- ನುಬ್ರಾಗೆ ನುಬ್ರಾ ಮಾತ್ರ ಸಾಟಿ - ಜೂನ್ 26, 2022
- ಲೈ ಹರೋಬಾ ಎಂಬ ಪವಿತ್ರ ನೃತ್ಯದ ನೌಬತ್ತುಗಳು.. - ಜೂನ್ 12, 2022
- ಒಲ್ಲದ ಓಟವೇ ಆಟವಾದ ಸಾಗೋಲ್ ಕಂಜೈ.. - ಮೇ 22, 2022
ಒಬ್ಬ ಕೇರಿ ಹುಡುಗ ಬೆಳಿತಿದಾನೆ ಅಂದರೆ ಕಾಲೆಳೆಯಬಾರದು. ಈ ಅಪ್ಪಣ್ಣ ಮಾವ ಎಷ್ಟು ವರ್ಷದಿಂದ ಸಂಘದ ಬಿಲ್ಲು ಕಟ್ಟಿದಾನೆ..? ಎಷ್ಟು ಸಲ ಕರೆದೊಯ್ದ ಜನರಿಗೆ ಸರ್ಯಾಗಿ ದುಡ್ಡು ಕೊಟ್ಟಿದಾನೆ ಕೇಳಿ..? ಏನಿದ್ದರೂ ತನಗಿಂತ ಬಡ ಹುಡುಗರನು ದೊಣಿಗೆ ಇಳಿಸಿ ಅಪಾಯಕ್ಕೆ ಹಾಕಿದ್ದು ಬಿಟ್ರೆ ಬೇರೆ ದಂಧಿಲ್ಲ ಅವನಿಗೆ, ಏನು ಸಮುದ್ರಕ್ಕೆ ಇಳಿಯದು ಅಂದರೆ ಹುಡುಗಾಟನಾ..? ತಾನು ಮಾತ್ರ ಹತ್ತಿರದ ದಂಡೆಯಲ್ಲೆ ಕಡ್ಡಿ ಆಡಸ್ತಾನೆ..? ಇವೆಲ್ಲ ಕೇಳೊಕೆ ಹೇಳೊಕೆ ಚೆನ್ನಾಗಿರಲ್ಲ. ದೊಡ್ಡವರು ದೊಡ್ಡವರಿದ್ದಂಗೆ ಇರ್ಬೇಕು…
ಸಂತೋಷಕುಮಾರ ಮೆಹೆಂದಳೆ ಅವರ ಈ ಕೆಳಗಿನ ಬ್ಯಾಲೆ ಮೇಲಿನ ಬದುಕು ಕಥೆಯಿಂದ
ಈ ಸರ್ತಿ ಸರಿಯಾಗಿ ಮೀನು ಬೀಳದಿದ್ರೆ ಬದುಕು ಭಾರಿ ಕಷ್ಟ ಕಷ್ಟ.. ಎಂತಾ ಮಾಡೂದ್ ಹೇಳಿ ಗೊತ್ತಾಗ್ತಿಲ್ಲ. ಅದರಲ್ಲೂ ಈಗಿನ ಹುಡುಗ್ರು ಬ್ಯಾಲೆ ಮೇಲೆ ಹೋದ್ರೆ ಎಲ್ಲಾ ಭಾನಗಡೀನೆ..” ಎನ್ನುವ ಅಪ್ಪಣ ಮೊಗೆರನ ಹತ್ತಿರ ಮಾತಾಡಲು ಬೇರೆ ವಿಷಯಗಳಿರಲಿಲ್ಲ. ಇದೆಲ್ಲ ಶುರುವಾಗಿದ್ದು ಆ ಬದೀಗಿನ ಬ್ಯಾಲೆಯ ಧಂಜು ನಾಯ್ಕನ ಲೈಟ್ ಪಿಶಿಂಗ್ ಕುರಿತಾಗಿ ಎದ್ದ ವಿವಾದದಿಂದ.ಕಾರಣ ಇಲ್ಲಿಯವರೆಗೂ ಜೀವನ ಒಂದು ಹಂತದಲ್ಲಿ ಸಮುದ್ರದ ಅಲೆಗಳಂತೆ ಅಚೀಚೆ ಏರಿಳಿಯುತ್ತಿದ್ದರೂ ಬದುಕಿಗೆ ಯಾವತ್ತೂ ಮೋಸವಾಗಿರಲಿಲ್ಲ. ಅದರಲ್ಲೂ ಮೀನು ಮಾರಾಟ ಮತ್ತು ವ್ಯವಹಾರ ಎಂದು ನಂಬಿಕೊಂಡು ಜೀವನ ನಡೆಸುವ ಬೆಸ್ತರ ಕುಟುಂಬಗಳಿಗೆ ಯಾವತ್ತೂ ಬದುಕು ಬಂಗಾರವಾಗಿದ್ದುದು ಕಡಿಮೆ. ಹಾಗಾಗಿ ಅಪ್ಪಣ್ಣ ಮೊಗೆರ ಮತ್ತವನ ಹೆಂಡತಿಗೆ, ಮೀನು ಮತ್ತು ಕರಾವಳಿಯ ದಂಡೆಯ ಮೇಲೆ ಹರಡಿಕೊಳ್ಳುವ ರಂಪಣಿಯ ವಿನ: ಬದುಕಿಲ್ಲ ಎನ್ನುವುದೂ ಯಾವತ್ತೋ ಗೊತ್ತಾಗಿಬಿಟ್ಟಿದೆ.ಅವರೇನೂ ಅದಕ್ಕೆಲ್ಲ ಯಾವತ್ತೂ ದುಖ:ದುಮ್ಮಾನ ಪಟ್ಟವರೇನಲ್ಲ. ಕಾರಣ ಪ್ರತೀ ಮಳೆಗಾಲದಲ್ಲಿ ಮೀನು ಮರಿ ಮಾಡುವ ಕಾಲಾವಧಿಯಲ್ಲಿ ಸಮುದ್ರಕ್ಕಿಳಿಯುವುದಿಲ್ಲ ಎನ್ನುವುದನ್ನು ಹೊರತು ಪಡಿಸಿದರೆ ದಿನಚರಿಯಲ್ಲಿ ವ್ಯತ್ಯಾಸ ಇದ್ದಿದ್ದು ಕಮ್ಮಿನೇ. ಬೆಳ್‌ಬೆಳಿಗ್ಗೆ ಅಪ್ಪಣ್ಣ ದೋಣಿ ಇಳಿಸಿಕೊಂಡು ಹೋಗಿ, ವಾಪಸ್ಸು ಒಂಭತ್ತರ ಹೊತ್ತಿಗೆ ದಂಡೆಗೆ ಲಗ್ಗೆ ಹಾಕಿದನೆಂದರೆ ಕನಿಷ್ಟ ಎಂಟತ್ತು ಬುಟ್ಟಿ ಮೀನಿಗೆ ಲುಕ್ಸಾನಿರಲಿಲ್ಲ. ಅದರಲ್ಲೂ ಸಾಮಾನ್ಯವಾಗಿ ಬಲೆಗೆ ಬೀಳುವ ಬಂಗುಡೆ, ಬೆಳ್ಳುಂಜಿ, ತೊರ್ಕೆ, ತಾರ್ಲೆ, ಇಸೋಣು, ಶೆಟ್ಲಿ, ಕಿಂಗ್‌ಫಿಷ್, ಪಾಂಪ್ಲೆಟ್ಟುಗಳು ಹೀಗೆ ಒಂದಿನ ಹೆಚ್ಚು, ಒಂದಿನ ಕಮ್ಮಿ.ಆದರೆ ಬಲೆ ಸಮುದ್ರಕ್ಕಿಳಿದ ದಿನ ನಿರಾಶೆಯಾಗಿಲ್ಲ. ಲಾಭ ನಷ್ಟದ ಲೆಕ್ಕಾಚಾರ ಇದ್ದಿದ್ದೆ. ಕಾರಣ ಒಮ್ಮೊಮ್ಮೆ ರೇಟು ಇದ್ದರೆ ಇತ್ತು ಇಲ್ಲದಿದ್ದರೆ ಇಲ್ಲ. ಮುಖ್ಯ ಮಶೀನ್ ಬೋಟುಗಳು ದಾಂಗುಡಿ ಇಟ್ಟ ಮೇಲೆ ಬದಲಾಗುತ್ತಿರುವ ಮಾರುಕಟ್ಟೆಯ ವ್ಯವಹಾರ ಆವತ್ತಿನದವತ್ತಿಗೆ ಎಂದಾಗುತ್ತಿದೆಯಾದರೂ, ಸಮುದ್ರ ನಂಬಿ ಬದುಕುತ್ತಿರುವ ಬೆಸ್ತರ ಕುಟುಂಬಗಳು ಹಸಿವಿಗೆ ಬಿದ್ದಿಲ್ಲ.
