ಭಾಗ-೨
ಬೆಳಿಗ್ಗೆ ಎದ್ದು ಅಮ್ಮ ಮಾಡಿಕೊಟ್ಟ ಮೊಸರನ್ನವನ್ನೋ , ಚಿತ್ರಾನ್ನವನ್ನೋ ಸ್ಟೀಲ್ ಬಾಕ್ಸಿಗೆ ತುಂಬಿಕೊಂಡು ಅದಕ್ಕೊಂದು ಕರ್ಚೀಫನ್ನು ಕಟ್ಟಿ ಬೆರಳು ತೂರಿಸಿ ಹಿಡಿದುಕೊಂಡು ಎರಡು ಕಿಲೋಮೀಟರ್ ನಡೆದರೆ ಸಿಗುತ್ತಿದ್ದುದು ಕಾರ್ಪೇನಹಳ್ಳಿ ಶಾಲೆ. ಕಲ್ಲಪ್ಪ ಮಾಸ್ತರು ನಮ್ಮೆಲ್ಲರ ಅಚ್ಚುಮೆಚ್ಚು. ಇಂಗ್ಲೀಷಿನ ಎಬಿಸಿಡಿ ಕಲಿಕೆ ಶುರುವಾಗಿದ್ದು ಐದನೆಯ ತರಗತಿಯಲ್ಲಿ , ನಮಗೆ ಇಂಗ್ಲೀಷ್ ಕಲಿಸಲು ಕಲ್ಲಪ್ಪ ಮಾಸ್ತರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕನ್ನಡ ಕಾಗುಣಿತವನ್ನ ಸಂಪೂರ್ಣವಾಗಿ ಇಂಗ್ಲೀಷಿನಲ್ಲಿ ಬರೆಸಿ ಗಟ್ಟು ಹೊಡೆಸಿ ಪಡಬಾರದ ಕಷ್ಟವನ್ನೆ ಪಟ್ಟಿದ್ದು ತಕ್ಕಮಟ್ಟಿಗೆ ಉಪಯೋಗವಾದರೂ ಇಂಗ್ಲೀಷ್ ಮಾತುಗಳು ಅರ್ಥವಾಗುತ್ತಿದುದು ಅಷ್ಟಕ್ಕಷ್ಟೇ.
ಮುಂದೆ ನವೋದಯ ಶಾಲೆಯಲ್ಲಿ ಕಲಿಯಲು ಅವಕಾಶ ಸಿಕ್ಕಿ ಅಲ್ಲಿಗೆ ಹೋದಾಗ ಸಿಕ್ಕದ್ದು ನಮ್ಮ ಮುಂದಿನ ಇಂಗ್ಲೀಷ್ ಟೀಚರ್ ಸಲೀನಾ ಮೇಡಂ. ಅವರೋ ಕೇರಳದವರು ಕನ್ನಡ ಬಾರದು ನನಗೋ ಇಂಗ್ಲೀಷ್ ಅರ್ಥವಾಗದು ಆದರೆ ಆರನೆಯ ತರಗತಿಯಲ್ಲಿ ಶುರುವಾದ ಅವರ ಇಂಗ್ಲೀಷ್ ಪಾಠ ಒಂಬತ್ತನೆಯ ತರಗತಿವರೆಗೆ ಮುಂದುವರೆದಿತ್ತು. ಒಂಬತ್ತನೆಯ ತರಗತಿಗೆ ಬರುವಷ್ಟರಲ್ಲಿ ಇಂಗ್ಲೀಷ್ ಅರ್ಥವಾಗಲು ಶುರುವಾಗಿದ್ದು ಅವರ ಯಶಸ್ಸೇ ಸರಿ. ಅವರು ಒಂಬತ್ತನೇ ತರಗತಿಯಲ್ಲಿದ್ದ ಸಪ್ಲಿಮೆಂಟರಿ ಪುಸ್ತಕದ ( ಮುಖ್ಯ ಪುಸ್ತಕ ಹೊರತು ಪಡಿಸಿ) ಇಂಗ್ಲೀಷ್ ಕಥೆಗಳನ್ನು ಬಣ್ಣಿಸಲು ಶುರು ಮಾಡಿದರೆ ನಮಗೋ ಹಬ್ಬ. ಪಠ್ಯಗಳಲ್ಲಿ ಅರ್ಧ ಬರ್ದ ಕಥೆಗಳಿರುತ್ತಿದ್ದವು ಅಂತವುಗಳನ್ನು ಮೇಡಂ ಬೇರೆಲ್ಲೋ ಪೂರ್ತಿ ಕಥೆ ಓದಿಕೊಂಡು ಬಂದು ನಮಗೆ ಪಠ್ಯದ ಹಿಂದಿನ ಮತ್ತು ಮುಂದಿನ ಸಾರಾಂಶ ಕ್ಲೈಮಾಕ್ಸ್ ಎಲ್ಲ ಹೇಳುತ್ತಿದ್ದುದು ಇಂದಿಗೂ ನೆನಪಿದೆ. ಇದೆಲ್ಲ ನೆನಪಾಗಿದ್ದು ಕಾರಣ ಇಂದು World Migratory Bird Day – ವಿಶ್ವ ವಲಸೆ ಹಕ್ಕಿಗಳ ದಿನವಂತೆ. ಈ ವರ್ಷದ ಥೀಮ್ ಎಂದರೆ Birds connect our world.
ಬಹಳಷ್ಟು ಮರೆತು ಹೋಗಿದೆ ಆದರೆ ನಮಗೆ ಮೇಡಂ ಒಂದು ಅಧ್ಯಾಯ ಪಾಠ ಮಾಡಿದ್ದು ನೆನಪಿಗೆ ಬಂದು ಅಂತರ್ಜಾಲ , ಸ್ನೇಹಿತರ ಬಳಿ, ಕೊನೆಗೆ ಮೇಡಂ ಅವರಿಗೂ ಮೆಸೇಜು ಕಳಿಸಿ ತಡಕಾಡಿದೆ ಪಾಠದ ಹೆಸರು ಮರೆತುಹೋಗಿದೆ ಎಲ್ಲರಿಗೂ. ಪಾಠದಲ್ಲಿ ವಲಸೆ ಹಕ್ಕಿಗಳು ಸಾವಿರಾರು ಮೈಲಿ ದೂರ ಹಾರುವುದು , ಅವುಗಳಿಗೆ ಅಧ್ಯಯನಕ್ಕೆಂದು study band ಕಟ್ಟುವುದು ಮಾತ್ರ ನೆನಪಿದೆ. ಶಾಲೆ ಮುಗಿಸಿದ ಮೇಲೆ ಮರೆತು ಪಾಠದ ನಿಜವನ್ನು ಕಂಡಿದ್ದು ಪಾಠ ಹೆಚ್ಚು ಅರ್ಥವಾದಂತೆ ಅನಿಸಿದ್ದು ಮೂರು ತಿಂಗಳ ಹಿಂದೆ ಮೈಸೂರಿನ ಹದಿನಾರು ಕೆರೆಯಲ್ಲಿ ವಲಸೆ ಹಕ್ಕಿಗಳಾದ ಪಟ್ಟೆ ತಲೆ ಹೆಬ್ಬಾತುಗಳು (Bar Headed Goose) ಕಂಡ ಮೇಲೆ. ಪಟ್ಟೆ ತಲೆ ಹೆಬ್ಬಾತುಗಳು ವಿಶಿಷ್ಟ ವಲಸೆ ಹಕ್ಕಿಗಳು. Bar Headed Goose are the austronauts of the bird world. They have time and again made the scientists wonder about their capabilities of flying over the Himalayas at the heights of Mount Everest (8000mts approx) without the need of acclimatization. ಚಳಿಗಾಲ ಶುರು ಆಯ್ತೆಂದರೆ ಸಾಕು ಮಂಗೋಲಿಯಾ, ರಷ್ಯಾ, ಕಝಾಕಿಸ್ತಾನ್ ಕಡೆಯಿಂದ ಹಿಮಾಲಯ ದಾಟಿ ಮೈಸೂರಿನವರೆಗೂ ( ಕರ್ನಾಟಕದ ಹಲವು ಭಾಗಗಳಿಗೆ) ಬಂದು ಬದುಕಿ ಮತ್ತೆ ವಲಸೆ ಹೋಗುವ ಇವುಗಳು ವಿಶಿಷ್ಟ ಪಕ್ಷಿಗಳು.
