- ಭಯವಿಹ್ವಲತೆ - ಅಕ್ಟೋಬರ್ 27, 2024
- ರವಿಯಂತೆ ಕವಿಯೂ- ಅಂಬಾರಕೊಡ್ಲದ ವಿಷ್ಣುನಾಯ್ಕರು - ಫೆಬ್ರುವರಿ 27, 2024
- ಎರಡು ಅನುವಾದಿತ ಕವಿತೆಗಳು - ಸೆಪ್ಟೆಂಬರ್ 26, 2020
ಇಷ್ಟು ವರ್ಷದ ಈ ಭೂಮಿ ಮೇಲಿನ ಬದುಕಿನುದ್ದಕ್ಕೂ ನಾನು ಬರೀ ಮೂರೇ ಮೂರು ಬಾರಿ ಮಾತ್ರ ಭಯಗೊಂಡಿದ್ದೆ. ಮೊದಲ ಸಲದ ಭಯ ಅಂತೂ ನನ್ನ ರೋಮ ರೋಮಗಳು ನೆಟ್ಟಗಾಗುವಂತೆ ಮಾಡಿತ್ತು. ನನ್ನ ಇಡೀ ದೇಹ ಥರಥರ ಕಂಪಿಸುತ್ತಿತ್ತು. ಅದು ತೀರಾ ಕ್ಷುಲ್ಲಕ ಕಾರಣದ ಭಯ. ಆದರೆ ವಿಚಿತ್ರವಾಗಿತ್ತು. ಜುಲೈ ತಿಂಗಳ ಒಂದು ಸಂಜೆ ಮಾಡೋದಿಕ್ಕೆ ಏನೂ ಕೆಲಸ ಇರಲಿಲ್ಲ. ಹಾಗಾಗಿ ಪತ್ರಿಕೆ ತರೋಣ ಅಂತಾ ನಿಲ್ದಾಣಕ್ಕೆ ಗಾಡಿ ಓಡಿಸಿದ್ದೆ. ಜುಲೈ ತಿಂಗಳ ಒಂದೇ ನಮೂನಿಯ ಸಂಜೆಗಳoತೆ ಆವತ್ತು ಕೂಡಾ ಶಾಂತವಾದ, ಬೆಚ್ಚಗಿನ, ಆಸಕ್ತಿ ಉಂಟುಮಾಡುವ ಸಂಜೆಯಾಗಿತ್ತು. ಒಮ್ಮೆ ಈ ಸಂಜೆಗಳು ಹೀಗೆ ಶುರುವಾದರೆ ಒಂದು ವಾರ ಇಲ್ಲ ಹದಿನೈದು ದಿನಗಳು ಅಥವಾ ಇನ್ನೂ ದೀರ್ಘವಾಗಿರುತ್ತವೆ.ಕೆಲವು ಸಲ ಇಂತಹ ಸಂಜೆಗಳು ಒಮ್ಮೆಲೆ ಸಡನ್ನಾಗಿ ಭಯಂಕರ ಚಂಡಮಾರುತಕ್ಕೋ ಅಥವಾ ಬಿಡದೇ ಸುರಿವ ಮಳೆಯಿಂದಲೋ ಬದಲಾಗುತ್ತವೆ. ಒಂದು ಹೊಸತನವನ್ನ ಮೂಡಿಸಿ ಬಿಡ್ತವೆ.
ಸೂರ್ಯ ಮುಳುಗಿ ಆಗಲೇ ಸ್ವಲ್ಪ ಹೊತ್ತಾಗಿತ್ತು. ಮುಸ್ಸಂಜೆಯ ಮಬ್ಬು ಬಣ್ಣ ನೆಲದ ತುಂಬೆಲ್ಲ ಚೆಲ್ಲಿಬಿದ್ದಿತ್ತು. ಹುಲ್ಲಿನ ಪರಿಮಳ ಮತ್ತು ಹೂಗಳ ಮಧುರವಾದ ಸುವಾಸನೆಗಳು ನಿಶ್ಚಲ ಗಾಳಿಯಲ್ಲಿ ಸೇರಿ ಭಾರವಾಗಿದ್ದವು. ನಾನು ಗುಜರಿಯಾದ ಕುದುರೆ ಗಾಡಿಯೊಂದನ್ನು ಓಡಿಸುತ್ತಿದ್ದೆ. ನನ್ನ ಬೆನ್ನ ಹಿಂದೆ ನಮ್ಮ ಮಾಲಿಯ ಮಗ ಪಾಷ್ಕಾ ಇದ್ದ. ಅಗತ್ಯ ಬಿದ್ದರೆ ಕುದುರೆ ನೋಡಿಕೊಳ್ಳಲು ಆದೀತೆಂದು ನಾನವನನ್ನು ರ್ಕೊಂಡ ಬಂದಿದ್ದೆ. ಅವನು ಎಂಟು ವರ್ಷದ ಹುಡುಗ, ಓಟ್ಸ ಚೀಲದ ಮೇಲೆ ತಲೆಯಿಟ್ಟು, ಸಣ್ಣದಾಗಿ ಗೊರಕೆ ಹೊಡೆಯುತ್ತಿದ್ದ. ನಾವು ಸಾಗುತ್ತಿದ್ದ ರಸ್ತೆ ಬಹಳ ಇಕ್ಕಟ್ಟಾಗಿತ್ತು ಆದರೆ ಖಡಕ್ ಆಡಳಿತಗಾರನಂತೆ ನೇರವಾಗಿತ್ತು. ಎತ್ತರದ ದಪ್ಪ ರೈ[ ಚಿಕ್ಕ ಗೋದಿ] ಧಾನ್ಯದ ಹುಲ್ಲಿನ ನಡುವೆ ಅಡಗಿ ಮೈ ಚೆಲ್ಲಿ ಮಲಗಿದ ಹೆಬ್ಬಾವಿನಂತಿತ್ತು. ಸೂರ್ಯಾಸ್ತ ಮುಗಿದು ಅದರ ಹೊಂಬೆಳಕಿನ ಮಬ್ಬು ಕವಿದಿತ್ತು. ಬೆಳಕಿನ ಗೆರೆಯೊಂದು ಕೆಲವೊಮ್ಮೆ ದೋಣಿಯಂತೆ ಮತ್ತೆ ಕೆಲವೊಮ್ಮೆ ಹಾಸಿಗೆಯಲ್ಲಿ ಸುತ್ತಿದ ಮನುಷ್ಯನಂತೆ ಕಾಣುವ ಸಣ್ಣಗಿನ ವಿಕಾರ ರೂಪದ ಮೋಡದ ನಡುವೆ ಹಾದುಹೋಗಿತ್ತು….
