ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸೋ. ನಳಿನಾ ಪ್ರಸಾದ್
ಇತ್ತೀಚಿನ ಬರಹಗಳು: ಸೋ. ನಳಿನಾ ಪ್ರಸಾದ್ (ಎಲ್ಲವನ್ನು ಓದಿ)

ನಸುಕಿನಲ್ಲಿ ಭಾರತದ ಹೆಬ್ಬಾಗಿಲಿಗೆ ಸಂಭ್ರಮದಿಂದ ಕಾಲಿರಿಸಿದ ಮುಂಗಾರಿನ ಮೊದಲ ಎಸಳೆಂಬ ಸಾಹಿತ್ಯ ತುಂತುರು ಎಲ್ಲ ಓದುಗರಿಗೂ, ಸಹೃದಯರಿಗೂ ಮುಂಬಯಿ ಮಣ್ಣಿನ ಘಮಲು ಸಂತೋಷ, ಸಂಭ್ರಮ ತಂದಿದೆ ಎನ್ನುವುದು ಈ ಬೃಹತ್ ಸರಣಿಯ ಗೌರವ ಸಂಪಾದಕರಾದ ಡಾ ಜಿ ಎನ್ ಉಪಾಧ್ಯ ಅವರಿಗೆ ಆಹ್ಲಾದವನ್ನುಂಟುಮಾಡಿರುವುದು ಸಂಪಾದಕೀಯ ಮಾತುಗಳಲ್ಲಿ ಪ್ರತಿಬಿಂಬಿತವಾಗಿದೆ. ಎಸಳು ಒಂದರ ಕುರಿತಾದ ಅಭಿಪ್ರಾಯವನ್ನು  ಡಾ ರಮಾ ಉಡುಪಾ ಅವರು ಸಂಚಿಕೆಯ ಗೌರವ ಸಂಪಾದಕರಾದ ಡಾ ಉಪಾಧ್ಯ ಸರ್ ಅವರಿಗೆ ತಮ್ಮ ಪತ್ರ ಮುಖೇನ ನೇರವಾಗಿ ತಿಳಿಸಿದ್ದಾರೆ.   ಮುಂಬಯಿಯ ಕನ್ನಡ ಪ್ರಪಂಚದ ಸುಧಾಂಬುಧಿಯಲ್ಲಿ ಅರಳಿರುವ ಸಹಸ್ರದಳಗಳ ಕಮಲದ ಜ್ಞಾನದ ಎಸಳುಗಳನ್ನು  ಒಂದೊಂದಾಗಿ ಪರಿಚಯಿಸುವ ಮಹತ್ಕಾರ್ಯದ ರೂವಾರಿ ಡಾ ಜಿ ಎನ್ ಉಪಾಧ್ಯ ಅವರನ್ನು ಅಭಿನಂದಿಸುತ್ತಾ ನಸುಕು.ಕಾಮ್ ನ  ಸಂಸ್ಥಾಪಕರಾದ ವಿಜಯ್ ಅವರಿಗೆ ಮುಂಬಯಿಯ ಸಮಸ್ತ ಕನ್ನಡಿಗರ ಪರವಾಗಿ  ಅನಂತ ಧನ್ಯವಾದಗಳನ್ನು ಅರ್ಪಿಸುತ್ತಾ ಅರಬ್ಬೀ ಕಡಲತೀರದ ಕಲರವದ ಎರಡನೇ ಎಸಳನ್ನು ಸಂತೋಷ ಸಂಭ್ರಮದಿಂದ ಕೇಳಿ, ಓದಿ.. ನನಗೆ ಕೇಳಿದ ಮೊರೆತವನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.

ಕಡಲಿನಾಳದ ಕುಸುಮಗಳಿವು

ಕಣ್ತುಂಬುವ ಕನಸುಗಳೆಸೆಳುಗಳು

ತೀರತೀರದಾಚೆಗೂ ಹಬ್ಬಿ ಗಂಧಗಾಳಿ!!

ಕನ್ನಡದ ಹೆಸರಿಟ್ಟು

ಶ್ರಾವಣದ ಹಸಿರುಟ್ಟು

ಜಗವೆಲ್ಲ ತಬ್ಬಿರುವ ಬೆಳಕ ಬಳ್ಳಿ !!

ಗರ್ಭದಲಿ ಕತೆಯುಂಟು

ಹೃದಯಗಳ ಹಾಡುಂಟು

ವ್ಯಕ್ತಿ ಶಕ್ತಿಯ ಘನತೆ

ಅರಿವು ಹರಿವಿನ ಹಣತೆ

ಮುಗುಳ್ನಗೆಯ ಲಾಲಿತ್ಯ

ಗಂಭೀರ ಸಾಹಿತ್ಯ

ಅರಬ್ಬೀ ಕಡಲಿನ ಕನ್ನಡದ ಕಲರವವವು

ಅನುಭವದ ಗುಬ್ಬಿಯ ಹಾಡಿನೊಲವು!!