ಸಾವಿರಾರು ಕಿಲೋಮೀಟರ್ ಹಾರುವ ವಲಸೆ ಹಕ್ಕಿಗಳು ಮಧ್ಯೆ ಅಲ್ಲಲ್ಲಿ ನಿಂತು ಊಟ ನಿದ್ರೆ ಮುಗಿಸಿ ಮತ್ತೆ ಹಾರುತ್ತವೆ. ಅಂದರೆ ಅವುಗಳು ವಲಸೆ ಹೋಗುವ ದಾರಿಯಲ್ಲಿ ಅನಾಹುತಗಳು (ಕಳೆದ ಬಾರಿ ಉಳಿದಿದ್ದ ಕೆರೆ ಕಟ್ಟೆಗಳು ಇಲ್ಲವಾಗಿ ಅಥವಾ ನೀರು ಖಾಲಿಯಾಗಿ ಹೀಗೆ) ನಡೆದಲ್ಲಿ ವಲಸೆ ನಿಂತು ಹೋಗುತ್ತದೆ. ಎಲ್ಲವೂ ಸರಿ ಇದ್ದರೆ ವಲಸೆ ಮುಂದುವರೆಯುತ್ತದೆ. ಈ ವಲಸೆಯಿಂದ ಅವುಗಳಿಗೆ ಅರಿಯದೆ ಭೂಮಿಯ ಭವಿಷ್ಯದ ಮಾಹಿತಿಯನ್ನು ಹೊತ್ತು ತರುವ ಇವು ಮುಂದಿನ ದಿನಗಳು ಹೇಗಿವೆ ಎಂದು ನಿರ್ಧರಿಸುತ್ತದೆ. ಒಂದು ವೇಳೆ ಸಾಮನ್ಯವಾಗಿ ಬಂದಂತೆ ಪ್ರತಿ ವರ್ಷ ಬಂದಷ್ಟೇ ಈ ವರ್ಷವೂ ವಲಸೆ ಹಕ್ಕಿಗಳು ಬಂದರೆ ಎಲ್ಲವೂ ಸರಿ ಇದೆ ಎಂದೂ , ಕಡಿಮೆ ಬಂದರೆ ಸಮಸ್ಯೆ ಶುರು ಆಗಿದೆ ಎಂದು, ಬರದೆ ಹೋದರೆ ಮುಂದಿನ ದಿನಗಳು ಆತಂಕಕರವಾಗಿವೆ ಎಂದರ್ಥ. ಪಟ್ಟೆ ತಲೆ ಹೆಬ್ಬಾತು ಅಷ್ಟೇ ಅಲ್ಲ ಭಾರತಕ್ಕೆ ಪ್ರತಿ ವರ್ಷ ಸುಮಾರು 350 ಹಕ್ಕಿಗಳು ( ವಿಶ್ವದಲ್ಲಿ 4000 ಜಾತಿಯ ವಲಸೆ ಹಕ್ಕಿಗಳಿವೆ ) ವಲಸೆ ಬರುತ್ತವೆ. ಒಂದೊಂದು ಪಕ್ಷಿಯು ವಿಶಿಷ್ಟವೆ ಸರಿ.
