- ಕರ್ಪೂರಿ ಠಾಕೂರ್ - ಮಾರ್ಚ್ 3, 2024
- ಗಝಲ್ ಲೋಕದಲ್ಲೊಂದು ಸುತ್ತು - ಮಾರ್ಚ್ 25, 2023
- ಬಿ. ಜಿ. ಎಲ್. ಸ್ವಾಮಿ ಮತ್ತು ಹೀಗೊಂದು ಪ್ರಣಯ ಪ್ರಸಂಗ - ನವೆಂಬರ್ 5, 2022
Page 61
ಕಸ್ತೂರ್ ಬಾ ದಿನೇದಿನೇ ಕುಸಿಯುತ್ತಿದ್ದರು. ಅವರನ್ನು ನೋಡಿಕೊಳ್ಳಲು ನರ್ಸ್ ಗಳಿಗೆ ಬಹಳ ಶ್ರಮವಾಗುತ್ತಿತ್ತು. ನಾವು ಸರ್ಕಾರಕ್ಕೆ ಬರೆದು, ಇನ್ನೂ ಕೆಲವು ನರ್ಸ್ ಗಳನ್ನು ಕಳಿಸಿ ಕೊಡಲು ವ್ಯವಸ್ಥೆಮಾಡಿ, ಎಂದು ಬೇಡಿದೆವು. ಸರ್ಕಾರ ಕಳಿಸಿಕೊಟ್ಟ ‘ಆಯಾ’ (ಮನೆ ಕೆಲಸದವಳು) ಒಂದು ವಾರ ಕೆಲಸಮಾಡಿದಮೇಲೆ ಮತ್ತೆ ಡ್ಯೂಟಿಗೆ ಬರಲೇ ಇಲ್ಲ. ಮುಂದಿನ ದಿನಗಳಲ್ಲಿ ಈ ಪ್ರಸಂಗದ ಆಧಾರದ ಮೇಲೆ ಸರ್ಕಾರ ಕೇಂದ್ರ ವಿಧಾನ ಸಭೆಯಲ್ಲಿ ಒಂದು ಕಾಯಿದೆಯನ್ನು ಹೊರಡಿಸಬೇಕು. ತರಪೇತು ಪಡೆದ ನರ್ಸ್ ಗಳನ್ನು ರೋಗಿಗಳಿಗೆ ಶುಶ್ರುಷೆಮಾಡಲು ನಿಯುಕ್ತಿಮಾಡಬೇಕು, ಎಂದು ಹೇಳಿದ್ದಲ್ಲದೇ ನರ್ಸ್ ಗಳ ಅಗತ್ಯವನ್ನು ವಿವರಿಸಿದೆವು. ಆಗ ಸರ್ಕಾರ ಒಂದು ಪರ್ಯಾಯ ಉಪಾಯಸೂಚಿಸಿದರು. ಬೇಕಾದರೆ, ನಿಮ್ಮ ಸಂಬಂಧಿಗಳು ಬಂದು ನಿಮಗೆ ಸಹಾಯಮಾಡಬಹುದೆಂದು. ಇದು ಗೊತ್ತಾದ ಬಳಿಕ, ಕಸ್ತೂರ್ ಬಾ, ಕಾನು ಗಾಂಧಿ ಮತ್ತು ಪ್ರಭಾವತಿ ನಾರಾಯಣ್ ರನ್ನು ಕರೆಸಿ, ಎಂದು ಸಲಹೆಕೊಟ್ಟರು. ಮೊದಲು ಕೇಳಿದ ಕೋರಿಕೆಯ ಮೇಲೆ ಅನೇಕ ವಾರಗಳ ಸಮಯ ಪತ್ರ ವ್ಯವಹಾರಗಳನ್ನು ನಡೆಸಿದ ಮೇಲೆ ಸರ್ಕಾರದವರು ಪ್ರಭಾವತಿ ನಾರಾಯಣ್ ರವರನ್ನು ೧೨, ಜನವರಿಯಂದು ಕರೆಸಿದರು. ಕಾನು ಗಾಂಧಿ ೧ ಫೆಬ್ರವರಿ ತಿಂಗಳು ಬಂದರು.
೨೨, ಫೆಬ್ರವರಿ ೧೯೪೪ ರಂದು ಕಸ್ತೂರ್ ಬಾ ಇಹಲೋಕದಿಂದ ಮರೆಯಾದರು. ಸರ್ಕಾರಕ್ಕೆ ಬರೆದ ಕಾಗದದಲ್ಲಿ ಗಾಂಧೀಜಿಯವರು, ಬಾ ಮತ್ತು camp ನಲ್ಲಿದ್ದ ಇತರೆ ಬಂದಿಗಳು, ತಮ್ಮ ಸಂಬಂಧಿಕರ ಜತೆಗೆ ಸಂವಾದ ಮಾಡಲು ಅವಕಾಶ ಮಾಡಿಕೊಡಬೇಕು. ಇದನ್ನು ತಿಳಿಸಿದಮೇಲೆಯೂ, ಗಂಭೀರವಾಗಿ ಪರಿಗಣಿಸದೆ, ಸರ್ಕಾರ ಏನೂ ಉತ್ತರಕೊಡಲಿಲ್ಲ. ಬಾರವರ ಕಾಯಿಲೆ ಉಲ್ಬಣಿಸಿದಾಗ, ಅವರ ಮಕ್ಕಳಾದ ರಾಮದಾಸ್ ಗಾಂಧಿ, ದೇವದಾಸ್ ಗಾಂಧಿ, ಗೆ ಟೆಲಿಗ್ರಾಮ್ ಕಳಿಸಿ, ಬಂದು ನೋಡಲು ಕರೆಕಳಿಸಿದರು. ಮಕ್ಕಳು ತಮ್ಮನ್ನು ಕಾಣಲು ಬರುವುದು ಬಾ ಗೆ ಒಂದು ಸಂಭ್ರಮದ ತರಹ. ಈ ಸಂವಾದ ಅವರಿಗೆ ಒಳ್ಳೆಯದಾಯಿತು. ಇದೇ ತರಹ ವಾರ-ವಾರವೂ ಸಂವಾದ ಏರ್ಪಟ್ಟರೆ ಅಷಧಿಗಳಿಗಿಂತ ಉತ್ತಮ ಪರಿಣಾಮವಾಗುವುದೆಂದು ನಾವು ಅಭಿಪ್ರಾಯಪಟ್ಟೆವು. ಸರ್ಕಾರ ನಮ್ಮ ಅಭಿಪ್ರಾಯವನ್ನು ಒಪ್ಪಿ, ವಾರಕ್ಕೊಮ್ಮೆ ಸಂವಾದವನ್ನು ಆಯೋಜಿಸುವುದಾಗಿ ಹೇಳಿದರು. ಮಕ್ಕಳಿಗೆ ಪ್ರತಿವಾರ ಬಿಡುವು ಸಿಕ್ಕುವುದು ಕಷ್ಟ. ಬೇರೆ ಸಂಬಂಧಿಕರಿಗೂ ಪರ್ಮಿಷನ್ ಸಿಗುತ್ತದೆ. ಸರಕಾರದ ಆದೇಶ ಸ್ಪಷ್ಟ ಪಡಿಸುವುದೇನೆಂದರೆ, ಜೈಲಿನ ಇತರೆ ಬಂದಿಗಳು ಆ ಸಮಯದಲ್ಲಿ ಇರಬಾರದು. ನರ್ಸ್ ಗಳಿಲ್ಲದೆ, ರೋಗಿ ಒಬ್ಬರೇ ಹೇಗೆ ಇರಲು ಸಾಧ್ಯ ? ಇದನ್ನು ಸಂಬಂಧಪಟ್ಟವರ ಬಳಿ ಚರ್ಚಿಸಿದಾಗ, ಒಬ್ಬ ನರ್ಸ್ ಜೊತೆಯಲ್ಲಿರಲು ಅವಕಾಶ ಸಿಕ್ಕಿತು.
ಕ್ರಮೇಣ ಕಸ್ತೂರ್ ಬಾ ಅವರ ಅರೋಗ್ಯ ಕೆಡುತ್ತಾ ಬಂತು. ಒಬ್ಬ ನರ್ಸ್ ನ್ನು ಸಂಭಾಳಿಸುವುದೇ ಬಹಳ ಕಷ್ಟವಾಗುತ್ತಿತ್ತು. ಗಾಂಧೀಜಿಯವರು ಮತ್ತೆ ಸರ್ಕಾರಕ್ಕೆ ಪತ್ರ ಬರೆದಮೇಲೆ, ಜೈಲಿನ Superintendent ರವರ ಅಧಿಕಾರದ ಮಿತಿಯನ್ನು ಹೆಚ್ಚಿಸಲಾಯಿತು. ಅವರಿಗೆ ಬೇಕಾದಷ್ಟು ನರ್ಸ್ಗಳನ್ನೂ ನಿಯುಕ್ತಿಮಾಡಲು, ಅವರೇ ಕೆಲವೊಂದು ನಿರ್ಧಾರಗಳನ್ನೂ ತೆಗೆದುಕೊಳ್ಳಬಹುದೆಂದು ತೀರ್ಮಾನವಾಯಿತು. ಕಸ್ತೂರ್ ಬಾ ರವರು ತಮಗೆ ಒಬ್ಬ ವೈದ್ಯರು ಹಾಗು ‘nature cure expert’, ಸಲಹಾಕಾರರಾಗಿ ಡಾ. ದಿನೇಶ್ ಶಾ ಮೆಹತಾರವರನ್ನು ಕರೆಸಿ, ಎಂದು ಮುಖ್ತಾ ಹೇಳಿದ ಮಾತುಗಳು, ಉಪಯೋಗಕ್ಕೆ ಬರಲಿಲ್ಲ. ಈ ವಿಷಯಕ್ಕೂ ಬಾಪು ಒಂದು ದೊಡ್ಡ ಪತ್ರವ್ಯವಹಾರವನ್ನೇ, ಮಾಡಬೇಕಾಗಿ ಬಂತು.
Page 62
ಕೊನೆಗೆ ೫ ಫೆಬ್ರವರಿಗೆ, ಡಾ. ದಿನೇಶ್ ಮೆಹ್ತಾ ಗೆ ಬರಲು ಅನುಮತಿ ದೊರೆಯಿತು. ಅವರು ವಿಸಿಟ್ ಮಾಡಲು ಬಂದಾಗ ಬಾ ಹತ್ತಿರ ಡಾಕ್ಟರ್ ಗಳಲ್ಲದೆ ಯಾರೂ ಇರಬಾರದೆಂದು ಆಜ್ಞೆಯಾಗಿತ್ತು. ಸ್ನಾನಮಾಡಲು ಹೊರಟ ಬಾಪುಗೆ, ಈ ಆದೇಶ ಬಂದಾಗ ಓದಿ ಬೇಸರವಾಯಿತು. ಅವರು ಮಸಾಜ್ ಮಾಡಿಸಿಕೊಳ್ಳುವಾಗ ಸ್ನಾನ ಮಾಡುವ ಸಮಯದಲ್ಲಿ ನಿದ್ದೆಯ ಮಂಪರಿನಲ್ಲಿರುತ್ತಿದ್ದರು. ಆದರೆ ಅವತ್ತು ಅವರಿಗೆ ಸುಧಾರಿಸಿಕೊಳ್ಳಲೂ ಆಗಲಿಲ್ಲ. ಸೆಕ್ರೆಟರಿ ಪ್ಯಾರೇಲಾಲ್ ಗೆ ಹೇಳಿಕಳಿಸಿ ಇನ್ನೂ ಸ್ನಾನಮಾಡುತ್ತಿರುವಾಗಲೇ ಸರ್ಕಾರಕ್ಕೆ ಒಂದು ಕಾಗದ ಬರೆಯಲು ಹೇಳುತ್ತಿದ್ದರು. ಆಗ ಅವರ ಧ್ವನಿ ಕಂಪಿಸು ತ್ತಿತ್ತು. ಕೈಗಳು ನಡುಗುತ್ತಿದ್ದವು. ಸರ್ಕಾರದ ಮೇಲೆ ವಿಪರೀತ ಕೋಪ ಬಂದಿತ್ತು. ಒಬ್ಬ ಸಾಯುವ ಸ್ಥಿತಿಯಲ್ಲಿ ಜೀವನ ಮರಣಕ್ಕೆ ಹೋರಾಡುತ್ತಿರುವ ಮಹಿಳೆಗೆ ಈ ತರಹದ ನಿರ್ಬಂಧ ವಿಧಿಸುವುದು ಯಾವ ನ್ಯಾಯ ? ಡಾ ದಿನೇಶ್ ಮೆಹ್ತಾ ಇರುವಾಗ, ಬಾರವರಿಗೆ ‘bedpan’ ಬೇಕಾದರೆ, ನರ್ಸ್ ಗಳೂ ಹತ್ತಿರವಿಲ್ಲದಿರುವಾಗ ಯಾರುಕೊಡಬೇಕು ? ನನಗೇನಾದರೂ nature cure doctor ಡಾಕ್ಟರ್ ಬೇಕಾದರೆ, ಹೇಗೆ ಇದ್ದಾರೆ ? ಎಂದು ವಿಚಾರಿಸಲು ಬೇರೆಯವರ ಅನುಮತಿ ಪಡೆಯಬೇಕೆ ? ಇದು ವಿಚಿತ್ರವಾಗಿದೆ. ಇಲ್ಲಿಂದ ಸರ್ಕಾರ ಬೇರೆ ಜೈಲಿಗೆ ಕಳಿಸಿದರೂ ಅಡ್ಡಿಯಿಲ್ಲ. ಸರ್ಕಾರದ ಕಾರ್ಯವೈಖರಿ ನನಗೆ ಸರಿಬೀಳುತ್ತಿಲ್ಲವೆಂದು ಗಾಂಧೀಜಿ ಬೇಸರದಿಂದ ಗುಡುಗಿದರು.
ಪ್ರತಿಸಾರಿಯೂ ನನಗೆ ಚುಚ್ಚು ಮಾತಾಡಿ/ಬರೆದು ನೋಯಿಸುವುದಕ್ಕಿಂತ. ನಾನು ನನ್ನ ಪತ್ನಿಯಿಂದ ದೂರವಿದ್ದರೆ, ಆಕೆಗೆ ನನ್ನಿಂದ ಯಾವ ಸಹಾಯವನ್ನೂ ಅಪೇಕ್ಷಿಸಲಾಗುವುದಿಲ್ಲವಲ್ಲಾ ? ಆಕೆಯ ನೋವಿನಲ್ಲಿ ನಾನು ಭಾಗಿಯಾಗದೆ ಆಕೆಯ ಕ್ಷೋಭೆಯನ್ನು ನನಗೆ ಕಣ್ಣಿನಿಂದ ನೋಡಿ ಏನನ್ನಿಸುವುದಿಲ್ಲ ? ಈ ಪತ್ರವನ್ನು ಕಂಡು ಅಧಿಕಾರಿಗಳು ತತ್ತರಿಸಿದರು. ಅವರು ಮದ್ಯಾನ್ಹ ಮತ್ತೊಂದು ಮೌಖಿಕ ಆರ್ಡರ್ ಹೊರಡಿಸಿ, ಸರ್ಕಾರದ ಆದೇಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಎಂದು ತಿಳಿಸಿದರು.
ಸರ್ಕಾರ ತಮ್ಮ ಆದೇಶವನ್ನು ಸ್ಪಷ್ಟಿಕರಿಸುತ್ತಾ ನರ್ಸ್ ರೋಗಿಯ ಜತೆ ಇರುವಾಗ ಅವರ ಪತಿಯವರೂ ಇದ್ದು, ಯಾವಾಗ ಬೇಕಾದರೂ ಡಾ ಹತ್ತಿರ ವಿಚಾರಿಸಬಹುದೆಂದು ಕೊನೆಗೆ ಸರ್ಕಾರ ಒಪ್ಪಿಗೆ ಕೊಟ್ಟಿತು. ಇದರ ಬಗ್ಗೆ ಇನ್ನುಮೇಲೆ ಪದೇ ಪದೇ ಪತ್ರ ಬರೆಯುವುದು ಬೇಡವೆಂದು ತಿಳಿಸಿದರು.
ದಿನಕ್ಕೆ ಒಮ್ಮೆ ಬಾರವರನ್ನು ನೋಡಲು ಡಾ. ದಿನೇಶ್ ರಿಗೆ ಅನುಮತಿ ಸಿಕ್ಕಿದೆ. ಅವರಿಗೆ ೨ ಬಾರಿಯಾದರೂ ಬಂದು ನೋಡಿದರೆ ಒಳ್ಳೆಯದೆಂದು ಬಾರವರ ಅಭಿಮತ. ಇದಕ್ಕೂ ಗಾಂಧೀಜಿಯವರಿಗೆ ಪತ್ರಮುಖೇನ ತಿಳಿಸಬೇಕಾಗಿ ಬಂತು. ಡಿಸೆಂಬರ್ ತಿಂಗಳಲ್ಲಿ ಬಾ, ಒಬ್ಬ ದೇಸೀ ವೈದ್ಯರು ಬೇಕೆಂದು ಹೇಳುತ್ತಿದ್ದರು. ಕರ್ನಲ್, ಭಂಡಾರಿ, Superintendent ಮತ್ತು ಕರ್ನಲ್ ಶಾರಿಗೆ ಅವರನ್ನು ವಿಸಿಟ್ ಮಾಡಲು ಬಂದಾಗಲೆಲ್ಲಾ ಪ್ರತಿಬಾರಿಯೂ ಬೇಡಿಕೆ ಸಲ್ಲಿಸುತ್ತಿದ್ದರು. ಫೆಬ್ರವರಿ ಮೊದಲ ವಾರದಲ್ಲಿ ಕಸ್ತೂರ್ ಬಾ ಬಹಳ ಸವೆದಿದ್ದರು. ಎಲ್ಲಾರಿಗೂ ಕಳವಳವಾಗುತ್ತಿತ್ತು. ಬಾಪು ತಮ್ಮ ಪತ್ನಿ ಹೇಳಿದಂತೆ ಒಬ್ಬ ವೈದ್ಯರ ಏರ್ಪಾಡು ಬೇಗ ಮಾಡುವುದು ಒಳ್ಳೆಯದೆಂದು ಪ್ರತಿಪಾದಿಸಿದರು. ಆದರೆ, Superintendent ನಾಟಿ ವೈದ್ಯರನ್ನು ಏರ್ಪಾಡುಮಾಡುವುದು ತಮ್ಮ ವ್ಯಾಪ್ತಿಯಲ್ಲಿಲ್ಲವೆಂದು ಸ್ಪಷ್ಟಿಕರಿಸಿದರು. ಬಾಂಬೆ ಸರ್ಕಾರಕ್ಕೆ ಫೋನ್ ಮಾಡಿ ವಿಚಾರಿಸುವುದಾಗಿ ಉತ್ತರಕೊಟ್ಟರು. ಬಾಂಬೆ ಸರಕಾರ ತಕ್ಷಣವೇ ಉತ್ತರಿಸಿ, ಅವರಿಗೆ ಇದರಬಗ್ಗೆ ಏನೂ ಗೊತ್ತಿಲ್ಲ. ಬೇಕಾದರೆ ಕೇಂದ್ರಸರ್ಕಾರಕ್ಕೆ ಫೋನಾಯಿಸಿ ಉತ್ತರ ಬಂದಮೇಲೆ ತಿಳಿಸುತ್ತೇವೆ, ಎಂದು ಹೇಳಿದರು. ದಿನಗಳು ಉರುಳಿದವು. ಬಾರವರು ತಮ್ಮ ಮರಣಶಯ್ಯಲ್ಲಿ ನರಳುತ್ತಿರುವಾಗ, ಇವೆಲ್ಲ ಬೆಳವಣಿಗೆಗಳು ಆಗುತ್ತಲೇ ಇದ್ದವು. ಸರ್ಕಾರಕ್ಕೆ ಗಾಂಧೀಜಿಯವರು ಒಂದು ಗಡುಸಾದ ಪತ್ರವನ್ನು ಬರೆಯಲೇ ಬೇಕಾಯಿತು.
Page 63
ಬರೆದ ಕಾಗದವನ್ನು ಅಂಚೆ ಡಬ್ಬಕ್ಕೆ ಹಾಕುವ ಮೊದಲೇ ೧೧, ಫೆಬ್ರವರಿಯಂದು ಕೇಂದ್ರಸರ್ಕಾರ ಒಂದು ಆದೇಶವನ್ನು ಹೊರಡಿಸಿ, ಸಲಹಾಕಾರರು, ಡಾಕ್ಟರ್ ಗಳನ್ನು ಕರೆಸಲು ಏರ್ಪಾಡುಮಾಡುವುದು ಜೈಲಿನ ವೈದ್ಯರುಗಳಿಗೆ ಸಂಬಂಧಿಸಿದ್ದು. ಹಕೀಮ್ ಗಳು, Nature cure experts ಜೈಲಿನ ಅಧಿಕಾರಿಗಳು, ಹಾಗೂ ಡಾ ಕರ್ನಲ್ ಶಾರವರ ವ್ಯಾಪ್ತಿಗೆ ಬಿಟ್ಟಿದ್ದು. ಎಂದುಹೇಳಿದರು. ಈಗ ಗಾಂಧೀಜಿಯವರು ಲೋಕಲ್ ವೈದ್ಯರು ಯಾರಾದರೂ ಗೊತ್ತಿದ್ದರೆ ಬೇಗ ಹೇಳಿಕಳಿಸಿ, ಎಂದು ಬೇಡಿದರು. ಸಾಯಂಕಾಲದ ಹೊತ್ತಿಗೆ ‘ಜೋಶಿ’ ಎಂಬ ವೈದ್ಯರು ಬಂದರು. ಕೆಲವು ಮಾತ್ರೆಗಳನ್ನು ಕೊಟ್ಟು, ತಾವು ಚಿಕಿತ್ಸೆ ನಡೆಸುತ್ತಿರುವಾಗ ಬೇರೆಯಾರ ಹತ್ತಿರವೂ ರೋಗಿಗೆ ಔಷಧಿ ಕೊಡಿಸಬಾರದೆಂದು ಸ್ಪಷ್ಟಪಡಿಸಿದರು.
ಇದಾದ ಮುಂದಿನ ದಿನ ಲಾಹೋರ್ ನಿಂದ ‘ವೈದ್ಯರಾಜ್ ಶಿವಶರ್ಮ’ ಉಪಚರಿಸಲು ಬಂದರು. ಈಗ ಬಾ ಅವರ ಸುಪರ್ದಿನಲ್ಲಿ ವೈದ್ಯಕೀಯ ಚಿಕಿತ್ಸೆ ಕೈಗೊಳ್ಳುವುದೆಂದು ತೀರ್ಮಾನವಾಯಿತು. ಮಧ್ಯರಾತ್ರಿಯಲ್ಲಿ ಬಾ ಚಡಪಡಿಸುತ್ತಿದ್ದರು. ಡಾ. ಗಿಲ್ಡರ್ ಮತ್ತು ನಾನು ದಿಕ್ಕುಕಾಣದಾದೆವು. ವೈದ್ಯ ಶಿವಶರ್ಮ ಬಾರವರನ್ನು ನೋಡಿಕೊಳ್ಳುತ್ತಿರುವಾಗ, ಬೇರೆಯವರ ಔಷಧಿಯನ್ನು ಕೊಡಲು ನಮಗೂ ಸಾಧ್ಯವಾಗಲಿಲ್ಲ. Superintendent ಗೆ ತಿಳಿಸಿ, ಕೂಡಲೇ ವೈದ್ಯರಿಗೆ ಬರಹೇಳಲು ಫೋನ್ ಮಾಡಿ ವಿನಂತಿಸಿಕೊಳ್ಳಲು ಪ್ರಾರ್ಥಿಸಿದೆವು. ವೈದ್ಯ ಶಿವಶರ್ಮರು ರಾತ್ರಿ ಬಾರವರ ರೂಮಿಗೆ ಬಂದು ತಪಾಸುಮಾಡಲು ಅನುಮತಿ ಇರಲಿಲ್ಲ. ಆವರು ಟೆಲಿಫೋನ್ ಬಳಸಿ, ಬಾ ರವರ ತಲೆಗೆ ಮಸಾಜ್ ಮೊದಲಾದವುಗಳನ್ನು ಮಾಡುವಂತೆ ಆದೇಶಮಾಡಿದರು. ಇದುವರೆವಿಗೆ ನಾವು ಪ್ರಯತ್ನಿಸಿದ ಉಪಚಾರಗಳು ಫಲಿಸಲಿಲ್ಲ. ಬಾ ರಾತ್ರಿಯೆಲ್ಲಾ ನಿದ್ರೆಬರದೆ ಒದ್ದಾಡಿದರು. ಒಂದು ದಿನದ ನಂತರ, ಬಾ ಆಯುರ್ವೇದ ಪದ್ಧತಿಯ ಔಷಧೋಪಚಾರ ನಿಲ್ಲಿಸಿ, ವೈದ್ಯರ ಔಷಧ ಇನ್ನು ಬೇಡವೆಂದು ತಿಳಿಸಲು ಡಾ. ಗಿಲ್ಡರ್ ಗೆ ಮನವಿಮಾಡಿದರು. ಏನೂ ತೋಚದೆ, ಆತಂಕದಲ್ಲಿದ್ದ ನಾವುಗಳು ಬಾ ಗೆ ಹೊಸಪದ್ಧತಿ ವೈದ್ಯ ಪದ್ಧತಿಗೆ ಗಮನಹರಿಸಲು ಬೇಡಿದೆವು. ವೈದ್ಯರಾಜ್, ಬಾರವರಿಗೆ ಫೋನ್ ನಲ್ಲಿ ತಿಳಿಸುತ್ತಾ, ತಾವು ಕೊಟ್ಟ ಮೆಡಿಸಿನ್ ಗಳನ್ನೂ ಮುಂದುವರೆಸಿ, ಎಂದು ಹೇಳಿದರು. ಬಾ ಅವರ ಮಾತನ್ನೂ ಒಪ್ಪಿದರು.
