- ಮೈಖೇಲ್ ಜಾಕ್ಸನ್ ಎಂಬ ಲೋಕ ಕಂಡ ಮಾಂತ್ರಿಕ - ಡಿಸಂಬರ್ 21, 2021
- ಪ್ರೀತಿ ಹಂಚುತ ಸಾಗು - ನವೆಂಬರ್ 24, 2021
- ನನ್ನ ಕವಿತೆಗಳಿಗೊಂದಷ್ಟು ಜಾಗ ನೀಡಿ - ನವೆಂಬರ್ 3, 2021
ಯಾರ ಹೆಸರು ಕಿವಿಗೆ ಬಿದ್ದೊಡನೆ ಎದೆಯಲ್ಲಿ ಪ್ರತಿಧ್ವನಿ ಮಾರ್ದನಿಸುವುದೋ… ಯಾರ ನೃತ್ಯಕ್ಕೆ ಮೈ ಪುಳಕಿತಗೊಂಡು ತಂತಾನೆ ನರ್ತಿಸುವುದೋ… ಯಾರ ಸಂಗೀತ ಸುಧೆಗೆ ಮನಸ್ಸು ರೋಮಾಂಚನಗೊಂಡು ಭಾವಪರವಶವಾಗುವುದೋ… ಯಾರ ಗಾನಕ್ಕೆ ಜಗವೆಲ್ಲ ತಲೆದೂಗಿ, ಹುಚ್ಚೆದ್ದು ಹೃದ್ಘೋಷ ಮೊಳಗುವುದೋ…
ಆತನೇ “ಮೈಖೇಲ್ ಜಾಕ್ಸನ್”. ನೃತ್ಯ ಕಲಾವಿದರ ಇಷ್ಟದೈವ, ಸಂಗೀತ ಮಾಂತ್ರಿಕ, ಮೈನೆವರೇಳಿಸುವ ಹಾಡುಗಾರ, ಪಾಪ್ ಲೋಕದ ಮೇರು ನಕ್ಷತ್ರ.
ತನ್ನ ವಿಶಿಷ್ಟವಾದ ನೃತ್ಯ ಸಂಯೋಜನೆ, ವಿಭಿನ್ನವಾದ ಹಾಡುಗಾರಿಕೆ, ವೈವಿಧ್ಯಮಯವಾದ ಪೋಷಾಕು, ನೋಟ, ಬದುಕು ಎಲ್ಲದರ ಮುಖಾಂತರ ದೇಶ – ಭಾಷೆಗಳ ಹಂಗಿಲ್ಲದೆ ಯಾರು ಕೇಳರಿಯದ, ಊಹಿಸಲು ಸಾಧ್ಯವಾಗದ ಸ್ಥಾಯಿಗೆ ಸ್ವಂತ ಪರಿಶ್ರಮ, ಶ್ರದ್ಧೆ ಹಾಗು ಪ್ರತಿಭೆಯಿಂದ ತಲುಪಿದವನು. ಜಗದ ಮೂಲೆಮೂಲೆಯಲ್ಲಿರುವ ಅಸಂಖ್ಯಾತ ಅಭಿಮಾನಿಗಳ ಹೃದಯ ಸಿಂಹಾಸನಾಧಿಪತಿಯಾಗಿ ಮೆರೆದವನು; ಇಂದಿಗೂ ಮೆರೆಯುತ್ತಿರುವನು. ನಿಜಕ್ಕೂ ಮಾಯಾವಿಯೇ ಇರಬೇಕು ಅವನು.
ಬಡತನದಲ್ಲಿ ಹುಟ್ಟಿ, ಹಸಿವು ಹಾಗೂ ಕಷ್ಟಗಳನ್ನು ಕಂಡುಂಡು ಅನುಭವಿಸಿದ ಮೈಖೇಲ್ ಜಾಕ್ಸನ್ ತನ್ನ ಹಾಡಿ – ಕುಣಿಯುವ, ಸಾಹಿತ್ಯ ರಚನೆ ಮತ್ತು ಸಂಗೀತದ ಸಂಯೋಜನೆಯ ಬಹುಮುಖ ಪ್ರತಿಭೆಯಿಂದಾಗಿ ಬಡತನದ ಬೇಲಿ ದಾಟಿ, ಕಷ್ಟಗಳ ಎಲ್ಲೆ ಮೀರಿ ಶ್ರೀಮಂತನಾಗಿ, ಸುಖಪುರುಷನಾಗಿ ಬದಲಾದಂತೆ ಮಹತ್ವಾಕಾಂಕ್ಷಿಯೂ ಆದ. ಎಷ್ಟರಮಟ್ಟಿಗೆ ಅಂದರೆ, ಸಾವನ್ನೂ ಗೆಲ್ಲುತ್ತೇನೆ; ಮೆಟ್ಟಿ ನಿಲ್ಲುತ್ತೇನೆ ಎಂದು ಸಾವಿಗೆ ಸವಾಲು ಹಾಕುವಷ್ಟರ ಮಟ್ಟಿಗೆ!