ಯುರೋಪಿನಲ್ಲಿ ವಲಸೆ ಹಕ್ಕಿಗಳು ವಾಪಾಸಾದರೆ ಅರ್ಥ ವಸಂತ ಮೂಡಿತು ಎಂದು, ಹಳೆ ಕಾಲದಲ್ಲಿ – ವಲಸೆ ಹಕ್ಕಿಗಳು ವಾಪಾಸಾದರೆ ಪ್ರವಾಹ ಇಳಿದು ಧೈರ್ಯ ತೆಗೆದುಕೊಳ್ಳಬಹುದು ಎಂಬ ಸೂಚನೆ ಎಂದು ಪ್ರತೀತಿ ಇದೆ. ಪ್ರತಿಯೊಂದು ಪಕ್ಷಿಯು ಪರಿಸರ ಸಮತೋಲನ ಕಾಪಾಡುವಲ್ಲಿ ಪಾಲು ಹೊಂದಿದೆ. ಪರಾಗ ಸ್ಪರ್ಶ , ಕೀಟ ನಿಯಂತ್ರಣ ಕಾಪಾಡುವಲ್ಲಿ ಪ್ರತಿ ಹಕ್ಕಿಯು ಪಾಲ್ಗೊಳ್ಳುತ್ತವೆ. ವಲಸೆ ಹಕ್ಕಿಗಳಿಗೆ ಪ್ರಮುಖವಾಗಿ ವಲಸೆ ಹೋಗುವ ದಾರಿಯಲ್ಲಿ ಉಳಿಯಲು ವ್ಯವಸ್ಥೆ ಇರಬೇಕು ಅಂದರೆ ಅವುಗಳೇ ತಂತಮ್ಮ ಅಡ್ಡಗಳನ್ನು ( pitstops) ಹುಡುಕಿಕೊಂಡಿರುತ್ತವೆ. Mainly wetlands are important for migratory birds where they stop , rest , feed and restart their journey. Any disturbance to the pitstops will only affect migration by killing migratory birds in large numbers.
ಹಲವು ವಲಸೆ ಹಕ್ಕಿಗಳು ವಿಶಿಷ್ಟತೆಯನ್ನು ಮೆರೆಯತ್ತವೆ. ಕೆಲವು ಹಕ್ಕಿಗಳು ವಿಶ್ರಾಂತಿಗೆ ನಿಲ್ಲದೆ ಒಂದೇ ಸಮನೆ ಸಾವಿರಾರು ಕಿಲೋಮೀಟರ್ ಹಾರಬಲ್ಲವು ಎಂದರೆ ಆಶ್ಚರ್ಯ ಅಲ್ಲವೇ.. ಹಮ್ಮಿಂಗ್ ಬರ್ಡ್ ನಿಮಗೆಲ್ಲ ಗೊತ್ತಿರಬಹುದು ಅಷ್ಟು ಸಣ್ಣ ಹಕ್ಕಿ ಮೆಕ್ಸಿಕೋ ಸಮುದ್ರ ಕೊಲ್ಲಿಯನ್ನು ಎಲ್ಲಿಯೂ ನಿಲ್ಲದೆ ಒಂದೇ ಸಮನೆ ಹಾರುತ್ತಾ 600 ಮೈಲಿ ಕ್ರಮಿಸುತ್ತವೆ ಎಂದರೆ ಊಹಿಸಿಕೊಳ್ಳಿ. ಐದು ಕಿಲೋಮೀಟರ್ ನಡೆದರೆ ನಮಗೆ ಕಾಲು ನೋವು