ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಷ್ಣು ತುಳಸಿ

ಜಯಂತ ಕಾಯ್ಕಿಣಿ
ಇತ್ತೀಚಿನ ಬರಹಗಳು: ಜಯಂತ ಕಾಯ್ಕಿಣಿ (ಎಲ್ಲವನ್ನು ಓದಿ)

೧೯೭೩-೭೪. ನಾನು ಧಾರವಾಡದಲ್ಲಿ ಓದುತ್ತಿದ್ದೆ. ಅಥವಾ ಓದದೇ ಇರಲು ಆಮಿಷಗಳನ್ನು ಅರಸುತ್ತಿದ್ದೆ. ಆಗ ದಾಂಡೇಲಿಯಲ್ಲಿ ನಡೆದ ಕಲಾಪವೊಂದು ಅದ್ಭುತ ಆಮಿಷವಾಗಿ ನನ್ನನ್ನು ಸೆಳೆಯಿತು. ದಾಂಡೇಲಿ ಎಂದರೆ ಆಗ ಬಿದಿರಿನ ತೇರುಗಳಂತೆ ನಿಂತ ಪೇಪರ್‌ಮಿಲ್‌ನ ಟ್ರಕ್ಕುಗಳ, ಕಿವಿಗೆ ಕನ್ನಡವೇ ಬೀಳದ, ಪಂಜಾಬೀ ಡ್ರೆಸ್ ಹಾಕಿಕೊಂಡ ಹಿಂದೀ ಹೆಂಗಸರ, ಅಂದಮಾನ್ ನಿಕೋಬಾರ್ ಥರದ ಊರು. ಆದರೆ ಆ ಎರಡೇ ದಿನಗಳಲ್ಲಿ ಆ ಊರು ಕನ್ನಡದ ಡಿಂಡಿಮ ಬಾರಿಸಿ ನನ್ನ ಸಂವೇದನೆಯ ಭಾಗವೇ ಆಗಿ ಹೋಯಿತು. ಅಲ್ಲಿ ಎಕ್ಕುಂಡಿಯವರು ‘ತಂಬೂರಿ ಶ್ರುತಿ ಮಾಡಿ ತಂದಾರೋ…’ ಹಾಡಿದ್ದು, ಬಿ. ಹೊನ್ನಪ್ಪ ಭಾವಿಕೇರಿ ಹಾಡಿದ ‘ದಾಂಡೇಲಿ ಹುಡುಗಿ ಕುಣಿಧಾಂಗ’ ಎಂಬ ಕವಿತೆಯ ಸಾಲು ತನ್ನನ್ನೇ ಅನ್ವಯಿಸಿ ಬರೆದದ್ದು ಎಂದು ತಿಳಿದು ಒಬ್ಬ ಉತ್ಸಾಹೀ ಪ್ರೇಕ್ಷಕಿ ಅದನ್ನು ಎಲ್ಲರಿಗೂ ತಿಳಿಸುವಂತೆ ಹೋ ಎಂದು ಅತ್ತೇ ಬಿಟ್ಟಿದ್ದು …. ಎಲ್ಲ ನೆನಪಾಗುತ್ತದೆ. ಆ ಸಾಹಿತ್ಯ ಕಲಾಪದ ರೂವಾರಿ ಆಗಿದ್ದ ವಿಷ್ಣು ನಾಯ್ಕ ನೀಟಾಗಿ ಅ.ನ.ಕೃ. ಥರದ ದಿರಿಸಿನಲ್ಲಿ ಓಡಾಡಿಕೊಂಡಿದ್ದರು. ಕನ್ನಡದ ಸುಳಿವಿಲ್ಲದ ನೆಲದಲ್ಲಿ ಕನ್ನಡವನ್ನು ಕಟ್ಟುವ, ಪಸರಿಸುವ ಛಲ ಅವರ ನಡಿಗೆಯಲ್ಲಿತ್ತು. ಆಗ ಅವರು ಪತ್ರ ಬರೆದಾಗೆಲ್ಲ ಕೊನೆಯಲ್ಲಿ ‘ಇತಿ ನಿಮ್ಮ ಕನ್ನಡದ ಕಂದ’ – ಎಂದು ಬರೆದೇ ಸಹಿ ಮಾಡುವ ಪರಿಪಾಠವಿತ್ತು. ಎಷ್ಟರ ಮಟ್ಟಿಗೆ ಎಂದರೆ ನನ್ನ ತಂದೆ ಗೌರೀಶರು ಒಮ್ಮೆ (ಆಗಲೇ ಅರುವತ್ತು ದಾಟಿದ್ದರು) ತಟ್ಟನೆ ಬಾಯಿಗೆ ವಿಷ್ಣುವಿನ ಹೆಸರು ಬರದೆ ‘ಅದೇ…. ನಮ್ಮ…. ಕನ್ನಡದ ಕಂದ’ ಎಂದು ತಡವರಿಸಿ ಹೆಸರು ತಂದುಕೊಂಡಿದ್ದೂ ಇದೆ. ಆ ಕಾಲದ ವಿಷ್ಣುವಿನ ಆ ಅಂಥ ಚಟುವಟಿಕೆಗಳಲ್ಲಿ ಪಾಲ್ಗೊಂಡ ಜನರನ್ನು ಈಗ ನೆನೆದರೆ ‘ಸಾಹಿತ್ಯಕ’ ಎನ್ನುವ ಜನಗಳಿಗಿಂತ, ‘ಅಸಾಹಿತ್ಯಕ’ ಎಂದು ಕರೆಯಬಹುದಾದ ಜನಗಳೇ ಜಾಸ್ತಿ ಇದ್ದಂತೆ ಭಾಸವಾಗುತ್ತದೆ. ಮತ್ತು ಇದೇ, ವಿಷ್ಣು ನಾಯ್ಕರ ಬದುಕಿನ ದಾರಿಯ ಮುಖ್ಯ ಶಕ್ತಿ ಎಂದು ನನ್ನ ನಂಬಿಕೆ.