ಸೋ. ನಳಿನಾ ಪ್ರಸಾದ್

ಮುಂಬಯಿಯ ಅಂತರಂಗವನ್ನು ಅರಿಯುವುದೆಂದರೆ ಅಂಗೈ ತೆರೆದಿಟ್ಟು ಆಕಾಶವನ್ನು ತುಂಬಿಕೊಂಡಂತೆ. ಈ ಸಂಚಿಕೆಯಲ್ಲಿ ಒಟ್ಟು ಹದಿನೇಳು ಲೇಖನಗಳಿವೆ.

ಮೊಟ್ಟಮೊದಲನೆಯದಾಗಿ ನನ್ನ ಹೆಮ್ಮೆಯ, ಅಕ್ಕರೆಯ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಕುರಿತಾದ ಡಾ ದುರ್ಗಪ್ಪ ಕೋಟಿಯವರ್ ಅವರ ಲೇಖನ ‘ಮುಂಬಯಿ ಕನ್ನಡಿಗರ ಜ್ಞಾನ ದೇಗುಲ’ವನ್ನು ಕುರಿತಾಗೆರಡು ಮಾತು. ಕಳೆದ ತಿಂಗಳಷ್ಟೇ 162 ವಸಂತಗಳನ್ನು ಪೂರೈಸಿದ ದೇಶದ ಹಳೆಯ ಮೂರು ವಿಶ್ವವಿದ್ಯಾಲಗಳ ಪೈಕಿ ಒಂದಾದ ಪ್ರತಿಷ್ಠಿತ ಮುಂಬಯಿ ವಿಶ್ವವಿದ್ಯಾಲಯವೆಂಬ ಆಲದ ಮರದ ಬಿಳಲಿನಲ್ಲಿ 42 ವರ್ಷಗಳಿಂದ ಬೇರುಬಿಟ್ಟು ಸುಭದ್ರವಾಗಿ ನಿಂತಿರುವ ಕನ್ನಡ ವಿಭಾಗದ ಹುಟ್ಟು, ಹೆಜ್ಜೆ, ಹಾದಿ, ನೀರೆರೆದು ಪೋಷಿಸಿದ ಗುರುವರೇಣ್ಯರ ಬಗೆಗೆ, ಹರಸಿ ಹಾದಿ ತೋರಿದ ಹಿರಿಯರ ಬಗೆಗೆ, ಜ್ಞಾನವನ್ನರಸಿ ಬರುವ ಕಿರಿಯರ ಬಗೆಗೆ ಡಾ ದುರ್ಗಪ್ಪ ಕೋಟಿಯವರ್ ಅವರ ಲೇಖನ ಪರಿಚಯಿಸುತ್ತದೆ..  ಕನ್ನಡ ವಿಭಾಗವು ಮುಂಬಯಿಯ ಸಮಸ್ತ ಕನ್ನಡಿಗರನ್ನು ಒಂದೆಡೆಸೇರಿಸುವ, ಜ್ಞಾನ ದಾಸೋಹದ ಜೊತೆಗೆ ಭಾವನಾತ್ಮಕವಾಗಿ ಬೆಸೆಯುವ ಕಾರ್ಯದಲ್ಲಿ ತೊಡಗಿಕೊಂಡಿರುವುದು ನಿಜವಾಗಿಯೂ ಶ್ಲಾಘನೀಯ. ಕನ್ನಡಿಗರಿಗಷ್ಟೇ ಅಲ್ಲದೆ ಕನ್ನಡೇತರರಿಗೂ ಕನ್ನಡಕಲಿಸುವ ನಿಟ್ಟಿನಲ್ಲಿ ವಿಭಾಗವು ಗುರುಗಳಾದ  ಡಾ ಜಿ ಎನ್  ಉಪಾಧ್ಯ ಅವರ ನೇತೃತ್ವದಲ್ಲಿ ವಹಿಸುವ ಆಸ್ತೆಯು ಅನುಕರಣೀಯವೆನಿಸುತ್ತದೆ. ಹೀಗೆ ವಿಭಾಗದಲ್ಲಿ ನಡೆಯುವ ಸಾಹಿತ್ಯಿಕ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಲೇಖನದಲ್ಲಿ ವಿವರಣಾತ್ಮಕವಾಗಿ ದಾಖಲಿಸಿಲಾಗಿದೆ‌.

