರಾಗುವ ಹೊತ್ತಿಗೆ ಅವಳು ನಲವತ್ತು ವರ್ಷವನ್ನೂ ದಾಟಿರುತ್ತಾಳೆ. ಇನ್ನು ಮದುವೆ!! ಅದು ಪ್ರಾಯಶಃ ಈ ಜನ್ಮದಲ್ಲಿ ಸಾಧ್ಯವಾಗುವ ವಿಚಾರವಲ್ಲ…
ತಂದೆಯೊಂದಿಷ್ಟು ಜವಾಬ್ದಾರಿಯಿಂದ ದುಡಿದು ತಂದು ಹಾಕುತ್ತಿದ್ದರೆ, ಇಲ್ಲಾ ತಮ್ಮನಾದರೂ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದರೆ ತನಗೂ ಬಿಡುಗಡೆ ಸಿಗುತ್ತಿತ್ತೇನೋ ಎಂದು ಯೋಚಿಸಿದರೂ, ಆಗದ, ಹೋಗದ ವಿಷಯಕ್ಕೆ ತಲೆಕೆಡಿಸಿಕೊಂಡು ಪ್ರಯೋಜನವೇನು ಎಂದು ರಾತ್ರಿಗಳಲ್ಲಿ ನಿಟ್ಟುಸಿರಿಡುತ್ತಾಳೆ. ಇತ್ತೀಚೆಗೆ ಸುರೇಶ ದಿನವೂ ರಾತ್ರಿಯ ನಿಶ್ಯಬ್ದದಲ್ಲಿ ಯಾರೊಂದಿಗೋ ಸಲ್ಲಾಪ ನಡೆಸುತ್ತಿರುವ ಸದ್ದು ನಿದ್ರೆಯಿಲ್ಲದೆ ಹೊರಳಾಡುವ ಕುಸುಮಳ ಕಿವಿಗೆ ಬಿದ್ದಾಗ ಅವಳ ಮನ ಇನ್ನಷ್ಟು ರಾಡಿಯಾಗುತ್ತದೆ. ನಿದ್ರೆ ಹಾರಿಹೋಗುತ್ತದೆ. ಎಂದೋ ಒಂದು ದಿನ ಏನಾದರೊಂದು ಅದ್ಭುತ ನಡೆದು ತನ್ನನ್ನೂ ಅರ್ಥಮಾಡಿಕೊಂಡು ಪ್ರೀತಿಸುವವನು ಸಿಕ್ಕು, ಜವಾಬ್ದಾರಿಯನ್ನು ಹೊರಲು ಹೆಗಲು ಕೊಡುವವನು ಸಿಕ್ಕರೆ ತಾನೂ ಈ ಜಂಜಡಗಳಿಂದ ಹೊರತಾದ ಒಂದು ಜೀವನವನ್ನು ನೋಡಬಹುದೇನೋ ಎಂದು ನಿದ್ರೆ ಬಾರದ ರಾತ್ರಿಗಳಲ್ಲಿ ಎಚ್ಚರದಲ್ಲೇ ಕನಸು ಕಟ್ಟುತ್ತಾಳೆ. ಬೆಳಗ್ಗೆ ಏಳುವಾಗ ಎಲ್ಲ ಕನಸುಗಳೂ ಹಾಗೆಯೇ ಒಲೆಯ ಬೆಂಕಿಯಲ್ಲಿ ಕರಗಿ ಪಾತ್ರೆಯಲ್ಲಿ ಬೇಯತೊಡಗುತ್ತವೆ. ಅವಳು ಮಾಮೂಲಿನಂತೆ ಊಟದ ಡಬ್ಬಿಯನ್ನೆತ್ತಿಕೊಂಡು ಫ್ಯಾಕ್ಟರಿಗೆ ಹೊರಡುತ್ತಾಳೆ…
