ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪೂರ್ಣಿಮಾ ಲಕ್ಷ್ಮೇಶ್ವರ್ ಅವರ “Strings Attached” ಕವನ ಸಂಕಲನದ ವಿಮರ್ಶೆ

ಉತ್ತಮ ಯಲಿಗಾರ

ನಾನು ಇತ್ತೀಚಿಗೆ ಓದಿದ ಪುಸ್ತಕಗಳಲ್ಲಿ ವಿಭಿನ್ನವಾದ ಪುಸ್ತಕವಿದು. ಇದು ಇಂಗ್ಲಿಷ್ ಕವನ ಸಂಕಲನವಾದರೂ ಕನ್ನಡದಲ್ಲಿ ಇದರ ಬಗ್ಗೆ ಬರೆಯುವಂತೆ ನನಗನಿಸಿದ ಕಾರಣ : ಇದರಲ್ಲಿರುವ ನೇಟಿವಿಟಿ. ಧಾರವಾಡದಲ್ಲಿ ಹುಟ್ಟಿ ಬೆಳೆದ ಕವಿಯತ್ರಿ ಅಲ್ಲಿಯೇ ನಡೆದಿರಬಹುದಾದ ಘಟನೆಗಳು , ಅಲ್ಲಿಯೇ ಕಾಣ ಸಿಗಬಹುದಾದಂತಹ ಪಾತ್ರಗಳನ್ನು ಹಾಗೂ ಅಲ್ಲೇ ಸಿಗಬಹುದಾದಂತಹ ಬಣ್ಣಗಳನ್ನು ಬಿಡಿಸುತ್ತಾರೆ. Prose Poetry ಎಂಬ ಭಾರತದಲ್ಲಿ ಕಡಿಮೆ ಉಪಯೋಗಿಸಲ್ಪಡುವ ಕಾವ್ಯ ಪ್ರಕಾರಕ್ಕೆ ಸೇರಿದ ತುಂಬಾ ಪರಿಣಾಮಕಾರಿ ಕವನಗಳು (ಅರವತ್ತೆಂಟು) ಇದರಲ್ಲಿವೆ.

ಕವಿಯಿತ್ರಿ ಬಣ್ಣಗಳ ಮೂಲಕ ಬೇರೆ ಬೇರೆ ಅನುಭವಗಳನ್ನು ಉಣಬಡಿಸಿ ಯೋಚನೆಗೆ ದೂಡುವ ಪರಿ ವಿಭಿನ್ನವಾದುದು. ಆಲೋಚನೆಯನ್ನು ಪ್ರೇರೇಪಿಸುವ ಕವನಗಳಲ್ಲಿ ದಿನನಿತ್ಯದ ಸಂಗತಿಗಳನ್ನು ನೋಡುವ ದೃಷ್ಟಿಕೋನ ಶ್ಲಾಘನೀಯ.

ಸಂಬಂಧಗಳ, ವಿಶೇಷವಾಗಿ ವೈವಾಹಿಕ ಸಂಬಂಧಗಳ ಸೂಕ್ಷ್ಮಾತಿಸೂಕ್ಷ್ನ್ಮ ಸಂಗತಿಗಳನ್ನು ಬಿಚ್ಚಿಡುವ ಕವಿಯಿತ್ರಿ, ಅವರ ಪರ್ಯಾಯ ಆಲೋಚನೆಗಳಿಗೆ ಓದುಗನನ್ನು ಹೌದೆನ್ನುತ್ತ ಸಾಗುವಂತೆ ಮಾಡುತ್ತಾರೆ. ಬಣ್ಣಗಳನ್ನು ಸ್ಮೃತಿಗಳಿಗೆ, ಘಟನೆಗಳಿಗೆ, ಸಂಬಂಧಗಳಿಗೆ ಹಾಗೂ  ಡಂಬಾಚಾರಗಳಿಗೆ ಹೋಲಿಸಿ ನೋಡುವ ಅವರು, ಬಣ್ಣದ ವಿವಿಧ ಛಾಯೆಗಳಿಗೆ ಆಶ್ಚರ್ಯ ಮೂಡಿಸುವ ಹೋಲಿಕೆಗಳನ್ನು ನೀಡುತ್ತಾ ಸಾಗುತ್ತಾರೆ. ಜೀವನದಲ್ಲಿ ಕಾಣಸಿಗುವ ವ್ಯಕ್ತಿಗಳನ್ನು ಸೂಕ್ಷ್ಮ ದೃಷ್ಟಿಯಿಂದ ಗಮನಿಸಿ ಅವರ ಬಾಳಿನಿಂದ ಕಲಿಯಬಹುದಾದ ಪಾಠಗಳನ್ನು ಅವ್ಯಕ್ತವಾಗಿ ತಿಳಿಸುತ್ತಾರೆ.

