- ನುಬ್ರಾಗೆ ನುಬ್ರಾ ಮಾತ್ರ ಸಾಟಿ - ಜೂನ್ 26, 2022
- ಲೈ ಹರೋಬಾ ಎಂಬ ಪವಿತ್ರ ನೃತ್ಯದ ನೌಬತ್ತುಗಳು.. - ಜೂನ್ 12, 2022
- ಒಲ್ಲದ ಓಟವೇ ಆಟವಾದ ಸಾಗೋಲ್ ಕಂಜೈ.. - ಮೇ 22, 2022
ಗಂಡಸರಿಗೆ ಅಂಥಾದ್ದು ಅನುಭವಿಸೋದು ಕರ್ಮ.ಆದರ ಹೆಂಗಸರ ಮನಸ್ಸು ಭಾಳಾ ಸೂಕ್ಷ್ಮ.ಎಷ್ಟ ಏನು ಮಾಡಿದರೂ ಮಕ್ಕಳು, ಮರಿ ಅನ್ನೋ ಕಕ್ಕುಲಾತಿ.
ಈ ಕೆಳಗಿನ ಕಥೆಯಿಂದ
ಕಾರವಾರದಲ್ಲಿದ್ದ ವೆಂಕಟರಮಣ ಮೊಗೇರ ಫೋನ್ ಮಾಡಿ ಮಾತಾಡುತ್ತಿದ್ದವ ಇದ್ದಕ್ಕಿದ್ದಂತೆ, “..ಶಂಕರ ನಿಂಗ ಗೊತ್ತಾತ..? ನಾಯಕ ಮಾಸ್ತರರು ಪ್ರಶಸ್ತಿ ತಗಳಕೂ ಬರಲಿಲ್ಲ ಮಾರಾಯ..” ಎನ್ನುತ್ತಿದ್ದಂತೆ ನನ್ನ ಕಣ್ಣ ಮುಂದೆ ಎತ್ತರದ ನಿಲುವಿನ, ದೊಗಳೆ ಪೈಜಾಮು ಮತ್ತು ಅಚ್ಚ ಬಿಳಿ ಶರ್ಟಿನ ನಾಯಕ ಮಾಸ್ತರರು ಹಾಯ್ದು ಹೋಗಿದ್ದರು. ಮೊದಲಿನಿಂದಲೂ ಮೇಷ್ಟ್ರಿಕೆಯಲ್ಲಿ ಅವರಿಗಿದ್ದ ಗತ್ತೆ ಬೇರೆ. ನುಜ್ಜಿಯ ಸರಕಾರಿ ಪ್ರೌಢ ಶಾಲೆಗೆ ಮಾಸ್ತರಗಳು ಬರುತ್ತಿದ್ದುದೇ ಅಪರೂಪ. ಬಂದವರು ನಿಲ್ಲುತ್ತಿದ್ದುದು ಇನ್ನೂ ಅಪರೂಪ. ಸತತ ಆರು ತಿಂಗಳ ಮಳೆ, ಘಟ್ಟದ ರಸ್ತೆ ಹಾಗಾಗಿ ಬಸ್ಸಿನ ಸೌಲಭ್ಯವೂ ಅಷ್ಟಕ್ಕಷ್ಟೆ. ಇಲ್ಲಿಗೆ ಬಂದ ಮೊದಲ ದಿನದಿಂದಲೇ ಕಾರವಾರದ ಕಡೆಗೆ ವರ್ಗಕ್ಕೆ ಪ್ರಯತ್ನಿಸುತ್ತಿದ್ದ ಮಾಸ್ತರರು, ಅಕ್ಕೋರಗಳ ಮಧ್ಯೆ ಸತತ ಏಳೆಂಟು ವರ್ಷ ಬದುಕು ಮಾಡಿದ, ಅಷ್ಟೂ ವರ್ಷ ನುಜ್ಜಿ ಎಂಬ ಊರ ಹುಡುಗರ ಗಣಿತ ತಿದ್ದಿ ಬೆಳೆಸಿದ ಕಾರಣಕ್ಕೆ, ಹಳ್ಳಿ ಯಾವತ್ತೂ ಅವರಿಗೆ ಋಣಿಯೇ.
ಎರಡೂವರೆ ದಶಕಗಳ ಹಿಂದಿನ ಮಾತದು. ಆಗೆಲ್ಲಾ ಬದುಕು ಎಂದರೇನೇ ಬಡತನ ಮತ್ತು ಕಷ್ಟ ಎನ್ನುವುದರ ಸರಳಗಣಿತವಾಗಿದ್ದ ಕಾಲ ಅದು. ಮೂರು ತಾಸು ಘಟ್ಟದ ಕೆಳಗಿನ ಹಾದಿ ದಾಟಿದರೆ ಕಾರವಾರ, ಮೇಲೆ ಎರಡು ತಾಸಿಗೆ ದಾಂಡೆಲಿ. ಇಂಥಾ ಮಧ್ಯದಲ್ಲಿನ ಅಣಶಿ ಘಟ್ಟದ ಹೆಗಲ ಮೇಲಿದ್ದ ನುಜ್ಜಿಗೆ ವರ್ಗವಾಗಿ ಬಂದೋರು ನಾಯಕ ಮಾಸ್ತರರು. ಆಗ ತನಗೆಷ್ಟು..? ಇನ್ನೂ ಆರನೆತ್ತಿ ಓದುತ್ತಿದ್ದ ಕಾಲ. ಆಗೆಲ್ಲಾ ನಾಯಕ ಮಾಸ್ತರೆಂದರೆ ನಾಯಕ ಮಾಸ್ತರರು ಅಷ್ಟೇ. ಮತ್ತೆ ಎಲ್ಲಿಂದ ಬಂದವರು, ಯಾರು ಇತ್ಯಾದಿ ಕೇಳುವ ಪ್ರಮೇಯವೇ ಇರಲಿಲ್ಲ. ಕಾರಣ ಕುಮಟೆ, ಅಂಕೋಲ, ಕಾರವಾರದ ಬುಡದಿಂದ ಹೊನ್ನಾವರದ ಪಾದದವರೆಗೆ ಎಲ್ಲಿಂದ ಕಲ್ಲು ಎಸೆದರೂ ಅದು ಯಾವುದಾದರೂ ಮಾಸ್ತರ ಮನೆಯ ಮೇಲೆಯೇ ಬೀಳುತ್ತದೆ ಎನ್ನುವಷ್ಟು ಮಾಸ್ತರಿಕೆ ಅಲ್ಲಿನ ನಾಡವರ ಕುಟುಂಬದಲ್ಲಿದೆ. ಹಾಗಾಗಿ ಬಂದವರು ಆ ಕಡೆಯವರೇ ಮತ್ತು ಮೀನು ತಿನ್ನುವವರೇ ಎನ್ನುವ ಎರಡು ಸ್ಟಾಂಡರ್ಡ್ ನಂಬಿಕೆಗಳಿಗೆ ಜಿಲ್ಲೆಯಲ್ಲಿ ಯಾವತ್ತೂ ಚ್ಯುತಿ ಬಂದಿಲ್ಲ.