ಆ ಮುದಿ ಸೂಪರ್ವೈಸರ್ಗೆ ನನ್ನ ವಯಸ್ಸಿನ ಮಗಳಿರಬಹುದೇನೋ… ಇನ್ನೂ ಚಪಲ ತಪ್ಪಿಲ್ಲ. ಸಮಯಾವಕಾಶ ಸಿಕ್ಕಾಗೆಲ್ಲಾ ಹೆಂಗಸರ ಮೈಮುಟ್ಟಿಯೇ ಮಾತನಾಡಿಸುವುದು. ಇನ್ನೂ ಚಿಕ್ಕವರಾದರೆ ಕೆನ್ನೆಗಿಂಡಿ ಮಾತಾಡಿಸಲೂ ಹೇಸುವುದಿಲ್ಲ. ಎದುರುಬಿದ್ದರೆ ಮಾಡಿದ ಕೆಲಸದಲ್ಲೆಲ್ಲಾ ತಪ್ಪು ಹುಡುಕಿ, ಅದೇ ಕೆಲಸವನ್ನು ಇಪ್ಪತ್ತು ಸಲ ಮಾಡುವ ಹಾಗೆ ಮಾಡಿ ಸೇಡು ತೀರಿಸಿಕೊಳ್ಳುತ್ತಾನೆ. ಸ್ವಲ್ಪ ಸದರ ಕೊಟ್ಟರೂ ʻಸಂಜೆಗೆ ಸಿಕ್ತೀಯಾ?ʼ ಅಂತ ಕೇಳಲು ಹಿಂಜರಿಯುವುದಿಲ್ಲ. ಹಾಗೆ ಅವನನ್ನು ಓಲೈಸಿಕೊಂಡವರಿಗೆ ಮಧ್ಯಾಹ್ನವೇ ಹೊರಟರೂ ಓಟಿ ಸಿಗುತ್ತದೆ. ಅವರ ಕೆಲಸವನ್ನು ಜಬರ್ದಸ್ತಿಯಿಂದ ಮಿಕ್ಕವರಿಂದ ಮಾಡಿಸುತ್ತಾನೆ. ತನ್ನ ಮೇಲೆ ಅವನಿಗೆ ಎಂದಿನಿಂದಲೋ ಕಣ್ಣಿದೆ. ಅವನ ಯಾವ ಇಶಾರೆಗಳಿಗೂ ತಾನು ಸೊಪ್ಪು ಹಾಕಿಲ್ಲ ಅಷ್ಟೇ. ಅದೇಕೋ ಅವನಿಗೂ ತನ್ನನ್ನು ಕೆಣಕುವಷ್ಟು ಧೈರ್ಯವಿಲ್ಲ. ಅವನನ್ನು ಕಂಡರೇ ಮೈಮೇಲೆ ಯಾರದೋ ಸಿಂಬಳ ಬಿದ್ದಂತ ಅಸಹ್ಯ ಮುಜುಗರವಾಗುತ್ತದೆ. ಪುಣ್ಯಕ್ಕೆ ಇವತ್ತು ಬೇರೇನೋ ಕೆಲಸವಿತ್ತೇನೋ ಹೊರಟುಹೋದ. ಅವನೇನಾದರೂ ಇಷ್ಟು ಹೊತ್ತೂ ಪ್ಯಾಕ್ಟರಿಯಲ್ಲೇ ಇದ್ದಿದ್ದರೆ…?! ತಾನೂ ಒಬ್ಬಳೇ ಇದ್ದೆ! ʻಸಧ್ಯ ನನ್ನ ಪುಣ್ಯವೇ ಕಾಪಾಡಿತುʼ ಎಂದುಕೊಂಡು ಬಸ್ಸು ಬರುವ ಹಾದಿಯನ್ನೇ ದಿಟ್ಟಿಸಿದಳು…. ಯಾವುದೇ ಸುಳಿವೂ ಇಲ್ಲ… ಮೋಡ ದಟ್ಟೈಸುತ್ತಿದೆ… ದೂರದಲ್ಲಿ ಮಿಂಚಿನ ಬೆಳಕೂ ಕಾಣಿಸುತ್ತಿದೆ… ಇದ್ದಕ್ಕಿದ್ದ ಹಾಗೆಯೇ ಗಾಳಿಯೂ ತಂಪಾಗತೊಡಗಿ… ಮಳೆಹನಿಗಳು ರಪರಪನೆ ಬೀಳಲಾರಂಭಿಸಿತು… ಹಾಗೆಯೇ ಜೋರಾಗುತ್ತಾ ಬಂದು ಕೆಲವೇ ನಿಮಿಷಗಳಲ್ಲಿ ರಸ್ತೆಯಲ್ಲಿ ಕೊಚ್ಚೆ ಹರಿಯಲು ಶುರುವಾಯಿತು….
