ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಗುಚಿತೊಂದು ಮೀನು ಬುಟ್ಟಿ

ಸುಬ್ರಹ್ಮಣ್ಯ ಹೆಗಡೆ
ಇತ್ತೀಚಿನ ಬರಹಗಳು: ಸುಬ್ರಹ್ಮಣ್ಯ ಹೆಗಡೆ (ಎಲ್ಲವನ್ನು ಓದಿ)

ಅಡ್ಡ ದಾರಿ ಹಿಡಿದು ಬಂದ ಕಾರ್ಮೋಡದ ದೆಸೆಯಿಂದ ಅಂದು ಬೇಗನೆ ಅಂಧಕಾರ ಆವರಿಸಿತ್ತು. ಆಗಸದತ್ತ ಒಮ್ಮೆ ತಲೆ ಎತ್ತಿ ನೋಡಿದವರು, ಗದ್ದೆ ಕೊಯ್ಲಿನ ಕೆಲಸವನ್ನು ಅಲ್ಲಿಗೆ ಬಿಟ್ಟು, ಕವಿದ ಮೋಡಕ್ಕೆ ಶಪಿಸುತ್ತ, ತಮ್ಮ ತಮ್ಮ ಗೂಡು ಸೇರಿ ಗಂಟೆಗಳೆರಡು ಉರುಳಿ ಹೋಗಿದ್ದವು. ಇತ್ತ ಊರ ಬಾಗಿಲಿನ ಬೀದಿ ದೀಪಕ್ಕೆ ಮುತ್ತಿದ್ದ ಮಳೆ ಹುಳಗಳು, ಅಲ್ಲಲ್ಲಿ ಬೆಳಕು ಚೆಲ್ಲಿಕೊಂಡು ಹಾರುತ್ತಿದ್ದ ಮಿಂಚು ಹುಳಗಳು ಕವಿದ ತಿಮಿರಕ್ಕೊಂದು ಅವ್ಯಕ್ತ ಮೆರುಗನ್ನು ನೀಡಿದ್ದವು. ದೂರದಲ್ಲೆಲೋ ಊಳಿಡುತ್ತಿದ್ದ ನಾಯಿ ಹಾಗು ಜೀ…..ರ್ ಎಂದು ಗಂಟಲು ಹರಿಯುವಂತೆ ಕೂಗಿ ಥಟ್ಟನೆ ಸುಮ್ಮನಾಗುತ್ತಿದ್ದ ಜೀರುಂಡೆಯ ಸದ್ದು ಬಿಟ್ಟರೆ ಬೇರಾವ ಗಲಾಟೆಯೂ ಆ ಹೊತ್ತಿನಲ್ಲಿ ಕೇಳಿಬರುತ್ತಿರಲಿಲ್ಲ. ಆಕಾಶದತ್ತ ದೃಷ್ಟಿ ಬೀರಿ ಇಂದು ಹುಣ್ಣಿಮೆ ಎಂದು ಹೇಳುವುದೂ ಸಾಧ್ಯವಿರಲಿಲ್ಲ. ಮೈಗೆ ಹಿತವೆನಿಸುವಂತೆ ಬೀಸುತ್ತಿದ್ದ ತಂಗಾಳಿ ಹೊತ್ತು ತಂದ ಮಣ್ಣಿನ ವಾಸನೆ ಅಲ್ಲೆಲ್ಲೋ ಸುರಿದ ಮಳೆಯ ಮುನ್ಸೂಚನೆಯನ್ನಿತ್ತಿತು.

ಆದರೆ ಊರ ಮಡಿಲಲ್ಲಿ, ಮೂರು ಪಾತ್ರಗಳು ಮಾತ್ರ ಕತ್ತಲೆ ಕವಿದ ನಂತರವೇ ಜಾಗೃತವಾಗುತ್ತಿದ್ದವು. ಮೊದಲನೆಯದಾಗಿ ಬೋರ, ಎರಡನೆಯದಾಗಿ ಮಾದನ ಬೋಂಡಾ ಅಂಗಡಿ ಹಾಗೂ ಮೂರನೆಯದಾಗಿ ಸೀನನ ಸೇಂದಿ ಅಂಗಡಿ. ಮಾದನ ಅಂಗಡಿಯ ಬೋಂಡಾ ಖಾಲಿಯಾದರೂ, ಹಾಳ್ಟಿಂಗ್ ಬಸ್ಸು ಬರುವ ತನಕ ಅಲ್ಲಿಯೇ ಕುಳಿತಿರುತ್ತಿದ್ದ. ಬೋರ ಹಗಲಲ್ಲಿ ಊರ ಹಿರಿತಲೆ, ಉಪಾಧ್ಯಾಯರ ಮನೆಯ ತೋಟದ ಕೆಲಸದ ಆಳಾದರೆ, ಸಂಜೆ ಹಾಳ್ಟಿಂಗ್ ಬಸ್ಸಿನೊಂದಿಗೆ ಬರುವ ಸಾಮಾನು ಇಳಿಸಲು ಹೋಗುತ್ತಿದ್ದ. ಆ ಕೆಲಸದಲ್ಲಿ ಪುರಸ್ಕಾರವಾಗಿ ಸಿಗುತ್ತಿದ್ದ ಪುಡಿಗಾಸು ಹಾಗೂ ದಿನದ ಕೂಲಿ, ಅಂದಿಗೇ ಸೀನನ ಅಂಗಡಿಯಲ್ಲಿ ಖಾಲಿಯಾಗಿ ಬಿಡುತ್ತಿತ್ತು. ಇನ್ನು ಸೀನನ ಅಂಗಡಿಯ ವೈಭವವನ್ನು ಅಲ್ಲಿಗೆ ಹೋಗಿ ಸಮಯ ಕಳೆದು ಬಂದವರ ಬಾಯಲ್ಲೇ ಕೇಳಬೇಕು. ಸಂಜೆಯ ವೇಳೆ ಅದು ಸ್ವರ್ಗವೇ ಸರಿ ಎನ್ನುವವರಿಗೇನೂ ಈ ಊರಿನಲ್ಲಿ ಕೊರತೆಯಿಲ್ಲ.

ಮಾದನ ಅಂಗಡಿಯೇನೂ ದೊಡ್ಡದಲ್ಲ. ತೂತಾದ ತಗಡಿನಿಂದ ಮಾಡಿದ ಚಿಕ್ಕ ಗೂಡು. ಒಂದು ಸೀಮೆ ಎಣ್ಣೆ ಸ್ಟೋವು, ಒಂದು ಎಣ್ಣೆ ಬಾಣಲಿ, ಬಿಸ್ಕತ್ತುಗಳಿಂದ ಅರ್ಧ ಮಾತ್ರವೇ ತುಂಬಿದ ನಾಲ್ಕು ಡಬ್ಬಿಗಳು, ಬೀಡಿ ಪ್ಯಾಕೆಟ್ಟುಗಳು, ಗುಟ್ಕಾ-ಚೈನಿ ಮಾಲೆಗಳು, ಒಂದು ಲಾಟೀನು ಇವಿಷ್ಟೇ ಅಲ್ಲಿಯ ಸರಕುಗಳು. ಮಾದ ಒಳಗೆ ಸೇರಿದನೆಂದರೆ ಇನ್ನಾರಿಗೂ ಒಳಗೆ ಪ್ರವೇಶಿಸುವ ಅವಕಾಶವೇ ಇರಲಿಲ್ಲ. ಹಾಳ್ಟಿಂಗ್ ಬಸ್ಸು ಬಂದು ಜನರೆಲ್ಲಾ ಇಳಿದು ತಮ್ಮ ತಮ್ಮ ಮನೆಗೆ ಹೊರಟ ನಂತರವೇ ಮಾದ ತನ್ನ ಮುದಿ ಅಂಗಡಿಗೆ ಬೀಗ ಜಡಿದು ಮನೆ ಸೇರಿಕೊಳ್ಳುತ್ತಿದ್ದ.

ಆ ದಿನದ ವ್ಯಾಪಾರವೆಲ್ಲ ಮುಗಿಸಿದ ಮಾದ ಹಾಗು ಬೋರ ಬಸ್ಸಿನ ಹಾದಿ ಕಾಯುತ್ತ ಕುಳಿತಿದ್ದರು. ತನ್ನ ಕಿವಿಗೆ ದೇವರ ಪ್ರಸಾದದಂತೆ ಜೋಪಾನವಾಗಿ ಸಿಕ್ಕಿಸಿಕೊಂಡಿದ್ದ ಬೀಡಿಯನ್ನು ಎಳೆದು ತುಟಿಯ ನಡುವೆ ಇರಿಸಿಕೊಂಡ ಬೋರ ಬೆಂಕಿ ಕಡ್ಡಿಗೆ ತನ್ನ ಅಂಗಿಯ ಕಿಸೆಯನ್ನೆಲ್ಲ ತಡಕಾಡಿದ. “ಥುತ್…” ಎನ್ನುತ್ತಾ ಮಾದನ ಅಂಗಡಿಯತ್ತ ಹೆಜ್ಜೆ ಹಾಕಿ ಅಲ್ಲಿದ್ದ ಬೆಂಕಿ ಕಡ್ಡಿಯೊಂದನ್ನು ಗೀರಿ ಬೀಡಿಯತ್ತ ಒಯ್ಯುವ ಮುನ್ನವೇ ಜೋರಾಗಿ ಬೀಸಿದ ಗಾಳಿಗೆ ಬೆಂಕಿಯು ಆರಿತು.

“ಹಲ್ಕಟ್ ಗಾಳಿ ಹೇ…” ಎಂದು ಗಾಳಿಗೆ ಶಪಿಸುತ್ತ, ಇನ್ನೊಂದು ಕಡ್ಡಿಯನ್ನು ಗೀರಿ ಬೀಡಿಯನ್ನು ಹೊತ್ತಿಸಿದ. “ಹಾsss…” ಎಂದು ದೀರ್ಘವಾದ ನಿಟ್ಟುಸಿರಿನೊಂದಿಗೆ ಹೊಗೆಯನ್ನು ಬಿಡುತ್ತಾ, ಅಂಗಡಿಯ ಪಕ್ಕದಲ್ಲಿಯೇ ನಿಲ್ಲಿಸಿದ್ದ ತನ್ನ ಸೈಕಲ್ಲಿನ ಹಿಂಬದಿಯ ಕ್ಯಾರಿಯರ್ ಏರಿ ಕುಳಿತ. ಬೋರನ ಭಾರಕ್ಕೆ ಸೈಕಲ್ ಕುಯ್ಯ್ ಗುಟ್ಟಿತು. ಅಪರೂಪಕ್ಕೊಮ್ಮೆ ಬೋರ ಹಾಕುತ್ತಿದ್ದ ಬಿಸ್ಕತ್ತಿನ ಆಸೆಗಾಗಿ ಬಂದ ಕರಿ ನಾಯಿಯೊಂದು ಬೋರನ ಖಾಲಿ ಕೈ ನೋಡಿ, ನಿರಾಸೆಯಾಗಿ ಅವನ ಸೈಕಲ್ಲಿನ ಬುಡದಲ್ಲಿ ಮುದುಡಿ ಮಲಗಿಕೊಂಡಿತು. ಸುಯ್ಯನೆ ಬೀಸುತ್ತಿದ್ದ ತಂಗಾಳಿ ಬೋರನನ್ನು ಹಾಗೆ ಆತನ ಭೂತಕ್ಕೆ ತೇಲಿಸಿಕೊಂಡು ಹೋಯಿತು. ಯಾಂತ್ರಿಕವಾಗಿ ಹೊಗೆಯನ್ನು ಉಗುಳುವ ಉಗಿಬಂಡಿಯಂತೆ ತೋರುತ್ತಿದ್ದ ಬೋರ ಬೇರೆಯದೇ ಲೋಕದಲ್ಲಿ ವಿಹರಿಸುತ್ತಿದ್ದ.

