ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಂಗಾತವೆಂದರೆ ಸರಳವಲ್ಲ

ಶಮ ನಂದಿಬೆಟ್ಟ
ಇತ್ತೀಚಿನ ಬರಹಗಳು: ಶಮ ನಂದಿಬೆಟ್ಟ (ಎಲ್ಲವನ್ನು ಓದಿ)

ಸಂಧ್ಯಾರಾಣಿ ಅವರು ಬರೆದ ಈ ಕವಿತೆಗೆ ಶಮ ನಂದಿಬೆಟ್ಟ ಅವರು ಬರೆದ ವ್ಯಾಖ್ಯೆ.

ಸಂಗಾತ

ಸಂಗಾತವೆಂದರೆ ಸರಳವಲ್ಲ
ಸಲೀಸು ಮೊದಲೇ ಅಲ್ಲ
ಕರೆ ಮಾಡಿದ ನಲ್ವತ್ತು ನಿಮಿಷಗಳಲ್ಲಿ
ಪೊಟ್ಟಣ ಹಿಡಿದು ಯಾರೂ
ಕರೆಗಂಟೆ ಒತ್ತುವುದಿಲ್ಲ

ಸಂಗಾತ ಎನ್ನುವುದೊಂದು
ಸಮುದ್ರ ಮಥನ
ನುಂಗಿಕೊಂಡಿದ್ದೇವೆ ಆಗಿಂದಾಗ್ಗೆ
ಅವನಿತ್ತ ವಿಷವನ್ನು ನಾನೂ
ನಾ ಬಡಿಸಿದ ಉದಾಸೀನವನ್ನು ಅವನೂ

ಇನ್ನಾಗದು ಎಂದು ಎದ್ದು ನಡೆದಾಗ
ಹೆಜ್ಜೆ ಗುರುತು ಹುಡುಕಿ ಅವನು ಬಂದಿದ್ದಾನೆ
ಅವನು ಹಾದಿ ಮರೆತಾಗ
ಮತ್ತೆ ಬರುವವರೆಗೂ ರಸ್ತೆ ತಿರುವಿನಲ್ಲಿ ಕುಳಿತು
ನಾನು ಕಾದಿದ್ದೇನೆ
ಪ್ರೀತಿಯ ಪ್ರತಿಜ್ಞೆಗಳಲ್ಲಿ ಕೆಲವನ್ನು
ಅವನು ಮುರಿದಿದ್ದಾನೆ
ಕೆಲವನ್ನು ನಾನು ಮರೆತಿದ್ದೇನೆ
ಒಮ್ಮೆ ಸಿಕ್ಕ ಹನಿ ಅಮೃತ
ಕಾಪಾಡುತ್ತಿದೆ ಬದುಕ

ಹಾಲು ಹೆಪ್ಪಿಡುವುದೊಂದು ಧಾರಣೆ
ಕಾದು ಕುದಿಯುವಾಗ ಹುಳಿ ಚಿಮುಕಿಸಿದರೆ
ಹಾಲು ಒಡೆಯುತ್ತದೆ
ತಣ್ಣಗಾಗಲು ಬಿಟ್ಟುಬಿಟ್ಟರೆ
ಮೊಸರು ಕಟ್ಟುವುದಿಲ್ಲ

ಅಣಿಯಾಗಬೇಕು
ಅಣಿಯಾಗಿಸಲೂ ಬೇಕು
ಹಾಲು ಹದವಾಗಿ ಮೊಸರಾಗುವಾಗ
ಪ್ರೀತಿ ಗೆಳೆತನವಾಗಿತ್ತು.


ಸಂಗಾತ ಬರೆದ ಕವಿ ಸಂಧ್ಯಾರಾಣಿ

ಸಂಗಾತ, ಆತ್ಮ ಸಾಂಗತ್ಯ ಮುಂತಾದ ಶಬ್ದಗಳನ್ನು ಅಲ್ಲೊಮ್ಮೆ ಇಲ್ಲೊಮ್ಮೆ ಎಂಬಂತೆ ಓದಿದ್ದೆನಾದರೂ ಅನುಭವಕ್ಕೆ ಬಾರದ ಹೊರತು ಇದು ಅರ್ಥವಾಗದ ವಿಷಯ ಎಂಬುದು ಸ್ಪಷ್ಟವಾಗಿತ್ತು. ಆದರೆ ಸಾಂಗತ್ಯ ಪ್ರಯತ್ನಪೂರ್ವಕ ಒಲಿಸಿಕೊಳ್ಳುವಂಥದ್ದೂ ಅಲ್ಲವೆಂಬ ಸತ್ಯವೂ ಅರಿವಾಗಿತ್ತು. ಇಂಥ ಹೊತ್ತಿನಲ್ಲಿ ನಾನು ಸ್ನಾತಕೋತ್ತರ ಪದವಿಯ ಹುಚ್ಚಿಗೆ ಬಿದ್ದಿದ್ದೆ. ಮಡಿಲಲ್ಲಾಡುತ್ತಿದ್ದ ಒಂದೂವರೆ ವರ್ಷದ ಕೂಸಿನ ಮೇಲಿರುವಷ್ಟೇ ಮೋಹದಿಂದ ಓದಿಗೆ ತೊಡಗಿಕೊಂಡ ಆ ದಿನಗಳಲ್ಲಿ ಹೊಸ ಜಗತ್ತು ನನ್ನೆದುರು ತೆರೆದುಕೊಂಡಿತ್ತು. ಜತೆಗೇ ಇಂಗ್ಲಿಷ್ ಕೂಡ ಕಲಿಯತೊಡಗಿದ ಕಾರಣ ಇನ್ನೊಂದಷ್ಟು ಬೋನಸ್ ಥರ ದಕ್ಕಿತ್ತು. ಅಂಥ ದಿನಗಳಲ್ಲಿ ಸಂಧ್ಯಾರಾಣಿ ಬರೆದ ನಿತ್ಯದ ಆಡು ಮಾತಿನಂಥ ಈ ಕವಿತೆಯನ್ನೋದಿದ್ದು ಮತ್ತು ಅದು ನನ್ನ ಇನ್ನಿಲ್ಲದಂತೆ ಆವರಿಸಿದ್ದು.
ಈ ಕವಿತೆಯಲ್ಲಿ ಅಂಥದ್ದೇನಿದೆ ಎಂದು ಯಾರಾದರೂ ಕೇಳಿದರೆ “ಏನಿಲ್ಲ?” ಮರು ಪ್ರಶ್ನೆ ಎಸೆಯಬಹುದು ನಾನು. ಬದುಕಿನ ದೈನಂದಿನ ಆಗುಹೋಗುಗಳನ್ನೇ ರೂಪಕವಾಗಿಸಿ ಸಂಬಂಧದ ಅಂದ, ಅವಶ್ಯಕತೆ ಮತ್ತು ಆಯಾಮಗಳನ್ನು ಬಿಡಿಸಿಟ್ಟ ಈ ಕವಿತೆ ನನ್ನ ಮಟ್ಟಿಗೆ ಥೇಟ್ ಪ್ರೀತಿಯಂತೆಯೇ ಗೂಢ ಮತ್ತು ಸುಂದರ ಅನಿಸಿದೆ.

