- ಷೋರೂಂ ಬೈಕಿನ ಸ್ವಗತಗಳು - ಜುಲೈ 10, 2023
- ಕಾವ್ಯವೆಂದರೆ ಅದೇನದು? - ಫೆಬ್ರುವರಿ 5, 2022
- ಗರುಡ ಗಮನ ; ವೃಷಭ ವಾಹನ - ನವೆಂಬರ್ 28, 2021
ನನ್ನ ಹೊಸ ಕವಿತಾ ಸಂಕಲನ ದ ಬಗ್ಗೆ ರೋಹಿತ್ ಜಿ ,ಐ.ಎ.ಎಸ್ ವಿದ್ಯಾರ್ಥಿ ಒಬ್ಬರು ತಮ್ಮ ಅನಿಸಿಕೆಯನ್ನು ಕಳಿಸಿದ್ದಾರೆ.
ಲೇಖಕರು
ಮೂರನೆಯವಳು ಎನ್ನ ಮನೆಯ ಕದವನ್ನು ತಟ್ಟಿದ್ದಾಳೆ.
ತಟ್ಟಿ ಒಂದೆರೆಡು ಗಂಟೆಗೆ ಮನದ ಬಾಗಿಲನ್ನು ರಿಂಗಣಿಸಿ ಓದಿಸಿಕೊಂಡಿದ್ದಾಳೆ.
ಚೊಚ್ಚಲ ಕವನ ಸಂಕಲನಕ್ಕೆ ಎಷ್ಟು ಅಭಿನಂದಿಸಿದರೂ ಕಡಿಮೆಯೇ. ಮೇಲಾಗಿ ಒಬ್ಬ ಪುರುಷನಾಗಿ ಸ್ತ್ರೀ ಕೇಂದ್ರಿತ ಕವನ ಸಂಕಲನಕ್ಕೆ ಕೈ ಹಾಕಿದ್ದಕ್ಕೆ ವಿಶೇಷ ಅಭಿನಂದನೆಗಳು. ಇಷ್ಟು ಬೇಗ ಹೊತ್ತಿಗೆಯನ್ನು ಕೈಗಿಟ್ಟಿದ್ದಕ್ಕೆ ನಾನು ಆಭಾರಿ!
ಇದು ನನ್ನ ಜೀವಿತದಲ್ಲೆ ನಾನು ಓದಿದ ಮೊದಲ ಕವನ ಸಂಕಲನ. ಕವನಗಳು ನನ್ನ ರುಚಿಯೇ ಆಗಿದ್ದರೂ, ಇಡಿಯ ಕವನ ಸಂಕಲನ ನನ್ನ ರೂಡಿಯಲ್ಲ. ಆದರೂ ಓದಿಸಿದ್ದು ಪುಸ್ತಕ ಸೃಜಿಸಿದವನ ಸ್ನೇಹ ಮತ್ತು ಸರಳ ಭಾಷೆ.
ಪ್ರಕಾಶಕರ ನುಡಿಯಂತೆ, ಹೆಣ್ಣಿಗೆ ಅವಳದ್ದೆ ಕಥೆ, ಗಂಡಿಗೆ ಆತ್ಮಾವಲೋಕನ ಮಾಡಿಸುವ ಸಾಧನದಂತೆ ಕಂಡಿದೆ. ಅತೃಪ್ತ ಆತ್ಮಗಳು ಅತೃಪ್ತಿಗೈದ ರಕ್ಕಸ ಪುರುಷ ಪ್ರಪಂಚಕ್ಕೆ ಆತ್ಮಾವಲೋಕನದ ಭಿಕ್ಷೆ ಬೇಡಿ ನಿಂತ ಪ್ರಶ್ನೆಪತ್ರಿಕೆಯಂತೆ ಕಂಡಿತು.
