ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಓದುವುದು – ಒಂದು ವಿಚಾರ

ಗೋನವಾರ ಕಿಶನ್ ರಾವ್
ಇತ್ತೀಚಿನ ಬರಹಗಳು: ಗೋನವಾರ ಕಿಶನ್ ರಾವ್ (ಎಲ್ಲವನ್ನು ಓದಿ)

ಕವಿ ವಾದಿಯಾಗಬಾರದು ಸಂವಾದಿಯಾಗ ಬೇಕು ಎನ್ನುವ ಸಾಲು ಹೊಳೆಯಿತು. ನಾವೆಲ್ಲ ವಾದಿಗಳೇನೋ ಎನ್ನುವ ಸಂದೇಹ ಶುರುವಾಯಿತು.
ಸಾಹಿತ್ಯ ಸಂದರ್ಭದಲ್ಲಿ ಆಲೋಚಿಸುವಾಗ ನಾವು ಬರೆದದ್ದು ಸರಿ ಎನ್ನುವ,ವಾದ ಸಹಜವಾಗಿ ಕೇಳಿಬರುವಂತಹದ್ದು.ಬರಹಗಾರ ಉನ್ನತ ಮಟ್ಟದ ಕೇಳುಗನಾಗಬೇಕು ಆಗಲೇ ಜಿಜ್ಞಾಸೆ ಮೂಡುತ್ತದೆ.

ನಿನ್ನೆ
ಇಂದು
ನಾಳೆಗಳನ್ನು
ಮೌನವಾಗಿ ನುಂಗಿ ಹಾಕುತ್ತ
ಬಂದಿದೆ ನನ್ನ ಪ್ರಜ್ಞೆ
…………………….
ಇದೆಲ್ಲ ಏನು?
ಮತ್ತು ಏಕೆ ?

ಕೆ‌.ವಿ.ತಿರುಮಲೇಶ.

ಅದರಿಂದ, ಅವನಿಗುಂಟಾಗುವ ಪ್ರಯೋಜನಗಳು ಅನೇಕ.

ಸರ್ವಜ್ಞ ನೆಂಬುವವ ಗರ್ವದಿಂದಾದವನೆ |
ಸರ್ವರೊಳಗೊಂದೊಂದು ನುಡಿ ಕಲಿತು|
ವಿದ್ಯದಾ ಪರ್ವತವೇ ಆದ – ಸರ್ವಜ್ಞ.||