        ಕಾಲು ಶತಮಾನಕ್ಕೂ ಹೆಚ್ಚು ಕಾಲ ಮುಂಬಯಿಯಲ್ಲಿ ನೆಲೆಸಿ ತಮ್ಮ ವಿಶಿಷ್ಠವಾದ ಕಾವ್ಯಶೈಲಿಯ ಮೂಲಕ ಛಾಪುಮೂಡಿಸಿದ ಕವಿ ವಿ ಜಿ ಭಟ್ಟರ ಕವನವನ್ನು ಈ ಸಂಚಿಕೆಯಲ್ಲಿ ಪ್ರಕಟಿಸಿರುವುದು ಕಳಶಪ್ರಾಯವಾಗಿದೆ . ಮರಿ ಗುಬ್ಬಿ- ಹಿರಿ ಗುಬ್ಬಿಯಾಗಿ, ಹಿರಿ ಗುಬ್ಬಿ – ಮರಿಗುಬ್ಬಿಗಾಗಿ ಚಿತ್ರಿತವಾಗಿರುವ ಈ ಸರಳ, ಸುಂದರ ಕವನವು ಜೀವನದರ್ಶನನ್ನೇ ತೆರೆದಿಡುತ್ತವೆ.  ಮುಗ್ಧತೆ  ಪ್ರಬುದ್ಧತೆ ನಡುವಿನ ಸೂಕ್ಷ್ಮ ಅರಿವು ಕಾವ್ಯದ ಚೆಲುವಿನೊಂದಿಗೆ ಲಾಸ್ಯವಾಡುತ್ತದೆ. ಮುಗ್ಧತೆಯ ಭಂಗ ಅನಿವಾರ್ಯವಾದರೂ ಮರಿಗುಬ್ಬಿಗೆ  ಸ್ವತಂತ್ರ ಜೀವನಸ್ವರೂಪವನ್ನು ಪರಿಚಯಿಸುವ ಪರಿ ಅನನ್ಯವಾಗಿದೆ. ಮತ್ತೆ ಮತ್ತೆ ಓದುತ್ತಿರುವಾಗ ಕಾಯಕಕ್ಕಾಗಿ ತಾಯ್ನಾಡು ಬಿಟ್ಟು ಮಹಾರಾಷ್ಟ್ರದ ಮಣ್ಣಿಗೆ ಹಾರಿಬಂದಿರುವ ನಮ್ಮ ಬಾಲ್ಯದ ಚೀವ್ ಚೀವ್ ಕಿವಿಯಲ್ಲಿ ಹಾಡುತ್ತದೆ.

        ಮುಂಬಯಿಯ ಹಿರಿಯ ವಿದ್ವಾಂಸರೂ, ಕವಿಗಳೂ ಆದ ಗುರುಗಳಾದ ಡಾ ಜೀವಿಯವರು ಬಾಲಿವುಡ್ ನ  ಖ್ಯಾತ ಕೇಶವಿನ್ಯಾಸಕ ಶಿವರಾಮ ಭಂಡಾರಿ ಅವರ ಜೀವನ ಸಾಧನೆ ಕುರಿತಾಗಿ ಇಂಗ್ಲಿಷ್ ನಲ್ಲಿ ಜಯಶ್ರೀ ಶೆಟ್ಟಿಯವರು ರಚಿಸಿರುವ ಸ್ಟೈಲಿಂಗ್ ಆಫ್ ದಿ ಟಾಪ್ ಕೃತಿಯನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಪರಿಚಯಿಸಿದ್ದಾರೆ. ವೃತ್ತಿಯನ್ನು ಮನೋಲ್ಲಾಸಕಾರಿಯಾದ ಪ್ರವೃತ್ತಿಯನ್ನಾಗಿಯೂ  ರೂಪಿಸಿಕೊಂಡ ಈ ವಿಶೇಷ ಸೃಜನಶೀಲ ಸಾಧಕನ ಯಶೋಗಾಥೆಯ ಪ್ರತಿಯೊಂದು ಘಟನೆಯೂ ಒಮ್ಮೆ ಮನಸ್ಸನ್ನು ಒದ್ದೆಮಾಡಿದರೆ ಮತ್ತೊಮ್ಮೆ ಬೆರಗು ಮೂಡಿಸುತ್ತವೆ.  ಶಿಖಾ ವಿನ್ಯಾಸ ಕೌಶಲ್ಯದಿಂದ ಶಿಖರವೇರಿದ ಕನ್ನಡಿಗ ಶಿವರಾಂ ಭಂಡಾರಿಯವರು ಸ್ಟೈಲಿಂಗ್ ಗೆ ಹೊಸ ಪರಿಭಾಷೆಯನ್ನೇ ಬರೆದಿರುವುದು ಹೆಮ್ಮೆ ಎನಿಸುತ್ತದೆ.

ಇತ್ತೀಚೆಗಷ್ಟೇ  ಪದ್ಮವಿಭೂಷಣ ಜಾರ್ಜ್‌ ಫರ್ನಾಂಡೀಸ್ ಅವರ ಸಿದ್ಧಿ ಸಾಧನೆಗಳನ್ನು ದಾಖಲಿಸುವ ಸಲುವಾಗಿ ಸುರೇಖಾ ದೇವಾಡಿಗ   ರಚಿಸಿರುವ ಕೃತಿಯ ಸಾರವನ್ನು  ಇಲ್ಲಿ ಕಾಣಬಹುದಾಗಿದೆ. ಧರ್ಮದೀಕ್ಷೆ ಪಡೆಯಲು ಹೊರಟ ಬಾಲಕನೊಬ್ಬ ಜನನಾಯಕನಾಗಿ ರಾಷ್ಟ್ರೀಯ ಪಕ್ಷದ ಮುತ್ಸದ್ದಿಯಾಗಿ, ಚಿಂತಕನಾಗಿ ಮೂರ್ತಗೊಳ್ಳುವ ಪರಿ ಇಲ್ಲಿ ಮನೋಜ್ಞವಾಗಿ ಚಿತ್ರಿತವಾಗಿದೆ. ಕನ್ನಡಿಗರಾದ ಜಾರ್ಜ್ ಮಹಾರಾಷ್ಟ್ರವನ್ನು ಕಾರ್ಯಕ್ಷೇತ್ರವನ್ನಾಗಿಸಿಕೊಂಡು ರಾಷ್ಟ್ರಕ್ಕೆ ನೀಡಿದ ಕೊಡುಗೆಯನ್ನು ಇಲ್ಲಿ ಸ್ಮರಿಸಲಾಗಿದೆ.