ಆಶ್ಚರ್ಯವೆಂದರೆ, ಇದಾದ ಮಾರನೆಯ ದಿನ ಬಾರವರ ದೇಹ ಪರಿಸ್ಥಿತಿ ಸ್ವಲ್ಪ ಉತ್ತಮಗೊಂಡಂತೆ ಅನ್ನಿಸಿತು. ಅವತ್ತಿನ ಸಾಯಂಕಾಲವೇ ಅವರು ತಮ್ಮ Wheel chair ನಲ್ಲಿ ಕುಳಿತು ವರಾಂಡದಲ್ಲಿ, ಮತ್ತೆ ಮೀರಾಬೆನ್ ಕುಟೀರದಲ್ಲಿದ್ದ ಬಾಲಕೃಷ್ಣ ಮಂದಿರಕ್ಕೂ ಹೋಗಿ ನಮಸ್ಕಾರ ಮಾಡಿ ಬಂದರು. ಗಾಂಧೀಜಿಯವರು ಕೆಳಗೆ ಉದ್ಯಾನದಲ್ಲಿ ವಾಕ್ ಮಾಡಲು ಹೋದರು. ವ್ಹಿಲ್ ಛೇರ್ ಮೇಲೆ ಕುಳಿತು ಬಾ ಹೋಗುತ್ತಿರುವುದನ್ನು ಕಂಡ ಬಾಪು ವಿಸ್ಮಯದಿಂದ ಅವರನ್ನು ಮಾತಾಡಿಸಲು ಬಂದರು. ಬಾಲಕೃಷ್ಣ ಮೂರ್ತಿಯ ಮುಂದೆ ಬಾ ಕುಳಿತು ಭಕ್ತಿ ಶ್ರದ್ಧೆಗಳಿಂದ ಕಣ್ಣು ಮುಚ್ಚಿ ಪ್ರಾರ್ಥಿಸುತ್ತಿದ್ದರು. ಕಣ್ಣು ಬಿಟ್ಟಾಗ, ತಮ್ಮ ಮುಂದೆ ಪತಿದೇವರ ದರ್ಶನ ! ‘ನೀವ್ಯಾಕ್ ಇಲ್ಲಿಗ್ಬರಕ್ ಹೋದ್ರಿ ? ಎಂದು ಹುಸಿಕೋಪದಿಂದ ಬಾ, ಬಾಪುರವರನ್ನು ದಂಡಿಸಿದರು. ಹೋಗಿ, ಹೋಗಿ; ನಿಮ್ಕೆಲ್ಸ್ ಗಳ್ನ ಮಾಡ್ಕೊಳ್ಳಿ’ ಎಂದರು. ಗಾಂಧೀಜಿಯವರಿಗೂ ನಗು ಬಂತು. ಅವರು ತಮ್ಮ ಸಂತೋಷವನ್ನು ತೋರ್ಗೊಡದೆ, ನೆಮ್ಮದಿಯಿಂದ ಗಾರ್ಡನ್ ಕಡೆ ಹೆಜ್ಜೆ ಹಾಕಿದರು. ಆಶ್ರಮವಾಸಿಗಳೆಲ್ಲ ಸಂತಸ, ಮತ್ತು ಒಂದು ಬಗೆಯ ನೆಮ್ಮದಿ ಅನುಭವಿಸಿದರು. ಭರವಸೆಯ ವಾತಾವರಣ ಸೃಷ್ಟಿಯಾಗಿರುವಂತೆ ತೋರುತ್ತಿತ್ತು ! ಒಂದೇ ಒಂದು ದಿನ ಆಯುರ್ವೇದಿಕ್ ಮೆಡಿಸಿನ್ ತೆಗೆದುಕೊಂಡ ಮೇಲೆ, ಇಷ್ಟೊಂದು ಒಳ್ಳೆಯದಾದರೆ, ಇನ್ನು ಕೆಲವೇ ದಿನಗಳಲ್ಲಿ ಚೆನ್ನಾಗಿ (ಅದ್ಭುತ) ಚೇತರಿಸಿಕೊಳ್ಳುವ ಸಾಧ್ಯತೆಗಳನ್ನು ನಾವೆಲ್ಲಾ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತಾ ಮುದಗೊಂಡೆವು.
Page 64
ಈ ಸಂಭ್ರಮ ಬಹಳ ಸಮಯ ಇರಲಿಲ್ಲ. ಬಾರವರಿಗೆ ಮಧ್ಯ ರಾತ್ರಿ, ಕಸಿವಿಸಿ ಕಡಿಮೆಯಾಗಲಿಲ್ಲ. Superintendent ಗೆ ಹೇಳಿದಮೇಲೆ ವೈದ್ಯರಾಜರಿಗೆ ಫೋನ್ ಮಾಡಿದರು. ವೈದ್ಯರಾಜರಿಗೆ ಬಂದು ಬಾರನ್ನು ಪರೀಕ್ಷಿಸಲು ಅನುಮತಿ ಸಿಕ್ಕಿತು. ಬಂದವರು, ಯಾವುದೊ ಒಂದು ಮಾತ್ರೆಕೊಟ್ಟರು. ಬಾ ಸ್ವಲ್ಪಹೊತ್ತಿನಲ್ಲಿ ನಿದ್ರೆಹೋದರು. ವಿಷಮ ಸ್ಥಿತಿಯನ್ನು ತಲುಪಿದ ಬಾರವರಿಗೆ ಯಾರೇ ಡಾಕ್ಟರಾಗಲೀ ದಿನ-ರಾತ್ರಿ ಇರಬೇಕು. ಸರ್ಕಾರ ವೈದ್ಯರನ್ನು ‘ಆಗಾಖಾನ್ ಪ್ಯಾಲೇಸ್ ಬಂದಿ ಗೃಹ’ದಲ್ಲಿ ರಾತ್ರಿ ಸಮಯದಲ್ಲಿ ಇರಲು ಒಪ್ಪಲಿಲ್ಲ. ಡಾಕ್ಟರ್ ಪ್ಯಾಲೇಸ್ ಹೊರಗಿನ ರಸ್ತೆಯಲ್ಲಿ ನಿಲ್ಲಿಸಿದ ತಮ್ಮ ಕಾರ್ ನಲ್ಲಿ ಮಲಗಿಕೊಳ್ಳಲು ಒಪ್ಪಿದರು. ರಾತ್ರಿ ಸಮಯದಲ್ಲಿ ಏನಾದರು ವಿಪತ್ತು ಬಂದಾಗ, ತಕ್ಷಣ ಮೆಟ್ಟಿಲು ಹತ್ತಿ ರೋಗಿಯನ್ನು ತಲುಪಬಹುದು. ನಮಗೆ ಅವರ ಮೇಲೆ ಗೌರವ ಉಕ್ಕಿಬಂತು. ಹೇಳಿದಂತೆ ವೈದ್ಯರು ೩ ದಿನಗಳು ಪ್ಯಾಲೇಸ್ ಮೆಟ್ಟಿಲಿಂದ ಹತ್ತಿರದಲ್ಲಿ ಪಾರ್ಕ್ ಮಾಡಿದ ತಮ್ಮ ಕಾರಿನಲ್ಲೇ ರಾತ್ರಿ ಮಲಗುತ್ತಿದ್ದರು. ಹೇಳಿದಷ್ಟು ಈ ವ್ಯವಸ್ಥೆ ಸುಲಭವಾಗಿರಲಿಲ್ಲ. ಮೊದಲು Duty ಮೇಲಿದ್ದ ಸಿಪಾಯಿಯನ್ನು ನಿದ್ದೆಯಿಂದ ಎಬ್ಬಿಸಿ, ಅವನಿಗೆ ಜಮಾದಾರನಿಗೆ ವಿಷಯ ತಿಳಿಸಿ, ಅವನು ಹೋಗಿ Superintendent ರನ್ನು ಎಬ್ಬಿಸಿ, ಅವರ ಹತ್ತಿರದಿಂದ ಬೀಗದ ಕೈಗಳನ್ನು ಪಡೆದು ಗೇಟ್ ತೆಗೆದು ಹೊರಗೆ ಕಾರಿನಲ್ಲಿ ಮಲಗಿರುವ ವೈದ್ಯರನ್ನು ಕಂಡು ಅವರನ್ನು ಕರೆದುಕೊಂಡು ಬರುವುದು ಎಷ್ಟು ತ್ರಾಸಿನ ಕೆಲಸ ! ? Superintendent ರೋಗಿಯ ಹತ್ತಿರ ಕರೆದುಕೊಂಡು ಬಂದು ಅವರಿರುವ ಹೊತ್ತೂ ಅಲ್ಲೇ ಇದ್ದು ನಂತರ ಅವರನ್ನು ಕರೆದುಕೊಂಡು ಹೋಗಿ ಕಾರಿನ ಹತ್ತಿರ ಬಿಟ್ಟು, ತಾವು ಮಲಗಲು ಹೋಗಬೇಕು. ಇವೆಲ್ಲವನ್ನೂ ಗಮನಿಸುತ್ತಿದ್ದ ಬಾಪುರಿಗೆ ತಲೆಬಿಸಿಯಾಯಿತು.
೧೬ ಫೆಬ್ರವರಿ ವೈದ್ಯರಾಜರ ಮೂರನೆಯ ದಿನ, ಪ್ಯಾಲೇಸ್ ನ ಹೊರಗೆ ರಸ್ತೆಯಲ್ಲಿ ಪಾರ್ಕ್ ಮಾಡಿದ ಕಾರಿನಲ್ಲಿ ಮಲಗಿದ್ದು ನಂತರ ಕರೆದಾಗ, ಮೆಟ್ಟಲು ಹತ್ತಿ ಮೇಲಕ್ಕೆ ಬಂದು ಕೊಡುವ ‘ಟ್ರೀಟ್ಮೆಂಟ್’ ಆಗಿತ್ತು. ಡಾಕ್ಟರ್ ಗೆ ೧೨-೩೦ ಕ್ಕೆ ಹೇಳಿಕಳಿಸಿದರು. ಅವರು ವಾಪಸ್ ೧-೩೦ ಹೋದರು. ಗಾಂಧೀಜಿ ಎದ್ದೇ ಇದ್ದರು. ೨ ಗಂಟೆಗೆ ಹಾಸಿಗೆಯಿಂದ ಮೇಲೆದ್ದು ಸಂಬಂಧಪಟ್ಟವರಿಗೆ ವೈದ್ಯರಾಜರಿಗೆ ಪ್ಯಾಲೇಸ್ ಬಂದಿಗೃಹದಲ್ಲಿ ಮಲಗಲು ಹೇಳಿ ಸರಕಾರಕ್ಕೆ ಪತ್ರ ಬರೆದರು. ಪ್ರತಿದಿನವೂ ಇದೇ ತರಹದ ವ್ಯವಸ್ಥೆ ಇರುವಾಗ, ಎಲ್ಲರನ್ನು ನಿದ್ದೆಗೆಡಿಸಲು ಅವರು ಇಷ್ಟಪಡಲಿಲ್ಲ. ನಾಳೆ ಕೊಡದಿದ್ದರೆ, ವೈದ್ಯರ ಟ್ರೀಟ್ಮೆಂಟ್ ನ್ನು ಬಂದ್ ಮಾಡುವುದಾಗಿ ಹೇಳಿಬಿಟ್ಟರು. ಟ್ರೀಟ್ಮೆಂಟ್ ಸಹ ನಿಲ್ಲಿಸಲಾಗಿತ್ತು. ರೋಗಿಗೆ ಯಾವ ವಿಧವಾದ ಟ್ರೀಟ್ಮೆಂಟ್ ಇಲ್ಲದಂತಾಯಿತು.
೧೮ ಫೆಬ್ರವರಿ ಬಾರವರ ಚಡಪಡಿಕೆ ಮತ್ತೆ ಶುರುವಾಯಿತು. ವೈದ್ಯರಾಜ್ ದಿನವೆಲ್ಲಾ ಹೊರಗೆ ಹೋಗಿ ನಗರದಲ್ಲಿ ಸುತ್ತಿ ಅವರಿಗೆ ಬೇಕಾದ ಔಷಧಿಗಳನ್ನು ಅಂಗಡಿಗಳಲ್ಲಿ ಹುಡುಕಿ ತರುತ್ತಿದ್ದರು. ಬಂದಮೇಲೆ ಯಾವುದೊ ಔಷಧಗಳನ್ನು ಕೊಟ್ಟರು. ಆದರೆ ಉಪಯೋಗವಾಗಲಿಲ್ಲ. ರಾತ್ರಿಯೆಲ್ಲಾ ನಿದ್ರೆಯಿಲ್ಲ, ಸ್ವಲ್ಪ ಜ್ವರವೂ ಬಂದಿತ್ತು. ಮಾತ್ರೆಗಳನ್ನು ಕೊಟ್ಟಮೇಲೆ ಭೇದಿಯಾಯಿತು. ಆದರೆ ಜಲಬಾದಿಯಾಗಲಿಲ್ಲ. ಕಿಡ್ನಿಗಳು ಸರಿಯಾಗಿ ಕೆಲಸಮಾಡುತ್ತಿರಲಿಲ್ಲ. ೧೯ ನೆಯ ತಾರೀಖು ಬೆಳಗಿನ ಪ್ರೇಯರ್ ನಂತರ ವೈದ್ಯರಾಜ್, ‘ನಾನು ಮಾಡೋದೆಲ್ಲ ಮಾಡಿದ್ದಾಯಿತು’. ‘ನೀವು ಬೇಕಾದರೆ, ಯಾರಾದರೂ ನಿಮಗೆ ಗೊತ್ತಿರುವ ಡಾಕ್ಟರನ್ನು ಕಂಡು ಪ್ರಯತ್ನಿಸಿ’, ಎಂದು ಹೇಳಿಯೇಬಿಟ್ಟರು.
ಸರ್ಕಾರಕ್ಕೆ ಪತ್ರ ಬರೆದದ್ದು ಸ್ವಲ್ಪ ಸಹಾಯವಾಯಿತು. ಅನುಮತಿ ದೊರೆಯಿತು. ಮಾರನೆಯ ದಿನದ ರಾತ್ರಿಯೇ ವೈದ್ಯರಾಜ್ ಆಗಾಖಾನ್ ಪ್ಯಾಲೇಸ್ ನ ಮೆಟ್ಟಿಲುಗಳನ್ನು ಹತ್ತಿ ಮೇಲೆ ಬಂದು, ಬಾ ರವರ ರೂಮಿನ ವರಾಂಡದಲ್ಲಿ ಮಲಗಿದರು. ರಾತ್ರಿ ಅವರನ್ನು ೨-೩ ಸಲ ಪರೀಕ್ಷಿಸಿದರು ; ನಿದ್ದೆ ಮಾತ್ರೆ ಕೊಟ್ಟಿದ್ದರಿಂದ ಬಾರವರು ರಾತ್ರಿಯೆಲ್ಲಾ ನೆಮ್ಮದಿಯಾಗಿ ನಿದ್ರಿಸಿದರು.
Page 65
ಗಾಂಧೀಜಿಯವರು ಹಿಂದಿನ ದಿನವೇ ಹೇಳಿದ್ದರು. ಬಾ ರವರ ದೇಹಸ್ಥಿತಿಯಲ್ಲಿ ಯಾವ ಸುಧಾರಣೆಯೂ ನಾಳೆಯ ಒಳಗೆ ಆಗದಿದ್ದರೆ, ಬಹುಶಃ ವೈದ್ಯರನ್ನು ವಾಪಸ್ ಕಳಿಸಬೇಕಾಗಬಹುದೆಂದು. ‘ಸುಶೀಲ, ನೀನೇ ಬಾಗೆ ಟ್ರೀಟ್ಮೆಂಟ್ ಶುರುಮಾಡಿದರೆ, ನನಗೆ ಅವರ ಪರಿಸ್ಥಿತಿ ಸರಿಯಾಗಿ ತಿಳಿಯುತ್ತದೆ. ದಯಮಾಡಿ ಎಲ್ಲ ಮಿಡಿಸಿನ್ ಗಳನ್ನೂ ನಿಲ್ಲಿಸು. ದೇವರ ದಯ ಆಕೆಯ ಮೇಲೆ ಹೇಗಿದೆಯೋ ನೋಡೋಣ. ರಾಮನಾಮ ಆರಂಭಿಸೋಣ. ನೀನು ಮತ್ತು ಡಾ ಗಿಲ್ಡರ್ ಇಬ್ಬರೂ ನಾನು ಹೇಳಿದ ಮಾತನ್ನು ಮನಃ ಪೂರ್ವಕವಾಗಿ ಅರ್ಥಮಾಡಿಕೊಂಡರೆ ಮಾತ್ರ ಸಾಧ್ಯ’. ಎಂದು ಬಾಪು ನುಡಿದರು.
ಹರಿಲಾಲ್ ಗಾಂಧಿ, ಬಾರವರ ಹಿರಿಯಮಗ. ೧೭ ನೇ ತಾರೀಖಿನ ಮದ್ಯಾನ್ಹ ತಾಯಿಯವರನ್ನು ಕಾಣಲು ಬಂದನು. ಬಾ ಅವನ ಮುಖವನ್ನು ಕಂಡು ಹರ್ಷಿತರಾದರು. ಅವನಿಗೆ ಕೇವಲ ಒಮ್ಮೆ ಮಾತ್ರ ಕಾಣಲು ಅವಕಾಶಸಿಕ್ಕ ವಿಷಯ ಅವರಿಗೆ ಬೇಸರ ತಂದಿತು. ‘ಇಬ್ಬರು ಅಣ್ಣ ತಮ್ಮಂದಿರ ಮದ್ಯೆ ಈ ತಾರತಮ್ಯವೇಕೆ ‘? ‘ದೇವದಾಸನನ್ನು ದಿನವೂ ಬಿಡುತ್ತಿದ್ದಾರೆ, ಆದರೆ ಅವರ ಅಣ್ಣನಿಗೆ ಒಮ್ಮೆ ಮಾತ್ರ’. ‘ಕರ್ನಲ್ ಭಂಡಾರಿಯವರು (Inspector-General of Prisons) ಬರಲಿ. ಅವರನ್ನು ಇವತ್ತು ಕೇಳೇ ಬಿಡ್ತೀನಿ. ಬಡಪಾಯಿ ಅಣ್ಣನಿಗೆ ಈ ತಾರತಮ್ಯವೇಕೆ.’ ಬಾಪು ಪತ್ನಿಗೆ ಒಪ್ಪಿಸಲು ಪ್ರಯತ್ನಿಸಿದರೂ. ಪರವಾಗಿಲ್ಲ ಬಿಡು. ನಾನೆ ಅವರಿಗೆ ಬೇಡಿಕೆ ಕೊಡ್ತೀನಿ. ಪರ್ಮಿಷನ್ ಏನೋ ಸಿಕ್ಕಿದರೂ ಹರಿಲಾಲ್ ಅವರ ಪತ್ತೆಯಿರಲಿಲ್ಲ. ದಿನವೂ ಹರಿಲಾಲ್ ಯಾಕೆ ಬರಲಿಲ್ಲ ? ಅಂತ ಬಾ ಸತತವಾಗಿ ಕೇಳ್ತಾನೇ ಇದ್ರು. ೧೯ ರಂದು ಮತ್ತೆ ಬಾ ಅತಿಹೆಚ್ಚು ಅಸ್ವಸ್ಥರಾದರು. ಸರ್ಕಾರ ಈಗಾಗಲೇ ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿಗೆ ಟೆಲಿಫೋನ್ ಮೂಲಕ ತಿಳಿಸಿದ್ದಾರೆ. ಮತ್ತು ಹರಿಲಾಲ್ ಗಾಂಧಿಯವರನ್ನು ಹುಡುಕುತ್ತಿದ್ದಾರೆ, ಎಂದು ಹೇಳಿದ್ದಾಯಿತು.
35
೧೯ ನೆಯ ತಾರೀಖು, ಬಾ ರವರಿಗೆ ರಾತ್ರಿಯೆಲ್ಲಾ ‘ಆಕ್ಸಿಜನ್ ಪೈಪ್’ ಹಾಕಿರಬೇಕಿತ್ತು. ನಿದ್ರೆಯೇನೋ ಮಾಡಿದರು. ಆದರೆ ಮರನೆಯ ದಿನದ ಬೆಳಗಿನ ಜಾವ ೫ ಕ್ಕೆ ಬಹಳ ತಳಮಳ ಶುರುವಾಯಿತು. ಪ್ರತಿ ನಿಮಿಷವೂ ‘ರಾಮ್ ‘, ‘ಹೇ ರಾಮ್ ‘ ಎಂದು ದೇವರ ನಾಮ ಹೇಳುತ್ತಾ ರೋದಿಸಲು ಪ್ರಾರಂಭಿಸಿದರು. ಆ ಹೊತ್ತಿಗೆ ಬಾಪೂಜಿ ಬಂದು ಅವರ ತಲೆಯ ಬಳಿ ಕುಳಿತರು. ಬಾ ಅವರ ಭುಜಕ್ಕೆ ಒರಗಲು ಪ್ರಯತ್ನಿಸಿದರು. ಸ್ವಲ್ಪ ಸಮಯ ಸುಮ್ಮನಿದ್ದರು. ಪಕ್ಕದ ರೂಮಿನಿಂದ ಬೆಳಗಿನ ಪ್ರಾರ್ಥನೆ ಕೇಳಿಸುತ್ತಿತ್ತು. ಗಾಂಧಿಯವರು ಪ್ರಾರ್ಥನಾ ಶ್ಲೋಕಗಳನ್ನು ಮನಸ್ಸಿನಲ್ಲಿಯೇ ಗುನುಗುಟ್ಟುತ್ತಿದ್ದರು. ಇದಾದಮೇಲೆ ಸರದಿಯ ಪ್ರಕಾರ ನಾವೆಲ್ಲ ಅವರ ಹತ್ತಿರವೇ ಕುಳಿತು ‘ರಾಂಧುನ್ ಭಜನೆ’ ಮಾಡುತ್ತಿದ್ದೆವು. ಗ್ರಾಮಫೋನ್ ರೆಕಾರ್ಡ್ ಹಾಕಿ, ಬಾರವರಿಗೆ ಪ್ರಿಯವಾದ ಹಾಡು ‘ಶ್ರೀರಾಮ್ ಭಜೋ, ದುಃಖಮೇ, ಸುಖಮೇ’ ಎಂಬ ಗೀತೆಯನ್ನು ಹಚ್ಚಿದೆವು. (Call on the name of God in sorrow and in happiness.) ಈ ಪ್ರಿಯವಾದ ಹಾಡನ್ನು ಕೇಳುತ್ತಾ ಅವರು ಮಲಗಿದರು. ೯-೧೫ ಕ್ಕೆ ನಾನು ಒಂದು ಡೋಸ್ chloral and bromide. ಕೊಟ್ಟೆ. ಸುಮಾರು ಒಂದೂವರೆ ಗಂಟೆ ನಿದ್ರಿಸಿದರು. ಎಚ್ಚರವಾದಮೇಲೆ ಸ್ವಲ್ಪ ಉತ್ತಮವೆನ್ನಿಸಿತು. ತಾವೇ ಎದ್ದು ಹಲ್ಲು ಉಜ್ಜಿ ಬಾಯಿ ಮುಕ್ಕಳಿಸಿ ಉಗಿದರು. ದಿಢೀರನೆ ಇಷ್ಟು ಮಾಡಲು ಅವರಿಗೆ ಶಕ್ತಿ ಹೇಗೆ ಬಂತೆಂದು ಊಹಿಸಲೂ ಸಾಧ್ಯವಾಗಲಿಲ್ಲ. ಸ್ವಲ್ಪ ಚಹಾ ಸೇವಿಸಿ ಮಲಗಿದರು. ಆದರೆ ಯಾವ ಔಷಧವೂ ಬೇಡವೆಂದು ಹೇಳುತ್ತಿದ್ದರು.