ನೂರ ಐವತ್ತು ವರುಷ ಬದುಕಬೇಕೆಂಬ ಅತಿ ಆಸೆಯಿಂದಾಗಿ ಮೈಖೇಲ್ ಮಾಡಿಕೊಂಡ ಸಿದ್ಧತೆಗಳು ಅಷ್ಟಿಷ್ಟಲ್ಲ. ಅದಕ್ಕಾಗಿ ನುರಿತ ಹನ್ನೆರಡು ಮಂದಿ ವೈದ್ಯರನ್ನು ತನ್ನ ದೈನಂದಿನ ತಪಾಸಣೆಗಾಗಿ ನೇಮಿಸಿಕೊಂಡಿದ್ದ. ತನ್ನ ಮನೆಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಟ್ಟ ನಂತರವೇ ದಿನನಿತ್ಯದ ಆಹಾರ ಸೇವಿಸುತ್ತಿದ್ದ. ವ್ಯಾಯಾಮ ಕ್ಕಾಗಿ ಹದಿನೈದು ಜನ ತರಬೇತುದಾರರನ್ನು ಮತ್ತು ಇನ್ನಿತರೆ ಕೆಲಸಕಾರ್ಯಗಳಿಗಾಗಿ ಮತ್ತಷ್ಟು ಜನರನ್ನು ನೇಮಿಸಿಕೊಂಡಿದ್ದ. ಮಲಗುವ ಹಾಸಿಗೆಯಲ್ಲಿ ಆಮ್ಲಜನಕ ನಿಯಂತ್ರಣಕ್ಕಾಗಿ ತಂತ್ರಜ್ಞಾನದ ವ್ಯವಸ್ಥೆಯನ್ನು ಮಾಡಿಸಿಕೊಂಡಿದ್ದ. ಇಷ್ಟು ಸಾಲದೆಂಬಂತೆ ಭವಿಷ್ಯದಲ್ಲಿ ತನ್ನ ಆರೋಗ್ಯದಲ್ಲಿ ಆಗಬಹುದಾದ ಯಾವುದೇ ತೊಂದರೆಗೆ ಮುಂದಾಲೋಚನೆಯಿಂದ ಅಂಗದಾನಿಗಳನ್ನು ಹೆಚ್ಚು ಹಣ ನೀಡಿ ಖರೀದಿಸಿದ್ದ.
ಮೈಖೇಲ್ ಜಾಕ್ಸನ್ – ‘1958 ಆಗಸ್ಟ್ 29’ ನೇ ತಾರೀಕು ಅಮೆರಿಕಾದ ಚಿಕಾಗೋ ಹತ್ತಿರದ ಗ್ಯಾರಿ(Gary, Indiana, U.S.) ಎಂಬ ನಗರದಲ್ಲಿ, ಆಫ್ರೋ ಅಮೆರಿಕನ್ ಕುಟುಂಬದಲ್ಲಿ ಜನಿಸಿದನು. ತಂದೆ ‘ಜೋಸೆಫ್ ಜಾಕ್ಸನ್(Joseph Jackson), ತಾಯಿ ಕ್ಯಾಥರೀನ್ ಜಾಕ್ಸನ್ (Katherine Jackson).’ ಒಟ್ಟು ಒಂಭತ್ತು ಮಕ್ಕಳಲ್ಲಿ ಮೈಕಲ್ ಜಾಕ್ಸನ್ ಏಳನೆಯವನು. ಜಾಕ್ಸನ್ ನ ಅಪ್ಪ ಜೋಸೆಫ್ ಗೆ ಮಹಾನ್ ಗಿಟಾರಿಸ್ಟ್ ಆಗಬೇಕೆಂಬ ಬಯಕೆ ಇತ್ತು. ಆದರೆ ತನ್ನ ಕುಟುಂಬದ ಪೋಷಣೆಯ ಜವಾಬ್ದಾರಿಯ ಕಾರಣದಿಂದಾಗಿ ತನ್ನ ಬಯಕೆಯ ಬದಿಗಿರಿಸಿ ಜೋಸೆಫ್ ಒಂದು ಸ್ಟೀಲ್ ಕಂಪನಿಯನ್ನು ಸೇರಿಕೊಂಡನು. ತನ್ನ ಮಕ್ಕಳನ್ನಾದರೂ ಸಂಗೀತಗಾರರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಚಿಕ್ಕವಯಸ್ಸಿನಿಂದಲೆ ತನ್ನ ಐದು ಮಕ್ಕಳಿಗೆ ಸಂಗೀತ ಕಲಿಸಿದನಾದರೂ…. ತಾನು ಅಂದುಕೊಂಡದನ್ನು ಸಾಧಿಸಲಾರದ ಬೇಸರ, ಕೋಪ, ಅಸಹಾಯಕತೆ ಮತ್ತು ಹತಾಶ ಭಾವನೆಯಿಂದ ತನ್ನ ಮಕ್ಕಳನ್ನು ಮನಸೋಯಿಚ್ಛೆ ಥಳಿಸುತ್ತಿದ್ದನು; ಜೊತೆಗೆ ಕ್ರೂರವಾಗಿ ಮತ್ತು ಹೀನವಾಗಿ ನಡೆಸಿಕೊಳ್ಳುತ್ತಿದ್ದನು. ಮಕ್ಕಳು ಆತ ಹೇಳಿದಂತೆ ಹಾಡದಿದ್ದರೆ, ಮಾತನ್ನು ಕೇಳದಿದ್ದರೆ ಬೆಲ್ಟಿನಿಂದ ಹೊಡೆಯುವುದು, ಗೋಡೆಗೆ ಮಸೆಯುವುದು, ಕಾಲಿನಿಂದ ತುಳಿದು ಹಿಂಸಿಸುವುದನ್ನು ಮಾಡುತ್ತಿದ್ದನು. ಹೀಗೆ ಮೈಕಲ್ ಜಾಕ್ಸನ್ ತನ್ನ ಬಾಲ್ಯದಲ್ಲಿ ಹಿಂಸೆಗೆ ಗುರಿಯಾದನು. ಹೀಗಿದ್ದರೂ ತಂದೆ ತಾಯಿಯರಿಬ್ಬರಿಗೂ ತಮ್ಮ ಮಕ್ಕಳ ಪ್ರತಿಭೆಯ ಬಗ್ಗೆ ನಂಬಿಕೆ ಇತ್ತು. ಹಾಗಾಗಿಯೇ 1965 ರಲ್ಲಿ ಐದುಗರು ಮಕ್ಕಳನ್ನು ಒಂದು ಸಂಗೀತದ ಗುಂಪಾಗಿಸಿ, ಅದಕ್ಕೆ “ದಿ ಜಾಕ್ಸನ್ ಫೈವ್(The Jackson 5)” ಎಂದು ನಾಮಕರಣ ಮಾಡಿ, ಸುತ್ತಮುತ್ತಲಲ್ಲಿ ಸ್ಥಳೀಯ ಪ್ರದರ್ಶನ ಕೊಡಿಸುತ್ತಿದ್ದನು. ಆ ಸಮಯದಲ್ಲಿ ಮೈಕಲ್ ಜಾಕ್ಸನ್ ನ ವಯಸ್ಸು ಕೇವಲ ಐದು ವರ್ಷಗಳು. ಆ ಐದುಗರು ಅಣ್ಣ ತಮ್ಮಂದಿರಲ್ಲಿ ಅತ್ಯಂತ ಕಿರಿಯನಾದ ಮೈಕಲ್ ನ ಧ್ವನಿ ಮತ್ತು ಅಭಿನಯ ಚೆನ್ನಾಗಿರುತ್ತಿತ್ತು. ಈ ಐದುಗರೂ ಹಲವು ಗಂಟೆಗಳ ಕಾಲ ಹಗಲು ರಾತ್ರಿ ಎನ್ನದೆ ಅಭ್ಯಾಸಿಸಿ, ಪೂರ್ವ ತಯಾರಿ ನಡೆಸಿ, ವೇದಿಕೆಗಳ ಮೇಲೆ ಪ್ರದರ್ಶನಗಳನ್ನು ನೀಡುತ್ತಿದ್ದರು. ಆದರೆ ಆ ಸಮಯದಲ್ಲಿ ಅಮೇರಿಕದಲ್ಲಿ ವರ್ಣ ತಾರತಮ್ಯ ಇದ್ದು, ಕರಿಯ ಜನಾಂಗದವರನ್ನು ಸಮಾಜದಲ್ಲಿ ಅಸಡ್ಡೆಯಿಂದ ಕಾಣಲಾಗುತ್ತಿತ್ತು, ತುಚ್ಛವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಹೆಚ್ಚಿನ ಸಮಯ ಹೊರಗಡೆ ಎಲ್ಲರೊಂದಿಗೆ ಬೆರೆಯುವ ಮತ್ತು ಓಡಾಡುವ ಸ್ವಾತಂತ್ರ್ಯವೂ ಸಹ ಕರಿಯರಿಗೆ ಇರಲಿಲ್ಲ. ಅಂತೆಯೇ ಗೌರವ ಮರ್ಯಾದೆಗಳೂ ಇರಲಿಲ್ಲ. ಹಾಗಾಗಿ ಜಾಕ್ಸನ್ ಫೈವ್ ತಂಡ ಮೊದಮೊದಲು ಕೇವಲ ತಮ್ಮ ಜನಾಂಗದವರ ಮಧ್ಯೆಯೇ ಸಂಗೀತ ಪ್ರದರ್ಶನ ನೀಡುತ್ತಿದ್ದರು. ಆದರೆ ಇವರ ಅಸಾಧಾರಣ ಪ್ರತಿಭೆಯಿಂದ ಬಿಳಿಯರನ್ನು ಸಹ ಸೆಳೆಯುವಲ್ಲಿ ಯಶಸ್ವಿಯಾದರು.
ಹೀಗೆ 1968 ರಲ್ಲಿ ‘ಮೋಟೌನ್(Motown)’ ಎಂಬ ಮ್ಯೂಸಿಕ್ ಕಂಪೆನಿಯೊಂದಿಗೆ ಜಾಕ್ಸನ್ 5 ಗೆ ಒಂದು ಒಪ್ಪಂದ ಕುದುರಿತು. ಈ ರೀತಿ ಮೊದಲ ಬಾರಿಗೆ ಸಂಗೀತ ಲೋಕಕ್ಕೆ ಪರಿಚಯಿಸಲ್ಪಟ್ಟು ಜಾಕ್ಸನ್ 5 ಯಿಂದ ಹೊರಬಂದ “ಐ ವಾಂಟ್ ಯು ಬ್ಯಾಕ್(I want you back), ದಿ ಲವ್ ಯು ಸೇವ್(The love you save) ಮತ್ತು ಐ ವಿಲ್ಲ ಬಿ ದೇರ್(I’ll be there), ಎ ಬಿ ಸಿ(ABC) … ಹೀಗೆ ಎಲ್ಲಾ ಆಲ್ಬಂಗಳು ಸಹ ಯಶಸ್ವಿಯಾದವು. ಆದರೆ ಜಾಕ್ಸನ್ ತಾನು ಗುರುತಿಸಿಕೊಳ್ಳಬೇಕೆಂಬುವ ಇರಾದೆಯಿಂದ ಸ್ವತಃ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಲಾರಂಭಿಸಿದನು. ಆ ಸಂದರ್ಭದಲ್ಲಿ ನೀಡಿದ “ಬೆನ್(Ben), ಮ್ಯೂಸಿಕ್ ಅಂಡ್ ಮಿ(music & me), ಫಾರೆವರ್ ಮೈಕಲ್(forever Michelle), ಆಫ್ ದಿ ವಾಲ್(off the wall)” ಪ್ರದರ್ಶನಗಳು ಎಲ್ಲರ ಮನಸೂರೆಗೊಂಡು, ಮೈಕಲ್ ಜಾಕ್ಸನ್ ಗೆ ಅಂತಾರಾಷ್ಟ್ರೀಯ ಸ್ಟಾರ್ ಪಟ್ಟ ತಂದುಕೊಟ್ಟವು.
