ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನುಡಿ ಕಾರಣ – ೧೭

ಗೋನವಾರ ಕಿಶನ್ ರಾವ್
ಇತ್ತೀಚಿನ ಬರಹಗಳು: ಗೋನವಾರ ಕಿಶನ್ ರಾವ್ (ಎಲ್ಲವನ್ನು ಓದಿ)

ಸೃಜನಶೀಲ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಪ್ರತಿ ಕವಿ,ಕತೆಗಾರ,ಬರಹಗಾರನ ಮನಸ್ಸಿನಲ್ಲಿ,ಒಂದು ರೀತಿಯ ತುಡಿತ ಇದ್ದೇ ಇರುತ್ತದೆ.ಅದಕ್ಕನುಗುಣವಾಗಿ ಅವನು ಯೋಚಿಸುತ್ತಾನೆ.

ಒಬ್ಬ ಮನುಷ್ಯ ಒಳ್ಳೆಯವನಾಗಬೇಕಾದರೆ,ಆತ ಬಹಳ ತೀವ್ರವಾಗಿ ಆಲೋಚಿಸಬೇಕು’ ಎಂದು ಕವಿ ತಿರುಮಲೇಶರು,ಒಂದೆಡೆ ಹೇಳಿದ್ದನ್ನು ಓದಿದಂತೆ ನೆನಪು. ಸತತ ಓದು,ಅಧ್ಯಯನ, ಮುಂತಾದ, ಚಟುವಟಿಕೆಗಳಿಂದ, ವ್ಯಕ್ತಿಯ ಭಾವಲೋಕ ಹೊಸ ಹೊಸ ವಿಚಾರಗಳಿಂದ, ಆಕರ್ಷಣೆ ಹೊಂದಿ ತನ್ನ ಭಾವನೆಗಳಿಗೆ, ಅವುಗಳನ್ನು ತುಂಂಬಿಕೊಂಡು ವಿಸ್ತಾರ ಹೊಂದುತ್ತದೆ.ಅವನ ಕಲ್ಪನೆ, ಚಿತ್ರ ಮೂಡುವಿಕೆ ಮುಂತಾದ ಮಾನಸಿಕ ವ್ಯಾಪಾರಗಳು,ಬರೆಯಬೇಕೆಂದು ಕೊಂಡ ವಿಷಯಕ್ಕೆ ಇಂಬು ನೀಡುತ್ತವೆ.

ಹಾಗಾದರೆ ಎಷ್ಟು ಓದಬೇಕು,ನಮ್ಮ ಬರಹಕ್ಕೆ ಎಷ್ಟು ಬೇಕು ಅಷ್ಟು ಸಾಕೇ ? ಹೇಗೆ ಹೇಳುವುದು ? ಉಪಜೀವನಕ್ಕೆ ಕೈಕೊಂಡ ವೃತ್ತಿ, ಸಾಂಸಾರಿಕ ಸಮಸ್ಯೆ, ಹಣಕಾಸು, ಮಕ್ಕಳು, ಅವುಗಳ ಓದು, ಮುಂತಾದ ದೈನಂದಿನ ಚಟುಟಿಕೆಗಳ ಮಧ್ಯೆ ಹಚ್ಚಿನ ಓದಿಗೆ ಅವಕಾಶ ಇದೆಯೇ ? ವೃತ್ತಿ ಮತ್ತು ನಮ್ಮ ಪ್ರವೃತ್ತಿ ಗಳ ನಡುವೆ ಹೊಂದಾಣಿಕೆ ಹೇಗೆ ?
ಆದರೆ ಒಂದಂತೂ ಖಚಿತ. ಉದ್ಭವಿಸಿದ ಭಾವನೆಗಳಿಗೆ ಶಬ್ದ ರೂಪ ಕೊಡಬೇಕೆಂದು ಕುಳಿತಾಗ ಉಳಿದೆಲ್ಲ ಸಂಗತಿಗಳು ಗೌಣವಾಗುತ್ತವೆ.
ಅದಕ್ಕೆ ಅನೇಕ ಸಾದೃಶ್ಯಗಳು ಕನ್ನಡ ಸಾರಸ್ವತ ಲೋಕದಲ್ಲಿ ವಿಪುಲವಾಗಿದೊರೆಯುತ್ತವೆ. ಬೇಂದ್ರೆ ಯವರ ಈ ಸಾಲಗಳನ್ನು ನೋಡಿ:

