ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪರ್ವತಗಳನ್ನು ದಾಟುತ್ತಾ…!

ವಲಸೆ ಹಕ್ಕಿಗಳ ಬಗ್ಗೆ ಅದ್ಭುತ ವಾಗಿ ಕಥೆ ಕಟ್ಟಿ ಕೊಡುವ ಪುಟ್ಟಾರಾಧ್ಯ ಅವರು ಹೆಬ್ಬಾತುಗಳ ಬಗ್ಗೆ ಬರೆದು ನಮ್ಮನ್ನು ಅಚ್ಚರಿಯ ಪಕ್ಷಿ ಲೋಕಕ್ಕೆ ಕೊಂಡೊಯ್ಯುವ ಪರಿಯನ್ನು ಓದಿ ಆನಂದಿಸಿ..

ಭಾಗ-೧

ನಿನ್ನೆಯೆಲ್ಲ ಮೈಸೂರಿನ ಸುತ್ತಮುತ್ತ ಹದಿನಾರು ಕೆರೆಯಿಂದ ಹಿಡಿದು ಸಾಲು ಸಾಲು ಕೆರೆಗಳಿಗೆ ಅಡ್ಡಾಡುತ್ತ ಭೂಮಿಯಲ್ಲಿ ಬದುಕಿ ಬಾಳುತ್ತಿರುವ ಅಸಂಖ್ಯಾತ ಜೀವಿಗಳಲ್ಲಿ ಒಂದಾದ ವಿಶೇಷ, ವಿಸ್ಮಯ ಪಕ್ಷಿ ಹೆಬ್ಬಾತುವನ್ನ ಕಂಡು ಬೆಂಗಳೂರಿಗೆ ವಿಶೇಷ ಮನೋಭಾವದಿಂದ ವಾಪಸಾಗಿದ್ದೆ. ಬೆಂಗಳೂರಿನಲ್ಲಿ ಆಗಲೇ ಬೇಸಿಗೆ ಶುರುವಾಗಿದೆ ಎಂದು ಮಾತನಾಡುತ್ತಾ ಮಲಗಿದವನಿಗೆ ಮಧ್ಯರಾತ್ರಿ ಚಳಿಯಾಗಲು ಶುರುವಾಗಿತ್ತು. ಚಳಿ ತಡೆಯಲಾಗದೆ ಎದ್ದು ಕಿಟಕಿಯಿಂದ ಹೊರ ನೋಡಿದೆ. ಹೊರಗೆ ಸಂಪೂರ್ಣ ಕತ್ತಲು ಮತ್ತು ಅಸಾಧ್ಯ ನಿಶ್ಯಬ್ದ ಕಂಡು ಬೆರಗಾಗಿ ಪರಿಸ್ಥಿತಿ ಅರ್ಥವಾಗದೆ ಪರದಾಡುತ್ತಿದ್ದವನಿಗೆ ದೂರದಲ್ಲಿ ಹೆಬ್ಬಾತುಗಳ ಸದ್ದು ಕೇಳಲು ಶುರುವಾಯಿತು. ಪಕ್ಕದಲ್ಲಿಯೇ ಇದ್ದ ಟಾರ್ಚ್ ಹೊತ್ತಿಸಿ ಬಾಗಿಲನ್ನು ತಳ್ಳಿಕೊಂಡು ಹೊರ ಹೋದರೆ ಸುತ್ತಲೂ ಹಿಮಗಡ್ಡೆಗಳು!. ಆಶ್ಚರ್ಯದ ನಡುವೆ ಬಾತುಗಳ ಸದ್ದು ಜೋರಾಗಲು ಶುರುವಾಯಿತು. ನಿಂತಿದ್ದವನು ಆಕಾಶದ ಕಡೆಗೆ ಟಾರ್ಚ್ ಬೆಳಕನ್ನು ಹಾಕಿ ಗಮನಿಸಲು ಶುರುವಾದರೆ ಸಾವಿರಾರು ಪಕ್ಷಿಗಳ ಹಿಂಡೊಂದು ತಲೆ ಮೇಲೆಯೇ ಹಾರಿ ಹೋಗತೊಡಗಿತು. ಬಲ ಜೇಬಿನಲ್ಲಿದ್ದ ಮೊಬೈಲ್ ಅನ್ನು ತಡಕಿ ನೋಡಿದರೆ ಸ್ಕ್ರೀನ್ ಮೇಲೆ 8463 mtr, Mount Makalu ಎಂದು ತೋರಿಸುತ್ತಿತ್ತು. ಹಾರುತ್ತಿದ್ದ ಪಕ್ಷಿಯ ಪರಿಚಯ ಇದ್ದುದರಿಂದ ಒಮ್ಮೆಲೇ ಗುರುತಿಸಿದೆ. ಅದು ಪಟ್ಟಿ ತಲೆಯ ಹೆಬ್ಬಾತುವಿನ ಹಿಂಡು(Bar headed Goose) . ಹಕ್ಕಿಗಳ ಹಿಂಡು ಇನ್ನೂ ಹಾರುತ್ತಿದೆ,ಅವುಗಳ ಸದ್ದು ಒಂದೇ ಸಮನೆ ಕೇಳುತ್ತಿದೆ ನಾನೆಲ್ಲಿದ್ದೇನೆ ಎಂದು ಅರ್ಥವಾಗದೆ ಹುಡುಕಲು ಮುಂದೆ ಹೋಗೋಣ ಎಂದು ಹೆಜ್ಜೆಯೊಂದಿರಿಸಿದೆನಷ್ಟೇ ಬೆಳಗಿನ ಅಲಾರಂ ಬಡಿದುಕೊಳ್ಳಲು ಶುರುವಾಯಿತು. ಹಿಂದಿನ ದಿನ ಪಕ್ಷಿ ಕಂಡು ಮನೆಗೆ ವಾಪಸಾಗುತ್ತ ಬರುವಾಗ ಅದರ ಬಗ್ಗೆ ಓದಿದ ವಿಷಯಗಳನ್ನು ಕಲಸಿದ ನನ್ನ ಮೆದುಳು , ಕನಸೊಂದನ್ನು ಕಟ್ಟಿ ನಾನು ಮಲಗಿದ್ದ ಕೋಣೆಯ ಸಮೇತ ಎತ್ತಿಕೊಂಡು ಹೋಗಿ ಹಿಮಾಲಯದ ತುದಿಗೆ ಎಸೆದು ಬಿಟ್ಟಿತ್ತು. ಅಲರಾಮಿನ ಕೂಗಿಗೆ ಎಚ್ಚರವಾಗಿ ನಿದ್ದೆಯಿಂದ ಎದ್ದು ಹೊರನಡೆದೆ.