ಮಳೆಯ ಒಂದು ಹನಿ ಬೀಡಿಯ ಮೇಲೆ ಬಿದ್ದು “ಚುಸ್ಸ್…” ಎನ್ನುತ್ತಾ ಬೀಡಿಯನ್ನು ಆರಿಸಿ ಬೋರನನ್ನು ವರ್ತಮಾನಕ್ಕೆ ತಂದು ನೂಕಿತು. ಏನಾಯಿತು ಎಂದು ಎಣಿಸುವಷ್ಟರಲ್ಲಿ ಮಳೆಯ ದೊಡ್ಡ ದೊಡ್ಡ ಹನಿಗಳು ಉದುರಲು ಆರಂಭಿಸಿತು.

“ಯೇ ಬೋರ ಒಳಗೆ ಬಾ ಮಾರಾಯ ಮಳೇಲಿ ನೆಂದು ಜ್ವರ ಬಂದು ಸಾಯಲಿಕ್ಕೆ…” ಎಂದು ಮಾದ ಕರೆದು ಮುಗಿಸುವಷ್ಟರಲ್ಲಿ ಬೋರ ತಲೆಯ ಮೇಲೆ ಕೈ ಅಡ್ಡಲಾಗಿ ಹಿಡಿದು ಅಂಗಡಿಯತ್ತ ಹೊರಟ. ಕತ್ತಲೆಯಲ್ಲಿ ಲೀನವಾಗಿದ್ದ ಕರಿ ನಾಯಿ ಕಣ್ಣಿಗೆ ಕಾಣಿಸದೆ ಅದರ ಬಾಲದ ಮೇಲೆ ಬೋರ ಕಾಲಿಟ್ಟಾಗ “ಕುಯ್ಯಯ್ಯೋ…” ಎಂದು ಒದರಿತು.

“ಹೆತ್… ಹೋಗಾ ಆಚಿಗೆ ಹಡಬೆ ಕುನ್ನಿ…” ಎಂದು ನಾಯಿಗೊಂದಿಷ್ಟು ಶಪಿಸಿ ಬೋರ ಮಾದನ ಕೋಳಿ ಗೂಡಿನಂತಹ ಅಂಗಡಿಯ ಒಳ ಹೊಕ್ಕ. ತಗಡಿನ ಮೇಲೆ ಧೊಪ್ ಧೊಪ್ ಎಂದು ಬೀಳುತ್ತಿದ್ದ ಮಳೆಯ ಧಡೂತಿ ಹನಿಗಳ ಶಬ್ದದ ನಡುವೆ ಮಾದ ಹಾಗು ಬೋರರು ಒಬ್ಬರಿಗೊಬ್ಬರು ತಾರಸ್ವರದಲ್ಲಿಯೇ ಮಾತನಾಡಬೇಕಿತ್ತು.

ಮೌನ ಮುರಿಯಲೆಂಬಂತೆ ಮಾದ, “ಅಲ್ವೋ ಬೋರ ಸುದ್ದಿ ಗೊತ್ತಾಯ್ತೆನೋ ?” ಎಂದ.

“ಎಂತ ಸುದ್ದಿನೋ? ಸಿಂಪನ ಹೆಂಡ್ತಿ ವಾಪಾಸ್ ಬಂದ್ಲಾ?” ಎಂದು ಕೇಳಿದ ಬೋರ.

“ಕಂಡೋರ್ ಹೆಂಡ್ತಿ ಸುದ್ದಿ ನಿಂಗೆ ಎಂತಕೆ ಬೇವರ್ಸಿ? ಜನ್ನು ಮಗಳಿಗೆ ಜೋರ್ ಜ್ವರ ಅಂತೆ… ಮೊನ್ನೆ ಸೊಪ್ಪಿಗೆ ಹೋಗಿ ವಾಪಾಸ್ ಬಂದಮೇಲೆ ರಾತ್ರಿ ಇಂದ ಜ್ವರ ಅಂತೆ… ಸಾಂಭಟ್ಟರ ಕಷಾಯ ಕುಡಿದ್ರೂ ಜ್ವರ ಇಳೀತಿಲ್ವಂತೆ…!” ಎಂದ ಮಾದ.

“ಅದೆಂತ ಜ್ವರ ಬಂದ್ರೂ ದೊಡ್ಡ ವಿಷಯನ ನಿಂಗೆ ಹೇಳಲಿಕ್ಕೆ. ಈಗ ಸ್ವಲ್ಪ ಹೊತ್ತು ಮುಂಚೆ ಆ ಕರಿ ಕುನ್ನೀನೂ ಹೂಸ್ ಬಿಟ್ಟಿತು ಅದ್ನು ಊರ್ ತುಂಬಾ ಹೇಳು ಹೋಗಾ ಹಪ್ಪ್ ಗೆಟ್ಟವ್ನೆ..” ಎಂದು ಮಾದನಿಗೆ ಬೈಯುತ್ತಾ ಬೋರ ತನ್ನ ಅಸಮಾಧಾನ ವ್ಯಕ್ತಪಡಿಸಿದ.

“ಇದು ಅಂತಿಂಥ ಜ್ವರ ಅಂದ್ಕಂಡ್ಯೇನ? ಸಾಮಾನ್ಯದ್ ಜ್ವರ ಅಲ್ಲ ಮಾರಾಯ ಇದು!” ಎಂದ ಮಾದ.