  ಕಲಾ ಜಗತ್ತು ಮುಂಬಯಿ ಸರಿ ಸುಮಾರು ಐದು ದಶಕಗಳಿಂದ ವಿಶ್ವದಾದ್ಯಂತ ಪ್ರಸಿದ್ಧವಾದ   ಸಾಂಸ್ಕೃತಿಕ ವೇದಿಕೆ.  ವಿಶೇಷವಾಗಿ ತುಳು ನಾಡಿನ ಕಲೆ,ಸಂಸ್ಕೃತಿ ಹಾಗೂ ಪರಂಪರೆಗಳನ್ನು ಕಾಪಿಡುವ, ಮುಂದಿನ ತಲೆಮಾರುಗಳಿಗೆ ಜೋಪಾನವಾಗಿ ಹಸ್ತಾಂತರಿಸುವ ಜವಾಬ್ದಾರಿಯನ್ನು ಹೊತ್ತ ಕಲಾ ಜಗತ್ತಿನ ನಿರ್ಮಾತೃ , ಸ್ವತಃ ಅದ್ಭುತ ರಂಗ ಕಲಾವಿದ, ನಿರ್ದೇಶಕ, ನಾಟಕಕಾರ ತೋನ್ಸೆ ವಿಜಯಕುಮಾರ ಶೆಟ್ಟಿಯವರನ್ನು ಕುರಿತಾದ ಶುಭಲಕ್ಷ್ಮಿ ಶೆಟ್ಟಿಯವರ ಲೇಖನ ಆಕರ್ಷಣೀಯವಾಗಿದೆ. ಸಮಷ್ಟಿಯ ಹಿತಕ್ಕಾಗಿ ಕಲೆಯನ್ನು ಮಾಧ್ಯಮವನ್ನಾಗಿಸಿಕೊಂಡು ಹೊರಟ ವಿಜಯಕುಮಾರ್ ಶೆಟ್ಟಿಯವರ ಪ್ರಯತ್ನ ಇಂದು ಹೆಮ್ಮರವಾಗಿ ಬೆಳೆದಿರುವುದಕ್ಕೆ ಕಲಾಜಗತ್ತಿನ ಕೂಸಾದ ಚಿಣ್ಣರ ಬಿಂಬ ಸಾಕ್ಷಿಯಾಗಿದೆ, ತಮ್ಮ ಷಷ್ಠಿ ಪೂರ್ತಿಯ ಸಂದರ್ಭದಲ್ಲಿ 60 ಪಾತ್ರಗಳನ್ನು ಏಕವ್ಯಕ್ತಿಯಾಗಿ ಪ್ರದರ್ಶಿಸಿ ಲಿಮ್ಕಾ ವಿಶ್ವದಾಖಲೆಯಲ್ಲಿ ಸ್ಥಾನ ಗಳಿಸಿದ ಬಗೆಗೆ ಶುಭಲಕ್ಷ್ಮಿಯವರು ಪ್ರಭಾವಶಾಲಿಯಾಗಿ ನಿರೂಪಿಸಿದ್ದಾರೆ.

  ಅಬ್ಭಾ ಅಂಧೇರಿಯ ಅನನ್ಯತೆಯೇ… !! ಅಶೋಕ್ ಸುವರ್ಣವರು 66 ಮಿಲಿಯ ವರ್ಷಗಳ ಇತಿಹಾಸದ ಗಿಲ್ಬರ್ಟ್ ಹಿಲ್ ಮೇಲೆ ನಿಂತು ಮುಂಬಯಿಯ ಅತ್ಯಂತ ದೊಡ್ಡ ಉಪನಗರ ಅಂಧೇರಿಯ ಪರಿಚಯ ಮಾಡಿಸಿರುವ ಪರಿ ಸ್ವಾರಸ್ಯವಾಗಿದೆ. ಅಲ್ಲಿಯ ಚಾರಿತ್ರಿಕ ಹಿನ್ನೆಲೆಯನ್ನು ಶಕ್ತಿಯುತವಾಗಿ ಕಟ್ಟಿ ಕೊಡುತ್ತಾ ಇಂದು ಅದು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ವ್ಯಾವಹಾರಿಕವಾಗಿ ಹಾಗೂ ವಾಣಿಜ್ಯನಗರಿಯಾಗಿ ರೂಪುಗೊಂಡಿರುವ ಸುಂದರ ಚಿತ್ರಣ ಗಮನಾರ್ಹವಾಗಿ ದಾಖಲಾಗಿದೆ. ಶ್ರೀಯುತರು ಅಂಧೇರಿಯ ಪ್ರಮುಖ ಸ್ಥಳಗಳಲ್ಲೊಂದಾದ ಮಹಾಕಾಳಿ ಗುಹೆಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಕೃತಿ ರೂಪದಲ್ಲಿ ದಾಖಲಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