ಒಂದೊಂದು ನುಡಿ ನಮ್ಮ ಶಬ್ದ ಭಂಡಾರಕ್ಕೆ ಜಮ. ಪದ ಸಂಪತ್ತು ಇದ್ದರೆ ಏನು ಬೇಕಾದರು ಸಾಧಿಸಬಹುದು.
ಇದು ಬೆಳೆಯುವದು ಹೇಗೆ ವಾದದಿಂದಂತೂ ಖಂಡಿತ ಅಲ್ಲ ಅಧ್ಯಯನದಿಂದ,ಸಂವಾದ ದಿಂದ, ಜಿಜ್ಞಾಸೆಯಿಂದ.ಯಾರಾದರೂ ಒಂದು ಪುಸ್ತಕ ಕುರಿತು ಮಾತನಾಡುತ್ತಿದ್ದರೆ ಮತ್ತು ಆ ಪುಸ್ತಕ ಕುರಿತು ಓದಿಲ್ಲವೆಂದಾದರೆ ನಮಗೆ ನಾವೇ ‘ಯಾಕೆ ಓದಿಲ್ಲವೆನ್ನುವ ಪ್ರಶ್ನೆ ಯನ್ನು ಮನದಲ್ಲಿ ಹಾಕಿಕೊಂಡಾಗ ‘ಕುತೂಹಲ ಮೂಡುತ್ತದೆ… ಮೂಡಬೇಕು ಸಹ.ಕೆಲವರಂತು ಯಾಕೆ ಓದುವದು ಅದೆಲ್ಲ ಮಾಡಲು ಕೆಲಸ ವಿಲ್ಲದವರ ಕೆಲಸ.ನಾವೇನು ಓದಿ ಪರೀಕ್ಷೆ ಬರೆದು ಪಾಸಾಗಬೇಕೇ? ಶಾಲೆ ಕಾಲೇಜ್ ಮಕ್ಕಳು ಓದಿಕೊಳ್ಳಲಿ.ಅವರಿಗೆ ಅದು ಅನಿವಾರ್ಯ ಅದರ ಬಗ್ಗೆ ನಾವೇಕೆ ಯೋಚಿಸೋಣ ಎನ್ನುವದು ಇವರ ಧೋರಣೆ.ಎಂದರೆ ಈ ಓದು ಪಠ್ಯ ಪುಸ್ತಕ ಗಳಿಗೆ ಮೀಸಲೇ? ಎಂಬ ಸಂದೇಹ ಕಾಡಲಾರದೇ ?
ಅಕ್ಷರ ಕಲಿತ ಎಲ್ಲರಿಗೂ ಓದು ಕಡ್ಡಾಯ. ಅದಕ್ಕೆ ವಯಸ್ಸಿನ ಅಂತರವಾಗಲಿ ತಾರತಮ್ಯ ವಾಗಲೀ ಇಲ್ಲ.ಅದೊಂದು ಸಂಸ್ಕಾರ.ಅವರು ಉದ್ಯೋಗಿ,ನಿರುದ್ಯೋಗಿ ವೃದ್ಧ,ತರುಣ,ಗೃಹಿಣಿ, ಯಾರೇ ಇರಲಿ, ಎಲ್ಲರೂ ಓದಬೇಕು.ಓದಿದೆ ಪದವಿ ಬಂತು ಮದುವೆ ಆಯಿತು. ಮಕ್ಕಳಾದವು ಇನ್ನೇಕೆ ಓದು ಎನ್ನುವ ಧೋರಣೆ ಸಲ್ಲದು.ಚಿಂತಿಸಬೇಕಾದ ಸಂಗತಿ ಒಂದಿದೆ.ಕೆಲವೊಂದು ಉಪನ್ಯಾಸಕ,ಶಿಕ್ಷಕ ವೃಂದವೆ ನಿಗದಿತ ಪಠ್ಯ ಪುಸ್ತಕ ಬಿಟ್ಟು ಬೇರೆ ಏನನ್ನೂ ಓದುವದಿಲ್ಲ! ಮಕ್ಕಳ ಭವಿಷ್ಯ ರೂಪಿಸುವ ಅವರ ವ್ಯಕ್ತಿತ್ವ ವಿಕಸನ ಗೊಳಿಸುವ ಕೆಲಸ, ಓದಿ ಗಳಿಸಿದ ಅತಿರಿಕ್ತ ಜ್ಞಾನದಿಂದ ಮಾತ್ರ ಸಾಧ್ಯ.