ನಾನು ಹೆಚ್ಚು ಕಮ್ಮಿ ಒಂದೂವರೆ ಅಥವಾ ಎರಡು ಮೈಲುಗಳಷ್ಟು ಟ್ರಾಲಿ ಓಡಿಸಿದ್ದಿರಬಹುದು. ಸಂಜೆಯ ಮಸುಕಾದ ಹೊಳಪಿನ ಹಿನ್ನೆಲೆಯಲ್ಲಿ ಅದಕ್ಕೆ ಎದುರಾಗಿ ಒಂದರ ಹಿಂದೆ ಒಂದರಂತೆ ಆಕರ್ಷಕವಾದ ಎತ್ತರದ ಪೋಪ್ಲರ್ ಮರಗಳು: ಅದರಾಚೆ ನದಿಯೊಂದು ಹೊಳೆಯುತ್ತಿತ್ತು. ಇದ್ದಕ್ಕಿದ್ದಂತೆ ಇದೇನೊ ಮಾಯೆಯೋ ಎಂಬoತೆ ಒಂದು ಸುಂದರವಾದ ಚಿತ್ರ ನನ್ನ ಮುಂದೆ ಉದ್ದಕ್ಕೆ ಚಾಚಿಕೊಂಡಿತು. ಹಾಗಾಗಿ ಕುದುರೆಯನ್ನು ತಡೆದು ನಿಲ್ಲಿಸಬೇಕಾಯ್ತು. ಅಲ್ಲಿಂದ ಮುಂದೆ ನಾವು ಬಂದ ನೇರವಾದ ರಸ್ತೆ ಒಮ್ಮೆಲೆ ಕವಲಾಗಿತ್ತು. ಕೆಳಗೆ ಪೊದೆಗಳಿಂದ ತುಂಬಿದ ಇಳಿಜಾರಿನೆಡೆಗೆ ಸಾಗಿತ್ತು. ನಾವು ಬೆಟ್ಟವನ್ನೇರಿ ನಿಂತಿದ್ದೆವು. ನಿಂತ ಸ್ಥಳದ ಬುಡದಲ್ಲಿ ಒಂದು ಬೃಹದಾಕಾರದ ರಂಧ್ರವಿದ್ದು ಮುಸ್ಸಂಜೆಯ ಹೊಳೆಯುವ ಕಿರಣಗಳು ಅದರಲ್ಲಿ ತುಂಬಿದ್ದವು. ಅದಕ್ಕೆ ಅದ್ಭುತವಾದ ಆಕಾರವಿತ್ತು ಹಾಗೆ ವಿಶಾಲವೂ ಆಗಿತ್ತು. ಆ ರಂದ್ರದ ತಳಭಾಗದಲ್ಲಿ ವಿಶಾಲವಾದ ಬಯಲಿನಲ್ಲಿ ಪೋಪ್ಲಾರ್ ಮರಗಳು ಸುತ್ತುವರೆದಿದ್ದವು. ಮುಂದೆ ಹೊಳೆಯುವ ನದಿಯ ಪ್ರೀತಿಯ ಅಪ್ಪುಗೆ ನಡುವೆ ಹಳ್ಳಿಯೊಂದು ನೆಲೆಯಾಗಿತ್ತು. ಅದೀಗ ನಿದ್ರಿಸುತ್ತಿದೆ. ಆ ಹಳ್ಳಿಯ ಗುಡಿಸಲುಗಳು, ಗಂಟೆಗೋಪುರ ಹೊತ್ತ ಕ್ರೈಸ್ತ ಚರ್ಚು,ಅಲ್ಲಿಯ ಮರಗಳು, ಎಲ್ಲವೂ ಬೂದು ಬಣ್ಣದ ಮುಸ್ಸಂಜೆಯ ಬೆಳಕಿಗೆ ಹೊಳೆಯುತ್ತಿದ್ದವು. ಅಷ್ಟೇ ಅಲ್ಲದೇ ನದಿಯ ನಯವಾದ ಮೇಲ್ಭಾಗದಲ್ಲಿ ಗಾಢವಾಗಿ ಪ್ರತಿಫಲಿಸುತ್ತಿದ್ದವು.
ಅವನು ಬಿದ್ದುಗಿದ್ದು ಹೋದರೆ ಎಂಬ ಭಯದಿಂದ ನಾನು ಪಾಷ್ಕಾನನನ್ನು ಎಬ್ಬಿಸಿದೆ. ಹಾಗೇ ಬಹಳ ಎಚ್ಚರಿಕೆಯಿಂದ ಇಳಿಜಾರಿನ ದಾರಿಯಲ್ಲಿ ಸಾಗತೊಡಗಿದೆ. ‘ನಾವು ಲುಕೋವೋಗೆ ಬಂದು ಮುಟ್ಟಿದೆವಾ?‘ ಆಲಸ್ಯದಿಂದಲೇ ತಲೆ ಎತ್ತಿ ಕೇಳಿದ ಪಾಷ್ಕಾ. ‘ ಹೌದು. ಇಗೋ ಇದರ ಕಡಿವಾಣ ಸ್ವಲ್ಪ ಹಿಡಿದಿಕೋ’.
ನಾನು ಕುದುರೆಯನ್ನು ಬೆಟ್ಟದಿಂದ ಕೆಳಗಿಳಿಸಿ ಹಳ್ಳಿಯ ಕಡೆ ನೋಡಿದೆ. ಮೊದಲ ದೃಷ್ಟಿಗೆ ನನ್ನ ಗಮನವನ್ನು ಒಂದು ವಿಚಿತ್ರವಾದ ಸನ್ನಿವೇಶ ಸೆಳೆಯಿತು: ಗಂಟೆ ಗೋಪುರದ ಮೇಲ್ಭಾಗದಲ್ಲಿ ಗುಮ್ಮಟ ಮತ್ತು ಘಂಟೆಗಳ ನಡುವಿನ ಸಣ್ಣ ಕಿಂಡಿಯಲ್ಲಿ ಬೆಳಕೊಂದು ಮಿನುಗುತ್ತಿತ್ತು, ಆದರದು ಹೊಗೆಯಾಡುತ್ತಿರುವ ದೀಪದಂತೆ ಇತ್ತು. ಒಂದು ಕ್ಷಣ ಉರಿದರೆ ಇನ್ನೊಂದು ಕ್ಷಣ ನಂದಿಹೋಗುತ್ತಿತ್ತು. ಅದೆಲ್ಲಿಂದ ಮಿನುಗುತ್ತಿದೆ?