ಇನ್ನು ನೀರಿಗಿಳಿಯದ ಹೊತ್ತಿಗೆಂದು ಒಣಗಿಸಿ ಉಪ್ಪು ಹಾಕಿ, ಕಾಯ್ದಿಟ್ಟು ಮಾರುವ ಅದಕ್ಕಾಗೇ ಗಿರಾಕಿಗಳನ್ನು ಗುರುತಿಸಿಟ್ಟುಕೊಂಡು ಮಾರುವ ಸೂಕ್ಷತೆಗೆ ಮೊಗೇರನ ಹೆಂಡತಿಗೆ ವ್ಯವಹಾರ ಹೇಳಿಕೊಡಬೇಕಾಗಿಲ್ಲ.ಬೆಳಿಗ್ಗೆ ಒಮ್ಮೆ ಬುಟ್ಟಿ ಹೊತ್ತರೆ ಮಧ್ಯಾನ್ಹ ಬಿಸಿಲೇರಿ ಇಳಿಯುವ ಮೊದಲೇ ಆಕೆ ಮನೆಗೆ ತಲುಪಿರುತ್ತಾಳೆ. ಕಂಕುಳಲ್ಲಿದ್ದ ಕವಳದ ಚೀಲ ಖಾಲಿಯಾಗುತ್ತಾ ನೋಟುಗಳಿಂದ ತುಂಬಿಕೊಂಡು ಹೋಗುವಾಗ ಕರಾವಳಿಯ ಉರಿ ಬಿಸಿಲು, ಆ ಭಯಾನಕ ಬೆವರು ಯಾವುದೂ ಆಕೆಗೆ ತಾಗುವುದೂ ಇಲ್ಲ, ದುಡಿಯುವ ಹೆಣ್ಣುಮಕ್ಕಳಿಗೆ ಅದೆಲ್ಲ ಲೆಕ್ಕಕ್ಕೂ ದಕುವುದಿಲ್ಲ. ಹಾಗಾಗಿ ಹೊತ್ತಾರೆ ಎದ್ದು ಅಪ್ಪಣ್ಣ ಮತ್ತವನ ಸಂಗಡಿಗರು ಸಮುದ್ರಕ್ಕಿಳಿದು ಬೆವರು ಹಣಿಸಿದರೆ. ಇತ್ತ ಮಧ್ಯಾನ್ಹದ ಹೊತ್ತಿಗೆ ಅವಳು ದಣಿಯುತ್ತಾಳೆ.ಹೆಚ್ಚಿನ ಮೀನುಗಾರ ಜೀವನವೆಲ್ಲ ಆರಕ್ಕೇರದ ಮೂರಕ್ಕಿಳಿಯದ ಸಂಸಾರಗಳೇ. ಕಾರಣ ವರ್ಷದಲ್ಲಿ ಯಾವತ್ತೂ ಒಂದೇ ತರಹ ಮೀನು ಸಿಗುತ್ತದೆ ಎನ್ನುವ ಭರವಸೆಯೂ ಇಲ್ಲ, ಸಿಗದೆ ಬದುಕಲಾಗುತ್ತಿಲ್ಲ ಎನ್ನುವ ಸಂಕಟವೂ ಇಲ್ಲ. ಒಂದು ಹೋಳು ಮೀನಿದ್ದರೆ ಅವತ್ತಿನ ಊಟ ಮುಗಿಯುತ್ತದೆನ್ನುವಂತೆ, ಒಂದು ದೋಣಿ ಒಂದು ಕುಟುಂಬವನ್ನು ಸಾಕುತ್ತದೆನ್ನುವ ಮಾತೂ ಅಷ್ಟೆ ಸತ್ಯ. ಆದರೆ ಬರುಬರುತ್ತಾ ಇದ್ದಕಿದ್ದಂತೆ ಸಮುದ್ರಳಿವೆಯ ಫಾಸಲೆಯಲ್ಲಿ ಮೀನು ಬರುವುದು ಕಾಣೆಯಾಗತೊಡಗಿ ದೋಣಿ ಅರ್ಧರ್ಧ ಬರತೊಡಗಿತೋ ಆಗ ಬದುಕಿಗೆ ಮೊದಲ ಬಾರಿಗೆ ಮೀನೀನ ಮುಳ್ಳು ತಾಗಿದಂತಾಗಿತ್ತು. ತೀರಾ ಆಳ ಸಮುದ್ರ ಮೀನುಗಾರಿಕೆಯನ್ನು ಸಣ್ಣ ಸಣ್ಣ ಬೇಸ್ತರು ಮಾಡುವುದೇ ಇಲ್ಲ. ಕಾರಣ ಅವರಿಗೆ ಅಷ್ಟೆಲ್ಲ ಸಮುದ್ರದ ಹೊಡೆತ ಮತ್ತು ಒತ್ತಡ ತಡೆಯುವ ತಾಕತ್ತೂ ಇರುವುದಿಲ್ಲ ಜೊತೆಗೆ ಸಮಯಾವಕಾಶವೂ ಇರುವುದಿಲ್ಲ. ಏನಿದ್ದರೂ ನಾಲ್ಕಾರು ಕೀ.ಮೀ. ದೂರ ಎಂದರೇನೆ ಹೆಚ್ಚಾಗಿ ಹೋಗಿರುತ್ತದೆ. ಕಾರಣ ಅಷ್ಟು ಅಂತರ ಕ್ರಮಿಸಿ ವಾಪಸ್ಸು ದಂಡೆಗೆ ಬಂದು ಮೀನು ಪಾಲು ಹಾಕಿ. ಅದನ್ನೆಲ್ಲ ಬರ್ಫದ ಬುಟ್ಟಿಗೆ ತುಂಬಿಸಿ, ಸಮಯಕ್ಕೆ ಸರಿಯಾಗಿ ಜನ ಬರುವಾಗ ಮೀನು ಮಾರುಕಟ್ಟೆಯಲ್ಲಿ ಇಲ್ಲದಿದ್ದರೆ ಯಾವ ಉಪಯೋಗವೂ ಆಗುವುದಿಲ್ಲ.
ಹಾಗಾಗಿ ಕೆಲವರು ಬೆಳಗಿನ ಹೊತ್ತಿಗೆ ಬಲೆ ಹಾಕಿದರೆ ಕೆಲವರು ಮಧ್ಯಾನ್ಹದ ಮೇಲೆ ನೀರಿಗಿಳಿಯುತ್ತಾರೆ. ಅವರದ್ದೆಲ್ಲ ಸಂಜೆ ಮಾರುಕಟ್ಟೆಯ ವ್ಯವಹಾರ.ಆದರೆ ಬರುಬರುತ್ತಾ ಅಪ್ಪಣ್ಣ ಮೊಗೆರನ ಜೊತೆಗೆ ಇತರರಿಗೂ ಆ ಬಿಸಿ ತಟ್ಟತೊಡಗಿತ್ತು. ಇದ್ದಕ್ಕಿದ್ದತೆ ಮೀನುಗಳು ಕಡಿಮೆಯಾಗತೊಡಗಿದ್ದವು. ತೀರ ಇನ್ನೊಂದು ಕಿ.ಮೀ ಒಳಗೆ ಹೋದರೂ ಜಾಗ ಬದಲಾಯಿಸಿದರೂ ಉಹೂಂ.. ಮೀನುಗಾರಿಕೆ ನಂಬಿ ಬದುಕು ಮಾಡುತ್ತಿದ್ದವನಿಗೆ ಮೊದಲ ಬಾರಿಗೆ ಇದೇನಾಗಿ ಹೋಯಿತು ಎನ್ನಿಸಿದ್ದು ಸುಳ್ಳಲ್ಲ. ಆದರೆ ಇದೆಲ್ಲ ಏನಾಗುತ್ತಿದೆ ಎಂದು ಬೇಸ್ತರಿಗೆ ಗೊತ್ತಾಗುತ್ತಿಲ್ಲವೆಂದಲ್ಲ.ಅದರಲ್ಲೂ ಸಮುದ್ರದಲ್ಲೆ ಹತ್ತಾರು ವರ್ಷಗಳಿಂದ ಜೀವನ ತೆಗೆಯುವವರಿಗೆ ಇಂತಹ ಏರುಪೇರಿನ ಮೂಲ ಅರಿವಾಗದ್ದೇನಲ್ಲ. ಕಾರಣ ಬಾಕಿ ಏನೆ ಆದರೂ, ದೊಡ್ಡದೊಡ್ಡ ತರಹೇವಾರಿ ಚಂಡಮಾರುತಕ್ಕೆ ಸಮುದ್ರ ಕೆರಳಿದರೂ, ಮೀನಿನ ಉತ್ಪನ್ನ ಸಮುದ್ರದಲ್ಲಿ ಕಡಿಮೆಯಾಗುವುದಿಲ್ಲ. ಕೃತಕ ಅಭಾವ ಸೃಷ್ಠಿಯೂ ಸಾಧ್ಯವಿಲ್ಲ. ಏನಿದ್ದರೂ ಮೀನು ಮರಿ ಮಾಡುವ ಹೊತ್ತಿನಲ್ಲಿ ಕಡಲಿಗಿಳಿದು ಅದರ ಒಡಲು ಕಲಕದಿದ್ದರಾಯಿತು. ಆ ಹೊತ್ತಿಗೆ ಮೀನು ಮರಿ ಮಾಡಿ, ಸಮುದ್ರ ಫಸಲು ಕೊಡುವ ಸಮಯ. ಮಳೆಗಾಲದ ಕೊನೆಯ ಹೊತ್ತಿಗೆ ಮೀನು ಸೊಸೈಟಿಯವರು ಆದೇಶ ಹೊರಡಿಸುತ್ತಾರೆ. ಅಷ್ಟೆ ಮತ್ತೆ ತೆಕ್ಕೆ ತುಂಬ ಮೀನು, ಅಪ್ಪಣ್ಣನ ಕವಳದ ಚಂಚಿಯ ತುಂಬ ಹಣ..ಸುಮ್ಮನೆ ಊಟಕ್ಕೆ, ಬಟ್ಟೆ ಬರೆಗೆ ಬದುಕುವ ಜೀವನ ಸಮುದ್ರಲ್ಲಿ ಮೀನು ಈಸಿದಷ್ಟೆ ಸಲೀಸು.