ಕೈಯಲ್ಲೊಂದು ಮೊಬೈಲು ಹಿಡಿದುಕೊಂಡು ಮೂರ್ನಾಲ್ಕು ಗುಂಡಿಯೊತ್ತಿದರೆ ಸಾಕು ನಮಗಿಷ್ಟವೆಂದು ಆರ್ಡರ್ ಮಾಡಿದ ತಿನಿಸು ಇಂತಿಷ್ಟು ನಿಮಿಷಗಳಲ್ಲಿ ಮನೆ ಬಾಗಿಲಲ್ಲಿರುತ್ತದೆಂಬ ಸೂಚನೆ ಕ್ಷಣ ಮಾತ್ರದಲ್ಲಿ ತಲುಪಿರುತ್ತದೆ. ಜೀವದ ಆಸೆಯಿಲ್ಲದವನಂತೆ ಕರಾರುವಾಕ್ ಸಮಯ ಪಾಲನೆಯತ್ತ ಮಾತ್ರ ಗಮನವಿಟ್ಟ ಡೆಲಿವರಿ ಹುಡುಗ ಕರೆಗಂಟೆ ಒತ್ತುವಾಗ ನಮಗೆ ವಾಹ್ ಎನಿಸುವುದಾದರೂ ಆ ಕೆಲಸ ಸಲೀಸಾದ್ದಲ್ಲ.. ಆಧುನಿಕ ಸಮಾಜದ ಈ ನಿತ್ಯ ವ್ಯವಹಾರದ ಎಳೆಯನ್ನಿಟ್ಟುಕೊಂಡೇ ಪ್ರಾರಂಭವಾಗುವ ಕವಿತೆಯಲ್ಲಿ ದೈನಂದಿನ ಬದುಕಿನ ಎಳೆಗಳನ್ನು ಪ್ರೀತಿಯೊಂದಿಗೆ ತಳುಕು ಹಾಕಿ ಮುಂದುವರಿಯುವ ಸಾಲುಗಳು ಪ್ರೀತಿಯಷ್ಟೇ ಆಪ್ತವಾಗುತ್ತದೆ. ಪ್ರೀತಿ ಸುಲಭಕ್ಕೆ ದಕ್ಕುವಂಥದ್ದಲ್ಲ, ಬೇಕೆಂದು ಆರ್ಡರ್ ಮಾಡಿದಾಕ್ಷಣ ಲೀಕ್’ಪ್ರೂಫ್ ಡಬ್ಬದಲ್ಲಿ ಹೊಸಿಲಿಗೆ ಬಂದು “ಒಳಗಿಳಿಸಿಕೋ” ಎನ್ನುವುದಿಲ್ಲ.

ಸಂಗಾತ ಎಂದರೆ ಬರಿಯ ಪ್ರೀತಿಯಲ್ಲ. ಅದು ಬರಿಯ ಆಕರ್ಷಣೆಯಂಥ ಭಾವವೋ, ಬೇಕುಗಳ ಸಮ್ಮೇಳವೋ, ಮುನಿಸುಗಳ ಕರ್ಕರೆಯೋ ಅಲ್ಲ. ಅದು ಅವೆಲ್ಲವೂ ಇರುವಂಥದ್ದು ಮತ್ತು ಅವನ್ನೆಲ್ಲ ಮೀರಿಯೂ ಉಳಿವಂಥದ್ದು. ಒಮ್ಮತವಿಲ್ಲದಿದ್ದಾಗ್ಯೂ ಜತೆಯಾಗುವ, ಸಿಟ್ಟು, ಸೆಡವು, ಸಿಡುಕುಗಳ ನಡುವೆಯೂ ಪರಸ್ಪರ ಬೇಕಾಗುತ್ತಲೇ ಇರುವ, ಮೋಹದ ಮಾಧುರ್ಯದ ಬನಿಯ ಜತೆಗೇ ಅದೂ ಅತಿಯಾಗಿ ಹೀಕರಿಸಿ ಬೇಡವಾಗದಂತೆ ಕಾಯ್ದುಕೊಂಡು ಪೊರೆಯುವಂಥದ್ದು ಸಾಂಗತ್ಯ. ನಂಗೆ ನೀನು, ನಿಂಗೆ ನಾನು ಎಂಬುದು ದಿಟವಾದರೂ ಅದಷ್ಟೇ ಅಲ್ಲ, ಸಂಗಾತಿಗೆ ನಾನಲ್ಲದೆ ನನ್ನಾಚೆಗೂ ಒಂದು ಬದುಕಿದೆ ಎಂಬ ಸತ್ಯವನ್ನೂ ಅರ್ಥ ಮಾಡಿಕೊಂಡು ಕಟ್ಟಿ ಹಾಕಿ ಬೇಲಿಯೊಳಗಿಡದೇ ಬಯಲನ್ನು ಒಲುಮೆಯ ಆಲಯವಾಗಿಸುವುದು ನೈಜ ಸಾಂಗತ್ಯ. ಅದಕ್ಕೇ ಸಾಂಗತ್ಯವೆಂದರೆ ಒಲವೆಂಬುದನ್ನು ಪೂರ್ತಿ ಒಳಗೊಂಡದ್ದು ಮತ್ತು ಅದನ್ನೂ ಮೀರಿದ್ದು. ಆದ್ದರಿಂದಲೇ ಅದು ಸಮುದ್ರ ಮಥನದಂಥದ್ದು.

ಪ್ರೇಮದ ಹುಟ್ಟಿನ ಹೊತ್ತಿಗೆ ಇದ್ದ ಮಾರ್ದವ ಭಾವಗಳೆಷ್ಟೋ ಮಿಥ್ಯೆಯೆನಿಸುವುದು, ಕನಸಿನ ಗುಳ್ಳೆಗಳು ಒಡೆಯುವುದು ಜತೆಗೇ ಬದುಕಲು ಶುರುವಾದಾಗಲೇ ಎನ್ನುವುದು ಪರಮ ಸತ್ಯ. ಆವಾಗಲೇ ಮಥಿಸಿದ ಸಮುದ್ರದಿಂದ ವಿಷವೆದ್ದು ಬರುವುದು. ಆ ಮನೋ ಸ್ಥಿತಿಯಲ್ಲಿ ಅಟ್ಟುಂಬೊಳ (ಅಡಿಗೆ ಮನೆ) ಬೇಯುವುದು ಬಡಿಸುವುದೂ ಉದಾಸೀನವಲ್ಲದೇ ಮತ್ತೇನಿದ್ದೀತು? ಎಂತ ರಮ್ಯ ಭಾವವಿದ್ದರೂ ವಿಷ ಎಷ್ಟು ಕಾಲ ಕುಡಿಯಲಾದೀತು ಎನ್ನುತ್ತ ಅವಳು ಎದ್ದು ನಡೆದಳು ಎನ್ನುತ್ತದೆ ಕವಿತೆ. ಅವನಾದರೂ ಎಂಥವನು! ಬೇಸರಿಸಿ ಹಾಗೆ ಹೋದಳೆಂದು ಸುಮ್ಮನಾಗಲಿಲ್ಲ; ಅವಳ ಚಿರ ಪರಿಚಿತ ಹೆಜ್ಜೆಗಳ ಹುಡುಕಿ ಹೋಗಿ ಮರಳಿ ತೆಕ್ಕೆಗೆ ಸೇರಿಸಿಕೊಂಡಿದ್ದಾನೆ. ಅವನಿವಳ ಕರೆಗೆ ಓಗೊಡದೇ ನಿರ್ಲಕ್ಷಿಸಿ ಹಾದಿ ಮರೆತಾಗ ಮತ್ತೆ ಬರುವ ವರೆಗೂ ರಸ್ತೆ ತಿರುವಿನಲ್ಲಿ ಕಾಯುತ್ತ ಕೂತಿದ್ದಾಳೆಂದರೆ ಅದವಳ ಆಗಾಧ ತಾಳ್ಮೆ, ಮತ್ತೆ ಬಂದೇ ಬರುವನೆಂಬ ಸುಮೇರು ನಂಬಿಕೆ, ಕಹಿ ಮರೆತು ಮತ್ತೆ ಸಿಹಿಯುಣಿಸುವ ಅಕ್ಕರೆ, ಅವನ ಪ್ರೀತಿಗಾಗಿ ಕಾಯುತ್ತಲೇ ಇರುವ ಅವಳೊಲುಮೆಯ ಆಳ ಎಲ್ಲದರ ಹದಪಾಕ. ಈ ರುಚಿಯನ್ನು ಉಣಿಸುವ ಕವಿತೆ ಬಹು ಸರಳವಿದ್ದರೂ ಆತ್ಮ ಸಮ್ಮಾನದ ಪಾರಮ್ಯ ಹಂಚಿಕೊಂಡು ಸಾಂಗತ್ಯ ನಿರ್ವಹಿಸುವುದು ಇಷ್ಟು ಸರಳವಲ್ಲ. ರುಚಿಯಾಗಿ ಅಡಿಗೆ ಮಾಡುವುದು ರಸಪಾಕ ಮೆಲ್ಲುತ್ತ ಉಂಡಷ್ಟು ಸುಲಭವಲ್ಲ.