ಬೇರೆ ಉದ್ಯೊಗದಲ್ಲಿ ಅಷ್ಟಾಗಿ ಹಿಡಿತ ಇಲ್ಲದ, ಕರಾವಳಿಯ ಕಷ್ಟಗಳಿಗೆ ಹೆಗಲು ನೀಡಿ ಬದುಕು ಕಟ್ಟಿಕೊಳ್ಳುವವರಿಗೆ ನೌಕರಿ ಎಂದರೆ ಸುಲಭಕ್ಕೆ ಕಾಣಿಸುತ್ತಿದ್ದುದೇ ಮಾಸ್ತರಿಕೆ. ಅದರಲ್ಲೂ ಅಂಕೋಲೆಯ ನಾಡವರ ಪ್ರತೀ ಮನೆಗಳೂ ಮಾಸ್ತರಗಳದ್ದೆ. ಎಷ್ಟೊ ಕುಟುಂಬಗಳಲ್ಲಿ ಹುಡುಗನಿಗೆ ಮಾಸ್ತರಿಕೆಯ ನೌಕರಿ ಸಿಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಸಂಬಂಧಗಳೂ ಕೂಡುತ್ತಿದ್ದವು. ಒಳವ್ಯವಹಾರಗಳಿಗೆ ಬೇಕಾಗುವ ಫಂಡನ್ನೂ ಹುಡುಗಿಯ ಅಪ್ಪನೆ ಹೊಂದಿಸಿ ಕೊಡುತ್ತಿದ್ದುದು ಓಪನ್ ಸಿಕ್ರೆಟ್. ಹಾಗಾಗಿ ಅಣಶಿ ಮೇಲ್ಗಡೆಯ ನುಜ್ಜಿಗೆ ಮಾಸ್ತರರಾಗಿ ಬಂದಿದ್ದ ತಿಮ್ಮಪ್ಪ ಪೊನ್ನಪ್ಪ ನಾಯಕ ಮಾಸ್ತರರ ಬಗ್ಗೆ ನಮಗೆ ಆಗೆಲ್ಲ ವಿಶೇಷ ವಿವರಣೆಗಳು ಬೇಕಿರಲಿಲ್ಲ. ಕೆಂಪನೆಯ ನುಣ್ಣನೆಯ ತಲೆಗೆ ಹೊಂದಾಣಿಕೆಯಾಗುವಂತೆ ಕವಳ ಹಾಕುತ್ತಿದ್ದ ಕೆಂಪು ತುಟಿ, ದೊಡ್ಡ ಗಂಟಲಿನಿಂದಾಗಿ ನಾಯಕ ಮಾಸ್ತರರ ವಜನೇ ಬೇರೆಯಾಗಿತ್ತು. ನಾನು ಆಗಿನ್ನೂ ಹೈಸ್ಕೂಲು ಮುಟ್ಟಿರಲಿಲ್ಲ. ಊರಿಗೆ ಗಣಿತದ ಮೇಷ್ಟ್ರಾಗಿ ಕಾಲಿಟ್ಟ ದಿನವೇ ಹೈಸ್ಕೂಲ್ ಹುಡುಗರಿಗೆ ಮಾಡಿಸಿದ್ದ ಮೊದಲ ಕೆಲ್ಸ ಎಂದರೆ,
“..ಮಗ್ಗಿ ಹೇಳ… ತಮ್ಮ” ಎಂದಿದ್ದು. ಹುಡುಗರು
“..ಎರಡೊಂದ್ಲೆ ಎರಡು..” ಎನ್ನುತ್ತಿದ್ದಂತೆ ಬರಲು ಹಿಡಿದು,
“..ಎರಡರ ಮಗ್ಗಿ ಹೇಳ್ತ ಇಂವಾ. ಹದಿನೆಂಟ ಏಳಲೆ ಎಷ್ಟು…? ಹದಿನಾಲಕ್ ಒಂಭತ್ತಲೇ.. ಹತ್ತೊಂಭತ್ತ್ ಎಂಟಲೆ…? ” ಹೀಗೆ ಎಲ್ಲೆಲ್ಲಿಯದೋ ಲೆಕ್ಕ ಕೇಳುತ್ತಿದ್ದರೆ, ಎಂಟನೆತ್ತಿಯ ನಲ್ವತ್ತೇಳೂ ಮಕ್ಕಳು ಮಿಕಿಮಿಕಿ ಮಾಡಿದ್ದವು. ಅಷ್ಟೂ ಹುಡುಗರದ್ದೂ ಹೊರ ಮೆರವಣಿಗೆ. ನುಜ್ಜಿ ಪ್ರೌಢಶಾಲೆಗೆ ಇದು ಮೊದಲ ಅನುಭವ. ಮಕ್ಕಳ ಪರವಾಗಿ ಮಧ್ಯಸ್ಥಿಕೆಗೆ ಬಂದ ಊರ ಸಮಿತಿಯ ಮಾತಿಗೂ ಕ್ಯಾರೆ ಅನ್ನದ ಮಾಸ್ತರರು
“..ಇಪ್ಪತ್ತರ ತಂಕಾ ಮಗ್ಗಿ ಬರ್ಬೇಕು. ಅಮೇಲೆನೆ ಒಳಗೆ ಬರೋದು..” ಎಂದು ಟೇಬಲ್ ಮೇಲೆ ಬರಲಿಟ್ಟುಕೊಂಡು, ತಮ್ಮ ದೊಗಳೇ ಪೈಜಾಮದೊಳಗೆ ಕಾಲು ಅಲ್ಲಾಡಿಸುತ್ತಾ ವಾರಗಟ್ಟಲೇ ಕೂತೇ ಇದ್ದುಬಿಟ್ಟರು.
ಮಕ್ಕಳು ಗಣಿತ ತರಗತಿ ಬಂದಾಗೆಲ್ಲಾ ಪೂರ್ತಿ ಪಡಸಾಲೆ ಉದ್ದಕ್ಕೂ ಸಾಲಾಗಿ ನಿಂತು ಮಗ್ಗಿ ಗಟ್ಟಿಸುವುದು, ಕೊನೆಯಲ್ಲಿ ಐದೇ ನಿಮಿಷದಲ್ಲಿ “..ಹದಿನೇಳ ಒಂಭತ್ತಲೇ..” ಎನ್ನುತ್ತಲೇ ಬೆ ಬ್ಬೆ.. ಬ್ಬೆ.. ಎಂದು ಮತ್ತೆ ಮಾಸ್ತರರ ಪರೀಕ್ಷೆಯಲ್ಲಿ ಫೇಲಾಗಿ ಒಂದೆರಡು ಬರಲಿನ ರುಚಿಗೆ ಸಿಗುವುದೂ ನಡೆದೇ ಇತ್ತು. ಸತತ ಹತ್ತನೆಯ ದಿನ ಅಂತೂ ಇಬ್ಬರು ಹುಡುಗರು ಒಳಗೆ ಬಂದರು. ಅವರು ಪಟಪಟನೆ ಉತ್ತರಿಸಿದ್ದು ನೋಡಿ ಉಳಿದ ಹುಡುಗರು ಮರುದಿನಕ್ಕೆ ತಯಾರಾದರು. ಕೊನೆಗೂ ಮೂರು ವಾರದಲ್ಲಿ ಪೂರ್ತಿ ಹುಡುಗರ ತಲೆಗೆ, ಮಗ್ಗಿಯ ಸಾಲು ಮೊಳೆ ಹೊಡೆದಂತೆ ಸೇರಿಸುವಲ್ಲಿ ನಾಯಕ ಮಾಸ್ತರರು ಯಶಸ್ವಿಯಾಗಿದ್ದರು. ಊರಿನ ಸಮಿತಿಯೂ ಅವರ ಪ್ರಾಯೋಗಿಕ ತರಬೇತಿಗೆ ತಲೆಬಾಗಿತ್ತು.
ಇದರಿಂದ ಊರಿನಲ್ಲಿ ಅವರ ಛಾಪೇ ಬದಲಾಗಿತ್ತು. ಹುಡುಗರಲ್ಲೂ ಹೊಸ ಉಮೇದಿ ಬಂದಿತ್ತು. ಮಗ್ಗಿ ಕಲಿತರೆ ಗಣಿತ ಇಷ್ಟು ಸುಲಭ ಎನ್ನುವುದನ್ನು ಹೀಗೆ ಬರಲು ಹಿಡಿದು ಯಾವ ಮಾಸ್ತರರೂ ಕಲಿಸಿರಲಿಲ್ಲ. ಗಣಿತ ಕ್ಲಾಸು ಫೇಮಸ್ಸಾಗಿ ಹೋಗಿತ್ತು. ಊರಿಗೆ ಕಾಲಿಟ್ಟು ಅವರು ಉಳಿದುಕೊಳ್ಳಲು ಬಾಡಿಗೆಗೆ ಹುಡುಕಿಕೊಂಡಿದ್ದು ನಮ್ಮದೇ ಮನೆಯನ್ನು. ಹಾಗಾಗಿ ನಾನು ಹೈಸ್ಕೂಲು ಕಾಲಿಡುವ ಮೊದಲೆ ನಾಯಕ ಮಾಸ್ತರ ಗರಡಿಗೆ ಪಳಗತೊಡಗಿದ್ದೆ.