ಅಷ್ಟಕ್ಕೂ ಕೆಳವರ್ಗದ ಬೇಸ್ತರ ಬದುಕು ಇನ್ಯಾವ ಮಹಾ ದೊಡ್ಡತನದಲ್ಲಿ ಬದುಕಲು ಸಾಧ್ಯ.ಏನಿದ್ದರೂ ಆವತ್ತಿನ ದುಡಿಮೆ ಮತ್ತು ಸಮುದ್ರದ ಒಡನಾಟ.ಆದರೆ ಈಗೀಗ ಹಾಗಾಗುತ್ತಿಲ್ಲ.ಏನಿದ್ದರೂ ಯಾರೊ ಆಯ್ದು ಉಳಿದ ಮೀನು ದಕ್ಕುತ್ತಿವೆ. ಅದರಲ್ಲೂ ಬೀಳುತ್ತಿರೋದು ಬರೀ ಬೆಳ್ಳುಂಜಿ ಮತ್ತು ಬಂಗುಡೆ. ಈ ಬಂಗುಡೆಗೆ ಬೆಲೆಯೂ ಕಡಿಮೆ, ಲಾಭವಂತೂ ಮೊದಲೇ ಇಲ್ಲ. ಒಂದು ತೆರದಲ್ಲಿ ತಮ್ಮ ಬದುಕಿದ್ದಂತೆ. ಎಲ್ಲ ಇದೆ ಆದರೆ ಲಾಭದಾಯಕವಾದುದು, ಒಂದಷ್ಟು ಆಸೆಯಿಂದ ಗಮನಿಸುವಂತಹದ್ದೇನೂ ಇರುವುದಿಲ್ಲ. ಹಾಗಂತ ಬಂಗುಡೆ ಬೆಳ್ಳುಂಜಿ ಬಿಟ್ಟು ಮೀನುಗಾರಿಕೆಯೂ ಇಲ್ಲ. ಎಷ್ಟು ದಕ್ಕಿದರೂ ಕೈಗೆಳೆದರೆ ಕಾಲಿಗೆಳೆಯಲಾಗುವುದಿಲ್ಲ.ಇದರ ಹೊರತಾಗಿ ಮೊದಲಿನಂತೆ ಶಿಗಡಿ ಇತ್ಯಾದಿ ಆಗೀಗ ಬೀಳುತ್ತದಾದರೂ, ತಾರ್ಲೆ, ಶೆಟ್ಲಿ ಉಹೂಂ ಯಾವುದೂ ಬೀಳುತ್ತಿಲ್ಲ. ಪಾಂಪ್ಲೇಟ್ ಅಂತೂ ಕೇಳುವುದೇ ಬೇಡ. ತುಟ್ಟಿ ಜೀವ ಈಸೋಣ ಕೈಗೆ ಹತ್ತುತ್ತಲೇ ಇಲ್ಲ. ಅದರಲ್ಲೂ ಕಿಂಗ್‌ಫಿಷ್‌ಗೆ ಕೆಲವೊಮ್ಮೆ ಸಾವಿರದ ಲೆಕ್ಕದಲ್ಲಿ ವ್ಯವಹಾರ ಕುದುರುವುದೂ ಉಂಟು. ದಿನದ ಒಟ್ಟೂ ಸಂಗ್ರಹದಲ್ಲಿ ಒಂದತ್ತು ಭಾಗ ಅಂಥಾ ದುಬಾರಿ ಮೀನು ಬಿದ್ದರೂ ಜೀವನ ಹೂವೆತ್ತಿದಷ್ಟು ಸರಾಗ. ಅದರಲ್ಲಿ ಇದೇನಿದು..? ಬರೀ ಬೆಳ್ಳುಂಜಿ, ಬಂಗುಡೆ ಮಾರುವುದಾದರೆ ದೋಣಿ ಹಾಕಿ ಫಾಯ್ದೇನೆ ಇಲ್ಲ. ಈ ಮೀನುಗಳೆಲ್ಲ ಟನ್ ಲೆಕ್ಕದಲ್ಲಿ ದಂಡೆಗೆ ಬರುತ್ತದೆ. ಅದನ್ನೆಲ್ಲ ಹತ್ತಾರು ಕಿ.ಮೀ ದೂರ ಒಳಗೆ ಹೋಗುವ ಮೀನುಗಾರು ಮೂರ್ನಾಲ್ಕು ದಿನಗಟ್ಟಲೇ ಇಲ್ಲೇ ಇದ್ದು ವ್ಯವಹರಿಸುವವರು ಮಾಡುತ್ತಾರೆ. ದೊಡ್ಡ ವ್ಯವಹಾರ ಆಗುವುದರಿಂದ ಗಿಟ್ಟುತ್ತದೆ ಕೂಡಾ.
ಆದರೆ ತಮ್ಮದು ಹಾಗಾಗುವುದಿಲ್ಲ. ಅಪ್ಪಟ ದೇಶಿ ಪದ್ಧತಿ. ಏನಿದ್ದರೂ ಸಣ್ಣ ಸುತ್ತಿನಲ್ಲಿ ಆಗಬೇಕಾದದ್ದು.ಅಪ್ಪಣ್ಣ ಮೊಗೇರನಂತೆ ಹಲವರು ಇದ್ದರಾದರೂ ಅವರೆಲ್ಲ ವಯಸ್ಸಿನಲ್ಲೂ ಆಳ್ತನದಲ್ಲೂ ಬೀಡು ಬೀಸಾಗಿದ್ದವರು. ಅವರ ಗಂಡು ಮಕ್ಕಳೂ ಕೈಯಲ್ಲಿವೆ. ಹೆಚ್ಚುವರೀ ಎರ್ಡ್ಮೂರು ಮೈಲಿ ಒಳಗೂ ನುಗ್ಗಿ ದೂರದ ಮೀನುಗಾರಿಕೆ ಮಾಡಿದರೂ ಅವರಿಗೆ ಗಿಟ್ಟುತ್ತದೆ. ಆದರೆ ತನಗೆ ಹಾಗಾಗುವುದಿಲ್ಲ ಎರಡೂ ಕೂಸುಗಳೂ ಹೆಣ್ಮಕ್ಕಳೆ ಎರಡೂ ಚೆನ್ನಾಗಿ ಓದುತ್ತಿವೆ ಬೇರೆ. ಶಾಲೆ ಅಂದರೆ ಪ್ರಾಣ.. ಇದೆಲ್ಲ ಶುರುವಾಗಿದ್ದು ಆ ಕಡೆಯ ಬ್ಯಾಲಿಮೇಲಿರುವ ಹೊಸ ಪೀಳಿಗೆ ಮೀನುಗಾರ ಹುಡುಗ ಧಂಜು ನಾಯ್ಕ ಸಮುದ್ರದ ಮಧ್ಯ ಹಗಲೂ ರಾತ್ರಿ ಮೀನಿಗೆ ಬಲೆ ಹಾಕತೊಡಗಿದಾಗ.