    ಆ ಕಾಲದಲ್ಲೇ ವಿಷ್ಣು ಬರೆದ ‘ ತುಳಸೀ ಗಿಡಗಳು’ ಎಂಬ ಕವಿತೆ ಈಗಲೂ ನನ್ನ ಮನದಲ್ಲಿ ಚಿಗುರುತ್ತಿದೆ. ಸಾಮಾನ್ಯವಾಗಿ ತುಳಸೀ ಗಿಡ ಅಂದ ತಕ್ಷಣ ತುಳಸೀ ಕಟ್ಟೆ, ಚೌಕಟ್ಟು,ದೀಪ ಎಂದು ವಾಡಿಕೆಯಾಗಿದ್ದ ನನಗೆ- ಪಾಗಾರದ ಬದಿಗೆ ಅಲ್ಲಿ ಇಲ್ಲಿ ಎಲ್ಲೆಂದರಲ್ಲಿ ಹುಲುಸಾಗಿ ಬೆಳೆಯುವ ತುಳಸಿ ಗಿಡಗಳನ್ನು ಅವುಗಳಿಂದ ದಟ್ಟವಾಗಿ ಬೀಸುವ ಆರೋಗ್ಯದ ಗಾಳಿಯನ್ನು ವರ್ಣಿಸಿದ ಆ ಕವಿತೆ ಹೊಸತೇನನ್ನೋ ತೋರಿಸಿತ್ತು. ಕಟ್ಟೆಯಿಂದ ಇಳಿದು ನೆಲದ ಮೇಲೆ ಹಿಂಡಾಗಿ ಬೆಳೆದ ತುಳಸಿ ಈಗ ನನಗೆ ವಿಷ್ಣು ನಾಯ್ಕರ ಪಯಣದ ಸೂಕ್ಷ್ಮ ರೂಪಕವಾಗಿಯೂ ಕಾಣುತ್ತಿದೆ. ‘ಕಟ್ಟೆಅನ್ನೋದು ‘ಸಾಹಿತ್ಯಕ’ ಅನ್ನೋದಾದರೆ – ಅದರಿಂದ ಈಚೆಗಿರುವ ವಿಶಾಲ ನೆಲವೇ ನಿಜವಾದ ‘ಅಸಾಹಿತ್ಯಕ’ ನೆಲೆಯಾಗುತ್ತದೆ. ಮತ್ತು ಅದರಿಂದ ಚಿಮ್ಮಿದ ಹೊಮ್ಮಿದ ಸಂಗತಿಗಳೇ ಜೀವನಸತ್ವದಿಂದ ಕಂಗೊಳಿಸುತ್ತವೆ.

