- ನನ್ನೂರಲ್ಲಿ ಕೋಳಿ ಕೂಗುವುದಿಲ್ಲ - ಅಕ್ಟೋಬರ್ 23, 2022
- ಗಮನಿಸಲಿಲ್ಲ - ನವೆಂಬರ್ 3, 2021
- ಕ್ವಾರಂಟೈನ್ - ಜೂನ್ 19, 2021
ನನ್ನೂರಲ್ಲಿ ಕೋಳಿ ಕೂಗುವುದಿಲ್ಲ
ಮನುಷ್ಯರೇ ಹಾಕುತ್ತಾರೆ ಕೂಗು
ಆತುರದಲ್ಲಿ ಏದುಸಿರು ಬಿಡುತ್ತ
ಓಡೋಡಿ ಬರುವ ಜನರ
ತರಹೇವಾರಿ ಕೂಗುಗಳು
ನಸುಕು ಹರಿಯುವ ಮುನ್ನವೇ
ಪ್ರತಿಧ್ವನಿಸುತ್ತದೆ.
ಎತ್ತಲಿಂದ ಬಂತು ಕೂಗು
ಒಮ್ಮೊಮ್ಮೆ ಅಂಬಿಗ ತಬ್ಬಿಬ್ಬಾಗಿ
ಕಣ್ಣುಜ್ಜಿ ಹೊರಗೆ ಬರುವಾಗ
ಭಾರೀ ಜನಸ್ತೋಮ
ಶಾಲೆ ಸೇರಬೇಕಾದ ಮಕ್ಕಳು
ಆಸ್ಪತ್ರೆಗೆ ಮುಖ ಮಾಡಿದ ವೃದ್ಧರು
ಕೆಲಸದ ಧಾವಂತ ಹೊತ್ತ ಗಂಡಸರು
ಕಾಲೇಜು ಸೇರುವ
ಯುವಕ ಯುವತಿಯರು
ಗದ್ದೆ ಕೆಲಸದ ಹೆಣ್ಣಾಳುಗಳು
ಗಾರೆ ಕೆಲಸದ ಗಂಡಾಳುಗಳು…
ಎಲ್ಲರದ್ದೂ ಕೂಹೂ… ಕೂಹೂ…
ಕೂಗು.
ಎಲ್ಲರ ಕನಸಿಗೆ ಹುಟ್ಟು ಹಾಕುವ ನಾವಿಕ
ಆ ದಡ ಈ ದಡ
ಸೇರಿಸುತ್ತಲೇ ಇರುತ್ತಾನೆ
ಎರಡೂ ತೀರದ ಕೂಗುಗಳಿಗೆ
ಓ ಗೊಡುತ್ತಲೇ ಚಲಿಸುತ್ತಾನೆ.
ನಂಬಿ ಕುಳಿತವರ ಅರೆ ಬಿರಿದ ನಗು
ಒಮ್ಮೊಮ್ಮೆ ಅಪನಂಬಿಕೆಯ ಮಾತು
ಇಲ್ಲ ವ್ಯತ್ಯಾಸ ಯಾವ ಬೆಳಗಿಗೂ
ಅದೇ ನಗು ಮೊಗದಲಿ
ಜೋಬಿಗಿಳಿಸುವ ಪುಡಿಗಾಸು
ಮೀನು ಬುಟ್ಟಿ ಹೊತ್ತ ಮುದುಕಿ
ಅವಳಿಗಾಗಿ ಕಾಯುವ ಬೆಕ್ಕು
ತಿಂಡಿ ತರುವ ಯಜಮಾನನ
ದೃಢ ನಿರೀಕ್ಷೆಯ ನಾಯಿ
ತೀರದ ಬುಡಕ್ಕೆ
ಬಂದೂ ಬಂದೂ ಹೋಗುತ್ತಾರೆ.
ದಡೂತಿ ದೇಹಗಳನ್ನೂ
ಮಣಭಾರ ಮೂಟೆಗಳನ್ನೂ;
ನಡುಗುವ ಎದೆಯಲ್ಲಿ
ಪಯಣ ಮುಗಿದಂತೆ ಕೂತವರನ್ನೂ
ಮುಕ್ಕಾಗದಂತೆ ದಡ ಮುಟ್ಟಿಸಿದಾಗ,
ಪಯಣಿಗನಲ್ಲೂ ನಾವಿಕನಲ್ಲೂ
ಉಳಿದೇ ಹೋಗುತ್ತದೆ
ಹೇಳಿಕೊಳ್ಳಲಾಗದ ಕೃತಜ್ಞತೆಯೊಂದು
ಸಂಜೆಸೂರ್ಯ ಜಾರಿ
ಕತ್ತಲು ಅಮರಿಕೊಳ್ಳುವಾಗ
ಅಲ್ಯಾರೋ ಕೇಳುತ್ತಾರೆ
ಬೆಳಿಗ್ಗೆ ಎಷ್ಟೊತ್ತಿಗೆ ದೋಣಿ ಹಾಕೋದು;
“ಜನರು ಕೂಗ್ತಿದ್ದಂಗೆ”
ಪ್ರೀತಿಯ ಕರೆ, ಕರ್ತವ್ಯದ ಕರೆ
ಬದುಕಿನ ಕರೆ.
ಯಾರು ಯಾರನ್ನು ಕರೆಯುವುದು
ಎಲ್ಲಾ ಕಾಲನ ಕರೆಗೆ ಓ ಗೊಡುವುದೇ
ಒಂದಿನ.
ತಳ್ಳಿ, ದಡ ಬಿಡಿಸಿ ದೋಣಿ ಏರಿದ ಆತ
ನಡಿ ನಡಿ ಮತ್ಯಾರೋ ಕರೀತಿದ್ದಾರೆ.
ನನ್ನೂರಿನಲಿ
ಕೋಳಿ ಕೂಗಬೇಕೆಂದೇನೂ ಇಲ್ಲ
ಬೆಳಕು ಹರಿಯಲು
ಅಂಬಿಗ ಹುಟ್ಟು ಹಾಕಬೇಕು
ಕನಸು ತೆರೆದು ಕೊಳ್ಳಲು.
ಹೆಚ್ಚಿನ ಬರಹಗಳಿಗಾಗಿ
ವಿಶ್ವ ವಿಸ್ಮಯ
ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು
ಕವಿಯೊಬ್ಬ..