ಮತ್ತಷ್ಟು ಭಯವಾದ ಕುಸುಮಾ ಸುತ್ತಮುತ್ತಲೂ ನೋಡತೊಡಗಿದಳು. ಯಾವ ವಾಹನಗಳೂ ಓಡಾಡುತ್ತಿಲ್ಲ. ಒಂದೆರಡು ನಿಮಿಷಗಳಲ್ಲೇ ಕರೆಂಟು ಹೋಗಿ ಸುತ್ತಲೂ ಮಬ್ಬಾಗಿಹೋಯಿತು… ಇಲ್ಲಿ, ಈಗ… ತನ್ನ ತಲೆಯೊಡೆದರೂ ಯಾರೂ ಕೇಳುವವರಿಲ್ಲ ಎನ್ನಿಸಿ ಆ ಥಂಡಿಯಲ್ಲೂ ಬೆವರತೊಡಗಿದಳು. ಎಲ್ಲಿಂದಲೋ ಗುಡುಗುಡು ಎನ್ನುವ ಬೈಕಿನ ಶಬ್ದವೊಂದು ಕೇಳಿ ಆ ದಿಕ್ಕಿಗೆ ತಿರುಗಿದಳು. ಬಸ್ಟಾಪಿನ ಪಕ್ಕದಲ್ಲೇ ಬಂದು ನಿಂತ ಬೈಕಿನಿಂದ ಒಬ್ಬ ಇಳಿದ, ಬೈಕು ಆರುವ ಮುನ್ನ ಒಂದು ಕ್ಷಣ ಆ ಬೆಳಕಲ್ಲಿ ಅವನೊಬ್ಬ ಯುವಕನೆಂದು ತಿಳಿಯಿತು. ʻಅವನ್ಯಾರೋ… ಏನೋ… ಅವನ್ಯಾಕೆ ಇಲ್ಲೇ ನಿಂತ?! ತನ್ನನ್ನೇನಾದರೂ ಮಾಡಿದರೆ… ಅವನೊಬ್ಬನೇ ಇದ್ದಾನೋ, ಇಲ್ಲವೇ ಅವನ ಜೊತೆಯವರೂ ಯಾರಾದರೂ ಸೇರಿಕೊಳ್ಳುತ್ತಾರೋ… ಎಲ್ಲೆಲ್ಲೂ ಕೇಳುತ್ತಿರುವ ಗ್ಯಾಂಗ್ ರೇಪ್…!! ಬರೀ ಕೇಳುತ್ತಿದ್ದುದು ಈಗ ತನ್ನ ಮೇಲೇ ನಡೆದೇಬಿಟ್ಟರೆ…. ಹೆದರಿ ಹೆದರಿ ಉಸಿರು ಬಿಡುವ ಶಬ್ದವೂ ಇನ್ನೊಬ್ಬರಿಗೆ ಕೇಳದಂತೆ ಮತ್ತಷ್ಟು ಮುದುಮುದುಡಿಕೊಂಡು ಒಂದು ಅಂಚಿನಲ್ಲಿ ನಿಂತಳು… ಇರುಚಲಿಗೆ ಸೀರೆ ನೆನೆಯತೊಡಗಿತು.