ಆ ನಂತರ 1982 ರಲ್ಲಿ ಬಿಡುಗಡೆಯಾದ “ಥ್ರಿಲ್ಲರ್(Thriller)” ಆಲ್ಬಂ 65 ಮಿಲಿಯನ್ ಕಾಪಿಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿ, ಬೆಸ್ಟ್ ಸೆಲ್ಲಿಂಗ್ ಆಲ್ಬಂ ರೆಕಾರ್ಡ್ ಸೃಷ್ಟಿಸಿತು. ಇಂದಿಗೂ ಆ ಸಾಧನೆಯನ್ನು ಸರಿಗಟ್ಟಲು ಯಾರಿಂದಲೂ ಸಾಧ್ಯವಾಗಿಲ್ಲ. ಮುಖ್ಯವಾಗಿ ಇದೊಂದು ಆಲ್ಬಂಗೆ ಏಳು “ಗ್ರಾಮ್ಮಿ ಅವಾರ್ಡ್(Grammy award)” ಬಂದದ್ದು ವಿಶೇಷ. 1983 ರಲ್ಲಿ “ಬಿಲ್ಲಿ ಜಿಯಾನ್(Billi jean)” ಎಂಬ ನೇರಪ್ರದರ್ಶನದಲ್ಲಿ ಮೈಖೇಲ್ ಜಾಕ್ಸನ್ ಹಾಕಿದ “ಮೂನ್ ವಾಕ್ ಸ್ಟೆಪ್(Moon walk step)” ಹೊಸ ಸಂಚಲನವನ್ನೇ ಸೃಷ್ಟಿಸಿದ್ದು ಎಲ್ಲರಿಗೂ ತಿಳಿದ ವಿಷಯವೇ ಆಗಿದ್ದು, ಆ ಸಮಯದಲ್ಲಿ ಆವೊಂದು ದೃಶ್ಯವನ್ನು ಪುನರಾವರ್ತನೆ ಮಾಡಿ ನೋಡಿ ಮತ್ತೆ ಮತ್ತೆ ಬೆರಗಾಗಿ ಆನಂದಿಸಿದ್ದು ಈಗ ಇತಿಹಾಸ. ಅಷ್ಟೇ ಅಲ್ಲದೆ ಇಂದಿಗೂ ಸಹ ಜಗತ್ತಿನ್ಯಾದಂತ ಮೂನ್ ವಾಕ್ ನಡಿಗೆಯನ್ನು ಅನುಕರಿಸುತ್ತಲೇ ಇದ್ದಾರೆ.
ಅದೇ ರೀತಿ 1991 ರಲ್ಲಿ ಬಿಡುಗಡೆಯಾದ “ಡೆಂಜರಸ್(Dangerous)” ಆಲ್ಬಂ ಒಂದು ಸಂಚಲನವೇ ಸರಿ. ಮೈಖೇಲ್ ನ ಹಾಡು ಮತ್ತು ನೃತ್ಯದ ಕುರಿತು ಎಷ್ಟೇ ವರ್ಣಿಸಿದರೂ ಕಡಿಮೆಯೇ. ಬಿಡುಗಡೆಯಾದ ಪ್ರತಿ ಅಲ್ಬಂ ರೆಕಾರ್ಡ್ ಜೊತೆಗೆ ಅವಾರ್ಡ್ ಗಳನ್ನು ಸಹ ತಂದುಕೊಡುತ್ತಿತ್ತು.
ಸಂಗೀತ ಲೋಕದಲ್ಲಿರುವವರಿಗೆ, ಪ್ರತಿಷ್ಠಿತ “ಗ್ರಾಮ್ಮಿ(Grammy) ಪ್ರಶಸ್ತಿ” ಒಂದು ಮಹತ್ವಪೂರ್ಣ ಕನಸು. ಕನಿಷ್ಠ ಪಕ್ಷ ಒಂದು ಗ್ರಾಮ್ಮಿ ಪ್ರಶಸ್ತಿ ಪಡೆದುಕೊಂಡರೆ ಅದನ್ನೇ ಜೀವಮಾನದ ಸಾಧನೆ ಎಂದು ಬಿಂಬಿಸಲಾಗುತ್ತದೆ. ಅಂಥದ್ದರಲ್ಲಿ ಮೈಕೆಲ್ ಗೆ ಒಂದಲ್ಲ, ಎರಡಲ್ಲ ಒಟ್ಟು “13 ಗ್ರಾಮ್ಮಿ ಪ್ರಶಸ್ತಿಗಳು, 16 ಶ್ರೇಷ್ಠ ಸಂಗೀತಗಾರ ಪ್ರಶಸ್ತಿಗಳು(world music awards), 39 ವಿಶ್ವ ಗಿನ್ನಿಸ್ ದಾಖಲೆಗಳು(world ginnice book records)”, ಹೀಗೆ ಚಿಕ್ಕ ದೊಡ್ಡ ಪ್ರಶಸ್ತಿಗಳು ಸೇರಿ ಒಟ್ಟಾರೆಯಾಗಿ 317 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಸಂಗೀತ ಜಗತ್ತಿನಲ್ಲಿ ಮೈಕಲ್ ಪಡೆದ ಸ್ಥಾನ ಮತ್ತು ಆತನ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಹಾಗಾಗಿಯೇ ಇಂದಿಗೂ ಮೈಕಲ್ ಅಂದರೆ “ಪಾಪ್ ಲೋಕದ ದೊರೆ(King of pop)” ಎಂದು ಪ್ರೀತಿಯಿಂದ ನೆನೆಯಲಾಗುತ್ತದೆ.