         ಗೋಪಾಲ ತ್ರಾಸಿಯವರ ಕವಿಸಮಯದ ಮೂರೂ ಭಾವಗಳು ಶಿಲ್ಪ ಸಾನಿಧ್ಯದಲ್ಲಿ ಈ ಪರಿಯ ಪ್ರೀತಿಯನ್ನು ಪಡೆವ ಹಿಡಿಯಾಸೆಯನ್ನು ಸಂವೇದನಾಶೀಲವಾಗಿ ಬಿಚ್ಚಿಡುತ್ತವೆ. ಮಾನವನಾಗಲು ಎದೆಕುದಿಯ ಬಿಟ್ಟು ನಿನ್ನ ನೀನೆ ಒಪ್ಪಿಕೊಳ್ಳಬೇಕು, ಅಪ್ಪಿಕೊಳ್ಳಬೇಕು  ಎನ್ನುತ್ತಾ ನಿಜವಾದ ಅರ್ಥದಲ್ಲಿ ಪ್ರೀತಿಯನ್ನು, ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ  ಹಾಡಾಗಿಸುತ್ತಾರೆ ತ್ರಾಸಿಯವರು.

       ಏಳಿಂಜೆ ನಾಗೇಶ್ ರವರು  ತಮ್ಮ ಲೇಖನದ ತೆರೆಯಮೇಲೆ ಬಾಲಿವುಡ್ ತಾರೆಯರ ಪ್ರೇಮ ಪುರಾಣಗಳನ್ನು ನಮಗಾಗಿ ಮನೋರಂಜನೀಯವಾಗಿ ಚಿತ್ರಸಿದ್ದಾರೆ‌. ಸಿನಿಮಾ ಲೋಕದ ದಿಗ್ಗಜರ ಜೀವನ, ಪ್ರಚಾರದ ಅಗತ್ಯತೆ, ಅದಕ್ಕಾಗಿ ಅವರು ಅನುಸರಿಸುವ ಮಾರ್ಗಗಳು ಈ ಪ್ರೇಮ, ಪ್ರಣಯಗಳಿಗೆ ಕಾರಣವಾಗುವುದು ಒಂದೆಡೆಯಾದರೆ ಜೀವನೋಪಾಯಕ್ಕಾಗಿ ಅವರು ಮಾಡಿಕೊಳ್ಳಬೇಕಾದ ಹೊಂದಾಣಿಕೆ , ಅವುಗಳಿಂದಾದ ಪ್ರೇಮ ಪ್ರಸಂಗಗಳು  ಜೊತೆಗೆ ದಿನ ನಿತ್ಯದ ಸಹವರ್ತಿಗಳಾಗಿದ್ದಾಗ ಅಂಕುರಿಸಿದ ಪ್ರೀತಿಯ ಚಿತ್ರಣವನ್ನು ಇಲ್ಲಿ ಸಂಗ್ರಹಿಸಲಾಗಿದೆ.

         ಊರಿನಿಂದ ಮುಂಬಯಿಗೆ ಜೀವನೋಪಾಯಕ್ಕಾಗಿಯೋ, ಹೆಚ್ಚಿನ ಓದಿಗಾಗಿಯೋ ಬಂದ ಕನ್ನಡಿಗರಾರೂ ಊರ ಮರೆಯಲಿಲ್ಲ. ಸಮಯ ಸಿಕ್ಕಾಗಲೆಲ್ಲಾ ಊರಿನತ್ತ ಓಡಿ ತಮ್ಮ ಗಳಿಕೆಯ ಬಹುಪಾಲನ್ನು ತಮ್ಮವರ ಏಳಿಗೆಗಾಗಿ ಸಮರ್ಪಿಸಿ ಕೇವಲ ಆರ್ಥಿಕವಾಗಿ ಅಷ್ಟೇ ಅಲ್ಲದೆ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ತಮ್ಮ ಊರು, ಊರದೇವರುಗಳಿಗೆ ಸದಾ ಋಣಿಯಾಗಿದ್ದುಕೊಂಡು ಧನ್ಯತೆಯನ್ನು ಪಡೆದದ್ದು ಮುಂಬಯಿ ಕನ್ನಡಿಗರ ಹಿರಿಮೆ. ಆದರೆ ಕೊರೋನಾ ಸಂಕಷ್ಟ ಕಾಲದಲ್ಲಿ  ಆಶ್ರಯಕ್ಕಾಗಿ ಊರಿನತ್ತ ಮುಖಮಾಡಿಹೊರಟ ನಮ್ಮವರಿಗೆ ಆದ ಮನೋಘಾತ ಬಹುಶಃ ಕರೋನಾಕ್ಕಿಂತ ಭೀಕರ. ಇಲ್ಲಿ ಇರಲಾರದೆ, ಅಲ್ಲಿ ಸಲ್ಲಲಾರದ  ಕನ್ನಡಿಗರ ಅದರಲ್ಲೂ ವಿಶೇಷವಾಗಿ ತುಳು ಕನ್ನಡಿಗರ ತ್ರಿಶಂಕು ಸ್ಥಿತಿ,ಅಳಲು, ತೊಳಲುಗಳು ಶ್ರೀ ಚಂದ್ರಶೇಖರ ಪಾಲೆತ್ತಾಡಿಯವರ ಲೇಖನದಲ್ಲಿ ಮನಕಲಕುವಂತೆ ಮೂಡಿಬಂದಿದೆ.     

