ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುಂಬೈ ರಂಗಭೂಮಿಯಲ್ಲಿ ಕೆಲವು ನೆನಪುಗಳು. 

ಸುಧಾ ಶೆಟ್ಟಿ
ಇತ್ತೀಚಿನ ಬರಹಗಳು: ಸುಧಾ ಶೆಟ್ಟಿ (ಎಲ್ಲವನ್ನು ಓದಿ)

ಮುಂಬೈ ರಂಗಭೂಮಿಯಲ್ಲಿ ಕೆಲವು ನೆನಪು ಗಳು. ಮುಂಬೈ ಒಂದು ಮಾಯಾನಗರಿ. “ಮುಂಬೈ ಎಂದು ಮಲಗೋದೇ ಇಲ್ಲಾ” ಎಂದು, ಮುಂಬೈಯ ಹೊರಗಿನ ಜನರ ಅಂಬೋಣ. ಡಾಕ್ಟರ್ ಎ.ಪಿ.ಜೆ. ಅಬ್ದುಲ್ ಕಲಂ ಹೇಳಿದಂತೆ “ನಿದ್ದೆಯಲ್ಲಿ ಕಾಣುವುದು ಕನಸಲ್ಲ, ಕನಸನ್ನು ನನಸಾಗಿಸಲು  ನಿದ್ದೆ ಮಾಡದಿರುವುದು  ಕನಸು. ಎಷ್ಟೋ ಜನರ ಕನಸನ್ನು ನನಸು ಮಾಡಲಿಕ್ಕಾಗಿ, ಮುಂಬೈ ಎಂದೂ ಮಲಗುವುದಿಲ್ಲ. ಬಂದ ಅತಿಥಿಗಳನ್ನು ಬಾಚಿ ತಬ್ಬಿ ತನ್ನದಾಗಿಸಿಕೊಂಡಿದೆ ಈ ಮಹಾನಗರ.ಇಂತಹ ಉದಾರ ಮನೋಭಾವದ ಶಹರದಲ್ಲಿ ಹುಟ್ಟಿ ಬೆಳೆದವಳು ನಾನು. ಎಷ್ಟೊಂದು ಆಸೆ-ಆಕಾಂಕ್ಷೆಗಳನ್ನು ಹೆತ್ತು-ಹೊತ್ತು ಸಾಕಿದವಳು. ಅದರಲ್ಲಿ ದೊಡ್ಡ ಆಸೆಯೆಂದರೆ ನಟಿಯಾಗಬೇಕೆಂದು. ಇಂದು 25 ವರ್ಷಗಳ ನಂತರ ನಾನು ನಡೆದು ಬಂದ ಹಾದಿಯನ್ನು, ಹಿಂತಿರುಗಿ ನೋಡುವಾಗ ಎಷ್ಟೋ  ಹೆಜ್ಜೆಯ ಗುರುತುಗಳು ಇಂದಿಗೂ ಅಲ್ಲಿ ತಮ್ಮ  ಛಾಪನ್ನು ಆಳವಾಗಿ ಮೂಡಿಸಿದೆ.  ನಗು, ನಿರಾಸೆ, ಸಿಟ್ಟು, ಸೆಡವು ಎಲ್ಲವನ್ನೂ ಮೀರಿ ಇಲ್ಲಿಯ ಜನರ  ಪ್ರೀತಿ ಪ್ರೇಮವನ್ನು ಕಂಡು ಬೆಳೆದವಳು ನಾನು. ಇಲ್ಲಿಯ ಜನರು ಯಾವುದಕ್ಕೂ ಇಲ್ಲ ಎನ್ನುವುದಿಲ್ಲ. ತಮ್ಮ ಸಂಸ್ಕೃತಿ, ಭಾಷೆ ಕಲಿಯಲೇಬೇಕೆಂಬ ಕಡ್ಡಾಯ ಇಲ್ಲಿ ಇಲ್ಲ. ಮುಂಬೈಯ ಸಂಸ್ಕೃತಿ ಎಂದರೆ ಮರಾಠಿ ರಂಗಭೂಮಿ ಕೂಡ. ಇಲ್ಲಿ ಅನೇಕ ರಂಗನಟರೂ ತಮ್ಮ ಹೆಸರನ್ನು ಉತ್ತುಂಗಕ್ಕೇರಿಸಿ ಸಫಲರಾಗಿದ್ದಾರೆ. ನಮ್ಮಂತಹ ಚಿಕ್ಕಪುಟ್ಟ ನಟರಿಗೆ ಇವರೇ ಗುರುಗಳು. ಇಲ್ಲಿಯ ರಂಗಭೂಮಿಯೇ ವಿದ್ಯಾಲಯ. ಎಷ್ಟೋ ಮಂದಿ ಹೊರಗಿನಿಂದ ಬಂದು ಇಲ್ಲಿ ತಮ್ಮ ಹೆಸರು ಮಾಡಿದ್ದಾರೆ. ಇದಕ್ಕೆಅಮಿತಾ ಬಚ್ಚನ್, ಶಾರೂಖ್ ಖಾನ್ ಮುಂತಾದವರು  ಸಾಕ್ಷಿ. ಇಲ್ಲಿಯ ನಟರಾದ ವಂದನ ಗುಪ್ತೇ, ವಿಕ್ರಂ ಗೋಖಲೆ, ದಿಲೀಪ್ ಪ್ರಭಾವಳ್ ಕರ್, ನಾನಾ ಪಾಟೇಕರ್, ಶ್ರೀರಾಮ್  ಲಾಗು ಇಂತಹ ಅನೇಕ ಉತ್ತಮ ನಟರು, ಎಂದೂ ಹೊರಗಿನಿಂದ ವಲಸೆಬಂದು ಹೆಸರು ಮಾಡಿದ ಈ  ನಟರನ್ನು ಕೀಳಾಗಿ ಕಾಣಲಿಲ್ಲ.ಅಂತೆಯೇ ನಮ್ಮ ಊರಿಂದ ಬಂದ ಕಲಾವಿದರಿಗೂ ತಮ್ಮ ಗೂಡನ್ನು ಕಟ್ಟಿಕೊಳ್ಳಲು ಸಹಕರಿಸಿದರು. ಸಿನಿಮಾದ ಬಾಗಿಲು ತಟ್ಟಲು ನಮ್ಮಲ್ಲಿ ತುಂಬಾ ಮಂದಿಗೆ ಸಾಧ್ಯವಾಗಿಲ್ಲವಾದರೂ ರಂಗಮಂದಿರ ಮಾತ್ರ ಎಲ್ಲರನ್ನೂ ತುಂಬು ಹೃದಯದಿಂದ, ಉದಾರ ಮನಸ್ಸಿನಿಂದ ಸ್ವಾಗತಿಸಿತು. ತುಳುರಂಗಭೂಮಿ ಇಂದು ತನ್ನ ಸಫಲತೆಯ ತುತ್ತಾ ತುದಿಗೆ ಏರಿದೆ ಎಂದು ಹೇಳಬಹುದು. ಇದರಲ್ಲಿ ಅನೇಕ ಪರವೂರಿನ ಪ್ರತಿಭೆಯು ಕಾರಣವಾಗಿದೆ. ಮುಂಬೈಗೆ ಬಂದು ತಮ್ಮ ನೆಲೆಯನ್ನು ಕಾಪಾಡಿಕೊಂಡು ನಿಲುವನ್ನು ಬೆಳೆಸಿಕೊಂಡರು ನಮ್ಮ ಜನರು. ಮುಂಬೈಯ ತುಳು-ಕನ್ನಡ ರಂಗ ಭೂಮಿ ಇಂದು ಮೇರು ಎತ್ತರಕ್ಕೆ ಏರಿರಲು ಕಾರಣ ಇವರ ಪ್ರತಿಭೆ ಮಾತ್ರವಲ್ಲ, ಪರಿಶ್ರಮ ಕೂಡ ಕೂಡಿದೆ.