1980 ರ ನಂತರ ಮೈಕಲ್ ನ ರೂಪ ಬದಲಾಗುತ್ತಾ ಬಂದಿತು. ಮೈಕಲ್ ಗೆ ಕರಿಯನಾಗಿರುವುದು ಇಷ್ಟವಿಲ್ಲದ ಕಾರಣ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾನೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮೈಖೇಲ್ ನ ಮುಖದ ಮೇಲೆ ‘ವಿಟಿಲಿಗೋ(Vitiligo)’ ಎಂಬ ಚರ್ಮ ಸಂಬಂಧಿ ಖಾಯಿಲೆಯ ನಿಮಿತ್ತ ಗುಳ್ಳೆಗಳು ಬಂದು, ಬಿಳಿಯ ಮಚ್ಚೆಗಳು ಸೃಷ್ಠಿಯಾದ ಕಾರಣ ಶಸ್ತ್ರಚಿಕಿತ್ಸೆಗೆ ಗುರಿಪಡಿಸಿಕೊಳ್ಳಬೇಕಾಯಿತೆ ಹೊರತು ‘ಕರಿಯ’ ಎಂದು ಅನಿಸಿಕೊಳ್ಳದಿರಲು ಅಲ್ಲ, ಎಂಬ ಸತ್ಯವನ್ನು ಸ್ವತಃ ತಾನೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದನು. ಅಷ್ಟೇ ಅಲ್ಲದೆ, ತನಗೆ ಕಪ್ಪು ಬಣ್ಣ ಪ್ರಿಯವಾದುದು ಎಂದು, ತಾನು ಕಪ್ಪು ಜನಾಂಗದಲ್ಲಿ ಜನಿಸಿದಕ್ಕಾಗಿ ಗರ್ವ ಪಡುತ್ತೇನೆ ಎಂದು ಉತ್ತರಿಸಿದ್ದನು.
1979ರಲ್ಲಿ ಒಮ್ಮೆ ಜಾಕ್ಸನ್ ನೃತ್ಯ ಮಾಡುವಾಗ ಆಯ ತಪ್ಪಿ ಕೆಳಗೆ ಬಿದ್ದ ಕಾರಣಕ್ಕೆ, ಆತನ ಮೂಗಿಗೆ ಪೆಟ್ಟಾಗಿ ಶಸ್ತ್ರಚಿಕಿತ್ಸೆಗೆ ಒಳಗಾದನು. ಆದರೆ ಅದು ಯಶಸ್ವಿಯಾಗದೆ, ಮೂಗಿನ ಒಂದು ಹೊಳ್ಳೆ ಸ್ವಲ್ಪ ಮಟ್ಟಿಗೆ ಮುಚ್ಚಿಹೋದ ಕಾರಣಕ್ಕೆ, ಸರಿಯಾಗಿ ಉಸಿರಾಡಲು ಸಾಧ್ಯವಾಗದೆ ತೊಂದರೆಗೆ ಒಳಗಾಗಿ 1981ರಲ್ಲಿ ಪುನಃ ಮೂಗಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡನು.
ಹೀಗೆ ಒಮ್ಮೆ 1984 ರಲ್ಲಿಯೂ ವೇದಿಕೆಯ ಮೇಲೆ ಪ್ರದರ್ಶನ ನೀಡುವಾಗ, ಬೆಂಕಿಯ ಅವಘಡ ಸಂಭವಿಸಿ ಮೈಕಲ್ ನ ತಲೆಗೂದಲಿಗೆ ಬೆಂಕಿ ತಗುಲಿ ಭಾಗಶಃ ಕೂದಲೆಲ್ಲ ಸುಟ್ಟಿಹೋಯಿತು. ಹೀಗೆ ವಿವಿಧ ಕಾರಣಗಳಿಂದಾಗಿ ಎಷ್ಟೋ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳಬೇಕಾಯಿತು. ಇಂತಹ ಅನಾರೋಗ್ಯದ ಬಾಧೆಯಲ್ಲೂ ಸಹ ಹಲವು ದೇಶಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಿದ್ದನು. ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದನು. ಹೀಗೆ ಬಿಡುಗಡೆಯಾದ ಪ್ರತಿಯೊಂದು ಅಲ್ಬಂ ಮಿಲಿಯನ್ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದ ಕಾರಣ ಹೆಸರಿನೊಂದಿಗೆ ಅಪಾರ ಹಣವನ್ನು ಸಹ ಸಂಪಾದಿಸಿದನು. ಆದರೆ ತಾನು ಮಾತ್ರ ಗಳಿಸಿದ ಪ್ರತಿಷ್ಠೆಯನ್ನು ಅನುಭವಿಸದೆ ಹೋದನು. ಬಾಲ್ಯದಲ್ಲಿ ತನ್ನ ತಂದೆ ನೀಡಿದ ಕಿರುಕುಳದಿಂದಾಗಿ ಬಾಲ್ಯವೆಲ್ಲಾ ಒಂದು ಸೆರೆಯ ಜೀವನವಾಗಿ ಕಳೆಯಬೇಕಾಗಿ ಬಂದದ್ದು ಮೈಖೇಲ್ ಮನಸ್ಸಿನ ಮೇಲೆ ವಾಸಿಯಾಗದ ಆಘಾತವಾಗಿ ಪರಿಣಮಿಸಿತ್ತು. ತಾನು ಕಳೆದುಕೊಂಡ ಆ ಬಾಲ್ಯವನ್ನು ಮತ್ತೆ ಬದುಕಬೇಕೆಂಬ ಅದಮ್ಯ ತುಡಿತದೊಂದಿಗೆ ಕ್ಯಾಲಿಫೋರ್ನಿಯಾದಲ್ಲಿ 2700 ಎಕರೆಯ ಭೂಮಿಯಲ್ಲಿ ಮಕ್ಕಳಿಗಾಗಿ “ನೇವರ್ ಲ್ಯಾoಡ್” ಎಂಬುವ ಉದ್ಯಾನ, ಆಟದ ಮೈದಾನ, ಈಜುಕೊಳ, ಮೃಗಾಲಯ, ವಿಡಿಯೋ ಗೇಮ್ಸ್, ಸಿನೆಮಾ ಹಾಲ್ ಹೀಗೆ ಒಂದು ಕೃತಕ ಲೋಕವನ್ನೆ ಸೃಷ್ಟಿಸಿದನು.