          ಹುಚ್ಚು ಮನಸ್ಸಿನ ಹತ್ತು ಮುಖಗಳುಳ್ಳ ಕಾರಂತರ ಕಾದಂಬರಿಗಳಲ್ಲಿನ ಮಾನವೀಯ ಸಂಬಂಧಗಳ ಕುರಿತಾಗಿಯೇ ವಿಶೇಷ ಹಾಗೂ ಆಳವಾದ ಅಧ್ಯಯನ ಮಾಡಿರುವ ಡಾ ರಮಾ ಉಡುಪ ಅವರ ಲೇಖನದಲ್ಲಿ ಕಾರಂತರು ಹೇಗೆ  ಪ್ರಕೃತಿ, ಮಾನವ ಪ್ರಕೃತಿ, ಶಿಕ್ಷಣ ಇವೇ ಮೊದಲಾದ ಹಿನ್ನೆಲೆಯಲ್ಲಿ  ಬದುಕನ್ನು ಅದರೆಲ್ಲಾ ವೈವಿಧ್ಯತೆಗಳಲ್ಲಿ ಅರಿಯಲು, ಅನುಭವಿಸಲು ಒಳನೋಟಗಳನ್ನು ನೀಡುತ್ತಾರೆ ಎಂಬುದನ್ನು ಮುಖ್ಯವಾಗಿ ಕಾಣಿಸಿದ್ದಾರೆ. ಯಾವತ್ತೂ ಸಿದ್ಧಾಂತದ ಜೊತೆ ಜೊತೆಗೆ ಸಂಸ್ಕೃತಿ, ಪರಂಪರೆಗಳನ್ನು ಕಡೆಗಣಿಸದ ಕಾರಂತರ ಚಿಂತನೆಗಳು ಅವರನ್ನು ಪ್ರಸ್ತುತವಾಗಿಸುತ್ತವೆ ಹಾಗೂ ವಿಶೇಷವಾಗಿಸುತ್ತವೆ ಎಂಬುದರ ಪರಿಚಯ ಇಲ್ಲಿದೆ.

      ನಾರಾಯಣ ನವಿಲೇಕರ್ ರವರ ಸೈಕಲ್ ಎಂಬೋ ಕುದುರೆಯನ್ನೇರಿ ಪ್ರಬಂಧ  ಸಹಜ ಹಾಗೂ ಸುಂದರವಾಗಿ ಮೂಡಿಬಂದಿದೆ. ಪ್ರತಿಯೊಬ್ಬ ಓದುಗನನ್ನೂ ತಮ್ಮ ಬಾಲ್ಯದ ಸವಾರಿಗೆ ಕೊಂಡೊಯ್ಯುವ ಲೇಖನ ಯಾವುದೇ ಕೆಲಸ ಹೇಗೆ ಕಲಿಯುವ ವರೆಗೂ ಬ್ರಹ್ಮ ವಿದ್ಯೆ, ಕಲಿತ ಮೇಲೆ ಕಪಿವಿದ್ಯೆ ಎಂದೊಮ್ಮೆ ಮುಗುಳ್ನಗುವಂತೆ ಮಾಡುತ್ತದೆ. ಲೇಖನದಲ್ಲಿ  ಸೈಕಲ್ ಸವಾರಿಯ   ಅನುಭವಗಳನ್ನು ಹಂಚಿಕೊಳ್ಳುತ್ತಾ ಹಲವು  ವಿಚಾರಗಳು ಬೆಟ್ಟ ಏರಿಸುತ್ತವೆ, ಇಳಿಜಾರು ಇಳಿಸುತ್ತವೆ ಮನೋಪಟಲದಲ್ಲಿ ಒಳಪೆಡಲ್ ಮಾಡಿದಂತಾಗುತ್ತದೆ, ಟ್ರಿಣ್ ಟ್ರಿಣ್ ಸದ್ದು  ಹೌದ್ಹೌದು ಎನಿಸುವಂತೆ ಮಾಡುತ್ತದೆ.