      ಗೌರೀಶರು ವಿಷ್ಣುವನ್ನು ತನ್ನ ಮಾನಸಪುತ್ರ ಎಂದೇ ಕರೆದವರು, ತಿಳಿದವರು. (ಕನ್ನಡ ಸಿನೆಮಾದಲ್ಲಾದರೆ ನನ್ನ ಮತ್ತು ವಿಷ್ಣು ನಡುವೆ ಕದನವೇ ಆಗಬೇಕಿತ್ತು) ಗೌರೀಶ ಮತ್ತು ವಿಷ್ಣು ಇಬ್ಬರೂ ಪರಸ್ಪರರನ್ನು ಹಚ್ಚಿಕೊಂಡ ನಮೂನೆ ಮಾತ್ರ ಅವರಿಬ್ಬರಿಗೇ ಗೊತ್ತು . ಯಾರೂ ಹಚ್ಚಿಕೊಟ್ಟದ್ದಲ್ಲ ಅದು. ಅದರಲ್ಲೊಂದು ಸ್ವಚ್ಛ ಸುಂದರ ಶಕ್ತಿ ಇತ್ತು . ಆದ್ದರಿಂದಲೇ ಸ್ವಂತ ಮಗನಾದ ನಾನು ಅವರಿಗೊಂದು ಮನೆಯನ್ನು ಕಟ್ಟಿಸಿಕೊಡಲಾಗದೇ ಹೋದರೂ (ಗೋಕರ್ಣದ ನಮ್ಮ ಮನೆ ನನ್ನ ತಾಯಿ ಶಾಂತಾರ ಅವಿರತ ತಾಳ್ಮೆ, ಹೋರಾಟದ ಫಲ) ಈ ಮಾನಸ ಪುತ್ರ ವಿಷ್ಣು – ಕನ್ನಡವೆಂಬ ಮಹಾಮನಸ್ಸಿನಲ್ಲಿ ನೆಲೆಸಲು ಗೌರೀಶರಿಗೊಂದು ಅದ್ಭುತವಾದ ಮನೆಯನ್ನು ಕಟ್ಟಿಕೊಟ್ಟುಬಿಟ್ಟರು. ಅವರ ಸಮಗ್ರ ಸಾಹಿತ್ಯದ ಹತ್ತು ಸಂಪುಟಗಳನ್ನು ತಮ್ಮ ಬಿಗಿದ ಕೈಯಿಂದಲೇ ಪ್ರಕಟಿಸುವುದರ ಮೂಲಕ ! ಈಗ ನನಗೆ ಪಪ್ಪ ಸಿಗುವುದು ಆ ಸಂಪುಟಗಳಲ್ಲೆ. ಅಮೂಲ್ಯ ಋಣಾನುಬಂಧ ಇದು.

    ಸದಾನಂದ ವೇದಿಕೆಯಲ್ಲಿ ವಿಷ್ಣು ನಡೆಸಿಕೊಂಡು ಬಂದಿರುವ ಚಟುವಟಿಕೆಗಳನ್ನು ನೋಡಿ. ಪೇಟೆಯಲ್ಲಿ ಸಿಕ್ಕವರೆಲ್ಲ ಅಲ್ಲಿರುತ್ತಾರೆ. ಸೋಡಾ ಅಂಗಡಿಯವನು, ಸೈಕಲ್ ಅಂಗಡಿಯವನು, ಮದುವೆಯಲ್ಲಿ ಊಟ ಬಡಿಸುವವನು ಇವರಿಗೆಲ್ಲ ಅಪಾರ ಘನತೆ ಮತ್ತು ಗೌರವದ ಸ್ಥಾನ ಕೊಟ್ಟು ಮೆಲ್ಲಗೆ ಅವರ ಸಂವೇದನೆಯನ್ನು ತಿದ್ದಿದ್ದಾರೆ. ತೀಡಿದ್ದಾರೆ, ಸಕಾಲಿಕದ ‘ಅರೆಖಾಸಗಿಯಲ್ಲಿ ಅರರೇ ಅನ್ನುವಂತೆ ಮೂಡಿ ಬಂದಿರುವ ಮನುಷ್ಯಲೋಕ ಅದು. ಗೋಷ್ಠಿ, ವಿಮರ್ಶೆ, ಪ್ರಶಸ್ತಿ, ದಸರಾ ಕವಿಗೋಷ್ಠಿ, ಕ್ಯಾಸೆಟ್ ಶಹನಾಯಿ ಹಿನ್ನೆಲೆಯ ಸನ್ಮಾನಗಳ ಪ್ರಪಂಚದ ಪಕ್ಕವೇ ಇರುವ ನಿತ್ಯದ ಅಪ್ಪಟ ಲೋಕ . ವಿಷ್ಣು ನಾಯ್ಕರ ಜೀವ ಅಲ್ಲಿದೆ. ಮಧ್ಯಾನ್ಹ ಗೇಟು ಕರ್ ಗುಡಿಸಿ ಕೋಳಿ ಶೆಂಡ್ಲೆ ಆಶೆಗೆ ಬರುವ ಬುದ್ಧಿಜೀವಿಗಳಿಗಿಂತ, ಸುಗ್ಗಿ ವೇಷ ಕುಣಿದು ಹೋದ ಮೇಲೆ ಅಂಗಳದಲ್ಲಿ ಉದುರಿದ ಬೇಗಡೆ – ಬಣ್ಣದ ಕಾಗದದ ಚೂರುಗಳನ್ನು ನೋಡುವಲ್ಲೇ ವಿಷ್ಣುವಿಗೆ ನಿಜವಾದ ಅಕ್ಕರೆ.