ನೇಟಿವಿಟಿಯನ್ನು ಅವರು ಕನ್ನಡ ಪದಗಳನ್ನು ಬಳಸುತ್ತಾ ಉಳಿಸಿಕೊಳ್ಳುತ್ತಾರೆ. ಕನ್ನಡ ಅರ್ಥವಾಗದ ಓದುಗನಿಗೂ ಅದು ಮುಜುಗರಕ್ಕಿಂತ ಸೊಗಡನ್ನು ಹೆಚ್ಚು ಮೂಡಿಸುತ್ತದೆ. ಒಂದು ಪದ್ಯದಲ್ಲಿ ನೀಲಿ ಬಣ್ಣವು “ರ ಠ ಈ ಕ” ಕಲಿಯುವಾಗ ತಪ್ಪೆಸಗಿದರೆ ತಂದೆ ಥಳಿಸಿ, ಆದ ಗಾಯಗಳನ್ನು ನೆನಪಿಸುತ್ತದೆ ಎಂದು ಹೇಳುತ್ತಾರೆ. ಒಮ್ಮೆ ಧಾರವಾಡದ ಮಾರುಕಟ್ಟೆಯಲ್ಲಿ ಸಿಗುವ ಚಿಕ್ಕಿಬಳಿಯನ್ನು ಉಲ್ಲೇಖಿಸಿದರೆ, ಇನ್ನೊಮ್ಮೆ “ ಕಪ್ಪ ಬೇಕೇ ಕಪ್ಪ “ ಎಂಬ  ಚೆನ್ನಮ್ಮನ ಆರ್ಭಟವನ್ನು ಮೊಳಗುತ್ತಾರೆ. ಪದ್ಯಗಳನ್ನು ಓದುತ್ತ ಧಾರವಾಡ ನಿಮ್ಮ ಕಣ್ಣೆದುರಿಗೆ ಬರುವದು ಖಂಡಿತ. ಅಲ್ಲಿಯ ಲುಪ್ತ ಕೆರೆಗಳಿಗಾಗಿ ಹಳಹಳಿಸುತ್ತ, ಹಿತ್ತಲ ಬಾವಿಗಳು , ಚಂಡು ಹೂಗಳು , ಈಚಲ ಮರಗಳು ಕಣ್ಣೆದುರಿಗೆ ಕಾಣಿಸುವಂತೆ ಮಾಡುತ್ತಾರೆ.