ಅದೇನು ದೈರ್ಯವೋ ಏನೋ ಎರ್ಡ್ಮೂರು ದಿನ ಕಾಲ ದಂಡೆಗೆ ಬರದೆ ಬಲೆ ಬೀಸುತ್ತಾನೆ. ಅದರಲ್ಲೂ ಹೊಸ ರೀತಿಯ ವಿನ್ಯಾಸದ ಬಲೆ ಮಾಡಿಕೊಂಡಿದ್ದಾನಂತೆ. ಅದರಿಂದ ಸುಲಭಕ್ಕೆ ಆಳ ಸಮುದ್ರಕ್ಕಿಳಿಯುವ ಬಲೆ, ಭಾರ ಹೆಚ್ಚಾದರೆ ಮಶೀನ್‌ನಿಂದ ಹಿಂದಕ್ಕೆ ಸುತ್ತಿಕೊಂಡು ಮೇಲಕ್ಕೇರಿ ಬರುತ್ತದಂತೆ. ಇವಕ್ಕೆಲ್ಲ ತಮ್ಮ ಸ್ಥಳೀಯ ಬಲೆ ಸಮವಾಗುವುದೇ ಇಲ್ಲ.ಇಷ್ಟೆ ಆಗಿದ್ದರೆ ಸರಿ ಇತ್ತು.ಕಾರಣ ಸಮುದ್ರ ಎನ್ನುವುದು ಧಂಜು ನಾಯ್ಕ ನಂತಹ ಹತ್ತಾರು ಜನರ ಬಲೆಗೆ ಬಗ್ಗುವ ಇಸಮು ಅಲ್ಲವೇ ಅಲ್ಲ. ಅವನಂತಹ ನೂರಾರು ಜನರ ಲೆಕ್ಕಕ್ಕೂ ಸಮುದ್ರ ಜಗ್ಗುವುದಿಲ್ಲ. ಅದರ ಒಡಲು ಅಷ್ಟು ದೊಡ್ಡದು.
ಆದರೆ ಧಂಜು ನಾಯ್ಕ ಅದೇನೋ ಲೈಟ್ ಫಿಶಿಂಗ್ ಮಾಡ್ತಾನೆ ಎನ್ನುವ ಸುದ್ದಿ ಬಿತ್ತಲ್ಲ. ಆಗ ದಂಡೆಯುದ್ದಕ್ಕೂ ಮೀನುಗಾರರ ಬದುಕೇ ಕಲಸುಮೇಲೋಗರವಾಗಿಬಿಟ್ಟಿತ್ತು. ಅದರಲ್ಲೂ ಧಂಜು ನಾಯ್ಕನ ದೋಣಿ ಹೆವಿಡ್ಯೂಟಿ ಮತ್ತು ಅದರ ಯಮಹಾ ಇಂಜಿನುಗಳೂ ಇವತ್ತಿಗೂ ಜಪಾನಿನಿಂದ ಬಂದ ಹೈ ಕಾಪಾಸಿಟಿ ಡೈವ್. ಹಾಗಾಗಿ ಸುಲಭಕ್ಕೆ ಸಮುದ್ರದ ಒತ್ತಡ ತಡೆಯುತ್ತಾನೆ. ರಾತ್ರಿ ಹಗಲೂ ಅಲ್ಲೆ ಇದ್ದೂ ಫಿಶಿಂಗ್ ಮಾಡುತ್ತಾನೆ. ಇದರಿಂದ ಒಂದು ದಿಕ್ಕಿನಲ್ಲಿ ಚಲಿಸುವ ಮೀನುಗಳ ಸಂಖ್ಯೆಯಲ್ಲಿ ಅಗಾಧ ವ್ಯತ್ಯಾಸವಾಗಿ ತೀರದ ಕಡೆಗೆ ಚಲಿಸುವ ದಂಡು ಅದಕ್ಕೂ ಮೊದಲೇ ಅವನ ಬಲೆಗೆ ಬೀಳುತ್ತಿವೆ. ಬೆಳಿಗ್ಗೆ ಆಗುವ ಮೊದಲೇ ದಂಡೆಯ ಭಾಗದ ಅಲೆಗಳಿಗೆ ನೇರವಾಗಿ ಬಲೆ ಒಡ್ಡಿ ಧಂಜು ನಾಯ್ಕ ಮೀನುಗಾರಿಕೆ ಮಾಡುತ್ತಿದ್ದಾನೆ.ಇನ್ನು ಮೀನುಗಳೂ, ಸಮುದ್ರಲ್ಲಿ ದೊಡ್ಡ ಮಟ್ಟದಲ್ಲಿ ತಮ್ಮ ವಠಾರ ಬದಲಾಯಿಸುವುದಿಲ್ಲ. ಏನಿದ್ದರೂ ತಂತಮ್ಮ ಆಸುಪಾಸಿನ ಒಂದಷ್ಟು ವ್ಯಾಪ್ತಿಯೊಳಗೇ ಜೀವನ ನಡೆಸುತ್ತವೆ. ತೀರ ಬೆಳಗಿನ ಜಾವಕ್ಕೆ ಇನ್ನೇನು ಒಂದೆರಡು ಗಂಟೆ ಇದೆ ಎನ್ನುವ ಹೊತ್ತಿಗೆ ದಂಡೆಯ ಕಡೆಗೆ ಮುಖ ಮಾಡಿ ಚಲಿಸುತ್ತಾ, ಬಿಸಿಲೇರುವ ಹೊತ್ತಿಗೆ ಮತ್ತೆ ಮಧ್ಯದ ಆಳ ಸಮುದ್ರದ ಮೇಲೈನಲ್ಲಿ ಸೇರುವ ಪರಿ, ಅವುಗಳ ನೈಸರ್ಗಿಕ ಜೀವನದ ಪಾಠ ಅದು. ಹಾಗಾಗಿ ಸಣ್ಣ ಮೀನುಗಾರರ ಕೆಲಸಕ್ಕೆ ಸಮುದ್ರದಲೆಗಳ ಒತ್ತಡ ಇಲ್ಲದ ಬೆಳಗಿನ ಜಾವ ಸೂಕ್ತವಾಗಿರುತ್ತದೆ.
ಇದೆಲ್ಲಾ ಲೆಕ್ಕಾಚಾರ ಬಲ್ಲ ಧಂಜು ನಾಯ್ಕನಂತಹ ಹತ್ತಾರು ಹುಡುಗರು ಈಗ ಲಕ್ಷಾಂತರ ಖರ್ಚು ಮಾಡಿ ವಿಶೇಷ ಬೋಟುಗಳ ಮೂಲಕ ಸಮುದ್ರ ಮಧ್ಯದಲ್ಲೆ ಬೀಡು ಬಿಡುತ್ತಿದ್ದಾರೆ. ಮೂರ್ನಾಲ್ಕು ದಿನಕ್ಕೆ ಬೇಕಾಗುವ ಆಹಾರ, ಪೆಟ್ರೋಲ್, ಡಿಸೆಲ್, ಅಡುಗೆ, ಮೊಬೈಲ್, ಮೀನುಗಳನ್ನು ತಾಜಾತನ ಕಾಯ್ದುಕೊಳ್ಳುವ ಶಿಥಲೀಕರಣ ವ್ಯವಸ್ಥೆ ಎಲ್ಲ ಅದರಲ್ಲಿರುತ್ತದೆ. ಹೆಚ್ಚುವರಿ ಮೀನು ಬಂದರೆ ಅದರಲ್ಲಿ ಸಂಗ್ರಹಿಸುತ್ತಾರೆ. ಇಲ್ಲ ಬಿದ್ದ ಮೀನುಗಳನ್ನು ಸಾಗಿಸಲೇ ಬ್ರಹದಾಕಾರದ ದೋಣಿ ದಂಡೆಯಿಂದ ಮಧ್ಯಕ್ಕೆ ಷಟಲ್ ಟ್ರಿಪ್ಪು ಹೊಡೆಯುತ್ತಿರುತ್ತದೆ.