ಏನನ್ನು ಓದಬೇಕು ಎನ್ನುವ ಆಯ್ಕೆ ಓದುಗರಿಗೆ ಬಿಟ್ಟದ್ದು.ಅವರವರ ಅಭಿರುಚಿಯನ್ನು ಓದು ಅವಲಂಬಿಸಿರುತ್ತದೆ.ಸ್ಥೂಲವಾಗಿ ನೋಡುವದಾದರೆ; ಅನೇಕ ಪ್ರಕಾರಗಳು ಒಂದೊದು ವರ್ಗದಲ್ಲಿಯೂ ಒಂದೊಂದು ಆಯ್ಕೆ ಇರುತ್ತದೆ.ಕಾವ್ಯದಲ್ಲಿ ಕೆಲವರಿಗೆ ಹಳೆಗನ್ನಡ,ಕೆಲವರಿಗೆ ನಡುಗನ್ನಡ, ಕೆಲವರಿಗೆ ಆಧುನಿಕ ಕನ್ನಡ ಇಷ್ಷವಾಗುತ್ತದೆ.ಕೆಲವರಿಗೆ ಪದ್ಯ ಬೇಡವೇ ಬೇಡ ಗದ್ಯದ ಪ್ರಕಾರಗಳು ಇಷ್ಟ. ಅದರಲ್ಲಿಯೂ ಸ್ಥಿತ್ಯಂತರ ಬರಹಗಳು ಅಂದರೆ ಆಧ್ಯಾತ್ಮಿಕ,ಧಾರ್ಮಿಕ ಕೃತಿಗಳು ,ಪೌರಾಣಿಕ ಸಂಗತಿಗಳು,ಐತಿಹಾಸಿಕ ಘಟನೆಗಳು,ಸಾಮಾಜಿಕ ಬರಹಗಳು,ನಾಟಕಗಳು, ಪ್ರವಾಸ ಲೇಖನಗಳು,ಹಾಸ್ಯ ಲೇಖನಗಳು, ಆತ್ಮ ಚರಿತ್ರೆಗಳು, ತತ್ವಶಾಸ್ತ್ರ ಹೀಗೆ ಸಮೃದ್ದ ಸಾಹಿತ್ಯ ರಾಶಿಯೇ ಇದೆ. ಇನ್ನೂ ಕೆಲವರಿಗಂತೂ ಅವರದೆ ಆದ ಕೃತಿಕಾರರ ಪಟ್ಟಿ ಇರುತ್ತದೆ ಇಂತಹ ಲೇಖಕರ ಪುಸ್ತಕಗಳನ್ನು ಮಾತ್ರ ಓದುವದು, ಉಳಿದೆಲ್ಲ ಓದಬಾರದು ಅಂತೇನೂ ಇಲ್ಲ ಆಗಲಿ ಆಸಕ್ತಿ ಕಡಿಮೆ. ಒಬ್ಬ ಸ್ನೇಹಿತನನ್ನು ನೋಡಿದ್ದೆನೆ.ಅವನು ಓದುವದು ಬರೀ ಬೀಚಿ ಸಾಹಿತ್ಯ. ಬೀಚಿಯವರ ಯಾವುದೇ ಪುಸ್ಕಕ ಮಾರುಕಟ್ಟೆಗೆ ಬಂದರೆ ಸಾಕು ಅದನ್ನು ಖರೀದಿಸಿ ಓದಿ,ಸಂಜೆ ಅದರ ಬಗ್ಗೆ ಹೇಳಿದ್ದೇ ಹೇಳಿದ್ದು.


ಬೀಚಿಯವರ ‘ಸತ್ತವನು ಎದ್ದು ಬಂದಾಗ’ ಕಾದಂಬರಿಯ ಮುನ್ನುಡಿಯಲ್ಲಿ ಬೀಚಿ ಹೇಳುತ್ತಾರೆ. ” ನಾನು ಈ ಪತ್ತೆದಾರಿ ಕಾದಂಬರಿ ಬರೆಯಲು ನನ್ನ ಮಗ ಕಾರಣ ” ಎಂದು. ಅವರ ಮಗನನ್ನು ನಿಮ್ಮ ತಂದೆಯವರು ಬರೆದಿದ್ದು ಓದಿರುವೆಯಾ ಎಂದಾಗ ಆ ಮಗನ ಉತ್ತರ ‘ ಅಯ್ಯೋ ನಮ್ಮತಂದೆ ಏನೇನೋ ಕಚಡಾ ಬರಿತಾರೆ ಒಂದಾದರೂ ಡಿಟೆಕ್ಟಿವ್‌ ನಾವೆಲ್ಲು ಬರೆದಿಲ್ಲ’ !! ಡಿಟೆಕ್ಟಿವ್‌ ಕಾದಂಬರಿಯೊಂದನ್ನು ಅದಕ್ಕಾಗಿ ಬರೆದರಂರಂತೆ. ಇಂದಿಗೂ ಅನೇಕರ ಆಯ್ಕೆ ಪತ್ತೇದಾರಿ ಜಾದಂಬರಿಗಳು,ಕ್ರೈಮ್ ಥ್ರಿಲ್ಲರ್ ಗಳು. ಹಾಗೆ ನೋಡಿದರೆ ನಾವೆಲ್ಲ ಓದುವ ಹವ್ವಾಸ ಬೆಳೆಸಿಕೊಂಡದ್ದು ಎನ್. ನರಸಿಂಹಯ್ಯ ನವರ ಪುರುಷೋತ್ತಮನ ಸಾಹಸ ಗಳನ್ನು ಓದಿಯೇ ಅಲ್ಲವೇ ?