“The others in our everydays “  ಭಾಗದಲ್ಲಿ ಅವರು ಕೆಲವು ವ್ಯಕ್ತಿಗಳ ಬಗ್ಗೆ ಕವನಗಳನ್ನು ಬರೆಯುತ್ತಾರೆ . ಒಂದು ಕಾಲದಲ್ಲಿ ತುಂಬಾ ಚುರುಕಾದ ರಾಮಚಂದ್ರ ಜೋಷಿಯವರು ಅವರ “ಅಕ್ಷರಗಳು ಉದುರಿದ ನೇಮ್ ಪ್ಲೇಟಿ”ನಂತೆ ಅರೆವು ಮರೆವು ಪೀಡಿತರಾಗಿರುವದನ್ನು ಹೇಳುತ್ತಾ ಜೀವನದ ವಿಪರ್ಯಾಸವನ್ನು ಬಿಚ್ಚಿಡುತ್ತಾರೆ. ಗೌರವಾನ್ವಿತ ಗೋಪಾಲಕೃಷ್ಣನ ಕಾಮುಕ ಚಾಳಿಗಳ ಬಗ್ಗೆ ಉಲ್ಲೇಖಿಸುತ್ತಾ ಮಕ್ಕಳಿಗೆ ನೀಡುವ ಕೆಟ್ಟ ಸ್ಪರ್ಶದ ಬಗ್ಗೆ ಮಾತಾಡುತ್ತಾರೆ. ರಸ್ತೆ ಬದಿ ಬದುಕುವ ಹುಚ್ಚು ಮಹಿಳೆಯಲ್ಲಿ ಮುಗ್ಧತೆ  ಹಾಗೂ  ಮನೆಗೆಲಸದವಳ ಬದುಕಿನಲ್ಲೂ ತಮ್ಮದೇ ಬದುಕಿನ ಪ್ರತಿಬಿಂಬ ನೋಡುತ್ತಾರೆ. ಜೋಗವ್ವನ ಬದುಕನ್ನು ನೋಡುತ್ತಾ ಹೆಣ್ಣಿನ ಬದುಕು ಬರಿ ಬೂದಿಯಾಗುವ ಪ್ರತೀಕ್ಷೆಯಷ್ಟೇ ಎನ್ನುವ ತೀರ್ಮಾನಕ್ಕೆ ಬರುತ್ತಾರೆ.  “The façade” ಕವನದಲ್ಲಿ ದಿನನಿತ್ಯದ ಮೂಢನಂಬಿಕೆಗಳ ಬಗ್ಗೆ ಮಾತನಾಡುತ್ತಾರೆ. ಅಷ್ಟೊಂದು ಹೊಸ ಅನುಭವಗಳನ್ನು ನೀಡದೇ ಹೋದರೂ ಈ ಭಾಗದ ಕವನಗಳು ಬದುಕಿಗೆ ಹತ್ತಿರವೆನಿಸುತ್ತವೆ.

“Lovesongs”  ವಿಭಾಗದ ಕವನಗಳು ಪ್ರೀತಿಯ ಬಗ್ಗೆ ಮಾತನಾಡುವದಕ್ಕಿಂತ ಹೆಚ್ಚು ಅದರ ಅಭಾವದ ಬಗ್ಗೆ ಮಾತನಾಡುತ್ತವೆ. ವಿವಾಹದ ಏಳು ವಚನಗಳ ಬಗ್ಗೆ ಅವರು ತಮ್ಮದೇ ಭಾಷ್ಯ ಬರೆಯುತ್ತಾರೆ. ಮದುವೆಯ ಮೊದಲ ಕೆಲ ದಿನಗಳ ಬಗ್ಗೆ ಮಾತನಾಡುತ್ತ ಪ್ರತಿ ನಿಯಮ ಪದ್ದತಿಗಳು ಹೇಗೆ ವರನ ಕಡೆ ವಾಲಿರುತ್ತವೆ ಎಂದು ಹೇಳುತ್ತಾರೆ. ಪುರುಷ ಪ್ರಾಧಾನ್ಯದ ಅನುಭವ ಪ್ರಥಮ ದಿನದಿಂದಲೇ ಅನುಭವಕ್ಕೆ ಬರುತ್ತದೆ ಸ್ತ್ರೀಗೆ. ಮೂರ್ಖತನವು ಸೋಲಲು ಕಲಿತ ಮಹಿಳೆಯ ಲಕ್ಷಣ ಎಂಬ ತತ್ವಜ್ಞಾನ ನೀಡುತ್ತ  “Untangling is easy Just that I don’t know how to unlove”  ಎನ್ನುತ್ತಾ  ಪ್ರೀತಿಯ ಅಸಹಾಯಕತೆಯ ಕೆಳಗೆ ರೇಖೆ ಎಳೆಯುತ್ತಾರೆ.

‘Everydays’  ವಿಭಾಗದಲ್ಲಿರುವ ಕವನಗಳಲ್ಲಿ ಬಣ್ಣಗಳ ಬಗೆಗಿನ ಯಾದೃಚ್ಛಿಕ ಆಲೋಚನೆಗಳು ಪ್ರಾಪಂಚಿಕ ದಿನಚರ್ಯದ ನಿರರ್ಥಕತೆಯನ್ನು ಎತ್ತಿ ತೋರಿಸುತ್ತವೆ.