ಆದರೆ ನನ್ನ ಯೋಚನೆಗೆ ನಿಲುಕುತ್ತಿರಲಿಲ್ಲ. ಗಂಟೆ ಗೋಪುರದ ಮೇಲ್ಭಾಗದಲ್ಲಿ ಐಕಾನ್ಗಳಾಗಲಿ ಅಥವಾ ದೀಪಗಳಾಗಲಿ ಇರಲಿಲ್ಲವಾದ್ದರಿಂದ ಕಿಟಕಿಯಲ್ಲಿ ಹಾಗೇ ಉರಿಯಲು ಸಾಧ್ಯವಿರಲಿಲ್ಲ. ನನಗೆ ಗೊತ್ತಿರುವಂತೆ ಕಿರಣಗಳು, ಧೂಳು ಮತ್ತು ಜೇಡನ ಬಲೆಯ ವಿನಃ ಮತ್ತೇನೂ ಇರಲಿಲ್ಲ, ಆ ಸಣ್ಣ ಗೋಪುರದ ಮೇಲೆ ಹತ್ತುವುದು ಕಷ್ಟಕರವಾಗಿತ್ತು. ಗಂಟೆ ಗೋಪುರದಿಂದ ಅಲ್ಲಿಗೆ ಹೋಗುವ ದಾರಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು.
ಅದು ಹೊರಗಿನ ಬೆಳಕಿನ ಪ್ರತಿಫಲನವೇನೋ ಎಂದುಕೊಂಡು ನನ್ನ ಕಣ್ಣುಗಳ ಕೀಲಿಸಿ ನೋಡಿದರೂ ಹೊರಗಿನ ಅತಿ ವಿಶಾಲ ವಿಸ್ತಾರದಲ್ಲಿ ಒಂದೇ ಒಂದು ಬೆಳಕಿನ ಚುಕ್ಕಿ ಕೂಡಾ ಕಣ್ಣಿಗೆ ಬೀಳಲಿಲ್ಲ. ಚಂದ್ರನoತೂ ಇರಲಿಲ್ಲ. ಮಬ್ಬಾದ ಮಂದ ಗೆರೆಗಳು ಪ್ರತಿಫಲಿಸಲು ಸಾಧ್ಯವಿರಲಿಲ್ಲ. ಕಾರಣವೇನೆಂದರೆ ಕಿಟಕಿಯು ಪಶ್ಚಿಮಕ್ಕೆ ತೆರೆದುಕೊಂಡಿರಲಿಲ್ಲ. ಬದಲಿಗೆ ಪೂರ್ವಕ್ಕಿತ್ತು. ಕುದುರೆ ಮೇಲೆ ಇಳಿಜಾರಿನ ದಾರಿಯಲ್ಲಿ ಸಾಗುತ್ತ ನನಗೆ ಇಂತಹುದೇ ಮತು ಇದೇ ರೀತಿಯ ಹಲವು ಸಂಗತಿಗಳು ತಲೆಯೊಳಗೆ ಸುತ್ತಲಾರಂಭಿಸಿದವು. ಸ್ವಲ್ಪ ಕೆಳಭಾಗಕ್ಕೆ ಬರುತ್ತಲೆ ನಾನು ರಸ್ತೆ ಬದಿಯಲ್ಲಿ ಕೂತು ಆ ಬೆಳಕಿನೆಡೆಗೆ ಪುನಃ ನೋಡಿದೆ. ಮೊದಲಿನಂತೆ ಅದು ಹೊಳೆಯುತ್ತಾ ಉರಿಯುತ್ತಿತ್ತು.
‘ಇದೆಂಥಾ ವಿಚಿತ್ರ’ ಯೋಚಿಸಿದೆ. ಗೊಂದಲಕ್ಕೆ ಬಿದ್ದೆ.
ಆಮೆಲೆ ಸ್ವಲ್ಪ ಸ್ವಲ್ಪವೇ ಗೊಂದಲದ ಮನಸ್ಥಿತಿಯಿಂದ ಮೊದಲಿನ ಸ್ಥಿತಿಗೆ ಬಂದೆ. ಮೊದಲಿಗೆ ಅಂದುಕೊAಡೆ ಇದೊಂದು ಸಾಮಾನ್ಯ ವಿದ್ಯಮಾನವನ್ನು ವಿವರಿಸಲು ಆಗದಂತಹ ಗೊಂದಲ ಎಂದು; ಆದರೆ ಆನಂತರ ಇದ್ದಕ್ಕಿದ್ದ ಹಾಗೇ ಭಯದಿಂದ ಬೆಳಕಿನ ಕಡೆಯಿಂದ ಮುಖ ತಿರುವಿ, ಒಂದು ಕೈಯಿಂದ ಪಾಷ್ಕಾನನ್ನು ಹಿಡಿದುಕೊಂಡೆನೋ, ಆಗ ನಾನು ಭಯಗೃಸ್ತನಾಗಿದ್ದೆನೆಂದು ಅರಿವಾಯಿತು.
ಒಮ್ಮೆಲೆ ಏಕಾಂಗಿತನ, ದುಃಖ ಮತ್ತು ಭಯ ಇವೆಲ್ಲವೂಗಳಿಂದಲೂ ಸಂಪೂರ್ಣ ಬಂಧಿಯಾಗಿದ್ದೆ. ಕತ್ತಲೆ ತುಂಬಿದ ದೊಡ್ಡ ರಂದ್ರಕ್ಕೆ ನನ್ನ ಇಚ್ಛೆಗೆ ವಿರುದ್ಧವಾಗಿ ಎಸೆಯಲ್ಪಟ್ಟಿದ್ದೆ. ಅಲ್ಲಿ ಕೆಂಪು ಕಣ್ಣುಗಳಿಂದ ನನ್ನನ್ನೆ ನೋಡುತ್ತಿತ್ತು. ಗಂಟೆಗೋಪುರದೊoದಿಗೆ ನಾನು ಏಕಾಂಗಿಯಾಗಿ ನಿಂತಿದ್ದೆ.
