- ಇಂದು ಇಲ್ಲದಿದ್ದರೂ ಇಂದು… - ಅಕ್ಟೋಬರ್ 22, 2022
- ಗೋಧ್ರಾ ಇನ್ನೆಷ್ಟು ದೂರ? - ಮೇ 26, 2022
- ಒಂದು ಯುದ್ಧ, ಒಬ್ಬ ಖೈದಿ ಮತ್ತು ಆಕೆ - ಮಾರ್ಚ್ 4, 2022
39 ವರ್ಷಗಳ ಹಿಂದಿನ ಕಥೆ
ಸನ್ನಿವೇಶ
ಸಂಜೆಯ ಸಮಯ. ನದೀತೀರ. ಅಲೆಗಳು ಕುಲುಕಿ ಬಳುಕಿ ಒನಪು ವೈಯಾರದಿಂದ ಉರುಳಾಡುತ್ತಾ ಸಾಗಿವೆ. ಸಂಜೆಯ ಸೂರ್ಯನ ಹೊಂಗಿರಣಗಳು ಅಲೆಗಳ ಮೇಲೆ ಚಿನ್ನಾಟವಾಡುತ್ತಿವೆ. ಗಾಳಿ ಬೀಸಲೋ ಬೇಡವೋ ಎಂಬಂತೆ ಮೆಲ್ಲಮೆಲ್ಲನೆ ಸುಳಿದಾಡುತ್ತಿದೆ. ನದಿಯಾಚೆ ಪುಟ್ಟದೊಂದು ಹಳ್ಳಿಯ ತುಣುಕುಗಳು ನೋಟಕ್ಕೆ ನಿಲುಕುತ್ತಿವೆ. ಬೆನ್ನ ಹಿಂದೆ ಒಂದೆರಡು ಫರ್ಲಾಂಗ್ ದೂರದಲ್ಲಿ ಹಳ್ಳಿಯೂ ಅಲ್ಲದ ಪಟ್ಟಣವೂ ಅಲ್ಲದಂತಹ ಊರೊಂದು ಹರಡಿಕೊಂಡಿದೆ. ಅದರ ಗರ್ಭದಿಂದ ಹೊರಟ ವಾಹನಗಳ ಕಿರುಚಾಟ, ಜನರ ಕೀರಲು ಕಲರವ ಇಲ್ಲಿಗೂ ಕೇಳಿಬರುತ್ತಿದೆ. ನದೀತೀರದಲ್ಲಿ ಬೆಸ್ತರ ಕಲಕಲ ದನಿ. ನದಿಯಲ್ಲಿ ಹಲವು ದೋಣಿಗಳು ತೇಲಾಡುತ್ತಿವೆ.
ಅಂಬಿಗನೊಬ್ಬ ತನ್ನ ಪುಟ್ಟ ದೋಣಿಯನ್ನು ವೇಗವಾಗಿ ನಡೆಸಿಕೊಂಡು ಇತ್ತಲೇ ಬರುತ್ತಿದ್ದಾನೆ. ಹರಯದ ಹೈದ. ದಷ್ಟಪುಷ್ಟ ಮೈ, ಬಲಿಷ್ಟ ತೋಳುಗಳು; ದುಂಡುಮೊಗದ, ಚಿಗುರುಮೀಸೆಯ ಚೆಲುವ. ನಡುವಿನಲ್ಲಿ ತುಂಡು ಪಂಚೆ, ಕೊರಳಿನಲ್ಲಿ ಕಳೆದ ತಿಂಗಳ ಜಾತ್ರೆಯಲ್ಲಿ ಕೊಂಡ ಕರಿದಾರ, ಎಡತೋಳಿನಲ್ಲಿ ಮಾಸಿದ ಅರಿಶಿಣ ದಾರದಲ್ಲಿ ಕಟ್ಟಿದ ತಾಮ್ರದ ತಾಯಿತ ಬಿಟ್ಟರೆ ಮೈಮೇಲೆ ಬೇರೇನೂ ಇಲ್ಲ. ಮೊಗದಲ್ಲಿ ಮುಗುಳುನಗೆ ತುಂಬಿಕೊಂಡಿದ್ದಾನೆ. ಯಾವುದೋ ಹಾಡನ್ನು ಗುನುಗುನಿಸುತ್ತಿರುವಂತೆಯೂ ಇದೆ. ಹದಿನೈದು-ಹದಿನಾರರ, ಚೆಲುವು ಮೊಗದ ಬಾಲೆಯೊಬ್ಬಳು ದಡದಲ್ಲಿ ನಿಂತಿದ್ದಾಳೆ. ಅವಳ ದೃಷ್ಟಿ ವೇಗವಾಗಿ ತನ್ನೆಡೆಗೆ ಸಾಗಿಬರುತ್ತಿರುವ ದೋಣಿಯತ್ತಲೇ ಇದೆ. ದೋಣಿ ತನ್ನನ್ನು ಸಮೀಪಿಸುವುದನ್ನು ಅವಳು ಕಾತರದಿಂದ ಕಾಯುತ್ತಿರುವಂತಿದೆ.