Page 66
ಪತಿಯವರು ತಮ್ಮ ಪಕ್ಕದಲ್ಲಿರುವುದು ಬಾ ಗೆ ಸ್ವಲ್ಪ ನೆಮ್ಮದಿ ತರುತ್ತಿತ್ತು. ಗಾಂಧೀಜಿಯವರು ಡಾ ಗಿಲ್ಡರ್ ಮತ್ತು ನನಗೆ ಹೇಳಿಕಳಿಸಿದರು. ಬಾಪು ತಮ್ಮ ಅಭಿಪ್ರಾಯವನ್ನು ಹೇಳುತ್ತಾ, ‘ಮೆಡಿಸಿನ್ಸ್ ಕೊಡುವುದು ಬೇಡ. ರಾಮನಾಮವೇ ಒಂದು ದೊಡ್ಡ ರೆಮಿಡಿ. ನೀವು ದಯಮಾಡಿ ಕೇವಲ ನೀರಿನಲ್ಲಿ ಜೇನುತುಪ್ಪ ಹಾಕಿ ಕುಡಿಯಲು ಕೊಡಿ’. ‘ಒಂದು ವೇಳೆ ಆಹಾರ ಬೇಕೆಂದು ಬೇಡಿದರೆ ನೋಡೋಣ. ಔಷಧಗಳ ಮೇಲೆ ನನಗೆ ನಂಬಿಕೆ ಹೋಗಿದೆ. ಮಕ್ಕಳಿಗೂ ನಾನು ಔಷಧಿಗಳನ್ನು ಕೊಡುವುದಿಲ್ಲ. ತುಂಬಾ ಸೀರಿಯಸ್ ಆದಾಗಲೂ ಸಹಿತ. ರಾಮನಾಮ ಜಪಿಸಿದರೆ ಮಾತ್ರ ಆಕೆಗೆ ಸಮಾಧಾನ ನೆಮ್ಮದಿ ದೊರೆಯುತ್ತದೆ. ಅವರೂ ತಮ್ಮ ಮನಸ್ಸಿನಲ್ಲಿ ರಾಮನಾಮ ಹೇಳಿಕೊಳ್ಳುತ್ತಿರುವುದು ನನಗೆ ಕೇಳಿಸುತ್ತಿದೆ. ಬೆಳಗಿನಿಂದಲೂ ಆ ದೃಶ್ಯನೋಡಿದರೆ ಮನಸ್ಸಿಗೆ ದುಃಖವಾಗುತ್ತದೆ. ಇನ್ನೂ ಜ್ಞಾನ ಇರುವಾಗಲೇ ಔಷಧಗಳ ಸೇವನೆ ಬಿಟ್ಟುಬಿಡೋಣ. ದೇವರೇ ಅವಳನ್ನು ಕಡೆಗಾಣಿಸಬೇಕು. ಏನು ಆಗುತ್ತೋ ಆಗಲಿ, ಡ್ರಗ್ಸ್ ಮಾತ್ರ ಕೊಡುವುದು ನನಗೆ ಸಮ್ಮತಿ ಇಲ್ಲ’. ಇದು ಬಾಪೂಜಿಯವರ ನಿಲವು.
‘ಪೆನಿಸಿಲಿನ್’ ಕಲ್ಕತ್ತಾದಿಂದ ವಿಮಾನದಲ್ಲಿ ಕಳಿಸಿದ್ದರು. ಕರ್ನಲ್ ಶಾ, ಕರ್ನಲ್, ಭಂಡಾರಿ ಈ ಸುದ್ದಿಯನ್ನು ತಿಳಿಸಿದರು. ಈಗ ನಮ್ಮ ಕೆಲಸವೇನು ? ಮಗ ದೇವದಾಸ್ ಭಾಯಿ ಪೆನಿಸಿಲಿನ್ ಕೊಡಲು ಅಪೇಕ್ಷಿಸುತ್ತಿದ್ದಾರೆ. ಡಾ ಗಿಲ್ಡರ್ ಮತ್ತು ನಾನು ಮಿಲಿಟರಿ ಡಾಕ್ಟರ ಸಲಹೆಯನ್ನು ಕೇಳಲು ಡಾ ಮೆಹ್ತಾರವರ ಜತೆಯಲ್ಲಿ ಹೋಗುವವರಿದ್ದೆವು. ಬಾ, ‘ಮೆಹ್ತಾ ಡಾ ಎಲ್ಲಿ ? ಅವರನ್ನು ಕರಿ. ನನಗೆ ಮಸಾಜ್ ಮಾಡಬೇಕು’. ಅವರು ಈಗ ಮಸಾಜ್ ಕೊಡುವುದು ಸರಿಯಲ್ಲವೆಂದು ಹೇಳಿ, ಬಾ ರನ್ನು ರಮಿಸಲು ೧೫ ನಿಮಿಷ ಕೈ ಮತ್ತು ಕಾಲುಗಳಿಗೆ ಮಸಾಜ್ ಮಾಡಿದರು. ಎಣ್ಣೆ ಬದಲು Powder ಬಳಸಿದರು. ಅವರು ಹೋದಮೇಲೆ ಮಂಪರು ಸ್ಥಿತಿಯಲ್ಲಿ ಬಾ ನನ್ನ ತೊಡೆಯಮೇಲೆ ತಲೆಯಿರಿಸಿ, ಹಾಗೆಯೇ ನನ್ನ ಕಡೆ ವಾಲಿದರು. ಸ್ವಲ್ಪ ಹೊತ್ತಿನಮೇಲೆ ಎದ್ದ ಬಾರವರು, ‘ಡಾ ಮೆಹ್ತಾರನ್ನು ಕರೆಯಿರಿ. ಅವರಿಗೆ ಎಲ್ಲೂ ಹೋಗಕ್ಕೆ ಬಿಡಬೇಡಿ. ಏನಾದರು ಮಾಡೋದಿದ್ರೆ ಅವರೇ ನನಗೆ ಮಾಡಬೇಕು’ ಎಂದು ಹೇಳಿದರು. ಡಾ ಮೆಹ್ತಾರಿಗೆ ಬಾ ರಿಂದ ಇಂತಹ ಒಳ್ಳೆಯ ಸರ್ಟಿಫಿಕೇಟ್ ಸಿಕ್ಕಿದೆ. ನಾನು ಒಂದು ಒದ್ದೆಬಟ್ಟೆಯಿಂದ ಬೆವೆತಿದ್ದ ಬಾರವರ ಮುಖವನ್ನು ವರೆಸಿದೆ.
ಆಗ ಕರ್ನಲ್ ಭಂಡಾರಿಯವರು ರೂಮಿನೊಳಗೆ ಬಂದರು. ದೇವದಾಸ್ ಭಾಯಿ, ಬಾರವರ ಒಂದು ಫೋಟೋ ತೆಗೆಯಲು ಅನುಮತಿ ಬೇಡಿದರು. ಅವರು ತಮ್ಮ ತಂದೆ, ಗಾಂಧೀಜಿಯವರ ಕಡೆ ನೋಡಿ, ಅವರ ಅನುಮತಿಯ ಇಂಗಿತ ತಿಳಿಸಿದರು. ಗಾಂಧೀಜಿಯವರು, ‘ಈ ವಿಷಯದಲ್ಲಿ ನನಗಂತೂ ಎಳ್ಳಷ್ಟು ಇಷ್ಟವಿಲ್ಲ. ಇದು ಮಕ್ಕಳ, ಮಿತ್ರರ ಅಪೇಕ್ಷೆಯಾದರೆ ಸರ್ಕಾರ ವಿರೋಧಿಸುವಂತಿಲ್ಲ’, ಎಂದರು.
Page 67
ಬಹಳ ದಿನಗಳು ಗಾಂಧೀಜಿಯವರು ದ್ರವರೂಪದ ಆಹಾರ ಸೇವಿಸಿಯೇ ಜೀವ ಹಿಡಿದ್ದರು. ಪತ್ನಿಯ ಅನಾರೋಗ್ಯ ಅವರಿಗೆ ಬೆಟ್ಟದಷ್ಟು, ಚಿಂತೆ ಮತ್ತು ತೊಂದರೆ ಕೊಡುತ್ತಿತ್ತು. ತಮ್ಮ ಆಹಾರ ಸೇವನೆಯನ್ನು ಕಡಿಮೆಗೊಳಿಸಿದ್ದರು. ಇನ್ನೊಂದು ಸಮಯದ ಅಭಾವ ; ಅದು ಅವರಿಗೆ ಹೆಚ್ಚು ತ್ರಾಸು ಕೊಡಲಾರಂಭಿಸಿತು. ಅರ್ಧಗಂಟೆ ಮುಕ್ಕಾಲುಗಂಟೆ ಊಟಕ್ಕಾಗಿಯೇ ಸಮಯ ಕಳೆಯುವುದು ಅವರಿಗೆ ವ್ಯರ್ಥ ಕಾಲಹರಣವೆನ್ನಿಸಿತು. ಸ್ನಾನ ಮುಗಿಸುತ್ತಿದ್ದಂತೆಯೇ ೧೦ ನಿಮಿಷದಲ್ಲಿ ಅವರ ದ್ರವರೂಪದ ಪೇಯವನ್ನು ಕುಡಿದು ಮುಗಿಸುತ್ತಿದ್ದರು. ನಂತರ ಪತ್ನಿಯ ಹಾಸಿಗೆ ಮೇಲೆ ಅವರ ತಲೆಯ ಹತ್ತಿರ ಕುಳಿತು ಬಾರವರನ್ನು ನೋಡಿಕೊಳ್ಳುತ್ತಿದ್ದರು. ಒಮ್ಮೆ ಕೂತವರು ಅವರನ್ನು ಬಿಟ್ಟು ಕದಲುತ್ತಿರಲಿಲ್ಲ. ಕಸ್ತೂರ್ ಬಾ ಅವರ ಹತ್ತಿರಕ್ಕೆ ಬರುವ ಮೊದಲೇ ಗಾಂಧೀಜಿಯವರು ಹೇಗೋ ತ್ವರಿತವಾಗಿ ತಮ್ಮ ಊಟ ಮೊದಲಾದವುಗಳನ್ನು ಮುಗಿಸಿ ಸಿದ್ಧರಾಗಿ ಬರುತ್ತಿದ್ದರು.
೨೦ ನೆಯ ತಾರೀಖು, ಅವರು ಕೆಳಗಿನ ಉದ್ಯಾನದಲ್ಲಿ ಚಿಕ್ಕ ವಾಕ್ ಮಾಡಲು ಇಷ್ಟಪಟ್ಟರು. ನಾನೂ ವಾಕ್ ಹೋಗಿದ್ದೆ. ಅಲ್ಲಿಂದ ಬರುವ ವೇಳೆಗೆ ಬಾಪು ತಮ್ಮ ಪತ್ನಿಯ ಹಾಸಿಗೆಮೇಲೆ ಕುಳಿತಿದ್ದರು. ಬಾ ಯಾಕೋ ಅಂದು ಅಂಗತ್ತಿನಲ್ಲಿ ಹಾಸಿಗೆಯಮೇಲೆ ಮಲಗಿದರು. ಉಸಿರಾಟದ ತೊಂದರೆಯಿಂದಾಗಿ ಬಹಳ ದಿನಗಳಿಂದ ಹಾಗೆ ಮಲಗುವುದು ಅವರಿಗೆ ಅಸಾಧ್ಯವಾಗಿತ್ತು. ಇದನ್ನೆಲ್ಲಾ ಅವಲೋಕಿಸುತ್ತಿದ್ದ ನಾವು, ದೇವದಾಸ್ ಭಾಯಿಯವರಿಗೆ, ‘ಒಮ್ಮೆ ಬಂದು ನಿಮ್ಮ ತಾಯಿಯವರನ್ನು ನೋಡಿಕೊಂಡು ಹೋಗಿ’, ಎಂದು ಹೇಳಿ ಕಳಿಸಿದೆವು. ಲೇಡಿ ಥ್ಯಾಕರ್ಸೆ ರವರ ಮನೆಯಲ್ಲಿದ್ದ ದೇವದಾಸ್ ಗಾಂಧಿಯವರು ಮಲಗಲು ಹಾಸಿಗೆಯನ್ನು ಸಿದ್ಧಮಾಡಿಕೊಳ್ಳುತ್ತಿದ್ದರು. ಹಿಂದಿನ ರಾತ್ರಿ ಅವರಿಗೆ ನಿದ್ರೆಸರಿಯಾಗಿ ಆಗಿರಲಿಲ್ಲ. ನಮ್ಮ ಕೋರಿಕೆ ತಿಳಿದ ಕೂಡಲೇ ಅವರು ಬಾರವರ ಹತ್ತಿರ ಓಡಿ ಬಂದಾಗ, ಮನುಬೆನ್, ಡಾ ಮೆಹ್ತಾ ಸಹಿತ ಅಲ್ಲಿಗೆ ಬಂದರು. ಬಾಪು ಪ್ರೀತಿಯಿಂದ ಬಾ ಕಡೆ ತಿರುಗಿ, ‘ನಿನಗೆ ಭಜನ್ ಸಂಗೀತ ಕೇಳಲು, ಅಥವಾ ರಮಾಧುನ್ ಕೇಳಲು ಇಷ್ಟವೇ ‘? ಎಂದು ಕೇಳಿದಾಗ, ಅವರು ‘ಬೇಡ’ವೆಂದು ತಲೆಯಲ್ಲಾಡಿಸಿದರು. ಬಾಪೂರವರು ನಮಗೆ ಸನ್ನೆಮಾಡಿ, ‘ನೀವೆಲ್ಲಾ ಪಕ್ಕದ ರೂಮಿಗೆ ಹೋಗಿ, ಸಣ್ಣ ದನಿಯಲ್ಲಿ ಭಗವದ್ಗೀತೆ ಶ್ಲೋಕಗಳನ್ನು ಪಠಿಸಿ ಎಂದು ಹೇಳಿ, ಬಾ ತಮ್ಮ ಹಾಸಿಗೆಯ ಮೇಲೆ ಮಲಗಿಯೇ ಕೇಳಿಸಿಕೊಳ್ಳಲು ಇಷ್ಟಪಡುತ್ತಾರೆ’ ಎಂದು ಹೇಳಿದರು. ಕಾನು ಗಾಂಧಿ, ದೇವದಾಸಭಾಯಿ ಪ್ಯಾರೇಲಾಲ್, ಒಬ್ಬರಾದಮೇಲೆ ಒಬ್ಬರು ಭಜನೆ ಮಾಡಲು ಕುಳಿತರು. ೨೦ ನೆಯ ತಾರೀಖಿನ ರಾತ್ರಿ, ಡಾ ದಿನ್ ಶಾರವರ ಕೇರ್ ನಲ್ಲಿರುವಾಗಲೇ ನಾನು ಮಲಗಿದಾಗ ೨ ಗಂಟೆಯಾಗಿತ್ತು. ಬೆಳಿಗ್ಯೆ ನಾನು ಎದ್ದಾಗ, ೪ ಗಂಟೆಯ ಹೊತ್ತಿನಲ್ಲಿ ಬಾರವರ ಪಲ್ಸ್ ರೆಟ್, ವೀಕ್ ಆಗಿತ್ತು. ಡಾ ಗಿಲ್ಡರ್ ರವರನ್ನು ಕರೆದೆವು. ಕೂಡಲೇ ಡಾ. ಗಿಲ್ಡರ್ ಬಂದರು. ಬಾ ತಮಗೆ ‘ಕುಡಿಯಲು ಒಂದು ಡೋಸ್ ಹರಳೆಣ್ಣೆ ಬೇಕು’ ಎಂದು ಕೇಳುತ್ತಿದ್ದರು. ‘ಹರಳೆಣ್ಣೆ ಭೇದಿಮಾಡಿಸುತ್ತೆ. ನಿಮಗೆ ಇನ್ನೂ ಸುಸ್ತುಮಾಡುತ್ತದೆ, ದಯವಿಟ್ಟು ಹಠ ಮಾಡಬೇಡಿ’, ಎಂದು ಡಾ. ಗಿಲ್ಡರ್ ವಿವರಿಸಿದರು. ಆದರೆ ಕಸ್ತೂರ್ಬಾ, “ಆದರಲ್ಲೇನಂತೆ, ಹೇಗಿದ್ದರೂ ನಾನು ಸಾಯುವವಳು ಅಲ್ಲವೇ” ? ಹಾಗೆ ಮಾತಾಡಬಾರದು. ಸ್ವಲ್ಪ ಧರ್ಯ ವಿಟ್ಟುಕೊಳ್ಳಿ. ಎಂದು ಡಾ ಗಿಲ್ಡರ್ ಮುಗುಳ್ನಗುತ್ತಾ ಬಾಗೆ ವಿವರಿಸಿ ಹೇಳಿದರು. ‘ಮಕ್ಕಳೆಲ್ಲ ನಿಮ್ಮನ್ನು ನೋಡಲು ಬರ್ತಿದ್ದಾರೆ’. ‘ಇವತ್ತು ದೇವದಾಸ್ ಬರ್ತಾರೆ’. ‘ರಾಮದಾಸ್ ನಾಳೆ ಬರುವವರಿದ್ದಾರೆ’. ಅವರಿಗಾಗಿ ನೀವು ಧರ್ಯಮಾಡಿ ಜೀವಿಸಲೇ ಬೇಕು.
Page 68
ಮಕ್ಕಳ ಮಾತು ಬಂದಾಗಲಂತೂ ಬಾ ಮುಖ ಸಂತೋಷದಿಂದ ಹಿಗ್ಗುತ್ತಿತ್ತು. ತಕ್ಷಣ ಸೀರಿಯಸ್ ಆದರೂ, ‘ಪಾಪ ಅವರಿಗೇಕೆ ಹೇಳಿ ಕಳಿಸಿದಿರಿ ? ನೀವೆಲ್ಲ ನನ್ನ ಮಕ್ಕಳ ತರಹವೇ ಅಲ್ಲವೇ ? ನಾನೇನಾದರೂ ಸತ್ತರೆ ನನ್ನ ಅಂತ್ಯಕ್ರಿಯೆ ನೀವು ಮಾಡೇ ಮಾಡ್ತೀರಿ. ರಾಮದಾಸ್ ಗೆ ಮಾತ್ರ ಬರಲು ಹೇಳಬೇಡಿ. ಪ್ರಯಾಣದ ಖರ್ಚು ಜಾಸ್ತಿ. ರೈಲಿನಲ್ಲಿ ವಿಪರೀತ ಗರ್ದಿ ಇರುತ್ತೆ. ಅವನಿಗೆ ತೊಂದರೆಯಾಗುತ್ತದೆ’. ತಮ್ಮ ನಾಲ್ಕು ಜನ ಮಕ್ಕಳಲ್ಲಿ ರಾಮದಾಸ್ ಅವರ ಲಾಡ್ಲಾ ಮಗನಾಗಿದ್ದರು. ಹಿರಿಯ ಮಗ ಹರಿಲಾಲ್, ನನ್ನು ಬಾರವರು ದಿನವೂ ತಪ್ಪದೆ ಕೇಳುತ್ತಿದ್ದರು. ಅವನು ಸಿಕ್ಕದೆ ಎಲ್ಲರೂ ಅವನಿಗಾಗಿ ಹುಡುಕುತ್ತಿದ್ದರು. ಕೊನೆಗೆ ೨೦ ರಂದು ಸ್ವಾಮಿ ಆನಂದ್, ಅವನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಜೈಲು Superintendent ರಿಗೆ ಫೋನ್ ಮಾಡಿದ ಹರಿಲಾಲ್, ‘ಇವತ್ತು ಬರುವವನಿದ್ದೆ. ಆದರೆ ಮದ್ಯಾನ್ಹ ಹೆಚ್ಚಿಗೆ ಹೊತ್ತು ಮಲಗಿ ನಿದ್ದೆಮಾಡಿದ್ದರಿಂದ ಸಾಧ್ಯವಾಗಲಿಲ್ಲ’ವೆಂದು ಅವನು ಹೇಳಿದಾಗ, ಅಲ್ಲಿ ನೆರೆದಿದ್ದ ನಮ್ಮೆಲ್ಲರಿಗೂ ಅವನ ಮಾತಿನ ತಾತ್ಪರ್ಯ ಅರ್ಥವಾಯಿತು.
ಮಗನ ಮಾತನ್ನು ಕೇಳಿಸಿಕೊಂಡ ಬಾರವರಿಗೆ ಬಹಳ ಕೋಪಬಂತು. ಬಾಪು ಸಮಾಧಾನ ಮಾಡಿದರು. ೨೧ ನೆಯ ತಾರೀಖು ಮದ್ಯಾನ್ಹ ಅವನು ತನ್ನ ತಾಯಿಯವರನ್ನು ಕಾಣಲು ಬಂದಾಗ, ಅವನ ಅವ್ಯವಸ್ಥೆಯ ಜೀವನವನ್ನು ನೋಡಿ ಬಾ ತಲೆ ಚಚ್ಚಿಕೊಂಡರು. ಹರಿಲಾಲ್ ನನ್ನು ಅವನ ತಾಯಿಯ ದೃಷ್ಟಿಯಿಂದ ಹೊರಗೆ ಕಳಿಸಬೇಕಾಗಿ ಬಂತು. ಈ ತರಹದ ಮಾನಸಿಕ ಆಘಾತಗಳಿಂದ ಬಾರವರು ಬಹಳ ನೊಂದುಕೊಂಡರು. ಪರಿಣಾಮವಾಗಿ ಎದೆನೋವು ಬರಲು ಶುರುವಾಯಿತು. ಬೆಳಿಗ್ಯೆಯೇ ಹರಳೆಣ್ಣೆ ಬೇಕೆಂದು ಕೇಳಿದ್ದರು. ನಾನು ಬಾಪುರವರ ಬಳಿ ಹೋಗಿ, ‘ಬಾ ಎದೆನೋವು ಎಂದು ಹೇಳುತ್ತಿದ್ದಾರೆ’. ‘ಅವರಿಗೆ ಏನಾದರು ಔಷಧಿಕೊಡಲೇ’ ? ಎಂದು ಹೇಳಿದಾಗ, ಬಾಪು, ಉತ್ತರಕೊಡುತ್ತ, ಮೆಡಿಸಿನ್ ಗಳ ಬಗ್ಗೆ ನಾನೇನೂ ಹೇಳಲಾರೆ. ‘ನೀನು ಏನ್ಕೊಡ್ಬೇಕು ಅಂತ ಅಂದ್ಕೊಂಡ್ದಿಯೋ ಅದನ್ಕೊಟ್ಟ್ ಬಿಡು’ ಎಂದು ಹೇಳಿದರು. ನಾನು ಒಂದು ಪೇನ್ಕಿಲ್ಲರ್ ಮಾತ್ರೆ ಕೊಟ್ಟು ‘ರಾಮಧುನ್’ ಪಠಿಸಲು ಪ್ರಯತ್ನಿಸಿದೆ. ಕಸ್ತೂರ್ ಬಾ ಮಲಗಿಕೊಂಡೆ ಅದನ್ನು ಮನಸ್ಸಿಟ್ಟು ಆಲಿಸುತ್ತಿದ್ದರು.
36
ಗಾಂಧೀಜಿಯವರು ರಾತ್ರಿ ಹೊತ್ತಿನಲ್ಲಿ ತಮ್ಮ ಪತ್ನಿಯನ್ನು ನೋಡಲು ಅವರ ಕೊಠಡಿಗೆ ಹಲವು ಬಾರಿ ಬರುತ್ತಿದ್ದರು. ಬಾ ಬಹಳ ಹೊತ್ತು ಅವರನ್ನು ತಮ್ಮ ಬಳಿ ಕೂಡಲು ಒಪ್ಪಿಗೆ ಕೊಡುತ್ತಿರಲಿಲ್ಲ. ದಿನದಲ್ಲಿ ಮಾತ್ರ ಅವರು ಹೆಚ್ಚುಹೊತ್ತು ಕೂತರೆ ಏನೂ ಮಾತಾಡುತ್ತಿರಲಿಲ್ಲ. ಕೊನೆ ಕೊನೆಗೆ ಬಾ ಹಾಸಿಗೆ ಮೇಲೆ ಅಡ್ಡಾಗುವುದಕ್ಕಿಂತ ಯಾರ ಬುಜಕ್ಕಾದರೂ ಒರಗಿಕೊಡು ಆಸರೆ ಪಡೆದು ಮಲಗುವುದನ್ನು ಇಷ್ಟಪಡುತ್ತಿದ್ದರು. ಗಾಂಧೀಜಿವರು ಅವರ ಹಾಸಿಗೆ ಬದಿಯಲ್ಲಿ ಕುಳಿತಾಗ, ತಮ್ಮ ತಲೆಯನ್ನು ಅವರ ಭುಜಕ್ಕೆ ಒತ್ತಿಕೊಂಡು ರೆಸ್ಟ್ ತೊಗೊಳ್ಳುತ್ತಿದ್ದರು. ‘ಆದರೆ ನ್ಯುಮೋನಿಯ ಸಾಂಕ್ರಾಮಿಕ ಜಾಡ್ಯ. ಬಾರವರ ಹತ್ತಿರದಲ್ಲೇ ಕುಳಿತ ಬಾಪುಗೆ ಅವರ ಉಸಿರು ತಗುಲುತ್ತದೆ ; ಆದ್ದರಿಂದ ಬಹಳ ಎಚ್ಚರವಹಿಸಬೇಕು. ಹೀಗಾದರೆ ಒಳ್ಳೆಯದಲ್ಲ. ಈ ತರಹ ಹೆಚ್ಚುದಿನ ಕುಳಿತುಕೊಳ್ಳುವುದನ್ನು ನಾನು ಒಪ್ಪುವುದಿಲ್ಲ’ವೆಂದು ಡಾಕ್ಟರ್ ಹೇಳಿದಾಗ ಬಾಪೂರವರಿಗೆ ಸಮಝಾಯಿಸುವವರು ಯಾರು ?
