- ರಾಜ ಮಹಾರಾಜ - ಜೂನ್ 27, 2021
- ವಸಂತ ಬಂದ ಸಂತಸ ತಂದ - ಏಪ್ರಿಲ್ 13, 2021
- ಮೀರಾ ಜೋಶಿ ಕವಿತಾ ವಾಚನ - ಮಾರ್ಚ್ 13, 2021
ಬಾಲ್ಯ ಸಾಮಾನ್ಯವಾಗಿ ಎಲ್ಲರ ಜೀವನದ ಮರೆಯಲಾಗದ ನೆನಪು.ಸೂರ್ಯನ ರಶ್ಮಿಗೆ ಮೈಯೊಡ್ಡಿದಾಗ ಮನವನ್ನು ಮುದಗೊಳಿಸುವ ಅರುಣೋದಯದಂತೆ,ಹೂವನ್ನು ಕಾಣುವ ಮೊದಲೇ ಅದರ ಸುವಾಸನೆಯನ್ನು ಆಘ್ರಾಣಿಸಿದ ಸಂತಸದಂತೆ. ನನ್ನ ಪ್ರಾಥಮಿಕ ಶಾಲೆಯ ನೆನಪುಗಳು ಸಹ ಹಾಗೆಯೇ.
ನಮ್ಮ ಶಾಲೆಗೆ ಹೋಗಬೇಕೆಂದರೆ ದಾರಿಯಲ್ಲಿ ಕೆರೆ ದಂಡೆಗೆ ಹೋಗುವ ೩೫-೪೦ಪಾವಟಿಗೆಗಳಿರಬಹುದು, ಹತ್ತಿ ಎತ್ತರವಾದ ಕೆರೆಯ ದಂಡೆಯ ಮೇಲೆ ಪುಟು ಪುಟು ನಡೆದು ಹೋಗಬೇಕಾಗುತ್ತಿತ್ತು.
ಪಾವಟಿಗೆಯ ಎಡಬಲಗಳಲ್ಲಿ ಆಕಾಶಮಲ್ಲಿಗೆ ಗಿಡಗಳು ,ಇನ್ನೂ ಅನೇಕ ಗಿಡಗಳಿದ್ದವು. ಆಕಾಶ ಮಲ್ಲಿಗೆ ಹೂವುಗಳನ್ನು ಆರಿಸುತ್ತಾ ಹೋಗುತ್ತಿದ್ದೆವು. ನನ್ನ ಗೆಳತಿಯರಾದ ರತ್ನಾ ಮತ್ತು ಬಸವಣ್ಣಿ ಆ ಹೂಗಳಿಂದ ಜಡೆ ಹಾಗೆ ಮಾಲೆ ಹೆಣೆಯುತ್ತ ಬರುತ್ತಿದ್ದರು. ಹಾದಿಯಲ್ಲಿ ನಡು ನಡುವೆ ಫಿರಂಗಿ ಹುಣಸಿಕಾಯಿಯ ಗಿಡಗಳಿರುತ್ತಿದ್ದವು. ಜಿಗಿದು ಜಿಗಿದು ಕೈಗೆಟುಕಿದಕದಷ್ಟನ್ನು ಹರಿದುಕೊಂಡು ತಿನ್ನುತ್ತಾ ಹೋಗುತ್ತಿದ್ದೆವು.