ಸಂಭಾಷಣೆ
“ಇಂದು ನೀನು ತಡವಾಗಿ ಬಂದೆಯಲ್ಲ?”
“ಇಲ್ಲವಲ್ಲ! ಶಾಲೆ ಮುಗಿದದ್ದೇ ಈಗ. ತಕ್ಷಣ ಇತ್ತ ಬಂದೆ.”
“ನೀನು ತಡವಾಗಿ ಬಂದೆ ಅಂತ ನನಗನಿಸ್ತಿದೆ.”
“ಯಾಕೆ ಹಾಗನಿಸ್ತಿದೆ?”
“ಹ್ಞ… ಹ್ಞಂ… ಬಹುಶಃ ನಿಂದೇ ನೆನಪಿನಿಂದ, ನಿನಗಾಗೇ ಕಾಯ್ತಾ ಇದ್ದದ್ರಿಂದ ಹಾಗನಿಸ್ತಾ ಇರಬೋದು.”
“ಬಲು ಜೋಕುಗಾರ ನೀನು! ಬೇಗ ದೋಣಿ ನಡೆಸು. ನಾನು ಬೇಗನೆ ಮನೆಗೆ ಹೋಗ್ವೇಕು.”
“ಅದೇನು ಅಂಥಾ ಅವಸರ?”
“ಏನೂ ಇಲ್ಲಪ್ಪ. ಸುಮ್ಮನೆ ಅಷ್ಟೇ. ಪರೀಕ್ಷೆ ಹತ್ರ ಬಂತಲ್ಲ. ಬೇಗ ಮನೆಗೆ ಹೋಗಿ ಪಾಠಗಳನ್ನ ಓದ್ಕೋಬಾರದಾ ನಾನು? ಹೋಂ ವರ್ಕ್ ಬೇರೆ ಇದೆ. ಅದೆಲ್ಲ ಬೇಗ ಮುಗಿಸಿ ಅಮ್ಮಂಗೆ ಅಡಿಗೆಗೆ ಸಹಾಯ ಮಾಡ್ಬೇಕಲ್ಲ.”
“ಓ, ಹಾಗೋ? ಆದ್ರೆ ನಿನ್ನನ್ನ ಬೇಗ ಆಚೆ ದಡ ತಲುಪಿಸೋದು ನಂಗಿಷ್ಟ ಇಲ್ವಲ್ಲ! ನಿನ್ ಜೊತೆ ಹೆಚ್ಚು ಹೊತ್ತು ಇರ್ಬೇಕೂ ಅಂತ ಆಸೆ ನಂಗೆ.”
“ಥೂ, ಸಾಕು ಮಾಡು. ನಾಚಿಕೆಯಿಲ್ಲದೋನು! ಆಮೇಲೆ ನೋಡು, ನಿನ್ ದೋಣಿಗೆ ಬರೋದನ್ನೇ ಬಿಟ್ಬಿಡ್ತೀನಿ ನಾನು. ಹಿಹ್ಹಿಹ್ಹೀ.”
“ಅಯ್ಯೋ! ಹಾಗೆ ಮಾಡಬೇಡವೇ ಹುಡುಗೀ. ನಾನು ದೋಣಿ ತರೋದೇ ನಿನಗಾಗಿ.”
“ಅದೇನಪ್ಪ ಅಂಥಾ ಅಕ್ಕರೆ ನನ್ನ ಮೇಲೆ?”
“ನೀನು ತುಂಬ ಚಂದ ಇದೀಯಯಲ್ಲ ಅದಕ್ಕೆ.”
“ಓಹೋಹೋ! ಹೋಯ್… ಹಹ್ಹಹ್ಹಾ.”
“ನೋಡು, ನಕ್ಕಾಗಲೂ ನೀನು ಅದೆಷ್ಟು ಮುದ್ದಾಗಿ ಕಾಣ್ತೀಯ!”
“ಬರೀ ಮಾತ್ನಲ್ಲೇ ಕಾಲ ಕಳೀತಿದೀಯಲ್ಲ? ನೋಡು, ನಾವಿನ್ನೂ ಕಾಲುಭಾಗದಷ್ಟು ದೂರಾನೂ ಕ್ರಮಿಸಿಲ್ಲ! ಆಚೆದಡ ಎಷ್ಟು ದೂರ ಇದೆ, ಅಬ್ಬ!”
“ಅದಿರಲಿ, ಇಷ್ಟು ದಿನವಾಯ್ತು ನೀನು ನನ್ನ ದೋಣಿಗೆ ಬರೋಕೆ ಶುರು ಮಾಡಿ, ಒಂದ್ಸಲ ಆದ್ರೂ ನಿನ್ ಹೆಸರು ಹೇಳಿದೆಯಾ ನಂಗೆ?”
“ಅದೇನಪ್ಲ, ನನ್ನ ಹೆಸರು ತಿಳಿಯೋಕೆ ಅಷ್ಟು ಆಸೆಯಾ ನಿಂಗೆ?”
“ಇಲ್ಲವೇ ಮತ್ತೆ?”
“ಯಾಕೆ?”
“ನೀನು ಭಾಳಾ ಸುಂದರವಾಗಿದೀಯಲ್ಲ, ನಿನ್ ಹೆಸ್ರೂ ಅಷ್ಟೇ ಸುಂದರವಾಗಿರ್ಬೇಕು. ಅದಕ್ಕೇ ಅದನ್ನ ತಿಳಿಯೋ ಆಸೆ ನಂಗೆ.”
“ಆದ್ರೆ… ಆದ್ರೆ… ನನ್ ಹೆಸ್ರು ನಂಗೇ ಗೊತ್ತಿಲ್ವಲ್ಲ.”
“ಅಂ! ನೋಡಿದ್ಯಾ, ಬಲು ಚಾಲಾಕಿ ಹೆಣ್ಣು ನೀನು! ಹೇಳು ನಿನ್ ಹೆಸ್ರು.”
“ಹಹ್ಹಹ್ಲಾ! ಹೇಳ್ಲೇಬೇಕಾ?”
“ಬೇಡವೇ ಮತ್ತೆ?”
“ಪೂರ್ಣಿಮಾ ಅಂತ.”
“ಪೂರ್ಣಿಮಾ! ಓಹ್, ಎಂಥಾ ಚಂದದ ಹೆಸರು!”
“ಅದು ನಮ್ಮಮ್ಮನ ಹೆಸರು. ನಾ ಹುಟ್ಟಿದ ತಕ್ಷಣ ನಮ್ಮಮ್ಮ ತೀರ್ಕೊಂಡ್ಳಂತೆ. ಅವಳ ಹೆಸರನ್ನೇ ನಂಗಿಟ್ಬಿಟ್ರು, ನೆನಪಿಗೆ ಅಂತ.”
“ಓ!… ಪೂರ್ಣಿಮಾ…! ಪೂರ್ಣಿಮಾ…! ಪೂರ್ಣಿಮಾ…”
“ಅರೆ, ನನ್ ಹೆಸರು ಹೇಳ್ಕೊಂಡು, ಕಣ್ಣುಮುಚ್ಚಿ ಕೂತೇಬಿಟ್ಟೆಯಲ್ಲ! ದೋಣಿ ನೋಡು, ಎಷ್ಟು ನಿಧಾನವಾಗಿ ಹೋಗ್ತಿದೆ!”
“ಹ್ಞುಹ್… ನಿಧಾನವಾಗೇ ಹೋಗ್ಲಿ ಬಿಡು.”
“ಸರಿಯಪ್ಪ. ನೀನೊಬ್ಬ ವಿಚಿತ್ರ ಮನುಷ್ಯ. ಹ್ಞಾ, ಒಂದು ವಿಷಯ. ನಾಳೆ ನಮ್ ಶಾಲೇಲಿ ಸ್ಕೂಲ್ ಡೇ ಇದೆ. ಮನರಂಜನಾ ಕಾರ್ಯಕ್ರಮಗಳಿವೆ. ಅದರಲ್ಲಿ ನನ್ ಹಾಡುಗಾರಿಕೆನೂ ಇದೆ.”
“ಓ, ಹೌದಾ! ಹಾಗಾದ್ರೆ ನಾಳೆ ನಿನ್ ಹಾಡು ಕೇಳೋಕೆ ನಾನೂ ಬರಲಾ?”
“ಓ, ಬೇಡಾ! ನಂಗೆ ನಾಚ್ಕೆ ಆಗುತ್ತೆ.”
“ನಾಚ್ಕೆನಾ! ಯಾಕೆ?”
“ಓ, ಆಮೇಲೆ ನೀನು ನನ್ ಹಾಡು ಕೇಳಿ ನಕ್ಬಿಡ್ತೀ.”
“ಇಲ್ಲ, ಖಂಡಿತವಾಗೂ ನಗಲ್ಲ. ಸುಮ್ನೆ ಕೇಳ್ಕೊಂಡು ಬಂದ್ಬಿಡ್ಟೀನಿ.”
“ಬೇಡಪ್ಪಾ ಬೇಡ.”
“ಸರಿ, ನಾನು ಶಾಲೆಗೆ ಬರಬಾರ್ದು ಅಂದ್ರೆ ಈಗ ಇಲ್ಲೇ ಒಂದ್ ಹಾಡು ಹೇಳು ಮತ್ತೆ.”
“ಉಹ್ಞುಂ, ಬೇಡಾ.”
“ಯಾಕೆ? ನನ್ ಆಸೇನ ಈಡೇರಿಸಲಾರೆಯಾ?”
“ಅದ್ಯಾಕೆ ಹಾಗೆ ಅಳೋವ್ನ ಥರಾ ಕೇಳ್ತಿದೀಯ?”
“ಮತ್ತೆ, ನೀನು ಹಾಡಲ್ಲ ಅಂದ್ರೆ ನಂಗೆ ಅಳು ಬರದೇ ಇರುತ್ತಾ?”