ಇದೊಂದು ಹೆಣ್ಣ ಹೊಗಳುವ ಪರಿಯೋ, ಗಂಡನ್ನು ಜರಿದು ಅಪ್ಪಳಿಸುವ ವಿಧಾನವೋ, ಹೆಣ್ಣಲ್ಲಿ ಕಿಚ್ಚಿನ ಕಿಡಿ ಹೊತ್ತಿಸುವ ಪ್ರಯತ್ನವೋ, ಅಥವಾ ಹೆಣ್ಣಿನ ಅಸಹಾಯಕತೆಯ ಅರಾಜಕತೆ ಪ್ರದರ್ಶಿಸುವ ವೇದಿಕೆಯೋ ಎಂಬುದು ವಿವಿಧ ಸ್ಥರದ ಓದುಗನಿಗೆ ಬಿಟ್ಟಿದ್ದು ಎಂದೆನಿಸುತ್ತದೆ.
ಈ ಕವಿತೆಗಳು ಸುಮಾರು 100 ವರ್ಷ ಹಿಂದೆಯೋ ಅಥವಾ ಇನ್ನೂ ಎಷ್ಟೇ ವರ್ಷ ಹಿಂದಕ್ಕೆ ಹೋಗಿ, ಅಂದಿನ ಕಾಲದಲ್ಲಿಯೋ ಮೂಡಬಹುದಾದ ಕೀರಲ ದನಿಯಂತೆ ನನಗೆ ಭಾಸವಾಯ್ತು. ಅಂದರೆ, ಕವಿ ಇಂದಿನ ಪ್ರಸ್ತುತ ಸಮಕಾಲೀನ ಹೆಣ್ಣನ್ನು ಚಿತ್ರಿಸುವಲ್ಲಿ ವಿಫಲನಾಗಿದ್ದಾನೆ. ಹಾಗೆಂದಮಾತ್ರಕ್ಕೆ ಕವಿತೆಗಳು ಅಪ್ರಸ್ತುತ ಎಂದಲ್ಲ, ಆದರೆ ಈ ಕಾಲಘಟ್ಟದ ಹೆಣ್ಣ ಪೂರ್ಣ ಚಿತ್ರಣ ಇದರಲ್ಲಿ ಕಾಣಲಿಲ್ಲವಷ್ಟೆ.
ಶಿಲೆಯಲ್ಲಿ ಶಿಲಾಬಾಲೆಯಾಗಿಯೆ ಕಲ್ಲಾಗಿದ್ದವಳು, ಹರಿವ ನದಿಯಲ್ಲಿಯೂ ಮಲೀನಕ್ಕೊಳಗಾದವಳು, ಗರ್ಭಗೃಹದಿ ಬಂಧಿಯಾಗಿ ಪೂಜಿಸಲ್ಪಟ್ಟವಳು ಇಂದು ಎಲ್ಲಿಲ್ಲಿ ಇದ್ದಾಳೆ. ಹೊಸ್ತಿಲ ದಾಟಿ, ಗಡಿಯಲ್ಲಿ ವೈರಿಯ ಗುಂಡಿಗೆ ಮಮತೆಯ ತಾಯ ಎದೆ ಒಡ್ಡಿ ಸೆಟೆದು ನಿಂತಿದ್ದಾಳೆ, ಖಾಕಿ, ಖಾದಿ, ಖಾವಿ, ಬಿಳಿ ಕೋಟ್, ಕಪ್ಪು ಕೋಟ್ ಎಲ್ಲದರಲ್ಲೂ ವರ್ಣರಂಜಿತಳಾಗಿದ್ದಾಳೆ. ನಭವ ಹಾರಿ, ಭೂ ಕಕ್ಷೇ ಮೀರಿ ಬಾಹ್ಯಕಾಶದಲ್ಲಿ ಶೂನ್ಯ ಗುರುತ್ವದಿ ತೇಲಾಡುತ್ತಿದ್ದಾಳೆ. ಕತ್ತಲ ಆಗಸದಿ ನಕ್ಷತ್ರವಾಗಿ ಮಿನುಗಾಗಿದ್ದಾಳೆ.