‘ಸಕಾಲಿಕ’ ಶುರುವಾದ ಹೊಸತರಲ್ಲಿ ಅವರು ನಿಮಗೆ ಭಾವನಾ ಮಾಡಿದಾಗ ಅನುಭವಕ್ಕೆ ಬಂದಿರಬೇಕಲ್ಲ, ಸಂಪಾದಕನನ್ನು ಹೊಗಳಿ ರಾಶಿ ರಾಶಿ ಪತ್ರ ಬರ್ತದೆ. ಅದನ್ನು ನಂಬಿಕೊಂಡು ಕೂತರೆ ಮುಗ್ದೇ ಹೋಯ್ತು! ‘ ಎಂದು ಹೇಳಿದಾಗ ನನಗೆ ತುಂಬ ಸಮಾಧಾನವಾಗಿತ್ತು, ಏಕೆಂದರೆ ನಮ್ಮ ಬಹುತೇಕ ಲೇಖಕರ ಸಾಹಿತ್ಯ ಪೋಷಕ ಗುಣಗಳ ಆಳ ನನಗೆ ಗೊತ್ತು. ತಮ್ಮ ಹೆಸರು ಬರಲೆಂದೇ ಪತ್ರಿಕೆಗೆ ಪ್ರೋತ್ಸಾಹದ ಮಾತು ಬರೆಯುವವರೇ ಹೆಚ್ಚು. ತಮ್ಮ ಕವಿತೆ, ಬರಹ ಅಚ್ಚಾದ ಸಂಚಿಕೆ ಬಿಟ್ಟು ಉಳಿದುವನ್ನು, ಕೊಳ್ಳುವುದಿರಲಿ ಪುಕ್ಕಟೆ ಕೊಟ್ಟರೂ ಓದುವುದಿಲ್ಲ ಅವರು. ಇದನ್ನು ಸರಿಯಾಗಿ ಅರಿತ ವಿಷ್ಣುವಿನ ‘ಸಕಾಲಿಕ’ದ ಕಠಿಣ ಯಶಸ್ಸಿನ ಹಿಂದೆ, ನಾನು ಈ ಹಿಂದೆ ಹೇಳಿದ ‘ಅಸಾಹಿತ್ಯಕ’ ಚಂದಾದಾರರ ತಂಡವೇ ಇದೆ ಎಂಬುದು ಅತ್ಯಂತ ಮಹತ್ವದ ಮತ್ತು ಆಶಾದಾಯಕ ಸಂಗತಿಯಾಗಿದೆ.

     ವಿಷ್ಣುವಿನ ಪಯಣದ ದಾರಿ ಸಂಕೀರ್ಣವಾದದ್ದು. ಅಷ್ಟೇ ಶ್ರದ್ಧಾಚಾಲಿತವಾದದ್ದು. “ಅರೆಖಾಸಗಿ’ಯಲ್ಲಿ ಅವರು ತಮ್ಮೊಳಗಿನ ನಿಗೂಢ ನಿಲ್ದಾಣಗಳತ್ತ ಚಲಿಸುತ್ತಲೆ, ಅಪಾರವಾದ ತಿಳಿವನ್ನೂ ಸ್ಥಳೀಯ ಕಸುವನ್ನು ಪಡೆಯುವ ಬಗೆ, ಅದನ್ನು ಹಂಚಿಕೊಳ್ಳುವ ಆಸಕ್ತಿ ಒಂದು ಅಪರೂಪದ ಸಂಗತಿ ಆಗಿದೆ. ಮೂರುವರೆ ದಶಕಗಳಿಂದ ಅವರು ಬಹಿರಂಗದಲ್ಲಿ ಯತ್ನಿಸಿದ ಎಲ್ಲ ಚಲನೆಗಳ ಹಿಂದಿನ ಒಳಸುಳಿಗಳ ಮೇಲೆ ಒಮ್ಮೆಗೇ ಝಗ್ಗೆಂದು ಬೆಳಕನ್ನು ಹಾಯಿಸುವಂತಿರುವ ಈ ಬರವಣಿಗೆ ಹಠಾತ್ತನೆ ಅವರ ಸೃಜನಶೀಲತೆಯ ಕುರಿತ ನಮ್ಮ ದಾಹವನ್ನು ಹೆಚ್ಚಿಸಿದೆ. ಏಕೆಂದರೆ ‘ಅಸಾಹಿತ್ಯಕ’ ಗೊಳ್ಳುವ ಮೂಲಕವೇ ಕನ್ನಡ ಬರಹಲೋಕ ಇಂದು ಶಾಪಮುಕ್ತಗೊಳ್ಳಬೇಕಿದೆ.