ಅದಕಿಂತಲೂ ಮಿಗಿಲು ನಾಯಕ ಮಾಸ್ತರರು ಗುಟ್ಟಾಗಿ ಕರೆದು ನನಗೆ ಮೊಟ್ಟೆ ತಿನಿಸುತ್ತಿದ್ದರು. ಪೀಚು ಪೀಚಾಗಿದ್ದ ನನ್ನನ್ನು,
“..ನೋಡಾ ಹೆಂಗೆ ಸುಧಾಸ್ರ್ತಿ ಹೇಳಿ. ಇಕಾ ದಿನಾ ಒಂದು ಮೊಟ್ಟೆ ತಿನ್ನು..” ಎನ್ನುತ್ತಾ ತಿದ್ದಲು ಶುರುವಿಟ್ಟಿದ್ದರು. ಅವರ ಕೈಯ್ಯ ಮೊಟ್ಟೆ ಊಟ, ಗಣಿತ, ಸಾಂಗತ್ಯ ಎಲ್ಲಾ ಸೇರಿ ನಾನು ಮಾಸ್ತರರ ಖಾಸಾ ವಿದ್ಯಾರ್ಥಿ ಆಗತೊಡಗಿದ್ದೆ. ಮಾಸ್ತರರೂ ಇಂಥಕ್ಕೆಲ್ಲಾ ಭಯಂಕರ ಉಮೇದಿನಿಂದ ಎದ್ದು ನಿಲ್ಲುತ್ತಿದ್ದರು. ಈ ಮಧ್ಯೆ ನನ್ನ ಬುಡಕ್ಕೆ ರೂಪಾಯಿಯಗಲದ ಕುರ ಆಗಿ, ನಡೆಯಲಾರದಂತಾಗಿ ಹೋಗಿದ್ದೆ. ಶಾಲೆ ಮನೆ ಹಾಳಾಯ್ತು ಮೊದಲು ಹುಡುಗನ ಕುಂಡೆ ನೆಟ್ಟಗಾಗಲಿ ಎಂದು, ದೂರದ ದಾಂಡೇಲಿಯಿಂದ ವೈದ್ಯರನ್ನು ಕರೆತಂದಿದ್ದರು. ಅವನು ನನ್ನ ಕುರದ ಮೂತಿ ಮೀಟಿ ನೋಡಿ,
“..ಇನ್ನೂ ಹಣ್ಣಾಗಿಲ್ಲ ಮೂರ್ನಾಕು ದಿನ ಪೋಟಿಸು ಹಾಕಿ. ಒಡಿಲಿಲ್ಲ ಎಂದರೆ ಕತ್ತರಸಿ ನಂಜು ತೆಗೆದ್ರಾಯ್ತು..” ಎಂದು ಆವತ್ತು ಕತ್ತರಿಸದಿದ್ದರೂ ಒತ್ತಿ ಒತ್ತಿ, ನಾನು ಬಾಯಿ ಬಾಯಿ ಬಡಿದುಕೊಳ್ಳುವಂತೆ ಮಾಡಿದ್ದರು. ಅಂಡು ತುಂಬ ಕೀವು ತುಂಬಿ ಉದುರಿ ಬೀಳುವಷ್ಟು ಭಾರವಾಗಿ ಒದ್ದಾಡುತ್ತಿದ್ದೆ. ಸುದ್ದಿ ಗೊತ್ತಾಗಿದ್ದೆ ತಡ ಮಾಸ್ತರರು ಮಹಡಿಯಿಂದ ಕೆಳಗಿಳಿದು ಬಂದಿದ್ದರು. ಸುಮ್ಮನೆ ನನ್ನ ಪ್ರೀತಿಯಿಂದ ಸವರಿ, ತಿರುಗಿಸಿ ಚಕ್ಕೊತದ ಸೈಜಿಗೆ ಬಾತುಕೊಂಡಿದ್ದ ಬುಡ ನೋಡಿ,
“..ಹಂ ಇದೆಲ್ಲಾ ಕೀವು ಹೊರಗೆ ಹೋಗದೆ ಬಾವು ಇಳಿಯೋದಿಲ್ಲ…” ಎನ್ನುತ್ತಾ ಸರಕ್ಕನೆ ಒಮ್ಮೆ ಅದರ ತುದಿಗೆ ಸೀಟಿಕೊಂಡಿದ್ದ, ಕರೆ ಕಟ್ಟಿಕೊಂಡಿದ್ದ ಕೆಂಪು ಕುರದ ಬಾಯಿ ಬಿಡಿಸಿದ್ದರು. ಅಪ್ಪಟ ಸ್ಥಳೀಯ ಪದ್ಧತಿ. ಕೀವು ಬಿಡಿಸಿದರೆ ನೋವು ಹೋಗುತ್ತದೆ ಎನ್ನುವುದನ್ನು ಯಾವ ಸೈನ್ಸೂ ಕಲಿಸಲಾರದು ಅನುಭವದ ಹೊರತಾಗಿ. ಪಿಚಕ್ಕನೆ ಅದರಿಂದ ಹಳದಿ, ಬಿಳುಪು ಮಿಶ್ರಿತ ಕೀವು ಒಸರತೊಡಗಿ ಅದಕ್ಕೂ ಎರಡು ಪಟ್ಟು ಜೋರಾಗಿ ನಾನು ಕಿರುಚತೊಡಗಿದ್ದೆ. ಮಾಸ್ತರರು ಇದೆಲ್ಲಾ ನಿರಿಕ್ಷೀಸಿಯೇ ಇದ್ದವರಂತೆ,
“..ಎಂತಾ ಅಗೂದಿಲ್ಲ ತಡಿಯಾ.. ಸಂಜಿ ಹೊತ್ತಿಗೆ ಸರಿ ಹೋಗ್ತಿ..” ಎನ್ನುತ್ತಾ ಅದರ ತುದಿ, ಅಗಲಿಸಿ ಆಚೀಚೆ ಒತ್ತಿ ಕೀವು ಆಚೆ ಹರಿಸಿದ್ದರು. ಅಮ್ಮನಿಗಿಂತ ಹೆಚ್ಚಿಗೆ ಮುತುವರ್ಜಿಯಿಂದ ತೋಳು ಏರಿಸಿ ನಿಂತು ನೋಡಿಕೊಂಡಿದ್ದರು. ಅದನ್ನೆಲ್ಲಾ ಸ್ವಚ್ಛ ಮಾಡಿ ಅದಕ್ಕೆ ಅರಿಶಿಣ, ಕಡಲೆ ಹಿಟ್ಟಿನ ಪೋಟಿಸು ಹಾಕಿದ ಮೇಲೆ ನನಗೂ ಮೊದಲ ಬಾರಿಗೆ ಹಾಯ್ ಎನ್ನಿಸಿತ್ತು. ಅದಾದ ಮರುದಿನದಿಂದ ನನ್ನ ಗಣಿತ ಪುಸ್ತಕ ವಿಜ್ಞಾನ ಎಲ್ಲಾ ತೆಗೆದು ಕೂತು ನಾನು ಶಾಲೆಗೆ ಹೋಗದಷ್ಟೂ ದಿನವೂ ಇಲ್ಲೆ ಎಲ್ಲಾ ಹೇಳಿಕೊಡುತ್ತಾ ನನ್ನ ಗೈರನ್ನು ಸುಲಭಗೊಳಿಸಿದ್ದರು.
ನಾನು ಎಂಟನೆತ್ತಿ ಬರುತ್ತಿದ್ದಂತೆ ಮಗ್ಗಿಯ ಲೆಕ್ಕಕ್ಕೆ ಬಿಡುವೇನೂ ಸಿಕ್ಕಿರಲಿಲ್ಲ. ನನಗೂ ಅದೆಲ್ಲಾ ಮೊದಲೇ ಗೊತ್ತಿದ್ದುದರಿಂದ ತಯಾರಾಗಿಯೇ ಇದ್ದೆ. ಊರಲ್ಲೆಲ್ಲಾ ಇವರ ಗಣಿತ ಪಾಠದ ವೈಖರಿ ಗೊತ್ತಾಗಿ ಹುಡುಗರು ಅಷ್ಟಿಷ್ಟು ತಯಾರಿ ಮಾಡಿಕೊಂಡೆ ಬರುತ್ತಿದ್ದವು. ಹಾಗಾಗಿ ಮೂರ್ನಾಲ್ಕು ವಾರ ಮಕ್ಕಳು ಹೊರಗೆ ನಿಲ್ಲುವ ಕತೆ ಈಗ ಒಂದು ವಾರಕ್ಕೆ ಇಳಿದಿತ್ತು. ನಾನೂ ಸುಲಭಕ್ಕೆ ಅವರ ಕ್ಲಾಸಿಗೆ ಕುದುರಿಕೊಂಡಿದ್ದೆ. ಮಾಸ್ತರರ ಮನೆಯೊಡತಿ ಶಾಂತಾಬಾಯಿ ಕೂಡಾ ಅಷ್ಟೆ ಮುಚ್ಚಟೆಯ ಹೆಂಗಸು. ಎಲ್ಲವನ್ನೂ ವ್ಯವಸ್ಥಿತವಾಗಿ ಅಖೈರುಗೊಳಿಸುತ್ತಿದ್ದ ಆಕೆಗೆ ದೇವರು ದಿಂಡರು ಎಂದರೆ ಸ್ವಲ್ಪ ಹೆಚ್ಚೆ ಪ್ರಾಣ. ಹಾಗಾಗಿ ನಮ್ಮನೆ ಪೂಜೆಗಳಿಗೆಲ್ಲ ತಪ್ಪದೆ ಮಡಿಯಾಗಿ ಬಂದು ಕೂರುತ್ತಿದ್ದರು.