ಪಕ್ಷಿ ಲೋಕದ, ವಿಜ್ಞಾನ ಲೋಕದ ವಿಸ್ಮಯ ಈ ಹೆಬ್ಬಾತು. ಎರಡು ತಿಂಗಳಲ್ಲಿ ಹತ್ತಿರತ್ತಿರ ಐದು ಸಾವಿರ ಕಿಲೋಮೀಟರ್ ವರೆಗೂ ಹಾರಿ ವಲಸೆ ಹೋಗುವ ಇವುಗಳು ದಾಟುವುದು ವಿಶ್ವದ ಅತೀ ಎತ್ತರದ ಪರ್ವತ ಶ್ರೇಣಿ ಹಿಮಾಲಯ ಪರ್ವತವನ್ನು. ಒಮ್ಮೆ ವಲಸೆ ಶುರು ಮಾಡಿದರೆ ಅಲ್ಲಲ್ಲಿ ನಿಂತು ಸಮಯ ತೆಗೆದುಕೊಂಡು ಪಯಣ ಮಾಡುವ ಇವುಗಳು ಹಿಮಾಲಯ ತಲುಪಿ ಒಂದು ಸರಿಹೊತ್ತಲ್ಲಿ ಹಾರಲು ಶುರು ಮಾಡಿದರೆ ಒಂದೇ ನೆಗೆತಕ್ಕೆ ಮಧ್ಯೆ ಎಲ್ಲಿಯೂ ನಿಲ್ಲದೆ ಜೋರಾಗಿ ರೆಕ್ಕೆ ಬಡಿಯುತ್ತಾ ಎಂಟು ತಾಸಿನಲ್ಲಿ ಭಾರತದ ಈ ಕಡೆಯಿಂದ ಹಿಮಾಲಯ ಪರ್ವತ ದಾಟಿ ಮಂಗೋಲಿಯಾ ಕಡೆಗೆ ಹಾರಿ ಬಿಡುವ ಈ ಪಕ್ಷಿ ವಿಜ್ಞಾನ ಲೋಕದಲ್ಲಿ ಸಂಚಲನ ಮೂಡಿಸಿರುವುದು ನಿಜ. ಅತೀ ಎತ್ತರದಲ್ಲಿ ಅಂದರೆ ಭೂಮಿಯಿಂದ ಒಮ್ಮೊಮ್ಮೆ 27000 ಅಡಿ ಎತ್ತರದಲ್ಲಿ ಹಾರುತ್ತಾ ಸಾಗುವುದು ವಿಸ್ಮಯವಲ್ಲದೆ ಮತ್ತೇನು? ಹಿಮಾಲಯದ ಎತ್ತರಗಳಲ್ಲಿ ಉಸಿರಾಟದ ತೊಂದರೆ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ. ಎತ್ತರಕ್ಕೆ ಹೋದಂತೆ ಆಮ್ಲಜನಕ ಕಡಿಮೆಯಾಗುತ್ತಾ ಹೃದಯ ಬಡಿತ ಹೆಚ್ಚಾಗುತ್ತಾ ಆರೋಗ್ಯ ತಪ್ಪಿ ಮನುಷ್ಯ ಸಾವನ್ನಪ್ಪಿರುವುದು ಕೇಳಿದ್ದೇವೆ ಕೂಡ. ಮನುಷ್ಯನಾದರೂ ಪರ್ವತ ಏರಬೇಕಾದರೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ನಂತರವೇ ಮೇಲೇರಿ ಬದುಕಿ ಬರಲು ಸಾಧ್ಯ. ಇದನ್ನು ತಿಳಿಯಲು Acclimatization ಎಂಬ ವಿಷಯದ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಆದರೆ ಈ ಪಕ್ಷಿಗೆ ಇದ್ಯಾವುದೂ ಅಗತ್ಯ ಇಲ್ಲ ಎಂಬ ವಿಷಯ ವಿಜ್ಞಾನಿಗಳಿಗೆ ಇದೊಂದು Biological mystery. ಹಾಗಾಗಿ ಇದರ ಬಗ್ಗೆ ಇನ್ನೂ ಹೆಚ್ಚಿನದನ್ನು ತಿಳಿಯಲು ಮಾನವರಿಗೆ ಉಸಿರಾಟದ ತೊಂದರೆಯಿಂದ ಬರುವ ಕಾಯಿಲೆಗೆ ಸಹಾಯಕವಾದ ಮಾಹಿತಿಗೆ ಈ ಪಕ್ಷಿಯನ್ನು ಅಧ್ಯಯನ ಮಾಡುತ್ತಲೇ ಇರುವುದು ಒಂದು ಸೋಜಿಗ.