ಓದು ಸಾಕಷ್ಟು ಸಿದ್ಧತೆಗಳನ್ನು ಅಪೇಕ್ಷಿಸುತ್ತದೆ. ಎಲ್ಲರೀತಿಯ ಮಾನಸಿಕ ತಯಾರಿಯ ಅಗತ್ಯ ಇರುತ್ತದೆ.ಯಾವುದೇ ಓದು ಅಲ್ಲಾವುದ್ದೀನ್ ನ ಮಾಯಾದ್ವೀಪವೇನು ಅಲ್ಲ.ಓದಿದ ತಕ್ಷಣ ಪಾಂಡಿತ್ಯ ಒದಗಿಬರಲು.ಓದಿನಲ್ಲಿ ನಾವು ಪ್ರವೇಶಿಸುವ ಮೊದಲು ಪೂರ್ವ ತಯಾರಿ ಮಾಡಿಟ್ಟುಕೊಳ್ಳಬೇಕು.ಮತ್ತೆ ಅದು ಧಿಡೀರ ಸಂತೋಷ ನೀಡುತ್ತದೆ ಎಂದು ಸಹ ತಿಳಿಯಬೇಕಿಲ್ಲ.ಓದುತ್ತ ಓದ ಹಾಗೆ ಅದು ನಮ್ಮನ್ನು ಆವರಿಸಿಕೊಳ್ಳುತ್ತ ಹೋಗುತ್ತದೆ.ಇನ್ನೂ ಬಿಡಿಸಿ ಹೇಳುವದಾದರೆ ಯಾವುದೋ ಒಂದು ಕಾದಂಬರಿ ಓದಲು ಪ್ರಾರಂಭ ಮಾಡಿದಾಗ ಮೊದಲ ಹತ್ತು ಹದಿನೈದು ಪುಟಗಳವರೆಗೆ ಅದು ನಮ್ಮನ್ನು ಹಿಡಿದಿಡಲಾರದು. ಆಳಕ್ಕೆ ಇಳಿದೆವೆಂದು ತಿಳಿಯಿರಿ ಅದರ ಮಜವೇ ಬೇರೆ.ಮುಗಿಸುವವರೆಗೆ ಕೆಳಗಿಡಲಾಗುದಿಲ್ಲ ಕೆಲವಂತು ಒಂದು ಸಾರೆಯಲ್ಲ ಅನೇಕ ಸಾರೆ ಓದಿಸಿಕೊಳ್ಳುತ್ತವೆ.

ಕಾರಂತರ ಬೆಟ್ಟದ ಜೀವ,ಭೈರಪ್ಪನವರ ಪರ್ವ,ಯಶವಂತ ಚಿತ್ತಾಲರ ಶಿಕಾರಿ ಅನೇಕ ಸಾರೆ ಓದಿದ್ದೇನೆ.ಭಗವದ್ಗೀತೆ, ಕುಮಾರವ್ಯಾಸ ಭಾರತ ಮಂಕುತಿಮ್ಮನ ಕಗ್ಗ ಬೇಂದ್ರೆ ಕವನಸಂಕಲನಗಳಂತೂ ಸರೆ ಸರೆ ಅವು ಎಲ್ಲದಕ್ಕೂ ಆಕರ ಗ್ರಂಥಗಳು. ಬೇಸರವಾದಗೆಲ್ಲ ಕುಮಾರವ್ಯಾಸ ಭಾರತವನ್ನು ಕೈಯಲ್ಕಿ ಹಿಡಿದು ಯಾವ ಪುಟದಿಂದ ಬೇಕಾದರೂ ಆರಂಭಿಸಿ.. ಬೇಸರ ಮಟ್ಟಮಾಯ!