            ಸ್ವತಃ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ಶ್ರೀಮತಿ ಶಾರದಾ ಅಂಚನ್ ಅವರ ಜೀವದ್ರವವನ್ನು ಕುರಿತಾದ ಲೇಖನ ಬಹಳ ಉಪಯುಕ್ತ ಮಾಹಿತಿಗಳನ್ನು ಒಳಗೊಂಡಿದೆ. ಜೀವದ್ರವವಾದ ರಕ್ತ, ಅದರ ರಚನೆ, ಕಾರ್ಯವಿಧಾನ ಹಾಗೂ ಅದರಲ್ಲಿ ಏರುಪೇರಾದಾಗ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳ ಬಗೆಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ವಿಚಾರಗಳನ್ನು ಸರಳವಾಗಿ, ಸ್ಪಷ್ಟವಾಗಿ ತಿಳಿಸುವ ಲೇಖನ‌ವಿದಾಗಿದೆ.

        ಶ್ರೀ ವಿಶ್ವನಾಥ ಅಮಿನ್ ರವರ ಲೇಖನ ‘ವಾಣಿಜ್ಯ ನಗರಿಯಲ್ಲೊಂದು ವೃಕ್ಷ ಸಂಕುಲದ ಜೀವನಾಡಿ’ಯಲ್ಲಿ  ಮನುಷ್ಯ ನಾಗರೀಕತೆಯ ನೆಪದಲ್ಲಿ ಪ್ರಕೃತಿಯನ್ನು ನಿರ್ದಯವಾಗಿ ಹನನ ಮಾಡುವುದರ ಮೂಲಕ ಸೃಷ್ಟಿಯ ಸಮತೋಲನವನ್ನೇ ಏರುಪೇರು ಮಾಡಹೊರಟಿರುವುದರ ಬಗೆಗೆ ಕಾಳಜಿ, ಕಳವಳಗಳನ್ನು ಮನಮುಟ್ಟುವಂತೆ ಪ್ರತಿಧ್ವಿನಿಸುತ್ತದೆ. ಮುಂಬಯಿಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದಾದ ಮಿನಿ‌ ಕಾಶ್ಮೀರ ವೆಂದೇ ಹೆಸರಾದ ಹಸಿರಾದ ಗೋರೆಗಾಂವ್ ನ‌ ಆರೆ ಮಿಲ್ಕ್ ಕಾಲೋನಿಯ ಅರಣ್ಯ ಪ್ರದೇಶವನ್ನು ಮೆಟ್ರೋ ನಿರ್ಮಾಣಕ್ಕಾಗಿ ಬಲಿಕೊಡುವ ಅಗತ್ಯದ ಬಗೆಗೆ, ಅದರ ಪರ ವಿರೋಧಗಳಲ್ಲಿ ಸ್ವಾರ್ಥಕ್ಕಾಗಿ ರಾಜಕಾರಣಿಗಳು, ಸರ್ಕಾರಗಳು, ಅದನ್ನು ಕುರಿತಾಗಿ ನಡೆವ ಲಾಬಿಗಳ ಬಗೆಗೆ ವಿಸ್ತೃತವಾಗಿ ತಿಳಿಸಲಾಗಿದೆ. ನಿಜಕ್ಕೂ ವಿಚಾರಕ್ಕೆ ಹಚ್ಚುವ ಲೇಖನವಿದು.

          ಮುಂಬಯಿಯ ಕನ್ನಡ ಕಥಾಲೋಕದ ವಿಶಿಷ್ಟ ಹೆಸರು ಮಿತ್ರಾ ವೆಂಕಟರಾಜ್. ತಮ್ಮ ಅಪೂರ್ವ ಭಾಷೆ, ಶೈಲಿ, ಮೃದುವಾದ ನಿರೂಪಣೆಯೊಂದಿಗೆ ಗಹನವಾದ ವಿಚಾರಗಳನ್ನು ಲಾಲಿತ್ಯಪೂರ್ಣವಾಗಿ ಹೆಣೆಯುವ ಮಿತ್ರ ಅವರ ಕತೆಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ‌. ಇಸ್ತಾಂಬುಲ್ ನ ನೀಲಿ ಮಸೀದಿ, ಪರ್ವಿನ್, ಹಿಜಾಬ್ ಹಿಂದಿನ ನಿಲೋಫರ್, ಪರ್ವಿನ್ ನ ಲಾಂಟೆನ್ ಈಗಲೂ ಭಗ್ಗನೆ ಕನಸಿನಲ್ಲಿ ಎಚ್ಚರಗೊಳ್ಳುತ್ತವೆ, ಹರಿದಾಡುತ್ತವೆ, ಎಳೆತಂದು ಬಿಗಿಯುತ್ತವೆ.ಅದ್ಭುತವಾದ ನಿರೂಪಣೆ.    