ಆದರೆ ಈ ಸಣ್ಣ ಹಕ್ಕಿಯ ಶಕ್ತಿ ಅಗಾಧ. ಆದರೆ ಹಲವು ಹಕ್ಕಿಗಳು ಒಮ್ಮೆಯೇ ಹಾರದೆ ಅಲ್ಲಲ್ಲಿ ನಿಂತು ಹಾರುತ್ತಿರುತ್ತವೆ. ವಲಸೆ ಹಕ್ಕಿಗಳು ಎಷ್ಟು ಬುದ್ದಿವಂತರು ಎಂದರೆ ಅವುಗಳು ಬಂದ ಜಾಗಕ್ಕೆ ಮತ್ತೆ ದಾರಿ ಹುಡುಕಿ ಹೋಗಬಲ್ಲವು ಮತ್ತು ವಿಶ್ರಾಂತಿಗಾಗಿ ಪ್ರತಿ ವರ್ಷ ಅದೇ ಜಾಗಗಳನ್ನು ನೆನಪಿನಲ್ಲಿ ಇಟ್ಟಕೊಂಡು ಹೋಗುತ್ತವೆ. ಆದ್ದರಿಂದ ನೀವು ಹೋದ ವರ್ಷ ಕಂಡ ಪಕ್ಷಿ ಮತ್ತೆ ಅಲ್ಲಿಯೇ ಕಂಡರೆ ಅದು ಮತ್ತೆ ಊಟ ನೀರಿಗಾಗಿ ಹುಡುಕಿ ಬಂದಿರಲೂಬಹುದು. ಆದ್ದರಿಂದ ನಿಮ್ಮ ತೋಟಗಳಲ್ಲಿ ಹಿತ್ತಲುಗಳಲ್ಲಿ ಅವುಗಳಿಗೂ ನೀರಿನ ಮತ್ತು ಊಟದ ಪಾಲು ಇಟ್ಟಿರಿ.
ಹೀಗೆ ಮತ್ತೊಂದು ಪಕ್ಷಿ ಇದೆ Arctic Tern ಎಂದು. ಸಾಧಾರಣವಾಗಿ ನೆನಪಿಗೆ ಬಂದಂತೆ ಸಲೀನಾ ಮೇಡಂ ಪಾಠ ಮಾಡಿದ್ದು ಇದೆ ಪಕ್ಷಿಯ ಬಗ್ಗೆ ಇರಬೇಕು ಎಂಬಂತಿದೆ ಆದರೆ ಸರಿಯಾದ ನೆನಪಿಲ್ಲ. ಒಂದು ವರ್ಷದಲ್ಲಿ ಭೂಮಿಯ ಉತ್ತರ ಧ್ರುವದಿಂದ ಶುರುವಾದ ವಲಸೆ ದಕ್ಷಿಣ ಧ್ರುವಕೂ ತಲುಪಿ ವಾಪಸಾಗುವ ಇವುಗಳು ವರ್ಷಕ್ಕೆ ಸರಾಸರಿ ಐವತ್ತು ಸಾವಿರ ಕಿಲೋಮೀಟರ್ ಪ್ರಯಾಣ ಮಾಡುತ್ತವೆ. ಆಫೀಸು ಮನೆ ಆಫೀಸು ಮನೆ ಎಂದು ಅಂದಾಜು ವರ್ಷಕ್ಕೆ ಬರೀ ಮೂರ್ನಾಲ್ಕು ಸಾವಿರ ಓಡಾಡುವ ಜನರೂ ನಮ್ಮಲಿಲ್ಲ ಅಲ್ಲವೇ. ಇಲ್ನೋಡಿ ಮೂವತ್ತು ವರ್ಷ ಬದುಕುವ ಇವುಗಳು ಮೂರು ಬಾರಿ ಚಂದ್ರ ಲೋಕಕ್ಕೆ ಹೋಗಿ ಬಂದಷ್ಟು ದೂರ ಹಾರುತ್ತವೆ. Great Snipe ಎಂಬ ಹಕ್ಕಿ ಅಂದಾಜು ಕಿಲೋಮೀಟರ್ ಗೆ ನೂರರಷ್ಟು ವೇಗದಲ್ಲಿ ಹಾರಬಲ್ಲವು.