ಕೆರೆಯ ಮುಂದಿನ ಘಟ್ಟದಲ್ಲಿ ಇಳಿದು ಮೂವತ್ತು ನಲವತ್ತು ಪಾವಟಣಿಗೆಗಳನ್ನು ಜಿಗಿಜಿಗಿಯುತ್ತಾ ಇಳಿದು ಬೊಗಸೆಯಲ್ಲಿ ನೀರು ತುಂಬಿಕೊಂಡು ಕುಡಿದು ಶಾಲೆಗೆ ಹೊತ್ತಾಗುತ್ತದೆಂದು ಓಡುವ ಗತಿಯಲ್ಲಿ ಪಾವಟಣಿಗೆಗಳನ್ನು ಏರುತ್ತಾ, ಏರುತ್ತಿದ್ದಂತೆಯೇ ಬಾಯಿಯ ನೀರನ್ನು ಫ್ರಾಕ್ ನಿಂದ ಒರೆಸಿಕೊಳ್ಳುತ್ತ ಕೆರೆದಂಡೆ ಏರಿದರೆ ಮುಂದೆ ಎರಡೇ ನಿಮಿಷಗಳಲ್ಲಿ ಶಾಲೆಯ ಆವರಣದಲ್ಲಿ ಹಾಜರು. ಇನ್ನು ಆವರಣದಲ್ಲಿ ಹೆಚ್ಚು ಹುಡುಗಿಯರು ಕಾಣದಿದ್ದಾಗ ನಾವು ಸರಿಯಾದ ಸಮಯಕ್ಕೆ ಬಂದಿದ್ದೇವೆಂಬ ಹೆಮ್ಮೆ ನಮಗೆ.
ಪ್ರಾರ್ಥನೆ ಪ್ರಾರಂಭವಾಗುವ ಮೊದಲು ಒಂದು ಕುಂಟುಪಿಲ್ಲೆಯ ಆಟವಾಗುವ ಇನ್ನೊಂದು ಸಂಭ್ರಮ.ಶಾಲೆಯಲ್ಲಿ ತುಂಬಾ ಶಿಸ್ತು.ಎಲ್ಲ ಟೀಚರ ಕೈಯಲ್ಲಿ ಬೆತ್ತ ಇದ್ದೇ ಇರುತ್ತಿತ್ತು.
ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಇದ್ದಾಗ ನನಗೇನೋ ಡಾನ್ಸ್ ಮಾಡುವ ಮನಸ್ಸು. ಆದರೆ ನನ್ನನ್ನು ಯಾವಾಗಲೂ ಆ ಡಾನ್ಸ್ ಗಳಿಗೆ ಹಾಡಲು ನಿಲ್ಲಿಸುತ್ತಿದ್ದರು. ನನ್ನ ಕಂಠ ಆಗ ಚೆನ್ನಾಗಿದ್ದುದೇ ಅದಕ್ಕೆ ಕಾರಣ.
ಒಂದು ಮಧ್ಯಾಹ್ನ ಒಂದು ಸಂಘದವರು ಬಂದು ಮರುದಿನ ನಡೆಯುವ ದೊಡ್ಡ ಕಾರ್ಯಕ್ರಮಕ್ಕೆ ನಮ್ಮ ಶಾಲೆಯಿಂದ ಒಂದು ಕಾರ್ಯಕ್ರಮ ಕೊಡಬೇಕೆಂದು ಕೇಳಿಕೊಂಡರು.
ನಮ್ಮ ಎಲಿಜಾಬೆತ್ ಅಕ್ಕ ಅವರು( ಟೀಚರು) ತತ್ ಕ್ಷಣವೇ ಬರೆಯುವವರಾಗಿದ್ದರು. ಏನೋ ಬರೆದು ದೊಡ್ಡಕ್ಕೋರಿಗೆ (ಹೆಡ್ ಮಿಸ್ಟ್ರೆಸ್ಗೆ )ತೋರಿಸಿ ನನಗೆ ಮರುದಿನ ಬೇಗನೇ ಬರಲು ತಿಳಿಸಿದರು .ಅವರು ಚಹಾ ಕುಡಿಯದಿದ್ದ ರೈತ ಚಹಾಕ್ಕಾಗಿ ಹಪ ಹಪಿಸುವ ಹಾಡು ಬರೆದಿದ್ದರು.ನಾನು ಹಾಡುತ್ತಾ ಹಾವಭಾವ ಮಾಡುವದನ್ನ ಕಲಿಸಿ ಕೊಟ್ಟರು.ಸಾಯಂಕಾಲ ಆರು ಗಂಟೆಗೆ ಕಾರ್ಯಕ್ರಮ.
