- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
“ಬ್ರಿಟನ್ ವೈರಸ್ ಬಂದಿದೆ!” “ಹೊಸವರ್ಷಾಚರಣೆ ಸಾಮೂಹಿಕವಾಗಿ ಇಲ್ಲ!” ಇತ್ಯಾದಿ ಸುದ್ದಿ ಓದುವಾಗಲೆ ಇನ್ನೊಂದು ಸುದ್ದಿ ಓದಿದೆ.ವಿಶೇಷ ಅನ್ನಿಸಿದರೂ ಸಹಜ ಅನ್ನಿಸಿತು. ಅದೇ ನಮ್ಮ ಶಿಕ್ಷಣ ಸಚಿವರಾದ ಮಾನ್ಯ ಶ್ರೀ ಸುರೇಶ್ ಕುಮಾರ್ ರವರು ಬಿ.ಎಮ್.ಎಸ್ ಕಾಲೇಜಿಗೆ ತರಗತಿ ಪ್ರಾರಂಭಿಸಲು ತೆಗೆದುಕೊಂಡಿದ್ದ ಮುಂಜಾಗೃತಾ ಕ್ರಮಗಳನ್ನು ಪರಿಶೀಲಿಸಲು ಹೋದಾಗ ಬೆಂಚಿನ ಮೇಲಿದ್ದ ಬರಹ ನೋಡಿ ಮುಗುಳ್ನಕ್ಕಿದ್ದು. ಬೆಂಚುಬರಹ ಅದೇ ಡೆಸ್ಕ್ ರೈಟಿಂಗ್ . ನಗಣ್ಯ ಅನ್ನಿಸಿದರೂ ಕುತೂಹಲ ತರಿಸುವ ಬರಹ ಇದು. ಕೊರೊನಾ ವ್ಯಾಧಿ ನಿಮಿತ್ತ ತರಗತಿಗಳಿಲ್ಲದಿರುವುದರಿಂದ ಬೆಂಚುಬರಹಗಾರರಿಗೆ ಅವಕಾಶವಿಲ್ಲದಂತಾಗಿದೆ.
ಏನಿದು ಬೆಂಚು ಬರೆಹ? ಭಿತ್ತಿ ಬರೆಹ, ಚಿತ್ರ ಬರೆಹ ಎಲ್ಲವೂ ಸಾಮಾನ್ಯ.ಆದರೆ ಇದು ಬೆಂಚು ಬರೆಹ. ಇದನ್ನು ಯಾರು ಬರೆಯುತ್ತಾರೆ? ಉತ್ತರ ಸುಲಭ. ಇದನ್ನು ಬರೆಯುವವರು ನಮ್ಮ ವಿದ್ಯಾರ್ಥಿ ಮಿತ್ರರೇ ಅಲ್ಲವೇ? ಬೆಂಚು ಬರೆಹಕ್ಕೆ ಇಂತಹುದೇ ವಸ್ತು ಬೇಕೆಂದಿಲ್ಲ. ಮನಸ್ಸಿಗೆ ತೋಚಿದ್ದೆಲ್ಲ ಇಲ್ಲಿ ವಸ್ತುವೇ. ಮನಸ್ಸಿಗೆ ತೋಚಿದ್ದೆಲ್ಲಾ ಇಲ್ಲಿ ವಸ್ತುವೇ ಅಪೂರ್ವ ಬರೆಹ. ಅಪೂರ್ವ ಕಲಾಕೃತಿಗಳು. ಈ ಬರೆಹದಲ್ಲಿ ವೈಯ್ಯಾರದಿಂದ ಬಳಕುವ ಲಲನೆಯರಿಗಾಗಲೀ, ಸಿಟ್ಟು ಮುಖದ ರೂಪಿಣಿಯರಿಗಾಗಲೀ ಏನೂ ಕೊರತೆಯಿರುವುದಿಲ್ಲ.
ಅದರಲ್ಲೂ ವಿವಿಧ ಹಾವಭಾವದ ಮುಖಚಿತ್ರಗಳಿಗೆ ಪ್ರಾಶಸ್ತ್ಯ ಹೆಚ್ಚು.