“ಹಂಗಾರೆ ಎಂತ ಜ್ವರನೋ? ಸತ್ತೇ ಹೋಗ್ತ್ರಾ ಬಂದ್ರೆ ಅಂದೇಳಿ?” ಎಂದು ಬೋರನ ಮಾತಿನಲ್ಲಿ ಭಯವಿತ್ತು.

“ಹೇ ಇಲ್ಲ ಮಾರಾಯ..! ಮೊನ್ನೆ ಸಂಜೆ ಸೊಪ್ಪು ಹೊತ್ಕಂಡ್ ಬತ್ತಿರಬೇಕಾದ್ರೆ ಆ ಮೂರ್ ರಸ್ತೆ ಮುರ್ಕೀಲಿ ಎಂತದೋ ಕಂಡಿ ಬೆಚ್ ಬಿದ್ಳಂತೆ.. ಆ ದಿನ ರಾತ್ರಿ ಶುರು ಆದ್ ಜ್ವರ ಇನ್ನೂ ಕಮ್ಮಿ ಆಗ್ಲಿಲ್ಲಂತೆ…!” ಎಂದು ಮಾದ ವಿವರಿಸಿದ.

“ಹ್ಞಾ… ಹಂಗಾರೆ ಇದು ಅದೇಯಾ! ನಂಗೂ ಒಂದಿನ ರಾತ್ರಿ ಅಲ್ಲೇ ಕಂಡಿತ್ತು… ನಾ ಅದು ಕಂಡಾಗ ಒಂದ್ ಹೆಜ್ಜೇನು ಮುಂದೆ ಇಡಲಿಲ್ಲಾಗಿತ್ತು ಅಲ್ಲೇ ನಿಂತಿದ್ದೆ ಅದು ಮಾತ್ರ ಕರಿ ಕಂಬಳಿ ಹೊದ್ದಂಗಿತ್ತು..! ” ಎಂದ ಬೋರ.

“ಹೋಗಾ ಹೋಗಾ… ನಿಂಗೆ ಕಂಡದ್ದು ಕರಿ ಪಕ್ಕಿಕುನ್ನಿ ಇರುದ ಬೇವರ್ಸಿ…!” ಎಂದು ಮಾದ ಬೋರನ ಕಾಲೆಳೆಯುವ ಹೊತ್ತಿಗೆ ಮಳೆಯೂ ನಿಂತು, ಮೋಡಗಳು ಕರಗಿ, ತಿಂಗಳ ಬೆಳಕು ಹರಡಿ, ತಿಳಿಮುಗಿಲ ತೊಟ್ಟಿಲಲ್ಲಿ ಪೂರ್ಣ ಚಂದಿರ ಪ್ರಜ್ವಲಿಸುತ್ತಿದ್ದ.

*****

ಹಾ…. ಎಂದು ಒಮ್ಮೆ ಗಟ್ಟಿಯಾಗಿ ಆಕಳಿಸಿದ ಮಾದ, “ನನ್ ದೀಪದ ಚಿಮ್ನೆಣ್ಣೆ ಖಾಲಿ ಆಗ್ಲಿಕ್ಕೆ ಬಂತು ಆದ್ರೂ ಹಾಳ್ಟಿಂಗ್ ಬಸ್ಸಿಂದು ಪತ್ತೆ ಇಲ್ಲಲ ಇವತ್ತು.. ಎಲ್ಲಿ ಹಾಳಾಗಿ ನಿಂತದ್ಯೋ…” ಎಂದು ಮಾದ ಹೇಳಿ ಮಾತು ಮುಗಿಸುವಷ್ಟರಲ್ಲಿ ಬಸ್ಸಿನ ಬ್ರೇಕು ‘ಕೀ…..’ ಎಂದು ಅರಚಿದ ಶಬ್ದ ಇವರ ಕಿವಿಗಪ್ಪಳಿಸಿತು.

“ಹ್ಞಾ ಬಂತೋ ಬಂತೋ… ಮುರ್ಕಿ ಹತ್ರ ತಿರ್ಗ್ತು ಅನ್ಸ್ತದೆ…” ಎನ್ನುತ್ತಾ ಬೋರ ಬಸ್ಸಿನೊಂದಿಗೆ ಬರುವ ಸಾಮಾನು ಇಳಿಸಲು ಉತ್ಸುಕನಾಗಿ ಎದ್ದು ಹೊರಟ. ಹೊರಗೆ ಕಾಲಿಟ್ಟ ಕೂಡಲೇ ‘ಪಚಕ್..’ ಎಂದು ಸಿಡಿದ ಕೆಂಪು ಕೆಸರು ಬೋರನ ಕಾಲನ್ನು ಅಲಂಕರಿಸಿತು. ದಿನವಿಡೀ ಎಲೆ ಅಡಿಕೆ ಅಗಿದು, ಹಲ್ಲುಗಳು ತಮ್ಮ ನಿಜ ಸ್ವರೂಪವನ್ನು ಕಳೆದುಕೊಂಡು, ಕಂಡ ಕಂಡಲ್ಲಿ ಅದನ್ನು ಉಗುಳುತ್ತಾ ಓಡಾಡುವ ಬೋರನಿಗೆ, ಮಳೆಯಿಂದಾದ ಕೆಸರು ಮಾತ್ರ ಕೊಳಕಾಗಿ ಕಂಡಿತು.

“ಶೀ ಹೊಲಸು ರಾಡಿ…” ಎಂದುಕೊಂಡ.

ಕೆಲವೇ ಕ್ಷಣಗಳು ಕಳೆಯುವಷ್ಟರಲ್ಲಿ, ರಸ್ತೆಯ ಮೇಲಿನ ನೀರು ತುಂಬಿದ ಹೊಂಡಗಳಿಂದ ಪಿಚಕಾರಿಯಂತೆ ಕೆಂಪು ನೀರನ್ನು ಹಾರಿಸುತ್ತ ಬಸ್ಸು ಮಾದನ ಅಂಗಡಿಯ ಬಳಿ ಬಂದು ನಿಂತಿತು.

