- ಕೆ.ವಿ ತಿರುಮಲೇಶರ ‘ಅವ್ಯಯ ಕಾವ್ಯ’ - ನವೆಂಬರ್ 27, 2022
- ತಿರುಮಲೇಶರೊಂದಿಗೆ ಒಂದು ಆಪ್ತ ಸಂವಾದ - ಡಿಸಂಬರ್ 31, 2021
- ಐವತ್ತೊಂದುನೆನಪುಗಳು…. - ಜೂನ್ 23, 2021
ಱ ಮತ್ತು ೞ ಗಳ ಕತೆ ಸಾಮಾನ್ಯ ಓದುಗರು ಸೇರಿದಂತೆ,ಭಾಷಾತಜ್ಞರಿಗೂ ಅಗತ್ಯ ಇರುವ ಸಂಗತಿಯಾಗಿದೆ. ಕೇಶಿರಾಜನ, ವರ್ಣಮಾಲೆಯಲ್ಲಿ ಇದೆ ಱ,ೞ ಗಳು ಯಾಕೆ ಬಿಟ್ಟು ಹೋದವು ಅವು ಭಾರವಾಗಿದ್ದವೆ ? ಗೊತ್ತಿಲ್ಲ . ಆದರೆ ಹಳಗನ್ನಡ ಕಾವ್ಯಗಳನ್ನು, ಗದ್ಯಗಳನ್ನು ಓದುವ ಆಸಕ್ತಿ ಬೆಳೆಸಿಕೊಂಡ ಆಧುನಿಕ ಕನ್ನಡದ ಕೆಲವರಿಗಂತೂ ಕಷ್ಟವೇ ಆಗಿದೆ ಎಂದರೆ ತಪ್ಪೇನಿಲ್ಲ.ಉಚ್ಚಾರಣೆ ದೃಷ್ಟಿಯಿಂದ ನೋಡುವಾಗ ವ್ಯತ್ಯಾಸವೇನೂ ಇಲ್ಲದೆ ಹೋದರೂ ಅರ್ಥದ ದೃಷ್ಟಿಯಿಂದ ತುಂಬಾ ವ್ಯತ್ಯಾಸವಿದೆ.ಕಲವೊಂದು ಉದಾಹರಣೆಗಳನ್ನು ನೋಡುವಾಗ ಮತ್ತು ತಿಳಿದುಕೊಂಡಾಗ ಹಳೆಗನ್ನಡ ಕಾವ್ಯಗಳನ್ನು ನಾವು ತಪ್ಪಾಗಿ ಅರ್ಥ ತಿಳಿದುಕೊಳ್ಳುವ ಅಪಾಯ ಇದೆ. ಮಾದರಿಗಾಗಿ ಕೆಲವು ಪದಗಳು ಅವುಗಳ ಅರ್ಥಗಳನ್ನು ನೋಡೋಣ :
ಱ ಬಳಕೆಯ ಪದಗಳು
ಊಱು = ನಾಟು,ನೆಡು,ಇಡು
ಅಱೆ = ಪಡಿಮಾಡು,ಸಣ್ಣಮಾಡು
ಕಱೆ = ಹಾಲು ಕರೆಯುವ ಕ್ರಿಯೆ,ಕಳಂಕ,ಕಪ್ಪು
ಅಱಿ = ದುಂಬಿ
ಎಱೆ = ಒಡೆತನ
ಇಱಿ = ತಿವಿ ಚುಚ್ಚು
ರ ಬಳಕೆಯ ಪದಗಳು
ಊರು = ಹಳ್ಳಿ
ಅರೆ = ಅರ್ಧ
ಕರೆ = ಕರೆಯುವಿಕೆ,ಕೂಗು
ಅರಿ= ತಿಳಿವು
ಎರೆ = ಕಪ್ಪು ಭೂಮಿ
ಅದೇ ರೀತಿ ೞ ಮತ್ತು ಳ ಬಳಕೆಯ ಪದಗಳು.
ೞ ಬಳಕೆಯ ಪದಗಳು
ಎೞೆ = ನೂಲಿನ ಎಳೆ,ಸೆಳೆ,ಎಳೆದುಕೋ
ಆೞ್ = ಅಧಿಕಾರ ಚಲಾಯಿಸು
ಬಾೞೆ = ಮೀನು
ತಿೞಿ = ಅರಿವು ಜ್ಞಾನ
ಉೞಿ = ಮಿಕ್ಕಿದ್ದು,ವಸತಿ
ಳ ಬಳಕೆಯ ಪದಗಳು
ಎಳೆ = ಹಸುಳೆ,ಎಳೆ ಕರು ಸಸಿ
ಆಳ್ = ಸೇವಕ
ಬಾಳೆ = ಬಾಳೆ ಹಣ್ಣು
ತಿಳಿ = ಚೊಕ್ಕತನ ,ಮನಸ್ಸು ತಿಳಿಯಾಗು
ಉಳಿ = ಚಾಣ.
ಇಷ್ಟೆಲ್ಲ ವೈವಿಧ್ಯಮಯ ಅರ್ಥವುಳ್ಳ ಪದಗಳನ್ನು ಅಲ್ಲದೇ ಇನ್ನೂ ಅನೇಕ ಪದಗಳು ಕಣ್ಮರೆಯಾಗುತ್ತಲೇ ಇವೆ.
ಕೆಲವು ಭಾಷಾ ಪ್ರೇಮಿಗಳ ಅಭಿಪ್ರಾಯಗಳನ್ನು ನೋಡಿ :
ಸುಧಾರಿಸೋಕೆ ಈ ಸುಂದರ ಅಕ್ಷರಗಳನ್ನ ತೆಗೆದುಹಾಕಬೇಕು ಅಂತ ಯಾವ ನುಡಿಸೋಂಬೇರಿ ತಲೆಯಲ್ಲಿ ಹೊಳೆಯಿತೋ ಗೊತ್ತಿಲ್ಲ.
ಇವತ್ತು ಬಳಕೆಯಾಗುವ ಎಷ್ಟೋ ಪದಗಳು ಸಂದರ್ಭ ವಿಷಯನ್ಯಾಸವಿಲ್ಲದೆ ಅರ್ಥವಾಗದ ದ್ವಂದ್ವಕ್ಕೆ ಒಳಗಾಗಿರೋದೇ, ಹೀಗೆ ಒಂದೊಂದಾಗಿ ಅಕ್ಷರಗಳನ್ನ ಬಿಟ್ಟುಕೊಟ್ಟು ಬಂದಿರೋದರಿಂದ.
ಉದಾ :
ಹೊತ್ತು – ಸಮಯ ಸೂಚಕವೋ(ಪೊೞ್ತು)?, ಹೊರುವ ಕ್ರಿಯೆಯೋ(ಪೊಱ್ತು)?
ಬಾಳು – ಬದುಕೋ(ಬಾೞು)? ನೀರು ಹರಿಯಲು ಸಸಿಗಳ ಸಾಲಿನ ಎರಡು ತಿಟ್ಟಿನ ನಡುವೆ ತೆಗೆದ ಜಾಗವೋ(ಬಾಳು)?
ಹಾರ – ಹೂವಿನದೋ(ಪಾರ)? ಹೆಬ್ಬಂಡೆಯೋ(ಪಾಱ)?
ಬರೆ – (ಬಱೆ) ಅಕ್ಷರಗಳನ್ನ ಬರೆಯುವುದೋ? (ಬರೆ) ಚರ್ಮದ ಸುಲಿತವೋ?
ಬಳಿ – ದಾರಿಯೋ(ಬೞಿ)? ಹಚ್ಚುವುದೋ(ಬಳಿ)?
ಮೊಳ – ಅಳತೆಗೋಲೋ(ಮೊೞ)? ಚಿಗುರೋ(ಮೊಳ)?
….ಹೀಗೆ ಬಹಳ ಪದಗಳ ಮೂಲ ರೂಪ ಕಳೆದುಕೊಂಡು, ಅರ್ಥವಿಲ್ಲದೆ ಬಳಸುವವರುಗಳ ಬಾಯಿಗಳಲ್ಲಿ ಸೊರಗುತ್ತಿವೆ.