ಮೈಕಲ್ ಹೆಚ್ಚಿನ ಸಮಯವನ್ನು ನೇವರ್ ಲ್ಯಾoಡಿನಲ್ಲಿಯೇ ಒಂಟಿಯಾಗಿ ಕಳೆಯಬಯಸುತ್ತಿದ್ದನಂತೆ. ವಾರಕ್ಕೊಮ್ಮೆ ನೂರಾರು ಮಕ್ಕಳನ್ನು ಕರೆಸಿ, ಅವರೊಂದಿಗೆ ತಾನು ಮಗುವಾಗಿ ಆಟವಾಡಿ, ಅವರಿಗೆ ಇಷ್ಟವಾಗುವ ತಿನಿಸುಗಳ ಆಹಾರ ಕೂಟಗನ್ನು ಏರ್ಪಡಿಸುತ್ತಿದ್ದನು. ಮೈಖೇಲ್ ನ ವ್ಯಕ್ತಿಗತ ಖರ್ಚುಗಳು ಹಾಗೂ ನೇವರ್ ಲ್ಯಾoಡಿನ ಉಸ್ತುವರಿಗಾಗಿ ಸುಮಾರು 18 ಕೋಟಿಗೂ ಹೆಚ್ಚು ಹಣವನ್ನು ವ್ಯಯಿಸುತ್ತಿದ್ದನು. ಮೈಖೇಲ್ ಚಿಕ್ಕಮಕ್ಕಳ ಮನಸ್ಥಿತಿಯವನು, ವೇದಿಕೆಯ ಮೇಲೆ ತನ್ನ ನೃತ್ಯ ಹಾಗೂ ಸಂಗೀತದಿಂದ ಅಸಂಖ್ಯಾ ಅಭಿಮಾನಿಗಳನ್ನು ಮಂತ್ರಮುಗ್ಧನಾನಾಗಿಸುತ್ತಿದ್ದವನು, ವೇದಿಕೆ ಇಳಿದ ಕೂಡಲೇ ಸಂಕೋಚ ಮತ್ತು ಅಂಜಿಕೆಯಿಂದ ವರ್ತಿಸುತ್ತಿದ್ದನು.
ಸಮಯ ಸಿಕ್ಕಾಗಲೆಲ್ಲಾ ಮಕ್ಕಳೊಂದಿಗೆ ಕಾಲಕಳೆಯುತ್ತಿದ್ದ ಜಾಕ್ಸನ್ ಬೇರೆ ಸಮಯದಲ್ಲಿ ಒಂಟಿಯಾಗಿಯೇ ಇರುತ್ತಿದ್ದನು.
