ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಖ್ಯಾತನಾಮರು, ನನ್ನ ಮರೆತರು…

ಗಣೇಶ್ ಕಾಸರಗೋಡು
ಇತ್ತೀಚಿನ ಬರಹಗಳು: ಗಣೇಶ್ ಕಾಸರಗೋಡು (ಎಲ್ಲವನ್ನು ಓದಿ)

     ಇವರಿಬ್ಬರೂ ಪೈಪೋಟಿಗೆನ್ನುವಂತೆ ನನಗೆ ಪತ್ರ ಬರೆಯುತ್ತಿದ್ದರು! ಒಬ್ಬರು ಖ್ಯಾತ ಕಾದಂಬರಿಕಾರರು : ಕೆ.ಟಿ.ಗಟ್ಟಿ. ಮತ್ತೊಬ್ಬರು ಖ್ಯಾತ ನವ್ಯಕವಿ ಕೆ.ವಿ.ತಿರುಮಲೇಶ್! ಒಬ್ಬರು ಇತಿಯೋಪಿಯದಲ್ಲಿದ್ದರು, ಮತ್ತೊಬ್ಬರು ಇಲ್ಲೇ ಹೈದರಾಬಾದ್’ನಲ್ಲಿದ್ದರು.

     ನಾನು ಹೇಳುತ್ತಿರುವುದು ದಶಕಗಳ ಹಿಂದಿನ ಸಂಗತಿಗಳನ್ನು. ಆಗ ಇವರಿಬ್ಬರಿಗೂ ಬೆಂಗಳೂರಿನಲ್ಲಿ ಕನ್ನಡದ ಕೊಂಡಿಯಂತಿರುವ ಒಬ್ಬ ವ್ಯಕ್ತಿ ಬೇಕಾಗಿದ್ದರು. ನನ್ನನ್ನು ಆರಿಸಿಕೊಂಡರು. ಇದಕ್ಕೆ ಕಾರಣವೂ ಇದೆಯೆನ್ನಿ : ಆ ಇಬ್ಬರೂ ಕಾಸರಗೋಡಿನವರು! ಒಬ್ಬರು ಕೂಡ್ಲಿನವರು, ಮತ್ತೊಬ್ಬರು ನೀರ್ಚಾಲಿನವರು. ಪ್ರಾಯಶಃ ಈ ಬಂಧವೇ ನಮ್ಮನ್ನು ಪರಸ್ಪರ ಬೆಸೆದಿರಲೂ ಬಹುದು…

     ಆಯಾ ದೇಶದಲ್ಲಿ, ಊರಿನಲ್ಲಿ ಸರ್ವೀಸು ಮುಗಿಯುವವರೆಗೆ ನನ್ನ ಮತ್ತು ಈ ಇಬ್ಬರು ಮಹನೀಯರ ಸ್ನೇಹಸೇತು ಗಟ್ಟಿಯಾಗಿಯೇ ಇತ್ತೆನ್ನಿ. ಯಾವತ್ತೂ ಈ ಇಬ್ಬರೂ ರಿಟೈರ್ ಆದರೋ ನನ್ನ ಸಂಪರ್ಕ ಕಟ್!

     ಕಾಸರಗೋಡಿನ ಸರ್ಕಾರೀ ಹೈಸ್ಕೂಲಿನಲ್ಲಿ ಒಂದೇ ಒಂದು ದಿನಕ್ಕೆ ಕನ್ನಡ ಮೇಷ್ಟ್ರಾಗಿದ್ದ ಕೆ.ಟಿ.ಗಟ್ಟಿ ಇತಿಯೋಪಿಯ ಸೇರಿಕೊಂಡ ಮೇಲೆ ಎರಡು ತಿಂಗಳಿಗೊಂದು ಪತ್ರ ಬರೆದು ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಹಾಗುಹೋಗುಗಳ ಬಗ್ಗೆ ಕುತೂಹಲದಿಂದ ವಿಚಾರಿಸುತ್ತಿದ್ದರು. ನಾನು ಕೂಡಾ ಅಷ್ಟೇ ಉಮ್ಮೇದಿಯಿಂದ ಉತ್ತರಿಸುತ್ತಿದ್ದೆ. ಖ್ಯಾತ ಕಾದಂಬರಿಕಾರರೊಬ್ಬರೊಂದಿಗಿನ ನನ್ನ ಸಂಪರ್ಕ ಹಲವು ಗೆಳೆಯರಿಗೆ ಕುತೂಹಲದಾಯಕ ಮತ್ತು ಅಸೂಯಾದಾಯಕ ವಿಚಾರವಾಗಿತ್ತು! ಇತಿಯೋಪಿಯದಲ್ಲಿ ಕೆ.ಟಿ.ಗಟ್ಟಿ ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಇದ್ದಕ್ಕಿದ್ದಂತೆಯೇ ಭಾರತಕ್ಕೆ ಎಂಟ್ರಿ ಕೊಟ್ಟರು ನೋಡಿ, ನನ್ನನ್ನು ಮರೆತೇ ಬಿಟ್ಟರು! ಒಂದು ದಿನ ಅಚಾನಕ್ಕಾಗಿ ‘ಸಂಯುಕ್ತ ಕರ್ನಾಟಕ’ ಪತ್ರಿಕಾ ಆಫೀಸಿನಲ್ಲಿ ಇವರ ಭೇಟಿಯಾಯಿತು. ಯಾರೋ ಅನ್ಯಗೃಹ ಜೀವಿಯನ್ನು ನೋಡುವಂತೆ ನೋಡಿ ಹೊರಟೇ ಹೋದರು. ಪಿಚ್ಚೆನ್ನಿಸಿದ್ದು ನಿಜ. ಇತಿಯೋಪಿಯಾದಲ್ಲಿರುವಾಗ ಪತ್ರಗಳನ್ನು ಬರೆದು ಕರ್ನಾಟಕದ ಸುದ್ದಿಗಳನ್ನು ತರಿಸಿಕೊಳ್ಳುತ್ತಿದ್ದ ಅದೇ ಗಟ್ಟಿಯಾ ಇವರು ಎಂಬ ಪ್ರಶ್ನೆ ಎದುರಾಯಿತು! ಬೇಜಾರಾದದ್ದು ನಿಜ, ಆದರೆ ದೇವರಾಣೆಗೂ ಆಘಾತವಾಗಲಿಲ್ಲ..