ಬಸ್ಸಿನಲ್ಲೇ ನಿದ್ದೆ ಹೋದ ಜೀವಿಗಳೆಲ್ಲ ಕಣ್ತೆರೆದು ನೋಡುವಷ್ಟರಲ್ಲಿ ಬೋರ ಬಸ್ಸಿನ ಟಾಪ್ ಅನ್ನು ಏರಿ ಕುಳಿತಿದ್ದ. ಯಾವುದು ಮೊದಲು ಯಾವ ಸಾಮಾನು ಕಡೆಯಲ್ಲಿ ಇಳಿಸುವುದು ಎಂದು ಅವಲೋಕಿಸುತ್ತಿದ್ದ ಬೋರನ ಮೂಗಿಗೆ ಮೀನಿನ ವಾಸನೆ ಬಡಿಯಿತು.

“ಹ್ಮ್ಮ್ಮ್ ಆಹಾ…” ಎಂದು ಉದ್ಗಾರ ತೆಗೆಯುತ್ತಾ “ಈ ಮೀನು ಬುಟ್ಟಿ ಯಾರದ?” ಎಂದು ಕಿರುಚಿದ.
“ಯೇ ಯೇ ಅದು ನಂದು ಮಾರಾಯ ಸಮಾ ಇಳಿಸು…” ಎನ್ನುತ್ತಾ ಸುಕ್ರು ಕೆಳಗಿನಿಂದಲೇ ಆಜ್ಞಾಪಿಸಿದ.

“ಅಲ್ಲಾ ಮಾರಾಯ ಈ ಬುಟ್ಟಿನ ಕಾಲ ಬಳಿಗೆ ಇಟ್ಕಳುದ ಬಿಟ್ಟು ಮೇಲೆ ಎಂತಕ್ಕೆ ಹಾಕಿದ್ಯಾ?” ಎಂದು ಬೋರ ಕೇಳಿದಾಗ,

“ಕೆಳಗೆ ಇಟ್ಟಿದ್ದೆ ಮಾರಾಯ, ಆದರೆ ಬಸ್ಸೊಳಗೆ ನಮ್ ಭಟ್ರ ಹೆಂಡ್ತೀರು ವಾಸನೆ ತಡುಕಾಗದೆ ವ್ಯಾಕ್ ವ್ಯಾಕ್ ಅಂದೇಳಿ ವಾಂತಿ ಮಾಡ್ಕಂಡ್ರು, ಅದ್ಕೆ ಮೇಲಿಟ್ಟೆ.. ಹಿ ಹಿ ಹಿ” ಎನ್ನುತ್ತಾ ಸುಕ್ರು ಹಲ್ಲು ಕಿರಿದ.

ತೆಂಗಿನ ಕಾಯಿ ಚೀಲ, ಗೊಬ್ಬರ ಚೀಲ, ಹಸುವಿಗೆ ಬೇಕಾಗುವ ಹಿಂಡಿ, ದಾಣಿಯ ಚೀಲಗಳನ್ನೆಲ್ಲ ಇಳಿಸಿದ ಮೇಲೆ ಬೋರ ಸುಕ್ರನ ಮೀನು ಬುಟ್ಟಿಯತ್ತ ಹೆಜ್ಜೆ ಇಟ್ಟ.

ಸುಕ್ರನ ಹತ್ತಿರ ಎರಡು ಮೀನಾದರೂ ಕಿತ್ತುಕೊಳ್ಳಬೇಕು ಎನ್ನುವ ಹಂಬಲದೊಂದಿಗೆ, ಮೀನು ಸಾರಿನ ಯೋಚನೆಯಲ್ಲಿ ಜೊಲ್ಲು ಸುರಿಸುತ್ತ, ಬಸ್ಸಿನ ಹಿಂಭಾಗದಲ್ಲಿರುವ ಏಣಿಯ ಮೇಲೆ ಕಾಲಿರಿಸಿದ.

ಬೋರನ ಕಾಲು ಒಂದು ಮೆಟ್ಟಿಲನ್ನು ತಪ್ಪಿತು. ತಲೆಯ ಮೇಲಿದ್ದ ಬುಟ್ಟಿಯನ್ನೂ ತನ್ನ ದೇಹವನ್ನೂ ಸಾವರಿಸಿಕೊಳ್ಳಲಾಗದೆ, ಬುಟ್ಟಿಯೂ ಬೋರನೂ ಧೊಪ್ಪೆಂದು ನೆಲಕ್ಕಪ್ಪಳಿಸಿದರು.

“ಹಾಯ್ ಅಯ್ಯಪ್ಪ…” ಎಂದು ಏದುಸಿರು ಬಿಟ್ಟು ಮೇಲೆದ್ದು ತನ್ನ ಲುಂಗಿಯನ್ನು ಬಿಗಿದುಕೊಳ್ಳುತ್ತಿದ್ದ ಬೋರನಿಗೆ, “ಬೊಶ್ಡಿಮಗನೇ…” ಎನ್ನುತ್ತಾ ಹಲ್ಲು ಕಚ್ಚಿಕೊಂಡು ಕೋಪದಲ್ಲಿ ಬಂದ ಸುಕ್ರು ಹಿಂದಿನಿಂದ ರಪ್ಪನೆ ಒದ್ದ.

ಅನಿರೀಕ್ಷಿತವಾಗಿ ಒದೆ ತಿಂದ ಬೋರ ಬಸ್ಸಿಗೆ ಧಡ್ ಎಂದು ಬಡಿದುಕೊಂಡು ತಿರುಗಿ ನಿಂತ.