Page 69
ಕಸ್ತೂರ್ ಬಾರವರ ಬಾಯಿನ ತುಟಿಯಿಂದ ಹೊರಗೆ ಬರುತ್ತಿದ್ದ ಜೊಲ್ಲಿನ ನೊರೆಯನ್ನು ಸತತವಾಗಿ ಒರಸುತ್ತಿರಬೇಕು. ಡ್ಯೂಟಿ ನರ್ಸ್ ಚಿಕ್ಕ ಬಟ್ಟೆಯಿಂದ ಆ ನೊರೆಯನ್ನು ಒರಸಿ ಬಿಸಾಡುತ್ತಿದ್ದಳು. ಅವರು ಸಾಯುವ ೨-೩ ದಿನಗಳ ಮೊದಲು ಗಾಂಧೀಜಿ ರಾತ್ರಿ ಹೊತ್ತಿನಲ್ಲಿ ಬಾ ರನ್ನು ನೋಡಲು ಬಂದಾಗ, ಜೊಲ್ಲನ್ನು ಒರಸಿದ ಮೇಲೆ ನರ್ಸ್ ಎಸೆದ ಬಟ್ಟೆಗಳನ್ನು ನೋಡಿ, ಒಂದು ಕರವಸ್ತ್ರವನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಲು ಸೂಚಿಸಿದರು. ಕೊಳೆಯಾದ ಕರ್ಚಿಫ್ ಗಳನ್ನು ಕಲೆಹಾಕಿ, ತಾವೇ ಸೋಪು ಹಾಕಿ ಒಗೆದಿಡುತ್ತಿದ್ದರು. ‘ನನಗೆ ಕೊಡಿ ಬಾಪು, ನಾನು ಮಾಡುತ್ತೇನೆ’ ಎಂದು ಹೇಳಿದಾಗ, ಅವರು ‘ಸ್ವಲ್ಪದಿನ ಅಲ್ಪ-ಸ್ವಲ್ಪ ಸೇವೆಮಾಡುವ ಅವಕಾಶವನ್ನು ನಂಗೆ ಕೊಡಿ,’ಎಂದು ಉತ್ತರಿಸುತ್ತಿದ್ದರು.
ಒಂದು ದಿನ ಊಟದ ಬಳಿಕ, ಬಾಪು ಪತ್ನಿಯ ಹಾಸಿಗೆ ಪಕ್ಕದಲ್ಲಿ ಕೂಡಲು ಹೋದಾಗ, ಬಾರವರಿಗೆ ಆಗ ನಿದ್ದೆಯ ಸಮಯ. ನಿದ್ದೆಮಾಡುವಾಗ ಬಾ ಗಾಂಧೀಜಿಯವರ ಭುಜದಮೇಲೆ ತಲೆಯಿಟ್ಟು ಮಲಗುತ್ತಿದ್ದರು. ಅವರು ನಿದ್ದೆ-ಜೊಂಪಿ ನಿಂದ ಏಳುವವರೆಗೆ ಬಾಪು ಅಲ್ಲಿಯೇ ಕೂಡಬೇಕಿತ್ತು. ಮದ್ಯಾನ್ಹದ ಹೊತ್ತಿನಲ್ಲಿ ಸ್ವಲ್ಪ ಹೊತ್ತು ಮಲಗುವ ರೂಢಿಯನ್ನಿಟ್ಟುಕೊಂಡಿದ್ದ ಅವರಿಗೆ ಸುಧಾರಿಸಿಕೊಳ್ಳುವುದಕ್ಕೆ ಭಂಗಬರುತ್ತಿತ್ತು. ಬಾಪೂರವರಿಗೆ ಸ್ವಲ್ಪ ಆಯಾಸವಾಗಿತ್ತು. ‘ನೀವು ಸ್ವಲ್ಪ ಹೊತ್ತು ಆರಾಮ್ ಮಾಡಿದನಂತರ ಇಲ್ಲಿ ಬಂದು ಕೂಡಿ’ ಎಂದು ನಾನು ಸಜೆಸ್ಟ್ ಮಾಡಿದೆ. ‘ನಾನು ಇಲ್ಲಿ ಹೆಚ್ಚುಹೊತ್ತು ಕುಳಿತರೆ, ನಿನಗೇನಾದರೂ ತೊಂದರೆಯಾಗುತ್ತದೆಯೇ ಸುಶೀಲಾ’ ? ಎಂದು ಕಟುವಾಗಿ ಬಾಪು ನನ್ನನ್ನು ಪ್ರಶ್ನಿಸಿದರು. ‘ಅವರಿಗೆ ಒಳ್ಳೆಯದಾಗಲಿ’ ಎಂದು ಹೇಳಿದ್ದು ವಿಕೋಪಕ್ಕೆ ತಿರುಗಿದಾಗ, ನನಗೆ ಸ್ವಲ್ಪ ಕಸಿವಿಸಿಯಾಯಿತು. ಅವರಿಗೆ ಮನಸ್ಸಿಗೆ ಬಂದಂತೆ ಮಾಡಲಿ. ತೊಂದರೆಯಾದರೂ ಚಿಂತೆಯಿಲ್ಲ, ಎಂದು ಅವರೇ ಹೇಳುತ್ತಿರುವಾಗ ನಾನೇಕೆ ಅವರ ಮಧ್ಯೆ ಬರಬೇಕು ? ಎಂದು ಸಮ್ಮನಾದೆ. ನ್ಯುಮೋನಿಯಾ ಹರಡುವ ಹೆದರಿಕೆ ಇದ್ದೇ ಇರುತ್ತೆ . ಡಾ ಗಿಲ್ಡರ್, ಬಾಪು ಬೇಕಾದರೆ ತಮ್ಮ ಪತ್ನಿಯ ಹಾಸಿಗೆಯ ಬಳಿ ಕುಳಿತುಕೊಳ್ಳಲಿ ; ಆದರೆ ತಮ್ಮ ಮುಖವನ್ನು ಬಾರವರ ಮುಖದ ಹತ್ತಿರ ತರದಹಾಗೆ ಜಾಗ್ರತೆ ವಹಿಸಬೇಕಷ್ಟೆ ! ಇದನ್ನೂ ಹೇಳಲು ಯಾರಿಗೂ ಧರ್ಯವಿಲ್ಲ. ನನಗೆ ಅನ್ನಿಸಿದ್ದು, ಅವರಿಗೆ ತಿಳಿದಂತೆ ಮಾಡಲಿ. ಏನೂ ಹೇಳುವುದು ಬೇಡ. ಡಾ ಗಿಲ್ಡರ್ ನನ್ನ ಮಾತನ್ನು ಸಮ್ಮತಿಸಿದರು. ‘೬೨ ವರ್ಷಗಳ ಜತೆಜೀವನ ಈಗ ಕೊನೆಗೊಳ್ಳುವ ಹಂತಕ್ಕೆ ಬರುತ್ತಿದೆ. ಇಂತಹ ನಾಜೂಕಾದ ಗಳಿಗೆಯಲ್ಲಿ ನಾವೇಕೆ ಅವರಿಗೆ ದೂರವಿರಿ ಎಂದು ಹೇಳಿ ಮನಸ್ಸು ನೋಯಿಸಬೇಕು ‘? ಎಂದು ಹೇಳುವಾಗ ಅವರ ಕಣ್ಣಿನಂಚಿನಲ್ಲಿ ನೀರು ಕಾಣಿಸಿಕೊಂಡಿತು.
‘ಇನ್ನೇನು ಕೊನೆ ಸಮೀಪಿಸುತ್ತಿದೆ’ ಎಂದು ನಾವೆಲ್ಲಾ ಆತಂಕದಲ್ಲಿರುವಾಗ ಬಾ ಗಾಂಧೀಜಿಯವರಿಗೆ hydropathy ಪ್ರಯತ್ನಿಸೋಣವೇ ? ಎಂದು ಪ್ರಶ್ನಿಸಿದರು. ಬಾಪು naturopathy ಯನ್ನು ಬಳಸುತ್ತಿದ್ದರು. ಮಾರನೆಯ ದಿನವೇ ಬಾಪು ತಮ್ಮ ಪತ್ನಿಯ ಸೊಂಟಕ್ಕೆ ಒಂದಾದ ಮೇಲೊಂದು ಸಲ ತಣ್ಣೀರು-ಬಿಸಿನೀರಿನ್ನು ಹಾಕುವುದನ್ನು ಪ್ರಯತ್ನಿಸಿದರು. ದಿನವೂ ಮದ್ಯಾನ್ಹ ಸುಮಾರು ಒಂದು ಗಂಟೆ ಅವರು ಈ ಪ್ರಯೋಗಮಾಡಿ ಬಳಲಿದರು. ಬಾ ತಮ್ಮ ಪತಿಗೆ, “ಹೋಗಿ ನಿಮ್ಮ ಕೆಲಸ ನೋಡಿಕೊಳ್ಳಿ”. “ನಿಮಗೆ ಬೇಕಾದಷ್ಟು ಮಾಡುವುದಿರುತ್ತೆ”. “ಸುಶೀಲ, ನನಗೆ ಸ್ನಾನ ಮಾಡಿಸುತ್ತಾಳೆ” ಎಂದರು. ಇದನ್ನು ಕೇಳಿಸಿಕೊಂಡ ಬಾಪು, ‘ಪರವಾಗಿಲ್ಲ. ನನ್ನ ಕೆಲಸಗಳ ಬಗ್ಗೆ ಯೋಚನೆ ಮಾಡಬೇಡ’ವೆಂದು ಹೇಳುತ್ತಾ, ತಮ್ಮ ಬಿಸಿನೀರು ಸ್ನಾನ ಮಾಡಿಸಲು ಅನುವುಮಾಡಿಕೊಂಡರು.
Page 70
ಒಂದು ದಿನ ಅವರು ಈಗ ಸಮಯ ಸಿಗುವುದೇ ಕಷ್ಟವಾಗುತ್ತಿದೆ. ಸಮಯ ಹೇಗೆ ಹೋಗುತ್ತದೆ ಅನ್ನುವುದು ತಿಳಿಯುತ್ತಿಲ್ಲವೆಂದು ಚಡಪಡಿಸುತ್ತಿದ್ದಾಗ, ನಾನು ಬಾಪೂರವರಿಗೆ, ‘ನಿಮಗೆ ಗೊತ್ತಿದೆ ನನಗೆ ಬಾ ರವರ ಸೇವೆಮಾಡಲು ಸದಾ ಇಷ್ಟ. ಆ ಸಮಯದಲ್ಲಿ ನಿಮ್ಮ ಮುಖ್ಯವಾದ ಕೆಲಸಗಳನ್ನೆಲ್ಲಾ ಮಾಡಿಕೊಳ್ಳಿ’. ಎಂದು ಹೇಳಿದಾಗ, ಬಾಪು, ‘ಗೊತ್ತಮ್ಮಾ ನೀನು ಬಾರವರಿಗೆ ಏನು ಸೇವೆ ಬೇಕಾದರೂ ಮಾಡುತ್ತಿರುವೆ. ಆ ಭಗವಂತ ಇಂಧ ಅಪರೂಪದ ಸಮಯ, ಪತ್ನಿಯ ಜೀವನದ ಅಂತಿಮ ಗಳಿಗೆಯಲ್ಲಿ ಅವರಿಗೆ ಸ್ವಲ್ಪವಾದರೂ ಸೇವೆಮಾಡುವ ಅವಕಾಶ ನನಗೆ ಕಲ್ಪಿಸಿಕೊಟ್ಟಿದ್ದಾನೆ ; ನನಗೆ ಅದು ಅತಿ ಮುಖ್ಯವೆನ್ನಿಸುತ್ತಿದೆ. ಎಲ್ಲಿಯ ವರೆಗೆ ಬಾ ನನ್ನ ಸೇವೆಯನ್ನು ಸ್ವೀಕರಿಸುವಳೋ, ಅಲ್ಲಿಯವರೆಗೆ ನಾನು ನನಗೆ ಎಷ್ಟು ಕಷ್ಟವಾದರೂ ಸಂತೋಷದಿಂದ ಮಾಡಲು ಸಿದ್ಧ’. ಎಂದು ಹೇಳಿದಾಗ, ನನಗೆ ಏನು ಉತ್ತರಿಸಬೇಕೋ ತಿಳಿಯಲಿಲ್ಲ.
ಆಗಾಖಾನ್ ಪ್ಯಾಲೇಸ್ ಬಂದಿಗೃಹಕ್ಕೆ ದೇವದಾಸ್ ಗಾಂಧಿ, ಮನುಬೆನ್, ಮತ್ತು ಸಂಟೋಕ್ ಬೆನ್ ೨೧
ಫೆಬ್ರವರಿ, ನ ಬೆಳಿಗ್ಯೆ ೬-೩೦ ಕ್ಕೆ ಬಂದರು. ಬಾರಿಗೆ ದ್ವನಿ ಗದ್ಗದಿಸಿತು. ಅಳಲು ಪ್ರಾರಂಭಿಸಿದರು. ಇನ್ನೂ ಮಗ ಹರಿಲಾಲ್ ರವರ ಕುಡಿಯುವ ಅಭ್ಯಾಸದಿಂದ ಆದ ದುಖಃ ಇನ್ನೂ ಮರೆತಿರಲಿಲ್ಲ. ದೇವದಾಸ್ ಬಾಯಿಗೆ ಹೇಳಿದರು. ‘ನಿಮ್ಮ ತಂದೆ,
ಬಾಪು ಒಬ್ಬ ಸಂತನ ತರಹ. ಅವರಿಗೆ ವಿಶ್ವದ ಜನರೆಲ್ಲರ ಬಗ್ಗೆ ಚಿಂತೆ. ಹರಿಲಾಲ್ ವಿಷಯ ಎಲ್ಲರಿಗೂ ತಿಳಿದೇ ಇದೆ. ದೇವದಾಸ್ ಮಗೂ, ಸಂಸಾರದ ಭಾರವೆಲ್ಲ ಈಗ ನಿನ್ನಮೇಲಿದೆ’, ಎಂದು ಹೇಳುವಾಗ ಅವರಿಗೆ ದುಖಃ ಉಮ್ಮಳಿಸಿ ಬರುತ್ತಿತ್ತು.
ಮನು ಬೆನ್, ಬಾಗೆ ಇಷ್ಟವಾಗುವಂತಹ ಒಂದು ಶ್ಲೋಕ ಹಾಡಿದಳು. ಅವರಿಗೆ ಮಣಿ ಬೆನ್, ಮತ್ತು ಸಂತೋಕ್ ಬೆನ್, ರಾತ್ರಿಯೆಲ್ಲಾ ಅವರ ಹತ್ತಿರವೇ ಇರುವುದು ಇಷ್ಟ. ಸರ್ಕಾರ ಇದಕ್ಕೆ ಅನುಮತಿ ಕೊಡುತ್ತಿಲ್ಲ. ತಮ್ಮ ತಾಯಿಯ ಜತೆ ದೇವದಾಸ್ ಭಾಯಿ ಇರುವ ಏರ್ಪಾಡಿತ್ತು. ಬಾ ನನ್ನ ಭುಜಕ್ಕೆ ತಲೆಯಿಟ್ಟು ‘ರೆಸ್ಟ್’ ಮಾಡಿದರು. ಅವರು ಈ ತರಹ ಮಾಡುತ್ತಿದ್ದ ನಿದ್ದೆ ನನಗೆ ಸರಿಹೋಗಲಿಲ್ಲ. ನಿದ್ದೆ ದೇಹದ ಆಯಾಸವನ್ನು ಪರಿಹರಿಸಬೇಕು. ಈಗ ಅವರು ಮಾಡುತ್ತಿರುವುದು ಸುಮ್ಮನೆ ಒರಗಿ ರೆಸ್ಟ್ ಮಾಡುವುದು. ಜಲಬಾಧೆಯನ್ನು ತಡೆದರೆ ಆಗುವ ಒಂದು ತರಹದ ಮತ್ತು ಬರುವತರಹ ದೇಹಸ್ಥಿತಿ ಇತ್ತು. ಪ್ರಭಾವತಿ ನಾರಾಯಣ್ ೧೧-೩೦ ಕ್ಕೆ ಬಂದು ನನ್ನನ್ನು ‘ರಿಲೀವ್’ ಮಾಡಿದರು. ಆಗ ಬಾ ಅವರ ಹತ್ತಿರ ಮಾತಾಡುತ್ತಾ, ‘ಪ್ರಭಾವತಿ ಬೆನ್, ಬನ್ನಿ ಹೋಗಿ ಹಾಸಿಗೆಯಮೇಲೆ ಮಲಗೋಣ’ ಎಂದಾಗ, ತಾವಾಗಲೇ ಮಲಗಿರುವುದು ಅವರ ಲಕ್ಷಕ್ಕೆ ಬಂದಿರಲಿಲ್ಲ. ಮಾತಾಡುವಾಗ ಉಬ್ಬುಸ, ಕೆಮ್ಮು; ಮರಣ ಸನ್ನಿದ್ಧವಾಗುತ್ತಿದೆ ಎಂದು ಕೆಲವರಿಗೆ ಅನ್ನಿಸುತ್ತಿತ್ತು. ಮಗ ದೇವದಾಸ್ ಅವರ ಕಾಟಿನ ಹತ್ತಿರ ನಿಂತು ಮಾತನಾಡಿಸುತ್ತಿದ್ದ. shaded table lamp ಬಳಿ ನೆಲದಮೇಲೆ ಕುಳಿತು, ನಾನು ಬಾ ರವರ ಬಗ್ಗೆ ‘ಡೈರಿ’ಯಲ್ಲಿ ಬರೆಯುತ್ತಿದ್ದೆ. ಸ್ವಲ್ಪ ತಲೆನೋಯುತ್ತಿತ್ತು. ಮಗ ದೇವದಾಸ್ ಗಾಂಧಿ ತಾಯಿಯವರ ತಲೆಯನ್ನು ಮೆಲ್ಲಗೆ ಒತ್ತುತ್ತಿದ್ದ. ಹೀಗೆ ಸ್ವಲ್ಪ ಸಮಯದ ನಂತರ ಬಾ ಗೆ ನಿದ್ದೆ ಬಂದಿದೆ, ಎಂದು ಅನ್ನಿಸಿದಾಗ, ‘ಮಸಾಜ್’ ನಿಲ್ಲಿಸಿದರು. ಬಾರವರಿಗೆ ಎಚ್ಚರವಾಗಿ, ‘ಸುಶೀಲ ನಿನಗೂ ಸುಸ್ತಾಯಿತೇ’ ? ಎಂದು ಕಿರಿಚಿದರು, ನಾನು ಅವರ ಪಕ್ಕಕ್ಕೆ ಸರಿದು, ‘ಬಾ ನನಗೆ ಯಾಕೆ ಸುಸ್ತಾಗತ್ತೆ’ ? ಎನ್ನುತ್ತಾ ಅವರ ತಲೆಯನ್ನು ಹಿಡಿದು ನಯವಾಗಿ ಒತ್ತಲು ಆರಂಭಿಸಿದೆ. ಬಾರವರ, ಮಾನಸಿಕ ಸಂತುಲನ ಹೆಚ್ಚು ಕಡಿಮೆಯಾಗುತ್ತಿತ್ತು.
ಬೆಳಗಿನ ಜಾವ ೨ ಗಂಟೆಗೆ ‘Uraemia’ ಶುರುವಾಯಿತು. ಅವರು ೨-೪೫ ಕ್ಕೆ ಮಲಗಿ ನಿದ್ರಿಸಿದರು. ದೇವದಾಸ್ ಭಾಯಿ ಬೆಳಗಿನ ೫ ಗಂಟೆಯವರೆಗೂ ಬಾರವರ ಹಾಸಿಗೆಯ ಬಳಿಯೇ ನಿಂತಿದ್ದರು. ಏನಾದರು ಅಹಿತಕರ ಘಟನೆ ಆಗುವುದಿದೆ ಎಂದು ಎಲ್ಲರಿಗೂ ಅನ್ನಿಸುತ್ತಿತ್ತು. ಅವರು ತಮ್ಮ ಮುಖದಲ್ಲಿ ಸ್ಮಶಾನ ಧರ್ಯವನ್ನು ತಂದುಕೊಂಡಿದ್ದರೂ, ಪ್ರೀತಿಯ ತಾಯಿಯವರು ತಮ್ಮ ಕಣ್ಣಿನ ಮುಂದೆಯೇ ಸಾವಿನ ದವಡೆಗೆ ಜಾರುತ್ತಿದ್ದದ್ದು ಅವರಿಗೆ ತಡೆದುಕೊಳ್ಳಲಾಗುತ್ತಿರಲಿಲ್ಲ.