ಅದೊಂದು ರೀತಿಯ ಸಣ್ಣ ಕೈಗಾರಿಕೆಯೇ. ನಿರಂತರತೆ ಮತ್ತು ಹೆಚ್ಚಿನ ತಂತ್ರಜ್ಞಾನದ ಬಳಕೆ ಮಾಡುವ ಈಗಿನ ಹುಡುಗರು ಹೆಚ್ಚಿನ ವ್ಯವಹಾರ, ದೊಡ್ಡ ಮಟ್ಟದ ಲಾಭ ಎಲ್ಲ ಪಡೆಯುತ್ತಾರೆ.ಇಷ್ಟೆ ಆಗಿದ್ದರೆ ಅಷ್ಟಾಗಿಯೂ ಸಮಸ್ಯೆ ಇರಲಿಲ್ಲ, ಮಾಡುತ್ತಿರುವುದೂ ತಪ್ಪೂ ಅಲ್ಲ. ಕಾರಣ ಬೃಹದಾಕಾರದ ಸಮುದ್ರಕ್ಕೆ ಇವನಂತಹ ಹುಡುಗರು ಯಾವ ಲೆಕ್ಕ. ಆದರೆ ಧಂಜು ನಾಯ್ಕ ಮತ್ತವನ ಗುಂಪು ಎಲ್ಲೆಗಳನ್ನೂ ಮೀರುತ್ತಾರೆ. ಪಕ್ಕದ ಕೇರಳದ ದೊಡ್ಡ ದೋಣಿಗಳ ಜೊತೆ ನೆಟ್‌ವರ್ಕ್ ಬೆಳೆಸಿಕೊಂಡು ಮೀನಿನ ದೊಡ್ಡ ದಂಡು ಗುರುತಿಸಿ ಅದಕ್ಕೆ ಕೈ ಇಡುತ್ತಾರೆ. ಪಕ್ಕದೆ ಗೋವೆಯ ಜನರೊಂದಿಗೆ ಕಾಂಟ್ಕಾಕ್ಟು ಮಾಡಿಕೊಂಡು ಸಮುದ್ರ ಮಧ್ಯದಲ್ಲಿಂದಲೇ, ಮೀನುಗಳು ಕೈ ಬದಲಾಗುತ್ತವೆ ಎನ್ನುವ ಮಾತೂ ಇದೆ. ಅದರಿಂದ ಹಗಲಲ್ಲಿ ಅವನ ಕೈ ನಿಗುವಷ್ಟು ಮಾತ್ರ ಮೀನು ಹಿಡಿಯುತ್ತೇನೆನ್ನುವ ಧಂಜು ನಾಯ್ಕ, ರಾತ್ರಿಯ ಉಳಿದ ಹೆಚ್ಚುವರಿ ಮೀನುಗಳನ್ನು ಆ ಕಡೆಯ ರಾಜ್ಯದ ಜನರ ಬುಟ್ಟಿಗೆ ಸುರುವುತ್ತಿದ್ದಾನೆ. ಅವರಿಗೂ ಹಗಲು ರಾತ್ರಿ ಸಮುದ್ರದಲ್ಲಿ ಕಣ್ಣಿಟ್ಟು ಕಾಯ್ದು ಮೀನು ಹಿಡಿಯುವ ಉಸಾಬರಿ ಇಲ್ಲ. ಅಪಾಯದಿಂದಲೂ ಪಾರು. ಸೀದಾ ಧಂಜು ನಾಯ್ಕನ ದೋಣಿಯಿಂದ ಮೀನೆತ್ತುತ್ತಿದ್ದಾರೆ.ಆದರೆ ಅದರ ಹಿಂದೆಯೇ ಬಂದ ಸುದ್ದಿ ಮಾತ್ರ ಅಘಾತಕಾರಿ.ಧಂಜು ನಾಯ್ಕ ಲೈಟ್‌ಫಿಶಿಂಗ್ ಮಾಡುತ್ತಿದ್ದಾನೆ. ಜೊತೆಗೆ ಟ್ಯೂನ್ ಫಿಶಿಂಗ್ ಮಾಡುತ್ತಾನೆ ಎನ್ನುವುದು.ಅಸಲಿಗೆ ಲೈಟ್ ಫಿಶಿಂಗು ಕದ್ದು ಮುಚ್ಚಿ ಮಾಡುತ್ತಾರೆನ್ನುವುದು ಹೊಸ ವಿಷಯವೇನಲ್ಲ.ಆಗಾಗ ಕರಾವಳಿಯ ದಂಡೆಯಲ್ಲಿ ಇದು ಸದ್ದು ಮಾಡುವ ವಿಷಯವೇ. ಅದರಲ್ಲೂ ಕೇರಳದ ಮೀನುಗಾರರು ತಮ್ಮ ಗಡಿದಾಟಿ ಮೀನುಗಾರಿಕೆ ಮಾಡುವಾಗ ರಾತ್ರಿ ಹೊತ್ತು ಆಳ ಸಮುದ್ರದಲ್ಲಿ ಮಾಡುವುದೇ ಲೈಟ್ ಫಿಷಿಂಗು. ಪ್ರಖರವಾದ ಬೆಳಕಿನ ಕಿರಣಗಳಿಗೆ ದೂರದೂರದ ಮೀನುಗಳನ್ನು ತಮ್ಮ ಬಲೆಯ ಎಲ್ಲೆಯೊಳಗೆ ಆಕರ್ಷಿಸಿ ಹಿಡಿದಾಕಿಕೊಳ್ಳುವುದು.ಆದರೆ ಇದಾವುದು ಟ್ಯೂನ್ ಫಿಶಿಂಗು.. ?
ಕರಾವಳಿಯ ಅಪ್ಪಣ್ಣ ಮೊಗೆರನಂತಹ ಸಾಮಾನ್ಯ ಮೀನುಗಾರನ ಬದುಕಿಗೆ ಕೊಳ್ಳಿ ಇಟ್ಟಿದ್ದೆ ಇಂತಹ ಮೀನುಗಾರಿಕೆ. ಮೊಬೈಲ್ ಕೊಟ್ಟ ಅಡ್ಡ ದಾರಿ ಕೊಡುಗೆ ಅದು. ಮೊಬೈಲ್‌ನಂತಹದ್ದೆ ಸಣ್ಣ ಡಿವೈಸ್‌ನಿಂದ ಗುಂಯ್ ಎನ್ನುವ ಪ್ರತಿ ಅವರ್ತನಾ ಆಲೆಗಳನ್ನು ಹೊಮ್ಮಿಸುವ ಮೂಲಕ ಮೀನುಗಳ, ಮೂಲ ಗ್ರಹಿಕಾ ಅಲೆಗಳ ದಿಕ್ಕು ತಪ್ಪಿಸಿ ಇತ್ತ ಕಡೆಗೆ ಚಲಿಸುವಂತೆ ಮಾಡುವ ತಂತ್ರಜ್ಞಾನ. ಒಂದು ರೀತಿಯಲ್ಲಿ ಅಲ್ಟ್ರಾ ವೈಲೆಟ್ ರೇಸುಗಳನ್ನು ಬಿಟ್ಟಂತೆ. ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಕೆಲಸ ಸಲೀಸು ಮತ್ತು ನಿಖರ. ಅದನ್ನು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಬಳಸಿದರೆ ಎತ್ತ ಹೋಗುವ ಮೀನುಗಳೆಲ್ಲ ಇತ್ತ ತಿರುಗುತ್ತವೆ. ಇದರ ಹೊಡೆತಕ್ಕೆ ಸಾಂಪ್ರಾದಾಯಿಕ ಮೀನುಗಾರಿಕೆ ತೋಪೆದ್ದು ಹೋಗತೊಡಗಿದರೆ ಮೊದಲ ಏಟು ಬಿದ್ದಿದ್ದು ಸಣ್ಣ ಮೀನುಗಾರರಿಗೆ ಮತ್ತು ಅಪ್ಪಣನಂತವರಿಗೆ.
ಅದರಲ್ಲೂ ಹೆದ್ದಾರಿ ಅಗಲೀಕರಣ ಕಾರಣ ಕರಾವಳಿಯ ದಂಡೆಯ ಮೇಲಿದ್ದ ಮೀನು ಮಾರುಕಟ್ಟೆಯನ್ನೆ ಅಗೆದು ಹಾಕಿ, ಸರಿಯಾದ ಜಾಗವಿಲ್ಲದೆ ವರ್ಷಾನುಗಟ್ಟಲೇ ಮೀನು ಮಾರಾಟ ಎನ್ನುವುದು ಅಕ್ಷರಶ: ರಸ್ತೆಗೆ ಬಿದ್ದ ಮೀನಿನಂತಾಗಿದ್ದು ಸುಳ್ಳಲ್ಲ. ಪ್ರತೀ ತಿಂಗಳಿಗೊಮ್ಮೆ ಮಾರುಕಟ್ಟೆ ಬದಲಾವಣೆಯ ನಾಟಕ ನಡೆಯುತ್ತಿದೆಯಲ್ಲ. ಅದರಲ್ಲೂ ಸ್ಥಳೀಯ ಮೀನುಗಾರರ ಹಿತ ಕಾಯುವ ಅಗತ್ಯತೆ ಯಾರಿಗೂ ಇಲ್ಲ. ಕಾರಣ ಮಾರುಕಟ್ಟೆ ಸ್ಥಳ ನಿರ್ಧರಿಸುವವರಾಗಲಿ, ಮೀನುಗಳ ದರ ನಿರ್ಧರಿಸುವವರಾಗಲಿ ಮೀನು ಮಾರಾಟಗಾರರಲ್ಲ. ಉಳಿದೆಲ್ಲ ಹಕೀಕತ್ತು ನಡೆಸುವವರಿಗೆ ರೇಟು ಹೆಚ್ಚು ಕಮ್ಮಿಯಾದರೂ ಯಾವ ಫರಕ್ಕೂ ಬೀಳುವುದಿಲ್ಲ.ತನಗೆ ತಿಳಿದ ಮಟ್ಟಿಗೆ ಮಾಹಿತಿ ಎಲ್ಲ ಸೇರಿಸಿ, ಅಪ್ಪಣ್ಣ ಬೆಳ್‌ಬೆಳಿಗ್ಗೆ ಮೀನುಗಾರರ ಹಿತೈಸಿ ಸಂಘಕ್ಕೆ ದೂರು ಕೊಟ್ಟ.