ಆ ಯವಕ ಪರಿಚಿತನೇನೋ ಅನ್ನುವ ಹಾಗೆ ಬಂದು ಅವಳು ಕೈಗೆಟುಕುವಷ್ಟು ದೂರದಲ್ಲೇ ನಿಂತ. ಹೆಲ್ಮೆಟ್ಟನ್ನು ತೆಗೆದು ಜೇಬಿನಿಂದ ಕರ್ಚೀಪನ್ನು ತೆಗೆದುಕೊಂಡು ತಲೆಯನ್ನೂ ಮುಖವನ್ನೂ ಒರಸಿಕೊಂಡ. ಹಾಕಿಕೊಂಡ ಜಾಕೆಟ್ಟನ್ನು ತೆಗೆದು ಜೋರಾಗಿ ಕೊಡವಿದ ಹನಿಗಳು ಕುಸುಮಳ ಮೇಲೂ ಎಗರಿ ಅವಳಿಗೆ ಮತ್ತಷ್ಟು ಭಯವಾಗಿ ಅವನನ್ನು ನೋಡಲೂ ಹೆದರಿ ನಿಂತಲ್ಲೇ ನಡುಗಿದಳು. ಕತ್ತಲಿನಲ್ಲಿಯೇ ಅವನು ಅವಳನ್ನು ಗಮನಿಸುತ್ತಿದ್ದನೇ..? ಮತ್ತಷ್ಟು ಹೆದರಿ ಮೈತುಂಬಾ ಸೆರಗನ್ನು ಹೊದ್ದು ಮಳೆಯಲ್ಲಿ ನೆಂದ ಹಕ್ಕಿಯಂತೆ ನಿಂತಳು. ದೂರದಲ್ಲಿ ಯಾವುದೋ ವಾಹನದ ಬೆಳಕು… ಇತ್ತಲೇ ಬರುತ್ತಿದೆ. ಅವನೂ ಅತ್ತಲೇ ನೋಡುತ್ತಿದ್ದಾನೆ… ಅವನ ಸಂಗಡಿಗರೇ…?! ಹೆದರಿಕೆಯಿಂದ ಅವನ ಮುಖವನ್ನೇ ಗಮನಿಸಿದಳು… ಒಂದು ಕ್ಷಣ ಕಾರಿನ ಬೆಳಕು ಅವನ ಮುಖದ ಮೇಲೆ ಬಿತ್ತು. ಹುಡುಗ ನೋಡಲು ಚೆನ್ನಾಗಿದ್ದಾನೆ ಅನ್ನಿಸಿತು. ಆ ಯೋಚನೆಗೇ ಬೆದರಿ ಮುಖದಿರುವಿ ನಿಂತಳು…
ಯಾವ ಬಸ್ಸಿನ ಸುಳಿವೂ ಇಲ್ಲ. ಸ್ವಲ್ಪ ಆಚೆ ಸರುಗಿದರೆ ತಗುಲೇ ಬಿಡುತ್ತಾನೇನೋ… ಮತ್ತಷ್ಟು ಪಕ್ಕದ ಕಂಬಕ್ಕೆ ಒತ್ತರಿಸಿಕೊಂಡಳು. ಏನಾದರೂ ತನ್ನ ಹೆದರಿಕೆಯನ್ನು ತೋರಬಾರದೆಂದುಕೊಂಡು ಬಸ್ಸು ಬರುವ ದಾರಿಯತ್ತಲೇ ಕಣ್ಣು ನೆಟ್ಟು ಅವನಿರುವಿಕೆಯೇ ತನ್ನ ಗಮನಕ್ಕೆ ಬಂದಿಲ್ಲವೇನೋ ಎಂದುಕೊಳ್ಳುವಂತೆ ನಿಂತಳು. ಆದರೂ ಮನಸ್ಸಿಗೆ ತನಗೂ ಇಂತಹ ಹುಡುಗನೊಬ್ಬ ಸಿಕ್ಕಿ ಮದುವೆಯಾಗಿದ್ದರೆ… ಹೀಗೆ ನಿಲ್ಲುವುದರಲ್ಲೂ ಖುಷಿಯಿರುತ್ತಿತ್ತೇನೋ ಅನ್ನಿಸಿ, ತಕ್ಷಣವೇ ತನ್ನ ಯೋಚನೆಗೆ ತಾನೇ ಕಡಿವಾಣ ಹಾಕಿಕೊಳ್ಳಲು ಯತ್ನಿಸಿದಳು. ಆದರೆ ಕಡಿವಾಣ ಹಾಕಲು ಮನಸ್ಸೇನು ಕುದುರೆಯೇ… ನಿದ್ರೆ ಬಾರದ ರಾತ್ರಿಗಳಲ್ಲಿ ಬರುವ ಯೋಚನೆಗಳೆಲ್ಲಾ ನುಗ್ಗಿ ನುಗ್ಗಿ ಬಂದು ಅವಳ ಮೈ ನಿಂತಲ್ಲೇ ಬೆಚ್ಚಗಾಗತೊಡಗಿತು. ಅದೆಷ್ಟು ಕೊಡವಿಕೊಳ್ಳಲು ಹೋದರೂ ಮುತ್ತಿಕೊಳ್ಳುವ ನೊಣಗಳಂತೆ ಅವಳಲ್ಲಿ ಏನೇನೋ ಭಾವಗಳು ಮೂಡತೊಡಗಿದವು… ಸಿನಿಮಾಗಳಲ್ಲಿ ನೋಡುವ ಹಾಗೆ ಇದ್ದಕ್ಕಿದ್ದ ಹಾಗೆ ಅವನಿಗೆ ನನ್ನಲ್ಲಿ ಪ್ರೀತಿ ಹುಟ್ಟಿಬಿಟ್ಟರೇ…?! ಚಳಿಯಿಂದ ನಡುಗುತ್ತಿರುವ ತನ್ನನ್ನು ಅವನು ತಬ್ಬಿಬಿಟ್ಟರೆ…?! ಇನ್ನಷ್ಟು ಕಾಲ ಹೀಗೇ ನಿಂತಿದ್ದರೆ… ಹಾಗೆಯೇ ಆಗೇ ಬಿಡಬಿಹುದೇನೋ… ಅನ್ನಿಸಿ ಅವಳ ಕೆನ್ನೆಯೆಲ್ಲಾ ಬಿಸಿಯಾಗತೊಡಗಿತು…
ಒಮ್ಮೆ ಅವನತ್ತ ನೋಡಲೇ ಅನ್ನಿಸಿದರೂ ಅದನ್ನೇ ಇಶಾರೆ ಅಂದುಕೊಂಡು ಮುಂದುವರೆದುಬಿಟ್ಟರೆ?! ಬಿಟ್ಟರೆ… ಏನು ಬಿಟ್ಟರೆ! ಬಿಡುವುದು ಬೇಡ, ಬಂದು ಅಪ್ಪಿಕೊಂಡುಬಿಡಲಿ… ಜೀವನದಲ್ಲಿ ನನಗಂತಹ ಭಾಗ್ಯವೇ ಇಲ್ಲವೇನೋ… ಇಂದು… ಇಲ್ಲಿ… ಒಂದು ಸಲ ಅವನು ತಬ್ಬಿಕೊಂಡುಬಿಟ್ಟರೆ… ಒಂದು ಕ್ಷಣವಾದರೂ ಅವನ ಎದೆಗೊರಗಿ ಅವನ ಹೃದಯದ ಬಡಿತಕ್ಕೆ ಕಿವಿಗೊಡಲು ಆದರೆ… ಬಸ್ಸು ಬರುವುದರೊಳಗೆ ಅವನೊಂದು ಸಲ ತನ್ನನ್ನು ತಬ್ಬಿಕೊಂಡು ಅವನ ತುಟಿಗಳಿಂದ ತನ್ನ ತುಟಿಗಳನ್ನು ಹುಡುಕಿಬಿಡಲಿ ಅನ್ನಿಸಿಬಿಟ್ಟಿತು… ತಕ್ಷಣವೇ ಅಯ್ಯಯ್ಯೋ ಇದೇನು ಹೀಗೆ ಯೋಚಿಸುತ್ತಿದ್ದೇನೆ ಎನ್ನಿಸಿ ಭಯವಾಯಿತು. ತನ್ನಲ್ಲಿಷ್ಟೊಂದು ತುಮುಲವೇಳುತ್ತಿದ್ದರೆ ಅವನದೆಷ್ಟು ಹಾಯಾಗಿ ಕಂಬಿಯ ಮೇಲೆ ಎರಡೂ ಕೈಚಾಚಿ ನಿರಾಳವಾಗಿರುವಂತೆ ನಿಂತಿದ್ದಾನಲ್ಲ! ಅವನಿಗೇನೂ ಅನ್ನಿಸುತ್ತಿಲ್ಲವೇ?! ಅಯ್ಯೋ… ಅವನಿಗೇಕನ್ನಿಸಬೇಕು?! ಅವನಿಗೆ ಈಗಾಗಲೇ ಮದುವೆಯಾಗಿ ಹೆಂಡತಿ ಮಕ್ಕಳಿರಬಹುದು. ನನ್ನ ಹಾಗೆ ಅವನಿಗೂ ಈಡೇರದ ನಿರೀಕ್ಷೆಗಳಿರಬೇಕೆಂದೇನೂ ಇಲ್ಲವಲ್ಲ…