ಎತ್ತಿ ಕಟ್ಟಿದ ಬಿಳಿ ಧೋತ್ರ, ಷರ್ಟು, ಹೆಗಲ ಮೇಲೆ ಕಂಬಳಿ, ತಲೆಗೆ ಒಂದು ರುಮಾಲು, ಮೂಗಿನ ಕೆಳಗೆ ಕಾಡಿಗೆಯಿಂದ ಮೀಸೆ, ನಾನು ವೇದಿಕೆಯ ಮೇಲೆ ಹೋಗಿ ಈ ಕೆಳಗಿನ ಹಾಡು ಹೇಳುತ್ತ ನಟಿಸಿದೆ.ಪೂರ್ತಿ ಹಾಡು ನೆನಪಿಲ್ಲ.
” ಶಿವಪ್ಪ ಕಾಯೋ ತಂದೆ ನೀ ಮಾಡುವದೇತರ ಧಂದೆ
ಚಹಾದಂಗ್ಡಿ ತೋರಿಸಯ್ಯ ಚಹ ಕುಡಿಸಯ್ಯ
ಬಿಸಿರೊಟ್ಟಿ ಬ್ಯಾಸರಾಯ್ತು, ಕೆನೆಮೊಸರು ಸೇರದಾಯ್ತು
ಗುರಳ್ಳ ಹಿಂಡಿ ನನಗ ವಾಕರಿಕಾಯ್ತು,ಶಿವನೇ…”
ನಡು ನಡುವೆ ಹಾಗೂ ಮುಗಿಯುತ್ತಿದ್ದಂತೆ ಜೋರಾಗಿ ಚಪ್ಪಾಳೆಗಳು.ವೀಕ್ಷಕರಲ್ಲಿ ಕೆಲವರು ಬಂದು ಎರಡೆರಡು ರೂಪಾಯಿಗಳಂತೆ ನಗದು ಬಹುಮಾನ ಕೊಟ್ಟರು. ಒಟ್ಟು ಎಷ್ಟಾಗಿತ್ತೋ ನೆನಪಿಲ್ಲ. ಹೆಚ್ಚೆಂದರೆ ಹತ್ತು ,ಹನ್ನೆರಡು ರೂಪಾಯಿಗಳಿರಬಹುದು. ಆದರೆ ಅಷ್ಚು ದೊಡ್ಡ ಮೊತ್ತವನ್ನು ನಾನೊಬ್ಬಳೇ ಹೇಗೆ ಮನೆಯ ವರೆಗೆ ತೆಗೆದುಕೊಂಡು ಹೋಗುವುದು ಎಂಬ ಹೆದರಿಕೆಯಿಂದ ನಮ್ಮ ಮನೆಯ ಸಮೀಪದಲ್ಲಿರುವ ನನಗಿಂತ ಐದಾರು ವರ್ಷ ದೊಡ್ಡವಳಾಗಿದ್ದ ಸುನಂದಾಳ ಕೈಯಲ್ಲಿ ಕೊಟ್ಚು ಮನೆ ಬಂದೊಡನೆ ಮರೆಯದೇ ಅವಳ ಕೈಯಿಂದ ತೆಗೆದುಕೊಂಡು ಮನೆಯೊಳಗೆ ಓಡಿದ್ದೆ. ಆ ಕಾರ್ಯಕ್ರಮಕ್ಕೆ ಬಂದವರೊಬ್ಬರು ಮರುದಿನ ನಮ್ಮ(ಅಕ್ಕೋರಿಗೆ) ಟೀಚರಿಗೆ ಹೇಳಿ ಧಾರವಾಡಕ್ಕೆ ಕರೆದುಕೊಂಡು ಹೋಗಿ ಆಕಾಶವಾಣಿಯಲ್ಲಿ ಹಾಡಿಸಿದ್ದರು.