“ಇಡೀ ಜಗತ್ತಿನಲ್ಲಿಯೇ ತನಗಿಂತ ಒಂಟಿ ಯಾರೂ ಇಲ್ಲ!” ಎಂದು ಹಲವು ಬಾರಿ ಹೇಳಿಕೊಂಡಿದ್ದಾನೆ. ತನ್ನ ಒಂಟಿತನವನ್ನು ಹೋಗಲಾಡಿಸಿಕೊಳ್ಳಲು ಮಕ್ಕಳನ್ನು ತನ್ನೊಂದಿಗೆ ಮಲಗಿಸಿಕೊಳ್ಳುತ್ತಿದ್ದನು. ಇದೇ ಸಮಯದಲ್ಲಿಯೇ ಮೈಖೇಲ್ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳಿತ್ತಿದ್ದಾನೆ ಎಂಬ ಆರೋಪಗಳು ಅವನ ವಿರುದ್ಧ ಹುಟ್ಟಿಕೊಂಡವು. ಆದರೆ ಆ ಆರೋಪಗಳೆಲ್ಲ ಸುಳ್ಳು ಎಂದು ನಿರಾಕರಿಸಿದನು. ತನಗೆ ಮಕ್ಕಳ ಮೇಲಿರುವುದು ನಿರ್ಮಲ ಪ್ರೇಮವಷ್ಟೇ; ಬೇರಾವುದೇ ಉದ್ದೇಶವಿಲ್ಲ ಎಂದು ವಾದಿಸಿದನು. ಆದರೆ ನ್ಯಾಯಾಲಯ ಕೇಳಲಿಲ್ಲ. ಕೆಲವು ಕೋಟಿಗಳಷ್ಟು ಹಣವನ್ನು ಮೈಖೇಲ್ ಮಾಡಿದ ಅಪರಾಧಕ್ಕೆ ದಂಡವಾಗಿ ಆ ಮಗುವಿಗೆ ಹಣ ತೆರಬೇಕೆಂದು ಆದೇಶ ಹೊರಡಿಸಿತು. ಒಂದೆಡೆ ಕೋರ್ಟಿನ ಖರ್ಚುಗಳು, ಮತ್ತೊಂದೆಡೆ ನೇವರ್ ಲ್ಯಾoಡಿನ ನಿರ್ವಹಣೆಯ ಖರ್ಚುಗಳು. ಈ ಎಲ್ಲಾ ಖರ್ಚುಗಳಿಂದಾಗಿ ಮೈಕಲ್ ಸಾಲಕ್ಕೆ ತುತ್ತಾದನು. 2008 ರಲ್ಲಿ ತನ್ನ ಕನಸಿನ ಕೂಸಾದ ನೇವರ್ ಲ್ಯಾoಡನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿತು. ಆ ಸಂದರ್ಭದಲ್ಲಿ “ಸೇಕಾಮೋರ್ ವ್ಯಾಲಿ ರೇಂಜ್” ಎಂಬ ಕಂಪನಿಯೊಂದು ನೇವರ್ ಲ್ಯಾoಡಿನ ಸ್ವಲ್ಪ ಭಾಗವನ್ನು ಖರೀದಿಸಿ, 220 ಕೋಟಿ ಹಣ ನೀಡಿ ಹರಾಜನ್ನು ನಿಲ್ಲಿಸಿತು. ಅಂದಿನಿಂದ ನೇವರ್ ಲ್ಯಾoಡ್, “ನೇವರ್ ಲ್ಯಾoಡ್ ರ್ಯಾಂಜ್” ಆಗಿ ಬದಲಾಗಿ ಹೋಯಿತು. ಮೈಕಲ್ 1994 ರಲ್ಲಿ ‘ಲೀಸಾ’ ಎಂಬುವವಳನ್ನು ಪ್ರೀತಿಸಿ ವರಿಸುತ್ತಾನೆ. ಆದರೆ ಮದುವೆಯ ನಂತರವೂ ಮೈಕಲ್ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದದ್ದು ಲೀಸಾಗೆ ಸರಿ ಬರುತ್ತಿರಲಿಲ್ಲ. ಆ ಕಾರಣಕ್ಕಾಗಿ ಇಬ್ಬರ ವೈವಾಹಿಕ ಸಂಬಂಧದ ನಡುವೆ ಬಿರುಕು ಏರ್ಪಟ್ಟು, 1996 ರಲ್ಲಿ ವಿಚ್ಛೇದನಕ್ಕೆ ಕಾರಣವಾಯಿತು. ಅದೇ ವರ್ಷ ತನಗೆ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ‘ಡೇ ಬಿ ರವ್’ ಎಂಬುವವಳನ್ನು ವಿವಾಹವಾಗುತ್ತಾನೆ. ಇಬ್ಬರು ಮಕ್ಕಳು ಜನಿಸುತ್ತಾರೆ. ಆದರೆ 1999 ರಲ್ಲಿ ಆ ಮದುವೆಯೂ ಮುರಿದು ಬೀಳುತ್ತದೆ. ಜಾಕ್ಸನ್ ಗೆ ಮೂರನೆ ಮಗು ಸಹ ಜನ್ಮಿಸುತ್ತದೆ. ಆದರೆ ಆ ಮಗುವಿನ ತಾಯಿ ಯಾರು? ಎಂಬ ಪ್ರಶ್ನೆಗೆ ಇಂದಿಗೂ ಉತ್ತರವಿಲ್ಲ.