ಪ್ರೀತಿಯ ಶುರುವಾತಿನ ದಿನಗಳಲ್ಲಿ ಮಾತಿನರಮನೆ ಕಟ್ಟಿ ಪ್ರತಿಜ್ಞೆ ಮಾಡುವುದೇ ಒಂದು ಮೋದ. “ಇಪ್ಪತ್ತನಾಲ್ಕು ಗಂಟೆಯೂ ಜೊತೆಗಿರುವೆ” ಎನ್ನುತ್ತಿದ್ದ ಮಾತುಗಳೆಷ್ಟು ದಡ್ಡತನದ್ದು ಎಂಬ ಜ್ಞಾನೋದಯ ಆಗುವುದು, ಅವುಗಳ ಮರೆಯುವ ಜಾಣತನ ತಂತಾನೇ ಬರುವುದು ಒಂದೇ ಗೂಡಿನಲ್ಲಿ ಬದುಕಲು ಶುರುವಾದಾಗ. ಅಷ್ಟೊಂದು ರಮ್ಯವೆನಿಸಿದ್ದ ಕಲ್ಪನೆಯ ವಾಸ್ತವ ಹೀಗೆಲ್ಲ ಇರುವುದನ್ನು ಒಪ್ಪಿಕೊಳ್ಳಲು ಮನಸ್ಸು ಹಿಂದೇಟು ಹಾಕುವುದೂ ಅಷ್ಟೇ ಸಹಜ. ಆದರೆ ಒಪ್ಪಿ ಅಪ್ಪಿಕೊಂಡ ಬದುಕನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಇಷ್ಟೆಲ್ಲದರ ನಡುವೆಲ್ಲೋ ಸಿಕ್ಕ ಅರೆಘಳಿಗೆಯ ಸಂತಸವನ್ನೇ ಅಮೃತವೆಂದು ಸವಿಯಬೇಕು, ಸಂಭಾಳಿಸಬೇಕು. ಹೆಪ್ಪಿಡುವುದು ಸುಮ್ಮನೇ ಮಾತಲ್ಲ ಎಂದು ಆಗ ಅರ್ಥವಾಗುತ್ತದೆ. ಹಾಲನ್ನು ಮೊಸರಾಗಿಸುವ ಪ್ರಕ್ರಿಯೆಯ ಮೂಲಕ ಸಂಬಂಧವನ್ನು ಸಂಭಾಳಿಸುವುದನ್ನೂ ಸರಳವಾಗಿ ನಮ್ಮ ಮುಂದೆ ತೆರೆದಿಡುತ್ತಿದೆ ಎನಿಸಿದರೂ ಪ್ರೀತಿಯನ್ನು ಹರಳುಗಟ್ಟಿಸುವ ಕ್ಲಿಷ್ಟತೆಯನ್ನೂ ಅಷ್ಟೇ ನಯವಾಗಿ ನಮ್ಮ ಮುಂದಿಡುತ್ತದೆ. ಹೌದು, ಕೋಪದಲ್ಲೋ, ನೋವಿನಲ್ಲೋ ಕುದಿಯುವ ಹೊತ್ತಿಗೆ ಹುಳಿ ಬಿದ್ದರೆ ಒಡೆವ ಬದುಕು ನಿರ್ಲಕ್ಷ್ಯಕ್ಕೆ ತಣ್ಣಗಾಗಿ ನೀಲಿಗಟ್ಟಬಹುದು. ಸಾಂಗತ್ಯ ಹಾಲು ಹೆಪ್ಪಿಡುವ ಧಾರಣೆಗಿಂತ ಭಿನ್ನವಲ್ಲ. ಪ್ರತಿಯೊಂದರಲ್ಲೂ ಹದ ಕಾಯ್ದುಕೊಳ್ಳಬೇಕು. ಕಾಳಜಿಯೇ ಆದರೂ ಕೊಂಚ ಹೆಚ್ಚೆನಿಸಿದರೆ ಎಲ್ಲಾದಕ್ಕೂ ಮೂಗು ತೂರಿಸಿ ಖಾಸಗಿ ಕ್ಷಣಗಳೇ ಇಲ್ಲದೇ ಮೂಗುಬ್ಬಸ ಬರಬಹುದು. ತನಗೆ ಹೇಗೆ ಬೇಕೋ ಹಾಗಿರಲಿ ಎಂದರೆ ಗಮನದ ನೀರಿಲ್ಲದ ಒಲವಿನ ಬಳ್ಳಿ ಒಣಗಬಹುದು. ಇಡೀ ಕವನದ ಆಶಯವಾಗಿ ಮೂಡಿ ಬಂದ ಸಾಲು “ಅಣಿಯಾಗಬೇಕು, ಅಣಿಯಾಗಿಸಲೂ ಬೇಕು” ಇದೇ ಸಾಂಗತ್ಯದ ತಿರುಳು ಎನ್ನುತ್ತ ಭಾವ ಸಮೃದ್ಧಿಯ ಹೂರಣದ ಸೊಗಸನ್ನು ಬಿಂಬಿಸುತ್ತದೆ.

