ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಂಜಮ್ಮ ಜೋಗಿತಿ

ಸುಮಾ ವೀಣಾ
ಇತ್ತೀಚಿನ ಬರಹಗಳು: ಸುಮಾ ವೀಣಾ (ಎಲ್ಲವನ್ನು ಓದಿ)

‘’ ನಮ್ಮದು ಹೆಣ್ಣಿನ ಮನಸ್ಸು ಗಂಡಿನ ಶರೀರ’’ ಎಂದ ಮಂಜಮ್ಮ ಜೋಗತಿಯ ಮಾತುಗಳು ಮತ್ತೆ ಮತ್ತೆ ಕೇಳಿಸುತ್ತಿವೆ.ನಾವು ಯಾಕೆ ಹೀಗೆ? ಮನುಷ್ಯನ ಮನಸ್ಸು ಯಾಕೆ ಹೀಗೆ? ಇನ್ನೊಂದು ಮನುಷ್ಯ ಶರೀರಿ ಮನಸ್ಸನ್ನು ಯಾಕೆ ಅರ್ಥಮಾಡಿಕೊಳ್ಳುತ್ತಿಲ್ಲ ಅನ್ನಿಸುತ್ತಿದೆ. ಹೆಣ್ಣು –ಗಂಡುಗಳ ಹಾಗೆಯೇ ನಮ್ಮ ನಡುವಿರುವ ತೃತೀಯ ಲಿಂಗಿಗಳನ್ನು ಕಂಡರೆ ನಮಗೆ ಉಡಾಫೆ, ಗೌರವವಿಲ್ಲ ಅವರುಗಳದ್ದೂ ಮನಸ್ಸು ಎಂಬ ಕನಿಷ್ಟ ಸೌಜನ್ಯ ನಮ್ಮಲ್ಲಿಲ್ಲ. ತೃತೀಯ ಲಿಂಗಿಗಳು ಅಂದ ಕೂಡಲೆ ನಮ್ಮ ಸಮಾಜದಿಂದಲೇ ವರ್ಜ್ಯ ಎನ್ನುವ ಹಾಗೆ ನೋಡುವುದು ಎಷ್ಟು ಸರಿ?

ಜಾನಪದ ಕಲೆಯನ್ನೇ ಉಸಿರಾಗಿಸಿಕೊಂಡು ತನ್ನವರ ನೋವಿಗೆ ಸ್ಪಂದಿಸುತ್ತಿರುವ ಮಂಜಮ್ಮ ಜೋಗಿತಿ ಪದ್ಮಶ್ರೀ ಪ್ರಶಸ್ತಿಯನ್ನೂ ಒಳಗೊಂಡಂತೆ ಶ್ರೇಷ್ಟ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಯಾವ ವರ್ಗಕ್ಕೂ ಸೇರದೆ ಮನುಷ್ಯ ವರ್ಗವೇ ನನ್ನ ವರ್ಗ ಎನ್ನುವ ಮಂಜಮ್ಮ ಜೋಗತಿ “ನನ್ನದು ಎನ್ನುವುದು ಯಾವುದೂ ಇಲ್ಲ ಎಲ್ಲ ಸಮಾಜದ್ದು” ಎನ್ನುವಲ್ಲಿ ಆಕೆಯ ಸಮಾಜಮುಖಿ ಆಲೋಚನೆಗಳು ಸ್ಫುಟವಾಗುತ್ತವೆ.

ತೃತೀಯ ಲಿಂಗಿಗಳು ಅಂದರೆ ಸಾಮಾಜಿಕರಲ್ಲಿ ಭಯವಿದೆ ಆ ರೀತಿ ಅವರನ್ನು ಪರಿವರ್ತಿಸಿರುವುದು ನಮ್ಮ ಸಮಾಜವೆ. ತೃತೀಯ ಲಿಂಗಿಗಳು ಎಂದು ತಿಳಿಯುತ್ತಲೇ ಮನೆಯವರೆ ಅವರನ್ನು ಒಪ್ಪಿಕೊಳ್ಳುವುದಿಲ್ಲ.ಉಡುಗೆ -ತೊಡುಗೆ ಬೇರೆಯವರೊಂದಿಗೆ ಬೆರೆಯುವಿಕೆ ಎಲ್ಲದಕ್ಕೂ ನಿರ್ಬಂಧ ವಿಧಿಸುತ್ತಾ ಹೋಗುವುದು .ಹೋಗಲಿ ನಮ್ಮನೆ ಸದಸ್ಯ ಅನ್ನುವುದನ್ನೂ ಮರೆತು ಅವರ ಭಾವನೆಗಳನ್ನು ಹತ್ತಿಕ್ಕುವ ಪ್ರಯತ್ನಗಳು ಆಗುತ್ತವೆ.ಅನ್ನ, ಅರಿವೆ, ಆಶ್ರಯ, ಅಕ್ಷರ, ಅಧ್ಯಾತ್ಮ ಇವೆಲ್ಲವೂ ಮನುಷ್ಯನಿಗೆ ಅತೀ ಅವಶ್ಯವಾಗಿ ಬೇಕಾಗಿರುವವು ಆದರೆ ಇವ್ಯಾವುದು ತೃತೀಯ ಲಿಂಗಿಗಳಿಗೆ ಸಿಗುತ್ತಿಲ್ಲ ಅನ್ಯ ಮಾರ್ಗ ಕಾಣದೆ ಅವರು ಟೋಲ್ಗಳಲ್ಲಿ, ಅಂಗಡಿಸಾಲುಗಳಲ್ಲಿ ಹಣ ಕೇಳಲು ಪ್ರಾರಂಭ ಮಾಡುತ್ತಾರೆ… ಹೊಟ್ಟೆ -ಬಟ್ಟೆ ಅನ್ನುವದು ಎಲ್ಲರಿಗೂ ಒಂದೇ ಅಲ್ವೆ! ಆದರೆ ಅವರುಗಳು ಇತ್ತೀಚೆಗೆ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಖೇದದ ಸಂಗತಿ.ಆದರೆ ಸಾಮಾಜಿಕರು ಅವರ ಭಾವನೆಗಳನ್ನು ಗೌರವಿಸುವುದು ಅತ್ಯಂತ ಆಗಿದೆ.