ಹಳದಿ – ಕಾಮಾಲೆಯಿಂದಾದ ಸಾವು
ನೀಲಿ – ಶಿವನ ವಿಷಭರಿತ ಕತ್ತು, ಅಪ್ಪ ನೀಡಿದ ಏಟು
ಕೆಂಪು – ವಿವಾಹಿತ ಜೀವನದ ಪೂರ್ವನಿಯೋಜಿತ ಮಿಲನ

ಒಂದು ಬಣ್ಣ ಎಷ್ಟೊಂದು ಆಲೋಚನೆಗಳಿಗೆ ನಿಮ್ಮನ್ನು ದೂಡಬಹುದು?
ಬಣ್ಣಗಳೊಂದಿಗೆ ನಿಮ್ಮ ಎಷ್ಟೊಂದು ನೆನಪುಗಳು ಸೇರಿಕೊಂಡಿರಬಹುದು?
ಬಣ್ಣಗಳು ನಮ್ಮ ಬದುಕಿನ ಎಷ್ಟೊಂದು ಸಿಹಿ ಕಹಿ ಸತ್ಯಗಳನ್ನು ಬಿಚ್ಚಿಡಬಹುದು?
ಇವೆಲ್ಲದಕ್ಕೂ ನೀವು ಉತ್ತರ ಪಡೆಯುತ್ತೀರಿ, ಬಣ್ಣಗಳ ಬಗ್ಗೆ ಇವರು ಬರೆದ ಪ್ರತಿಯೊಂದು ವಾಕ್ಯದಲ್ಲಿ.

ಇಲ್ಲಿ ಹುಮ್ಮಸ್ಸಿಗಿಂತ ಹತಾಶೆಯ ಛಾಯೆಗಳೇ ಹೆಚ್ಚು. ಹುಟ್ಟುಹಬ್ಬವು ಶೂನ್ಯತೆಯನ್ನು ತುಂಬಿ ಸಾವನ್ನು ಜ್ಞಾಪಿಸುತ್ತದೆ. ಕಲ್ಲು ಸಂವೇದನೆಯಿಲ್ಲದ ಜೀವನ ಸಂಗಾತಿಯ ಹೃದಯಕ್ಕೆ ರೂಪಕವಾಗುತ್ತದೆ.  ಆದರೆ ಓದುತ್ತ ಸಾಗಿದಾಗ ಆ ಹತಾಶೆಗಳು ಮೂಡಿಸುವ ಅಚ್ಚರಿ ಓದುಗನನ್ನು ಮುದಗೊಳಿಸುತ್ತವೆ. ಓದುತ್ತಲೇ ಇರಬೇಕು ಅನಿಸುತ್ತದೆ. ಓದಿ ಮುಗಿಸಿದ ಮೇಲೆ ಮತ್ತೊಮ್ಮೆ ಓದಬೇಕೆನಿಸುವ ಸರಳ ನಿರ್ಣಯ ಓದುಗನದ್ದಾಗುತ್ತದೆ. ಅವರ ಲೇಖನಿಯಲ್ಲಿ ಅಪಾರ ಸಾಧ್ಯತೆಗಳಿರುವದಂತೂ ಎದ್ದು ಕಾಣಿಸುತ್ತದೆ. ಇನ್ನೂ ಆಳ, ಇನ್ನೂ ಎತ್ತರ, ಇನ್ನಷ್ಟು ವಿವಿಧ ಆಯಾಮಗಳನ್ನು ಅವರಿಂದ ಮುಂದಿನ ದಿನಗಳಲ್ಲಿ ಅಪೇಕ್ಷಿಸೋಣ.

ಇದೊಂದು ವಿಸ್ಮಯಕಾರಿ ಕಾಮನಬಿಲ್ಲು; ನೋಡಿದಂತೆ ನೋಡಿದಂತೆ ಇನ್ನಷ್ಟು ಬಣ್ಣಗಳು ಕಾಣಿಸುತ್ತ ಹೋಗುತ್ತವೆ. ಇದು ಒಂದು ರಾಗಬದ್ಧ ಅಪಸ್ವರಗಳ ತಂತಿಯ ವೀಣೆ. ಬನ್ನಿ ಮೀಟುತ್ತಾ ಸಾಗಿ!