Page 71
37
೨೨ ನೆಯ ತಾರೀಖಿನ ಬೆಳಿಗ್ಯೆ ನಾನು ೭ ಗಂಟೆಗೆ ಎದ್ದು, ಮುಖತೊಳೆಯಲು ಹೋದೆ. ನಾನು ಬಾರವರ ಕೊಠಡಿಯ ಪಕ್ಕದಲ್ಲೇ ಇದ್ದ, ಬಚ್ಚಲು ಮನೆಯಲ್ಲಿದ್ದಾಗ, ‘ಸುಶೀಲಾ’, ‘ಸುಶೀಲ’ ಎಂಬ ಕೂಗು ಕೇಳಿಸಿತು. ಅದು ಬಾರವರದೇ ಎಂದು ಗ್ರಹಿಸಲು ಕಷ್ಟವಾಗಲಿಲ್ಲ. ನಾನು ತಕ್ಷಣವೇ ಅವರ ಸಮೀಪಕ್ಕೆ ಬಂದಾಗ, ‘ನನ್ನನ್ನು ರೂಮಿಗೆ ಕರೆದುಕೊಂಡು ಹೋಗಿ, ಸರಿಯಾಗಿ ನೋಡಿಕೋ’ ಎಂದು ಬಾ ತೊದಲುತ್ತಿದ್ದರು. ನಾನು ಅವರಿಗೆ ಖಾತ್ರಿಮಾಡಲು, ‘ನೋಡಿ ನೀವು ಹೇ ರಾಮ್’ ಎಂದು ಭಕ್ತಿಯಿಂದ ಪೂಜಿಸುತ್ತಿದ್ದಿರಲ್ಲ, ಆ ಫೋಟೋ ನಿಮ್ಮಹಾಸಿಗೆ ಇರುವ ಗೋಡೆಗೆ ತಗಲು ಹಾಕಿದೆ’. ನೀವು ನಿಮ್ಮರೂಮಿನಲ್ಲೇ ನಿಮ್ಮ ಬೆಡ್ ನ ಮೇಲೆ ಮಲಗಿದ್ದೀರಿ. ಯೋಚಿಸಬೇಡಿ’. ಎಂದು ಸಮಾಧಾನಮಾಡಿದೆ. ಕೆಲನಿಮಿಷ ಸುಮ್ಮನಿದ್ದ ಬಾ, ಪುನಃ ‘ನನ್ನನ್ನು ಬಾಪು ಇರುವ ಕೋಣೆಗೆ ಕರೆದುಕೊಂಡು ಹೋಗಮ್ಮ’ ಎಂದು ಹೇಳುತ್ತಿದ್ದರು. ಬಾಪುವನ್ನು ಮಾತಾಡಿಸಲು ಅವರಿಗೆ ಇಚ್ಛೆ ಇರಬಹುದೆಂದು ನಾನು ಎಣಿಸಿದೆ. ಆಗ ಬಾಪೂಜಿ ಡೈನಿಂಗ್ ರೂಮಿನಲ್ಲಿ ನಾಸ್ತಾ ಮಾಡುತ್ತಿದ್ದರು. ಒಬ್ಬರ ಕೈಲಿ, ‘ನೀವು ಕೆಳಗೆ ವಾಕ್ ಹೋಗುವ ಮೊದಲು ಬಾರನ್ನು ಕಂಡು ಹೋಗಿ’ ಎಂದು ಬಾಪೂಜಿಯವರಿಗೆ ಸಮಾಚಾರ ಕಳಿಸಿದೆ. ನನ್ನ ತೊಡೆಯಮೇಲೆ ತಲೆಯಿಟ್ಟು ಬಾ ನಿದ್ರಿಸಲು ಪ್ರಯತ್ನಮಾಡುತ್ತಿದ್ದರು. ಕೂಡಲೇ ನನ್ನ ಮುಖವನ್ನು ನೋಡಿ, ‘ಸುಶೀಲ ನಾನೆಲ್ಲಿಗೆ ಹೋಗುತ್ತಿದ್ದೇನೆ’ ? ‘ನಾನು ಸಾಯುವೆನೇ’ ? ಎಂದು ತೊದಲಿದರು. ಹಿಂದೆಯೂ ಈ ತರಹದ ಅಸ್ಥಿರ ಮಾತುಗಳನ್ನು ಅವರು ಆಡಿದಾಗ, ನಾನು, ‘ಆ ತರಹ ಅಧೀರತೆಯ ಮಾತನ್ನು ಆಡಬೇಡಿ’. ‘ಯಾಕೆ ಹಾಗೆ ನೆಗೆಟಿವ್ ಆಗಿ ಯೋಚಿಸುತ್ತೀರಿ’ ? ‘ನಾವೆಲ್ಲಾ ಇಲ್ಲಿಂದ ನಮ್ಮ ಮನೆಗಳಿಗೆ ಹೋಗುತ್ತೇವೆ’ ಎಂದು ಹೇಳುತ್ತಿದ್ದೆ. ಆ ಮಾತನ್ನೇ ಮತ್ತೆ ದೊಹರಾಯಿಸಲು ಈಗ ಸಾಧ್ಯವಾಗುತ್ತಿಲ್ಲ. ಸ್ವಲ್ಪ ಕರ್ಮಸಿದ್ಧಾಂತದ ವಾಕ್ಯ ನೆನೆಪಿಗೆ ಬಂತು. ‘ಬಾ ರವರೆ, ನಾವೆಲ್ಲರೂ ಒಂದಲ್ಲ ಒಂದು ದಿನ ಮರಣಿಸಲೇ ಬೇಕಲ್ಲವೇ’ ? ‘ಕೆಲವರು ಮೊದಲು ; ಮತ್ತೆ ಕೆಲವರು ಸ್ವಲ್ಪ ತಡವಾಗಿ’. ‘ನಮಗೆ ಸಾವು ಯಾವಾಗ ಬರುವುದು ಎನ್ನುವುದನ್ನು ಯೋಚಿಸಿ ಧೃತಿಗೆಡುವುದರಲ್ಲಿ ಅರ್ಥವಿಲ್ಲ’.ಎಂದು ಹೇಳಿದಾಗ ಅವರು ಹೌದು ಎಂದು ತಲೆಯಲ್ಲಾಡಿಸಿ, ತಮ್ಮ ಕಣ್ಣುಗಳನ್ನು ಮುಚ್ಚಿ ನನ್ನ ಭುಜಕ್ಕೆ ತಮ್ಮ ತಲೆಯನ್ನು ಆನಿಸಿಕೊಂಡು ರೆಸ್ಟ್ ಮಾಡಲು ಪ್ರಯತ್ನಿಸುತ್ತಿದ್ದರು. ಕಣ್ಣುಗಳು ಮುಚ್ಚಿಕೊಂಡು ಬರುತ್ತಿದ್ದವು.
ಸ್ವಲ್ಪ ಸಮಯಕ್ಕೆ ಗಾಂಧೀಜಿ ರೂಮಿನ ಒಳಗೆ ಬಂದರು. ಪತ್ನಿಯನ್ನು ನೋಡುತ್ತಾ ಸ್ವಲ್ಪ ಹೊತ್ತು ನಿಂತರು. ಬಾರವರ ಹಣೆ ಮತ್ತು ತೋಳುಗಳನ್ನು ಮಮತೆಯಿಂದ ಸವರುತ್ತಾ, ಬಾರನ್ನುದ್ದೇಶಿಸಿ ಕೇಳಿದರು. ‘ಈಗ ನಾನು ವಾಕ್ ಮಾಡಲು ಗಾರ್ಡನ್ ಗೆ ಹೋಗಲೇ’ ? ಪತಿಯ ವಾಕ್ ಮಾಡುವ ಸಮಯಬಂದಾಗ, ಹಿಂದೆ ಅವರು ಎಂದೂ ತಮ್ಮ ಹತ್ತಿರವೇ ಕುಳಿತುಕೊಳ್ಳಿ ಎಂದು ಆಗ್ರಹ ಮಾಡಿದವರೇ ಅಲ್ಲ. ಈ ದಿನ ಬಾಪು ಹೋಗಲೇ ಎಂದು ಕೇಳಿದಾಗ “ಬೇಡ” ಎಂದು ಕಟುವಾಗಿ ಹೇಳಿದಾಗ, ಬಾಪು ಪತ್ನಿಯ ಪಕ್ಕದಲ್ಲೇ ಕುಳಿತರು. ಬಾರವರು ತಮ್ಮ ಪತಿಯ ಎದೆಯಮೇಲೆ ತಲೆಯಿಟ್ಟು ಕಣ್ಣುಮುಚ್ಚಿ ಮಲಗಿದರು. ಅನಿರ್ವಚನೀಯ ಶಾಂತಿ, ನೆಮ್ಮದಿ, ಸಮಾಧಾನ, ಅವರಿಬ್ಬರ ಮುಖಗಳಲ್ಲೂ ಎದ್ದು ಕಾಣಿಸುತ್ತಿತ್ತು. ಅದೊಂದು ಪುಣ್ಯಮಯ ಕ್ಷಣ ! ಅಲ್ಲಿ ನೆರೆದಿದ್ದ ನಾವೆಲ್ಲ ಒಂದು ನಿಮಿಷ ಮೈಮರೆತೆವು. ಗಾಂಧೀಜಿಯವರು ಪತ್ನಿಯ ಬಳಿ ೧೦ ಗಂಟೆಯವರೆಗೆ ಕುಳಿತಿದ್ದರು. ಬಾ ರವರ ಕಿವಿಯಲ್ಲಿ ಮೆಲುದನಿಯಲ್ಲಿ ‘ದೇವರನ್ನು ನೆನೆ’. ‘ಅವನ ಪಾದಗಳಲ್ಲಿ ಸಂಪೂರ್ಣವಾಗಿ ರಾಮನಾಮದ ಜಪದಲ್ಲಿ ನಿನ್ನನ್ನು ಸಮರ್ಪಿಸಿಕೊ’, ಎಂದು ಉಲಿಯುತ್ತಿದ್ದರು. ದಮ್ಮು ಬಂದು ಕೆಮ್ಮಿದಾಗಲೆಲ್ಲ, ಅವರ ತಲೆಯನ್ನು ಸವರಿ ಸಂತೈಸುತ್ತಿದ್ದರು. ದೇವದಾಸ್ ಪ್ಯಾರೇಲಾಲ್ ಮತ್ತು ನಾನು ‘ನಾಸ್ತಾ’ ಮಾಡಲು ಡೈನಿಂಗ್ ಹಾಲಿನ ಟೇಬಲ್ ಮೇಲೆ ಕುಳಿತಾಗ, ದೇವದಾಸ್ ಭಾಯಿಯವರು ಸರ್ಕಾರಿ ಆಫಿಸರ್ ಗಳು ಬಾರವರನ್ನು ರಿಲೀಸ್ ಏಕೆ ಮಾಡಲಿಲ್ಲ, ಎನ್ನುವುದರ ಬಗ್ಗೆ ನಮಗೆ ತಿಳಿಯಹೇಳಿದರು.
Page 72
ಒಂದುವೇಳೆ ಕಸ್ತೂರ್ ಬಾ ರವರನ್ನು ಜೈಲಿನಿಂದ ರಿಲೀಸ್ ಮಾಡಿದಮೇಲೆ ಅವರ ದೇಹಸ್ಥಿತಿ ಹಾಳಾದರೆ, ಗಾಂಧೀಜಿಯವರನ್ನು ರಿಲೀಸ್ ಮಾಡಲು ಪ್ರೆಶರ್ ಬರುತ್ತದೆ. ರಿಲೀಸ್ ಮಾಡದಿದ್ದರೆ ನಮಗೆ ಕ್ರೂರತನದ ಆಕ್ಷೇಪಣೆ ಬರುತ್ತದೆ. ಇದು ಸರ್ಕಾರದ ಆತಂಕಕ್ಕೆ ಕಾರಣವಾಗಿತ್ತು. ಬಾರವರು, ೧೦ ಗಂಟೆಗೆ ಗಾಂಧೀಜಿಯವರನ್ನು ತಮ್ಮ ಜಾಗದಿಂದ ಹೋಗಲು ಅನುಮತಿ ಕೊಟ್ಟರು. ನಾನು ಅವರ ಹಾಸಿಗೆಯಮೇಲೆ ಕುಳಿತುಕೊಂಡೆ. ಇಷ್ಟುದಿನಗಳ ನಂತರವೂ ಅವರು ಮುಖ ತೊಳೆಯಲು ಯಾವ ಆಸಕ್ತಿಯನ್ನೂ ತೋರಿಸುತ್ತಿಲ್ಲ. ಅವರಿಗೆ ಕಣ್ಣು ಮುಚ್ಚಿಕೊಂಡು ನಿದ್ದೆ ಬರುತ್ತಿದೆ. ‘Boroglycerine’ ಬಳಸಿ ನಾನು ಅವರ ಬಾಯಿ ತೊಳೆಸಿದೆ. ಅದೂ ಅವರಿಗೆ ಇಷ್ಟವಾಗಲಿಲ್ಲ. ರಾತ್ರಿಯಿಂದಲೇ ಗಂಟಲಿನಲ್ಲಿ ಏನನ್ನೂ ನುಂಗಲು ಆಗುತ್ತಿರಲಿಲ್ಲ. ನೀರುಕುಡಿಯಲೂ ಆಗುತ್ತಿಲ್ಲ. ದೇವದಾಸ್ ಭಾಯಿ ಬರುವಾಗ, ‘ಗಂಗಾಜಲ’ ವನ್ನು ತಂದಿದ್ದರು. ಗಂಗಾಜಲದಲ್ಲಿ ತುಳಸಿ ಎಲೆಗಳನ್ನು ಸೇರಿಸಿದ್ದರು. ಬಾಪು ಬಾ ಕಡೆ ತಿರುಗಿ, ‘ನೋಡು ದೇವದಾಸ್ ಗಂಗಾ ಜಲವನ್ನು ತಂದಿದ್ದಾನೆ’, ಎಂದು ಹೇಳಿದಾಗ ಕಸ್ತೂರ್ ಬಾ ಸ್ವಲ್ಪ ಬಾಯಿಯನ್ನು ಸ್ವಲ್ಪ ಅಗಲಿಸಿದರು. ಬಾಪು ಚಮಚದಲ್ಲಿ ಗಂಗಾಜಲವನ್ನು ತೊಟ್ಟು ತೊಟ್ಟಾಗಿ ಅವರ ಬಾಯಿಗೆ ಹಾಕಿದರು. ‘ಇನ್ನೂ ಇದೆ. ಅದನ್ನು ಆಮೇಲೆ ತೊಗೊಳ್ಳುವಂತೆ’, ಎಂದು ಹೇಳುತ್ತಿರುವಾಗಲೇ ಬಾರವರ ಕಣ್ಣುಗಳು ಮುಚ್ಚಿಬಂದವು. ಹಿಂದಕ್ಕೆ ವಾಲಿದರು. ಅವರಿಗೆ ತಿಳಿಯದಂತೆ ‘ರಾಮ, ಹೇ, ರಾಮ’ ಎಂದು ಗಂಗಾ ಮಾತೆಗೆ ನಮಿಸುತ್ತಿದ್ದರು. ಗಂಗಾಜಲವನ್ನು ಕುಡಿದಮೇಲೆ ಅವರಿಗೆ ನೆಮ್ಮದಿ ಮತ್ತು ಸಮಾಧಾನ ಸಿಕ್ಕಿತು.
ಬಾಪು ಸ್ನಾನಮಾಡಿ, ಸ್ವಲ್ಪ ಆಹಾರ ಸೇವಿಸಿದರು. ಪುನಃ ಪತ್ನಿಯ ಹಾಸಿಗೆಯ ಮೇಲೆ ಬಾ ಹತ್ತಿರ ಕುಳಿತರು. ಬಾ ರನ್ನು ನೋಡಲು ಬಹಳ ಜನ ಕ್ಯೂ ನಲ್ಲಿ ನಿಂತು, ರೂಮಿನೊಳಗೆ ಬರುತ್ತಿದ್ದರು. ಅವರಿಗೆ ಬಾ ಬಳಿ ಕುಳಿತು ಕ್ಷೇಮಸಮಾಚಾರ ವಿಚಾರಿಸಲು ಸಹಾಯವಾಗುವಂತೆ, ಗಾಂಧೀಜಿಯವರು ಅಲ್ಲಿಂದ ಮೇಲೆ ಎದ್ದು, ಹೊರಗೆ ಹೋಗಿ ಚಾಪೆಯಮೇಲೆ ಕುಳಿತರು. ಸ್ವಲ್ಪ ಹೊತ್ತಿನಮೇಲೆ ಸಂತೋಕ್ ಬೆನ್, ಕೇಶುಭಾಯಿ, ರಾಮಿ ಬೆನ್ ಬಂದರು. ಬಾ ಮೆಲ್ಲಗೆ ಎದ್ದು ಅವರ ಜತೆ ಮಾತಾಡಲು ಮುಂದಾದರು. ದೇವದಾಸ್ ನನಗಾಗಿ ಬಹಳ ಕಷ್ಟ ಅನುಭವಿಸಿದರು, ಎಂದು ಸಂತೋಕ್ ಬೆಹೆನ್ ಸೌಜನ್ಯಕ್ಕೆ ಹೇಳಿದರು. ಬಾರವರು ಮಗ, ದೇವದಾಸ್ ಕಡೆ ತಿರುಗಿ, ‘ಇನ್ನು ಮುಂದೆ ನಿನ್ನ ಪರಿವಾರದ ಹಿತರಕ್ಷಣೆಯಕಡೆ ಗಮನಕೊಡಬೇಕು’, ಎಂದು ಬುದ್ಧಿ ಹೇಳಿದರು. ಮಗ ದೇವದಾಸ್ ತಾಯಿಯ ಕಡೆ ನೋಡುತ್ತಾ, ‘ಬಾ ನಿಮಗಾಗಿ ನಾನು ಏನು ಮಾಡಿದೆ ? ನಿನ್ನೆ ರಾತ್ರಿಯೇ ನಾನು ಇಲ್ಲಿಗೆ ಬಂದೆ. ನಿನ್ನ ಜೊತೆಗಾತಿಯರೆಲ್ಲ ಎಷ್ಟು ಆಸ್ಥೆಯಿಂದ ನಿನ್ನನ್ನು ನೋಡಿಕೊಳ್ಳುತ್ತಿದ್ದಾರೆ.’ ಆದರೆ ಈ ಕೊನೆಗಳಿಗೆಯಲ್ಲಿ ನೀನು ಇಲ್ಲಿಗೆ ಸಮಯಕ್ಕೆ ಸರಿಯಾಗಿ ಬಂದಿದ್ದು ಬಾ ಗೆ ಮುದಕೊಟ್ಟಿದೆ. ದೇವದಾಸ್ ಬಾಯಿ ತಾಯಿಯಕಡೆ ನೋಡಿ, ಬಾ ರಾಮದಾಸ್ ಭಾಯಿ ಬರುತ್ತಿದ್ದಾನೆ, ಎಂದು ಹೇಳಿದಾಗ, ಅಯ್ಯೋ ಅವನೇಕೆ ಬರ್ತಾನಪ್ಪಾ ? ಎಂದು ನೊಂದುಕೊಂಡರು. ರಾಮದಾಸ್ ಗೆ ಸ್ವಲ್ಪ ತೊಂದರೆಯಾದರೂ ಬಾ ಗೆ ಸಹಿಸಲಾಗುತ್ತಿರಲಿಲ್ಲ.
ಪತಿಯ ಕಡೆ ನೋಡುತ್ತಾ ಕಸ್ತೂರ್ಬಾ ಬಾ, ‘ನನ್ನ ಮರಣದ ನಂತರ ದುಃಖ ಪಡಬೇಡಿ. ಸುಖವಾದ ಅಂತ್ಯವಾದರೆ ನೀವು ದೇವರಿಗೆ ಕೃತಜ್ಞರಾಗಿರಬೇಕು.’ ಎಂದು ಹೇಳುತ್ತಾ ತಮ್ಮ ಕಣ್ಣುಗಳನ್ನು ಮುಚ್ಚಿ, ಎರಡೂ ಕೈಗಳನ್ನೂ ಜೋಡಿಸಿ, ದೇವರನ್ನು ಪ್ರಾರ್ಥಿಸಿದರು. ‘ಓ ದೇವಾ, ನಾನು ಇರುವಷ್ಟು ಕಾಲ ನಿನ್ನ ಸೇವೆ ಮಾಡಲಿಲ್ಲ’. ‘ನನ್ನನ್ನು ಕ್ಷಮಿಸು’ ; ‘ನಿನ್ನ ಕರುಣೆ ನನ್ನ ಮೇಲಿರಲಿ’. ‘ನಿನ್ನ ಸೇವೆ ಮಾಡಲು ನನಗೆ ಶಕ್ತಿ ದಯಪಾಲಿಸು’. ‘ನಿನ್ನ ಕೃಪೆಯೊಂದು ಬಿಟ್ಟು ನನಗೆ ಏನೂ ಬೇಡ’. ಎಂದು ದೇವರನ್ನು ಪ್ರಾರ್ಥಿಸುತ್ತಿದ್ದರು.
Page 73
೫-೩೦ ಕ್ಕೆ ಕರ್ನಲ್ ಶಾ, ಹಾಗೂ ಕರ್ನಲ್ ಭಂಡಾರಿ, ಗಾಂಧೀಜಿಯವರ ಬಳಿಗೆ ಬಂದು ‘ಪೆನಿಸಿಲಿನ್ ಇಂಜೆಕ್ಷನ್’ ಕೊಡುವ ಬಗ್ಗೆ ಅವರ ನಿಲುವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು. ‘ಡಾ ಗಿಲ್ಡರ್ ಮತ್ತು ಸುಶೀಲಾ ಬೆನ್ ಪೆನಿಸಿಲಿನ್ ಕೊಡಲು ಒಪ್ಪಿದರೆ, ಅದರಂತೆ ಮಾಡಿ’ ಎಂದು ಅವರು ಹೇಳಿದರು. ಡಾ ಗಿಲ್ಡರ್, ಬಾಪುವಿನ ಮನದಿಂಗಿತವನ್ನು ಅರಿತವರು. ಅವರ ಮನಸ್ಸಿಗೆ ವಿರುದ್ಧವಾಗಿ ಅವರು ಏನನ್ನೂ ಮಾಡಲು ಸಿದ್ಧರಿರಲಿಲ್ಲ. ನಾವು ದೇವದಾಸ್ ಭಾಯಿಯವರನ್ನು ಪ್ರಶ್ನಿಸಿದಾಗ, ಅವರು ತಮ್ಮ ತಂದೆಯವರ ಮಾತನ್ನು ಬಿಟ್ಟುಕೊಡದೆ, ‘ ಬಾ ಸುಖವಾಗಿ ದೇವರನ್ನು ಪ್ರಾರ್ಥಿಸುತ್ತ ಶಾಂತಿಯಿಂದ ದೇವರ ಪಾದ ಸೇರಲಿ. ಕೊನೆಗಳಿಗೆಯಲ್ಲಿ ಈ ತರಹ ಇಂಜೆಕ್ಷನ್ ಚುಚ್ಚಿ ಏಕೆ ತೊಂದರೆ ಕೊಡಬೇಕು’ ? ಇವೆರಡೂ ಮಾತುಗಳಲ್ಲೂ ತಥ್ಯವಿತ್ತು. ಅದೂ ಅಲ್ಲದೆ, ನಮ್ಮ ಬಳಿ ಮದ್ದು ಸಿಕ್ಕಿರುವಾಗ, ಬಾ ಇನ್ನೂ ಜೀವಂತವಾಗಿರುವಾಗ, ಅವರನ್ನು ಹೇಗಾದರೂ ಮಾಡಿ ಉಳಿಸಲು ಪ್ರಯತ್ನಿಸಬಾರದೇಕೆ ? ಕಾರಣ ಹುಡುಕುವದರಲ್ಲಿ ದೇವದಾಸ್ ಗಾಂಧಿಯವರು ಹಾಗೂ ನಾನೂ ಒಂದು ಗ್ರೂಪಿಗೆ ಸೇರಿದ್ದೆವು. ಈ ಎಲ್ಲ ವಿಷಯಗಳನ್ನೂ ತುಲನಾತ್ಮಕವಾಗಿ ಚರ್ಚಿಸಿದಮೇಲೆ ಡಾ ಗಿಲ್ಡರ್, ‘ನೀವೆಲ್ಲಾ ಸಮ್ಮತಿಸಿದರೆ, ನಾವು ಪೆನಿಸಿಲಿನ್ ಕೊಡಲು ಸಿದ್ಧರಿದ್ದೇವೆ’. ಎಂದು ಹೇಳಿದರು.
ಅವರ ಆದೇಶದ ಪ್ರಕಾರ, ಸಿರೆಂಜ್ ಮತ್ತು ನೀಡಲ್ ಬಿಸಿಮಾಡಲು ಹೋದಾಗ, ಬಾಪು ನನ್ನನ್ನು ಕರೆದು, ಈಗ ನೀವೆಲ್ಲಾ ಏನು ನಿರ್ಧಾರ ಕೈಗೊಂಡಿದ್ದೀರಿ ? ನಾನು ಧೃಢವಾಗಿ ಧ್ವನಿ ಏರಿಸಿ, ‘ನಾವು ಬಾಗೆ ಪೆನಿಸಿಲಿನ್ ಕೊಡಲು ಸಿದ್ಧಮಾಡಿಕೊಳ್ಳುತ್ತಿದ್ದೇವೆ’. ಎಂದೆ. ಬಾಪು, ‘ಅದನ್ನು ಕೊಡಲೇ ಬೇಕೇ ? ‘ಏನು ಗ್ಯಾರಂಟಿ ಇದೆ ಅದರಿಂದ ಆರೋಗ್ಯ ನಿಜವಾಗಿ ಉತ್ತಮಗೊಳ್ಳುವುದೆಂದು’ ? ‘ನನಗೇನೂ ಹೇಳಲು ತಿಳಿಯದು. ಒಂದು ಒಳ್ಳೆಯ ಪ್ರಯೋಗ ಮಾಡಬಹುದಲ್ಲವೇ’ ? ‘ಸಾವು-ಉಳಿವಿನ ಮಧ್ಯೆ ಅವರು ಹೊಡೆದಾಡುತ್ತಿರುವ ಸಮಯದಲ್ಲಿ ಪೆನಿಸಿಲಿನ್ ಆಗಲೀ ಬೇರೆಯಾವುದಾದರೂ ಮದ್ದಾಗಲೀ ಅವರಿಗೆ ಕೊಡಬೇಕಲ್ಲವೇ ‘. ‘ಏನೇ ಇರಲಿ, ದಯಮಾಡಿ ಡಾ. ಗಿಲ್ಡರ್ ರನ್ನು ಮತ್ತೊಮ್ಮೆ ಕನ್ಸಲ್ಟ್ ಮಾಡಿ’, ಎಂದು ಬಾಪುಗೇ ಹೇಳಿ, ನಾನು ರೂಮಿನಿಂದ ಹೊರಗೆ ಹೋದೆ. ಬಾಪು ಗಿಲ್ಡರ್ ರನ್ನು ಪುನಃ ಕನ್ಸಲ್ಟ್ ಮಾಡಲು ಕರೆಸಿದರು. ನನಗೆ ಡಾ. ಗಿಲ್ಡರ್ ಹೇಳಿದಂತೆ, ಬಾಪುಗೇ ಪೆನಿಸಿಲಿನ್ ಒಂದು Injection ತರಹ ಕೊಡಬಹುದೆಂಬ ವಿಷಯದ ಬಗ್ಗೆ ತಿಳುವಳಿಕೆಯಿರಲಿಲ್ಲವಂತೆ ! ಪೆನಿಸಿಲಿನ್ ಇಂಜೆಕ್ಷನ್ ಗಳನ್ನು ಪ್ರತಿ ಮೂರುಗಂಟೆಗಳಿಗೊಮ್ಮೆ ಕೊಡಬೇಕು. ಬಾಗೆ ಇಂಜೆಕ್ಷನ್ ಚುಚ್ಚಿಸುವುದು ಬೇಡವೆಂದು ಅವರು ನಿರ್ಧರಿಸಿದರು. ಬಿಸಿಗಿಟ್ಟಿದ್ದ ನೀಡಲ್ ಹಾಗೂ ಸಿರೆಂಜ್ ಹೊರಗೆ ತೆಗೆದು, ನನ್ನ ಬ್ಯಾಗ್ ನಲ್ಲಿ ಇಟ್ಟುಕೊಂಡೆ. ನನಗೆ ಒಂದು ಕಡೆ ಬೇಸರ ; ಮತ್ತೊಂದುಕಡೆ ಸಮಾಧಾನ, ಎರಡೂ ಆಗಿತ್ತು !