ಚಳಿಗಾಲದಲ್ಲಿ ಇಲ್ಲಿಗೆ ಸಾವಿರಾರು ಪಕ್ಷಿಗಳ ಹಿಂಡು ಕಟ್ಟಿಕೊಂಡು ಬಂದು ಹೊಲಗಳಲ್ಲಿ ಸಿಗುವ ಕಾಳು ಕಡ್ಡಿಗಳನ್ನು (ಭತ್ತ, ಗೋದಿ, ನೀರಿನ ಸಸ್ಯಗಳು) ತಿಂದು ಬದುಕು ನಡೆಸುವ ಇವುಗಳು ಬೇಸಿಗೆಗೆ ಮತ್ತೆ ಮಧ್ಯ ಏಷ್ಯಾ ಭಾಗದ ಕೆರೆಗಳಿಗೆ ಮರಿ ಮಾಡಲು ಮತ್ತೊಮ್ಮೆ ಹಿಮಾಲಯ ಪರ್ವತ ದಾಟಿ ಹೋಗಿ ಬಿಡುತ್ತವೆ. ಅತೀ ಎತ್ತರದಲ್ಲಿ ಹಾರುವ ಪಕ್ಷಿ ಯಾವುದೆಂದು ಕೇಳಿದರೆ ನಿಸ್ಸಂಕೋಚವಾಗಿ ತಲೆ ಪಟ್ಟಿ ಹೆಬ್ಬಾತು ಎಂದರಾಯ್ತು. ಹದಿನಾರು ಕೆರೆಗೆ ಬೆಳಿಗ್ಗೆ ಎಂಟೂವರೆ ಘಂಟೆಗೆ ತಲುಪಿ ಇವುಗಳನ್ನು ಕಾಣಲು ಬಯಸಿದ್ದವರಿಗೆ ನಿರಾಶೆ ಮೂಡಿತ್ತು , ಕೆರೆಯ ಬೇರೆ ಬದಿಗೆ ಹೋಗೋಣ ಎಂದು ತೀರ್ಮಾನಿಸಿ ಹೊರಡಬೇಕು ಒಮ್ಮೆಲೇ ಸಾವಿರಾರು ಪಕ್ಷಿ ಗುಂಪು ಗುಂಪಾಗಿ ಕೆರೆಯ ಕಡೆಗೆ ಹಾರಿ ಬರತೊಡಗಿದವು. ಇವು ಶಾಂತವಾಗಿ ಹಾರುವುದಿಲ್ಲ , ಜೋರಾಗಿ ಕೂಗುತ್ತಲೇ ಹಾರುತ್ತವೆ ಆ ಕೂಗನ್ನು Goose Honk ಎಂದೇ ಕರೆಯುತ್ತಾರೆ. ಅಂದರೆ ಮುಂಜಾನೆ ಅಕ್ಕ ಪಕ್ಕದ ಹೊಲಗಳಲ್ಲಿ ಹಿಂಡು ಹಿಂಡಾಗಿ ಮೇಯ್ದು ಇನ್ನೇನು ಸೂರ್ಯನ ತಾಪ ಹೆಚ್ಚುತ್ತಲೇ ಕೆರೆಗೆ ಹಾರಿ ಗುಂಪು ಗುಂಪಾಗಿ ನಿಂತು ಕೂತು ತೂಕಡಿಸುತ್ತಾ ಸಮಯ ಕಳೆಯುತ್ತವೆ.