ಮುಂಬೈ ಇವರಲ್ಲಿ ಯಾರನ್ನು ರೆಡ್ ಕಾರ್ಪೆಟ್ ಹಾಸಿ ಆಹ್ವಾನಿಸಲಿಲ್ಲ. ಕನಸಿನ ಹಾಸಿಗೆಯನ್ನು ಹೊತ್ತು ಬಂದ ಈ ಯುವಕರು ಕಷ್ಟಪಟ್ಟು ದುಡಿದು, ತಮ್ಮದೇ ಒಂದು ರೆಡ್ ಕಾರ್ಪೆಟ್ ತಯಾರಿಸಿ ಅದರಲ್ಲಿ ತಮ್ಮ ಕಲಾ ಪ್ರತಿಭೆಯನ್ನು ತೋರಿಸಿಕೊಡುತ್ತಿದ್ದಾರೆ. ನಮ್ಮ ರಂಗಭೂಮಿ ಒಂದು ನಟನಿಂದ ಹೆಸರು ಪಡೆದದ್ದಲ್ಲ, ಇದರ ಹಿಂದೆ ಅನೇಕರು ದುಡಿದಿದ್ದಾರೆ. ಅವಿರತ ದುಡಿದು ಅವರು ತಮ್ಮ ಕಲಾ ಪ್ರೇಮಕ್ಕೆ ಒಂದು ಮೆರುಗು ಕೊಟ್ಟಿದ್ದಾರೆ. ನಾನು ಯಾವಾಗಲೂ ಬೇರೆ ಮಕ್ಕಳಂತೆ ದೊಡ್ಡ ದೊಡ್ಡ ಕನಸು ಹೊತ್ತವಳಲ್ಲ. ನನ್ನಲ್ಲಿ ಇದ್ದ ಕೆಲವೇ ಆಕಾಂಕ್ಷೆಗಳಲ್ಲಿ,  ಒಂದೇ ಆಸೆ ಇದ್ದದ್ದು, ಒಂದು ಒಳ್ಳೆ ನಟಿಯಾಗಬೇಕೆಂದು. ಅದಕ್ಕೆ ಮುಂಬೈ ರಂಗಭೂಮಿಯ ನಿರ್ದೇಶಕರು ನೀರು ಹಾಕಿ ಪೋಷಿಸಿ ಬೆಳೆಸಿದರು.ಮನೆಯಲ್ಲಿ ಒಂದು ಸಂಭ್ರಮವಿದ್ದರೆ, ಹಬ್ಬ ಗಳಿದ್ದರೆ ಮನೆಯ ರೂಪವೇ ಬದಲಾಗುತ್ತದೆ. ಅದೇ ಸಂಭ್ರಮ ನಮಗೆ ನಮ್ಮ ತಾಲೀಮಿನಲ್ಲಿ ಸಿಗುತ್ತದೆ. ನಾಟಕದ ಒಂದು ದಿನ ಮೊದಲಂತೂ ದೀಪಾವಳಿ ಹಬ್ಬಕ್ಕೆ ಬಟ್ಟೆ  ಖರೀದಿಸುವಷ್ಟು ಸಂಭ್ರಮ. ಎಲ್ಲರೂ ತಮ್ಮ ನಾಟಕಕ್ಕೆ ಬೇಕಾದ ಬಟ್ಟೆಬರೆಗಳನ್ನು ತಯಾರು ಮಾಡೋದು, ಕಲಾವಿದರು ಒಬ್ಬರಿಗೊಬ್ಬರು ಬಟ್ಟೆಗಳನ್ನು ಎರವಲು ಕೊಡುವುದು, ಒಬ್ಬರು ಇನ್ನೊಬ್ಬರಿಗೆ ಡೈಲಾಗ್ ನಲ್ಲಿ ಸಹಾಯ ಮಾಡುವುದು, ಮನೆಯಿಂದ  ರಂಗಮಂದಿರ ದೂರವಿದ್ದರೆ ಒಬ್ಬರನ್ನೊಬ್ಬರು ತಮ್ಮ ಬೈಕಿನಲ್ಲಿ ಗಾಡಿಯಲ್ಲಿ ಕರೆದುಕೊಂಡು