ಮಳೆ ಜೋರಾಗುತ್ತಲೇ ಇತ್ತು… ಇದ್ದಕ್ಕಿದ್ದ ಹಾಗೆ ಸ್ವಲ್ಪ ದೂರದಲ್ಲೇ ಇದ್ದ ಮರಕ್ಕೆ ಸಿಡಿಲೊಂದು ಬಡಿದು ಧಡ್ ಧಡ್ ಢಮಾಲ್! ಎಂದು ಕಿವಿಕಿವುಡಾಗುವ ಹಾಗೆ ಸದ್ದಾಗಿ, ಆ ಸದ್ದಿಗೆ ಹೆದರಿದ ಕುಸುಮಾ ಚೀರಿಕೊಳ್ಳುತ್ತಾ ಪಕ್ಕದಲ್ಲಿದ್ದವನನ್ನು ತಬ್ಬಿಕೊಂಡು ಕಣ್ಣುಮುಚ್ಚಿ ಅವನೆದೆಗೆ ಒರಗಿದಳು… ಆ ಮರ ಹೊತ್ತಿಕೊಂಡು ಉರಿಯತೊಡಗಿತು… ಅವನ ಎದೆಬಡಿತ ಕೇಳುತ್ತಿತ್ತೇ…?! ಅವನ ಕೈ ಅವಳ ತಲೆಯನ್ನು ನೇವರಿಸತೊಡಗಿತು. ಒಂದಷ್ಟು ಹೊತ್ತಿನ ಬಳಿಕ ಇಹಕ್ಕೆ ಬಂದವಳು ತಲೆಯೆತ್ತಿ ಅವನನ್ನು ನೋಡಿದಳು. ಅವನ ಕೈ ಅವಳನ್ನು ಬಳಸಿರಲಿಲ್ಲ… ಬಿಗಿದಪ್ಪಿರಲಿಲ್ಲ… ಬಿಸಿಯುಸಿರು ಅವಳನ್ನು ತಾಗುತ್ತಿರಲಿಲ್ಲ… ಆದರೆ ಅವಳನ್ನು ದೂಡಿರಲೂ ಇಲ್ಲ… ಅವಮಾನವಾದಂತೆ ತಲೆತಗ್ಗಿಸಿ ಪಕ್ಕಕ್ಕೆ ಸರಿದಳು. ಅವಳ ಮುಂದೆ ನಿಂತವನು “ಈ ಜಾಗ ಸರಿಯಿಲ್ಲ. ನೀನು ಬಸ್ಸು ಹತ್ತುವ ತನಕ ಜೊತೆಗಿರೋಣ ಎಂದು ನಿಂತೆ. ಹೆದರಬೇಡ ತಂಗಿ, ನಾನು ಸಲಿಂಗಿ” ಎಂದವನೇ ಅವಳ ಭುಜ ತಟ್ಟಿ ತಲೆ ನೀವರಿಸಿದ. ಅವಮಾನವಾದ ಹಾಗೆನಿಸಿ ಅವಳಿಂದ ತಲೆಯೆತ್ತಲಾಗಲಿಲ್ಲ. ಮಳೆ ಕಡಿಮೆಯಾಗತೊಡಗಿತ್ತು. ಹೊತ್ತಿ ಉರಿಯುತ್ತಿದ್ದ ಮರ ಮಳೆನೀರಿನಿಂದ ತಣ್ಣಗಾಗತೊಡಗಿತ್ತು. ದೂರದ ತಿರುವಿನಿಂದ ಬಸ್ಸು ಈ ರಸ್ತೆಗೆ ತಿರುಗುತ್ತಿರುವುದು ಕಾಣಿಸಿತು. ಸೆರಗಿನಿಂದ ಮುಖವನ್ನೊಮ್ಮೆ ಒರೆಸಿಕೊಂಡು ಅವನೆಡೆಗೆ ತಿರುಗಿ ಕೈಮುಗಿದಳು. ಅವನು ಮುಂದೆ ಹೋಗಿ ಕೈ ಅಡ್ಡಹಾಕಿ ಬಸ್ಸನ್ನು ನಿಲ್ಲಿಸಿದ. ತುಂಬಿ ತುಳುಕುತ್ತಿದ್ದ ಬಸ್ಸಿನಲ್ಲಿ ಅವಳು ಹೇಗೋ ತೂರಿಕೊಂಡಳು. ಅವನು ಹೆಲ್ಮೆಟ್ಟನ್ನು ಹಾಕಿಕೊಂಡು ಬೈಕಿನ ಕಡೆಗೆ ನಡೆದ…
✴️✴️✴️
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