ಗಾಂಧೀಜಿ ಮತ್ತು ಅವರ ಮಗ ದೇವದಾಸ್ ಗಾಂಧಿಯವರ ನಡುವೆ ಮಾತಿನ ಸಂಘರ್ಷ ಏರ್ಪಟ್ಟಿತ್ತು. ಬಾಪು ಯಥಾಪ್ರಕಾರ, ‘ನೀನು ಭಗವಂತನನ್ನು ನಂಬಲ್ಲವೇ’ ? ‘ನಿನ್ನ ತಾಯಿಗೆ ಈಗ ಡ್ರಗ್ ಕೊಟ್ಟು ಅವರ ಸಂಕಟವನ್ನು ಹೆಚ್ಚಿಸಲು ಪ್ರಯತ್ನಿಸುವೆಯಾ’ ? ಈ ಮಾತುಕತೆಗಳಿಂದಾಗಿ ಬಾಪು ಪ್ರದಿನ ೬-೩೦ ಕ್ಕೆ ಸರಿಯಾಗಿ ವಾಕ್ ಹೋಗುತ್ತಿದ್ದರು. ಅದು ೭-೧೫ ರ ವರೆಗೆ ತಡವಾಯಿತು. ಅವರಿನ್ನೂ ಮಹಡಿಯಮೇಲೆ ಇದ್ದರು. ಬಾತ್ ರೂಮಿಗೆ ಹೋಗಿ, ವಾಕ್ ಗೆ ಹೋಗಲು ಸಿದ್ಧರಾಗುವ ಹೊತ್ತಿಗೆ “ಬಾಪು”, ಎನ್ನುವ ಕೂಗು ! ಕಸ್ತೂರ್ ಬಾ ರವರ ಕೂಗಿನ ಧ್ವನಿ. ಪ್ರಭಾವತಿ ಬೆನ್ ಬಾ ರವರ ಹತ್ತಿರ ಕುಳಿತುಕೊಂಡಿದ್ದರು. ಪತ್ನಿಯ ಕರೆಯನ್ನು ಕೇಳಿದೊಡನೆಯೇ ಬಾಪು ಬಂದು ತಮ್ಮ ಪತ್ನಿಯ ತಲೆಯ ಹತ್ತಿರ ಕುಳಿತರು. ಅಲ್ಲೇ ನಿಂತಿದ್ದ ಕಾನುಗೇ ಸಂಬೋಧಿಸುತ್ತಾ, ಫೋಟೋ ತೆಗೆಯುವುದು ಬೇಡವೆಂದು ಖಡ್ಡಾಯವಾಗಿ ಹೇಳಿದರು. ಕಾನುಗಾಂಧಿ, ಬಾಪು ಹಾಗೂ ಬಾರವರು ಕಡೆಗಳಿಗೆಯಲ್ಲಿ ಜೊತೆಯಾಗಿ ಇದ್ದ ಫೋಟೋ ತೆಗೆಯಲು ಸ್ವಲ್ಪ ಸಮಯದಿಂದ ಹವಣಿಸುತ್ತಿದ್ದ. ಅವನಿಗೆ ಹಾಗೂ ನಮ್ಮೆಲ್ಲರಿಗೂ ಬಾಪೂರವರ ಆ ನಿರ್ಣಯದಿಂದ ರಸಭಂಗ, ಹಾಗೂ ನಿರಾಶೆಯಾಯಿತು.
Page 74
ಬಾರವರಿಗೆ ಸಂಕಟ, ತಳಮಳ ಆಗುತ್ತಿದೆ. ಎರಡು ಸಲ ಮಲಗಿದ್ದ ಹಾಸಿಗೆಯಿಂದ ಎದ್ದು ಕುಳಿತು, ಮತ್ತೆ ಮಲಗಿದರು. ಬಾಪು ಅವರನ್ನು ‘ಏನಾಗುತ್ತಿದೆ’ ? ‘ಈಗ ಹೇಗೆ ನಿನಗೆ ಅನ್ನಿಸುತ್ತಿದೆ’ ? ಎಂದು ವಿಚಾರಿಸಿದರು. ಪುಟ್ಟ ಹಸುಗೂಸಿನಂತೆ ಅವರು ‘ನನಗೆ ಏನೂ ತಿಳಿಯುತ್ತಿಲ್ಲ’. ಎಂದರು. ನಾನು ಕಾನುಗಾಂಧೀ ಇಬ್ಬರೂ ಬಾರವರ ರೂಮಿನ ಹೊರಗಡೆಯ ವರಾಂಡಕ್ಕೆ ಹೋಗಿ ಗಾಂಧೀಜಿಯವರ ಕೆಲವು ವಿರೋಧಗಳ ಬಗ್ಗೆ ಮಾತಾಡಿಕೊಂಡೆವು. ಅದರಲ್ಲಿ ಕಾನು ಗಾಂಧಿಗೆ ಬಾ ಜತೆ ಗಾಂಧೀಜಿಯವರ ಫೋಟೋ ತೆಗೆಯಲು ಅವಕಾಶ ಕೊಡದೆ ಇದ್ದದ್ದೂ ಸೇರಿತ್ತು. ಬಾಪು ಅವರಿಗೆ ತಿಳಿಯದಂತೆ ಯಾರಾದರೂ ಫೋಟೋ ಕ್ಲಿಕ್ಕಿಸಿದರೆ, ಅವರು ಏನೂ ಹೇಳುತ್ತಿರಲಿಲ್ಲ ; ಇವತ್ತು ಅವರ ಪ್ರೀತಿಯ ಮೊಮ್ಮಗ ಕಾನುಗೆ ಹೀಗೆ ಏಕೆ ವಿರೋಧಿಸಿದರು ? ಇವತ್ತು ಫೋಟೋ ತೆಗೆದಿದ್ದಿದ್ದರೆ ಎಂತಹ ಅತ್ಯುತ್ತಮ ಫೋಟೋ ಅದಾಗಿರುತ್ತಿತ್ತು ! ಕೊನೆಯ ಬಾಪು-ಬಾರ ಮಿಲನದ ಆ ಫೋಟೋ ತೆಗೆಯುವುದರಿಂದ ಮಾನ್ಯತೆಯೇನಾದರೂ ಕಡಿಮೆಯಾಗುತ್ತಿತ್ತೇ ? ಗೊತ್ತಿಲ್ಲ. ಅದು ನಮ್ಮ ಬುದ್ಧಿಗೆ ನಿಲುಕದ ವಿಷಯವಾಗಿತ್ತು.
ಆಗತಾನೇ ಕಸ್ತೂರ್ ಬಾ ರವರ ಸೋದರ, ಆಗಾಖಾನ್ ಪ್ಯಾಲೇಸ್ ಮೆಟ್ಟಿಲು ಹತ್ತಿ ಮೇಲಕ್ಕೆ ಬಂದರು. ಅವರನ್ನು ನೋಡಿದಕೂಡಲೇ ಬಾ ಗುರುತುಹಿಡಿದರು. ತಕ್ಷಣ ಅವರ ಕಣ್ಣುಗಳು ಭಾವುಕತೆಯಿಂದ ಒದ್ದೆಯಾದವು. ಬಾಯಿನಿಂದ ಮಾತುಗಳೇ ಹೊರಡದಾದವು. ಬಾ ರವರ ಸೋದರ ವರಾಂಡಕ್ಕೆ ಬಂದು, ಅಲ್ಲಿಂದ ನಿನ್ನ ರೂಮಿನೊಳಗೆ ಬಂದೆ ಎಂದು ಹೇಳಿದಾಗ, ಬಾ ಎದ್ದು ಕುಳಿತುಕೊಳ್ಳಲು ಪ್ರಯತ್ನಿಸಿದರು. ಪಕ್ಕದಲ್ಲೇ ಇದ್ದ ಬಾಪುರವರು ಬೇಡವೆಂದರು.’ ಮಲಗಿಕೊಂಡೇ ಮಾತಾಡಿಸು ಪರವಾಗಿಲ್ಲ’ ಎಂದರು. ಪತಿಯ ತೊಡೆಯಮೇಲೆ ತಮ್ಮ ತಲೆಯಿರಿಸಿ ಬಾ ಮಲಗಿದರು. ಕಣ್ಣಿನಲ್ಲಿ ಕಾಂತಿ ಕಡಿಮೆಯಾದಂತೆ ಅನ್ನಿಸಿತು. ಗಂಟಲಿನಿಂದ ಗೊಗ್ಗರ ಧ್ವನಿ, ಮತ್ತು ಕೆಮ್ಮು ಕೇಳಿಸಿತು. ಕಸ್ತೂರ್ ಬಾ ತಮ್ಮ ಬಾಯಿಯನ್ನು ದೊಡ್ಡದಾಗಿ ತೆರೆದು, ಏನೋ ಹೇಳಲು ಪ್ರಯತ್ನಿಸುತ್ತಿದ್ದಂತೆ, ಎಲ್ಲವೂ ತಟಸ್ಥವಾಯಿತು. ಕಸ್ತೂರ್ ಬಾ ಇಹಲೋಕದ ಬಂಧನಗಳಿಂದ ಮುಕ್ತರಾಗಿ ಹೋಗಿದ್ದರು.
ಗಾಂಧೀಜಿಯವರು, ಬಾ ಹೇಗೆ ಮರಣಿಸಬಹುದು ? ಯಾರ ಹೆಗಲಿಗೆ ಒರಗಿ ? ಮುಂತಾದ ಯೋಚನೆಯನ್ನು ಮಾಡುತ್ತಿದ್ದರು. ಯಾರಿಗೆ ಅವರ ಕೊನೆಯ ಕಾಲದ ಸೇವೆ ಲಭ್ಯವಿದೆ ಎಂದು ! ಯಾರಿಗೂ ಸಿಗದ ಒಂದು ಅನುಪಮ
ಯೋಗ, ಪತಿಯಾಗಿ ಗಾಂಧೀಜಿಯವರು, ಪಡೆದುಕೊಂಡು ಧನ್ಯರಾದರು. ಬಾ ರವರ ತಲೆಯ ಕೆಳಗಿದ್ದ ದಪ್ಪ ದಿಂಬನ್ನು ತೆಗೆದು, ಕಾಟಿನ ಒಂದು ಕಡೆ ಎತ್ತರಿಸಿದ ಭಾಗವನ್ನು ಸಮವಾಗಿ ಮಾಡಲು ಕೋರಿದರು.
ಮದ್ಯಾನ್ಹ ಮೀರಾಬೆನ್ ಅಲ್ಲಿಗೆ ಬಂದು ಬಾ ರವರ ಹಾಸಿಗೆಯನ್ನು ಉತ್ತರ-ದಕ್ಷಿಣಕ್ಕೆ ಹಾಸಿ ದೀರ್ಘಚತುರಸ್ರಾಕಾರದ ಆಯತವನ್ನು ರಚಿಸಿದರು. ಹಿಂದೂ ಸಾಂಪ್ರದಾಯಸ್ತರು ಮರಣಕ್ಕೆ ಮೊದಲು ರೋಗಿಯನ್ನು ಈ ರೀತಿ ಮಲಗಿಸುವ ವಾಡಿಕೆಯಿದೆ. ಅಲ್ಲಿದ್ದ ಎಲ್ಲರೂ ‘ರಾಮಧುನ್’ ಹಾಡಲು ಉಪಕ್ರಮಿಸಿದರು. ನನಗೇನೂ ತೋಚದೆ ಸ್ವಲ್ಪಹೊತ್ತು ಕಂಭದಂತೆ ಸುಮ್ಮನೆ ನಿಂತಿದ್ದೆ. ನಾನು ಡಾಕ್ಟರಾಗಿ ಇಷ್ಟರವರೆಗೆ ಹಲವು ಮರಣಗಳ ಕೇಸ್ ಗಳನ್ನು ಕಂಡಿದ್ದೆ. ಈಗ ಮರಣದ ಮತ್ತೊಂದು ಬಂಧನ-ಮುಕ್ತ ಮುಖವನ್ನು ನೋಡುವುದಿತ್ತು. ಕಸ್ತೂರ್ ಬಾ ಪ್ರಾಣ ಬಿಟ್ಟಾಗ ೭-೩೫ ಆಗಿತ್ತು.
ದೇವದಾಸ್ ಭಾಯಿ ತಮ್ಮ ತಾಯಿಯ ಎದೆಯಮೇಲೆ ತಲೆಯಿಟ್ಟು ‘ಬಾ, ಬಾ ನಮ್ಮ ಪ್ರೀತಿಯ ಬಾ, ನಮ್ಮನ್ನು ಆಗಲಿ ಹೋಗಿಬಿಟ್ಟಿರಾ’ ? ಎಂದು ಹೇಳುತ್ತಾ ಮಗುವಿನಂತೆ ರೋದಿಸಿದರು. ಗಾಂಧೀಜಿಯವರ ಕಣ್ಣಿನ ಅಂಚಿನಲ್ಲಿ ಕಣ್ಣೀರಿನ ಹನಿಗಳು ಕಾಣಿಸಿದವು. ನಿಧಾನವಾಗಿ ತಮ್ಮನ್ನು ತಾವು ಸಂಭಾಳಿಸುತ್ತಾ ಮೇಲೆದ್ದರು. ರೂಮಿನಲ್ಲಿದ್ದ ಎಲ್ಲ ಸಾಮಾನುಗಳನ್ನು ರೂಮಿನಿಂದ ಹೊರಗಿಡಲು ಹೇಳಿದರು.
ಅಷ್ಟು ಹೊತ್ತಿಗೆ ಗಾಂಧೀಜಿಯವರ ಅಣ್ಣನ ಮಗ, ಮಥುರಾದಾಸ್ ತ್ರಿಕಾಂಜಿ ಮತ್ತು ಪರಿವಾರ, ಆಗಾ ಖಾನ್ ಪ್ಯಾಲೇಸ್ ಗೇಟಿನ ಹೊರಗೆ ಕಾಯುತ್ತಿದ್ದರು. ಬಾ ರವರ ಅಂತಿಮ ದರ್ಶನ ಪಡೆಯಲು ಅವರು ಬಂದಿದ್ದರು. ಬಾಪು ಸರ್ಕಾರಕ್ಕೆ ಬರೆದು, ಬಂದು ನೋಡುವ ನೆಂಟರಿಷ್ಟರಿಗೆ ಆಗಾ ಖಾನ್ ಪ್ಯಾಲೇಸ್ ಜೈಲಿನೊಳಗಡೆ ಬರಲು ಅನುಮತಿ ನೀಡಲು ಪ್ರಾರ್ಥಿಸಿದ್ದರಿಂದ ಇದು ಸಾಧ್ಯವಾಯಿತು.
Page 75
‘ಆಗಾ ಖಾನ್ ಪ್ಯಾಲೇಸ್ ಜೈಲು ಬಂಧನ’ದಲ್ಲಿರುವಾಗ ಬಾ ರವರ ನಿಧನವಾರ್ತೆ, ಪ್ಯಾಲೇಸ್ ಹೊರಗೆ ಕೆಲವು ಅಹಿತಕರ ಸನ್ನಿವೇಶಗಳು ಮತ್ತು ಗಲಭೆಯನ್ನು ಉಂಟುಮಾಡಬಹುದೆಂದು ಜೈಲಿನ ಅಧಿಕಾರಿಗಳೂ ಹಾಗೂ ನಾವು ಶಂಕಿಸಿದ್ದೆವು. ಸರ್ಕಾರದ ಅನುಮತಿಯಿಲ್ಲದೆ ಪ್ಯಾಲೇಸ್ ಬಂದೀಗೃಹದಿಂದ ಯಾರೂ ಹೊರಗೆ ಹೋಗಬಾರದೆಂದು ಕಟ್ಟಪ್ಪಣೆ ಮಾಡಲಾಗಿತ್ತು. ಬಾಪು, ಮನುಬೆನ್, ಸಂತೋಕ್ ಬೆನ್ ಮತ್ತು ನಾನು, ಕಸ್ತೂರ್ ಬಾರವರ ಮೃತ ಶರೀರಕ್ಕೆ ಸ್ನಾನಮಾಡಿಸಿ, ಅವರ ತಲೆಯ ಮುಂಗುರಳನ್ನು ಬಾಚಿ, ಅವರ ಪತಿ ನೂತು ನೇಯ್ದು ಸಿದ್ಧಪಡಿಸಿದ ಕೆಂಪಂಚಿನ ಸೀರೆಯನ್ನು ಉಡಿಸಿ ಮಲಗಿಸಿದೆವು. ಲೇಡಿ ಥ್ಯಾಕರ್ಸ್ ರವರು ಗಂಗಾಜಲದಲ್ಲಿ ನೆನೆಸಿ ಒಗೆದ ಸೀರೆಯನ್ನು ಕಳಿಸಿಕೊಟ್ಟಿದ್ದರು. ಆ ಸೀರೆಯನ್ನು ಈಗ ಉಡಿಸಿದ ಸೀರೆಯಮೇಲೆ ಹೊದಿಸಿದೆವು. ಸಂತೋಕ್ ಬೆನ್, ಬಾಪು ನೂತ ಖಾದಿಯ ದಾರದ ಲಡಿಯನ್ನು ಬಾ ರವರ ಕೈಗಳಿಗೆ ಬಳೆಯ ತರಹ ಅಲಂಕರಿಸಿದರು. ಕುತ್ತಿಗೆಗೆ ತುಳಸಿಹಾರವನ್ನು ಹಾಕಿ ಸಿಂಗರಿಸಿದರು. ಬಾರವರ ಮೃತದೇಹದ ಹಣೆ ಮತ್ತು ಕುತ್ತಿಗೆಗೆ ಶ್ರೀಗಂಧದ ಲೇಪವನ್ನು ಹಚ್ಚಿದರು.
ಮನು ಬೆನ್ ಹಾಗು ಕಾನು ಗಾಂಧಿಯವರುಗಳು ಬಾ ಮಲಗಿದ್ದ ಕೋಣೆಯನ್ನು ಗುಡಿಸಿ ಸ್ವಚ್ಛಗೊಳಿಸಿದರು. ಮೀರಾಬೆನ್ ಕೋಣೆಯ ಒಂದು ಭಾಗದಲ್ಲಿ ‘ದೀರ್ಘ ಚತುರ್ಸ್ರಾಕಾರದ ಆಕೃತಿ’ಯನ್ನು ಬಿಳಿಬಣ್ಣದಲ್ಲಿ ಬರೆದು ಬಾರ, ಮೃತದೇಹವನ್ನು ಅದರ ಮೇಲೆ ಇಡಿಸಿದರು. ಬಿಡಿಹೂಗಳು, ಹೂಗುಚ್ಛಗಳು, ಹೂವಿನ ಹಾರಗಳನ್ನು ದೇಹದಮೇಲೆ ಸಜಾಯಿಸಿ, ಕೂದಲಿಗೆ ಹೂಮುಡಿಸಿದರು. ತಲೆಯ ಸುತ್ತಲೂ ಹೂವಿನ ದಂಡೆಯನ್ನು ಸುತ್ತಿ, ಅಲಂಕಾರ ಮಾಡಿದರು. ನಿಶ್ಚಲವಾಗಿ ನಿದ್ದೆಹೋಗುತ್ತಿರುವ ಮಂದಹಾಸ, ಕಸ್ತೂರ್ ಬಾರವರ ಮುಖದಮೇಲೆ ಕಳೆಕಟ್ಟಿತ್ತು. ಮುಖದಲ್ಲಿ ಮೊದಲು ಕಾಣಿಸುತ್ತಿದ್ದ ಕಪ್ಪು ಗೆರೆಗಳು ಈಗ ಮರೆಯಾಗಿದ್ದವು. ನಾವುಗಳು ‘ಭಗವದ್ಗೀತಾ ಪಾರಾಯಣ’ ಮಾಡಲು ಕುಳಿತೆವು. ಗೀತೆಯ ೧೮ ಅಧ್ಯಾಯಗಳನ್ನು ಪಠಿಸಲು, ಸುಮಾರು ಒಂದೂವರೆ ಗಂಟೆ ಸಮಯ ಹಿಡಿಯಿತು. ಶಾಂತಿಕುಮಾರ್ ಭಾಯಿಯವರು ದಹನ ಕ್ರಿಯೆಗೆ ಶ್ರೀಗಂಧದ ಕಟ್ಟಿಗೆಯನ್ನು ವ್ಯವಸ್ಥೆಮಾಡಲು ಹೇಳುತ್ತಿದ್ದರು. ಗಾಂಧೀಜಿಯವರು ಆ ಮಾತಿನಕಡೆ ಗಮನ ಕೊಡಲಿಲ್ಲ. ಎಷ್ಟಾದರೂ ಕಸ್ತೂರ್ ಬಾ ಒಬ್ಬ ಬಡ ವ್ಯಕ್ತಿಯ ಹೆಂಡತಿಯಲ್ಲವೇ ? ಬಡವರಿಗೆ ಶ್ರೀಗಂಧದ ಕಟ್ಟಿಗೆ ಖರೀದಿಸಲು ಹಣವಾದರೂ ಎಲ್ಲಿಂದ ಬರಬೇಕು ? ಆಗಾಖಾನ್ ಪ್ಯಾಲೇಸಿನ ಬಂದಿಗೃಹದ Superintendent ಮಧ್ಯ ಬಾಯಿ ಹಾಕಿ, ನಾವು ಇಂತಹ ಕೆಲಸಗಳಿಗೆ ಬೇಕಾಗಬಹುದೆಂದು ಆಲೋಚಿಸಿ, ಹಿಂದೆಯೇ ಸ್ವಲ್ಪ ಶ್ರೀಗಂಧದ ಕಟ್ಟಿಗೆಯನ್ನು ದಾಸ್ತಾನು ಮಾಡಿದ್ದೆವು. ಸರಕಾರ ನೀವು ಉಪಯೋಗಿಸುವ ಯಾವುದೇ ಕಟ್ಟಿಗೆಯ ಬಗ್ಗೆ ಹಸ್ತಕ್ಷೇಪವೆತ್ತುವುದಿಲ್ಲ. ನೀವು ಆ ಶ್ರೀಗಂಧದ ಕಟ್ಟಿಗೆಯನ್ನು ಬಳಸಲು ಇಷ್ಟಪಟ್ಟರೆ ನಮ್ಮ ಕಡೆಯಿಂದ ಯಾವ ಆಪತ್ತಿಯೂ ಇಲ್ಲ, ಎಂದು ಹೇಳಿದರು. ಸ್ವಲ್ಪ ಹೊತ್ತಿನಮೇಲೆ ಸರಕಾರದ ಆದೇಶದ ಮೇಲೆ ಶ್ರೀಗಂಧದ ಕೊರಡುಗಳನ್ನು ಜಮಾಯಿಸಿ ದಾಸ್ತಾನುಮಾಡಿದ್ದ ವಿಷಯದ ನಿಜವಾದ ಗುಟ್ಟುಬಯಲಿಗೆ ಬಂತು. ಕಳೆದ ವರ್ಷ ಮಹಾತ್ಮಾ ಗಾಂಧಿಯವರು ದೀರ್ಘಕಾಲ ಉಪವಾಸ ಮಾಡಿದ್ದರಷ್ಟೇ ! ಆ ಸಮಯದಲ್ಲಿ ಒಂದುವೇಳೆ ಅವರೇನಾದರೂ ಪ್ರಾಣಬಿಟ್ಟರೆ, ಈ ಗಂಧದ ಕೊರಡುಗಳು ಅವರ ಮೃತದೇಹದ ದಹನ ಕಾರ್ಯಕ್ಕೆ ಉಪಯೋಗಕ್ಕೆ ಬರಲೆಂದು, ಅಧಿಕಾರಿಗಳು ಶ್ರಮ ವಹಿಸಿದ್ದರೆಂದು ತಿಳಿದು, ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದಾಯಿತು.