ಆದರೆ ಊರಲ್ಲೆಲ್ಲ ಗುಲ್ಲಾಗತೊಡಗಿದ್ದು ಸ್ವತ: ಮೇಷ್ಟ್ರಾದರೂ ಮಕ್ಕಳನ್ನು ಬೇರೆ ಶಾಲೆಗೆ ಕಳಿಸಿದಾಗ. ಎದುರಾ ಎದುರು ಯಾರು ಪ್ರಶ್ನಿಸಿಲ್ಲವಾದರೂ ನಾಯಕ ಮಾಸ್ತರ ಮಕ್ಕಳು, ಗುಟ್ಟಾಗಿ ಧಾರವಾಡ ಶಾಲೇಲಿ ಓದುತ್ತಿವೆ ಎನ್ನುವುದು ಊರಿಗೇ ಗೊತ್ತಾಗಿದ್ದ ರಹಸ್ಯವಾಗಿತ್ತು. ಅದ್ಯಾಕೆಂದು ಹೇಳುವುದು ಕೇಳುವುದು ಆಗಲಿಲ್ಲವಾದರೂ, ಮಾಸ್ತರರ ಭಾಷೆಯಲ್ಲಿ ಎರಡೂ ಮಕ್ಕಳೂ ದಡ್ಡ ಶಿಖಾಮಣಿಗಳು. ಮಗ್ಗಿ ಹೇಳದೆ ಮೇಷ್ಟ್ರು ಒಳಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ. ಅದಕ್ಕೆ ಹೈಸ್ಕೂಲ್ ಹೊತ್ತಿಗೆ ಧಾರವಾಡಕ್ಕೆ ದಬ್ಬಿದ್ದರಂತೆ. ನಂತರದ ದಿನದಲ್ಲಿ ಹೈಸ್ಕೂಲು ಮುಗಿದು ನಾನೂ ಊರು ಬಿಡುವ ಹೊತ್ತಿಗೆ ನಾಯಕ ಮಾಸ್ತರರೂ ವರ್ಗಾ ಆಗಿ ಗೋಕರ್ಣ ರಸ್ತೆಯ ಭದ್ರಕಾಳಿ ಹೈಸ್ಕೂಲಿಗೆ ಹೊರಟುಹೋಗಿದ್ದರು.
ಅದರ ನಂತರದಲ್ಲಿ ಮಾಸ್ತರರ ಭೇಟಿ ಇರದಿದ್ದರೂ, ಶಿಕ್ಷಕರ ದಿನಾಚರಣೆ, ಗಾಂಧಿ ಜಯಂತಿ ಅಂತೆಲ್ಲಾ ನೆನಪಾದಾಗ ಫೋನಿನಲ್ಲಿ ಮಾಸ್ತರ ಸಂಪರ್ಕ ಇದ್ದೇ ಇತ್ತು. ಕಾರಣ ಮಾಸ್ತರ ಗಣಿತ ಪ್ರಖರತೆ ಪೂರ್ತಿ ಜಿಲ್ಲೆಗೆ ಫೇಮಸ್ಸಾಗಿತ್ತು. ಅಂಕೋಲೆ ಸಮುದ್ರದಲ್ಲಿ ಮೀನು ದಿಕ್ಕು ತಪ್ಪುತ್ತೇನೋ, ನಾಯಕ ಮಾಸ್ತರ ಕೈಲಿ ಮಗ್ಗಿ ಕಲಿತಂವ ಲೆಕ್ಕ ತಪ್ಪೂದಿಲ್ಲ ಎನ್ನುವವರೆಗೂ ಅವರ ಖ್ಯಾತಿ ಹರಡಿತ್ತು. ಅದನ್ನೆ ನೆನಪಿಸಿ ನಾನು ಆಗೀಗ ಅವರನ್ನು ಕುಶಾಲಿ ಮಾಡುವುದೂ ಇತ್ತು
” ಮಾಸ್ತರ್ರೆ.. ಎಂತದೆ ಹೇಳಿ ನಿಮ್ಮ ಲೆಕ್ಕದ ಕೈಗೆ ಸಿಕ್ಕಿ ಮೀನೆಲ್ಲಾ ಮಾರ್ಕೆಟ್ಟು ಬಿಟ್ಟಿದಾವೆ ನೋಡಿ. ಇಲ್ದಿದ್ರೆ ಅವಕ್ಕೂ ನೀವು ಮಗ್ಗಿ ಕಲ್ಸಿಬಿಡ್ತಿದ್ರಿ..” ಎನ್ನುತ್ತಿದ್ದರೆ,
“..ಹೌದಾ ನಿಮಗೆಲ್ಲಾ ಕುಶಾಲಿ. ಅವತ್ತು ನಾನು ಮಗ್ಗಿ ಹೇಳ್ಸಿದಕ್ಕೆ ಇವತ್ತು ನೀನು ಮುಂಬೈನಲ್ಲಿ ದೊಡ್ಡ ನೌಕರಿ, ಸಂಸಾರ ಮಾಡೂಕಾಯ್ತು ಗೊತಾಯ್ತ. ಇರ್ಲಿ ಬಾ.. ಬಾ.. ಊರ ಬದೀಗ ಬಂದರೆ ಮನೀಗ್ ಬಾ. ಸರ್ಯಾಗಿ ಊಟ ಎಲ್ಲಾ ಮಾಡು ಆಯ್ತಾ. ಮೊಟ್ಟೆ ತಿನ್ನು. ನಿನ್ನ ಆ ತೆಳ್ಳವು ಎಂಥಾ ಕೆಲ್ಸಕ್ಕೂ ಬರದಿಲ್ಲ..” ಎಂದು ಅದೇ ಆತ್ಮೀಯತೆಯಲ್ಲೇ ಕರೆಯುತ್ತಿದ್ದರು. ಕ್ರಮೇಣ ನಾನು ಆಗೀಗೊಮ್ಮೆ ಅವರ ಮನೆ ಗೃಹ ಪ್ರವೇಶಕ್ಕೂ, ಮೊದಲ ಮಗನ ಮದುವೆಗೂ ಹೋಗಿ ಬಂದಿದ್ದೆ.
ಕುಮಟೆಯ ಹೊರಭಾಗದಲ್ಲಿ ಗದ್ದೆ ಹಿಂದೆ ಅಷ್ಟು ದೂರದಲ್ಲಿ ಸಹ್ಯಾದ್ರಿ ಬೆಟ್ಟ ಕಾಣುವ ಚೆಂದದ ಪರಿಸರದಲ್ಲಿ ಮನೆ ಕಟ್ಟಿಸಿದ್ದರು ಮಾಸ್ತರು ಎರಡು ಕೋಣೆಯ ಮನೆ. ರಿಟೈರ್ ಆದ ಮೇಲೆ ಅಲ್ಲೆ ಹೋಗಿ ನೆಲೆಸಿದ್ದರು. ನಂತರದ ಹಲವು ವರ್ಷ ನನ್ನ ವೃತ್ತಿಪರ ಸುತ್ತಾಟದಲ್ಲಿ ಆಗೀಗ ಫೋನ್ ಕರೆ ಹೊರತು ಪಡಿಸಿದರೆ, ಮಿತ್ರ ಮೊಗೆರನೆÀ
“..ನಿಮ್ ಮಾಸ್ತರ ಭಾರಿ ಮಾರಾಯ, ಈ ಸರ್ತಿ ಅದು ಮಾಡಿದ್ರು, ಇದು ಮಾಡಿದರು..” ಎಂದು ಅಗೀಗ ಸುದ್ದಿ ಕೊಡುತ್ತಿದ್ದುದೇ ಸಂಪರ್ಕ.