ಒಂದೆಡೆ ವಿವಾಹ ವಿಚ್ಛೇದನಗಳು, ಮತ್ತೊಂದೆಡೆ ಆರೋಪಗಳು, ಊಹಾ ಪೋಹಗಳು, ಕೋರ್ಟ್ ಕೇಸುಗಳು, ಆಸ್ತಿ ನಷ್ಟ, ಅನಾರೋಗ್ಯ ಈ ಎಲ್ಲಾ ಸಮಸ್ಯೆಗಳು ಒಂದೇ ಬಾರಿಗೆ ಆವರಿಸಿದ ಕಾರಣಕ್ಕೆ ಮೈಖೇಲ್ ಹೊರ ಜಗತ್ತಿನಿಂದ ಸಂಬಂಧವನ್ನು ಕಡಿದುಕೊಂಡು ಕೋಣೆಯಲ್ಲಿ ಒಂಟಿಯಾಗಿ ಉಳಿಯುತ್ತಿದ್ದನು. ಯಾರನ್ನೂ ಭೇಟಿಯಾಗುತ್ತಿರಲಿಲ್ಲ, ನಿದಿರೆ ಬಾರದೆ ಚಡಪಡಿಸುತ್ತಿದ್ದನು. ಕ್ರಮೇಣ ನಿದಿರೆಯ ಮಾತ್ರೆಗಳಿಗೆ ಶರಣಾದನು. ಮುಖ್ಯವಾಗಿ ‘ಪ್ರೊಪೋಫೋಲ್(Propofol)’ ಎಂಬ ಅರವಳಿಕೆಯ ಔಷಧಿಯನ್ನು ಹೆಚ್ಚಾಗಿ ಬಳಸಿದ ಕಾರಣಕ್ಕಾಗಿ ಮೈಖೇಲ್ ನ ಆರೋಗ್ಯ ಮತ್ತಷ್ಟು ಝರ್ಜರಿತಗೊಂಡಿತು. ಇದರಿಂದಾಗಿ ಬಲಹೀನತೆ ಕಾಡಿ, ಮೂತ್ರಪಿಂಡಗಳೇರಡೂ ಹಾಳಾಗಿ, ಕೊನೆಗೆ 2009 ರಲ್ಲಿ ಹೃದಯಾಘಾತದಿಂದಾಗಿ, ತನ್ನ ಐವತ್ತನೇಯ ವಯಸ್ಸಿನಲ್ಲಿ ಎಲ್ಲರ ನೆಚ್ಚಿನ, ಅಚ್ಚುಮೆಚ್ಚಿನ “ಮೈಖೇಲ್ ಜಾಕ್ಸನ್” 2009 ಜೂನ್ 25 ರಂದು, ಲಾಸ್ ಏoಜಲೀಸ್(Los Angeles)ನಲ್ಲಿ ಅಸುನೀಗಿದನು.
ಸ್ವಲ್ಪಕಾಲದ ನಂತರ ತಿಳಿದ ವಿಷಯವೇನೆಂದರೆ, ಮೈಕಲ್ ಮಾದಕ ಪದಾರ್ಥಗಳನ್ನು ಸೇವಿಸುವಲ್ಲಿ ಮೈಖೇಲ್ ನ ಖಾಸಗಿ ವೈದ್ಯನಾದ ‘ಬುರ್ರೆ’ ಯ ಪಾತ್ರವಿತ್ತೆಂದು, ಅವನೇ ಮೈಕಲ್ ನ ಸಾವಿಗೆ ಕಾರಣವೆಂದು ಬುರ್ರೆಯನ್ನು ನ್ಯಾಯಾಲಯ ನಾಲ್ಕು ವರ್ಷಗಳ ಸೆರೆಮನೆವಾಸದ ಶಿಕ್ಷೆಯನ್ನು ನೀಡಿತು.
ಕೊನೆಗೆ “10 faces of Michelle Jackson” ಎಂಬ ಸಾಕ್ಷ್ಯಚಿತ್ರವೊಂದರಲ್ಲಿ, ಒಂದು ವೇಳೆ ಮೈಕಲ್ ತನ್ನ ಮುಖಕ್ಕೆ ಯಾವುದೇ ಸರ್ಜರಿ ಮಾಡಿಸಿಕೊಳ್ಳದಿದ್ದಲ್ಲಿ ಹೇಗೆ ಕಾಣುತ್ತಿದ್ದನೆಂದು, ಕಂಪ್ಯೂಟರ್ ನ ಸಹಾಯದಿಂದ ಬಿಡುಗಡೆ ಮಾಡಲಾಯಿತು.
ಮೊಟ್ಟ ಮೊದಲ ಬಾರಿಗೆ ಗಾಯಕನೊಬ್ಬನ ಅಂಚೆ ಚೀಟಿ ಹೊರಬಂದ್ದೆಂದರೆ ಅದು ಮೈಕಲ್ ಜಾಕ್ಸನ್ ನದು. ಅದು ಸಹ ಅವನು ಬದುಕಿರುವಾಗಲೇ…
ಇದರೊಂದಿಗೆ ಜಗತ್ತಿನ ಅತ್ಯುತ್ತಮ ಎಂದು ಪರಿಗಣಿಸಲ್ಪಡುವ ೧೦೦ ಪಾಪ್ ಹಾಡುಗಳಲ್ಲಿ ನೂರಕ್ಕೂ ನೂರು ಹಾಡುಗಳು ಸಹ
ಮೈಕಲ್ ಜಾಕ್ಸನವೆ ಆಗಿರುವುದು ಮಹತ್ವಪೂರ್ಣ ಸಾಧನೆ ಅನ್ನಬಹುದು.
ಒಂದು ಸಣ್ಣ ಕಣದಿಂದ ಮಹಾ ಪರ್ವತವಾಗಿ ಬೆಳೆದು, ಪಡೆದುದನ್ನೆಲ್ಲವನ್ನು ಕಳೆದುಕೊಂಡು, ಲೋಕದ ಪ್ರೀತಿಗೆ ಪಾತ್ರನಾದವನು ಕೊನೆಗೆ ಒಬ್ಬಂಟಿಯಾಗಿ, ಸಾವಿಗೆ ಸವಾಲು ಒಡ್ಡಿದವನು
ಕೊನೆಗೂ ವಿಧಿಗೆ ಶರಣಾಗಿ ಮಣ್ಣಲ್ಲಿ ಮಣ್ಣಾಗಿ, ಮಣ್ಣಿನ ಕಣವಾಗಿ ಮಿಗಿಲಿಹೋದನು.
◼️ ಜಬೀವುಲ್ಲಾ ಎಮ್. ಅಸದ್
ಹೆಚ್ಚಿನ ಬರಹಗಳಿಗಾಗಿ
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ
ಕರ್ಪೂರಿ ಠಾಕೂರ್
ಕನ್ನಡ ನಾಟ್ಯ ರಂಗ