ಹಾಗೆಂದು ಈ ಮಾತು ಎಲ್ಲ ಪುಸ್ತಕಗಳಿಗೆ ಅನ್ವಯಿಸಲಾರದು.ಮಾರುಕಟ್ಟೆಗೆ ಬಿಡುಗಡೆಯಾಗಿ ಬಂದ ಪುಸ್ತಕಗಳಲ್ಲಿ ಅತ್ಯತ್ತಮ ಪುಸ್ತಕಗಳ ಅಯ್ಕೆ ಇಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.ಸ್ನೇಹಿತರು, ವಿದ್ಯಾಗುರುಗಳು,ಕೌಟುಂಬಿಕ ಸದಸ್ಯರುಗಳ ಮಾರ್ಗದರ್ಶನ ಸಹಾಯಕವಾಗುತ್ತದೆ.ಅನೇಕ ನಿಯತಕಾಲಿಕ ಪತ್ರಿಕೆಗಳಲ್ಲಿ ಬರುವ ಪ್ರಕಟಣಾ ಮಾಹಿತಿಗಳು ಸಹಾಯಕ. ಖರೀದಿಸಬೇಕೆಂದೆನೂ ಇಲ್ಲ ನಿಮ್ಮ ಊರಿನ ವಾಚನಾಲಯಗಳಿಂದ ಅಗತ್ಯ ಪುಸ್ತಕಗಳನ್ನು ಎರವಲು ತಂದು ಓದಬಹುದು.ಓದು ಒಂದು ಹವ್ಯಾಸ ಮಾತ್ರ ಆಗದೇ ವ್ಯಸನ ವಾದರೂ ಅಡ್ಡಿ ಇಲ್ಲ.ಓದುವದರ ಮೇಲೆ ಒತ್ತು ಬೀಳುವುದು ಅಗತ್ಯ.
ಸಾಹಿತ್ಯ ಸಂದರ್ಭಕ್ಕೆ ಬಂದಾಗ ಅದರಲ್ಲೂ,ಗದ್ಯ ಪದ್ಯ,ವಿಮರ್ಶೆ,ನಾಟಕ, ಪ್ರಬಂಧ, ಅಂಕಣ ಬರಹ ಯಾವುದೇ ಇರಲಿ, ಶಿಸ್ತು ಮುಖ್ಯ. ಯಾರು ಓದಲಾರರೋ ಅವರು ಬರೆಯಲಾರರುು ಎನ್ನುವ ಮಾತೊಂದಿದೆ. ಅಂತಹವರಿಗೆ,ಬರೆಯಬೇಕು ಸಾಹಿತಿಯಾಗಬೇಕು ಎನ್ನುವ ಉತ್ಕಟತೆಗಿಂತ, ಸಂತೆ ಹೊತ್ತಿಗೆ ಮೂರು ಮೊಳ ನೇಯುವ ಗುಂಪು.
ಬರೆಯುವವರಿಗೆ ಓದಬೇಕಾದದ್ದು ಬಹಳಷ್ಟಿರುತ್ತದೆ. ವರ್ತಮಾನದ ಸಾಹಿತ್ಯದೊಟ್ಟಿಗೆ ಸಾಹಿತ್ಯದ ಪರಂಪರೆಯನ್ನೂ ಅರಿಯಬೇಕಿರುತ್ತದೆ. ಜೊತೆಗೆ ಹೊಸತನ್ನು ಸೃಷ್ಟಿಸುವುದಕ್ಕೊಂದು ಓದಿನ ಬುನಾದಿ ಬೇಕೇಬೇಕಿರುತ್ತದೆ. ಓದು ಮತ್ತು ಬರಹ ಒಂದೇ ನಾಣ್ಯದ ಎರಡು ಮುಖಗಳೂ ಆದ ಕಾರಣ ಓದಿಲ್ಲದೆ ಬರಹವಿಲ್ಲ, ಬರಹವಿಲ್ಲದೆ ಓದಿಲ್ಲ. ಹಾಗಾಗಿ ಬರಹಗಾರರು ಹೆಚ್ಚು ಓದುತ್ತಾರೆ. ಮತ್ತು ಅವರು ಒಂದು ನಿಶ್ಚಿತ ಸಮಯವನ್ನು ನಿಖರಗೊಳಿಸಿ ಬರೆಯಲು ಓದಲು ಎಂದು ವೇಳಾಪಟ್ಟಿ ಹಾಕಿ ಕೊಂಡಿರುತ್ತಾರೆ.ಏನು ಬರೆಯಬೇಕು ಎಂದು ನಿರ್ಧರಿಸಿ ಅದಕ್ಕೆ ಅಗತ್ಯ ವಾದ ಪುಸ್ತಕಗಳನ್ನು ಓದಿ ಪ್ಯಾರಾ,ಪುಟಸಂಖ್ಯೆ ಗಳನ್ನು ಗುರುತು ಹಾಕಿಕೊಂಡಿರುತ್ತಾರೆ.ಹೀಗಾಗಿ ನಿರ್ಧಾರಿತ ವೇಳಾಪಟ್ಟಿಯಲ್ಲಿ ಬರೆಯುತ್ತಾರೆ.ಕೆಲವರು ಬೆಳಗಿನ ಜಾವ ಎದ್ದು ಬರೆದರೆ ಕೆಲವರು ರಾತ್ರಿ ಯ ವೇಳೆ ಬರೆಯುತ್ತಾರೆ.