ಬರುವುದು. ನಿಜವಾಗ್ಲೂ ಆ ಕ್ಷಣ, ಆ  ನಗು, ಆ ಉಲ್ಲಾಸ,  ಆ ದಿನ ಅವಿಸ್ಮರಣೀಯ. ಕೆಲವು ಸಲ ತಾಲೀಮು ಒಳ್ಳೆಯದಾದರೆ ಅಲ್ಲೇ ಎದುರಿಗೆ ಇದ್ದ ಐಸ್ ಕ್ರೀಮ್ ಪಾರ್ಲರ್ ನಿಂದ ಐಸ್ ಕ್ರೀಮ್ ತರಿಸುತ್ತಿದ್ದರು ಮುಂಬೈ ರಂಗಭೂಮಿಯ ಒಬ್ಬ ನಿರ್ದೇಶಕರು.  ಬದುಕಿನ ಪಯಣದಲ್ಲಿ, ನಮ್ಮ ಹಾದಿಯಲ್ಲಿ ನಮಗೆ ಕಲ್ಲು, ಮುಳ್ಳು, ಮಣ್ಣು, ಎಲೆ, ಹೂವು ಸಿಗುವುದು ಸಹಜ. ಆದರೆ ನನ್ನ ರಂಗಭೂಮಿ ಪಯಣದಲ್ಲಿ ನನಗೆ ಸಿಕ್ಕಿದ್ದು ಹೂವಿನ ಹಾದಿಯೇ. ಕೆಲವು ಚಿಕ್ಕ ಪುಟ್ಟ ಘಟನೆಗಳಿಂದ ಬೇಸರವಾದರೂ, ಅದನ್ನು  ಮನದ ಪಟಳದಿಂದ ದೂರ ಮಾಡಿದ್ದೇನೆ. ಪರಿವಾರ ಎಂದಾಗ ಚಿಕ್ಕಪುಟ್ಟ ವಾದಗಳು ಬಂದೇ ಬರುತ್ತದೆ. ಆದರೆ ಕುಟುಂಬದ  ಸದಸ್ಯರು ಅದನ್ನು ಕೆರೆದು ದೊಡ್ಡ  ಮಾಡದೆ ಅದಕ್ಕೆ ಮುಲಾಮು ಹಚ್ಚಿ ಶಮಾನ ಮಾಡುತ್ತಾರೆ. ರಂಗಭೂಮಿ ಕೂಡ ನನಗೆ ಒಂದು ಪರಿವಾರ ಇದ್ದಂತೆ. ಈ ಪರಿವಾರದವರು ಯಾವುದೇ ವಿಷಯವನ್ನು ದೊಡ್ಡ ಮಾಡದೇ ಎಲ್ಲರ ಸುಖ ಕಷ್ಟದಲ್ಲಿ ಪಾಲ್ಗೊಳ್ಳುತ್ತಾರೆ. ದೈವ ಚಿತ್ತ ಎನ್ನುವಂತೆ, ಅಂಧೇರಿಯಲ್ಲಿ ವಾಸವಿದ್ದ ನಾನು, ಮದುವೆಯಾಗಿ ಬಂದದ್ದು ಮಾಹಿಮ್ ಪರಿಸರಕ್ಕೆ. ಅಲ್ಲಿ ಒಬ್ಬರ ಪರಿಚಯವಾಗಿ, ಆ ಗೆಳತಿ ನನ್ನನ್ನು ಮಾತುಂಗ ಕರ್ನಾಟಕ ಸಂಘ, ಮುಂಬಯಿ ಬಂಟರ ಸಂಘಕ್ಕೆ ಪರಿಚಯಿಸಿದರು. ಮಹಿಳೆಯರ ಒಂದು ನಾಟಕದಲ್ಲಿ ದಿವಂಗತ ‘ಶ್ರೀಮತಿ ಭಾರತಿ ಕೋಡ್ಲೆಕರ್’ ಅವರ ನಿರ್ದೇಶನದಲ್ಲಿ ರಂಗಭೂಮಿಗೆ ಹೆಜ್ಜೆಯಿಟ್ಟ ನಾನು, ಮತ್ತೇ ಹಿಂತಿರುಗಿ ನೋಡಲಿಲ್ಲ. 