ಅಂಬಾರಕೊಡಲಿನಿಂದ ಹೊರಡುವ ದಾರಿಯ ಇಕ್ಕೆಲದ ಹಿತ್ತಿಲುಗಳಲ್ಲಿ ಚಿಪ್ಪಿರಾಶಿಗಳ ನಡುವೆ ಅಬ್ಬಲಿಗೆ, ಸದಾಫುಲಿ, ಬಸಳೆಯ ಜತೆ ತುಳಸೀ ಗಿಡಗಳು ಹಿಂಡುಹಿಂಡಾಗಿ ಬೆಳೆಯುತ್ತಿರಲಿ. ದಿನಕರನ ಅಭಯ ಹಸ್ತ ಬೆಳಗುತ್ತಿರಲಿ.

** ‍( 2004 ರಲ್ಲಿ ಹೊರತಂದ ವಿಷ್ಣು ನಾಯ್ಕರ ಅರವತ್ತರ ಅಭಿನಂದನ ಗ್ರಂಥ ‘ ‘ಪರಿಮಳದಂಗಳ’ ದಿಂದ ಆಯ್ದ ಲೇಖನ)


ವಿಷ್ಣು ನಾಯಕರಿಗೆ ಮಮತೆಯ ನಮನ. ಕಳೆದ ಐದು ದಶಕಗಳಿಂದ ಬರವಣಿಗೆ , ಪ್ರಕಾಶನ ಮತ್ತು ವಿವಿಧ ಸಾಂಸ್ಥಿಕ ಕಲಾಪಗಳ ಮೂಲಕ ಅವರು ಸದ್ದಿಲ್ಲದೆ ಮಾಡುತ್ತಾ ಬಂದ ಕೆಲಸ ದೊಡ್ಡದು. ನೂರಾರು ಹೊಸ ಲೇಖಕರನ್ನು ಪ್ರಕಟಿಸಿ ಪ್ರೋತ್ಸಾಹಿಸಿ ಆತ್ಮ ವಿಶ್ವಾಸ ತುಂಬಿ ಬೆಳೆಸಿದ್ದಾರೆ. ಹಿರಿಯರ ಕೃತಿಗಳನ್ನು ಆಯ್ದು ಪ್ರಕಟಿಸಿ ಉಳಿಸಿದ್ದಾರೆ. ಕಾರ್ಯಕ್ರಮಗಳ ಮೂಲಕ ಎರಡು ತಲೆಮಾರುಗಳ ಅಭಿರುಚಿ ರೂಪಿಸಿದ್ದಾರೆ. ಉತ್ತರ ಕನ್ನಡದ ಸಂಯುಕ್ತ ಮನಸ್ಸಿನ ಸಾಕ್ಷಿ ಪ್ರಜ್ಞೆಯಂತೆ ಇದ್ದು ಸಾಮಾಜಿಕ ಕೌಟುಂಬಿಕತೆಯನ್ನು ಪೋಷಿಸಿದ್ದಾರೆ. ಸಾಮಾಜಿಕ ಋಣದ ಎಚ್ಚರವನ್ನು, ಪ್ರಜ್ಞಾವಂತಿಕೆಯನ್ನು ಕಾಯ್ದುಕೊಳ್ಳುವುದೇ ಅವರಿಗೆ ನಾವು ಸಲ್ಲಿಸ ಬಹುದಾದ ಕೃತಜ್ಞತೆಯ ಗೌರವ. ಆಗಲೇ ಅವರು ನಮ್ಮೆಲ್ಲರ ಆತ್ಮ ಸಾಕ್ಷಿಯ ಭಾಗವಾಗಿ ಮುಂದುವರೆಯುತ್ತಾರೆ.

– ಜಯಂತ ಕಾಯ್ಕಿಣಿ, 18-2-2024