ಇನ್ನು ಬಹಳಷ್ಟು ವಿಶಿಷ್ಟ ವಿಷಯಗಳೇನೋ ಇವೆ ಆದರೆ ಅದನ್ನು ತಿಳಿದುಕೊಳ್ಳುವುದಕ್ಕಿಂತ ಮುಖ್ಯ ನಮಗೆ ತಿಳಿಯಬೇಕಾದದ್ದು ಎಂದರೆ ನಮಗೆ ಅರಿವಿಲ್ಲದೆ ನೂರಾರು ಹಕ್ಕಿಗಳು ತನ್ನ ವಂಶವನ್ನು ಮುಂದುವರೆಸಲು ನೂರಾರು ಕಿಲೋಮೀಟರ್ ದೂರದಿಂದ ಹಾರಿ ಮರಿ ಮಾಡಲು ಸಂತತಿ ಮುಂದುವರೆಸಲು ಬರುತ್ತಿರುತ್ತವೆ. ಇಲ್ಲಿ ಎರಡು ತರದ ವಲಸೆ ಕಾಣಬಹುದು ಒಂದು ದೂರದ ವಲಸೆ – ಇಲ್ಲಿ ಹಕ್ಕಿಗಳು ಚಳಿಗಾಲದ ಅತಿಥಿಗಳಾಗಿ ಬಂದು ಇದ್ದು ನಂತರ ಮರಿ ಮಾಡಲು ಬಂದ ಜಾಗಕ್ಕೆ ಮರಳುತ್ತವೆ, ಎರಡನೆಯದು ಸ್ಥಳೀಯ ವಲಸೆ. ಬೇರೆ ಜಿಲ್ಲೆ, ರಾಜ್ಯಗಳಿಂದ ಬಂದು ನಮ್ಮೂರಿನ ಕೆರೆಗಳಲ್ಲಿ ಮರಿ ಮಾಡಿಕೊಂಡು ನಂತರ ಬಂದ ಜಾಗಕ್ಕೆ ವಾಪಸಾಗುತ್ತವೆ. ಅವುಗಳನ್ನು ಕಂಡಾಗ ಒಮ್ಮೆ ನಿಂತು ಕಾಣಿ, ಅವುಗಳ ಬಣ್ಣ , ಅಭ್ಯಾಸ , ಲಕ್ಷಣಗಳನ್ನು ಗಮನಿಸಿ ಜೊತೆಗೆ ಅವುಗಳಿಗೆ ಸುಲಭವಾಗುವಂತೆ ಅವುಗಳ ಹತ್ತಿರ ಹೋಗದೆ ದೂರ ಇದ್ದು ಬಿಡಿ. ಒಂದು ಸಣ್ಣ ಜೀವಿಯೂ ಭೂಮಿಗೆ ಮತ್ತು ಮಾನವ ಕುಲದ ಉಳಿವಿಗಾಗಿ ಅವಶ್ಯವಿದೆ.
ಒಂದು ನೈಸರ್ಗಿಕ ವ್ಯವಸ್ಥೆ ಏರುಪೇರಾದರೆ ಅದೆಷ್ಟು ಮೇಶೀನುಗಳು ಬಂದರೂ ಸರಿ ಪಡಿಸಲಾಗದು. ಆದ್ದರಿಂದ ಕೆರೆ ಕಟ್ಟೆಗಳಲ್ಲಿ ಅನವಶ್ಯ ಹಾಳು ಮಾಡದೆ, ಹೊಲಗಳಲ್ಲಿ ಹೊಂಡಗಳಲ್ಲಿ ನೀರು ನಿಲ್ಲಿಸಿ ಕೀಟ ನಾಶಕಗಳ ಬಳಕೆ ಕಡಿಮೆ ಮಾಡಿ , ಹಕ್ಕಿ ಪಕ್ಷಿಗಳ ಸಂತತಿ ಮುಂದುವರೆಸಲು ಸಹಾಯ ಮಾಡಿ. ನಿಮ್ಮ ಹೊಲಗಳಲ್ಲಿ , ಮನೆಯ ಹಿತ್ತಲುಗಳಲ್ಲಿ ಬರುವ ಹಲವು ಹಕ್ಕಿಗಳು