ಪ್ರತಿಯೊಬ್ಬ ಬರಹಗಾರ, ನಿರ್ದೇಶಕರು ಒಂದು ಒಳ್ಳೆ ಪಾತ್ರವನ್ನು ಸೃಷ್ಟಿಸುವಾಗ ನನ್ನನ್ನು ನೆನಪಿಸಿಕೊಂಡದ್ದು ನನ್ನ ಭಾಗ್ಯ ಎಂದೇ ಹೇಳಬೇಕು. ಎಲ್ಲಾ ನಿರ್ದೇಶಕರನ್ನು, ಲೇಖಕರನ್ನು ನಾನು ಇಂದಿಗೂ ನೆನಪಿಸಿಕೊಳ್ಳುತ್ತೇನೆ. ಅವರೆಲ್ಲರಿಗೂ ನನ್ನ ಮನದಾಳದ ನಮನ. ನನ್ನ ಸಹ ಕಲಾವಿದರಿಗೆ, ರಂಗಭೂಮಿಯ ಮುಂದೆ, ಹಿಂದೆ ದುಡಿದ ಪ್ರತಿಯೊಬ್ಬರಿಗೂ ಪ್ರೀತಿ ಪೂರ್ವಕ ನಮನಗಳು.  ನಾನು ಒಂದು ಒಳ್ಳೆ ನಟಿಯೆಂದು  ಸಾಬೀತು ಪಡಿಸಿ ಬೇಕಾದರೆ, ಅದರ ಹಿಂದೆ ದುಡಿದ ಪ್ರತಿಯೊಬ್ಬರಿಗೂ ನನ್ನ  ತುಂಬು ಹೃದಯದ ಧನ್ಯವಾದಗಳು.ಅನೇಕ ಪಾತ್ರವನ್ನು ನಾನು ಬದುಕಿದ್ದೇನೆ. ನಕ್ಕು ನಲಿದು, ಅತ್ತು-ಕರೆದು ಆ  ಪಾತ್ರಗಳಿಗೆ ಜೀವ ಕೊಡಲು ಪ್ರಯತ್ನಿಸಿದ್ದೇನೆ.  ಆದರೆ ಬರಹಗಾರರು ಹಾಗೂ ನಾಟಕದ ನಿರ್ದೇಶಕರು ಮೊದಲೇ ಅದಕ್ಕೆ ಜೀವತುಂಬಿದ್ದಾರೆ.ನಾನು ನನ್ನ ಚಿಕ್ಕ ಅಳಿಲು ಸೇವೆ ಮಾಡಿದ್ದೇನೆ ಅಷ್ಟೇ. ದೊಡ್ಡ ಸಿನಿಮಾ ನಟಿ ಆಗುವ ಆಸೆ ನನಗಿರಲಿಲ್ಲ. ರಂಗಭೂಮಿಯಲ್ಲಿ ಸಿಕ್ಕ ಪ್ರತಿ ಒಂದು ಪಾತ್ರವನ್ನು ಒಳ್ಳೆ ರೀತಿಯಲ್ಲಿ ಮಾಡಿದ್ದೇನೆಂಬ ಸಮಾಧಾನವೇ ನನಗೆ ದೇವರಿಂದ ಸಿಕ್ಕ ದೊಡ್ಡ ವರ.  ನಾಲ್ಕು ಜನರು ನನ್ನನ್ನು ನೋಡಿ ಈ ನಾಟಕವನ್ನು ನೀವು ಮಾಡಿದ್ದಲ್ಲವೇ ಎಂದು ನೆನಪಿಸಿಕೊಡುತ್ತಾರೆ, ಅದೇ ನನಗೆ ದೇವರಿಂದ ಸಿಕ್ಕ ಪ್ರಸಾದ ಎಂದುಕೊಳ್ಳುತ್ತೇನೆ.