38
ಕಸ್ತೂರ್ ಬಾ ನಿಧನದ ಬಳಿಕ, ಐ. ಜಿ. ಪಿ.ಯವರು ಕಸ್ತೂರ್ ಬಾ ರವರ ಅಂತಿಮಕ್ರಿಯೆಗಳನ್ನು ಹೇಗೆಮಾಡಬೇಕು ಮತ್ತು ಮೃತದೇಹದ ದಹನ ಕ್ರಿಯೆಗೆ ಚಿತೆಯನ್ನು ಎಲ್ಲಿ ನಿರ್ಮಿಸಬೇಕು, ಎನ್ನುವ ವಿಷಯಗಳ ಬಗ್ಗೆ ಗಾಂಧೀಜಿಯವರ ಅಭಿಪ್ರಾಯವನ್ನು ಕೇಳಿದರು. ಏಕೆಂದರೆ ಕಾನೂನಿನ ಪ್ರಕಾರ, ಸರಕಾರಕ್ಕೆ ಈ ಎಲ್ಲಾ ವಿಷಯಗಳ ಬಗ್ಗೆ ಒಂದು ವರದಿ ಒಪ್ಪಿಸುವುದು ಅನಿವಾರ್ಯವಾಗಿತ್ತು.
Page 76
IGP (Inspector general of Prison) ‘ಇವುಗಳೆಲ್ಲದರ ಬಗ್ಗೆ ನಿಮ್ಮ ಕೊನೆಯ ಇಚ್ಛೆ ತಿಳಿಸಿ’, ಎಂದು ಬಾಪುರವರನ್ನು ಕೇಳಿದರು. ಬಾಪು ತಮ್ಮ ಆದ್ಯತೆಗಳನ್ನು ಸರ್ಕಾರದ ಮುಂದೆ ಪ್ರಸ್ತುತಪಡಿಸಿದ ವಿವರಗಳು ಕೆಳಗೆ ಕಂಡಂತಿವೆ.
೧. ಕಸ್ತೂರ್ ಬಾ ರವರ ಮೃತ ದೇಹವನ್ನು ಅವರ ಮಕ್ಕಳ ಮತ್ತು ನೆಂಟರ ಸುಪರ್ದಿಗೆ ಕೊಡಬೇಕು. ಅಂತ್ಯಕ್ರಿಯೆ ಸಾರ್ವಜನಿಕವಾಗಿ ಆದರೂ ಆಗಬಹುದು. ಸರ್ಕಾರ ಇದರಲ್ಲಿ ತಲೆಹಾಕಬಾರದು.
೨ ಮಹದೇವ್ ದೇಸಾಯಿಯವರ ತರಹ, ಆಗಾಖಾನ್ ಪ್ಯಾಲೇಸ್ ಬಂದೀಗೃಹದ ಆಂಗಣದಲ್ಲಿಯೇ ‘ಶವ ಸಂಸ್ಕಾರವಿಧಿ’ ಆಗತಕ್ಕದ್ದು. ಮಹಾತ್ಮಾ ಗಾಂಧಿಯವರ ಪರಿವಾರದವರು, ಹಾಗೂ ಎಲ್ಲ ಹಿತೈಷಿಗಳು, ಸ್ನೇಹಿತರಿಗೆ ಬಂಧು-ಬಾಂಧವರಿಗೆ ಆ ಸಮಯದಲ್ಲಿ ಬಂದು ಭಾಗವಹಿಸಲು ಸರಕಾರ ಅನುಮತಿ ಕೊಡಬೇಕು.
೩ ಸರಕಾರ ಒಂದುವೇಳೆ ಸ್ನೇಹಿತರನ್ನು ಒಳಗೆ ಬಿಡದೇಹೋದರೂ, ನೆಂಟರಿಷ್ಠರನ್ನಾದರೂ ಬಿಡಬೇಕು. ಹೊರಗಿನಿಂದ ಯಾರೂ ಬರದೇ ಇರಬಹುದು. ಆದರೆ ಆಗಾ ಖಾನ್ ಪ್ಯಾಲೇಸ್ ನಲ್ಲೇ ಬಂಧನದಲ್ಲಿರುವ ಕೈದಿಗಳೆಲ್ಲಾ ಬಂದು ಭಾಗವಹಿಸುತ್ತಾರೆ. ಅವರಿಗೆ ಭಾಗವಹಿಸಲು ಅನುಮತಿ ಕೊಡಲೇಬೇಕು. ಇಂತಹ ದುಃಖದ ಸಮಯದಲ್ಲಿ ಸರ್ಕಾರ ಎಲ್ಲವಿಧದ ನೆರವನ್ನು ಕೊಡಬೇಕು. ನಮ್ಮ ಕಾರ್ಯದಲ್ಲಿ ಕೈಹಿಡಿದು ಸಹಕರಿಸಬೇಕು.
೪. ಒಂದುವೇಳೆ ಸಾರ್ವಜನಿಕ ಶವಸಂಸ್ಕಾರವೆಂದು ಪರಿಗಣಿಸಲ್ಪಟ್ಟರೆ, ಯಾವ ಅಹಿತಕರ ಘಟನೆಗಳೂ ಆಗದಂತೆ ನಾನೂ ಹಾಗೂ ನನ್ನ ಮಕ್ಕಳು, ಜವಾಬ್ದಾರಿ ವಹಿಸುತ್ತೇವೆ. ಒಂದು ವೇಳೆ, ‘ಆಗಾಖಾನ್ ಪ್ಯಾಲೇಸ್ ಬಂದೀ ಗೃಹ’ದ ಹೊರಗೆ ಅಂತ್ಯಕ್ರಿಯೆ ನಡೆದರೆ, ತಾವು ಅದರಲ್ಲಿ ಭಾಗವಹಿಸುತ್ತೀರಾ ? ಎಂದು ಪ್ರಶ್ನಿಸಿದಾಗ ‘ಇಲ್ಲ’. ನನ್ನ ಮಕ್ಕಳು ಮತ್ತು ಸಂಬಂಧಿಗಳು ಅವನ್ನೆಲ್ಲ ನೋಡ್ಕೊಳ್ತಾರೆ ; ಸರದಿಯ ಪ್ರಕಾರ, ಎಲ್ಲರೂ ಮೃತ ಶರೀರವನ್ನು ನೋಡ್ಕೊಳ್ತೇವೆ. ಬಾ ಮೃತದೇಹದ ತಲೆಯ ಹತ್ತಿರ ಕುಳಿತ ಬಾಪು, ದಹನ ಕ್ರಿಯೆ ಮಾಡಲು ದೇಹವನ್ನು ತೆಗೆದುಕೊಂಡು ಹೋಗುವ ತನಕ ಅಲ್ಲಿಯೇ ಕುಳಿತಿದ್ದರು.
೨೩, ಫೆಬ್ರವರಿಯಂದು ಸ್ನೇಹಿತರು ಬಂದು ಬಾಂಧವರೆಲ್ಲರೂ ೭ ಗಂಟೆಯ ಹೊತ್ತಿಗೆ ಬರಲಾರಂಭಿಸಿದರು. ಒಟ್ಟು ೧೫೦ ಜನ ಸೇರಿದ್ದರು. ಮನು ಬೆನ್, ಮಶ್ರುವಾಲ, ಕಸ್ತೂರ್ಬಾ ರವರ ಮೃತ ಶರೀರಕ್ಕೆ ಆರತಿಬೆಳಗಿದರು. ಅಲ್ಲಿ ನೆರೆದಿದ್ದವರೆಲ್ಲ ನಮಸ್ಕಾರ ಮಾಡಿದರು. ಎಲ್ಲರೂ (ಕ್ರಿಶ್ಚಿಯನ್ನರು, ಮುಸಲ್ಮಾನರು,ಜೈನರು, ಪಾರ್ಸಿಕರು, ವಿದೇಶಿಯರು, ಸ್ನೇಹಿತರು) ಹೂಗುಚ್ಛಗಳು, ಹಾರಗಳು ಮತ್ತು ಪುಟ್ಟಿ, ಪುಟ್ಟಿ ಹೂಗಳನ್ನು ತಂದು ಸಮರ್ಪಿಸಿ, ನಮಿಸಿದರು.
Page 77
ಹಿಂದೆ, ಮಹದೇವ್ ದೇಸಾಯ್ ರವರ ಕರ್ಮಾಂತರ ವಿಧಿಗಳನ್ನು ಮಾಡಿಸಿದ ಬ್ರಾಹ್ಮಣ ಅರ್ಚಕರು ಆಗಮಿಸಿದರು. ದೇವದಾಸ್ ಭಾಯಿ ಮುಂದೆ ನಿಂತು, ತಮ್ಮ ತಾಯಿಯವರ ಕ್ರಿಯಾಕರ್ಮಗಳನ್ನು ಭಕ್ತಿ-ಶ್ರದ್ಧೆಗಳಿಂದ ನೆರವೇರಿದರು. (ನಾಲ್ಕು ಮಕ್ಕಳಲ್ಲಿ ಬಾರವರು ತಮ್ಮ ಕ್ರಿಯಾಕರ್ಮವನ್ನು ನೆರವೇರಿಸಲು ದೇವದಾಸ್ ಗಾಂಧಿಯವರಿಗೆ ಆದೇಶಿಸಿದ್ದರು) ಕಸ್ತೂರ್ ಬಾ ರವರ ಮೃತ ಶರೀರವನ್ನು ಚಿತೆಯಮೇಲೆ ಇಟ್ಟಮೇಲೆ, ಗಾಂಧೀಜಿಯವರು ಪ್ರಾರ್ಥನೆ ಸಲ್ಲಿಸಿದರು. (ಆ ಪ್ರಾರ್ಥನೆಯಲ್ಲಿ ಎಲ್ಲ ಧರ್ಮಗಳ, ಮತಗಳ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಪ್ರಾರ್ಥನೆಗಳ ತತ್ವಗಳೂ ಸೇರಿದ್ದವು. ಚಿತೆಗೆ ಅಗ್ನಿ ಸ್ಪರ್ಶವನ್ನು ಬಾ ರವರ ಮಗ ದೇವದಾಸ್ ಗಾಂಧಿ ಮಾಡಿದರು.
ಈ ಅಪರಕರ್ಮ ವಿಧಿಗಳಲ್ಲಿ ಸಹಾಯಮಾಡಲು ಶಾಂತಿಕುಮಾರ್ ಭಾಯಿ ಜತೆಯಲ್ಲಿದ್ದರು. ಗಡಿಬಿಡಿಯಲ್ಲಿ ಕಸ್ತೂರ್ ಬಾರವರ ಚಿತೆಯನ್ನು ತಯಾರು ಮಾಡುವಾಗ ಕೆಲವು ಮುಖ್ಯ ವಿಷಯಗಳನ್ನು ಗಮನಕ್ಕೆ ತೆಗೆದುಕೊಂಡಿರಲಿಲ್ಲ. ಶವದ ಕೆಳಗೆ ಜೋಡಿಸಿದ ಶ್ರೀಗಂಧದ ಕಟ್ಟಿಗೆಗಳು, ಸಾಕಷ್ಟು ಪ್ರಮಾಣದಲ್ಲಿರಲಿಲ್ಲ. ಶವಕ್ಕೆ ಬೆಂಕಿ ತಗುಲಿಸಿದನಂತರ ಹೊಸದಾಗಿ ಕಟ್ಟಿಗೆಗಳನ್ನು ಉರಿಯುತ್ತಿರುವ ಶವದ ಕೆಳಗೆ ಪೇರಿಸುವುದು ಬಹಳ ಕಷ್ಟವಾಗುತ್ತಿತ್ತು.
ಮೊದಲಿನಿಂದಲೂ ಹುರುಪಿನಿಂದ ಎಲ್ಲ ಕೆಲಸಗಳನ್ನು ಮುಂದೆಬಿದ್ದು ನೋಡಿಕೊಳ್ಳುತ್ತಿದ್ದ ಕಾನು ಗಾಂಧಿಯ ತಲೆಗೂದಲು, ಕಣ್ಣಿನ ರೆಪ್ಪೆಗಳು ಸುಟ್ಟಿದ್ದನ್ನು ಅವನು ಗಮನಕೊಡಲಿಲ್ಲ. ಕಾನು ಗಾಂಧಿಗೆ ಅವನ ಪ್ರೀತಿಯ ಕಸ್ತೂರ್ ಅಜ್ಜಿ, ತಾಯಿಗಿಂತ ಹೆಚ್ಚು ಪ್ರೀತಿಪಾತ್ರರಾಗಿದ್ದರು. ಕಸ್ತೂರ್ ಬಾ ರವರ ಚಿತೆ/ನಂತರ ಸಮಾಧಿ, ಮಹದೇವ್ ದೇಸಾಯ್ ರವರ ಸಮಾಧಿಯ ಪಕ್ಕದಲ್ಲೇ ಆಯೋಜಿಸಿದ್ದರು. ತಮ್ಮ ಮಗನಂತೆ ಮಹದೇವ್ ಭಾಯಿ, ಕಸ್ತೂರ್ಬಾ ಮತ್ತು ಗಾಂಧಿಯವರ ಜತೆಗೆ ನಡೆದುಕೊಳ್ಳುತ್ತಿದ್ದರು. ಪತಿ-ಪತ್ನಿಯರು ಹಾಗೂ ಅವರ ಪರಿವಾರದ ಸದಸ್ಯರೆಲ್ಲರೂ ಮಹದೇವ್ ದೇಸಾಯ್ ರವರನ್ನು ಬಹಳ ಪ್ರೀತಿ, ವಿಶ್ವಾಸ, ಗೌರವಗಳಿಂದ ನೋಡಿಕೊಳ್ಳುತ್ತಿದ್ದರು.
ಬಾ ರವರ ಅಂತ್ಯಕ್ರಿಯಾ ವಿಧಿಗಳಿಗೆ ಬಹಳ ಸಮಯ ಹಿಡಿಯಿತು. ೪ ಗಂಟೆಯವರೆವಿಗೂ ಬಾಪೂರವರ ಜತೆಗೆ ಬಹಳ ಜನ ಬಂಧು-ಬಾಂಧವರು-ಸ್ನೇಹಿತರು ಕಾದಿದ್ದರು. ಅಲ್ಲಿನ ಗಾಂಧೀಜಿಯವರ ಬಂಧುಗಳು, ಸ್ನೇಹಿತರು, ಹಿತೈಷಿಗಳು ಅವರಿಗೆ ಮನೆಗೆ ಹೋಗಿ ರೆಸ್ಟ್ ತೆಗೆದುಕೊಳ್ಳಲು ಬೇಡಿದರು. ಆದರೆ ಬಾಪೂರವರು, ‘೬೨ ವರ್ಷ ಸತತವಾಗಿ ನನ್ನ ಛಾಯೆಯಂತೆ ನಡೆದುಕೊಂಡ ಬಾಳ-ಗೆಳತಿಯನ್ನು ಬಿಟ್ಟು ಹೇಗೆ ಹೋಗಲಿ ‘? ಎಂದು ರೋದಿಸಿದರು. ‘ಖಂಡಿತವಾಗಿ ನನ್ನನ್ನು ಅವಳು ಎಂದಿಗೂ ಕ್ಷಮಿಸುವುದಿಲ್ಲ’, ಎಂದು ಹೇಳುವಾಗ, ಅವರ ಕ್ಷೀಣ-ನಗೆ ಮಾಸಿರಲಿಲ್ಲ. ಮೇಲ್ನೋಟಕ್ಕೆ ನಗಲು ಪ್ರಯತ್ನಿಸಿದರೂ, ಅವರ ನಡವಳಿಕೆಗಳಲ್ಲಿ ವ್ಯಸನದ ಛಾಯೆ ಎದ್ದು ಕಾಣುತ್ತಿತ್ತು. ಅವರೇನೋ ಮಹಾತ್ಮರೆಂದು ಜನರಿಂದ ಕರೆಸಿಕೊಂಡಿದ್ದರು. ಆದರೆ ಅವರೊಬ್ಬ ಸಾಮಾನ್ಯ ಮನುಷ್ಯರಲ್ಲವೇ ? ಎಲ್ಲರೂ ತೆರಳಿದ ಬಳಿಕ ನಾವು ಬಾಪೂರವರ ವೇದನೆ, ಸಂಕಟಗಳನ್ನು ಕಣ್ಣಾರೆ ನೋಡಿ ವ್ಯಥೆಪಟ್ಟೆವು. ರಾತ್ರಿ ಮಲಗಿದಾಗ, ‘ಬಾ ಇಲ್ಲದೆ ನಾನು ಹೇಗೆ ಜೀವಿಸಲಿ’ ? ಎಂದು ಮನಸ್ಸಿನೊಳಗೇ ಮರುಗುತ್ತ ತೊದಲುತ್ತಿದ್ದರು. ‘ಹೇಗೋ ನನ್ನ ಕಣ್ಣಿನ ಮುಂದೆಯೇ ಬಾ ಅವರು ಹೋಗಿಬಿಟ್ಟರು. ಇಲ್ಲದೆ ಹೋಗಿದ್ದರೆ, ನನ್ನ ನಂತರ ಅವರ ಗತಿಯೇನು ಎಂದು ನಾನು ಬಹಳವಾಗಿ ಮನಸ್ಸಿಗೆ ಹಚ್ಚಿಕೊಂಡಿದ್ದೆ ; ಯಾವಾಗಲೂ ಕಸ್ತೂರ್ ನನ್ನ ದೇಹದ ಭಾಗದ ಒಂದು ಪ್ರಮುಖ ಅಂಗವಾಗಿದ್ದರು. ಅವರ ಅಗಲಿಕೆಯಿಂದ ಆದ ನಷ್ಟವನ್ನು ತುಂಬಲು ಅಸಾಧ್ಯ’. ಹೀಗೆ ಮಾತಾಡುತ್ತಾ ಕೆಲವು ನಿಮಿಷ ಅವರು ಮಾತನ್ನು ನಿಲ್ಲಿಸಿದರು. ಬಳಿಕ ನನ್ನಕಡೆ ತಿರುಗಿ ನೋಡಿ, ‘ಸುಶೀಲ ನೋಡು, ಹೇಗೆ ಪರಮಾತ್ಮನು ನನ್ನ ನಂಬಿಕೆಗಳನ್ನು ಪರೀಕ್ಷೆ ಮಾಡಿದ’ ? ಎಂದು ಹೇಳಿದಾಗ, ಸುಶೀಲ ಏನನ್ನೂ ಹೇಳಲು ತಯಾರಿರಲಿಲ್ಲ.
“ನಾನೇನಾದರೂ ನಿನಗೆ ಪೆನಿಸಿಲಿನ್ ಕೊಡಲು ಸಮ್ಮತಿಸಿದ್ದಿದ್ದರೆ, ಬಾ ಗೆ ಗುಣ ಖಂಡಿತ ಆಗುತ್ತಿರಲಿಲ್ಲ”. “ನನ್ನ ಧ್ಯೇಯ, ನಂಬಿಕೆಗಳೆಲ್ಲಾ ನುಚ್ಚುನೂರಾಗುತ್ತಿತ್ತು”. “ನಾನು ದೇವದಾಸ್ ಗೂ ನನ್ನ ಮನಸ್ಸಿನ ನಿರ್ಧಾರಗಳ ದೃಢತೆಯ ಬಗ್ಗೆ ಅವನ ಮನವೊಪ್ಪಿಸಲು ಬಹಳವಾಗಿ ಕಷ್ಟಪಡಬೇಕಾಯಿತು”. ಕೊನೆಗೆ, ಹೇಗೋ ಪೆನಿಸಿಲಿನ್ ಪ್ರಯೋಗಮಾಡುವ ನಿರ್ಧಾರ ಕಳಚಿ ಬಿತ್ತು. ಬಾ ಹೋರಾಡಲು ಸಿದ್ಧರಾದರು”. “ನನ್ನ ತೊಡೆಯಮೇಲೆಯೇ ತಲೆಯಿಟ್ಟು ಮಲಗಿ, ಬಾ ಪ್ರಾಣತ್ಯಾಗ ಮಾಡಿದರು. ಇದಕ್ಕಿಂತ ಪುಣ್ಯ ನನಗೆಲ್ಲಿ ದೊರೆತೀತು” ?
Page 78
ರಾಮದಾಸ್ ಭಾಯಿ ಸಾಯಂಕಾಲದ ನಂತರ ಅಲ್ಲಿಗೆ ಬಂದಾಗ ಅವರ ತಾಯಿಯವರ ಚಿತೆ ಇನ್ನೂ ಉರಿಯುತ್ತಿತ್ತು. ಸರ್ಕಾರ ದೇವದಾಸ್ ಗಾಂಧಿ, ರಾಮದಾಸ್ ಗಾಂಧಿಯವರಿಗೆ, ಆಗಾಖಾನ್ ಪ್ಯಾಲೇಸಿನಲ್ಲಿ ಬಂದಿರಲು ೩ ದಿನದ ಒಪ್ಪಿಗೆ ಕೊಟ್ಟಿದ್ದರು. ನಾಲ್ಕನೆಯದಿನ ತಮ್ಮ ತಾಯಿಯವರ ಅಸ್ತಿ ಸಂಚಯಮಾಡಲು ಇಬ್ಬರೂ ಹೊರಟರು. ದಿನವೂ ನಾವೆಲ್ಲಾ ಕಸ್ತೂರ್ಬಾ ಹಾಗೂ, ಮಹದೇವ್ ದೇಸಾಯ್ ರವರ ಸಮಾಧಿಗಳಿಗೆ ಪುಷ್ಪಾಂಜಲಿ ಅರ್ಪಿಸುತ್ತಿದ್ದೆವು. ಭಗವದ್ಗೀತೆಯ ೧೨ ನೆಯ ಅಧ್ಯಾಯ ಪಾರಾಯಣವಾಯಿತು. ಗಾಂಧೀಜಿ ಮಹದೇವ್ ಸಮಾಧಿಗೆ ಹೂಗಳನ್ನು ಅರ್ಪಿಸುತ್ತಿದ್ದರು. ಬಾ ಸಮಾಧಿಗೆ ‘ಸ್ವಸ್ತಿಕಾ’ ಮಾದರಿಯಲ್ಲಿ ‘ಪುಷ್ಪ ನಮನ’ವಾಯಿತು. ಗಾಂಧೀಜಿಯವರು ‘ಮೂರ್ತಿಪೂಜೆ’ ಮಾಡುತ್ತಾರೆಯೇ ? ಎಂದು ಅಲ್ಲಿ ನೆರೆದಿದ್ದ ಕೆಲವರು ಪಿಸುಮಾತಾಡಿಕೊಳ್ಳುತ್ತಿದ್ದರು. ಇದಕ್ಕೆ ಬಾಪು ಪ್ರತಿಕ್ರಿಯಿಸುತ್ತಾ, ‘ನಾನು ದಿನವೂ ಮಾಡುವ ಪೂಜಾ ಸಮರ್ಪಣೆ, ದೇವರಪೂಜೆಯಲ್ಲದಿರಬಹುದು. ಆದರೆ, ಅದು ಕಸ್ತೂರ್ ಬಾ ಹಾಗೂ ಮಹದೇವ್ ದೇಸಾಯ್ ಭಾಯಿ ಸಲ್ಲಿಸಿದ ಅನುಪಮ ಸೇವೆಗಳನ್ನು ಗುರುತಿಸಿ ಸಲ್ಲಿಸಿದ ಶ್ರದ್ಧಾಂಜಲಿ ! ನಾವು ಮನಃಪೂರ್ತಿಯಾಗಿ ಮಾಡಿದ ಪ್ರಾರ್ಥನೆಗಳಿಂದ, ಅವರು ನಮಗೆ ಹಾಗೂ ರಾಷ್ಟ್ರಕ್ಕೆ ಸಲ್ಲಿಸಿದ ಒಳ್ಳೆಯ ಕಾರ್ಯಗಳ ಉದಾಹರಣೆಗಳೆಂದು, ಎಲ್ಲರಿಗೂ ಪ್ರೇರಣೆ ನೀಡುತ್ತವೆ.
ಡಾ. ಸುಶೀಲಾ ನಾಯರ್, ಸುಮಾರು ೨೧ ತಿಂಗಳ ಕಾಲ, ಮಹಾತ್ಮಾ ಗಾಂಧಿಯವರ ಪರಿವಾರದ ಜತೆಯಲ್ಲಿ ‘ಪುಣೆಯ ಆಗಾ ಖಾನ್ ಪ್ಯಾಲೇಸ್ ಗೃಹ ಬಂಧನ’ ದಲ್ಲಿದ್ದರು. ಆ ಸಮಯದ ನೆನಪುಗಳನ್ನು ತಮ್ಮ ದಿನಚರಿಯಲ್ಲಿ “ಬಾಪು ಕಿ ಕಾರ್ವಾ ಕಹಾನಿ” ಎಂಬ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಬರೆದರು. ಭಾರತ ಸರಕಾರದ ಶಿಕ್ಷಣ ಮಂತ್ರಾಲಯ, ಈ ಪುಸ್ತಕವನ್ನು ಅತ್ಯಂತ ಮಹತ್ವದ ಕೃತಿಯೆಂದು ಪರಿಗಣಿಸಿ, ‘ರಾಷ್ಟ್ರಪತಿಗಳ ಪ್ರಥಮ ಪ್ರಶಸ್ತಿ’ಗೆ ಆಯ್ಕೆಮಾಡಿರುತ್ತಾರೆ.