“ಏನು ? ಏಕೆ ? ಎಲ್ಲಿ ? ಯಾರು ?
ಎಂದು ತೊದಲನಾಡಿದೆ
ಅಂದಿನಿಂದ ಇಂದುವರೆಗು
ಅದೇ ಹಾಡ ಹಾಡಿದೆ.
ಹತ್ತು ದೇಶ ನೋಡಿದೆ.
ನೂರು ಶಾಸ್ತ್ರ ಓದಿದೆ.
ಮೊದಲು ತೊದಲ ಮಾತಿನಲ್ಲೆ
ಇನ್ನೂ ಇದೆ ಅರಿವಿನಲ್ಲೆ
ಏನು ? ಏಕೆ ? ಎಲ್ಲಿ ? ಯಾರು ?
ಇನ್ನೂನು ಕೇಳುವೆ
ಎದೆಯಲವಿತು ಕುಳಿತ ಗುರುವೆ
ಹೇಳು ಏನ ಹೇಳುವೆ ?”

ಜಿಜ್ಞಾಸೆ
– ಗಂಗಾವತರಣ

ಶಬ್ದಗಳ ಮೂಲಕ ಅನಂತತೆಯ ಕಡೆಗೆ ಕೈ ಚಾಚುವ ಶಕ್ತಿ ಅವರಿಗೆ ಸಿದ್ದಿಸಿತ್ತು. ಅದೂ ಅಲ್ಲದೆ ಅವರಿಗೆ ಶೈಲಿಯ ಜೊತೆ ವಸ್ತುವಿನ ಹುಡುಕಾಟದ ಅಗತ್ಯವಿತ್ತು.ಕವಿತೆಗೆ ಜಾನಪದ ಭಾಷೆ ಮಾತ್ರ ಅಲ್ಲ ವೇದಮಂತ್ರಗಳ ಭಾಷೆಯೂ ಕಾಣುತ್ತಿತ್ತು. ತಿರುಮಲೇಶ ಅವರು ಗುರುತಿಸಿರುವಂತೆ, “ಅರ್ಥವಿಲ್ಲ,ಸ್ವಾರ್ಥವಿಲ್ಲಬರಿಯ ಭಾವಗೀತಾ” ಎಂದ ಬೇಂದ್ರೆ, ” ತರ್ಕ ಮಾಡಿ ತುರ್ಕನಾಗಬೇಡ, ಅತರ್ಕ್ಯದ ಆಚೆ ಕಾಣಬೇಕು”ಎಂದು ಹೇಳಿರುವದನ್ನೂ ಗಮನಿಸಿಬೇಕು.ನಂತರ ಅವರು ಕೇಳಿದ್ದೇ ಈ ಏನು ? ಏಕೆ ? ಎಲ್ಲಿ ? ಯಾರು ? ಎಂದು.ಇದನ್ನು ಅವರು ಪ್ರತಿ ಘಟ್ಟದಲ್ಲೂ ಕೇಳಿಕೊಳ್ಳುತ್ತ ಬಂದಿದ್ದಾರೆ. ಸಿಕ್ಕ ಉತ್ತರ ತೃಪ್ತಿ ನೀಡದಾದಾಗ ಹುಡುಕಾಟ ಮುಂದುವರಿಸಿದ್ದಾರೆ. ಪ್ರಥಮ ಕವಿತಾ ಸಂಕಲನ ‘ಕೃಷ್ಣ ಕುಮಾರಿಯಿಂದ(೧೯೨೨) ಹಿಡಿದು ‘ ಬಾಲ ಬೋಧೆ ‘ (೧೯೮೨) ವರೆಗಿನ ಅವರನಿರಂತರ ಹುಡುಕಾಟವೇ, ಅವರ,ಸಾಹಿತ್ಯದ ವಿರಾಟ ಸ್ವರೂಪ ದರ್ಶನ. ಅದು ದೊರೆತದ್ದು ಈ ಭುವನದ ಭಾಗ್ಯ.

ಇಲ್ಲಿ ನಾನು ಹೇಳ ಬೇಕಾಗಿರುವುದು ಬೇಂದ್ರೆ ಯಾವ ರೀತಿ, ನಿರಂತರ ಹುಡುಕಾಟದಲ್ಲಿ ನಿರತರಾಗಿದ್ದರು ಎಂದಾಗಲೀ, ಶಬ್ದ ಗಾರುಡಿಗ ಎನಿಸಿಕೊಂಡ ಮಹಾನ್ ಕವಿ, ‘ಯಾಕ ಬರಲಿಲ್ಲ ….ಹುಬ್ಬಳ್ಳಿ ಯಾಂವ ‘ ದಿಂದ ಅಧ್ಯಾತ್ಮ, ಸಂಖ್ಶಾಶಾಸ್ತ್ರ ದಂತಹ ವಿಷಯಗಳನ್ನು ಹೇಗೆ ಅನ್ವೇಷಿಸಿಕೊಂಡರು ಎಂದಾಗಲಿ, ಎನ್ನುವದಕ್ಕಿಂತ,ವೃತ್ತಿ – ಪ್ರವೃತ್ತಿಗಳೆರಡನ್ನೂ ಹೇಗೆ ನಿಭಾಯಿಸಿದರು ಎನ್ನವುದನ್ನು ಕುರಿತದ್ದು