ಹಾಗೆಂದ ಮಾತ್ರಕ್ಕೆ ಶೋಷಣೆ ನಿಂತಿದೆ ಎಂದಲ್ಲ. ಇಲ್ಲಿ ಶೋಷಿತ ಹೆಣ್ಣಿನ ಅಸಹಾಯಕತೆಯ ಪ್ರಶ್ನೆಗಳು, ಸತ್ತ ಪ್ರೇತಾತ್ಮಗಳ ಪುರುಷ ಸಮಾಜದಲ್ಲಿ ಆತ್ಮಾವಲೋಕನ ಮಾಡಿಸುವ ಪ್ರಯತ್ನ ಮಾಡಿವೆ.
ಇಲ್ಲಿ ಪುರುಷ ಸಮಾಜದ ಆತ್ಮಾವಲೋಕನಕ್ಕಿಂತ ಬೇಕಿರುವುದು, ಸ್ತ್ರೀ ಸಮಾಜದ ಆತ್ಮನಿರ್ಭರತೆ, ಆತ್ಮಾಭಿಮಾನ ಮತ್ತು ಆತ್ಮವಿಶ್ವಾಸ ಮೂಡಿಸುವ ಪದಗಳು. ಅದು ಈ ಸಂಕಲನದಲ್ಲಿ ಗೌಣವಾಗಿದೆ.
ಪುರುಷ ಕವಿಯ ಕವನಗಳು ಇವುಗಳಾದ್ದರಿಂದ ಸಾಲು-ಸಾಲು ಕವಿತೆಗಳು ಭೌತಿಕ ಮತ್ತು ಕಾಮ-ಕೇಂದ್ರಿತ ಪದಗಳು ಉಜ್ಜ್ವಲಿಸಿ ಹಾಸು ಹೊಕ್ಕಾಗಿವೆ. ಪ್ರೇಮಗವಿತೆಗಳು ಸಹಜವಾಗೇ ಎಲ್ಲ ಪ್ರೇಮದ ಪ್ರೇತಾತ್ಮಗಳಲ್ಲಿ ಮೂಡಬಹುದಾದ ಸಾಲಿನ ಸರಪಳಿಯಂತಿದೆ.
ಕವಿ ಲೌಕಿಕ ಪ್ರಪಂಚ ದಾಟಿ ಅಲೌಕಿಕದತ್ತ ಮುನ್ನುಗ್ಗಬೇಕಿದೆ. ಬಸಿರಲ್ಲೆ ಉಸಿರುಗಟ್ಟುವ ಹೆಣ್ಣು, ಬಸಿರಾಗದೆ ಬಂಜೆ ಎಂದು ನೋವಲ್ಲಿ ಬೇಯುವ ಹೆಣ್ಣು, ಬೇರೆಯವರ ಬಸಿರಿಗೆ ಉಸಿರಾಗುವ ಹೆಣ್ಣು, ಬಸಿರಾಗದೆಯೆ ದೇಹವನ್ನು ಮಾರಾಟಕ್ಕಿಟ್ಟ ಹೆಣ್ಣು, ಒಂದೇ ಬಸಿರಲ್ಲಿ ಹುಟ್ಟಿ ಅಸಮಾನತೆ ಎದುರಿಸುವ ಹೆಣ್ಣು, ಹೀಗೆ ಇತ್ಯಾದಿಗಳ ಚಿತ್ರಣ ಹೆಣ್ಣಿನ ಪೂರ್ಣ ಚಿತ್ರಣ ನೀಡಿತು.
ಎಲ್ಲ ಸಾಮಾಜಿಕ ಪಿಡುಗುಗಳಿಗೆ ತನ್ನ ಜೀವನವನ್ನು ಬಲಿನೀಡುವ ಹೆಣ್ಣು, ವೈಧವ್ಯದ ವಿಧವೆ, ವಿವಾಹವಾಗದ ಕುವರಿ, ಬಹುವರ್ಷ ಪುರುಷನಲ್ಲಿ ಅಡಗಿದ್ದ ಹೆಣ್ಣು ಇತ್ಯಾದಿ ಮೂರನೆಯವಳಿಗೆ ಪ್ರಸ್ತುತವೆನಿಸುತ್ತಿತೆನೋ..