ನಾನು ಮಾಡಿದ ಟಿಪ್ಪಣಿಗಳು :
ಮಹಾತ್ಮಾ ಗಾಂಧಿ : (೧೮೬೯-೧೯೪೮)
ಕಸ್ತೂರ್ ಬಾ ಗಾಂಧಿ : (೧೮೬೯-೧೯೪೪)
ಮಹದೇವ್ ಹರಿಭಾಯ್ ದೇಸಾಯ್ : (೧, ಜನವರಿ, ೧೮೯೨-೧೫, ಆಗಸ್ಟ್,೧೯೪೨) ಭಾರತದ ಸ್ವಾತಂತ್ರ್ಯ ಹೋರಾಟಗಾರ, ವಿದ್ವಾಂಸ, ಬರಹಗಾರ, ಗಾಂಧಿಯವರ ಆಪ್ತ ಕಾರ್ಯದರ್ಶಿ, ಬಿ.ಎ; ಎಲ್. ಎಲ್. ಬಿ. ಪದವೀಧರ, ೧೯೧೫ ರಲ್ಲಿಯೇ ಗಾಂಧೀಜಿಯವರ ಪ್ರಭಾವಕ್ಕೊಳಗಾಗಿ, ತಮ್ಮ ವೃತ್ತಿಯನ್ನು ಬಿಟ್ಟು ಗಾಂಧೀಜಿವರ ಅನುಯಾಯಿಯಾದರು.
ಪ್ಯಾರೆ ಲಾಲ್ ನಾಯರ್/ನಯ್ಯರ್ : (೧೮೯೯-೧೯೮೨), ಪಂಜಾಬ್ ವಿಶ್ವವಿದ್ಯಾಲಯದ ಬಿ. ಎ ; ಪದವೀಧರ. ಎಂ. ಎ. ಪರೀಕ್ಷೆಯನ್ನು ಮುಗಿಸಲಿಲ್ಲ. ೧೯೨೦ ರಲ್ಲಿ ಗಾಂಧೀಜೀಯವರ ಅಸಹಕಾರ ಆಂದೋಲನದಲ್ಲಿ ಭಾಗಿಯಾಗಿದ್ದರು.
ಸುಶೀಲ ನಾಯರ್/ನಯ್ಯರ್ : (೧೯೧೪-೨೦೦೧) ಈಕೆಗೆ ಇಬ್ಬರು ಅಣ್ಣಂದಿರು ೧. ಪ್ಯಾರೇಲಾಲ್ ನಾಯರ್, ಇನ್ನೊಬ್ಬರ ಹೆಸರನ್ನು ಲೇಖನದಲ್ಲಿ ದಾಖಲಿಸಿಲ್ಲ. ಸುಶೀಲಾ ನಾಯರ್ ತಮ್ಮ ತಂದೆ ತಾಯಿಯರ ಹೆಸರುಗಳನ್ನೂ ಅವರ ಲೇಖನದಲ್ಲಿ ದಾಖಲಿಸಿಲ್ಲ. ಸುಶೀಲ ನಾಯರ್ ಲೋಕಸಭೆಗೆ ಪಾದಾರ್ಪಣೆ ಮಾಡಿದಾಗ ಸರ್ಕಾರದ ದಾಖಲಾತಿಯಲ್ಲಿ ಆಕೆಯ ತಂದೆ, ತಾಯಿಯವರ ಹೆಸರನ್ನು ಕಾಣಬಹುದು.
ಸರೋಜಿನಿ ನಾಯಿಡು : (೧೮೭೯-೧೯೪೯) ಬಾಪೂರವರ ಕಾರ್ಯಗಳಿಗೆ, ಸ್ಫೂರ್ತಿಯನ್ನು ಕೊಟ್ಟು ತಾವೂ ಬಾಪೂಜಿಯವರ ಚಳುವಳಿಗಳಲ್ಲಿ ಭಾಗವಹಿಸಿ, ಜೈಲುವಾಸವನ್ನೂ ಅನುಭವಿಸಿದವರು.
ಮನು ಬೆನ್ ಗಾಂಧಿ/ ಮೃದುಲಾ ಗಾಂಧಿ : (೧೯೨೭-೧೯೬೯) ಹರಿಲಾಲ್ ಗಾಂಧಿಯವರ ಮಗಳು
ದುರ್ಗಾ ಬೆನ್ : ಮಹದೇವ್ ದೇಸಾಯ್ ರವರ ಪತ್ನಿ, ಮಗ, ನಾರಾಯಣ್ ದೇಸಾಯ್
ಪ್ರಭಾವತಿ ನಾರಾಯಣ್ : ‘ಲೋಕನಾಯಕ್’ ಎಂದು ಹೆಸರಾಂತ ಜಯಪ್ರಕಾಶ್ ನಾರಾಯಣ್ ರವರ ಪತ್ನಿ. ಗಾಂಧೀತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮದುವೆಯಾದಮೇಲೂ ಆಶ್ರಮದಲ್ಲೇ ಇದ್ದರು. ಆಗ ಜಯಪ್ರಕಾಶ್ ನಾರಾಯಣ್ ಅಮೇರಿಕಾದಲ್ಲಿ ಉಚ್ಚ ಶಿಕ್ಷಣ ಪಡೆಯುತ್ತಿದ್ದರು.
ಮೀರಾ ಬೆನ್ : ಐರಿಷ್ ಮೂಲದ ಮಹಿಳೆ. ಮಹಾತ್ಮಾ ಗಾಂಧಿಯವರ ಅನುಯಾಯಿಯಾಗಿ ಕೆಲಸಮಾಡಿದರು.
ಕಾನು ಗಾಂಧಿ : (೧೯೧೭-೧೯೮೬) ಗುಜರಾತಿ ಭಾಷೆಯಲ್ಲಿ ಕಾನು, ಎಂದರೆ ‘ಕೃಷ್ಣ’ ಎಂದರ್ಥ. (ಮಹಾತ್ಮಾ ಗಾಂಧಿಯವರ ಪರಿವಾರದ ಫೋಟೋ ಗ್ರಾಫರ್) ಮಹಾತ್ಮಾ ಗಾಂಧಿಯವರ ಫೋಟೋಗಳನ್ನು ೧೯೩೮ ರಿಂದ ೧೯೪೮ ರ ವರೆಗೆ ಸತತವಾಗಿ ಕೆಲಸಮಾಡಿದರು. ಮಹಾತ್ಮಾ ಗಾಂಧಿಯವರ ಅಣ್ಣ ನಾರಾನ್ ದಾಸ್ ಗಾಂಧಿಯವರ ಮಗ. ಸಬರಮತಿ ಆಶ್ರಮದಲ್ಲಿ ಇದ್ದರು.
ಆಭಾ ಗಾಂಧಿ/ಆಭಾ ಚಟರ್ಜಿ : ಕಾನು ಗಾಂಧಿಯವರ ಪತ್ನಿ. (-೧೯೯೫)
ಕಾನು ಗಾಂಧಿ : (೧೯೨೮-೨೦೧೬) ಮಹಾತ್ಮಾ ಗಾಂಧಿಯವರ ಮೊಮ್ಮಗ. (ಡಾಕ್ಟರೇಟ್ ಪದವೀಧರ. ಅಮೇರಿಕಾದ ನಾಸಾ ಬಾಹ್ಯಾಕಾಶ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ದುಡಿದರು.
ಮಹಾತ್ಮಾ ಗಾಂಧೀಜಿಯವರ ಮಕ್ಕಳು :
ಹರಿಲಾಲ್ ಗಾಂಧಿ : (೨೩, ಆಗಸ್ಟ್, ೧೯೮೮-೧೮,ಜೂನ್, ೧೯೪೮)
೧೯೦೮-೧೧ ರ ಸಮಯದಲ್ಲಿ ಸತ್ಯಾಗ್ರಹದಲ್ಲಿ ಭಾಗವಹಿಸಿ, ಜೈಲಿನಲ್ಲಿ ಬಂಧಿತರಾಗಿದ್ದರು. ಇದರಿಂದ ಜನಪ್ರಿಯರಾಗಿ ಛೋಟಾ ಗಾಂಧಿಯೆಂದು ಹೆಸರಾದರು. ೧೯೦೬ ರಲ್ಲಿ ಗುಲಾಬ್ ಗಾಂಧಿಯವರನ್ನು ವಿವಾಹವಾದರು. ಹೆಣ್ಣುಮಕ್ಕಳು : ರಾಣಿ ಗಾಂಧಿ, ಮನು ಗಾಂಧಿ, ಗಂಡುಮಕ್ಕಳು : ಕಾಂತಿಲಾಲ್ ಗಾಂಧಿ, ರಾಸಿಕ್ ಲಾಲ್ ಗಾಂಧಿ, ಶಾಂತಿಲಾಲ್ ಗಾಂಧಿ. ತಮ್ಮ ೪೮ ನೆಯ ವಯಸ್ಸಿನಲ್ಲಿ ಅಂದರೆ, ೧೯೩೬ ರಲ್ಲಿ ‘ಅಬ್ದುಲ್ಲಾ’ ಎಂಬ ಹೆಸರಿನಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದರು. ಕಸ್ತೂರ್ ಬಾ ರವರು ತಮ್ಮ ಮಗನನ್ನು ಆರ್ಯ ಸಮಾಜಕ್ಕೆ ಕರೆದೊಯ್ದು ಹಿಂದೂ ಧರ್ಮಕ್ಕೆ ಪರಿವರ್ತಿಸಿದರು. ಆಗ ಅವರ ಹೆಸರು ‘ಹರಿಲಾಲ್’ ಎಂದು ಬದಲಾಯಿತು.
ಮಣಿಲಾಲ್ ಗಾಂಧಿ : (೨೮, ಅಕ್ಟೊಬರ್, ೧೮೯೨-೫, ಏಪ್ರಿಲ್, ೧೯೫೬)
ರಾಜಕೋಟ್ ನಲ್ಲಿ ಜನಿಸಿದರು. ೧೮೯೭ ರಲ್ಲಿ ಗಾಂಧೀಜಿ-ಬಾರ ಜತೆ ದಕ್ಷಿಣ ಆಫ್ರಿಕಾಕ್ಕೆ ಹೋದರು. ೧೯೦೬-೧೪ ರವರೆಗೆ ಅಲ್ಲಿನ ಫೋನಿಕ್ಸ್ ಫಾರ್ಮ್ ನಲ್ಲಿ ಕೆಲಸಮಾಡಿದರು. ತಂದೆಯವರು ಸ್ಥಾಪಿಸಿದ ‘ಇಂಡಿಯನ್ ಒಪಿನಿಯನ್’ /ಗುಜರಾತ್ ಇಂಗ್ಲೀಷ್ ಪತ್ರಿಕೆಯಲ್ಲಿ ಕೆಲಸಮಾಡುತ್ತಿದ್ದರು. ೧೯೨೦ ರಲ್ಲಿ ಸಂಪಾದಕರಾದರು. ೧೯೨೭ ರಲ್ಲಿ ಸುಶೀಲಾ ಮಶ್ರು ವಾಲರನ್ನು ಮದುವೆಯಾದರು (೧೯೦೭-೧೯೮೮) ಹೆಣ್ಣು ಮಕ್ಕಳು : ಸೀತಾ ಗಾಂಧಿ, ಇಲಗಾಂಧಿ, ಗಂಡುಮಗ : ಅರುಣ್ ಗಾಂಧಿ. ೧೯೩೦ ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು
ರಾಮದಾಸ್ ಗಾಂಧಿ : ೨, ಜನವರಿ, ೧೮೯೭-೧೪, ಏಪ್ರಿಲ್, ೧೯೬೯)
ಮೂರನೆಯ ಮಗ. ದಕ್ಷಿಣ ಆಫ್ರಿಕಾದಲ್ಲಿ ಜನಿಸಿದರು. ನಿರ್ಮಲರನ್ನು ಮದುವೆಯಾದರು. ಸುಮಿತ್ರಾ, ಕಾನು ಉಷಾ ಗಾಂಧಿ. ಮಹಾತ್ಮಾ ಗಾಂಧಿಯವರು ಹಂತಕನೊಬ್ಬನ ಗುಂಡಿಗೆ ಬಲಿಯಾಗಿ ಮರಣಹೊಂದಿದಾಗ ಅವರ ಅಂತಿಮ ಸಂಸ್ಕಾರ ಮಾಡಲು ರಾಮದಾಸ್ ಗಾಂಧಿ ದೆಹಲಿಯ ರಾಜಘಾಟ್ ಗೆ ತಮ್ಮ ದೇವದಾಸ್ ಗಾಂಧಿಯವರ ಜತೆ ಹೋಗಿ ನಿರ್ವಹಿಸಿದರು.
ದೇವದಾಸ್ ಗಾಂಧಿ (೨೨, ಮಾರ್ಚ್, ೧೯೦೦-೩, ಏಪ್ರಿಲ್, ೧೯೫೭)
ಗಾಂಧೀಜಿ-ಕಸ್ತೂರ್ ಬಾ ರವರ ಕೊನೆಯ ಮಗ. ದಕ್ಷಿಣ ಆಫ್ರಿಕಾದಲ್ಲಿ ಜನಿಸಿದರು. ಮದ್ರಾಸ್ ನಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಪ್ರಚಾರಕರಾಗಿ ಕೆಲಸಮಾಡಿದರು. ಚಕ್ರವರ್ತಿ ರಾಜಗೋಪಾಲಚಾರಿಯವರ ಮಗಳು ಲಕ್ಷ್ಮಿಯ ಜತೆ ೧೯೩೩ ರಲ್ಲಿ ವಿವಾಹವಾದರು. ಇವರಿಬ್ಬರ ವಯಸ್ಸಿನ ಅಂತರ ಹೆಚ್ಚಾಗಿತ್ತು. (೧೫-೨೮) ವಧೂ-ವರರು ೫ ವರ್ಷ ಕಾದು ಮದುವೆಯಾದರು. ಗಂಡುಮಕ್ಕಳು : ರಾಜಮೋಹನ್ ಗಾಂಧಿ, ಗೋಪಾಲಕೃಷ್ಣ ಗಾಂಧಿ, ರಾಮಚಂದ್ರ ಗಾಂಧಿ. ಮಗಳು : ತಾರಾ ಭಟ್ಟಾಚಾರ್ಯ.
ಮಗನ್ ಲಾಲ್ ಖುಶಾಲ್ ಚಂದ್ ಗಾಂಧಿ : ( ೧೮೮೩-೧೯೨೮) ಬಾಪೂರವರ ಚಿಕ್ಕಪ್ಪನ ಮೊಮ್ಮಗ. ಸಾಬರ್ಮತಿ ಆಶ್ರಮವನ್ನು ಸ್ಥಾಪಿಸಲು ಶ್ರಮಪಟ್ಟ ವ್ಯಕ್ತಿ. ದಕ್ಷಿಣ ಆಫ್ರಿಕಾದಲ್ಲಿ ಫಿನಿಕ್ಸ್ ಆಶ್ರಮವನ್ನು ಅವನೇ ಸ್ಥಾಪಿಸಲು ಕಾರಣನಾದನು. ಬಾಪುರವರಿಗೆ ‘ಸತ್ಯಾಗ್ರಹ’ ವೆಂಬ ಪದವನ್ನು ಸೂಚಿಸಿದ ಪ್ರಥಮ ವ್ಯಕ್ತಿ, ಮಗನ್ ಲಾಲ್ ಗಾಂಧಿ. ಬಾಪೂರವರು ಮಗನ್ ಲಾಲ್ ಗಾಂಧಿಯ ಎಲ್ಲಾ ವಿಶೇಷ ಕಾರ್ಯ ಕ್ಷಮತೆಗಳನ್ನು ಮೆಚ್ಚಿ ಆತನನ್ನು ಪ್ರೀತಿಯಿಂದ ‘ಗುರು’ ಎಂದು ಸಂಬೋಧಿಸುತ್ತಿದ್ದರು.
ಆಗಾಖಾನ್ ಪ್ಯಾಲೇಸ್ : ಈ ಅರಮನೆಯನ್ನು ೧೮೯೨ ರಲ್ಲಿ ನಿಜಾರಿ ಇಸ್ಮಾಯಿಲ್ ಮುಸಲ್ಮಾನ್, ಸುಲ್ತಾನ್ ಮೊಹಮ್ಮದ್ ಶಾ ಆಗಾಖಾನ್-೩ ನಿರ್ಮಿಸಿದರು. ಆ ಸಮಯದಲ್ಲಿ ಪುಣೆಯಲ್ಲಿ ಕ್ಷಾಮ ತಲೆದೋರಿತ್ತು. ಅಲ್ಲಿನ ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿ ಸಹಾಯ ಮಾಡಲು ಈ ಅರಮನೆಯ ನಿರ್ಮಾಣವಾಯಿತು. ಆಗಾಖಾನ್ ಇದನ್ನು ಮಹಾತ್ಮಾ ಗಾಂಧಿಯವರಿಗೆ ಬಳುವಳಿಯಾಗಿ ಕೊಟ್ಟರು. ಬ್ರಿಟಿಷರ ಸಮಯದಲ್ಲಿ ವಿ. ಐ ಪಿ. ಚಳುವಳಿಕಾರರಿಗೆ ಈ ಪ್ಯಾಲೇಸ್ ನಲ್ಲಿ ಗೃಹ ಬಂಧನದಲ್ಲಿ ಇಡಲಾಗುತ್ತಿತ್ತು. ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ “ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ ಆಂದೋಳನ” ವನ್ನು ಆಯೋಜಿಸಿದಮೇಲೆ ಸರ್ಕಾರ, ಗಾಂಧೀಜಿ ಮತ್ತು ಅವರ ಜೊತೆಯಲ್ಲಿದ್ದ ಕಾರ್ಯಕರ್ತರುಗಳನ್ನು ಗೃಹಬಂಧನದಲ್ಲಿ ಇಟ್ಟರು. ಗಾಂಧೀಜಿಯವರ ಆರೋಗ್ಯ ಚಿಂತೆಗೆ ಕಾರಣವಾಗಿತ್ತು. ಅವರು ಸಾಮಾನ್ಯ ಜೈಲಿನಲ್ಲಿ ಇದ್ದು ಮರಣಿಸುವುದು ಸರ್ಕಾರಕ್ಕೆ ಇಷ್ಟವಿರಲಿಲ್ಲ. ಗಾಂಧೀಜಿ ಕಸ್ತೂರ್ ಬಾ ತರಹದ ಹಿರಿಯ ಚಳುವಳಿಕಾರರಿಗೆ ಜೈಲಿನ ತರಹ ಗೃಹಬಂಧನಕ್ಕೆ ಬಳಸಿದ (ಒಂದು ಜೈಲಿನ ತರಹ) ಅರಮನೆ, ಆಗಾಖಾನ್ ಪ್ಯಾಲೇಸ್ ಆಗಿತ್ತು. ಇಲ್ಲಿ ಗಾಂಧೀಜಿ ಕಸ್ತೂರ್ ಬಾ ರ ಜತೆಗೆ, ಮಹದೇವ್ ದೇಸಾಯ್, ಪ್ಯಾರೇಲಾಲ್, ಸರೋಜಿನಿ ನಾಯಿಡು, ಮೀರಾಬೆನ್, ನಾರಾಯಣ್ ಸುಶೀಲಾ ನಾಯರ್, ಮನು ಬೆನ್, ಮೊದಲಾದವರನ್ನೂ ಬಂಧಿಸಲಾಗಿತ್ತು. ಸರೋಜಿನಿ ನಾಯಿಡು ಅಡುಗೆ ಮಾಡಿ ಎಲ್ಲರಿಗೂ ಬಡಿಸುತ್ತಿದ್ದರು. ಗಾಂಧೀಜಿಯವರು ಬಳಸುತ್ತಿದ್ದ ಚರಕ, ದರದ ಲಡಿಗಳು, ಅವರು ಬಳಸುತ್ತಿದ್ದ ಚಪ್ಪಲಿ, ಬೇರೆ ಸಾಮಾನುಗಳು, ಮೊಮ್ಮಗನ ಮದುವೆಗೆ ಮಾಡಿದ ಖಾದಿ ಹಾರ, ಮುಂತಾದವುಗಳನ್ನು ಹೇಗಿತ್ತೋ ಹಾಗೆಯೆ ಇಡಲಾಗಿದೆ. (ಕುರ್ಚಿ, ಟೇಬಲ್, ಹಾಸಿಗೆ ಬಟ್ಟಲುಗಳು, ಮಹದೇವ್ ದೇಸಾಯ್ ಹಾಗೂ ಕಸ್ತೂರ್ ಬಾ ಮರಣಿಸಿದ ಜಾಗ, ಇತ್ಯಾದಿ) ಪತ್ನಿಯ, ಹಾಗೂ ಪ್ರಿಯ ಮಿತ್ರ ಮಹದೇವ್ ದೇಸಾಯ್ ಸಮಾಧಿಯನ್ನು ಗಾಂಧೀಜಿಯವರೇ ಮುಂದೆ ನಿಂತು ಕಟ್ಟಿಸಿದರು. ಮೊದಲು ಇಟ್ಟಿಗೆ ಮಣ್ಣಿನಿಂದ ಕಟ್ಟಿದ ಸಮಾಧಿಯನ್ನು ಆಗಾಖಾನ್ ರವರು ಬಂದಾಗ, ಅಮೃತ ಶಿಲೆಯಲ್ಲಿ ಕಟ್ಟಿಸಿಕೊಟ್ಟರು.
ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ ಆಂದೋಳನ” : ೧೮೫೭ ರಲ್ಲಿ ಜರುಗಿದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ರಾಷ್ಟ್ರದಾದ್ಯಂತ ಜರುಗಿದ ‘ಕ್ವಿಟ್ ಇಂಡಿಯಾ ಚಳುವಳಿ’ ಅತ್ಯಂತ ಬಿರುಸಿನ ಚಳುವಳಿಯಾಗಿತ್ತೆಂದು ಆಸಮಯದಲ್ಲಿ ಭಾರತದ ಬ್ರಿಟಿಷ್ ವೈಸ್ ರಾಯ್ ಆಗಿದ್ದ, ‘ಲಾರ್ಡ್ ಲಿನ್ಲಿತ್ಗೊ’, ಅಭಿಪ್ರಾಯ ಪಡುತ್ತಾರೆ. ‘ಪುಣೆಯ ಆಗಾ ಖಾನ್ ಪ್ಯಾಲೇಸ್ ಜೈಲಿ’ನಲ್ಲಿ ೨೧ ತಿಂಗಳ ಗೃಹ ಬಂಧನದನಂತರ (೮, ಆಗಸ್ಟ್, ೧೯೪೨) ಮಹಾತ್ಮಾ ಗಾಂಧಿ ಹಾಗೂ ಅವರ ಅನುಯಾಯಿಗಳನ್ನು ೪ ಮೇ, ೧೯೪೪ ರಲ್ಲಿ ಬ್ರಿಟಿಷ್ ಸರಕಾರ ಬಿಡುಗಡೆ ಮಾಡುತ್ತದೆ. ‘ಕ್ವಿಟ್ ಇಂಡಿಯಾ ಆಂದೋಳನ’, ಭಾರತೀಯರಿಗೆ ತಮ್ಮ ದೇಶದಮೇಲೆ ಪ್ರೀತಿ, ಗೌರವಗಳನ್ನು ಹೆಚ್ಚಾಗಿಸಿದ್ದಲ್ಲದೇ, ರಾಷ್ಟ್ರಕ್ಕಾಗಿ ಪ್ರಾಣವನ್ನೂ ತ್ಯಾಗಮಾಡುವ ಇಚ್ಛೆಯನ್ನು ಜಾಗೃತಗೊಳಿಸಿತು. ಇದು ರಾಷ್ಟ್ರವ್ಯಾಪಿ ಚಳುವಳಿಯಾಗಿತ್ತೆಂಬುದು ಪ್ರಮುಖ ಸಂಗತಿ. ಎಲ್ಲಕ್ಕಿಂತ ಮಿಗಿಲಾಗಿ, ರಾಷ್ಟ್ರದ ಮೇರು ನಾಯಕರುಗಳ ಅನುಪಸ್ಥಿತಿಯಲ್ಲಿ ರಾಷ್ಟ್ರದ ಜಾಗರೂಕ, ಜವಾಬ್ದಾರಿಯುತ ನಾಗರಿಕರೇ ಈ ಆಂದೋಳನವನ್ನು ನಡೆಸಲು ಮುಂದಾಗಿ, ಬ್ರಿಟಿಷ್ ಸಾಮ್ರಾಜ್ಯವನ್ನು ನಡುಗಿಸಿದರು. (ಮಹಾತ್ಮಾ ಗಾಂಧೀಜಿಯವರೂ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರುಗಳು ಭಾರತದ ಬೇರೆ ಬೇರೆ ಜೈಲುಗಳಲ್ಲಿ ಬಂಧಿಸಲ್ಪಟ್ಟಿದ್ದರು)
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ
ಕರ್ಪೂರಿ ಠಾಕೂರ್