ತೃತಿಯ ಲಿಂಗಿಗಳು ಎಂದು ತಿಳಿದ ಕೂಡಲೆ ಮನೆಯಲ್ಲಿ , ಶಾಲೆಯಲ್ಲಿ ಅವಜ್ಞೆಗೆ ಗುರಿಯಾಗಿ ಸೂಕ್ತ ಶಿಕ್ಷಣ ದೊರೆಯದೆ ಹೊಟ್ಟೆ ಪಾಡಿಗೆ ಅನ್ಯ ಮಾರ್ಗವಿಲ್ಲದೆ ಲೈಂಗಿಕ ಕಾರ್ಯಕರ್ತೆಯರಾಗಿರಬಹುದು, ದುಡಿದು ತಿನ್ನುವೆವು!! ಎಂದರೂ ಅವರಿಗೆ ಕೆಲಸ ಕೊಡಲು ಯಾರೂ ಮುಂದೆ ಬರುವುದಿಲ್ಲ.ಇತ್ತೀಚೆಗೆ ಸರಕಾರ ಶೇಖಡ 1 ರಷ್ಟು ಮೀಸಲಾತಿಯನ್ನು ನೀಡಿರುವುದು ಆ ವರ್ಗದೇಳಿಗೆಗೆ ಶುಭ ಸಂಕೇತ ದೊರೆತಂತಾಗಿದೆ.ಇವರು ಸಂಪೂರ್ಣವಾಗಿ ಮುಖ್ಯವಾಹಿನಿಗೆ ಬರಲು ಸಮಯ ಬೇಕಾಗುತ್ತದೆ. ತೃತೀಯಲಿಂಗಿಗಳಿಗೆ ನಮ್ಮ ಅನುಕಂಪ ಬೇಕಾಗಿಲ್ಲ ಬೇಕಾಗಿರುವುದು ಮಾನವ ಸಹಜ ಪ್ರೀತಿ, ಅವಕಾಶ ಈ ಕುರಿತು ಸಾಮಾಜಿಕರು ಅರ್ಥಮಾಡಿಕೊಳ್ಳಬೇಕು .

ಇವೆಲ್ಲ ಅಕ್ಷರಗಳಲ್ಲ ಹಾಸನದ ಹಿಮ್ಸ್ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಜಮ್ಮ ಜೋಗತಿಯ ಮಾತುಗಳು .ಕಾರ್ಯಕ್ರಮದ ಕಡೆಯಲ್ಲಿ ಬೇರೆ ವೃತ್ತಿ ಮಾಡದೆ , ಚೌಡಿಕೆ ಪದಗಳನ್ನು ಹೇಳುತ್ತ ಜೋಗತಿ ನೃತ್ಯ ಮಾಡಿಕೊಂಡು ಸಾಮಾಜಿಕರಲ್ಲಿ ತೃತೀಯ ಲಿಂಗಿಗಳ ಕಷ್ಟ-ಕೋಟಲೆಗಳ ಕುರಿತು ಅರಿವು ಮೂಡಿಸುತ್ತಿರುವ ಕುರಿತಾಗಿ ಘಂಟಾಘೋಷವಾಗಿ ಹೇಳಿಕೊಂಡ ಅವರ ಧ್ವನಿಯಲ್ಲಿ ಸ್ವಾಭಿಮಾನವಿತ್ತು, ತನ್ನ ಕೆಲಸದ ಕುರಿತ ತೃಪ್ತ ಭಾವನೆಯೂ ಇತ್ತು. ಕಳ್ಳರನ್ನು ,ಕೊಲೆಗಡುಕರನ್ನು ,ಕಳ್ಳುಕುಡುಕರಿಗೆ ಆಶ್ರಯ ನೀಡುವವರು ತೃತೀಯಲಿಂಗಿಗಳಿಗೇಕೆ ಆಶ್ರಯ ನೀಡುವುದಿಲ್ಲ ?ಅನ್ನುವ ಪ್ರಶ್ನೆ, ಅಂದು ಹೊಟ್ಟೆ ಹಿಡಿಸಿತ್ತು ಇಂದು ಮನೆಹಿಡಿಸುವುದಿಲ್ಲವೆ?ಎಂದು ಪ್ರಶ್ನೆ ನೇರವಾಗಿ ತಾಯಿಗೆ ಹಾಕಿದ ಪ್ರಶ್ನೆಗಳು ಗಂಭೀರ ಚಿಂತನೆಗೆ ಹಚ್ಚುತ್ತವೆ.

ತೃತೀಯ ಲಿಂಗಿಗಳ ಏಳಿಗೆಗೆ ಶ್ರಮಿಸುತ್ತಿರುವ ಜೋಗತಿ ಮಂಜಮ್ಮ ಜಾನಪದ ಕಲಾಸೇವೆ ಸಮಾಜಮುಖಿ ಚಿಂತನೆಗಳು ಎಂದಿಗೂ ಮುಕ್ಕಾಗದಿರಲಿ ಎನ್ನುವ ಆಶಯ ನನ್ನದು.