ಆದರೆ ಜಿಲ್ಲಾ ಮಟ್ಟದಲ್ಲಿ ಅವರ ಸಮಾಜ ಸೇವೆಗಾಗಿ ಪ್ರಶಸ್ತಿ ಘೋಷಣೆ ಆದರೂ ಮಾಸ್ತರರು ಕಾರವಾರಕ್ಕೆ ಬರಲಿಲ್ಲ ಎಂದಾಗ ತಡೆಯದೇ ನಾನೇ ಮಾಸ್ತರರಿಗೆ ಫೋನ್ ಮಾಡಿದ್ದೆ. ಅದ್ಯಾಕೋ ನೆಟ್ವರ್ಕು ದಕ್ಕುತ್ತಲೇ ಇರಲಿಲ್ಲ. ಅಷ್ಟಕ್ಕೂ 3ಜಿ 4ಜಿ ಗಳೆಲ್ಲಾ ಬಂದರೂ ಉ.ಕ. ಜಿಲ್ಲೆಯ ಮಟ್ಟಿಗೆ ನೆಟ್ವರ್ಕು ಏನಿದ್ದರೂ ಅವರ ಕಛೇರಿಗೆ ಮಾತ್ರ. ಮತ್ತೆ ಅಗೀಗ ಪ್ರಯತ್ನಿಸಿ ಒಮ್ಮೆ ಕರೆಕ್ಟಾಗಿ ಮಾಸ್ತರರು ಫೋನಿಗೆ ಸಿಕ್ಕಾಗ ಪಟಪಟನೆ ಮಾತಾಡಿದ್ದೆ.
“..ಎಂತಾ ಮೇಷ್ಟ್ರೆ. ನಿಮಗೆ ಪ್ರಶಸ್ತಿ ಬಂದರೂ ಹೋಗಲಿಲ್ಲ ಅಂತೆ. ಅದ್ಯಾಕೆ ಹಂಗೆ ಮಾಡಿದ್ರಿ..? ಹೋಗಲಿ ನಿಮ್ಮನೆ ಲ್ಯಾಂಡ್ಲೈನೂ ಕೆಲ್ಸ ನಿಲ್ಸಿ ಬಿಟ್ಟಿದೆಯಾ..? ನೀವು ಕೈಗೆ ಸಿಗೂದಿಲ್ಲ ಹಂಗಾಗಿ ಹೋಯ್ತು..” ಎನ್ನುತ್ತಿದ್ದಂತೆ. ಸುಮ್ಮನೆ ಸಣ್ಣನಗೆ ನಕ್ಕಿದ್ದರು ಮಾಸ್ತರರು. ಮನೆ ಕಡೆ ಬಂದು ಹೋಗು ಈಗೀಗ ಸುಸ್ತು ಎಂದಿದ್ದರು.
ಅದಾದ ಎಡ್ರ್ಮೂರು ತಿಂಗಳಿಗೆ ಕುಮಟೆಗೆ ಹೋದವನು ಮನೆ ಹುಡುಕಿ ಹೋದೆ. ಮಧ್ಯಾನ್ಹ ಎರಡೂವರೆ ಆಗುತ್ತಿತ್ತು ಕರಾವಳಿಯ ಚುರುಕು ಬಿಸಿಲು ಅನುಭವಿಸಿದವರಿಗೆ ಗೊತ್ತದು. ಮಾಸ್ತರರು ಮೊದಲು ಬರೀ ಒಂದು ಮನೆ ಕಟ್ಟಿದ್ದರು ಈಗ ಅದರ ಮೇಲೆ ಇನ್ನೊಂದು ಕಟ್ಟಿಸಿದ್ದು ಚಿಕ್ಕ ಬಂಗಲೆ ತರಹ ಕಾಣಿಸುತ್ತಿತ್ತು ದೂರದಿಂದ. ಅರೆ ಮೊದಲನೆಯ ಮಹಡಿ ಕಟ್ಟಿದ್ದ ಸುದ್ದಿನೇ ಹೇಳಿಲ್ವಲ್ಲ ಎಂದುಕೊಳ್ಳುತ್ತಲೇ ಗೇಟು ತೆರೆದು ಕೆಳಗಿನ ಮನೆ ಕರೆಗಂಟೆ ಒತ್ತಿದೆ.
ಬಾಗಿಲು ತೆರೆದ ಹುಡುಗನ ಮುಖದ ಮೇಲೆ ಮಧ್ಯಾನ್ಹದ ಸುಖ ನಿದ್ರೆ ಕೆಡಿಸಿದ ಅಸಹನೆ ಎದ್ದು ಕಾಣುತ್ತಿತ್ತು. “..ತಿಮ್ಮಪ್ಪ ಮಾಸ್ತರರು..” ಎನ್ನುವಷ್ಟರಲ್ಲಿ ಅವನೇ, “ಅವರೀಗ ಇಲ್ಲಿರುವುದಿಲ್ಲ..” ಎಂದು ರಪ್ಪನೆ ಬಾಗಿಲು ಬಡಿದುಕೊಂಡ. ಮೊದಲಿಗೆ ಗುರುತು ಸಿಗದಿದ್ದರೂ ಹುಡುಗ ಮೊದಲನೆ ಮೊಮ್ಮಗ ಎಂದು ನನಗೆ ಗುರುತಾಗಿತ್ತು. ನಿರಪಾಯನಾಗಿ ಹೊರ ಬಂದು ಅಷ್ಟು ದೂರದ ಕಿರಾಣಿ ಅಂಗಡಿಲಿ ವಿಚಾರಿಸಿದೆ.
ಮಾಸ್ತರರು ವಾಸ್ತವ್ಯ ಬದಲಾಯಿಸಿದ್ದರು.
ಅಂದಾಜು ಅಡ್ರೆಸ್ಸು ಸಿಕ್ಕಿ ನಗರದ ಹೊರವಲಯದ ಪೆಟ್ರೊಲ್ ಪಂಪ್ ಪಕ್ಕ ಕಾರು ನಿಲ್ಲಿಸಿದರೆ, ಅಷ್ಟು ದೂರದಲ್ಲಿ ಕಾಣುತ್ತಿದ್ದ ಮನೆಯ ಪಕ್ಕದ ಚಿಕ್ಕ ತಗಡಿನ ಶೀಟು ಹೊದೆಸಿದ್ದ ಮನೆ ಗುರುತಿಸುವುದು ಕಷ್ಟವಾಗಲಿಲ್ಲ.
ಬಾಗಿಲು ತಳ್ಳಿ ಒಳಗೆ ಕಾಲಿಟ್ಟೆ.
ಚಿಕ್ಕ ಆಗೀಗ ಮುರಿಯುವ ಸ್ಥಿತಿಯಲ್ಲಿದ್ದ ಹಗ್ಗದ ಮಂಚದ ಮೇಲಿದ್ದ ವ್ಯಕ್ತಿ ಬಾಗಿಲ ಸದ್ದಿಗೆ ಎದ್ದುಕೂತರು. ಓಹ್.. ದೇವರೇ ಅದು ತಿಮ್ಮಪ್ಪ ಮಾಸ್ತರರ ಆಕೃತಿಯಾಗಿತ್ತು. ಸಣ್ಣ ಕೋಣೆಯಲ್ಲಿ ಎದುರಿಗೆ ಚಿಕ್ಕ ಸ್ಟೂಲು, ಕಟ್ಟಿದ್ದ ಹಳೆಯ ಹಗ್ಗದ ಮೇಲೆ ನಾಲ್ಕು ಹಳೆಯದಾಗಿದ್ದ ಪೈಜಾಮು ಮಾಸಲು ಲಾಡಿಯೊಡನೆ ಶರ್ಟು ನೇತಾಡುತ್ತಿದ್ದವು. ಪಕ್ಕದಲ್ಲಿದ್ದ ಮೇಜಿನ ಮೇಲೆ ಎರಡ್ಮೂರು ನೀರಿನ ಬಾಟಲಿ ಒಂದು ಸ್ಟೀಲ್ ತಂಬಿಗೆ, ಅರ್ಧ ಕುಡಿದು ಬಿಟ್ಟಿದ್ದ ಟೀ ಕಪ್ಪು, ಕಟ್ಟೆಯಂತಹ ಜಾಗದ ಮೇಲೆ ಒಂದಿಷ್ಟು ಅಡುಗೆಯ ಪರಿಕರಗಳು ಅಲ್ಲೆ ನೀರಿನ ವ್ಯವಸ್ಥೆಯಲ್ಲಿ ಸ್ವಚ್ಛತೆ ಅಧ್ವಾನ್ನವಾಗಿ ಮನೆಯ, ಆಹಾರದ ವಾಸನೆ ಸೇರಿ ಸಂಪೂರ್ಣ ಹದಗೆಟ್ಟ ಪರಿಸ್ಥಿತಿ ಎದ್ದು ಕಾಣುತ್ತಿತ್ತು.
ತಟ್ಟೆಯಲ್ಲಿನ ಅನ್ನದ ಅಗಳು ಬಿಸಿಲಿನ ಝಳಕ್ಕೆ ಒಣಗಿ ಹರಳಾಗಿದ್ದವು.