ನನಗೆ ಎರಡನೆಯ ಕ್ಲಾಸಿನಲ್ಲಿದ್ದಾಗ ಒಂದು ದಿನ ಎಲ್ಲ ವಿಷಯಗಳಲ್ಲಿ ಏನೇನೋ ಪ್ರಶ್ನೆ ಕೇಳಿದರು, ಎಲ್ಲದಕ್ಕೂ ಉತ್ತರ ಹೇಳಿದಾಗ, ನಾಳೆಯಿಂದ ನೀನು ಮೂರನೆಯ ಕ್ಲಾಸಿನಲ್ಲಿ ಕೂತ್ಕೊ ಅಂತಾ ಹೇಳಿದ್ರು. ನಾನು ಮೂರು ನಾಲ್ಕು ದಿನ ಶಾಲೆಯಲ್ಲಿ ಮೆಲ್ಲಗೆ, ಮನೆಯಲ್ಲಿ ಭಿಡೆಬಿಟ್ಟು ಅತ್ತಿದ್ದೇ ಅತ್ತಿದ್ದು. ನನಗೆ ಮುಂದಿನ ಕ್ಲಾಸಿಗೆ ಹೋಗಿದ್ದ ಸಂತೋಷಕ್ಕಿಂತ ನನ್ನ ಗೆಳತಿಯರ್ಯಾರೂ ನನ್ನೊಡನೆ ಇಲ್ಲವೆಂಬ ದುಃಖ.
ಯಾವುದೋ ಒಂದು ತಿಂಗಳಲ್ಲಿ ಗುಳ್ಳವ್ವನನ್ನು ಕೂಡ್ರಿಸಲು ಹೇಳುತ್ತಿದ್ದರು ಕೆರೆದಂಡೆಯ ಮೇಲಿಂದ ಹೋಗುವಾಗ ಎರೆಮಣ್ಣು ತಗೊಂಡು ಹೋಗ್ತಿದ್ವಿ. ಐದಾರು ಮಂದಿ ಕೂಡಿ ಒಂದು ಗುಳ್ಳವ್ವನ್ನ ಮಾಡ್ತಿದ್ವಿ. ಕೆಳಗೊಂದು ದಪ್ಪ ಉದ್ದ ಕಂಬದ ಆಕೃತಿ ,ಅದರಮ್ಯಾಲ ಒಂದು ಚಂಡಿನಂಥಾ ಮಣ್ಣಿನ ಮುದ್ದೆಯನ್ನು ಒಂದು ದಪ್ಪನೆ ಕಡ್ಡಿ ಚುಚ್ಚಿ ಕೂಡಿಸಿ, ಇನ್ನೊಂದು ಸಣ್ಣ ಚಂಡಿನಂಥಾದ್ದು ಮಾಡಿ ತಲೆಹಿಂದ ತುರುಬಿನ್ಹಾಂಗ ಇಟ್ಟು ಆಕಾಶ ಮಲ್ಲಿಗೆ ದಂಡಿ ಮುಡಿಸಿ ಮುಖದ ಮೇಲೆ, ಬರುವಾಗ ತಂದ ಬೀಜಗಳಿಂದ ಕಣ್ಣು ಮೂಗು ಕುಂಕುಮ ಮಾಡಿದ್ರ ನಮ್ಮ ಗುಳ್ಳವ್ವ ತಯಾರು.
ಗುಳ್ಳವ್ವಗಳ ಫ್ಯಾಶನ್ ಪರೇಡ ಬೇರೆ ಆಗ್ತಿತ್ತು. ಎಲ್ಲರ ಗುಳ್ಳವ್ವಗಳು ಸರಿ ಸುಮಾರು ಒಂದೇ ತೆರನಾಗಿರುತ್ತಿದ್ದವು. ಅದೇ ದಪ್ಪ ಕಂಭದಂತ ದೇಹ ,ಕುತ್ತಿಗೆ ಇಲ್ಲದ ದೇಹದ ಮೇಲೆ ಕೂಡಿಸಿದ ಮುಖ,ಇನ್ನು ದಪ್ಪ ಮೂಗು,ಬಾಯಿ ಅಂತಾ ಮೂಗಿನ ಕೆಳಗೆ ಗೀರಿದ ಗೀರು.ಅದು ಕೆಲವರಲ್ಲಿ ನಕ್ಕ ಹಾಗಿರುತ್ತಿದ್ದರೆ ,ಕೆಲವರ ಗುಳ್ಳವ್ವನದು ವಿಕಟ ನಗೆ, ಮತ್ತೆ ಕೆಲವರದ್ದು ಅಗಲ ಬಾಯಿಯ ನಗೆಯಾದರೆ,ಕೆಲವರದ್ದು ಬಿಗಿದ ತುಟಿ. ನಮ್ಮ ಮನೆಯ ಕಡೆಯಿಂದ ಬರುವವರೆಲ್ಲರ ಗುಳ್ಳವ್ವನ ತುರುಬಿನಲ್ಲಿ ಆಕಾಶ ಮಲ್ಲಿಗೆಯ ದಂಡೆ ಆದರೆ ಮತ್ತೆ ಕೆಲವರ ಗುಳ್ಳವ್ವಗಳ ತುರುಬಿನಲ್ಲಿ ಕಣಿಗಲೆ ಹೂವಿನ ಇಲ್ಲಾ ಕಾಡು ಸಂಪಿಗೆ ಹೂವಿನ ದಂಡೆ. ಗುಲಾಬಿ ಮಧ್ಯದಲ್ಲಿದ್ದು ಎಡಬಲದಲ್ಲಿ ಸೇವಂತಿಗೆಯ ಹೂವಿನ ದಂಡೆ ಮುಡಿದುಕೊಂಡ ಗುಳ್ಳವ್ವನನ್ನು ಅತ್ಯಂತ ಸುಂದರಿಯೆಂದು ನೋಡುತ್ತಾ ನಿಲ್ಲುತ್ತಿದ್ದೆವು.
ಆ ದಿನ ಪೂಜಾ ಮಾಡಿ ಮರುದಿನ
” ಗುಳ್ಳವ್ವ ಗುಳ್ಳವ್ವ ಎಲ್ಯಾಡಿ ಬಂದಿ
ಹಳ್ಳಾ ಕೊಳ್ಳಾ ತಿರುಗಾಡಿ ಬಂದೆ “
ಅಂತಾ ಹಾಡ್ಕೋತ ಹೋಗಿ ಕೆರೆಯೊಳ್ಗ ಹಾಕಿ ಕೆರಿದಂಡಿಮ್ಯಾಲ ಕೂತು ಮಂಡಕ್ಕಿ, ಡಾಣಿ ತಿಂದು ಬಂದ್ರ ಆನಂದಾನೇ ಆನಂದ. ಕೆರೆ ಕಾಯೋ ಮುದುಕ ಬಡಗಿ ಹಿಡ್ಕೊಂಡು ಬಯ್ಯಲು ಬಂದಾಗ ಓಡಿ ತಪ್ಪಿಸಿಕೊಂಡು ಬಂದ್ರ ಇನ್ನೂ ಆನಂದ.
ಇನ್ನು ಮಣ್ಣೆತ್ತಿನ ಅಮಾವಾಸ್ಯೆ ಮೊದಲದಿನ ದೂರಹೋಗಿ ಮಟ್ಟಿಮಣ್ಣು ತಂದು ಬಸವಣ್ಣನ್ನ ಮಾಡುತ್ತಿದ್ದೆವು.ಮುಖ ಹೇಗೇ ಇದ್ದರೂ ಕೋಡು, ಬಾಲಗಳನ್ನ ತಿದ್ದೂದೇ ತಿದ್ದುವದು.ಟೀಚರ್ ಬಂದು ಚೆನ್ನಾಗಿದೆ ಅಂದ್ರೆ ಮುಗಿಲಿಗೆ ಮೂರೇಗೇಣು. ಹೇಳಲು ಅನೇಕ ಇವೆ.
ಇವೆಲ್ಲದರ ಜೊತೆಗೆ ಆಶು ಭಾಷಣದಲ್ಲಿ ಮೊದಲನೆ ಬಹುಮಾನವಾಗಿ ಸಣ್ಣ ಸಣ್ಣ ಗುಲಾಬಿ ಹೂಗಳ ಚಿತ್ರದ ಕವ್ಹರ್ ಇದ್ದ ನೋಟ್ ಬುಕ್, ಬೇರೆ ಬೇರೆ ಸ್ಪರ್ಧೆಯಲ್ಲಿ ಬಂದ ಬಹುಮಾನಗಳ ನೆನಪು ಇನ್ನೂ ಇದೆ. ಮುಂದೆ ಇವುಗಳಿಗಂತ ಬೆಲೆಯುಳ್ಳ ವಸ್ತುಗಳು ಬಹುಮಾನ ಬಂದುದರ ಬಣ್ಣವೂ ನೆನಪಿಲ್ಲ.
ಆರನೆಯ ತರಗತಿಯಿಂದ ಆ ಶಾಲೆಯಿಂದ ಬೇರೆ ಊರಿಗೆ ಹೋಗುವಾಗ ಪ್ರಾರ್ಥನಾ ಸಮಯದಲ್ಲಿ ನನ್ನನ್ನು ಕರೆದು ಅಕ್ಕವ್ವರುಗಳೆಲ್ಲಾ(ಟೀಚರ್ಸ) ನನ್ನ ಬಗ್ಗೆ ಹೊಗಳಿ ನಮ್ಮ ಶಾಲೆಯಿಂದ ಒಬ್ಬ ಪ್ರತಿಭಾವಂತ ಹುಡುಗಿಯನ್ನು ಕಳಿಸಿಕೊಡಬೇಕಾಗಿದೆ ಎಂದು ಹೇಳಿ ಆಶೀರ್ವದಿಸಿ ಕಳಿಸಿದ್ದು ಇನ್ನೂ ಕಣ್ಣಮುಂದೆ ಕಟ್ಟಿದಂತಿದೆ. ಆಗ ಸಂತಸ ಪಟ್ಚಿದ್ದು ನಿಜವಾದರೂ ಈಗ ಹೊಗಳಿಕೆಯಿಂದ ಮಾರು ದೂರವಿರಬೇಕೆಂಬುದು ತಿಳಿದಾಗಿನಿಂದ ಇಂಥವೆಲ್ಲ ಬೇಡವೆನಿಸುತ್ತದೆ .ಅಲ್ಲಿ ಅವರಿಂದ ಪಡೆದ ಆಶೀರ್ವಾದ , ವಾತ್ಸಲ್ಯ ಇವುಗಳನ್ನು ನೆನೆದಾಗ ಬದುಕಿನಲ್ಲಿ ಹೊಸ ಉತ್ಸಾಹ, ನವಚೇತನ ಉಕ್ಕುತ್ತದೆ. ಮನಸ್ಸು ಪಲ್ಲವಿಸುತ್ತೆ.
ಹೆಚ್ಚಿನ ಬರಹಗಳಿಗಾಗಿ
ಸಮ್ಮಕ್ಕ-ಸಾರಲಮ್ಮ ಜಾತ್ರೆ
ಸ್ವೀಡಿಶ್ ನಾಣ್ಣುಡಿಗಳು…! ಭಾಗ – ೧