ಸಾವಿರಾರು ಕಿಲೋಮೀಟರ್ ಇಂದ ಬಂದಿರಬಹುದು, ಅವುಗಳ ಹತ್ತಿರ ಹೋಗದೆ ತೊಂದರೆ ಕೊಡದೆ ಉಳಿಯುವ ವ್ಯವಸ್ಥೆ ಮಾಡಿ ಬಿಟ್ಟಿರಿ. ಪ್ರತಿ ದಿನ ನಿಮ್ಮ ತೋಟಗಳಿಗೆ ಭೇಟಿ ನೀಡಿದಾಗ ಪಕ್ಷಿಗಳನ್ನು ಗುರುತಿಸಿ ಪಟ್ಟಿ ಮಾಡಿ, ಸುಮಾರೆಂದರೂ ಒಂದು ತೋಟಕ್ಕೆ ಇಪ್ಪತ್ತು ತರದ ಪಕ್ಷಿಗಳು ಬರುತ್ತವೆ. ( ಹೆಚ್ಚಿದ್ದಷ್ಟೂ ನಿಮ್ಮ ತೋಟ ಆರೋಗ್ಯಕರ ಎಂದೇ ಅರ್ಥ. ) ಅವುಗಳು ಗೂಡು ಎಲ್ಲಿದೆ ಯಾವಾಗ ಹಾರಿ ಹೋಗುತ್ತವೆ ಎಂಬುದು ಗಮನಿಸಿ. ಹೀಗೆ ಮಾಡಿದಾಗ ನಮ್ಮಗಳ ಅರಿವಿಗೆ ಬಾರದೆ ಅವುಗಳು ಗೂಡು ಹಾಳಾಗುವುದು ಅವುಗಳಿಗೆ ತೊಂದರೆ ಆಗುವುದು ತಪ್ಪುತ್ತದೆ. ಜೀವಮಾನದಲ್ಲಿ ನಾವು ಸೈಬೀರಿಯಾ ರಷ್ಯಾ ಕಡೆಗೆ ಹೋಗಲು ಸಾಧ್ಯವಾಗದೆ ಇರ ಬಹುದು ಆದರೆ ಅಲ್ಲಿಂದಲೇ ನಮ್ಮ ಹಕ್ಕಿ ಅತಿಥಿಗಳು ನಮ್ಮನ್ನು ಹುಡುಕಿಕೊಂಡು ಬರುತ್ತಲೇ ಇರುತ್ತವೆ ಎಂಬುದನ್ನು ನೆನಪಿನಲ್ಲಿಟ್ಟಕೊಂಡು ಪ್ರತಿಯೊಂದು ಹಕ್ಕಿಯನ್ನು ಸ್ವಾಗತಿಸಿ ಅವುಗಳ ಸಂತತಿ ಬೆಳೆಯಲು ಮಾನವರು ನೆರವಾಗಬೇಕಿದೆ. ಇದನ್ನೇ ಹೇಳುವುದು Birds connect our world.
Note: ಪಟ್ಟೆ ತಲೆ ಹೆಬ್ಬಾತು ಕಂಡು ಬರೆದಿದ್ದ ಬರಹ ಇಲ್ಲಿದೆ.
ನಿಮ್ಮ ಬಳಿ ಇರುವ ವಲಸೆ ಹಕ್ಕಿಗಳ ಚಿತ್ರಗಳನ್ನು ಕಾಮೆಂಟ್ ಮಾಡಿ. Let’s celebrate #worldmigratorybirdday
ಹೆಚ್ಚಿನ ಬರಹಗಳಿಗಾಗಿ
ಸಿಂಪಲ್ಲಾಗಿ ಬ್ಲಾಕ್ ಚೈನ್ ತಂತ್ರಜ್ಞಾನದ ಬಗ್ಗೆ
ಮಂಗಳನ ಅಂಗಳದಲ್ಲಿ ಪರ್ಸಿವರೆನ್ಸ್!
ಮಾತೃಭಾಷೆ ಮತ್ತು ಶಿಕ್ಷಣ