ಅದರಲ್ಲೂ ಧಂಜುನಾಯ್ಕನ ಬಗ್ಗೆ ಇಂತಹದ್ದೊಂದು ದೂರು ಆಗಾ ಬರುತ್ತಲೇ ಇದ್ದುದರಿಂದ ಸಂಘದ ಸದಸ್ಯರು ಮರುದಿನ ಸಂಜೆಗೆ ಸಭೆ ಕರೆದು ಬಗೆ ಹರಿಸಲು ತೀರ್ಮಾನಿಸಿದರು. ಆದರೆ ಲೈಟ್‌ಫಿಶಿಂಗ್ ಬಗ್ಗೆ ಹೇಗೊ ಅವನನ್ನು ಹಿಡಿದು ಹಾಕಬಹುದು. ಆದರೆ ಈ ಟ್ಯೂನ್ ಫಿಶಿಂಗ್ ಬಗ್ಗೆ ಎಲ್ಲಿಂದ ಸಾಕ್ಷ್ಯ ಒದಗಿಸುವುದು ಎಂದು ಕೇಳಿದರೆ ಅಪ್ಪಣ್ಣನೂ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ತಾರಮ್ಮಯ್ಯ ಎಂದು ಕೈಯ್ಯಾಡಿಸಿದ.”..ನೋಡಿ. ಹಿಂಗೇ ಅಂತ ಹೋಗಿ ನೋಡೊಕೆ ಅದೇನೊ ಅರ್ಧ ತಾಸಿನಲ್ಲಿ ತಲುಪೋ ದಾರಿ ಅಲ್ಲ. ಅದಕ್ಕೂ ಮೊದಲೇ ಅವನು ಹುಶಾರಿ ಆಗ್ತಾನೆ. ಬೇಕಾದಷ್ಟು ತಿಳಿದವನು ಬೇರೆ, ಇಂಥದ್ದೆಲ್ಲ ಭಾನಗಡೀ ಬೇರೆ ಕಡೆನೊ ಇದ್ದೇ ಇದಾವೆ. ಆದರೆ ಹೆಂಗೆ ನಿಭಾಯಿಸ್ಬೇಕು ಅನ್ನೋದು ಸಮಿತಿಗೆ ಬಿಟ್ಟಿದ್ದು. ನನಗೆ ತಿಳಿದಷ್ಟು ಹೇಳಿದೇನೆ. ನನ್ನದೂ ಜೀವನ ಆಗ್ಬೇಕು, ಎರಡೆರಡು ಹೆಣ್ಮಕ್ಕಳಿದಾರೆ. ನನ್ನಂತೆ ಎಷ್ಟು ಜನ ಸಣ್ಣದಾಗಿ ವ್ಯವಹಾರ ಮಾಡಿಕೊಂಡಿಲ್ಲ. ದೊಡ್ಡವರು ನಿರ್ಧರಿಸಿದರೆ ನನ್ನಂಥವರು ಬದುಕಿಕೊಳ್ಳುತ್ತೇವೆ.” ಅಪ್ಪಣ್ಣ ಮೊಗೆರ ವಿನಂತಿಸಿಕೊಂಡಿದ್ದ.
ಮರುದಿನ ಸಭೆಯಲ್ಲಿ ಧಂಜುನಾಯ್ಕ ತಿರುಗಿ ಬಿದ್ದಿದ್ದ.”..ಅಲ್ಲ.. ನಾನು ಲೈಟ್‌ಫಿಶಿಂಗ್ ಮಾಡ್ತೇನೆ ಅಂತ ಕಂಪ್ಲೆಂಟ್ ಕೊಟ್ಟವ ಯಾರು..? ಇನ್ನೂ ಟ್ಯೂನ್‌ಫಿಶಿಂಗ್ ಹೆಸರೇ ಕೇಳಿಲ್ಲ ನಾನು. ಅದೆಲ್ಲ ಭಾನಗಡೀ ಮಾಡೊ ಅಷ್ಟು ಪುರಸೊತ್ತೂ ನನಗಿಲ್ಲ. ಹೌದು ನನ್ನ ವ್ಯವಹಾರ ದೊಡ್ಡದು. ಸಾಲ ಸೋಲ ಮಾಡಿ ಲಕ್ಷಾಂತರ ಬಂಡವಾಳ ಹಾಕಿದ್ದೇನೆ. ಹಂಗಂತ ನಾನೇನು ಇವರೆಲ್ಲರ ಹೊಟ್ಟೆ ಮೇಲೆ ಹೋಡಿತಿಲ್ಲ. ಎಲ್ಲ ಅವರವರ ಪಾಡೀಗೆ ದಂಧೆ ಮಾಡ್ತಿದಾರಲ್ಲ. ನಾನು ಸ್ವಲ್ಪ ಹೆಚ್ಚು ಮೀನು ಹೀಡಿತೇನೆ ಎಂದ ಮಾತ್ರಕ್ಕೆ ನನ್ನ ಮೇಲೆ ಅಪವಾದ ಹೋರಿಸೋದು ಯಾವ ನ್ಯಾಯ..?ಹಂಗೆ ನಾನು ಕೇರಳದ್ದು ಗೋವೆದೊ ಜನರಿಗೆ ಮೀನು ಮಾರ್ತೇನೆ ಅಂತಾದರೆ ಗಸ್ತು ಪಡೆಯ ಕರಾವಳಿ ಪೋಲಿಸರೇನು ಮಾಡ್ತಿದಾರೆ..? ರಾತ್ರಿ ಹೊತ್ತಲ್ಲಿ ರೈಡು ಮಾಡ್ಲಿ ನನ್ನ ಮೇಲೆ. ನೀವು ಹೇಳಿದಂತೆ ಏನಾದರೂ ಸಿಕ್ಕಿದರೆ ಒಳಗೇ ಹಾಕ್ಲಿ ಬೇಡ ಎಂದವರಾರು. ಒಬ್ಬ ಕೇರಿ ಹುಡುಗ ಬೆಳಿತಿದಾನೆ ಅಂದರೆ ಕಾಲೆಳೆಯಬಾರದು. ಈ ಅಪ್ಪಣ್ಣ ಮಾವ ಎಷ್ಟು ವರ್ಷದಿಂದ ಸಂಘದ ಬಿಲ್ಲು ಕಟ್ಟಿದಾನೆ..? ಎಷ್ಟು ಸಲ ಕರೆದೊಯ್ದ ಜನರಿಗೆ ಸರ್ಯಾಗಿ ದುಡ್ಡು ಕೊಟ್ಟಿದಾನೆ ಕೇಳಿ..? ಏನಿದ್ದರೂ ತನಗಿಂತ ಬಡ ಹುಡುಗರನು ದೊಣಿಗೆ ಇಳಿಸಿ ಅಪಾಯಕ್ಕೆ ಹಾಕಿದ್ದು ಬಿಟ್ರೆ ಬೇರೆ ದಂಧಿಲ್ಲ ಅವನಿಗೆ, ಏನು ಸಮುದ್ರಕ್ಕೆ ಇಳಿಯದು ಅಂದರೆ ಹುಡುಗಾಟನಾ..? ತಾನು ಮಾತ್ರ ಹತ್ತಿರದ ದಂಡೆಯಲ್ಲೆ ಕಡ್ಡಿ ಆಡಸ್ತಾನೆ..? ಇವೆಲ್ಲ ಕೇಳೊಕೆ ಹೇಳೊಕೆ ಚೆನ್ನಾಗಿರಲ್ಲ. ದೊಡ್ಡವರು ದೊಡ್ಡವರಿದ್ದಂಗೆ ಇರ್ಬೇಕು…” ಎನ್ನುತ್ತಿದ್ದರೆ ಸಮಿತಿಯವರಲ್ಲೊಬ್ಬ ತಹಬಂದಿಗೆ ತರುವ ನಿಟ್ಟಿನಲ್ಲಿ ,
“..ನೋಡು ಧಂಜು.. ಎಲ್ಲರೂ ದುಡಿಬೇಕು. ಅವರವರ ಪಾಡಿಗೆ ಅವರವರ ಪಾಲು ಸಮುದ್ರದಿಂದಲೇ ಬದುಕು ಕಟ್ಟಿಕೊಳ್ಳಬೇಕು.. ಸುಖಾ ಸುಮ್ಮನೆ ಪೋಲಿಸು ಗೀಲೀಸು ಅಂತೆಲ್ಲ ನಾಳೇ ಏನಾದರೂ ಆಗಬಾರದು ನೋಡು..” ಎನ್ನುತ್ತ ಪರೋಕ್ಷವಾಗಿ ಅವನನ್ನು ಕಾನೂನಿನ ಭಯಕ್ಕೆ ಬೀಳಿಸಲು ನೋಡುತ್ತಿದ್ದರೆ, ಇನ್ನೂ ರಾಂಗ್ ಆದ ಧಂಜು ನಾಯ್ಕ, “..ಒಯ್ ಪೋಲಿಸರ ಧಮ್ಕಿ ತೋರಸ್ತೀರಾ..? ನನಗೆ ನಿಮ್ಮ್ ಸಂಘನೂ ಬ್ಯಾಡ ನಿಮ್ಮ ಸಹವಾಸನೂ ಬೇಡ ಏನು ಮಾಡ್ಕೊಳ್ತೀರೋ ಮಾಡ್ಕೊಳ್ಳಿ. ನಾನೇನು ಯಾರದೋ ಮೀನು ಕಿತ್ಕೊಂಡು ಮಾರುತ್ತಿಲ್ಲ. ಸಮುದ್ರದಿಂದಲೇ ಎತ್ತುತಾ ಇದೀನಿ. ಬೇಕಾದವರು ಬಂದು ನಿಮ್ಮ ದೋಣಿಲಿ ನಿಂತು ನೋಡಿಕೊಂಡು ಹೋಗಿ ..” ಎನ್ನುತ್ತಾ ಟವಲ್ ಕೊಡವಿ ಬನ್ರೋ ಎನ್ನುತ್ತ ತನ್ನೊಂದಿಗೆ ಬಂದಿದ್ದ ಹತ್ತಾರು ಜನರನ್ನು ಎಬ್ಬಿಸಿಕೊಂಡು ಹೊರಟುಹೋದ.