“ಅಪ್ಪಂಗೆ ಹುಟ್ಟಿದವ ಆದ್ರೆ ಮುಂದಿನಿಂದ ಮೈಮುಟ್ಟಿ ನೋಡ ಬೇವರ್ಸಿ…” ಎಂದವನೇ ಬೋರ ಮುಷ್ಠಿ ಬಿಗಿದು ಸುಕ್ರುವಿನತ್ತ ಹೊರಟ.

“ಬಾರಾ ಹಲ್ಕಟ್…” ಎನ್ನುತ್ತಾ ಸುಕ್ರು ಎದುರಿನಿಂದ ಬಂದ ಬೋರನ ಅಂಗಿಯ ಕತ್ತನ್ನು ಹಿಡಿದವನೇ, ಬೋರನ ಕಪಾಳಕ್ಕೆ ಫೈಡ್ ಎಂದು ತಪರಾಕಿ ಇಟ್ಟ.

ಕೈ-ಕೈ ಸೇರಿತು. ಬೋರ-ಸುಕ್ರು ಇಬ್ಬರೂ ನೆಲದ ಮೇಲೆ ಹೊರಳಾಡಿದರು. ಜನರ ಗುಂಪು ನೆರೆಯಿತು. ಗುಂಪಿನಲ್ಲಿದ್ದವರು ಯಾರೋ “ಹಿಡಿದು ಜಪ್ಪ ಅವನಿಗೆ ..!” ಎಂದು ಕೂಗಿದರು. ಯಾರು ಯಾರಿಗೆ ಜಪ್ಪಬೇಕು ಎಂಬುದು ಯಾರಿಗೂ ತಿಳಿಯಲಿಲ್ಲ.

ಮೊದಲೇ ನೆಲಕ್ಕೆ ಬಿದ್ದಿದ್ದ ಮೀನಿನ ರಾಶಿಯ ಮೇಲೂ ಉರುಳಾಡಿದರು. ಅಂಗಿಯ ಕಿಸೆಗಳು ಹರಿದವು. ಮೀನಿನ ವಾಸನೆ ಹಿಡಿದು ಬಂದ ನಾಲ್ಕಾರು ಹಡಬೆ ನಾಯಿಗಳು ಬಿದ್ದ ಮೀನುಗಳನ್ನು ಕಚ್ಚಿಕೊಂಡು ಹೋಗಿದ್ದು ಯಾರ ಗಮನಕ್ಕೂ ಬರಲಿಲ್ಲ.

*****

ಇವರಿಬ್ಬರ ರೋಷಾವೇಶಗಳೆಲ್ಲ ತಣ್ಣಗಾದಮೇಲೆ, ಸುಕ್ರು ತನ್ನ ಖಾಲಿ ಬುಟ್ಟಿಯನ್ನು ಹೊತ್ತು ಮನೆಯತ್ತ ಹೆಜ್ಜೆ ಹಾಕಿದ.

ಕೊಂಚ ಜಾಸ್ತಿಯೇ ಪೆಟ್ಟು ತಿಂದಿದ್ದ ಬೋರ, “ನಾಳೆ ಸಿಗಾ ನೋಡ್ಕಳ್ತೆ ನಿನ್ನ ಬೇವರ್ಸಿ…” ಎನ್ನುತ್ತಾ ಸೀನನ ಅಂಗಡಿಯತ್ತ ಹೆಜ್ಜೆ ಹಾಕಿದ.

ಮೈಯೆಲ್ಲಾ ಮಣ್ಣಾಗಿದ್ದ ಬೋರನನ್ನು ಕಂಡ ಸೀನ,”ಒಹೋ… ಬೋರನ ಹೊಡೆದಾಟ ಭಯಂಕರ ಗಮ್ಮತ್ತ್ ಇತ್ತು ಕಾಣ್ತದೆ…” ಎಂದ.

“ಹ್ಞಾ ಮತ್ತೆ… ಅವ ಸುಕ್ರುನೆ ಹೆದರಿ ಓಡಿ ಹೋದ್ನ ಮತ್ತೆ ಸಿಕ್ರೆ ಬಿಡುದಿಲ್ಲ ಅವನಾ…” ಎಂದ ಬೋರ ತನ್ನ ಬಡಾಯಿ ಕೊಚ್ಚಿಕೊಂಡ.

“ನಿನ್ನ ನೋಡಿದ್ರೆ ಹಾಗೆ ಕಾಣಿಸ್ತಿಲ್ಲಲ ಮಾರಾಯ ನೀನೇ ಹೆದರಿ ಓಡಿ ಬಂದಂಗೆ ಕಾಣ್ತದೆ…” ಎಂದು ಸೀನ ಬೋರನ ಕಾಲೆಳೆದ.

ಮುಖ ಸಿಂಡರಿಸಿಕೊಂಡು ಸೀನನ ಅಂಗಡಿಯ ಒಳ ಹೊಕ್ಕ ಬೋರ ಅಲ್ಲಿದ್ದವರ ಬಳಿಯಲ್ಲಿ ನಡೆದ ಕಥೆಯನ್ನೆಲ್ಲ ರಂಗು ರಂಗಾಗಿ ವರ್ಣಿಸಿ, ಜೇಬಿನಲ್ಲಿದ್ದ ಕಾಸನ್ನೆಲ್ಲ ವ್ಯಯಿಸಿ, ಓಲಾಡುತ್ತಾ ಮನೆಯತ್ತ ಹೊರಟ.

*****

ಇತ್ತ ಬೋರನ ಹೆಂಡತಿ ತಿಮ್ಮಿಗೂ ಬಡಿದಾಟದ ವಿಷಯ ಅದಾಗಲೇ ತಲುಪಿತ್ತು. ಇವನದ್ದು ಯಾವಾಗಲು ಇದ್ದಿದ್ದೇ ಎಂದುಕೊಂಡು ಸುಮ್ಮನಾಗಿದ್ದಳು. ತಿಮ್ಮಿ ಅವರಿವರ ಮನೆಯ ಕೆಲಸವನ್ನು ಮಾಡಿಕೊಂಡು ಕೊಂಚ ಹಣವನ್ನು ಸಂಪಾದಿಸುತ್ತಿದ್ದಳು.