ಎರಡು ಘಂಟೆ ಸಮಯ ಅಲ್ಲಿಯೇ ಕಳೆದು ಹಲವು ಫೋಟೋಗಳನ್ನು ತೆಗೆಯುತ್ತಾ ಗಮನಿಸುವಾಗ ಅವುಗಳ ಒಂದು ವಿಷಯ ಆರ್ಥ ಆಗಲಿಲ್ಲ ಅದೆಂದರೆ ಹತ್ತು ನಿಮಿಷಕ್ಕೊಮ್ಮೆ ನಾಲ್ಕೈದು ಹಕ್ಕಿ ಗುಂಪು ಹಾರಿದ್ದೆ ಕೆರೆಯ ಸುತ್ತಲೂ ಒಂದು ಗಸ್ತು ಹೊಡೆದು ಹೋಗಿ ಕೊರುತ್ತಿದ್ದುದು. ಮಿಕ್ಕ ಹಕ್ಕಿಗಳೆಲ್ಲ ತೂಕಡಿಸುತ್ತಾ ಮತ್ತೆ ಕೆಲವು ನಿಧಾನವಾಗಿ ಈಜುತ್ತಿದ್ದರೆ ಕೆಲವು ಹಕ್ಕಿಗಳು ಆಗಾಗ್ಗೆ ಗಸ್ತು ಹೊಡೆಯುತ್ತಿದ್ದ ಕಾರಣ ಏನಿರಬಹುದು ಎಂದು ಯೋಚಿಸಿತ್ತಾ (ಕಾವಲು?) ಹೊರಟದ್ದು ಮುಂದೆ ಮತ್ತೊಂದು ಸಣ್ಣ ಗುಡ್ಡ ಹತ್ತಲು. ಹದಿನಾರು ಕೆರೆ ಬಿಟ್ಟು ಆಯರಹಳ್ಳಿ ದಾಟಿ ಮುಂದೆ ಹೋದರೆ ದಾರಿಯಲ್ಲೇ ಸಣ್ಣ ಗುಡ್ಡವಿದೆ. ಗುಡ್ಡ ಹತ್ತಿ ಮೇಲೆ ನಿಂತು ನೋಡಿದರೆ ಕಾಡು ನಿಧಾನವಾಗಿ ಖಾಲಿಯಾಗುತ್ತಾ ಹೊಸ ಹೊಸ ಇಂಡಸ್ಟ್ರಿಯಲ್ ಲೇಔಟುಗಳು ಹುಟ್ಟಿಕೊಂಡಿರುವುದು ಕಾಣುತ್ತದೆ. ಅಲ್ಲಿಗೆ ಜನರು ಬರುವುದು ಕಡಿಮೆಯೇ ಆದರೂ ಬಂದಾಗ ನಾಯಿ ಉಚ್ಚೆ ಹೊಯ್ದು ದಾರಿ ಮಾರ್ಕ್ ಮಾಡುವಂತೆ ಈ ಮನುಷ್ಯರು ಎಲ್ಲಿ ಬೇಕಲ್ಲಿ ಪ್ಲಾಸ್ಟಿಕ್ ಬಾಟಲಿ ಎಸೆದು ಮಾರ್ಕ್ ಮಾಡಿ ಹೋಗುತ್ತಾರೆ ಎಂದು ಕಾಣುತ್ತದೆ, ಅವುಗಳನ್ನು ಆಯ್ದು ಕೊಂಡು ಬಂದಾಗ ಮೂಟೆ ತುಂಬಿತ್ತು. ಅದನ್ನೆಲ್ಲ ಗಾಡಿಗೆ ತುಂಬಿಸಿಕೊಂಡು ಬೆಂಗಳೂರಿಗೆ ವಾಪಸಾಗುತ್ತ ಈ ಪಟ್ಟೆ ತಲೆಯ ಹೆಬ್ಬಾತಿನ ಬಗ್ಗೆ ಓದಲು ಶುರು ಮಾಡಿದ್ದಕ್ಕೆ ಪುಕ್ಸಟ್ಟೆ ಟಿಕೆಟಿನಲ್ಲಿ ಹಿಮಾಲಯ ತಿರುಗಿ ಬಂದಂತಾಯ್ತು.