“ಪಾಷ್ಕಾ! ಭಯದಿಂದ ಕಣ್ಣುಗಳನ್ನು ಮುಚ್ಚಿ ಚೀರಿದೆ.
“ಏನು?”
“ಪಾಷ್ಕಾ, ಗಂಟೆಗೋಪುರದಲ್ಲಿ ಏನದು ಹೊಳೆಯುತಿದೆ?”
ಪಾಷ್ಕಾ ಗಂಟೆಗೋಪುರದೆಡೆಗೆ ನೋಡುತ್ತಾ ಆಕಳಿಸಿದ.
‘ಯಾರಿಗೆ ಗೊತ್ತು?’ ಈ ಹುಡುಗನೊಂದಿಗಿನ ಸ್ವಲ್ಪೇ ಮಾತು ಕೂಡಾ ನನಗೆ ಒಂದಿಷ್ಟು ಭರವಸೆ ನೀಡಿತು. ಆದರದು ತುಂಬಾ ಹೊತ್ತಿನವರೆಗಲ್ಲ. ನನ್ನ ತಳಮಳವನ್ನು ಗ್ರಹಿಸಿದ ಪಾಷ್ಕಾ ತನ್ನ ದೊಡ್ಡ ಕಣ್ಣುಗಳನ್ನು ಬೆಳಕಿನೆಡೆಗೆ ಹರಿಸಿದ ಮತ್ತು ಪುನಃ ನನ್ನ ಕಡೆ ನೋಡಿದ, ಮತ್ತೆ ಬೆಳಕಿನೆಡೆಗೆ..
“ನನಗೂ ಭಯವಾಗುತ್ತಿದೆ.” ಆತ ಉಸುರಿದ.
ಅದಾಗಲೇ ಭಯಗೊಂಡಿದ್ದ ನಾನು ಒಂದು ಕೈಯಿಂದ ಹುಡುಗನ ಗಟ್ಟಿಯಾಗಿ ಹಿಡಿದುಕೊಂಡು ಹತ್ತಿರಕ್ಕೆ ಎಳೆದುಕೊಂಡೆ. ಕುದುರೆಗೆ ಜೋರಾದ ಒಂದು ಏಟೂ ಕೊಟ್ಟೆ.
‘ಇದು ಮೂರ್ಖತನ!” ನನಗೆ ನಾನೇ ಹೇಳಿಕೊಂಡೆ. ಈ ವಿಚಿತ್ರ ವಿದ್ಯಮಾನವಂತೂ ಭಯಾನಕವಾಗಿತ್ತು. ಯಾಕೆಂದರೆ ನನಗದು ಅರ್ಥವಾಗಿರಲಿಲ್ಲ: ಯಾವುದು ನಮಗೆ ಅರ್ಥವಾಗದೋ ಅದು ನಿಗೂಢ ಕೂಡಾ ಹೌದಲ್ಲ!”
ನನ್ನನ್ನು ನಾನು ಸಮಾಧಾನ ಪಡಿಸಿಕೊಳ್ಳಲು ಪ್ರಯತ್ನಿಸತೊಡಗಿದೆ. ಹಾಗಂತ ಕುದುರೆಗೆ ಬಾರಿಸುವುದನ್ನು ನಿಲ್ಲಿಸಲಿಲ್ಲ. ನಾವು ಪೋಷ್ಟಿಂಗ್ ಸ್ಟೇಷನ್ ತಲುಪಿದಾಗ ಉದ್ದೇಶಪೂರಕವಾಗಿಯೇ ಒಂದು ಗಂಟೆೆಗೂ ಅಧಿಕ ಅಲ್ಲಿಯ ಮೇಲ್ವಿಚಾರಕನೊಡನೆ ಹರಟಿದೆ. ಎರಡು ಮೂರು ಪತ್ರಿಕೆಗಳನ್ನು ಓದಿದೆ. ಆದರೆ ಆ ಚಡಪಡಿಕೆ ಮಾತ್ರ ನಿಲ್ಲಲಿಲ್ಲ. ಹಿಂತಿರುಗುವಾಗ ಆ ಬೆಳಕು ಕಾಣಲಿಲ್ಲ. ಬದಲಿಗೆ ಗುಡಿಸಲುಗಳ, ಪಾಪ್ಲರ ಮರಗಳ, ನಾನು ಸಾಗಬೇಕಿದ್ದ ಗುಡ್ಡದ ನೆರಳುಗಳು ನನಗೆ ಜೀವಂತವಾಗಿರುವಂತೆ ಕಂಡವು. ಆದರೆ ಆ ಬೆಳಕು ಅಲ್ಲೇಕಿತ್ತು ಎಂಬುದು ಇಂದಿಗೂ ನನಗೆ ಅರ್ಥವಾಗಿಲ್ಲ.
