ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಂದಿರ ಚಂದಿರ​…

ಸುಮನ ದೇಸಾಯಿ
ಇತ್ತೀಚಿನ ಬರಹಗಳು: ಸುಮನ ದೇಸಾಯಿ (ಎಲ್ಲವನ್ನು ಓದಿ)

ಚಂದಾಮಾಮಾ……….
“ಚಂದಪ್ಪ ಚಂದಪ್ಪ ಚಾರಿಕಾಯಿ,
ಬಟ್ಟಲ ತುಂಬ ಬಾರಿ ಕಾಯಿ,
ನಂಗೊಂದ್ ಕೋಡ,ನೀ ಒಂದ್ ತಿನ್ನ” ಅಂತ ಈ ಸಣ್ಣ ಮಕ್ಕಳನ ಆಡಸ್ಬೇಕಾದರ ಸಹಸಾ ಚಂದಪ್ಪನ ಮ್ಯಾಲಿನ ಹಾಡ ಹಾಡಿನ ಅಡಸತಿರತಾರ.ಸಣ್ಣ ಕೂಸ ಇದ್ದಾಗಿಂದ ಹಿಡಕೊಂಡ ಈ ಚಂದಪ್ಪ ನಮ್ಮ ಒಡನಾಡಿ ಆಗಿರತಾನ.

ಒಂದೊಂದ ಸಲಾ ಅನಿಸ್ತದ, ನಮ್ಮಿಂದ ಎಷ್ಟೋ ಮೈಲ ದೂರ ಇರೋ ಈ ಚಂದ್ರಗ್ರಹದ ಜೋಡಿ ನಮಗಿರೊ ಭಾವನಾತ್ಮಕ ಸಂಬಂಧ ನೆನಿಸ್ಕೊಂಡ್ರ ಭಾಳ ವಿಚಿತ್ರ ಅನಿಸ್ತದ. ನಮ್ಮ ಜೀವನಕ್ಕ,ಉಸಿರಿಗೆ ಹತ್ರ ಇರೊವರಿಂದನು ಸಿಗಲಾರದ ಆತ್ಮೀಯತೆಯನ್ನ ಒಮ್ಮೊಮ್ಮೆ ಈ ಚಂದ್ರನಿಂದ ಪಡಿತೇವಿ.

ತಾಯಿ ಇಲ್ಲದಿದ್ರು ಸೋದರಮಾವ ಇರಬೇಕಂತಾರ ಅಂದ್ರ ತಾಯಿ ಸ್ಥಾನಾನ ಮಾವ ಮಾತ್ರ ತುಂಬಲಿಕ್ಕೆ ಸಾಧ್ಯ. ನಮ್ಮ ದೇಶದಾಗ ಅಂಥಾ ಒಂದು ವಿಶೇಷ ಪ್ರೀತಿ ಅಂತಃಕರಣವನ್ನ ನಾವು ಚಂದಾಮಾಮಾಗ ಕೊಟ್ಟೇವಿ.

ಯಾವುದೇ ಒಂದು ಘನವಸ್ತುವಿಗೆ ಜೀವಾ ತುಂಬಿ, ಭಾವನೆಗಳಿಂದ ಕಟ್ಟಿ, ನಮ್ಮ ಜೀವನದೊಳಗ ಒಂದು ವಿಶೇಷ ಸ್ಥಾನ ಕೊಟ್ಟು ಆದರಿಸೊದು ನಮ್ಮ ದೇಶದ ಸಂಸ್ಕೃತಿಯ​ ಗುಣವಿಶೇಷಣ ಅದ.

ಅಸಲಿಗೆ ಅದು ಧೂಳು,ಮಣ್ಣು,ಗುಡ್ಡಗೊಳ ಇರೋ ಒಣಾ ಒಣಾ ಒಂದ ಗ್ರಹ ಅಷ್ಟ. ಅಲ್ಲೆ ಹೊದ್ರ ಮನಷ್ಯಾಗ ಉಸಿರಾಡಲಿಕ್ಕೆ ಸುಧ್ಧಾ ಆಗುದಿಲ್ಲಾ ಆದ್ರು ನಾವು ಚಂದ್ರನ ಪ್ರೀತಿಸ್ತೇವಿ. ಪ್ರೀತಿಗೆ ಛಂದಾಚಾರಾ,ಸಮೃದ್ಧಿ ಸುಖಸಾಧನಗಳ ಬೇಕಂತಿಲ್ಲಾ, ಅದು ಮನಸ್ಸಿಗೆ ಸಂಬಂಧಪಟ್ಟಿದ್ದಿರತದ. ಯಾವ ವಸ್ತು ನಮ್ಮ ಮನಸಿಗೆ ಎಷ್ಟು ಖುಷಿ ಕೊಡತದ​ ಅದು ಮುಖ್ಯ ಇರತದ.

ಮೈಲಿ ದೂರದಾಗ ಇರೊ, ನೋಡಿದ ಕೂಡಲೆ ನಮ್ಮ ಮುಖದ ಮ್ಯಾಲೆ ಸಂತೋಷದ ನಗು ಬರಸೊ ಚಂದಾಮಾಮಾನ ಇದಕ್ಕ ಸಾಕ್ಷಿ.