ಯಶವಂತ ಚಿತ್ತಾಲರು ನಸುಕಿನ ನಾಲ್ಕು ಗಂಟೆಗೆ ಅವರ ಬ್ಯಾಂಡ್ ಸ್ಟ್ಯಾಂಡ್ ಅಪಾರ್ಟಮೆಂಟಿನ
ಬಾಲ್ಕನಿಯಲ್ಲಿ ಕೂತು ಬರೆಯುತ್ತಿದ್ದರಂತೆ.
ಭೈರಪ್ಪನವರು ಸಂಜೆ ಐದು ಗಂಟೆಯನಂತರ ವೇದಾಂತ ಕಾಲೇಜ್ ನ ತಮ್ಮಕೋಣೆಯಲ್ಲಿ ಕೂತು ಬರೆಯುತ್ತಿದ್ದರಂತೆ.ಕೆಲ ಲೇಖಕರು ದೀರ್ಘ ರಜೆ ಹಾಕಿ ಅಪರಚಿತ ಊರಿಗೆ ಹೋಗಿ ಅಲ್ಲಿಯ ಲಾಡ್ಜ್್ನ್ ನಲ್ಲಿ ಕುಳಿತು ಬರೆಯುತ್ತಿದ್ದರಂತೆ.ಅನಂತ ಮೂರ್ತಿಯವರು ಸಂಸ್ಕಾರ ಬರೆದದ್ದು ಇಂಗ್ಲೆಂಡಿನಲ್ಲಿ. ಎ‌.ಕೆ.ರಾಮಾನುಜರ ಎಲ್ಲಾ ಕೃತಿಗಳು ಅಮೇರಿಕದಲ್ಲಿ.