     ಇನ್ನು ಕೆ.ವಿ.ತಿರುಮಲೇಶ್ ವಿಚಾರ. ಇವರು ಹೈದದಾಬಾದಿನ ಉಸ್ಮಾನಿಯಾ ಯೂನಿವರ್ಸಿಟಿಯ ಲಿಂಗ್ವಿಸ್ಟಿಕ್ ವಿಭಾಗದಲ್ಲೆಲ್ಲೋ ಉದ್ಯೋಗದಲ್ಲಿದ್ದರು. ಅಲ್ಲಿರುವಾಗ ಇವರು ನನಗೆ ಪತ್ರ ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು. ನಾನು ಕೂಡಾ ರೆಗುಲರ್ ಆಗಿ ಪತ್ರ ಬರೆಯುತ್ತಿದ್ದೆ. ಕಾಸರಗೋಡಿನ ಮಾಲಿಕ್ಕಾರ್ಜುನ ದೇವಸ್ಥಾನದ ಎದುರಿನ ಸ್ಟೀಲ್ ಪಾತ್ರೆ ಪಗಡೆ ಯ ಅಂಗಡಿಯಲ್ಲೊಮ್ಮೆ ಸಿಕ್ಕಾಗ ರಿಟೈರ್ ಆಗಿರುವುದಾಗಿ ಹೇಳಿಕೊಂಡಿದ್ದ ನೆನಪು. ಇದಕ್ಕೂ ಮೊದಲು ಸರ್ವೀಸಿನಲ್ಲಿರುವಾಗ ‘ರಿಟೈರ್ ಆದ ಮೇಲೆ ನಾನು ಬೆಂಗಳೂರಿಗೆ ಬಂದು ಸೆಟ್ಲ್ ಆಗ ಬೇಕೆಂದಿದ್ದೇನೆ, ಯಾವ ಏರಿಯಾದಲ್ಲಿ ಮನೆ ಮಾಡಿದರೆ ಚೆನ್ನ?’ – ಎಂದೆಲ್ಲಾ ಹೇಳಿಕೊಂಡಿದ್ದರು. ಆದ್ರೆ ರಿಟೈರ್ ಆದ ಮೇಲೆ ಬೆಂಗಳೂರನ್ನು ಮರೆತರು ಮತ್ತು ನನ್ನನ್ನೂ ಮರೆತರು!!!

     ಬೇಜಾರೇನಿಲ್ಲ. ಒಂದು ಕಾಲದಲ್ಲಿ ಈ ಖ್ಯಾತನಾಮರ ಜತೆ ನನಗೂ ಚೆಂದದ ಸಂಪರ್ಕವಿತ್ತು ಎಂದು ಹೇಳಿಕೊಳ್ಳುವ ಮಜಾ ಹತ್ತಿರದಲ್ಲಿದ್ದರೆ ಇರುವುದಿಲ್ಲ ಅಲ್ಲವೇ?

     ಈಗ ಇವರಿಬ್ಬರೂ ಕಾಲವಾಗಿದ್ದಾರೆ. ನಿಧನದ ನಂತರ ಏನೇ ಕೆಟ್ಟದ್ದನ್ನು ನೆಗೆಟಿವ್ ಅರ್ಥದಲ್ಲಿ ಬರೆಯಬಾರದಂತೆ. ಆದರೆ ನಾನೇನು ಮಾಡಲಿ? ಇದು ವಾಸ್ತವವಾಗಿ ನಡೆದದ್ದು, ನಿಮ್ಮ ಮುಂದಿಟ್ಟಿದ್ದೇನೆ….