ವಿದ್ಯಾರ್ಥಿಗಳ ಪ್ರವರದಿಂದಲೆ ಪ್ರಾರಂಭಗೊಳ್ಳುವ ಈ ಬರೆಹಗಳಲ್ಲಿ ಅವರ ನೆಚ್ಚಿನ ಸಿನೆಮಾ ತಾರೆಯರಿಗಾಗಿ, ಸಿನೆಮಾಗಳ ಹೆಸರಿಗೇ ಆದ್ಯತೆ, ಸಿನೆಮಾ ಗೀತೆಗಳ ಸಾಲುಗಳನ್ನು ಟ್ಯಾಟುಗಳನ್ನೋ, ಕಾರ್ಟೂನುಗಳನ್ನೋ, ಸ್ನೇಹಿತರ ಹೆಸರು,ಅವರಿಗೆ ಇಟ್ಟಿರುವ ಹೆಸರುಗಳು, ಕಟ್ಟಿರುವ ಹೆಸರುಗಳನ್ನು ಬರೆದಿರುವುದಿಲ್ಲ ಕೆತ್ತಿರುತ್ತಾರೆ. “ಬಸ್ ಮಿಸ್” ಎಂಬ ಸಾರ್ವಕಾಲಿಕ ಡೈಲಾಗ್ ಹೇಳುವ ಇವರುಗಳು ಮತ್ತೆ ಬಸ್ ಲೇಟಾಗುತ್ತೆ ಎಂದು ಬೇಗ ಕಾಲ್ತೆಗೆಯುವ ಇವರ ಕಲಾಭ್ಯಾಸಕ್ಕೆ ಸಮಯ ಯಾವಾಗ ನಿಗದಿಯಾಗಿರುತ್ತದೋ ತಿಳಿಯದು.
ಹಾಗೆ ಒಂದು ಸುತ್ತು ಕಣ್ಣಾಡಿಸಿದರೆ ವಿಮರ್ಶಕರಿಗೇ ದಂಗಾಗುವ ಟೀಕೆಗಳು ಇಲ್ಲಿ ಸಿಗುತ್ತವೆ. “ನೋಟ್ಸ್ ಬರೀರಿ” ಎಂದರೆ ಕಳ್ಳಾಟ ಆಡುವ ಇವರು ಟೆಸ್ಟ್ ಇದೆ. ಎಂದರೆ ಚಕ್ಕರ್ ಹಾಕುವ ಇವರು, ತಾಳ್ಮೆಯಿಂದ ಬೆಂಚ್ ಬರೆಹವನ್ನು ಬರೆಯುವುದು ಸತ್ಯ.
ಈ ಬೆಂಚ್ ಬರೆಹ ಕೆಲವೊಮ್ಮೆ ಬ್ರಹ್ಮಲಿಪಿಯೇನೋ“ಲಿಖಿತಂ ಲಿಖಿತಂ ಮಮಲಿಖಿತಂ ಓದಲಿಕ್ಕಿದು ಅಸಾಧ್ಯಂ” ಅಂದುಕೊಂಡರೂ ಬರೆದವರಿಗೇ ಓದಲಸಾಧ್ಯವಾದರೂ ಓದುವವರು ಓದಿಯೇ ಬಿಡಬಹುದು. ಬರೆಯಬಾರದ ಗೋಡೆ, ಬೆಂಚುಗಳಲ್ಲಿ ಬರೆಹ ಒಡಮೂಡಿದರೆ ಏನು ಪ್ರಯೋಜನ? ಕಾಗದದಲ್ಲಿ ಬರೆಯಬಹುದಲ್ಲ, ಅಸಲಿಗೆ ನಿಮ್ಮ ಪ್ರತಿಭಾ ಗೀಳಿಗೆ ಬೆಂಚೊಂದೇ ಏಕೆ ಸಿಗಬೇಕು ಡೆಸ್ಕ್ಗಳೇ ಆಗಬೇಕೆ? ಇಂಥ ಬರೆಹಗಳು ವಿದ್ಯಾರ್ಥಿಗಳ ಅತೀಬುದ್ಧಿವಂತಿಕೆಯನ್ನು ತಿಳಿಸುತ್ತವೆ. ಇತಿಹಾಸವನ್ನು ಆದಷ್ಟೂ ಸಂಕ್ಷಿಪ್ತವಾಗಿ, ಅರ್ಥಶಾಸ್ತ್ರವನ್ನು ಅವರಿಗೆ ಅರ್ಥವಾಗುವಂತೆ, ಗಣಿತದ ಫಾರ್ಮುಲಗಳು ಸುಲಭವಾಗಿ ಹೊಳೆಯುವಂತೆ ಬರೆದುಕೊಂಡಿರುತ್ತಾರೆ. ಹೂವಿನ ಚಿತ್ರಗಳು,ಸೂರ್ಯೋದಯ, ಚಂದ್ರೋದಯ, ಬೆಟ್ಟಗುಡ್ಡ, ಕಾಡು, ನದಿ ಎಲ್ಲವೂ ಇರುತ್ತವೆ. ಶಾಯರಿಗಳನ್ನು ಚುಟುಕುಗಳನ್ನು, ಅಣಕಳನ್ನು ಅಥವಾ ಹಸ್ತಾಕ್ಷರಗಳನ್ನು ಬರೆಯುವ ವಿದ್ಯಾರ್ಥಿಗಳಿಗೇನೂ ಕೊರತೆಯಿಲ್ಲ. ಪಾಠ ಹೇಳುವ ಮೇಷ್ಟ್ರುಗಳನ್ನು ಅವಹೇಳನ ಮಾಡಿಯೋ ಅವರ ವ್ಯಂಗ್ಯ ಚಿತ್ರ ಬರೆದು ಆಕ್ರೋಶವನ್ನು ಇಂಗಿಸಿಕೊಂಡಿರಬಹುದು.
ನನ್ನ ಪ್ರಶ್ನೆ ಇಷ್ಟೆ. ಬೆಂಚ್ ಮೇಲೆ ಬರೆದು ಚಿತ್ರ ಬಿಡಿಸಿ ಉಪನ್ಯಾಸಕರುಗಳಿಗೇ ಸವಾಲು ಹಾಕುವಂಥ ಟಿಪ್ಪಣಿಗಳನ್ನು ಬರೆಯುವ ನೀವು ನಿಮ್ಮದೇ ಪ್ರತಿಭೆಯ ಮೂಲಕ ಬೆಂಚ್ ದಾಟಿ ನಿಮ್ಮ ಶಾಲೆಯ ಅಥವಾ ನೋಟೀಸ್ ಬೋರ್ಡ್ ತಲುಪುವಂತೆ ನೋಡಿಕೊಳ್ಳಿ. ನಿಮ್ಮ ಸಹಪಾಠಿಗಳ ದರ್ಶನಕ್ಕೆ ಮಾತ್ರ ಲಭ್ಯವಿರುವ ನಿಮ್ಮ ವ್ಯಂಗ್ಯ ಚಿತ್ರಗಳು, ಕಾರ್ಟೂನ್ಗಳು “ಆರ್ಟ್ ಬೈ” ಎಂದು ಸಹಿ ಮಾಡುವುದೆಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಲಿ, ನಿಮ್ಮ ಚಿತ್ರಕಲೆಗೆ ಅಭಿವ್ಯಕ್ತಿ ಮಾಧ್ಯಮವಾಗಿರುವ ಬೆಂಚ್ ನಿಮ್ಮ ಹಿಂದೆಬಾರದು. ಯಾವುದೋ ಹಾಳೆಗಳಲ್ಲಿ ಬರೆದು ನೀವೇ ಇಟ್ಟುಕೊಂಡರೆ ಒಂದಲ್ಲ ಒಂದು ದಿನ ನಿಮಗೆ ಸಂತೋಷವನ್ನೋ, ಸಿಟ್ಟನ್ನೋ ತರಿಸಬಲ್ಲದು ಅಥವಾ ವಿದ್ಯಾರ್ಥಿ ಜೀವನದ ದಿನಗಳನ್ನು ನೆನಪಿಸಬಹುದು. ಕ್ಷಣಕಾಲ ಬದುಕಿನ ಜಂಜಾಟ ಮರೆತರೂ ಮರೆಯಬಹುದೇನೋ, ಆದರೆ ಬೆಂಚು ಬರೆಹ ಮಾತ್ರ ವ್ಯರ್ಥ.
ಹೆಚ್ಚಿನ ಬರಹಗಳಿಗಾಗಿ
ಪುಸ್ತಕ
ಪ್ರತಿ-ಮಾ
ಚಂದಿರ ಚಂದಿರ…