ಬರಹಗಾರರಿಗೆ ಓದುವದರಿಂದ ಹಿರಿಯ ಲೇಖಕರ ಬರಹಗಳು ಮಾರ್ಗದರ್ಶನ ನೀಡುತ್ತವೆ.ಹತ್ತು ಲೇಖಕರ ಕೃತಿಗಳನ್ನು ಓದುವದರಿಂದ ಅವರ ಬಳಸಿದ ಭಾಷೆ,ಬರೆದಿರುವ ಶೈಲಿ, ಯಾವ ಮಾರ್ಗ ಇದು ? .ದೇಶಿ, ಜಾನಪದ ಎನ್ನುವುದು ತಿಳಿಯುತ್ತದೆ ಅದರಿಂದ ಭಿನ್ನವಾದ ಹೊಸ ಶೈಲಿ ಉದ್ಭವಿಸುವ ಸಾಧ್ಯತೆ ಇರುತ್ತದೆ.

ಯಾವ ಛಂದಸ್ಸು, ಅಥವಾ ಮುಕ್ತ ಛಂದವೇ? ಛಂದಸ್ಸು ಮುರಿಯುವ ಸಾಧ್ಯತೆಗಳು, ಮುರಿದರೆ ಹೇಗಿರಬೇಕು. ನೋಡಿ: ಒಬ್ಬ ಬರಹಗಾರನ ಮನಸ್ಸು ಹೇಗೆಲ್ಲ – ಏನೆಲ್ಲ ಕೆಲಸ ಮಾಡುತ್ತದೆ. ಇದೆಲ್ಲ ಹೇಗೆ ಸಾಧ್ಯವಾಯಿತು ? ನಿರಂತರ ಓದು ಅಧ್ಯಯನದಿಂದ ಮಾತ್ರ ಸಾಧ್ಯ.ಯಾಕೆಂದರೆ ಬರೆಯ ಬೇಕೆನ್ನುವ ತುಡಿತ. ಹಾಗಿರುವ ವ್ಯಕ್ತಿ ಎನೋ ಒಂದನ್ನು ಬರೆಯಲಾರ. ಬರೆದದ್ದು ಒಂದು ಪರಿಪೂರ್ಣತೆಯ ಬರಹ. ತಾನು ಬರೆದದ್ದು ತನ್ನ ಮನದಾಳದ ತುಡಿತಕ್ಕೆ ಪದಗಳ ರೂಪ ಕೊಡುವ ಕೆಲಸ. ನಾನು ಬರೆಯಬೇಕು ನಾನಲ್ಲದೆ ಇನ್ನಾರ ಬರೆಯುತ್ತಾರೆ ಎನ್ನುವ ಕ್ಷಣದಿಂದಲೇ ಬರೆಯುವ ಕಾರ್ಯದ ಭೂಮಿಕೆ ಸಿದ್ಧವಾಗುತ್ತದೆ.ತಾನು ಬರೆದೇ ತೀರುತ್ತೇನೆ ಎನ್ನವ ಒಳಗಿನ ಧ್ವನಿ ಅವನಿಗೇ ಕೇಳಿಸುತ್ತದೆ.ಅದೇ ಕಾವ್ಯ ಧ್ನನಿ.ಕಾವ್ಯ ಧ್ವನಿಗೆ ಭಾಷೆ,ಅಲಂಕಾರ,ಛಂದ,ಗತ್ತು ಬಾಹ್ಯ ಆಭರಣಗಳು. ಕಾವ್ಯ ಒಂದು ಹೊಸ ಸೃಷ್ಟಿ- ನವ ವಿಸರ್ಗ . ಉಧ್ಭವ ಮೂರ್ತಿಯಂತೆ,ಕಾವ್ಯ ಕವಿಯ ಹೃದಯದಲ್ಲಿ ಧ್ವನಿ ರೂಪವಾಗಿ ಪ್ರಕಟವಾಗುತ್ತದೆ ಅದೇ ಕಾವ್ಯದ – ಧ್ವನಿ.