ಬಾಗಿಲ ಬಳಿ ಹೊರಕ್ಕೆ ಬಂದ ಅಪ್ಪಣ್ಣ ಮೊಗೆರ.. ಏನೋ ಹೇಳಲು ಪ್ರಯತ್ನಿಸುತ್ತಿದ್ದರೆ,”..ಅಪ್ಪಣ್ಣ ಮಾವ ನೀನು ಹಿರಿಯ ಅನ್ನೋ ಮರ್ಯಾದೆ ಕೊಡ್ತೀದಿನಿ ಉಳಿಸ್ಕೊ. ಅದೂ ಇದೂ ಬ್ಯಾಡದ ತಗಾದೆಗೆ ಇಳಿದರೆ ಯಾವ ಮೀನು ಎಲ್ಲಿ ತಿರುಗಿಸಬೇಕು ಅಂತ ನನಗೆ ಚೆನ್ನಾಗಿ ಗೊತ್ತಿದೆ. ಈಗ ಅರ್ಧ ಬಲೆನಾದರೂ ಈಡು ಮಾಡ್ತಿದ್ದಿ. ಬರೋ ವಾರದಿಂದ ಚೈನಾ ಡಿವೈಸ್ ಫಿಕ್ಸ್ ಮಾಡ್ತೀನಿ ನನ್ನ ಬೋಟ್‌ನಲ್ಲಿ. ಅದ್ಯಾವ ಮೀನು ದಂಡೆ ಕಡೆ ದೌಡು ಬೀಳ್ತಾವೆ ನಾನೂ ನೋಡ್ತೀನಿ. ನೀನು ನಿನ್ನ ಸಂಘ ಪೋಲಿಸೂ ಅದೇನು ಮಾಡ್ತೀರೋ ಮಾಡ್ಕೊಳ್ಳಿ. ಯಾವನ ಕೈಗೂ ಇವೆಲ್ಲ ಹಿಡಿಯೋಕಾಗಲ್ಲ..” ಎನ್ನುತ್ತಾ ನೇರವಾಗೇ ನುಡಿದು ಹೊರಟು ಹೋದ.
ಅಪ್ಪಣ್ಣ ಮೊಗೆರ ಅಲ್ಲಿಗೆ ಸುಮ್ಮನಾಗಿಬಿಟ್ಟಿದ್ದ.ಎಲ್ಲಿದ್ದ ಸಮಸ್ಯೆ ಎಲ್ಲಿಗೋ ಒಯ್ದು ನಿಲ್ಲಿಸಿದ್ದ ಧಂಜು ನಾಯ್ಕ.ಅವನು ಹೇಳಿದಂತೆ ಅಪ್ಪಣ್ಣ ಹೊಸ ಒಂದಿಬ್ಬರು ಹುಡುಗರನ್ನು ಕೆಲಸಕ್ಕೆ ಇರಿಸಿಕೊಂಡಿದ್ದೂ ಹೌದು, ಅವರಿಗೆಲ್ಲ ವಾರಕ್ಕೊಮ್ಮೆ ಆಗೀಗ ಸಂಬಳ ಬಟವಾಡೆ ಆಗುವುದೂ ಹೌದು. ಆದರೆ ಅದನ್ನೆ ಇನ್ನೊಂದು ರೀತಿಯಲ್ಲಿ ಶೋಷಣೆ ಮಾಡುತ್ತಿದ್ದಾನೆ ಎನ್ನುವ ರೀತಿ ತಿರುಗಿಸಿಟ್ಟಿದ್ದ ಧಂಜುನಾಯ್ಕ.
ಬೇರಾವ ಉಪಾಯವೂ ಇಲ್ಲದೆ, ಇದ್ದು ಬದ್ದುದರಲ್ಲೇ ಮೀನು ತರುವುದೇ ಉಳಿದ ದಾರಿ ಎಂದುಕೊಂಡು ಅಪ್ಪಣ್ಣ ಮೊಗೆರ ಈಗೀಗ ಸ್ವಲ್ಪ ಸಮುದ್ರ ಮಧ್ಯಕ್ಕೂ ಹೋಗತೊಡಗಿದ್ದ. ತಕ್ಕಮಟ್ಟಿಗೆ ಮೀನುಗಾರಿಕೆ ಆಗುತ್ತಿದೆಯಾದರೂ, ಉಹೂಂ ಮೊದಲಿನ ಹಿಡಿತ ದಕ್ಕುತ್ತಿಲ್ಲ. ವ್ಯವಹಾರವೂ ಅಷ್ಟಕ್ಕಷ್ಟೆ ಆಗುತ್ತಿದೆ.ಬೆಳಿಗ್ಗೆನೆ ಬಿಸಿಲೇರುವ ಮೊದಲೇ ಸಮುದ್ರಕ್ಕಿಳಿದು ದೂರದವರೆಗೆ ಚಲಿಸಿ, ಇಳಿಸಿ ಉಳಿದ ತಯಾರಿ ಮಾಡಿಕೊಳ್ಳುತ್ತಿದ್ದರೆ, ಅಷ್ಟು ದೂರದಲ್ಲಿ ನಿಂತು ಹೋದ ದೊಡ್ಡ ಬೋಟ್ ಒಂದು ಕಾಣಿಸಿತು. ಎಷ್ಟೊತ್ತಾದರೂ ಕದಲುತ್ತಿಲ್ಲ. ಹೆಚ್ಚಾಗಿ ಹಾಗೆ ಸಮುದ್ರ ಮಧ್ಯ ಯಾವುದೇ ದೋಣಿಯೂ ಲಂಗರು ಹಾಕುವುದಿಲ್ಲ. ಹಾಗಿದ್ದಾಗ ಸುಖಾ ಸುಮ್ಮನೆ ನಿಂತಿದೆ ಎಂದರೆ ಏನೋ ಸಮಸ್ಯೆ ಇದೆ ಎಂದೇ ಅರ್ಥ. ಕೂಡಲೇ ಅತ್ತ ನಡೆಸುವಂತೆ ಸೂಚಿಸಿದ ಅಪ್ಪಣ್ಣ. ಕಾರಣ ಅಲೆಗಳ ಮಧ್ಯದಲ್ಲಿ ಯಾವ ದೋಣಿ ಏನಾಗಿದೆ ಇತ್ಯಾದಿಗಿಂತ ಮೊದಲು ಅದರಲ್ಲಿದ್ದವರ ರಕ್ಷಣೆಗೆ ಧಾವಿಸಬೇಕೆನ್ನುತ್ತದೆ ಬೆಸ್ತರ ನಿಯಮ.ಹಾಗಾಗಿ ನಿಂತುಹೋಗಿದ್ದ ಬೋಟ್ ಕಣ್ಣಿಗೆ ಬೀಳುತ್ತಿದ್ದಂತೆ ಅದನ್ನೇರಿದ ಅಪ್ಪಣ್ಣ ನಿಂತುಹೋದ ಎಂಜಿನ್ ರೂಮಿಗೆ ಹೋದ. ಇತ್ತ ಇನ್ನೊಬ್ಬ ಹಡಗಿನಲ್ಲಿ ಯಾರು ಏನು ಎಂದು ನೋಡಲು ಕೆಳಗೆ ತೆರಳಿದ. ಸುಮಾರು ಎರಡು ಗಂಟೆಯ ಪ್ರಯತ್ನದಲ್ಲಿ ದಂಡೆಗೆ ಬೋಟು ಸುರಕ್ಷಿತವಾಗಿ ಬಂದು ತಲುಪಿತ್ತು. ಅಪ್ಪಣ್ಣನ ಹುಡುಗರು ಮೊದಲೇ ಮೊಬೈಲ್‌ನಲ್ಲಿ ಸೂಚನೆ ಕೊಟ್ಟಿದ್ದರಿಂದ ಇತರರು ಸಹಾಯಕ್ಕಾಗಿ ಧಾವಿಸಿ ಕಾಯುತ್ತಿದ್ದರು. ಬೋಟಿನಲ್ಲಿದ್ದವನನ್ನು ಆಸ್ಪತ್ರೆಗೆ ಸಾಗಿಸಿದರು.ಅರ್ಧ ಗಂಟೆಯ ನಂತರ ಕಣ್ಬಿಟ್ಟ.ಯಾವುದೋ ದವಾಖಾನೆ ಎಂದು ಖಾತ್ರಿಯಾಗಿತ್ತು.ಆಚೀಚೆ ನೋಡಿದ ಎದುರಿಗೆ ಅಪ್ಪಣ್ಣ ಮಾವ ಮತ್ತವನ ಹುಡುಗರು.