ಹಾಗಂತ ತಿಮ್ಮಿ ಇವನು ಮಾಡಿದ್ದೆಲ್ಲವನ್ನೂ ಸಹಿಸಿಕೊಳ್ಳುವ ಹೆಂಗಸೂ ಅಲ್ಲ. ಕುಡಿದ ಅಮಲಿನಲ್ಲಿ ಜಗಳಕ್ಕೆ ನಾಂದಿ ಹಾಡುತ್ತಿದ್ದುದು ಬೋರನೇ. ಆದರೆ ಅಂತ್ಯ ಕಾಣಿಸುತ್ತಿದ್ದುದು ಮಾತ್ರ ತಿಮ್ಮಿ. ಸಹನೆ ಮೀರಿದಾಗ ದೊಣ್ಣೆಯಿಂದ ಬಾರಿಸಿದ್ದೂ ಉಂಟು, ಬಿಸಿ ನೀರಿನ ರಾಚಿದ್ದೂ ಉಂಟು, ಹಾಗೇ ಬೆನ್ನ ಮೇಲೆ ಬಾಸುಂಡೆಗಳು ಮೂಡಿದ್ದೂ ಉಂಟು. ಆದರೂ ಕೆಲವೊಮ್ಮೆ ಇವಳು ಸಂಪಾದಿಸಿದ ಹಣವನ್ನು ಒಮ್ಮೊಮ್ಮೆ ಬೋರ ಹೆದರಿಸಿ ಬೆದರಿಸಿ, ಅದೂ ನಡೆಯಲಿಲ್ಲ ಎಂದ ಮೇಲೆ ಕದ್ದು ಮುಚ್ಚಿಯಾದರೂ ಕಿತ್ತುಕೊಂಡು ಹೋಗುತ್ತಿದ್ದ. ಅವನ ಈ ಸ್ವಭಾವದಿಂದ ತಿಮ್ಮಿ ರೋಸಿಹೋಗಿದ್ದಳು.

*****

ಮರುದಿನ ಬೆಳಿಗ್ಗೆ ಬೋರ ಎಚ್ಚರಗೊಂಡವನೇ, “ತಿಮ್ಮಿ… ತಿಮ್ಮಿ…” ಎಂದು ಕೂಗಿಕೊಂಡ. ಯಾವುದೇ ಉತ್ತರ ಬರದೇ ಇದ್ದುದನ್ನು ಕಂಡು, ತಿಮ್ಮಿ ಅದಾಗಲೇ ಕೆಲಸಕ್ಕೆ ಹೊರಟು ಹೋಗಿದ್ದಳು ಎಂಬುದನ್ನು ಅರಿತುಕೊಂಡ.

ಹಿಂದಿನ ರಾತ್ರಿ ಸೇಂದಿಯ ಏಟಿಗೆ, ತಿಂದ ಪೆಟ್ಟಿನ ನೋವು ಬೋರನಿಗೆ ತಿಳಿದಿರಲಿಲ್ಲ. ಆದರೆ ಈಗ ಎಲ್ಲವೂ ಗೊತ್ತಾಗುತಿತ್ತು. ಉಸ್ಸ್ ಎಂದು ಉಸಿರು ಬಿಡುತ್ತ ಮನೆಯ ಹೊರಗೆ ಬಂದ ಬೋರ ತನ್ನ ಸೈಕಲ್ಲಿಗಾಗಿ ಹುಡುಕಾಡಿದ.

“ಥುತ್.. ಮಾದನ ಅಂಗಡಿಯಲ್ಲೇ ಸೈಕಲ್ಲು ಬಿಟ್ಟನೇ?” ಎಂದು ಗೊಣಗಿಕೊಂಡು ಮಾದನ ಅಂಗಡಿಯತ್ತ ಹೊರಟ.

ಅಂಗಡಿಯಿಂದ ಸೈಕಲ್ ತಂದು ಮನೆ ಸೇರುವ ಹೊತ್ತಿಗೆ ಬಿಸಿಲೇರಿತ್ತು. ಗಂಜಿ ಬೇಯಿಸಿಕೊಂಡು ಮಧ್ಯಾಹ್ನದ ಊಟ ಮುಗಿಸಿದ. ಮೈ-ಕೈ ನೋವು ತಾಳಲಾರದೆ ಹಾಗೆ ಗೋಡೆಗೆ ಒರಗಿಕೊಂಡ. ಯಾವ ಕ್ಷಣದಲ್ಲಿ ಗಾಢವಾದ ನಿದ್ದೆ ಹತ್ತಿತು ಎಂಬುದು ಆತನಿಗೂ ತಿಳಿಯಲಿಲ್ಲ. ಆದರೆ ಮತ್ತೆ ಎಚ್ಚರಗೊಂಡು ಏಳುವಾಗ ಮುಸ್ಸಂಜೆ ಕವಿಯುತ್ತಿತ್ತು.

ಸೇಂದಿ ಹೀರಲು ಕಾಸಿಲ್ಲದೇ ಕಸಿವಿಸಿಗೊಂಡ. ಇವತ್ತು ತಿಮ್ಮಿಯ ಹತ್ತಿರ ಹೇಗಾದರೂ ಮಾಡಿ ಕಾಸು ಕಸಿದುಕೊಂಡು ಹೋಗುವದೆಂದು ಯೋಚಿಸಿ ತಿಮ್ಮಿಗಾಗಿ ಕಾಯುತ್ತಾ ಕುಳಿತ.