ಎರಡು ಬಾರಿ ಧಾರವಾಡದ ವಿಕ್ಟೋರಿಯಾ ಶಾಲೆಯಲ್ಲಿ ಶಿಕ್ಷಕರಾಗಿ,ಅದನ್ನು ಬಿಟ್ಟು, ರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಕರಾಗಿ ಅದನ್ನು ಬಿಟ್ಟು, ಪುನಃ ವಿಕ್ಟೋರಿಯಾ ಸೇರಿ ಅಲ್ಲಿಂದ ಹುಬ್ಬಳ್ಳಿಯಲ್ಲಿ ಶಿಕ್ಷಕರಾಗಿ ಮುಂದೆ ಸೊಲಾಪುರದ ಕಾಲೇಜೊಂದರಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಅಲ್ಲಿಂದ ನಿವೃತ್ತರಾಗಿ, ಆನಂತರ ಆಕಾಶವಾಣಿ ಸಲಹೆಗಾರರಾಗಿ ದುಡಿದವರು. ಕೌಟುಂಬಿಕ ವಿಷಯದಲ್ಲಿಯೂ ಹುಟ್ಟಿದ ಏಳು ಮಕ್ಕಳಲ್ಲಿ ಮೂರು ಅಲ್ಪಾಯುಷಿಗಳಾದರು.ಆ ದುಃಖದ ನಡುವೆಯೂ ಅವರ ಅಧ್ಯಯನ ವ್ಯಾಸಾಂಗಗಳಿಗೆ ಒಂದಿನಿತು ಕುಂದುಂಟಾಗಿಲ್ಲ ಎಂದರೆ ಊಹಿಸಿ.

ಬರೀ ಬೇಂದ್ರೆ ಏಕೆ, ವೃತ್ತಿಯಲ್ಲಿದ್ದೂ ದೇಶ ವಿದೇಶಗಳಲ್ಲಿ ವ್ಯಾಸಂಗ ಮಾಡಿ ಜೊತೆಗೆ ಸಾಹಿತ್ಯ ರಚನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕನ್ನಡ ಸಾರಸ್ವತ ಲೋಕವನ್ನೇ ಸಂಪದ್ಭರಿತಗೊಳಿಸಿದ ಅನಂತ ಮೂರ್ತಿಯವರು, ಎ.ಕೆ.ರಾಮಾನುಜಂ, ಚಂದ್ರಶೇಖರ ಕಂಬಾರ, ಭೈರಪ್ಪ, ಜಿ.ಎಲ್ ಸ್ವಾಮಿ ಮುಂತಾದವರು, ಕವಿ, ಕತೆಗಾರರು, ಕಾದಂಬರಿಕಾರರು, ವಿಮರ್ಶಕರಷ್ಟೇ ಅಲ್ಲ ಸತತ ಅಧ್ಯಯನ ಶೀಲರು. ವೃತ್ತಿ ಪ್ರವೃತ್ತಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರೂ ಎಂಬುದು ಬಹು ಮುಖ್ಯ ಸಂಗತಿ.ಕೆಲ ವರುಷಗಳ ಹಿಂದೆ ಕವಿ ಶಿವರುದ್ರಪ್ಪನವರ ಮನೆಗೆ ಹೋದಾಗ ಅವರ ಮನೆಯಲ್ಲಿದ್ದ ಗ್ರಂಥಾಲಯ ನೋಡಿ ದಂಗಾಗಿದ್ದೆ. ಹೈದರಾಬಾದ್ ನ್ನೇ ಉದಾಹರಣೆಗೆ ತೆಗೆದುಕೊಂಡರೂ, ನರಸಿಂಗಮಾನ್ವಿ,ಕೆ.ವಿ ತಿರುಮಲೇಶ, ಮುಂತಾದವರು ವೃೃತ್ತಿ ಯ ಜೊತೆ ಆಳವಾದ ಅದ್ಯಯನ ನಿರತರೂ ಆಗಿದ್ದರು. ಸಮೃದ್ಧ ಸಾಹಿತ್ಯ ರಚನೆಯನ್ನೂ ಮಾಡಿದರು. ಇಂದಿನ ಪೀಳಿಗೆಯ ಬರಹಗಾರರಲ್ಲಿ ವಿವೇಕ ಶಾನುಭೋಗ,ಎಂಎಸ್.ಶ್ರೀರಾಮ್,ಜಯಂತ ಕಾಯ್ಕಿಣಿ ಮುಂತಾದವರೂ ಸಹ ತಮ್ಮ ಬರಹ ಬದುಕುಗಳ ಜೊತೆಗೆ ಅಧ್ಯಯನಶೀಲರಾಗಿದ್ದರು.

ಒಟ್ಟಾರೆ ನೋಡುವಾಗ ಓದುವಿಕೆ ಯಿಂದಲೇ ಸತ್ವಶಾಲಿ ಮತ್ತು ವಿನೂತನ ಮಾರ್ಗಗಳ ಅನ್ವೇಷಣೆ ಸಾಧ್ಯ ಹೊಸ ವಸ್ತುಗಳ ಅವಿಷ್ಕಾರ ಸಾಧ್ಯ ಎಂದು ಋಜುವಾತುಪಡಿಸಬಹುದು.

ಬರಹಕ್ಕೆ ಅಧ್ಯಯನ ಅಗತ್ಯ
ಲೇಖನಕ್ಕೆ ವಿಷಯ ಗುರುತಿಸಿಕೊಳ್ಳುವುದು ಮೊದಲ ಹೆಜ್ಜೆಯಾದರೆ, ಎರಡನೆಯ ಹೆಜ್ಜೆ ಅಧ್ಯಯನ. ಆಸಕ್ತಿಯ ಐದಾರು ಸ್ಥೂಲ ವಿಷಯಗಳನ್ನು ಆಯ್ಕೆ ಮಾಡಿ: ಉದಾಹರಣೆಗೆ, ಕವಿತೆ, ಕತೆ, ಒಲವು, ದ್ವಂದ್ವ ವಿಚಾರಗಳು, ಕಂಡ- ಕೇಳಿದ ಸಂಗತಿಗಳು, ಪ್ರಕೃತಿ, ಪರಿಸರ. ಪ್ರಸ್ತುತ, ಸಾಹಿತ್ಯ ಸಂದರ್ಭದಲ್ಲಿ ಇರುವ ಲೇಟೆಸ್ಟ ಟ್ರೆಂಡಗಳು, ಬದುಕಿನ ಸುಖ ದುಃಖ ಸಂಗತಿಗಳು, ಕರ್ನಾಟಕ/ಹಿಂದುಸ್ತಾನಿ ಸಂಗೀತ, ವಚನಗಳು, ದಾಸರ ಪದಗಳು. ಆ ವಿಷಯಗಳ ಬಗ್ಗೆ ಲೇಖನಗಳು, ಪುಸ್ತಕಗಳು, ಸೀಡೀಗಳು, ಇಂಟರ್-ನೆಟ್ ಬರಹಗಳನ್ನು ಸಂಗ್ರಹಿಸಿ ಓದುತ್ತಿದ್ದರೆ, ಲೇಖನಗಳ ಜೀವಾಳ, ಒಳನೋಟಗಳು, ಅವಲೋಕನ ಮತ್ತು ಅಧ್ಯಯನಗಳಿಂದಾಗಿ, ನಿಮಗೆ ದಕ್ಕುತ್ತವೆ. ನಿಮ್ಮ ಶಬ್ದ ಸಂಪತ್ತು ಹೆಚ್ಚುತ್ತದೆ. ಬರಹದ ಮೇಲೆ ಹಿಡಿತ ಸಾಧಿಸಲು ಯಾರ ಮುಲಾಜಿಗೂ ಒಳಗಾಗಬೇಕಿಲ್ಲ. ಶಬ್ದಗಳೊಂದಿಗೆ ಆಟವಾಡುವದನ್ನು ಕಲಿತವನೇ ಪಾಳೇಗಾರ, ಸಾಮಂತ, ರಾಜ,ಚಕ್ರವರ್ತಿ !!

೦-೦-೦-೦

ಕೃತಜ್ಞತೆ :-
ಗಂಗಾವತರಣ – ಅಂಬಿಕಾತನಯದತ್ತ
ಬೇಂದ್ರೆಯವರ ಕಾವ್ಯ ಶೈಲಿ – ಕೆ.ವಿ.ತಿರುಮಲೇಶ.

ವಿ.ಸೂ.
ಇಲ್ಲಿ ತೆಗೆದುಕೊಂಡ ಲೇಖಕರ ಹೆಸರುಗಳು ಕೇವಲ ಪ್ರಾತಿನಿಧಿಕವಾಗಿವೆ ಎಂದು ತಿಳಿಯತಕ್ಕದ್ದು.