“ಹ್ಞಹ್! ಹಾಡಲೇ ಬೇಕಾ?”
“ಹ್ಞೂಂ, ಬೇಕು ಬೇಕೂ.”
“……….”
“ಯಾಕೆ ಮೌನವಾಗ್ಬಿಟ್ಟೆ! ನಿಂಗೆ ಇಷ್ಟ ಇಲ್ಲ ಅಂದ್ರೆ… ಬೇಡ ಬಿಡು.”
“ಎಂಥ ಅವಸರ ಮಾಡ್ತೀಯ ನೀನು! ಸಮಯ ಸಂದರ್ಭ, ಪರಿಸರಕ್ಕೆ ಹೊಂದೋ ಹಾಡೊಂದನ್ನಜ್ಞಾಪಿಸಿಕೊಳ್ಳಬಾರದಾ ನಾನು?”
“ಓಹೋ, ಹಾಗಾ! ನನಗೆ ಗೊತ್ತಿರ್ಲಿಲ್ಲ.”
“ಸರಿ, ಈಗ ಸ್ವಲ್ಪ ಹೊತ್ತು ತೆಪ್ಪಗಿರ್ತೀಯ. ಮಧ್ಯೆ ಮಾತಾಡ್ಬೇಡ.”
“……….”
“ಹ್ಞೂ, ಹಾಡ್ಲಾ?”
“ಹ್ಞಾ, ಹಾಡು ಹಾಡೂ.”
“ಸರಿ, ಕೇಳು
ದೋಣಿ ಸಾಗಲಿ ಮುಂದೆ ಹೋಗಲಿ
ದೂರ ತೀರವ ಸೇರಲಿ.
ಬೀಸುಗಾಳಿಗೆ ಬೀಳುತೇಳುತ
ತೆರೆಯ ಮೇಲ್ಗಡೆ ಸಾಗಲಿ…
ಅಂಬಿಗನ ಸ್ವಗತ
ಪೂರ್ಣಿಮಾ! ಓಹ್, ಎಂಥಾ ಸುಂದರ ಹೆಸರು! ಅವಳ ಚೆಲುವು ಮೊಗದಷ್ಟೇ ಸುಂದರ. ಅವಳೆಷ್ಟು ಚಂದ ಮಾತಾಡುತ್ತಾಳೆ! ಎಷ್ಟು ಸೊಗಸಾಗಿ ಹಾಡುತ್ತಾಳೆ! ಅವಳಿಗೆ ತಾಯಿ ಇಲ್ಲವಂತೆ, ಪಾಪ. ಮನೆಯಲ್ಲಿರುವುದು ಮಲತಾಯಿಯಂತೆ.
ಮೊದಲ ದಿನ ನನ್ನ ದೋಣಿಗೆ ಬಂದಾಗಲೇ ಅವಳು ನನಗೆ ಇಷ್ಟವಾದಳು. ನಾನವಳನ್ನು ಮನದಲ್ಲೇ ಪ್ರೇಮಿಸಿದೆ, ಆರಾಧಿಸಿದೆ. ಅವಳ ಜತೆ ಮಾತಾಡುತ್ತಿದ್ದರೆ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ. ಯಾವಾಗಲೂ ಎಷ್ಟೊಂದು ಸಂತೋಷವಾಗಿರುತ್ತಾಳೆ! ಕುಲುಕುಲು ನಗುತ್ತಾಳೆ. ನಕ್ಕಾಗ ಅವಳು ಎಷ್ಟು ಚಂದ ಕಾಣುತ್ತಾಳೆ! ಹೂಗಳು ಬಿರಿದಂತಾಗುತ್ತದೆ ಆಗ. ದಿನವಿಡೀ ಹುಟ್ಟು ಹಾಕಿ ಮೈಕೈ ನೋಯುತ್ತಿದ್ದರೂ ಅವಳನ್ನು ಕಂಡಾಗ ಆಯಾಸವೆಲ್ಲಾ ಅದೆಲ್ಲಿ ಓಡಿಹೋಗುತ್ತದೆಯೋ. ಮನಸ್ಸು ಗರಿಗೆದರಿದ ಹಕ್ಕಿಯಾಗುತ್ತದೆ. ಮೈಮನಗಳಲ್ಲಿ ಉತ್ಸಾಹ ಪುಟಿಯಲಾರಂಭಿಸುತ್ತದೆ. ಜಲ್ಲೆ ಹಿಡಿದ ಕೈಗಳಿಗೆ ಭೀಮಬಲ ಬರುತ್ತದೆ. ಒಂದು ದಿನ ಅವಳನ್ನು ನೋಡದೇ ಇದ್ದರೂ ಮನಸ್ಸು ತಡೆಯುವುದಿಲ್ಲ. ಬದುಕುಪೂರ್ತಿ ಅವಳು ನನ್ನ ಜೊತೆ ಇರಬೇಕು. ನನ್ನ ದೋಣಿಯಲ್ಲೇ ಕುಳಿತಿರಬೇಕು, ಕುಳಿತು ಹಾಡುತ್ತಿರಬೇಕು. ತಂದೆ ತಾಯಿ, ಒಡಹುಟ್ಟಿದವರು ಯಾರೂ ಇಲ್ಲದ ನನ್ನ ಒಂಟಿಬಾಳಿಗೆ ಅವಳು ಸಂಗಾತಿಯಾಗಬಲ್ಲಳೇ? ಈ ಮನೆಗೆ ದೀಪವಾಗಬಲ್ಲಳೇ? ಓಹ್, ನನ್ನದೆಂತಹ ಹುಚ್ಚು ಬಯಕೆ! ಎಲ್ಲೂ ಹೋಗಿ ನಾನು ಅವಳನ್ನು ಬಯಸುವುದೇ? ಅವಳು ಉನ್ನತ ಕುಲದವಳು, ಹಳ್ಳಿಯ ಶ್ರೀಮಂತನ ಮಗಳು. ನಾನೋ ಯಾರೂ ದಿಕ್ಕಿಲ್ಲದ ಅನಾಥ ಅಂಬಿಗ. ನಾನವಳನ್ನು ಬಯಸಿದರೆ ಜನರು ನಗುವುದಿಲ್ಲವೇ? ತಿರುಕನ ಸನಸಾಗುವುದಿಲ್ಲವೇ ನನ್ನದು?
ಆದರೆ ಅವಳ ನೆನಪನ್ನು ದೂರ ಸರಿಸುವುದು ನನ್ನಿಂದಾಗುತ್ತಲೇ ಇಲ್ಲವಲ್ಲ? ಸದಾ ಅವಳ ನೆನಪಿನಲ್ಲೇ ಕಾಲ ಕಳೆಯುವಂತಾಗಿದೆಯಲ್ಲ? ಇಂದು ಬಹಳ ಆಯಾಸವಾಗಿಹೋಗಿದೆ. ಮೈಕೈಗಳು ವಿಪರೀತ ನೋಯುತ್ತಿವೆ. ತೋಳುಗಳಲ್ಲಿ ಗುದಿಗೆಯಿಂದ ಬಡಿಸಿಕೊಂಡಂಥಾ ನೋವು. ಹ್ಞಾ ಅಮ್ಮಾ… ಈಗ ಪೂರ್ಣಿಮಾ ಹತ್ತಿದರಲ್ಲಿದ್ದರೆ! ಮೈಕೈಗಳನ್ನು ಮೃದುವಾಗಿ ಒತ್ತುತ್ತಿದ್ದರೆ! ಆ ಭಾಗ್ಯ ನನಗಿದೆಯೇ? ಆ ಪುಣ್ಯವನ್ನು ನಾನು ತರಲಿಲ್ಲವೇ…
ಪೂರ್ಣಿಮಾ, ನನ್ನ ಪೂರ್ಣಿಮಾ! ನನ್ನ ಬಾಳಸಂಗಾತಿಯಗಲಾರೆಯಾ? ನನ್ನ ಮನೆಯ ಬೆಳಕು ನೀನಾಗಲಾರೆಯಾ?
ಸಂಭಾಷಣೆ
“ನಿನ್ನೆ ನಾನು ನಿನ್ನ ಹಾಡು ಕೇಳೋಕೆ ಬಂದಿದ್ದೆ.”
“ಓಹ್, ಹೌದಾ! ಕಳ್ಳ ನೀನು! ಎಲ್ಲಿದ್ದೆ? ನಾನು ನೋಡ್ಲೇ ಇಲ್ವಲ್ಲ?”
“ಹಿಂದ್ಗಡೆ ಮೂಲೇಲಿ ನಿಂತಿದ್ದೆ. ನಿನ್ನ ಹಾಡು ಮುಗಿದ ತಕ್ಷಣ ಹೊರಟ್ಬಿಟ್ಟೆ.”
“ಹೇಗಿತ್ತು ನನ್ ಹಾಡು?”
“ಓಹ್, ಅದ್ಭುತ! ದಿವಿಯಿಂದ ಬುವಿಗಿಳಿದ ಗಂಧರ್ವಕನ್ಯೆಯೊಬ್ಬಳು ಹಾಡುತ್ತಿದ್ದಂತಿತ್ತು.”
“ತೆಗೆದೆ ನಿನ್ನ ವರಸೆಯ! ಇದೆಲ್ಲಿ ಕಲಿತೆ ಈ ಭಾಷೇನ? ಸಾಕುಮಾಡು. ತಗೋ, ತಿನ್ನು ಇದನ್ನ. ನಾಟಕದ ಸಂಭಾಷಣೆ ಬಿಟ್ಟು ನಿನ್ ಬಾಯಿಗೆ ಬೇರೆ ಕೆಲಸ ಕೊಡು.”
“ಹಿ ಹ್ಸೀ. ಅದೇನು?”
“ಚಿಕ್ಕಮ್ಮ ಕೊಟ್ಟಿದ್ದ ತಿಂಡಿ. ನಿಂಗೆ ಅಂತ ಸ್ವಲ್ಪ ಉಳಿಸ್ಕೊಂಡು ತಂದಿದೀನಿ. ನಾ ಕೊಟ್ಟದ್ದನ್ನ ತಿನ್ನೋಕೆ ಬೇಸರ ಇಲ್ಲ ತಾನೆ?”
“ಅಯ್ಯೋ, ಹಾಗ್ಯಾಕೆ ಹೇಳ್ತೀ? ಬದುಕುಪೂರ್ತಿ ನಿನ್ ಕೈನ ತಿಂಡಿನೇ ತಿನ್ನೋ ಆಸೆ ನಂಗೆ.”
“ಅಯ್! ಮತ್ತೆ ಪುರಾಣ ಶುರು ಮಾಡಿದೆ! ಹೇಗಿದೆ ತಿಂಡಿ?”
“ದಿವಿನಾಗಿದೆ, ನಿನ್ನಷ್ಟೇ ಚೆನಾಗಿದೆ.”
“ಥೂ, ನಿನ್ನ! ತೆಪ್ಪಗೆ ದೋಣಿ ನಡೆಸು.”
“ಹ್ಞೂಂ…”
“ಯಾಕೆ ಮೌನವಾಗ್ಬಿಟ್ಟೆ? ಇಷ್ಟು ದಿನಾನೂ ಗಲಗಲಾ ಅಂತ ಬಿಡುವೇ ಇಲ್ದಾಗೆ ಮಾತಾಡ್ತಿದ್ದೆ, ಇಂದೇನು ಬಂತು? ಏನು ಅಂಥಾ ದೊಡ್ಡ ಯೋಚನೆ?”
“ಓಹ್, ನೂರಾರು ಯೋಚನೆಗಳು.”
“ಅದೇನಪ್ಪ ಅದೂ? ನಂಗೆ ಹೇಳಬಾರದಾ?”
“ಓಹ್, ಅವು ಎಲ್ರಿಗೂ ಹೇಳೋವಂಥಾ ವಿಷಯಗಳಲ್ಲ ಬಿಡು. ನನ್ ಹೆಂಡ್ತೀ ಆಗೋವ್ಳಿಗೆ ಮಾತ್ರ ಹೇಳೋವಂಥವು.”
“ಓ, ಹಾಗಾ! ಹಾಗಿದ್ರೆ ನೀವೇ ಇಟ್ಕೋ. ನಂಗೇನೂ ಹೇಳ್ಬೇಡ.”
“……….”
“ಮತ್ತೇನು ಯೋಚನೆ ಶುರು ಮಾಡ್ಕೊಂಡೆ?”
“ಏನೂ ಇಲ್ಲ, ನೀ ಕೊಟ್ಟ ತಿಂಡಿ ಬಗ್ಗೇ ಯೋಚಿಸ್ತಿದ್ದೆ. ಬದುಕುಪೂರ್ತಿ ನಿನ್ ಕೈನ ತಿಂಡಿನೇ ತಿನ್ನೋ ಪುಣ್ಯ ನನಗಿಲ್ವಾ ಅಂತ ಯೋಚಿಸ್ತಿದ್ದೆ.”
“ಓ, ನಿನ್ನದು ಅತಿಯಾಯ್ತು! ಅಂಥಾ ಆಸೇನೆಲ್ಲ ಇಟ್ಕೋಬೇಡಾ.”
“ಯಾ… ಯಾಕೆ?”
“ಯಾಕೆ ಅಂದ್ರೆ… ಪರೀಕ್ಷೆ ಮುಗಿದ ಮೇಲೆ ನಾನು ಶಾಲೆಗೆ ಬರಲ್ಲ. ಇನ್ನು ಎರಡು ವಾರ ಅಷ್ಟೇ”
“ಅಂ! ಯಾ… ಯಾ… ಯಾಕೆ?”
“ನಂಗೆ ಮದ್ವೆ ಮಾಡ್ತಾರಂತೆ ಅಪ್ಪ, ಮೈಸೂರ್‌ಲಿ. ನಿಂಗೊತ್ತಾ ಮೈಸೂರು? ಚಾಮುಂದಿ ಬೆಟ್ಟ, ಝೂ, ಅರಮನೆ ಎಲ್ಲಾ ಇದೆಯಂತೆ ಅಲ್ಲಿ, ಗೊತ್ತಾ!”.
“ನಿ… ನಿ… ನಿಜವಾಗಿ!”
“ನಿಜವಾಗ್ಲೂ. ನಿನ್ ಜತೆ ತಮಾಷೆ ಮಾಡ್ತೀನಾ ನಾನು?”
“………”
“ಅರೆ! ನೀ ಯಾಕೆ ಇಷ್ಟು ಕಂಗೆಟ್ಟೋದೆ? ಹುಟ್ಟು ಹಾಕೋದನ್ನೇ ನಿಲ್ಲಿಸ್ಬಿಟ್ಟೆಯಲ್ಲ? ನನ್ನನ್ಯಾಕೆ ಹಂಗೆ ನೋಡ್ತಿದೀ?”
“………”
“ಅರೆ, ಇದೇನಿದು! ನೀನು ನನ್ ಕೈಯನ್ಯಾಕೆ ಹಿಡ್ಕೊಂಡ್‍ಬಿಟ್ಟೆ! ಏನಾಯ್ತು ನಿಂಗೆ?”
ಅಂಬಿಗನ ಸ್ವಗತ
ಪೂರ್ಣಿಮಾಳಿಗೆ ಮದುವೆ! ಎಂಥಾ ಸುದ್ದಿ! ಎಂಥ ಆಘಾತವಾಯಿತು ನನಗೆ! ಅಯ್ಯೋ, ನನ್ನೆದೆಗೆ ಶೂಲ ನೆಟ್ಟಂತಾಗುತ್ತಿದೆಯಲ್ಲ? ಅಯ್ಯೋ, ಸಿಡಿಲ ಕುಡಿ ನನ್ನದೆಗೆ ಬಡಿದಂತಾಯಿತಲ್ಲ! ನಾನು ಮನಸ್ಸಿನಲ್ಲೇ ಎಂಥ ಕನಸು ಕಂಡಿದ್ದೆ! ಬೆಟ್ಟದಷ್ಟು ಆಸೆಪಟ್ಟಿದ್ದೆ! ಪೂರ್ಣಿಮಾ ನನ್ನ ಸತಿಯಾದಂತೆ, ನನ್ನ ಮನೆಯ ಜ್ಯೋತಿಯಾದಂತೆ, ನಾನು ಹುಟ್ಟು ಹಾಕುತ್ತಿರುವಂತೆ… ಅವಳು ಹಾಡುತ್ತಿರುವಂತೆ… ಈಗ ಅವಳಿಗೆ ಬೇರೊಬ್ಬನೊಡನೆ ಮದುವೆ! ಇದನ್ನು ಹೇಗೆ ಸಹಿಸಲಿ? ಹೃದಯ ಬಿರಿಯುತ್ತಿದೆ. ಅಯ್ಯೋ ಈಗೇನು ಮಾಡಲಿ? ಹೌದು, ನನ್ನದೆಗೆ ಶೂಲದಂತೆ ನೆಟ್ಟಿರುವ ಈ ಸುದ್ದಿಯನ್ನು ತಾಳಿಕೊಳ್ಳಲೇ? ಪೂರ್ಣಿಮಾಳನ್ನು ಹರಸಿ ಕಳಿಸಲೇ? ಅರಿಶಿಣಕುಂಕುಮಶೋಭಿತೆಯಾಗಿ ಬಾಳು ಎಂದು ಆಶೀರ್ವದಿಸಲೇ? ಹೌದು, ಹಾಗೆ ಮಾಡುವುದೇ ಸರಿ. ಅದೊಂದೇ ನನಗೆ ಉಳಿದಿರುವ ದಾರಿ.
ಆದರೆ, ನಾನು ಪಟ್ಟಿದ್ದ ಆಸೆಯೆಲ್ಲಾ ನಿರಾಶೆಯಾದುದನ್ನು ಹೇಗೆ ಸಹಿಸಲಿ? ಸತ್ತುಹೋದ ಕನಸುಗಳ ಗೋರಿಯ ಮೇಲೆ ಹೇಗೆ ನಿಲ್ಲಲಿ? ಪೂರ್ಣಿಮಾಳಿಗೆ ಮದುವೆಯಾಗಿ ಅವಳು ತನ್ನ ಗಂಡನೊಡನೆ ಹಳ್ಳಿಗೆ ಬಂದಾಗ ಹೊಳೆ ದಾಟಿಸುವ ಕೆಲಸ ನನ್ನ ಪಾಲಿಗೇ ಬಂದರೆ…? ಆಗ ನನ್ನ ಪೂರ್ಣಿಮಾ ಬೇರೊಬ್ಬನ ಹೆಂಡತಿಯಾಗಿರುವುದನ್ನು ನನ್ನ ಈ ಕಣ್ಣುಗಳಿಂದಲೇ ಹೇಗೆ ನೋಡಲಿ? ಅದನ್ನು ಹೇಗೆ ತಾನೆ ಸಹಿಸಿಕೊಳ್ಳಲಿ?