ಶಾಂತಾಬಾಯಿಯವರ ಕುರುಹೂ ಇರಲಿಲ್ಲ.
ನಾಯಕ ಮಾಸ್ತರ ಪರಿಸ್ಥಿತಿಯೇನೂ ಭಿನ್ನವಾಗಿರಲಿಲ್ಲ.
ನೆರೆತ ಗಡ್ಡ, ಮೊದಲೆ ಬಕ್ಕವಾಗಿ ಈಗ ಇನ್ನಷ್ಟು ಹಪಳೆಗಳೆದ್ದಿದ್ದ ತಲೆ, ಒಳ ಹೋಗಿದ್ದ ಕೆನ್ನೆಗಳು ಬಣ್ಣ ಕಳೆದುಕೊಂಡ ತುಟಿ, ಕಣ್ಣಿನ ಸುತ್ತ ಆತಂಕದ ಛಾಯೆಯ ಕಪ್ಪು ವಲಯ, ಕಿವಿಗೆ ಮೊದಲಿನಿಂದ ಇದ್ದ ಹಿತ್ತಾಳೆ ರಿಂಗು ಮತ್ತು ಕೈ ಕಡಗ ಬದಲಾಗಿಲ್ಲ. ದೊಗಳೆ ಪ್ಯಾಂಟು ಮಾಸಿತ್ತು. ಮೈಗಿದ್ದ ಬಿಳಿಶರ್ಟು ಅದ್ಯಾವಾಗ ಒಗೆಯಲಾಗಿತ್ತೋ ಅದಿನ್ನೂ ಮಾಸಿತ್ತು. ನಿಗಿನಿಗಿ ಅನ್ನುತ್ತಿದ್ದ ತಿಮ್ಮಪ್ಪ ಮಾಸ್ತರರ ಅಕೃತಿ ಸುಲಭಕ್ಕೆ ಗುರುತಿಗೆ ನಿಲುಕದೆ ಹೋಗುತ್ತಿತ್ತು. ಕುಂಯ್ ಗುಡುತ್ತಿದ್ದ ಮಂಚಕ್ಕೆ ತಕ್ಕ ಅಕೃತಿಯಾಗಿ ಬಾಗಿದ್ದ ತಿಮ್ಮಪ್ಪ ಮಾಸ್ತರರು ಕೂತಿದ್ದರು.
“..ಮೇಷ್ಟ್ರೆ. ” ಎಂದೆ.. ನನಗೇ ನನ್ನ ಉಸಿರು ಕಟ್ಟುತ್ತಿತ್ತು ಅವರನ್ನು ನೋಡಿ.
ಸುಮ್ಮನೆ ಉಸಿರು ಬಿಟ್ಟು ಎದ್ದು ಇನ್ನೊಮ್ಮೆ ಅರೆತುಂಬಿದ್ದ ತಂಬಿಗೆಯಿಂದ ನೀರು ಕುಡಿದು ಸುತ್ತ ನೋಡಿ ಏನೂ ಕಾಣದೆ, ಅಲ್ಲಿ ಉಳಿದಿದ್ದ ನಾಲ್ಕು ಬಾಳೆ ಹಣ್ಣು ಮತ್ತು ಸಕ್ಕರೆ ಪೇಪರ್ ಮೇಲಿಡುತ್ತಾ ನಿಧಾನಕ್ಕೆ ಹೆಜ್ಜೆ ಸರಿಸಿ ಮತ್ತೆ ಕುಂಯ್ ಎಂದ ಹಗ್ಗದ ಮಂಚದ ಮೇಲೆ ಕುಳಿತರು. ಮಾತು ಬೇಕಿರಲಿಲ್ಲ.
ಬದುಕು ಪೇಲವವಾಗಿದ್ದು ಸ್ಪಷ್ಟವಾಗಿತ್ತು.
** ** **
ಮಕ್ಕಳನ್ನು ಇನ್ನಿಲ್ಲದ ಮಮತೆಯಿಂದಲೂ ಶಿಸ್ತಿನಿಂದಲೂ ಬೆಳೆಸಿದ್ದರು ಅಚ್ಚುಕಟ್ಟಾಗಿ ಕಲಿಯಬಹುದಾದನ್ನೂ ಕಲಿಸಿ ಉದ್ಯೋಗಸ್ಥರನ್ನಾಗಿಯೂ ಮಾಡಿದ್ದರು. ನಿವೃತ್ತಿಗಿರಲಿ ಎಂದು ಒಂದು ಮನೆ ಕೂಡಾ ಮಾಡಿಕೊಂಡಿದ್ದರು. ಆದರೆ ಅಲ್ಲಿ ಅವರಿಗಿಂತ ಮೊದಲೇ ಮಗ ಸಂಸಾರ ಹೂಡಿದ್ದ. ಕಾರಣ ಅವನಿಗೆ ಕುಮಟೆಯ ಗೇರುಬೀಜದ ಪ್ಯಾಕ್ಟರಿಯಲ್ಲೇ ಮೇನೆಜರಿಕೆ ಕೆಲಸವಾಗಿತ್ತು. ಮಗನೇ ಅಲ್ಲವೇ..? ಅದಕ್ಕೆ ಬಾಡಿಗೆದಾರರನ್ನು ಬಿಡಿಸಿ ಮಗನಿಗೆ ಮನೆಯಲ್ಲಿ ಇರಲು ವ್ಯವಸ್ಥೆ ಮಾಡಿಕೊಟ್ಟಿದ್ದರು. ಮೇಷ್ಟ್ರು ರಿಟೈರ್ ಆಗುವ ಹೊತ್ತಿಗೆ ಮಗ ಮನೆ ಸೇರಿ ಐದು ವರ್ಷವಾಗಿತ್ತು. ಸ್ವತಂತ್ರ ಸಂಸಾರದಲ್ಲಿ ಮಾಸ್ತರ ಜೊತೆಗೆ ಕಾಯಿಲೆ ಬಿದ್ದಿದ್ದ ಶಾಂತಾಬಾಯಿಯ ಪ್ರವೇಶ ಮನೆಯಲ್ಲಿ ಸೊಸೆಯ ಹುಯಿಲಿಗೆ ಕಾರಣವಾಯಿತು. ಅದರೆ ಇದನ್ನು ನಿರೀಕ್ಷಿಸಿರದ ಮಾಸ್ತರರಿಗೆ ಮೊದಲಿಗೆ ಅಘಾತವಾಗಿತ್ತು. ಶಾಂತಾಬಾಯಿಗೆ ಮಗ ಸೊಸೆಯ ದರ್ಬಾರು ಸರಿಬರಲಿಲ್ಲ.
ಎಲ್ಲಾ ಮಾಡಿದ್ದು ಮಾಸ್ತರರು.
ಅವರಿಗೇ ಮಾರ್ಯಾದೆ ಇಲ್ಲವೆಂದರೆ..?
ಹೆಣ್ಣು ಜೀವ ಹೇಗೆ ಸಹೀಸಿತು..?
ಅದರಲ್ಲೂ ನಾಯಕ ಮಾಸ್ತರಿಕೆಯ ವಜನೂ, ಅವರಿಗೆ ಸಂದ ಮರ್ಯಾದೆ ಎಲ್ಲವನ್ನೂ ನೋಡಿದ್ದ ಮಡದಿ ಹೇಗೆ ಸುಮ್ಮನಿದ್ದಾಳು..? ಮಾತಿಗೆ ಮಾತು ಬೆಳೆಯತೊಡಗಿತ್ತು. ಮನೆಯಲ್ಲಿನ ಮಗ ಸೊಸೆಗೆ, ತಾವಿಬ್ಬರೂ ಭಾರವಾಗಿದ್ದು ಸ್ಪಷ್ಟವಾಗಿತ್ತು. ಸೊಸೆಯಾಗಿ ಬಂದ ದೊಡ್ಡವರ ಮನೆಯ ಹುಡುಗಿಗೆ ಯಾವ ಮುಲಾಜು ಇಲ್ಲದೆ ಮಾತಾಡುವುದು ಗೊತ್ತಿತ್ತು. ಶಾಂತಾಬಾಯಿಯ ನೋವಿಗಾಗಿ ಮಾಸ್ತರರು ಎಲ್ಲ ಸಹಿಸಿಕೊಂಡು ದಿನ ದೂಡುತ್ತಿದ್ದರು. ಹಾಸಿಗೆ ಹಿಡಿದಿದ್ದ ಶಾಂತಾಬಾಯಿ ಒಂದಿನ ಕೊನೆಯಾಗುವುದರೊಂದಿಗೆ ಮನೆ ಹೊಸ ಮಜಲಿಗೆ ತೆರೆದಿತ್ತು. ಆಗ ಮನೆಯಲ್ಲಿ ಇನ್ನೊಂದು ರೂಮಿನಲ್ಲಿರುತ್ತಿದ್ದ ಕಿರಿಮಗ ಅವನೊಬ್ಬನಿಗೆ ಏಕೆ ಮನೆ ನನಗೂ ಬೇರೆ ಬೇಕು, ಮೇಲೆ ಕಟ್ಟಿಕೊಳ್ಳುವುದಾಗಿ ಹೇಳಿ ಮದುವೆಗೆ ಮೊದಲೆ ಮೇಲೆ ಹೋಗಿ ಸೆಟ್ಲಾಗಿ ಮದುವೆಯಾಗಿದ್ದ.