              ಬೆರಳ ಸಂದಿನಿಂದ ಜಾರಿಹೋಗುವ ಬದುಕಿನ ಹುಡುಕಾಟದಲ್ಲಿ ಕಳೆದು ಹೋದದ್ದನ್ನು ಕೈ ಬಿಟ್ಟು , ಉಳಿದದ್ದನ್ನು ದಕ್ಕಿಸಿಕೊಳ್ಳಲು ಕೂಗುಹಾಕುವ ಅಂತರ್ದನಿಯ ಕರೆಗೆ ಓಗೊಡಲೇ ಬೇಕಾದ ಅನಿವಾರ್ಯತೆಯನ್ನು ವಿಶ್ವನಾಥ ಶೆಟ್ಟಿ ಪೇತ್ರಿಯವರು ತಮ್ಮ ಕತೆ ‘ಅಂತರ್ದನಿ’ಯಲ್ಲಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಕತೆಯಲ್ಲಿರುವ ರೋಚಕ ತಿರುವುಗಳು, ತೊಳಲಾಟಗಳು, ದ್ವಂದ್ವಗಳೂ ದಾರಿ ತಪ್ಪಿದ ವ್ಯಕ್ತಿಯೊಬ್ಬನ ವಾಸ್ತವ ಬದುಕಿನ ಸೂಕ್ಷ್ಮಗಳನ್ನು ಅನಾವರಣಮಾಡುತ್ತವೆ.

            ಡಾ ಕರುಣಾಕರ ಶೆಟ್ಟಿಯವರ ಕತೆ ‘ ಬದುಕೆಂದರೆ… ಶೀರ್ಷಿಕೆಯ ಮುಂದಿರುವ ಮೂರು ಚುಕ್ಕಿಗಳು ಅದರ ಅನಿಶ್ಚಿತತೆಯ ಬಗ್ಗೆ ಸೂಕ್ಷ್ಮವಾಗಿ ತಿಳಿಸುತ್ತಾ ಹೋಗುತ್ತದೆ. ನಾಗರಾಜ ಅಪ್ಪನ ಮಾತಿನಂತೆ  ತೂತುಬಿದ್ದ ಮೇಲ್ಛಾವಣಿಯಿಂದ ತೊಟ್ಟಿಕ್ಕುವ ಮಳೆನೀರನ್ನು ಓಕುಳಿಯಾಗಿಸಿಕೊಂಡು ಬದುಕನ್ನು ಬಂದಂತೆ ಸ್ವೀಕರಿಸಲು ಸಿದ್ಧನಾಗುತ್ತಾನೆ. ಸಾಧನೆಯ ಹಾದಿಯಲ್ಲಿ ಶ್ರದ್ಧೆಯಿಂದ ಶ್ರಮಿಸುತ್ತಾನೆ. ಅವನ ಶ್ರಮ ಫಲನೀಡುವ, ಕನಸು ಕೈಗೂಡುವ ಹೊತ್ತಿಗೆ ಬದುಕು ಕ್ರೂರನಗೆಬೀರಿ ಅನಿರೀಕ್ಷಿತ ತಿರುವಿನಲ್ಲಿ ಅವನನ್ನು ತಂದು ನಿಲ್ಲಿಸಿಬಿಡುತ್ತದೆ. ಓದುಗರಿಗೆ ಕತೆಯ ಅಂತ್ಯ ಅಯ್ಯೋ.. ದುರ್ವಿಧಿಯೇ ಎನಿಸುವಂತೆ ಮಾಡುತ್ತಾ ಬದುಕಿನ ನಿಜ ದರ್ಶನಮಾಡಿಸುತ್ತದೆ.

                 ಬಿಟ್ಟೂ ಬಿಡಲಾರದ ಭಾವ ಬಂಧನಗಳ ಹೊರತಾಗಿಯೂ ತವರೂರನ್ನು ತೊರೆದು ಮುಂಬಯಿಯ ವಿಶಾಲ ಜಗತ್ತಿಗೆ ತೆರೆದುಕೊಂಡ ಸವಿತಾ ಶೆಟ್ಟಿಯವರಿಗೆ ಮುಂಬಯಿ ನೀಡಿದ್ದೇನು, ಬೇಡಿದ್ದೇನು ಎಂಬುದು ಅವರ ಮುಂಬಯಿ ಪಯಣ ಸರಳವಾಗಿ, ಸುಂದರವಾಗಿ ಮೂಡಿಬಂದಿದೆ. ‌

ಮುಂದಿನ ಎಸಳುಗಳುಗಳಲ್ಲಿ ಮೂಡುವ ಲೇಖನಕ್ಕಾಗಿ ಕಾತುರದಿಂದ ಕಾಯುತ್ತಾ, ಈ ಸಂಚಿಕೆಯನ್ನು ಯಶಸ್ವಿಯಾಗಿ ಹೊರತರುವಲ್ಲಿ ಶ್ರಮವಹಿಸಿದ ಎಲ್ಲಾ ಗುರು ಹಾಗೂ ಸ್ನೇಹಿತ ವೃಂದಕ್ಕೆ ಮತ್ತೊಮ್ಮೆ ಅಭಿನಂದನೆಗಳು.