ಪ್ರೀತಿಯೆಂದರೆ ಗೆಳೆತನದ ಉತ್ತುಂಗವೆಂದೇ ಬಗೆದ ನನಗೆ ಆಗಾಧ ಸ್ನೇಹವೊಂದು ಎರಡು ಜೀವಗಳ ನಡುವೆ ಹಾಸು ಹೊಕ್ಕಾಗಿರದಿದ್ದರೆ ಆ ಸಂಬಂಧ ಅಲ್ಪಾಯುಷಿ ಎನ್ನುವುದು ಗಾಢ ನಂಬಿಕೆ ಮತ್ತು ಅನುಭವ. ಒಲವು ಕೂಡ ಅಕ್ಷಯ ಪಾತ್ರೆಯಲ್ಲ, ಖಾಲಿಯಾಗುತ್ತಿದೆ ಎಂಬ ಅರಿವು ತಂದುಕೊಂಡು ಇಬ್ಬರ ಬೊಗಸೆಗಳನ್ನೂ ಸೇರಿಸಿ ಮೊಗೆದು ಸುರಿಯಲೇಬೇಕು. ಈ ಸಂಗಾತಿ ಬೇಕು ಅನಿಸಿದಾಗಲ್ಲ, ಈ ಸಂಗಾತಿಯಿಲ್ಲದೇ ಅಂದದ ಬದುಕೇ ಸಾಧ್ಯವಿಲ್ಲ ಎನಿಸಿದಾಗಷ್ಟೇ ಹೀಗೆ ತುಂಬಿಸಲು ಸಾಧ್ಯವಾಗುತ್ತದೆ. ಇದನ್ನೇ ಹೇಳುತ್ತ ಕೊನೆಯಾಗುವ ಕವಿತೆ ಪ್ರೀತಿ, ಸ್ನೇಹದಷ್ಟೇ ನವಿರಾದ ಭಾವವನ್ನು ನನ್ನೊಳಗೆ ನೆಟ್ಟಿದೆ, ಆ ಮೂಲಕವೇ ತಟ್ಟಿದೆ. ಓದಿದಷ್ಟು ಸಲವೂ ನನ್ನೆದೆಯ ಸುತ್ತ ಹೆಣೆದ ಜೀವಗಳನ್ನು ನೇವರಿಸುವ ಪರಿಯನ್ನು ಅವಲೋಕಿಸಿ ಸ್ನೇಹ ವಲ್ಲರಿಗಳ ಹಸಿರಾಗಿ ಇರಿಸುವ ಪ್ರಯತ್ನವನ್ನು ಸದಾ ಜಾರಿಯಲ್ಲಿ ಇರಿಸಲು ಪಿಸುಗುಟ್ಟಿ ಪೊರೆಯುತ್ತದೆ.