ಕಡೆಯದಾಗಿ ವಿದ್ಯೆಗೆ ಸರಸ್ವತಿ ಎಂದೆವು, ದುಡ್ಡಿಗೆ ಲಕ್ಷ್ಮಿ ಎಂದೆವು, ಭೂಮಿಗೆ ಭೂತಾಯಿ ಎಂದೆವು, ಆದರೆ ಇದ್ಯಾವುದನ್ನೂ ಹೆಣ್ಣಿನ ಅಂಕುರಕ್ಕೆ ಎಟುಕದ ವಸ್ತುವಾಗಿಸಿದ್ದು ಚರಿತ್ರೆ. ಹೆಣ್ಣೆಂದರೆ ಪ್ರಕೃತಿ, ಅದರ ಮೇಲೆ ವಿಕೃತಿ ಮೆರೆದಾಗಲೆಲ್ಲಾ “ಪ್ರಕೃತಿ ವಿಕೋಪ” ವಾಗಿ ತಾನೇ ತನಗೆ ಬೇಕಾದ ಸಹಜ ಸ್ಥಿತಿಗೆ ಕರೆದೊಯ್ಯುತ್ತದೆ.
ಹಾಗೆ ಸ್ತ್ರೀಗೆ ಆತ್ಮ ವಿಶ್ವಾಸ, ಆತ್ಮ ಗೌರವ, ಆತ್ಮ ಶಕ್ತಿ ಮತ್ತು ಆತ್ಮ ನಿರ್ಭರತೆ ನೀಡುವ ಕಾರ್ಯ, ಆತ್ಮಾವಲೋಕನದ ಪ್ರಶ್ನೆಗಳಿಗಿಂತ ಪ್ರಸ್ತುತ ಎಂಬುದು ನನ್ನ ನಿಲುವು.
ಮುಖಪುಟ, ಹಿನ್ನುಡಿ, ಬೆನ್ನುಡಿಗಳು ತೂಕಬದ್ಧವಾಗಿದ್ದು, ಬಳಸಿರುವ ಉಕ್ತಿಗಳು, ಆಂಗ್ಲ ಉಕ್ತಿಗಳಾಗಿರದೆ, ಕನ್ನಡದ ಉಕ್ತಿಗಳಾಗಿದ್ದರೆ ಬಹಳ ಅರ್ಥಗರ್ಭಿತವಾಗಿರುತ್ತಿತ್ತು.ಓದುಗರ ಅಭಿಪ್ರಾಯ, ಪ್ರತಿ ಭಾಗ ಪರಿಚಯಿಸುವ ಪರಿ, ವರ್ಣವಿನ್ಯಾಸ ನೂತನತೆಯ ಅನುಭವ ನೀಡಿತು.
ಮುಂದಿನ ಸಾಹಿತ್ಯ ಕೃಷಿಗೆ ಒಳ್ಳೆಯದಾಗಲಿ..ಬಹುಬೇಗ ಇದು ಎಲ್ಲರ ಮನೆ ಮತ್ತು ಮನ ತಲುಪಲಿ, ನಿನ್ನ ಚಿಂತನೆಗಳು ‘ಸಾಮಾಜಿಕ ಕ್ರಾಂತಿ’ಯಲ್ಲದಿದ್ದರು, ವೈಯುಕ್ತಿಕ ಮಿಡಿತಗಳನ್ನು ಹೆಚ್ಚು ಹೆಚ್ಚು ಸೃಜಿಸಲಿ, ನಿನ್ನ ಹೆತ್ತ ತಾಯಿ ಅಜರಾಮರವಾಗಲಿ, ತಾಯಿ ಭುವನೇಶ್ವರಿ ಸೇವೆ ಇಮ್ಮಡಿಗೊಳ್ಳಲಿ ಎಂದು ಹೃದಯ ಪೂರ್ವಕ ಹಾರೈಸುವೆ..
ರೋಹಿತ್ ಜಿ
ಐ.ಎ.ಎಸ್ ವಿದ್ಯಾರ್ಥಿ
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