ಸಣ್ಣ ಕೂಸ ಇದ್ದಾಗಿನಿಂದನು ಊಟಾ,ಆಟಾ,ನಗು,ಅಳು ಎಲ್ಲಾ ಆ ಚಂದಾಮಾಮಾನ ಸಮಕ್ಷಮನ ಆಗಬೇಕು. ಕೂಸು ಎಷ್ಟೇ ಜೋರ ಅಳಲಿಕತ್ತಿದ್ರುನು ಆ ಚಂದಾಮಾಮಾನ ತೋರಿಸಿಬಿಟ್ರ ಸಾಕು ಸುಮ್ನಾಗಿ ಒಂದಕ್ಷಣದಾಗ ಮುಖದ ತುಂಬ ನಗು ತುಂಬಕೊಂಡು ಆಕಾಶದ ಕಡೆ ಕೈ ಮಾಡಿ ಬಾ ಬಾ ಅಂತ ಕರಿತದ.

ಒಂದ ಹೆಣ್ಣಿಗೆ ತವರು ಮನಿ ಅಂದಕೂಡಲೆ ತಾಯಿ ತಂದಿಕಿಂತಾ ಅಣ್ಣತಮ್ಮಂದ್ರನ ಭಾಳ ನೆನಸತಿರತಾಳ, ದೂರದ ಅವರನ್ನ ನೆನಿಸಿಕೊಂಡಾಗ ತನ್ನಲ್ಲಿರೊ ಬ್ಯಾಸರಾ,ನೋವು, ಮರತು ಒಂಥಾರ ಮನಸ್ಸು ಹಗರಾಗತದ ಹಂಗ ತನ್ನ ಕೂಸು ಅಳಲಿಕತ್ತಾಗು ಮನಸಿಗೆ ತಂಪುಕೊಡೊ ತವರಿನ ನೆನಪು ತನ್ನ ಕೂಸಿಗು ಸಮಾಧಾನ ಮಾಡತದ ಅನ್ನೊ ನಂಬಿಕಿಯಿಂದ ತನ್ನ ಅಣ್ಣತಮ್ಮಂದ್ರಂಘ  ತನ್ನಿಂದ ದೂರ ಇರೊ ಚಂದ್ರನ ತೋರಿಸಿ ” ನೋಡಲ್ಲೆ ಚಂದಾಮಾಮಾ ಇದ್ದಾನ, ಆಂವನ್ನ ಕರಿ ನಿನ್ನ ಜೋಡಿ ಆಟಾ ಆಡಲಿಕ್ಕೆ ಬರತಾನ” ಅಂತ ಹೇಳಿ ಸಮಾಧಾನ ಮಾಡತಾಳ.

ನಮ್ಮ ಅಮ್ಮನು ನಾ ಸಣ್ಣಾಕಿದ್ದಾಗ ಸಹಜ ಎಲ್ಲಾ ತಾಯಂದ್ರಂಘ ಚಂದಪ್ಪನ ತೋರಿಸಿಕೊತ,ಆಂವನ ಕಥಿ ಹೇಳ್ಕೊತನ ಊಟಾಮಾಡಸತಿದ್ಲಂತ. ಆ ರೂಢಿ ನಾವು ಸ್ವಲ್ಪ ದೊಡ್ಡವರಾಗಿ ಸಾಲಿಗೆ ಹೊಂಟಮ್ಯಾಲೆನು ಮುಂದವರಕೊತನ ಬಂತು. ಬರಬರತ ನಂಗ ಚಂದ್ರನ ಬಗ್ಗೆ ಇದ್ದ ಆಕರ್ಶಣೆ, ಕೂತುಹಲಾ ಒಂದ ರೀತಿಯ ಸ್ನೆಹದ ರೂಪ ಪಡಕೊಂಡತು.

ನಮ್ಮ ಕರ್ಕ ರಾಶಿ ಅಧಿಪತಿ ಚಂದ್ರ ಆಗಿದ್ದಕ್ಕೊ ಅಥವಾ ನಮ್ಮ ಅಮ್ಮ ಹೇಳಿದ್ದ ಚಂದಪ್ಪನ ಕಥಿಗೊಳ ಪ್ರಭಾವನೊ ಗೊತ್ತಿಲ್ಲಾ ಒಟ್ಟಿನ ಮ್ಯಾಲೆ ನಾ ಚಂದ್ರ ಸೇಳೆತದಾಗ  ಸಿಕ್ಕೊತ ಹೋದೆ. ಗಚ್ಚಿನ ಮ್ಯಾಲೆ ಹೋಗಿ ಚಂದಪ್ಪನ ಜೊಡಿ ಮಾತಾಡತಿದ್ದೆ. ಊಟದ್ದ ತಾಟುಮಾಳಗಿ ಮ್ಯಾಲೆ ತಗೊಂಡ ಹೋಗಿ ನಂಗೊಂದ ತುತ್ತು ನಿಂಗೊಂದ ತುತ್ತು ಅಂತ ಆಂವನ ಜೋಡಿ ಕುತು ಹಂಚಕೊಂಡ ಊಟಾಮಾಡತಿದ್ದೆ.