ಇದು ಹೊಸ ಆವಾಂತರಕ್ಕೆ ಕಾರಣವಾಗಿತ್ತು.
ನಾವು ಮಾತ್ರ ಯಾಕೆ ಅಪ್ಪನ್ನ ಇಟ್ಕೊಳ್ಳಬೇಕು ಎಂದು ಮೊದಲನೆಯ ಸೊಸೆ ವರಾತ ತೆಗೆದಿದ್ದಳು. ತೀರ ಸಂಸಾರ, ಮನೆ ಎನ್ನುವುದು ನರಕವಾದಾಗ ಈ ಜಟಾಪಟಿ ನೋಡಲಾಗದ ಸ್ನೇಹಿತರೊಬ್ಬರ ಮನೆಯ ಹೊರಭಾಗಕ್ಕೆ ಮಾಸ್ತರರು ವಾಸ್ತವ್ಯ ಬದಲಿಸಿ ಕೊಟ್ಟಿದ್ದರು. ಬರುವ ಪೆನ್ಷನ್ ಮೇಲೆ ಬದುಕು ಸಾಗುತ್ತಿದೆಯಾದರೂ ಯಾವ ಸುಖದ ಅಥವಾ ಕೊನೆಗಾಲದ ಖುಷಿಯ ನಿರೀಕ್ಷೆಗಳೂ ಉಳಿದಿರಲಿಲ್ಲ. ಹತ್ತಿರದ ಅಂಗಡಿಯವರು ಅಕ್ಕಪಕ್ಕದವರು ನೋಡಿಕೊಳ್ಳುತ್ತಿದ್ದಾರೆ. ಮಾಸ್ತರರ ಬಗ್ಗೆ ಗೌರವ ಇರುವ ಉಡುಪಿ ಹೋಟಲ್ನವರು ಊಟ ಊಣಿಸು ಅಲ್ಲಿಗೆ ತಂದು ಪೂರೈಸುತ್ತಿದ್ದಾರೆ. ಇದೇ ರಸ್ತೆಯ ಮೇಲೆ ಮಕ್ಕಳಿಬ್ಬರೂ ಕೆಲಸಕ್ಕೆ ಹೋಗುತ್ತಿದ್ದರೂ ಯಾವತ್ತೂ ತಿರುಗಿಯೂ ನೋಡುತ್ತಿಲ್ಲ.
ಮಾಸ್ತರರ ದನಿ ನಿಧಾನವಾಗಿ ಅದರೆ ಅದಕ್ಕಿಂತ ಭಾರದ ಉಸಿರು ಹೊತ್ತು ಬರುತ್ತಿತ್ತು.
“..ಶಾಂತಾ ಇದ್ದಾಗ ಏನೂ ಮಾಡೊ ಹಂಗಿರಲಿಲ್ಲ. ಅವಳಿಗೆ ಮನೆ, ಮಕ್ಕಳು ಅಂದರೆ ಆ ಅವಮಾನದಲ್ಲೂ ಅದೆಂಥಾ ಪ್ರೀತಿ ಮಾರಾಯ. ಅವಳ ಪರಿಸ್ಥಿತಿಗೆ ಬೇರೇ ಮಾಡೊಕಾದರೂ ಏನಿತ್ತು ಹೇಳು..? ಮಾಸ್ತರಿಕಿ ನೌಕರಿಯೊಳಗ ಇದಕ್ಕಿಂತ ದೊಡ್ಡದು ಏನೂ ಮಾಡ್ಲಿಕ್ಕೂ ಆಗೋದಿಲ್ಲ ನೋಡು. ಅದಕ್ಕೆ ನಾನೂ ಯಾಕೆ ಬೇಜಾರ್ ಮಾಡೋದು ಹೇಳಿ ಸುಮ್ನಿದ್ದೆ. ಅವಳ ಕಾಲಿಗೆ ಅಪರೇಶನ್ ಬೇಕಿತ್ತು ಮಾಡಿಸವ್ರು ಯಾರು..?
ನಮಗ ವಯಸ್ಸಾಗಿದ್ದಕ್ಕೂ ಇರ್ಬೇಕು.
ಕೆಲವೊಂದು ಸೂಕ್ಷ್ಮ ಗೊತ್ತಾಗೋದಿಲ್ಲ.
ಅದಕ್ಕ ಏನೂ ಮಾತಾಡದ ಎಳೆಂಟು ವರ್ಷದಿಂದ, ಮನ್ಯಾಗೆ ಹಾಸಿಗಿ ಹಿಡಿದಿದ್ದ ಆಕಿ ಮಾಡ್ಬೇಕಾದ ಕೆಲಸಾನೂ ನಾನೇ ಮಾಡ್ತಿದ್ದೆ. ಬಟ್ಟೆ ಒಣಗಸಿ, ಕಸ ಹೊಡೆದು, ನೀರು ತುಂಬಿಸಿಟ್ಟು, ಮಕ್ಕಳ ಹರಡಿದರೆ ಮನೆ ಎಲ್ಲಾ ಸರ್ಯಾಗಿ ಸೌರಸಿಟ್ಟು ಹಿಂಗೆ ಮನೀ ಕೆಲಸ, ನಾವ್ ಮಕ್ಕಳಿಗೆ ಭಾರ ಅನ್ನಿಸಬಾರದಲ್ಲ. ಇವೆಲ್ಲಾ ಆಗದಿದ್ದರ ಶಾಂತನ ಮೇಲೆ ಸೊಸೆ ಕೂಗತಿದ್ಲು. ಅವಳ ಮಾತು ಕೇಳಿ ನಮ್ಮನ್ನು ಹೊರಗೆ ದೂಡಾಕೂಕೆ ಮಗನಿಗೆ ಎಷ್ಟೊತ್ತೂ ಬ್ಯಾಡಾಗಿತ್ತು.
ಕಡಿಕಡಿಗೆ ಅವಳಿಗೆ ಎರಡನೆ ಸ್ಟ್ರೋಕ್ ಆಯ್ತು ನೋಡು. ಎಲ್ಲಾ ಹಾಸಿಗೆ ಮ್ಯಾಲೆ. ಭಾಳ ತ್ರಾಸ ಆತು. ನಾನು ಮಾಡದಿದ್ರೆ ಅವಳಿಗೆ ಒಂದು ಗಂಜಿ ಕಾಯಿಸಿಕೊಡವ್ರೂ ಇರಲಿಲ್ಲ. ನಾನು ಕಾಣದಿದ್ರೆ ಟೆನ್ಷನ್ ಆಗಿ ಕೂಗತಿದ್ಲು. ಅದಕ್ಕೆ ಸೊಸೆ ಇನ್ನೂ ಜೋರು ಜೋರಾಗಿ ಕೂಗತಿದ್ಲು. ಸೊಸಿ ಮಾತು ಮೈಮೇಲೆ ಬರೆ ಎಳದಂಗೆ ಆಗ್ತಿತ್ತು ಮಾರಾಯ. ಬದುಕಿನ ಜಂಜಾಟದಲ್ಲಿ ಇಂಥಾ ಅವಮಾನ, ಅವಮರ್ಯಾದೆ ಎಲ್ಲಾ ಅನುಭವಿಸಿ ನಮ್ಮಂಥ ಗಂಡಸರ ಜೀವ ದಡ್ಡ ಬಿದ್ದು ಹೋಗಿರ್ತದ. ಅದನ್ನ ವಾದಿಸಿಕೋತ ಕೂಡೊದ್ರಾಗ ಅರ್ಥ ಇಲ್ಲ ಅನ್ನಿಸಿ ಅಕೀಗೆ ಏನೂ ಅನ್ಸೋದ ಬ್ಯಾಡ ಅಂತ ಕಡಿಕಡಿಗೆ ಆಕೀಗ ಹೆಂಗ ಬೇಕೋ ಹಂಗ ಇದ್ದಬಿಟ್ಟಿದ್ದೆ ನಾನೂ. ಏನಂದರೂ ಅನ್ನಿಸ್ಕೊಂಡು ಸಂಸಾರದ ಖುಷಿಗೆ ಬದುಕು ಕಟ್ಟುವಾಗ ಸಾವಿರ ಸರ್ತಿ ಇಂಥಾ ಅವಮಾನಗಳು ಆಗಿರ್ತಾವ ಗಂಡಸರಿಗೆ. ಈ ಸಂಸಾರಕ್ಕ, ಮಕ್ಕಳಿಗೆ ಅಂತಾ ಪ್ರತೀ ಯಜಮಾನನೂ ಹೊರಗ ಎಷ್ಟು ಸರ್ತಿ ಮಾರಿ ಬಗ್ಗಿಸಿರೋದಿಲ್ಲ.