ಭಾಷೆ ಏಕೆ ಬರೆ ಧನಿಯು ಸಾಕು ಆ ಅಲಂಕಾರ ನೂಕು |
ರೀತಿ ಗೀತಿ ಕೊಂಡಾಟ ಬೇಡ,ಗುಣಗಣದ ಷೋಕಿ ಝೋಕು |
ಭಾವವೇನು ಎಣಿಸಾಟ ಉಂಟೆ ? ಆ ಛಂದ ಗತ್ತು ಗಿತ್ತು |
ಒಂದೇ ನಾಮದಲಿ ಪ್ರಣವಧಾಮ ಅಡಗಿತ್ತು ಇಲ್ಲಾ. ಇತ್ತು.||
– ದ.ರಾ.ಬೇಂದ್ರೆ.

ಯಾಕೆಂದರೆ ಕಾವ್ಯದ ಧ್ವನಿ ಹೊರಹೊಮ್ಮಿದಾಗ ಅದು ಸಾಲಂಕೃತವಾಗಿ ಬಂದೇ ಇರುತ್ತದೆ. ಎಂದು ತಿಳಿಯಬೇಕೆ ಹೊರತು ಬೇಂದ್ರೆ ಅವೆಲ್ಲ ಬೇಡ ಎಂದಿದ್ದಾರೆ ಎಂದು ತಿಳಿದರೆ ನಾವು ಬೇಂದ್ರೆ ಯವರನ್ನು ಓದಿಯೇ ಇಲ್ಲ ಎಂದು ಅರ್ಥ.ಪ್ರಕೃತಿಯನ್ನು ಯಾರಾದರೂ ಶೃಂಗರಿಸುತ್ತಾರೆಯೇ ! ಇಲ್ಲಿ ಬರವಣಿಗೆ ಸಹ,
ಒಂದು ತಾಯ್ತನದ ಹಾಗೆ.ಮಗು ಜನಿಸಿ ಭೂಮಿಗೆ ಬಂದು ಅಳುವದನ್ನು ಕೇಳಿದಾಗ ಒಂಬತ್ತು ತಿಂಗಳು ಹೊತ್ತು, ಪಟ್ಟ ಕಷ್ಟ ,ಹೆರಿಗೆ ಸಮಯ ಅನುಭವಿಸಿದ ಯಾತನೆ ಒಂದೇ ಕ್ಷಣದಲ್ಲಿ ಮಾಯವಾಗಿ ಆನಂದ ಉಮ್ಮಳಿಸಿ ಬಂದು, ಕಣ್ಣಲ್ಲಿ ನೀರು ಮನದೊಳಗಿನ ಮಂದಹಾಸ ಮುಖದ ಮೇಲೆ ! ಬರವಣಿಗೆಯೂ ಸೃಷ್ಟಿ ಕಾರ್ಯ. ಆಗ ಹೊರಹೊಮ್ಮುವ ಧ್ವನಿಗೆ ಸಮಾನವಾದುದು ಇದೆಯೇ ?
ಇದೆಲ್ಲ ಹೇಗೆ ಸಾಧ್ಯ ವಾಯಿತು.ಓದಿನಿಂದ ಎಂದು ವಿವರಿಸಬೇಕೆ ?
ಇದು ಬರೀ ಕವಿತೆ ಬರೆಯುವದಕ್ಕೆ ಮಾರ್ಗ ಸೂಚಿ ಎಂದಾಗಲಿಿ ಅಲ್ಲದೇೇೇ ಇದು ಎಲ್ಲಾ ಪ್ರಕಾರದ ಬರಹಗಳಿಗೆ ಅನ್ವಯಿಸುತ್ತದೆ ಎಂದು ಬಲವಾಗಿ ನಂಬಹುದಾಗಿದೆ.


೦-೦-೦-೦
ಆಕರ :
‘ವಿನಯ’ ಐವತ್ತರಡು ಆಯ್ದ ಕವನಗಳು – ದ.ರಾ.ಬೇಂದ್ರೆ.
ಆಯ್ದ ಕವಿತೆಗಳು – ಕೆ.ವಿ.ತಿರುಮಲೇಶ.
ಸರ್ವಜ್ಞ ವಚನಗಳು – ಉತ್ತಂಗಿ ಚೆನ್ನಪ್ಪ ನವರು