ಇಲ್ಲ ಇಲ್ಲ. ಪೂರ್ಣಿಮಾ ಬೇರೊಬ್ಬನ ಹೆಂಡತಿಯಾಗುವುದನ್ನು ಸಹಿಸಲಾರೆ. ಅವಳು ನನಗೆ ದೊರಕದಿದ್ದರೂ ಪರವಾಗಿಲ್ಲ, ಬೇರೆ ಯಾವನೋ ಒಬ್ಬನ ಸೊತ್ತಾಗುವುದನ್ನು ನಾನು ಸಹಿಸಲಾರೆ. ಖಂಡಿತವಾಗಿಯೂ ಸಹಿಸಲಾರೆ. ನಾನು ಬದುಕಿರುವ ತನಕ ಅವಳು ಬೇರೊಬ್ಬನ ಹೆಂಡತಿಯಾಗುವುದು ಸಾಧ್ಯವಿಲ್ಲ. ಬದುಕಿರುವ ತನಕ ಏಕೆ, ನಾನು ಸತ್ತ ಮೇಲೂ ಅವಳು ಬೇರೊಬ್ಬನ ಹೆಂಡತಿಯಾಗುವುದು ಸಾಧ್ಯವಿಲ್ಲ. ಸಾಧ್ಯವಾಗಕೂಡದು! ಹೌದು, ಖಂಡಿತಾ ಆಗಕೂಡದು. ನನಗೆ ಸಿಗದವಳು ಬೇರಾವನಿಗೂ ಸಿಗಕೂಡದು…
ಪತ್ರಿಕೆಯಲ್ಲಿ ಸುದ್ದಿ
ಕಾವೇರಿ ನದಿಯಲ್ಲಿ ದೋಣಿಯೊಂದು ಮಗುಚಿಕೊಂಡು ಅದರಲ್ಲಿದ್ದ ಅಂಬಿಗ ಮತ್ತು ಹದಿನಾರು ವರ್ಷದ ಪೂರ್ಣಿಮಾ ಎಂಬ ಹುಡುಗಿ ಇಬ್ಬರೂ ನೀರಿನಲ್ಲಿ ಮುಳುಗಿ ದುರ್ಮರಣಕ್ಕೀಡಾಗಿದ್ದಾರೆ. ಅವರಿಬ್ಬರ ಶವಗಳೂ ಸಿಕ್ಕಿವೆ. ಹುಡುಗಿಯ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಯಾರೂ ಬಂಧುಗಳಿಲ್ಲದ ಅಂಬಿಗನ ಶವವನ್ನು ಪೋಲೀಸ್ ಉಸ್ತುವಾರಿಯಲ್ಲೇ ದಫನ್ ಮಾಡಲಾಯಿತು.
ಪ್ರತ್ಯಕ್ಷದರ್ಶಿಯೊಬ್ಬ ಹೇಳಿದ್ದು
ನಾನು ನೋಡುತ್ತಲೇ ಇದ್ದೆ. ಅಲ್ಲೇ ಕಲ್ಲಿನ ಮೇಲೆ ಕುಳಿತಿದ್ದೆ. ಆ ಅಂಬಿಗ, ನನಗೆ ಸ್ವಲ್ಪ ಗೊತ್ತು. ಒಳ್ಳೇ ಹುಡುಗ. ಆದರೆ ಇಂದೇಕೋ ಅವನ ವರ್ತನೆ ವಿಚಿತ್ರವಾಗಿತ್ತು. ದೋಣಿಯನ್ನು ತುಂಬಾ ನಿಧಾನವಾಗಿ ನಡೆಸುತ್ತಾ ಇದ್ದ, ಹುಟ್ಟು ಹಾಕಲು ಆಗದು ಅನ್ನುವ ಹಾಗೆ. ದೋಣಿ ನದೀ ಮಧ್ಯಕ್ಕೆ ಹೋದಾಗ ಅವನು ಏಕಾಏಕಿ ಆ ಹುದುಗಿಯ ಕೈ ಹಿಡಿದುಕೊಂಡುಬಿಟ್ಟ. ಅವಳು ಗಾಬರಿಯಾಗಿ ಏನೋ ಹೇಳುತ್ತಾ ಅವನತ್ತಲೇ ನೋಡುತ್ತಾ ಕೂತುಬಿಟ್ಟಳು.. ಅವನು ಕೈಲಿದ್ದ ಹುಟ್ಟು ಹಾಕುವ ಜಲ್ಲೆಯನ್ನು ನೀರಿಗೆಸುದುಬಿಟ್ಟ. ಜತೆಗೆ ದೋಣಿಯಲ್ಲಿ ಅಡ್ಡಾದಿಡ್ದಿ ಓಡಾಡಿ ಅದು ಆಯ ತಪ್ಪೋಹಾಗೆ ಮಾಡಿದ. ಇದನ್ನೆಲ್ಲಾ ಅವನು ಬೇಕಂತಾನೇ ಮಾಡಿದ ಅಂತ ನನಗನಿಸುತ್ತೆ… ಏನೋಪ್ಪ ವಿಚಿತ್ರ…
—೦೦೦—
ನವೆಂಬರ್ 7, 1981
ನವದೆಹಲಿ
ಬರೆದಾದ ಮೇಲೆ ಸುಮಾರು ನಾಲ್ಕು ವರ್ಷಗಳ ನಂತರ ಈ ಕಥೆ ದೆಹಲಿಯಲ್ಲಿ ಕೆಲಕಾಲ ಪ್ರಕಟವಾದ "ಅಂತರ" ಮಾಸಿಕದ ಮೊದಲ ಸಂಚಿಕೆಯಲ್ಲಿ ಪ್ರಕಟವಾಯಿತು.
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