ನನ್ನ ಅನುಭವಕ್ಕೆ ಬಂದ ಎರಡನೆ ಭಯದ ಸಂದರ್ಭ ಕೂಡಾ ತೀರಾ ಕ್ಷÄಲಕವಾಗಿತ್ತು. ನಾನು ಪ್ರಿಯತಮೆಯ ಭೇಟಿ ಮಾಡಿ ಮನೆಗೆ ವಾಪಸ್ಸಾಗುತ್ತಿದ್ದೆ. ಸುಮಾರು ರಾತ್ರಿ ಒಂದು ಗಂಟೆಯ ಸಮಯ. ಅರುಣೋದಯಕ್ಕೂ ಸ್ವಲ್ಪ ಮೊದಲು ಈ ಪ್ರಕೃತಿ ತನ್ನ ಸ್ವಸ್ಥ, ಸುಖ ನಿದ್ದೆಯಲ್ಲಿ ಮುಳುಗಿಹೋಗುವ ಸಮಯ. ಆದರೆ ಆ ದಿನ ಪ್ರಕೃತಿ ನಿದ್ರಿಸುತ್ತಿರಲಿಲ್ಲ, ರಾತ್ರಿ ನಿಶ್ಷಲವೆಂದು ಯಾರೊಬ್ಬರೂ ಹೇಳಲು ಸಾಧ್ಯವಿಲ್ಲದಂತಹ ಸಮಯ. ಕಾರ್ನಕ್ರೇಕ್ ಹಕ್ಕಿಗಳು, ಕ್ಷಿಲ್ಗಳು, ನೈಂಟಿಗೇಲ್ಗಳು, ಮರಕುಟಿಕಗಳು, ಕೂಗುತ್ತಿದ್ದವು, ಚಿಟ್ಟೆಗಳು, ಮಿಡತೆಗಳು ಮೊರೆಯುತ್ತಿದ್ದವು. ಹಗುರವಾದ ಮಂಜು ಹಲ್ಲಿನ ಮೇಲೆ ಹರಡಿತ್ತು. ಆಕಾಶದುದ್ದಕ್ಕೂ ಮೋಡಗಳು ನೇರವಾಗಿ ಚಂದ್ರನಲ್ಲಿಗೆ ಸಾಗುತ್ತಿದ್ದವು. ಪ್ರಕೃತಿ ಜಾಗೃತಳಾಗಿದ್ದಳು. ತನ್ನ ಜೀವನದ ಅನುಪಮ ಕ್ಷಣಗಳು ಕಳೆದುಹೋಗಬಹುದೆಂಬ ಭಯ ಅವಳದಾಗಿತ್ತು.
ಒಮ್ಮೆ ಸುತ್ತಲೂ ನೋಡಿದೆ: ಆಗಷ್ಟೇ ದಾಟಿ ಬಂದ ದಾರಿಯಲ್ಲಿ ನನ್ನಿಂದ ನೂರು ಹೆಜ್ಜೆಗಳ ದೂರದಲ್ಲಿ ಕಪ್ಪುಪೊದೆಯೊಂದಿತ್ತು. ಅಲ್ಲಿ ರೈಲೆ ಸಂಕ ಬಹಳ ಆಕರ್ಷಕ ಎನ್ನುವಂತೆ ವಕ್ರರೇಖೆಯಲ್ಲಿ ಬಲಕ್ಕೆ ತಿರುಗಿ, ಮರಗಳ ನಡುವೆ ಕಣ್ಮರೆಯಾದಂತಿತ್ತು. ಗೊಂದಲಕ್ಕೊಳಗಾಗಿ ಅಲ್ಲೇ ನಿಂತು ಸ್ವಲ್ಪ ಕಾದೆ. ಒಂದು ದೊಡ್ಡ ದೈತ್ಯಾಕಾರದ ದೇಹವೊಂದು ಆ ತಿರುವಿನಲ್ಲಿ ಕಾಣಿಸಿಕೊಂಡಿತು. ಜೋರಾದ ಸದ್ದಿನೊಂದಿಗೆ ನನ್ನತ್ತಲೇ ಬರತೊಡಗಿತು. ಹಕ್ಕಿಯಷ್ಟು ವೇಗವಾಗಿ ನನ್ನನ್ನು ದಾಟಿ ರೈಲ್ವೆ ಹಳಿಯ ಮೇಲೆ ಹಾದುಹೋಯಿತು ಅರ್ಧ ನಿಮಿಷವೂ ಕಳೆದಿರಲಿಲ್ಲ. ಆ ಮಸಕು ಮಬ್ಬು ಮಾಯವಾಯಿತು. ರಾತ್ರಿಯ ಸದ್ದಿನೊಳಗೆ ಗಡಗಡದ ಸದ್ದು ಕೂಡಾ ಕರಗಿಹೋಯಿತು.
ಅದು ಬಹಳ ಸಾದಾ ಸರಕುಗಳ ಟ್ರಕ್ಕಾಗಿತ್ತು, ಅಂತಹ ವಿಶೇಷವಾದದ್ದೇನು ಇರಲಿಲ್ಲ., ಆದರೆ ಎಂಜಿನ್ ಇಲ್ಲದೇ ಇರುವ ಅದರ ನೋಟ ಅದರಲ್ಲೂ ಈ ರಾತ್ರಿಯಲ್ಲಿ ಎಂಬುದೇ ನನ್ನ ಗೊಂದಲಕ್ಕೆ ಕಾರಣವಾಗಿತ್ತು. ಅದು ಎಲ್ಲಿಂದ ಬಂದಿರಬಹುದು? ಇಷ್ಟೊಂದು ವೇಗವಾಗಿ ಹಳಿಯ ಉದ್ದಕ್ಕೂ ಹಾರುವಂತೆ ಅದನ್ನು ಮಾಡಿದ್ದಾರು? ಅದು ಎಲ್ಲಿಂದ ಬಂತು? ಎಲ್ಲಿಗೆ ಹಾರುತ್ತಿದೆ?
ನಾನು ಮೂಢನಂಬಿಕೆ ಹೊಂದಿದವನೇ ಆಗಿದ್ದಿದ್ದರೆ, ದೆವ್ವಗಳ ಸಬ್ಬತ್ಗೆ ಪ್ರಯಾಣಿಸುತ್ತಿರುವ ಪಿಶಾಚಿಗಳ ಮಾಟಗಾತಿಯರ ಪಂಗಡವಾಗಿರಬಹುದೆAದು ಅಂದುಕೊAಡಿರುತ್ತಿದ್ದೆ. ಮತ್ತು ನನ್ನ ದಾರಿಯಲ್ಲಿ ಸುಮ್ಮನೇ ಹೊರಟುಹೋಗುತ್ತಿದ್ದೆ: ಆದರೆ ಈ ವಿದ್ಯಮಾನವು ಸಂಪೂರ್ಣವಾಗಿ ಅರ್ಥವಾಗುವಂತದ್ದು ಆಗಿರಲಿಲ್ಲ. ನನ್ನ ಕಣ್ಣುಗಳನ್ನು ನಾನೇ ನಂಬಲಾರದಂತಿದ್ದೆ. ಜೇಡರ ಬಲೆಯಲ್ಲಿ ಬಿದ್ದ ಹುಳುವಿನಂತೆ ಗೊಂದಲದಲ್ಲಿ ಸಿಕ್ಕಿಕೊಂಡಿದ್ದೆ.