ಮಲಗಿದ್ದಲ್ಲೇ ಅಂದಾಜಾಯಿತು ಧಂಜು ನಾಯ್ಕನಿಗೆ.ತನ್ನ ದೋಣಿಯಲ್ಲಿ ಲೈಟ್ ಫಿಂಶಿಂಗ್ ಮತ್ತು ಟ್ಯೂನ್ ಫಿಶಿಂಗ್‌ಗಾಗಿ ಇರಿಸಿಕೊಂಡಿ ಹೈ ಎನರ್ಝಿ ಬ್ಯಾಟರಿಯಿಂದ ಡಿವೈಸ್‌ಗೆ ಕನೆಕ್ಷನ್ ತೆಗೆದುಕೊಳ್ಳುವಾಗ ಶಾರ್ಟ್ ಆಗುತ್ತಿದ್ದಂತೆ ಶಾಕ್ ಹೊಡೆದಿದ್ದು ಮಾತ್ರ ಗೊತ್ತು. ಅದೂ ಅದೂ ಅಪರಾತ್ರಿಯಲ್ಲಿ. ಆಮೇಲೆ ಎಷ್ಟೊ ಹೊತ್ತಿನವರೆಗೂ ಹಾಗೆ ಬಿದ್ದಿರಬೇಕು. ತೀರ ಬೆಳಿಗ್ಗೆ ಹತ್ತಿರ ಬಂದ ಅಪ್ಪಣ್ಣ ಮಾವ ಗಮನಿಸಿ ತನ್ನನ್ನು ದಂಡೆಗೆ ತಂದು ಜೀವ ಉಳಿಸಿದ್ದಾರೆ.ಡಾಕ್ಟರರ ದನಿ ಕೇಳಿಸಿತ್ತು.”..ನೋಡಪ್ಪ.. ಇನ್ನೊಂದು ಗಂಟೆ ತಡವಾಗಿದ್ದರೂ ನಿನ್ನ ಪ್ರಾಣ ಉಳಿತಿರಲಿಲ್ಲ. ಇವ್ರು ಸರಿಯಾದ ಸಮಯಕ್ಕೆ ನಿನ್ನ ಕರಕೊಂಡು ಬಂದು ಜೀವ ಉಳ್ಸಿದಾರೆ..” ಎನ್ನುತ್ತಿದ್ದಾರೆ ಡಾಕ್ಟರು.
ಸುಮ್ಮನೆ ಕೈ ಮುಗಿದ ಅಪ್ಪಣ್ಣ ಮೊಗೆರ ಎದ್ದು ಟವಲ್ ಹೆಗಲಿಗೆ ಹಾಕಿಕೊಳ್ಳುತ್ತಾ ಹೊರಟರೆ, ಮಲಗಿದ್ದಲ್ಲೆ ಕೈ ಮುಗಿದು ಕಾಲ ಕಡೆಗೆ ಚಾಚಿದ್ದ ಧಂಜು ನಾಯ್ಕ. ಅಪ್ಪಣ್ಣ ಸುಮ್ಮನೆ ಒಮ್ಮೆ ಅವನ ತಲೆ ಸವರಿ”..ಏನೂ ಆಗಲ್ಲ ಬಿಡು, ಸ್ವಲ್ಪ ಆರಾಮ ಮಾಡು. ಇವೆಲ್ಲ ನಮ್ಮ ಬದುಕಲ್ಲಿ ಸಾಮಾನ್ಯ. ನೀರಿಗಿಳಿದ ಮೇಲೆ ನಮ್ಮ ಬದುಕು ನಮ್ಮ ಕೈಲಿರಲ್ಲ. ದೇವ್ರು ಹೆಂಗೋ ಯಾರನ್ನೋ ಸಹಾಯಕ್ಕೆ ಕಳಿಸ್ತಾನೆ ಬಿಡು. ಇವತ್ತು ನಾನು ನಾಳೆ ನೀನು ಇನ್ಯಾರಿಗೋ..” ಎನ್ನುತ್ತಿದ್ದರೆ ಸ್ವಲ್ಪ ಜರುಗಿ ಅಪ್ಪಣ್ಣನ ಕಾಲಿಗೆ ಕೈ ತಾಗಿಸಿ,”..ಅಪ್ಪಣ್ಣ ಮಾವ. ನನ್ನ ಪಾಲಿಗ್ ಮಾತ್ರ ನೀವೆ ದೇವ್ರಾಗಿ ಬಂದ್ರಿ. ಒಂದು ಅವಕಾಶ ಕೊಡಿ. ನಿಮಗೂ ಹೆಂಗೂ ವಯಸ್ಸಾಗ್ತಿದೆ. ಇನ್ನು ಮೇಲೆ ಬ್ಯಾಲೆ ಮೇಲೆ ಬರೋದೇನೂ ಬ್ಯಾಡ. ನಿಮಗೆ ಮಾರಾಟಕ್ಕೆ ಬೇಕಾದಷ್ಟು ಮೀನು ನನ್ನ ಬೋಟ್‌ನಿಂದಾನೇ ಇಳಿಸ್ಕೊಳ್ಳಿ. ನನಗೆ ಅಸಲು ಕೊಟ್ರೆ ಸಾಕು. ಉಳಿದದ್ದು ನಿಮಗೆ ಆಗುತ್ತೆ. ಹೆಂಗಿದ್ದರೂ ಬಲೆ ಮಾತ್ರ ಇಳಿಸಿದರೂ ನಾನು ಲಾರಿಗಟ್ಟಲೇ ಮೀನು ತರ್ತೀನಲ್ಲ. ಅದರಲ್ಲೊಂದು ಅರ್ಧ ಲೋಡು ಇಳಿಸಿಕೊಡ್ತೀನಿ. ಬೆಳಿಗ್ಗೆ ಹೋಗಿ ಸಂಜೆಗೆ ಬಂದು ಬಿಡ್ತೀನಿ ..” ಎನ್ನುತ್ತಿದ್ದಾನೆ.ಸುಮ್ಮನೆ ಅವನ ತಲೆ ಸವರಿದ ಅಪ್ಪಣ್ಣ ಮೊಗೆರ.ಅಷ್ಟೂ ದೂರದಲ್ಲಿ ಸಮುದ್ರ ಮೊರೆದ ಶಬ್ದ ಕೇಳಿಸಿತ್ತು.ಬ್ಯಾಲೆ ಮೇಲಿನ ಬದುಕು ನಿಸೂರಾಗಿತ್ತು.
ಚಿತ್ರಕೃಪೆ ಪಬ್ಲಿಕ್ ಡೊಮೇನ್ ವಿನ್ಸ್ಲೌ ಹೋಮರ್ ೧೯೦೦
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