ನಿನ್ನೆ ಓದಿದ ಈ ಕೆಳಗಿನ ಸಾಲುಗಳು ಜೊತೆಗೆ ಹದಿನಾರು ಕೆರೆಯಲ್ಲಿ ಕಂಡ ಹೆಬ್ಬಾತುವಿನ ದೃಶ್ಯಗಳು ಮತ್ತು ಅಲ್ಲಿ ಹಿಂಡು ಹಿಂಡಾಗಿ Goose Honk ಮಾಡುತ್ತಾ ಬಂದಾಗ ಕೇಳಿಸಿದ ಸದ್ದು ಎಲ್ಲ ಸೇರಿ ನಾನು ಕಂಡ ಕನಸಿಗೆ ದಾರಿ ಎಂದರೆ ಅತಿಶೋಕ್ತಿಯಾಗಲಾರದು. Lawrence Swan ಅವರು ನಿಜವಾಗಿಯೂ ಹಿಮಾಲಯದಲ್ಲಿ ಅವುಗಳನ್ನು ಕಂಡರೆ ಅವರ ಅನುಭವವನ್ನು ನನ್ನ ಕನಸಿನಲ್ಲಿ ಕಂಡಿದ್ದೆ.

“On one cold and still night in early April, I stood beside the Barun glacier [near Mount Makalu, the fifth highest mountain in the world at 8,463 m above sea level] . . . Coming from the south, the distant hum became a call. Then, as if from the stars above me, I heard the honking of bar-headed geese.”–

writes Lawrence Swan, a naturalist who had joined Edmund Hillary for a expedition in Himalaya.
ಪಟ್ಟೆ ತಲೆಯ ಹೆಬ್ಬಾತು – Bar Headed Goose

ಮುಂದುವರೆದ ಭಾಗ-2 ರಲ್ಲಿ…

https://nasuku.com/staging/9334/%e0%b2%ad%e0%b2%b5%e0%b2%bf%e0%b2%b7%e0%b3%8d%e0%b2%af-%e0%b2%a8%e0%b3%81%e0%b2%a1%e0%b2%bf%e0%b2%a4%e0%b3%88%e0%b2%a4%e0%b3%86-%e0%b2%b9%e0%b2%95%e0%b3%8d%e0%b2%95%e0%b2%bf-%e0%b2%b5%e0%b2%b2/