ಆ ವಿಶಾಲವಾದ ದೊಡ್ಡ ಬಯಲಿನಲ್ಲಿ ನಾನು ಏಕಾಂಗಿಯಾಗಿರುವುದು ನನಗೆ ಒಮ್ಮೆಲೆ ಅರಿವಿಗೆ ಬಂತು: ಆ ರಾತ್ರಿ ಹೇಗಿತ್ತೆಂದು ಈಗ ನೆನಪಿಸಿಕೊಳ್ಳಲು ಮನಸ್ಸು ಬರದು. ಅದು ನನ್ನ ಮುಖದೆಡೆಗೆ ಇಣುಕುತ್ತಿರುವಂತೆ, ನನ್ನ ಹೆಜ್ಜೆ ಗುರುತಿನ ಬೆನ್ನು ಹತ್ತಿದ್ದಂತೆ ಕಂಡಿತು.. ಎಲ್ಲ ಸದ್ದುಗಳು, ಹಕ್ಕಿಗಳ ಚೀರಾಟ, ಮರಗಳ ಮರ್ಮರ, ಎಲ್ಲವೂ ಅಶುಭವಾಗಿ ಗೋಚರಿಸಿದವು. ಇವೆಲ್ಲವೂ ನನ್ನ ಎಚ್ಚರಿಸಲು ಇರುವಂತೆ ಕಂಡವು. ಮರುಕ್ಷಣ ಹುಚ್ಚನಂತೆ ಓಡಿದೆ., ಏನು ಮಾಡುತ್ತಿದ್ದೇನೆ ಎಮಬುದರಿಯದೇ ಓಡಿದೆ. ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡಲು ಪ್ರಯತ್ನಿಸಿದೆ. ಆಗ ಒಮ್ಮೆಲೆ ನಾನು ಈ ಮೊದಲು ಹೆಚ್ಚು ಗಮನ ಕೊಡದ ಏನೋ ಸದ್ದನ್ನು ಕೇಳಿದೆ; ಅದು ಟೆಲಿಗ್ರಾಫ್ ತಂತಿಗಳ ಗೋಳಿನ ಸ್ವರವಾಗಿತ್ತು
“ಇದು ಅತಿಯಾಯ್ತ” ನನ್ನ ಬಗ್ಗೆಯೇ ನಾಚಿಕೆ ಪಡುತ್ತಾ, ಹೇಳಿಕೊಂಡೆ. ಇದು ಹೇಡಿತನ! ಆದರೆ ಹೇಡಿತನವು ಜ್ಞಾನಕ್ಕಿಂತ ಬಲವಾಗಿತ್ತು. ಹಸಿರು ದೀಪದ ಹತ್ತಿರ ಬಂದಾಗಲೇ ನಾನು ನನ್ನ ಹೆಜ್ಜೆಗಳ ವೇಗ ಕಡಿಮೆ ಮಾಡಿದೆ, ಅಲ್ಲೊಂದು ಕಪ್ಪು ಬಣ್ಣದ ಸಿಗ್ನಲ್ ಬಾಕ್ಸನ್ನ ಕಂಡೆ. ಅದರ ಹತ್ತಿರವೇ ಸಂಕದ ಕಟ್ಟೆಯ ಮೇಲೆ ಮನುಷ್ಯನಂತಹ ಆಕೃತಿಯನ್ನು ಕಂಡೆ. ಬಹುಶಃ ಆತ ಸಿಗ್ನಲ್ ಮ್ಯಾನ್ ಇರಬಹುದು.
“ನಿನದನ್ನು ನೋಡಿದೆಯಾ?” ಉಸಿರುಗಟ್ಟಿ ಆತನ ಕೇಳಿದೆ.
‘ಯಾರನ್ನು? ಏನನ್ನು?”
“ಯಾಕೆ,ಈಗಷ್ಟೆ ಒಂದು ಟ್ರಕ್ ಓಡಿತಲ್ಲಾ.”
‘ನೋಡಿದೆ…” ಅನ್ಯಮನಸ್ಕನಾಗಿಯೇ ಆ ರೈತ ಹೇಳಿದ. “ಇದು ಗೂಡ್ಸ ರೈಲಿನಿಂದ ಕಳಚಿಕೊಂಡಿತು.ಹತ್ತೊoಬತ್ತು ಮೈಲುಗಳಾಚೆ ಇಳಿಜಾರು ಬರುತ್ತದೆ….: ರೈಲು ಮೇಲಕ್ಕೆ ಹತ್ತುತ್ತಿತ್ತು. ಕೊನೆಯ ಬೋಗಿಯ ಜೋಡನೆ ಮುರಿದು ಬಿತ್ತು. ಹಾಗಾಗಿ ಇದು ರೈಲಿನಿಂದ ಕಳಚಿಕೊಂಡು ಹಿಮ್ಮುಖ ಓಡಿತು.ಈಗ ಅದನ್ನು ಯಾರೂ ಹಿಡಿಯಲಾಗದು”.
ನಾನಂದುಕೊಂಡ ವಿಚಿತ್ರ ಸಂಗತಿ ಈಗ ಏನೆಂದು ಗೊತ್ತಾಗಿತ್ತು. ಅದರಲ್ಲಿಯ ಅದ್ಭುತ ಪಾತ್ರವು ಮರೆಯಾಗಿತ್ತು. ನನ್ನ ಭಯವು ಹೊರಟು ಹೋಗಿತ್ತು.
ನಾನೀಗ ಮುಂದೆ ಹೋಗಲು ಯಾವ ಭಯವು ಇರಲಿಲ್ಲ.
ಮೂರನೇ ಬಾರಿ ಭಯ ನನ್ನ ಕಾಡಿದ್ದು ವಸಂತಕಾಲದ ಮುಂಜಾನೆಯ ಹೊತ್ತು. ನಾನು ಸ್ಟಾಂಡ್ ಶೂಟಿಂಗ್ ಮುಗಿಸಿ ಮನೆಗೆ ಹೋಗುತ್ತಿದ್ದೆ. ಅಂದು ಸಂಜೆಯಂತೆ ಮಬ್ಬು ಕವಿದಿತ್ತು. ಆಗಷ್ಟೇ ಬಿದ್ದ ಮಳೆಯಿಂದ ಕಾಡಿನ ದಾರಿ ಸಣ್ಣ ಸಣ್ಣ ಕೊಳಗಳಿಂದ ಆವೃತ್ತವಾಗಿತ್ತು. ಹೆಜ್ಜೆ ಇಟ್ಟರೆ ಒಂದು ಅಡಿಯಷ್ಟು ಭೂಮಿ ಒಳಜರಿಯುತ್ತಿತ್ತು. ಸೂರ್ಯಾಸ್ತದ ಕಡುಗೆಂಪು ಹೊಳಪು ಇಡೀ ಕಾಡನ್ನು ಆವರಿಸಿತ್ತು. ಬರ್ಚ ಮರದ ಬಿಳಿ ಕಾಂಡಗಳಿಗೆ ಚಿಗುರು ಎಲೆಗಳಿಗೆ ಬಣ್ಣ ಬಳಿದಿತ್ತು. ನಾನಂತೂ ಮುಂದೆ ಹೆಜ್ಜೆ ಇಡಲಾಗದಷ್ಟು ದಣಿದಿದ್ದೆ.
ಮನೆಯಿಂದ ನಾಲ್ಕೆಂದು ಮೈಲು ದೂರದಲ್ಲಿ ಕಾಡಿನ ದಾರಿಯ ಉದ್ದಕ್ಕೂ ನಡೆಯುತ್ತಿದ್ದೆ, ಏಕಾಏಕಿ ವಾಟರ್ ಸ್ಪೆöನಿಯಲ್ ಜಾತಿಯ ದೊಡ್ಡ ಕಪ್ಪು ನಾಯಿಯೊಂದು ಎದುರಾಯಿತು. ಓಡುತ್ತಾ, ನೇರ ನನ್ನ ಮುಖವನ್ನೆ, ಬಹಳ ಆಪ್ತವಾಗಿ ನೋಡಿತು. ಹಾಗೇ ಓಡಿಹೋಯಿತು.
“ಚಂದದ ನಾಯಿ!” ‘ಯಾರದ್ದಿರಬಹುದು? ಅಂದುಕೊoಡೆ.
ಸುತ್ತಲೂ ನೋಡಿದೆ. ನಾಯಿ ಹತ್ತು ಹೆಜ್ಜೆ ದೂರದಲ್ಲಿ ನನ್ನತ್ತಲೇ ದೃಷ್ಟಿ ನೆಟ್ಟು ನಿಂತಿತ್ತು. ಒಂದು ನಿಮಿಷ ಮೌನವಾಗಿಯೇ ಪರಸ್ಪರ ನಿಟ್ಟಿಸಿದೆವು, ಆನಂತರ ಆ ನಾಯಿ, ನನ್ನ ಕಾಳಜಿಯನ್ನು ಮೆಚ್ಚಿ ನನ್ನ ಹತ್ತಿರ ಬಂದು ಬಾಲ ಅಲ್ಲಾಡಿಸಿತು.
ನಾನು ಮುಂದೆ ನಡೆಯತೊಡಗಿದೆ. ನಾಯಿಯೂ ನನ್ನ ಹಿಂಬಾಲಿಸತೊಡಗಿತು.
“ಇದ್ಯಾರ ನಾಯಿಯಾಗಿರಬಹುದು? ನನ್ನನ್ನೆ ಕೇಳಿಕೊಳ್ಳತೊಡಗಿದೆ., ‘ಎಲ್ಲಿಂದ ಬಂದಿದೆ?’
ನನಗೆ ಸುತ್ತಲಿನ ಇಪ್ಪತ್ತು ಮೂವತ್ತು ಮೈಲಿಗಳವರೆಗೆ ಆ ಹಳ್ಳಿಯ ಶ್ರೀಮಂತರೆಲ್ಲ ಗೊತ್ತು, ಅವರ ನಾಯಿಗಳು ಕೂಡಾ. ಅವರಲ್ಲಿ ಯಾರೊಬ್ಬರ ಬಳಿಯೂ ಈ ಸ್ಪೇನಿಯಲ್ ತಳಿಯ ನಾಯಿಗಳಿರಲಿಲ್ಲ. ಹಾಗಾದರೆ ಹೇಗೆ ಈ ನಾಯಿ ಮರದ ಬಡ್ಡೆ ಮಾತ್ರ ಸಾಗಿಸುವ ಈ ದಾರಿ ಹಿಡಿದು ಈ ಕಾಡಿನ ಒಳಗೆ ಹೇಗೆ ಬಂತು,? ಇಲ್ಲಿಂದ ಹಾದು ಹೋಗುವಾಗ ಯಾರಾದರೂ ಬಿಟ್ಟುಹೋಗಿದ್ದಿರಬಹುದು, ಆದರೆ ಇಲ್ಲಿ ರಸ್ತೆಯುದ್ದಕ್ಕೂ ವಾಹನ ಚಲಾಯಿಸಲು ಯಾವ ರೀತಿಯಿಂದಲೂ ಯಾವ ಶ್ರೀಮಂತನಿಗೂ ಸಾಧ್ಯವಿರಲಿಲ್ಲ.
