ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಇಳೆಯ ಹಾಡುಪಾಡು

ಗೀತಾ ಡಿಸಿ

ಇರುಳ ಬೆಡಗನು ನಂಬಿ
ಹಗಲ ಮುಗುಳನು ತುಂಬಿ
ಒಳಗಿನೊಳಗನು ಬೆಳಗಿ
ಧೇನಿಸಿದಳು ಧಾತ್ರಿ

ಇವಳ ಧ್ಯಾನಕೆ ಹಕ್ಕಿ
ಲಾಲಿ ಹಾಡಲು ತೊಡಗಿ
ಇಬ್ಬನಿಯು ಮುತ್ತಾಗಿ
ಇಳೆ ಬೆಳಗಿತು!

ಇಲ್ಲಿ ಚೆಲ್ಲಿದ ಬೆಡಗು
ಏಳು ಬಣ್ಣವ ಹೊದ್ದು
ಆಗಸಕೆ ಬಿಲ್ಲಾಗಿ
ರಂಗೇರಿತು!

ತಂಪು ತಿಂಗಳು ಅರಳಿ
ಮಿನುಮಿನುಗಿ ತಾರೆಗಳು
ಇರುಳಿಗೇ ಹೊಳಪೇರಿ
ಬೆಡಗಾಯಿತು!

ಈ ಎಲ್ಲ ಹೊಳಪಿನಡಿ
ಪ್ರೇಮಿಗಳು ಹಾಡಿದರು
ಪ್ರೀತಿಯನು ಬೆಳಗಿದರು
ಇಳೆಯ ತುಂಬ

ಇದ್ದಕಿದ್ದಲೆ ಇಲ್ಲಿ
ಯಾರ ದಿಟ್ಟಿಯೋ ತಾಗಿ
ಅಧಿಕಾರದಮಲೇರಿ
ಅಣುಬಾಂಬು ಸಿಡಿದು

ನೆನ್ನೆಯಷ್ಟೇ ಇಲ್ಲಿ
ಹಸಿರಿತ್ತು ಬಯಲಿನಲಿ
ರಕ್ತದೋಕುಳಿ ಹೀಗೆ
ಹರಿದದ್ದು ಹೇಗೆ?

ಮೊಳೆತ ಕನಸುಗಳೊಡೆದು
ಮನಮನವು ಕರಕಾಗಿ
ಕನಸಲ್ಲು ಬೆಚ್ಚುವಳು
ಇಳೆಯು ನಡುಗಿ

ಎದೆಹಾಲು ಕುಡಿದವರೆ
ನೀವೆತ್ತ ಸಾಗಿದಿರಿ?
ಈ ತಾಯಿ ಸಂಕಟವ
ಕಾಣಿರೊಮ್ಮೆ.

ಜೀವಗಳ ಜೊತೆಯಲ್ಲಿ
ಆಟವಾಡಿದ್ದು ಸಾಕು
ಜೀವಮಿಡಿತದ ಸದ್ದು
ಕೇಳಿರೊಮ್ಮೆ.

ಸಾಧನೆಯ ಹಾದಿಯಲಿ
ಎಷ್ಟು ಬೆಳೆದರೆ ಏನು?
ಪ್ರೀತಿ ಇಲ್ಲದ ಮೇಲೆ
ಬದುಕು ಬರಡಲ್ಲವೇನು?

ಇನ್ನಾದರೂ ಇಲ್ಲಿ
ಪ್ರೀತಿ ಮೊಳೆಯುತಲಿರಲಿ
ಮೊಗ್ಗರಳಿ ಹೂವಾಗಿ
ಕಂಪು ಪಸರಿಸುತಿರಲಿ

ಬಗೆಬಗೆಯ ಕದನಗಳು
ಇಲ್ಲವಾಗಲಿ ಇಲ್ಲಿ
ಪ್ರೀತಿಯೇ ತುಂಬಿರಲಿ
ಇಳೆಯ ಕದಪಿನಲಿ