ನಾ ತಗೊಂಡಿದ್ದ ಒಂದ ಸಣ್ಣ ಪೆನ್ನು ಪೆನ್ಸಿಲ್ ಸುದ್ದಿ ಸುಧ್ಧಾ ಹೋಗಿ ಚಂದಪ್ಪಗ ಮುಂದ ಹೇಳತಿದೆ. ಸಾಲ್ಯಾಗ ಎಲ್ಲಾರು ಚಾಳಿ ಠೂ ಬಿಟ್ಟಾಗ ಅಳಕೋತ ಎಲ್ಲಾರನು ಬೈಕೋತ ಚಂದಪ್ಪನ ಮುಂದ ಛಾಡಾ ಹೇಳತಿದ್ದೆ. ಆವಾಗೆಲ್ಲಾ ನಂಗ ಎಷ್ಟ ಸಮಾಧಾನಾ ಸಿಗತಿತ್ತಂದ್ರ ಶಬ್ದಗಳೊಳಗ ಹೇಳ್ಲಿಕ್ಕಾಗಂಗಿಲ್ಲಾ. ಅದನ್ನ ಅನಿಭವಿಸೊದ್ರಾಗನ ಸುಖಾ ಇರತದ.

ಅಮವಾಸಿಯೊಳಗ ಚಂದಪ್ಪ ಬರಂಗಿಲ್ಲಾ ಅಂತ ಗೊತ್ತಿಲ್ಲದ ವಯಸ್ಸನ್ಯಾಗ ಮಾಳಗಿಮ್ಯಾಲೆ ಹೋಗಿ ಆಕಾಶದತುಂಬ ಕಣ್ಣಾಡಿಸಿ ಆಂವನ್ನ ಕಾಣಲಾರದಾಗ ಎಷ್ಟೊ ಸಲಾ ಚಂದಪ್ಪನ ಜೋಡಿ ಛಾಳಿ ಠೂ ಬಿಟ್ಟಿರತಿದ್ದೆ.

ಮುಂದ ಬಿದಗಿ ದಿವಸ ಚಂದಪ್ಪನ ಕಂಡಾಗ ನಿನ್ನ ಜೋಡಿ ಮಾತಾಡಂಗಿಲ್ಲಹೋಗ ಅಂತ ಶಟಗೊಂಡ ಮಾರಿ ಮುಚಗೊಂಡ ಆಮ್ಯಾಲೆ ಸುಮ್ನಿರಲಾರದ ಬೆರಳ ಸಂದ್ಯಾಗಿಂದ ಹಣಿಕಿಹಾಕಿ ಆವಕ್ಕ್ ಮಾಡಿ ನಕ್ಕದ್ದದ.ಆವಗೆಲ್ಲಾ ಚಂದಾಮಾಮಾನು ನನ್ನ ಜೋಡಿ ನಗತಿದ್ನೆನೊ ಅಂತ ಅನಿಸ್ತಿತ್ತು.ಗಚ್ಚಿನಮ್ಯಾಲೆ ನಾ ಓಡ್ಯಾಡೊಮುಂದ ನನ್ನ ಜೋಡಿ ಆಂವನು ಓಡ್ಯಾಡಲಿಕತ್ತಾನ ಅಂತ ಅನಿಸಿ ಖುಷಿ ಆಗತಿತ್ತು.

ಹಂಗ ಬರಬರತ ಚಂದ್ರನ ಒಡನಾಟದೊಳಗ ದಿನಾ ಹೆಂಗ ಕಳದು ಹರೆಯಕ್ಕ ಕಾಲಿಟ್ವಿಗೊತ್ತಾಗಲಿಲ್ಲ. ಆವಾಗಿನ್ನು ಅರಳಲಿಕತ್ತ ಹೂವಿನಹಂಗ ಇರತದ ಜೀವನ. ಸುತ್ತಲು ಹಾರ್ಯಾಡೊ ದುಂಬಿಗೋಳ ಮನಸನ್ಯಾಗ ಮೂಡಸೊ ಬಯಕಿಗೊಳಿಗೆ ಒಂದ ರೂಪ ಕೊಟ್ಟು ಕನಸಕಾಣೊ ವಯಸ್ಸು. ಆವಾಗೆಲ್ಲಾ ನಾ ಚಂದಾಮಾಮಾನ ಜೋಡಿ ಮಾತಾಡೊದ ಕಡಮಿ ಮಾಡಿದ್ದೆ. ಯಾಕೊ ಅವನ್ನ ಬರೆ ನೋಡಕೊತ ಕೂಡಬೇಕನಿಸ್ತಿತ್ತು.

ಯಾಕೊ ಮದಲಿನಂಘ ಆಂವನ್ನ ನೋಡಲಿಕ್ಕಾಗತಿದ್ದಿಲ್ಲಾ. ಒಂಥರಾ ನಾಚಿಕ್ಯಾಗಿ ