ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಮ್ಮಕ್ಕ-ಸಾರಲಮ್ಮ ಜಾತ್ರೆ

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ತೆಲಂಗಾಣ ರಾಜ್ಯದ ಅತಿ ದೊಡ್ಡ ಜಾತ್ರೆ ಎಂದರೆ ಎರಡು ವರ್ಷಕ್ಕೊಮ್ಮೆ ನಡೆಯುವ ಗಿರಿಜನಾಂಗದ ಜಾತ್ರೆ “ಮೇಡಾರಂ ಜಾತ್ರೆ” ಅಥವಾ “ಸಮ್ಮಕ್ಕ-ಸಾರಲಮ್ಮ ಜಾತ್ರೆ”. ಇದು ಕೋಯ ಪಂಗಡದ ಗಿರಿಜನಾಂಗ ತಮ್ಮ ದೇವತೆಗಳಾದ ಸಮ್ಮಕ್ಕ-ಸಾರಲಮ್ಮರು ಭೂಮಿಗೆ ಬರುವ ವೇಳೆ ಎಂದು ಮಾಡುವ ಅತಿ ದೊಡ್ಡ ಜಾತ್ರೆ.

ಮೇಡಾರಂ ದಂಡಕಾರಣ್ಯದ ಭಾಗವಾದ ಏಟೂರು ನಾಗಾರಂ ಅಭಯಾರಣ್ಯದಲ್ಲಿದೆ. ಇದು ತೆಲಂಗಾಣ ರಾಜ್ಯದ ಮುಲುಗು ಜಿಲ್ಲೆಯ ತಾಡ್ವಾಯಿ ಮಂಡಲದಲ್ಲಿದ್ದು ವರಂಗಲ್ ನಗರದಿಂದ 100 ಕಿ.ಮೀ ದೂರದಲ್ಲಿದೆ. 1978 ರ ವರೆಗೆ ಈ ಜಾತ್ರೆಯ ಜಾಗವನ್ನು ಸೇರಲು ಬರೀ ಚಕ್ಕಡಿಗಳು ಮಾತ್ರ ಇದ್ದವು. ನಂತರ ಕಾಲದಲ್ಲಿ ರಾಜ್ಯ ಸರಕಾರ ಈ ಜಾತ್ರೆಯನ್ನು ರಾಜ್ಯದ ಹಬ್ಬವನ್ನಾಗಿ ಘೋಷಿಸಿ, ಮೇಡಾರಂಗೆ ಮೋಟಾರುಗಳು ಓಡಾಡುವ ಹಾಗೆ ರಸ್ತೆ ಹಾಕಿಸಿತು. ತೆಲಂಗಾಣ ಪ್ರತ್ಯೇಕ ರಾಜ್ಯವಾದ ಮೇಲೆ ಈ ಜಾತ್ರೆಗೆ ತುಂಬಾ ಪ್ರಾಮುಖ್ಯತೆಯನ್ನು ಕೊಟ್ಟು, ಜಾತ್ರೆಯ ಸಮಯದಲ್ಲಿ ಬೇಕಾದ ರಸ್ತೆ, ಸಾರಿಗೆ, ವೈದ್ಯಕೀಯ ಮತ್ತ ಶುಭ್ರತೆಯ ಸವಲತ್ತುಗಳನ್ನು ಒದಗಿಸುತ್ತಿದೆ. ಇದೇ ತಿಂಗಳಿನ 16-19 ರ ವರೆಗೆ ನಡೆಯುವ ಈ ಜಾತ್ರೆಯ ಬಗ್ಗೆ ಕೆಲ ವಿವರ ತಿಳಿದುಕೊಳ್ಳೋಣ.

ಜಂಪನ್ನ ವಾಗು

ಸ್ಥಳ ಪುರಾಣಗಳ ಪ್ರಕಾರ 13ನೆಯ ಶತಮಾನದಲ್ಲಿ ಮೇಡಾರಂನ ಗಿರಿಜನ ದೊರೆಗಳು ಬೇಟೆಗೆ ಹೋದಾಗ ಕಾಡಿನಲ್ಲಿ ಹುಲಿಗಳ ನಡುವೆ ಪ್ರಕಾಶಮಾನವಾಗಿ ಬೆಳಗುತ್ತಿದ್ದ ಮಗುವೊಂದನ್ನು ಕಂಡು ತಂದು ಬೆಳೆಸಿಕೊಂಡರಂತೆ. ಅವಳೇ ಸಮ್ಮಕ್ಕ. ಅವಳು ಮುಂದೆ ಇವರ ನಾಯಕಿಯಾದಳು. ಅವಳನ್ನು ಅಲ್ಲಿಯ ಕೋಯ ಗಿರಿಜನಾಂಗದ ಮುಖ್ಯಸ್ಥನಾದ ಪಗಿಡಿದ್ದರಾಜು ಮದುವೆಯಾದ. ಇವನು ಕಾಕತೀಯ ರಾಜರ ಸಾಮಂತ. ಇವರಿಬ್ಬರಿಗೆ ಸಾರಲಮ್ಮ, ನಾಗುಲಮ್ಮ ಎಂಬ ಇಬ್ಬರು ಹೆಣ್ನು ಮಕ್ಕಳು ಮತ್ತು ಜಂಪನ್ನ ಎಂಬ ಮಗನು ಹುಟ್ಟಿದರು.

ಒಮ್ಮೆ ಕಾಕತೀಯ ರಾಜರು ಹೇರಿದ ತೆರಿಗೆ ಕಟ್ಟಲಾರದೆ ಹೋದ್ದಕ್ಕೆ ರಾಜ ಇವರ ಮೇಲೆ ಯುದ್ಧ ಸಾರಿದ. ಆ ಯುದ್ಧದಲ್ಲಿ ಪಗಿಡಿದ್ದ ರಾಜು ಹತನಾಗಲು, ಸಮ್ಮಕ್ಕ ತನ್ನ ಮಕ್ಕಳು ಮತ್ತು ಅಳಿಯ ಗೋವಿಂದ ರಾಜುವಿನ ಜೊತೆಯಲ್ಲಿ ಸ್ವಯಂ ಮುಂದಾಳತ್ವ ವಹಿಸಿ ಸೇನೆಯನ್ನು ನಡೆಸಿದಳು. ಇನ್ನೇನು ಸಮ್ಮಕ್ಕ ಗೆಲ್ಲುವ ಹಂತದಲ್ಲಿರುವಾಗ ಆಕೆಯ ಮಗಳಾದ ಸಾರಲಮ್ಮ ಹತಳಾದಳು. ಜಂಪನ್ನ ಗಾಯಗೊಂಡು ಗೋದಾವರಿ ನದಿಯ ಉಪನದಿಯಾದ “ಸಂಪಂಗಿ ವಾಗು”ಎನ್ನುವ ಹಳ್ಳದಲ್ಲಿ ಬಿದ್ದು ಅಸುನೀಗಿದ. ಅವನ ರಕ್ತದಿಂದ ಆ ಹಳ್ಳದ ನೀರು ಕೆಂಪಾಯಿತೆಂದು ಗಿರಿಜನ ಜನರು ನಂಬುತ್ತಾರೆ. ಇಂದಿಗೂ ಆ ವಾಗು ಕೆಂಪು ನೀರಿನಿಂದಲೇ ಹರಿಯುತ್ತದೆ. ( ನೀರಿನ ಈ ಬಣ್ಣ ಅಲ್ಲಿಯ ಮಣ್ಣಿನ ತತ್ತ್ವದ್ದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.) ಈಗ ಆ ಹಳ್ಳವನ್ನು ಅ ಯೋಧನ ಹೆಸರಿನಲ್ಲೇ “ ಜಂಪನ್ನ ವಾಗು” ಎಂದು ಕರೆಯುತ್ತಾರೆ.

ಇದೇ ಜಾತ್ರಾಸ್ಥಳ. ಸಮ್ಮಕ್ಕ ಮಾತ್ರ ಒಬ್ಬಳೇ ಹತ್ತಿರದ ಚಿಲಕಲ ಗುಟ್ಟ ಎನ್ನುವ ಗುಡ್ಡಕ್ಕೆ ಹೋಗಿ ಅಲ್ಲಿ ಒಂದು ಕುಂಕುಮದ ಭರಣಿಯಾಗಿಬಿಟ್ಟಳು ಅಂತ ನಂಬಿಕೆ ಇದೆ. ಹಾಗಾಗಿ ಈ ಗಿರಿಜನಾಂಗ ದವರು ಈ ಇಬ್ಬರು ದೇವತೆಗಳನ್ನು ಆದಿ ಪರಾಶಕ್ತಿಯ ರೂಪಗಳೆಂದು ಭಾವಿಸಿ ಅಲ್ಲಿ ಜಾತ್ರೆ ಮಾಡುತ್ತಾರೆ.

ಸಮ್ಮಕ್ಕ, ಸಾರಲಮ್ಮ ಗದ್ದುಗೆಗಳು

ಈ ಜಾತ್ರೆ ಪ್ರತಿ ಎರಡು ವರ್ಷಗಳಿಗೊಮ್ಮೆ ನಾಲ್ಕು ದಿನಗಳ ಅವಧಿಯಲ್ಲಿ ನಡೆಯುತ್ತದೆ. ಈ ಜಾತ್ರೆಯ ಭಾಗವಾಗಿ ಮೊದಲನೆಯ ದಿನ ಸಾರಕ್ಕ ಮತ್ತು ಪಗಿಡಿದ್ದ ರಾಜು ಅವರ ಮೂರ್ತಿಗಳನ್ನು ಜಾತ್ರಾ ಸ್ಥಳಕ್ಕೆ ತರುತ್ತಾರೆ.

ಎರಡನೆಯ ದಿನ ಸಮ್ಮಕ್ಕ ಕುಂಕುಮ ಭರಣಿಯಾಗಿದ್ದ ಚಿಲಕಲ ಗುಟ್ಟದಲ್ಲಿ ಕೋಯ ಪೂಜಾರಿಗಳ ರಹಸ್ಯ ಪೂಜೆ ಮುಗಿದ ಮೇಲೆ ಅವಳ ಮೂರ್ತಿ, ಕುಂಕುಮ ಭರಣಿ ಕೆಳಗೆ ಅವಳ ಗದ್ದುಗೆಗೆ ತರುತ್ತಾರೆ. ಗೋವಿಂದ ರಾಜುವಿನ ಮೂರ್ತಿಯನ್ನು ಸಹ ತರುತ್ತಾರೆ.

ಮೂರನೆಯ ದಿನವೇ ನಿಜವಾದ ಜಾತ್ರೆ ಎನ್ನಬಹುದು. ಸಮ್ಮಕ್ಕ, ಸಾರಲಮ್ಮ ರನ್ನು ಆದಿ ಪರಾಶಕ್ತಿಯ ಪ್ರತಿರೂಪಗಳೆಂದು ಭಾವಿಸಿ ಅವರ ಪತಿಗಳೊಡಗೂಡಿ ಅವರ ಪೂಜೆ ನಡೆಯುತ್ತದೆ. ಭಕ್ತರು ಜಂಪನ್ನು ವಾಗುವಿನಲ್ಲಿ ಸ್ನಾನ, ತಾವು ತಂದ ತಮ್ಮ ತೂಕದ ಬೆಲ್ಲವನ್ನು ( ಇದನ್ನು ಇವರು ಬಂಗಾರ ಎನ್ನುತ್ತಾರೆ) ಅಮ್ಮಂದಿರಿಬ್ಬರಿಗೆ ಸಮರ್ಪಿಸುವುದು ನಡೆಯುತ್ತದೆ. ನಾಲ್ಕನೆಯ ದಿನ ಮತ್ತೆ ಈ ಮೂರ್ತಿಗಳನ್ನು ಮತ್ತು ಭರಣಿಯನ್ನು ಯಥಾ ಸ್ಥಾನಕ್ಕೆ ತಲುಪಿಸುತ್ತಾರೆ. ಇದನ್ನು “ತಲ್ಲುಲ(ತಾಯಂದಿರ) ವನಪ್ರವೇಶಂ” ಎಂದು ಕರೆಯುತ್ತಾರೆ. ಇಲ್ಲಿಗೆ ಜಾತ್ರೆ ಮುಗಿಯುತ್ತದೆ.

ಇದು ಭಾರತದಲ್ಲಿ ನಡೆಯುವ ಅತಿ ದೊಡ್ಡ ಗಿರಿಜನ ಜನಾಂಗದ ಜಾತ್ರೆ ಎಂದು ಪ್ರಸಿದ್ಧಿ ಪಡೆದಿದೆ. 2012 ರಲ್ಲಿ ಇಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಜನ ನೆರೆದ್ದಿದ್ದರೆಂದು ಅಂಕಿ ಅಂಶಗಳ ಪ್ರಕಾರ ತಿಳಿಯುತ್ತದೆ. ಭಾರತದಲ್ಲಿ ನಡೆಯುವ ಕುಂಭಮೇಲಾದ ಜನ ಸೇರುವಿಕೆಯ ನಂತರ ಇಷ್ಟು ಜನ ಸೇರುವುದು ಇಲ್ಲಿ ಮಾತ್ರ ಎಂದು ಹೇಳಲಾಗುತ್ತದೆ. ಮಧ್ಯ ಪ್ರದೇಶದ ಅಮರಕಂಟದಲ್ಲಿರುವ ’ ಗಿರಿಜನ ವಿಶ್ವವಿದ್ಯಾಲಯ’ ದ ಕುಲಪತಿಗಳಾಗಿ ಕೆಲಸ ನಿರ್ವಹಿಸಿದ ಡಾ. ತೇಜಸ್ವಿ ಕಟ್ಟಿಮನಿ ಯವರು ತಾವು ಬರೆದ “ಜಂಗ್ಲೀ ಕುಲಪತಿಯ ಜಂಗೀ ಕುಸ್ತಿ” ಎಂಬ ಪುಸ್ತಕದಲ್ಲಿ ಸಹ ಈ ಜಾತ್ರೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಕೇಂದ್ರ ಸರಕಾರವು ಇತ್ತೀಚೆಗೆ ಮುಲುಗು ಜಿಲ್ಲೆಯಲ್ಲಿ ಒಂದು “ಗಿರಿಜನ ವಿಶ್ವವಿದ್ಯಾಲಯ” ವನ್ನು ಮಂಜೂರು ಮಾಡಿದೆ.