ಸ್ವಲ್ಪ ವಿಶ್ರಾಂತಿ ಪಡೆಯಲು ನಾನು ಸ್ಟಂಪ್ ಮೇಲೆ ಕುಳಿತು, ನನ್ನ ಜೊತೆಗಾರನನ್ನು ಹಾಗೇ ಪರೀಕ್ಷಿಸತೊಡಗಿದೆ. ಅದು ಕೂಡಾ ಕೂತಿತು, ತಲೆ ಮೇಲಕ್ಕೆತ್ತಿ ನನ್ನತ್ತಲೇ ಬಹಳ ಆಪ್ತವಾದ ನೋಟನೆಟ್ಟು ಕೂತಿತು. ಕಣ್ಣು ಮಿಟುಕಿಸದೇ ನನ್ನನ್ನೆ ದಿಟ್ಟಿಸಿತು. ಇದು ಜಡತ್ವದ ಪ್ರಭಾವವೋ, ಕಾಡಿನ ನೆರಳು ಮತ್ತು ಸದ್ದಿನ ಪ್ರಭಾವವೋ ಅಥವಾ ನನ್ನ ಬಳಲಿಕೆಯ ಪ್ರಭಾವವೋ ಏನೆಂದು ನನಗೆ ತಿಳಿದಿಲ್ಲ, ಆದರೆ ಒಮ್ಮೆಲೆ ನನ್ನ ಆ ನಾಯಿಯ ಸಹಜ ಕಣ್ಣುಗಳ ನಿರಂತರ ನೋಟದಿಂದ ಉದ್ವೇಗಗೊಂಡಂತೆ ಭಾಸವಾಯಿತು.ನನಗೆ ಫೌಸ್ಟ ಮತ್ತು ಆತನ ಬುಲ್ ಡಾಗ್ ನೆನಪಾದರು. ಸಾಮಾನ್ಯವಾಗಿ ಜನರು ಕೆಲವೊಮ್ಮೆ ಆಯಾಸಗೊಂಡಾಗ ಒಂದು ರೀತಿಯ ಭ್ರಮೆಗಳ ಹೊಂದಿರುತ್ತಾರೆ. ಇಷ್ಟು ಸಾಕಾಯ್ತು ನನಗೆ ಎದ್ದು ಲಗುಬಗೆಯಿಂದ, ಅಷ್ಟೇ ಗಡಿಬಿಡಿಯಲ್ಲಿ ನಡೆಯತೊಡಗಿದೆ. ನಾಯಿಯು ನನ್ನ ಹಿಂಬಾಲಿಸಿತು.
‘ಹೋಗಾಚೆ!’ ನಾನು ಕೂಗಿದೆ.
ನನ್ನ ಧ್ವನಿ ಅದಕ್ಕೆ ಇಷ್ಟವಾಯಿತೆಂದು ಕಾಣುತ್ತದೆ. ಒಮ್ಮೆ ಜೋರಾಗಿ ನೆಗೆಯಿತು ಹಾಗೂ ನನ್ನ ಮುಂದೆಯೇ ಓಡಿತು.
“ದೂರ ಹೋಗು’” ನಾನು ಇನ್ನೊಮ್ಮೆ ಚೀರಿದೆ.
ಈಗ ನಾಯಿ ಸುತ್ತಲೂ ನೋಡಿತು. ನನ್ನ ಆಪ್ತವಾಗಿ ದಿಟ್ಟಿಸಿತು. ಬಾಲವನ್ನೊಮ್ಮೆ ಮಜದಿಂದ ಅಲ್ಲಾಡಿಸಿತು. ನನ್ನ ಬೆದರಿಕೆಯ ದನಿ ಅದಕ್ಕೆ ಖುಷಿಕೊಟ್ಟಿರಬೇಕು. ನನಗೂ ಅದಕ್ಕೆ ತಟ್ಟಿ ಮಾತಾಡಿಸಬೇಕೆನ್ನಿತು. ಆದರೆ ಪೌಸ್ಟ್ನ ನಾಯಿಯನ್ನು ತಲೆಯೊಳಗಿಂದ ತೆಗೆದುಹಾಕಲು ನನ್ನಿಂದಾಗಿರಲಿಲ್ಲ. ಭೀತಿ ಹೆಚ್ಚುತ್ತಲೇ ಇತ್ತು. ಕತ್ತಲು ಆವರಿಸುತ್ತಿತ್ತು…. ಅದು ನನ್ನ ಗೊಂದಲಗಳಿಗೂ ಪೂರ್ಣವಿರಾಮ ನೀಡಿತು. ಪ್ರತಿಸಲವೂ ನಾಯಿ ನನ್ನೆಡೆಗೆ ಓಡಿ ಬಂದಾಗ, ತನ್ನ ಬಾಲದಿಂದ ಹೊಡೆದಾಗ ನಾನು ಹೇಡಿಯಂತೆ ಕಣ್ಣುಗಳನ್ನು ಮುಚ್ಚಿದೆ.ಗಂಟೆ ಗೋಪುರದ ಬೆಳಕು ಮತ್ತು ರೈಲ್ವೆ ಬೋಗಿ ಸಂದರ್ಭದಲ್ಲಿ ಆದಂತೆಯೇ ಈಗಲೂ ಆಯಿತು.ಅದನ್ನು ತಡೆಯಲಾಗಲಿಲ್ಲ. ಅಲ್ಲಿಂದ ಜಾಗ ಕಿತ್ತೆ.
ಮನೆಗೆ ಬರುತ್ತಲೇ ನನ್ನ ಭೇಟಿಯಾಗಲು ಬಂದವನೊಬ್ಬ ನನ್ನದೇ ದಾರಿ ಕಾಯುತ್ತಿದ್ದ. ಆತ ನನ್ನ ಹಳೆಯ ಸ್ನೇಹಿತ. ನನ್ನನ್ನು ಸ್ವಾಗತಿಸಿದ ನಂತರ ಆತ ದೂರು ಹೇಳತೊಡಗಿದ. ನನ್ನನ್ನು ಕಾಣಲು ಬರುವಾಗ ತನ್ನ ನಾಯಿ ಕಾಡಿನ ನಡುವೆ ತಪ್ಪಿಸಿಕೊಂಡಿತೆAದು ,ಅದ್ಭುತ ಬೆಲೆಬಾಳುವ ನಾಯಿ ಕಳೆದುಹೋಯಿತೆಂದು ಬೇಸರಿಸತೊಡಗಿದ.
ಇಂಗ್ಲೀಷ ಮೂಲ: ಆಂಟನಿ ಚೆಕೊವ್
ಕನ್ನಡಕ್ಕೆ: ನಾಗರೇಖಾ ಗಾಂವಕರ
ಹೆಚ್ಚಿನ ಬರಹಗಳಿಗಾಗಿ
ಹೊನ್ನಾವರದಲ್ಲೀಗ ಮೆಲುನಗುವ ಶ್ರೀ ಚನ್ನಕೇಶವಾ
ಅರ್ಧ ವರ್ಷದಲ್ಲಿ ಶಾಲೆಗೆ ಸೇರಿದ ಹುಡುಗ
ಕೆ. ಸತ್ಯನಾರಾಯಣರ ನಾಲ್ಕು ಸಣ್ಣ ಕಥೆಗಳು