ತಾನು ಕೆಲಸ ಮಾಡುವ ಒಡೆಯನ ಮನೆಯಿಂದ, ರಾತ್ರಿಯ ಊಟಕ್ಕೆಂದು ಚಿಕ್ಕ ಪಾತ್ರೆಯಲ್ಲಿ ಸಾಂಬಾರು ಹಿಡಿದುಕೊಂಡು ತಿಮ್ಮಿ ಮನೆ ಸೇರಿದಳು. ಬರುತ್ತಿದ್ದಂತೆಯೇ ತಿಮ್ಮಿಯ ಬಳಿ ಕಾಸಿಗಾಗಿ ವರಾತ ತೆಗೆದ. ಏನೇನೋ ಸಬೂಬು ಕೊಟ್ಟು ಕಾಸು ಕೀಳಲು ಯತ್ನಿಸಿದ.

ಈ ಬಾರಿ ತಿಮ್ಮಿಯೂ ಗಟ್ಟಿಯಾಗಿ ನಿರ್ಧರಿಸಿ, ಬೋರನ ಆಟಗಳಿಗೆ ಜಗ್ಗಲಿಲ್ಲ. ಬೋರ ಮೊದಲೂ ಒಂದೆರಡು ಬಾರಿ ಮನೆಯ ಮರದ ರೀಪಿಗೆ ಹಗ್ಗ ಹಾಕಿಕೊಂಡು ಸಾಯುತ್ತೇನೆಂದು ಹಗ್ಗವನ್ನು ತಂದು ಹೆದರಿಸಿ ತಿಮ್ಮಿಯ ಹತ್ತಿರ ಕಾಸನ್ನು ಕಿತ್ತುಕೊಂಡು ಹೋಗಿದ್ದ. ಈ ಬಾರಿಯೂ ಬೋರ,”ಈಗ ನೀ ಕೊಡಲಿಲ್ಲ ಅಂದ್ರೆ ಹಗ್ಗ ಹಾಕಿಕೊಂಡು ಸಾಯ್ತೇನೆ…” ಎಂದು ಬೆದರಿಸಿದ. ಇವನ ಹಳೆಯ ನಾಟಕಗಳೆಲ್ಲ ನೆನಪಾಗಿ, ತಿಮ್ಮಿಯೂ,”ಎಲ್ಲ ಕಂಡಿದ್ದೇನೆ ನಿಂದು…” ಎಂದು ಮೂಗು ಮುರಿದಳು. ಬೋರ ಕೈಯಲ್ಲಿ ಹಗ್ಗವನ್ನು ಹಿಡಿದುಕೊಂಡು, ಒಂದು ಸ್ಟೂಲನ್ನು ತಂದುಕೊಂಡು, ರೀಪಿಗೆ ಹಗ್ಗವನ್ನು ಸಿಕ್ಕಿಸಿ, ಸ್ಟೂಲನ್ನೇರಿ ಕುಣಿಕೆಗೆ ಕುತ್ತಿಗೆಯನ್ನು ಕೊಟ್ಟು, ತುದಿಗಾಲಲ್ಲಿ ನಿಂತು ಮತ್ತೊಮ್ಮೆ ತಿಮ್ಮಿಯನ್ನು ಬೆದರಿಸಿದ.

ತಿಮ್ಮಿಯೂ ಜಗ್ಗದೇ ಕೋಪದಲ್ಲಿ, “ನಾನೂ ಮನೆ ಬಿಟ್ಟು ಹೋಗ್ತೇನೆ…” ಎಂದವಳೇ ಮನೆಯಾಚೆ ಹೊರಟಳು.

ಬೋರ ಎರಡೂ ಕಾಲುಗಳ ಬೆರಳನ್ನು ಆಧರಿಸಿ ಸ್ಟೂಲಿನ ತುದಿಯಲ್ಲಿ ನಿಂತಿದ್ದ. ರೋಷಾವೇಶದಲ್ಲಿ ಕುಣಿಯುತಿದ್ದ ಬೋರನ ಕಡೆ ಹಿಂದಿರುಗಿಯೂ ನೋಡದೆ ತಿಮ್ಮಿ ಹೊರಟು ಹೋಗಿದ್ದಳು.

ಇಳಿಯುವ ಭರದಲ್ಲಿ ಬೋರನ ಕಾಲುಗಳು ಅವನಿಗೆ ಅರಿವಿಲ್ಲದೆಯೇ ಹೊರಳಿತು. ನಿಂತಿದ್ದ ಸ್ಟೂಲು ಮಗುಚಿ ಬಿದ್ದಿತು. ಕುಣಿಕೆ ಬಿಗಿಯಿತು. ಬೋರ ಮಾತು ಮುಗಿಸಿದ.

ಅತ್ತ ಮಾದನ ಅಂಗಡಿಯ ಎದುರು ಧೂಳೆಬ್ಬಿಸಿಕೊಂಡು ಹಾಳ್ಟಿಂಗ್ ಬಸ್ಸು ತನ್ನ ಅಂದಿನ ಪ್ರಯಾಣ ಮುಗಿಸಿ ಸಮಯಕ್ಕೆ ಸರಿಯಾಗಿ ಬಂದು ನಿಂತಿತು.

ಬಸ್ಸಿನಿಂದ ಇಳಿದವರಲ್ಲಿ ಕೆಲವರು, “ಓ ಮಾದ ಬೋರ ಎಲ್ಲೋ?” ಎಂದು ಕೇಳಿ ಮಾದನ ಉತ್ತರಕ್ಕೂ ಕಾಯದೆ ಮುನ್ನಡೆದರು.

ಕತ್ತಲು ಗಾಢವಾಯಿತು. ಊರು ಮೌನವಾಯಿತು. ಮಾದನ ಲಾಟೀನಿನ ದೀಪವು ಮೆಲ್ಲನೆ ಸಣ್ಣದಾಗುತ್ತ ಬಂದಿತು.

—0–0–0—