ಇನ್ನೊಂದು ಅಭಿಪ್ರಾಯ :
ಚರ್ಚೆಯ ಫಲಸ್ವರೂಪ ಎಂದರೆ ವರ್ಣಮಾಲೆ ಎಲ್ಲಾ ಅಕ್ಷರಗಳನ್ನು ತನ್ನೊಳಗೆ ಸೇರಿಸಿಕೊಂಡು,ಸಮೃದ್ಧವಾಗಿ ಇರಬೇಕಿತ್ತು. ಇಲ್ಲದಿರುವುದು ನಮ್ಮ ಅಲಕ್ಷ್ಯಪರಂಪರೆಯ ದ್ಯೋತಕವಾಗಿ ನಿಂತಿದೆ. ಮುಂದೊಮ್ಮೆ ಕನ್ನಡಕ್ಕೆ ಉಚ್ಛ್ರಾಯಗತಿಯು ಬಂದೊದಗಿದಾಗ ಅವೆರಡು ಅಕ್ಕರಗಳೂ ಮರುಬಾಳ್ವೆಯನ್ನು ಕಾಣಬಹುದು. ಇಂದಿನ ಮಟ್ಟಿಗೆ ಹೇಳುವುದಾದರೆ, ಪೞಗನ್ನಡವನ್ನು ಅಧ್ಯಯನ ಮಾಡುವವರಿಗೆ ಅವುಗಳು ಇನ್ನೂ ಕ್ಷೀಣಪ್ರಾಣಗಳುಳ್ಳವುಗಳಾಗಿ ಬದುಕುಳಿದಿವೆ. ಅವುಗಳು ಅಳಿಯದಂತೆ ಕಾಪಿಡುವುದು, ಹಾಗೂ ಹದಿನೇಳನೇ ಶತಮಾನದಲ್ಲಿ ರಚಿತವಾದ “ಱೞ-ಕುೞ-ನಿಘಂಟುವನ್ನು” ಮರುಮುದ್ರಿಸಿ ಪ್ರಚುರಗೊಳಿಸುವುದು ನಮ್ಮ ಹೊಣೆ.
ಆದರೂ ಕೆಲ ವಿದ್ವಾಂಸರುಗಳು ಅವುಗಳ ಅಗತ್ಯ ಇಲ್ಲ ಸಂದರ್ಭಕ್ಕನುಗುಣವಾಗಿ ಅರ್ಥ ಮಾಡಿಕೊಳ್ಳಬೇಕು ಎನ್ನುವ ವಾದವನ್ನೂಇಡುತ್ತಾರೆ.ಇದರಿಂದ ಆಗಿರುವುದೇನೆಂದರೆ,ಸಂಯುಕ್ತಾಕ್ಷರಗಳು,ವಿಸರ್ಗ ಮತ್ತೂ ಇತ್ತೀಚಿನ ದಿನಗಳಲ್ಲಿ ೠ ಸಹ ವರ್ಣಮಾಲೆಯಿಂದ ಬಿಟ್ಟುಹೋದವು ಮುಂದೊಂದು ದಿನ ನಾನು ಈಗಾಗಾಲೇ ಉಲ್ಲೇಖಿಸಿದಂತೆ ಶ,ಷ,ಸ,ಗಳಲ್ಲಿ ಎರಡು,ಮತ್ತು ೨೫ ವರ್ಗೀಯ ವ್ಯಂಜನಗಳಲ್ಲಿ ಖ,ಗ,ಘ; ಛ,ಜ,ಝ; ಠ,ಡ,ಢ; ಥ,ದ,ಧ ; ಫ,ಬ,ಭ,ಜೊತೆಗೆ,ಅನುನಾಸಿಕಗಳಲ್ಲಿ ಙ,ಞ ಗಳು ಇಲ್ಲವಾಗುವ ಅಪಾಯವಿದೆ.
ಖ್ಯಾತ ಕನ್ನಡ ಭಾಷಾ ವಿದ್ವಾಂಸರಾಗಿದ್ದ ಡಾ.ಹಾ.ಮಾ.ನಾಯಕರು ಒಂದೆಡೆ ಹೇಳಿದ್ದ, ಮಾತು ನೆನಪಿಗೆ ಬರುತ್ತಿದೆ. “ನಮ್ಮ ನುಡಿ ಅದರ ಸಾಹಿತ್ಯ ಪಿತ್ರಾರ್ಜಿತ ಆಸ್ತಿ. ಅದನ್ನು ಬೆಳಸದೇ ಇದ್ದರೂ ಚಿಂತೆ ಇಲ್ಲ ಆದರೆ ಅದನ್ನು ಕಳೆಯದೇ ಇದ್ದರೆ ಸಾಕು “. ಈ ಮಾತು ನಮ್ಮ ವರ್ಣಮಾಲೆಗೂ ಅನ್ವಯಿಸುತ್ತದೆ ಎಂದು ಭಾವಿಸಬಹುದಾಗಿದೆ.
೦-೦-೦
ಕೃತಜ್ಞತೆ :
ಪವನ್ ಕುಮಾರ ಮಾನ್ವಿ.
ನರೇಂದ್ರ ಪ್ರಭು
ಕ್ರತು ನಂದನ್
QUORA ಅಪ್ಲಿಕೇಷನ್
ಹೆಚ್ಚಿನ ಬರಹಗಳಿಗಾಗಿ
ಓದುವುದು – ಒಂದು ವಿಚಾರ
ನುಡಿ ಕಾರಣ – ೧೮
ನುಡಿ ಕಾರಣ – ೧೭