ಗಂಡಸರಿಗೆ ಅಂಥಾದ್ದು ಅನುಭವಿಸೋದು ಕರ್ಮ.
ಆದರ ಹೆಂಗಸರ ಮನಸ್ಸು ಭಾಳಾ ಸೂಕ್ಷ್ಮ.
ಎಷ್ಟ ಏನು ಮಾಡಿದರೂ ಮಕ್ಕಳು, ಮರಿ ಅನ್ನೋ ಕಕ್ಕುಲಾತಿ.
ಆಕೀ ಹೋದ ಮ್ಯಾಲೆ ಮನ್ಯಾಗ ಇರಲಿಕ್ಕೆ ಯಾವ ಕಾರಣಾನೂ ಇರ್ಲಿಲ್ಲ. ಆದರೂ ಮೂವತ್ತೈದು ವರ್ಷಗಟ್ಟಲೆ, ಸಾವಿರಾರು ಮಕ್ಕಳಿಗೆ, ಬದುಕಿಗೆ ಅವಶ್ಯ ಬೇಕಿದ್ದ ಗಣಿತ ಮತ್ತು ಮಗ್ಗಿ ಕಲಿಸಿದ ನಾನು ನಮ್ಮ ಮಕ್ಕಳಿಗೆ ಬುದ್ಧಿ ಕಲಿಸೋದಾಗಲಿಲ್ಲ ಅನ್ಸಿದಾಗ ಶಾಂತನ ಮುಂದ ನನ್ನ ಮುಖಾ ಸಣ್ಣದಾಗತಿತ್ತೋ ಮಾರಾಯಾ. ಯಾಕ ಹಿಂಗಾತೋ ಗೊತ್ತಿಲ್ಲ. ಹೆಣಮಕ್ಳಿಗೆ ಮನೀ, ಮಕ್ಳು ಅಂದರ ಜೀವಾ. ಆದರ ನಮ್ಮ ಮಕ್ಕಳು ನಾವಂದುಕೊಂಡಂಗ ಇರೋದಿಲ್ಲ ಅನ್ನೊದು ತಿಳಿಯೋ ಹೊತ್ತಿಗೆ ತಡಾ ಅಗಿಬಿಟ್ಟಿತ್ತು.
ಇಷ್ಟು ದಿನಾ ನೀಸೂರಾಗಿ ಸಂಸಾರ ನಡಿಸಿದಾಕಿಗೆ ನಿನ್ನೆ ಮೊನ್ನೆ ಬಂದ ಸೊಸಿ, ತಪ್ಪಿ “ಕುಂತು ತಿನ್ನಾಕ ದಂಡ” ಅಂತ ಅಂದ ಬಿಟ್ಟರ ಇಳಿವಯಸ್ಸಿನಾಗೆ ಮನಸ್ಸು ತಡಿಯೋದಿಲ್ಲ. ಇಷ್ಟು ವರ್ಷ ನಮ್ಮನ್ನೆಲ್ಲ ಕಣ್ಣಿನಂಗ ನೋಡ್ಕೊಂಡೋಳು ಶಾಂತಾ. ತನಗ ಇದು ಬೇಕು, ಹಿಂಗ ಆಗಲಿ.. ಇದು ಮಾಡಬ್ಯಾಡರಿ ಅಂದಿದ್ದೇ ಇಲ್ಲ. ಹ್ಯಾಂಗ ಆಕೆ ಸಂಸಾರ ನಡಸ್ತಿದ್ಳೊ ದೇವ್ರಿಗೆ ಗೊತ್ತಪಾ. ಈಗಿನವರಿಗೆ ಏನಿದ್ದರೂ ಸಾಲೋದಿಲ್ಲ. ಯಾಕೋ ನನ್ನ ಗಣಿತ ಕೈಕೊಡ್ತು ನೋಡು. ಯಾವ ಮಗ್ಗಿ ಎಲ್ಲಿ ಮರೆತೆ ಗೊತ್ತೆ ಆಗಲಿಲ್ಲ ಮಾರಾಯ. ಜೀವನದ ಲೆಕ್ಕನ ತಪ್ಪಿಹೋಯ್ತು ಅಂಥಾದರಾಗ ಯಾವ ಮುಖಾ ಇಟಗೊಂಡು ಪ್ರಶಸ್ತಿ ತಗೊಳಾಕ ಹೋಗಬೇಕಿತ್ತು ನಾನು..?..” ಮಾಸ್ತರರು ಉಮ್ಮಳಿಸಿ ಸುಮ್ಮನಾಗಿಬಿಟ್ಟರು.
ಎದ್ದು ಪಕ್ಕಕ್ಕೆ ಕೂತು ಸುಮ್ಮನೆ ತಬ್ಬಿದೆ.
ಬದುಕಿನ ಸುತ್ತು ಸುತ್ತಿ ಕೊನೆಯ ಬಿಂದುವಿನ ಬಳಿ ಬಂದು ನಿಂತ ಮಾಸ್ತರರ ಹತ್ತಿರ ಹೆಚ್ಚಿನ ಸಮಯ ಉಳಿದಿಲ್ಲ ಎನ್ನಿಸುತ್ತಿತ್ತು. ಬದುಕಿನ ಲೆಕ್ಕಾಚಾರ ಕೆಳಗಾಗಿತ್ತಾ ಅಥವಾ ಲೆಕ್ಕ ತಪ್ಪಿ ಹೋಗಿದ್ದರಾ..? ಕಂಡ ಕಂಡ ಊರಿಗೆಲ್ಲಾ ಹೋಗಿ ಸರಕಾರ ಕಳಿಸಿದೆಡೆಯಲ್ಲೆಲ್ಲಾ ಕಾಲೂರಿ ನಿಂತು ಯಾವತ್ತೂ ವರ್ಗಾವರ್ಗೀ ಕೇಳದೆ ಮಕ್ಕಳಿಗೆ ಬದುಕಿನ ಲೆಕ್ಕದ ಪಾಠ ಹೇಳಿಕೊಟ್ಟ ಗಣಿತ ಮಾಸ್ತರರು ಮಕ್ಕಳಿಗೆ ಬದುಕಿನ ಲೆಕ್ಕ ಹೇಳಿಕೊಡುವುದರಲ್ಲಿ ಅದೇಗೆ ಎಲ್ಲಿ ಸೋತರೋ ಗೊತ್ತಾಗುವುದು ಸಾಧ್ಯವೇ ಇರಲಿಲ್ಲ.
ಅವರ “..ಹದಿನಾಲ್ಕ್ ಏಳಲೇ.. ಹತ್ತೊಂಭತ್ ಒಂಭತ್ತಲೆ.. ಹದಿನೇಳ ನಾಲಕ್ಲೇ ಎಷ್ಟಾ..?..” ಕಂಚಿನ ಕಂಠದ ದನಿ ಕಿವಿ ಮೇಲೆ ಬೀಳುತ್ತಿತ್ತು.
ತಪ್ಪೋ ಸರಿನೋ. ಉಹೂಂ.. ಉತ್ತರ ಮಾತ್ರ ಯಾವ ಮೂಲೆಯಿಂದಲೂ ಬರುತ್ತಲೇ ಇರಲಿಲ್ಲ.
ಯಾಕೋ ಕ್ಲಾಸಿನ ಹೊರಗೆ ನಿಲ್ಲುತ್ತಿದ್ದ ಮಗ್ಗಿ ತಪ್ಪಿದ ಮಕ್ಕಳಂತೆ ಕಾಣಿಸುತ್ತಿದ್ದರು ಮಾಸ್ತರರು.
ಎಷ್ಟು ದಿನ ನಿಂತಾರು..?
ಲೆಕ್ಕಕ್ಕೆ ಸಿಗಲಿಲ್ಲ.
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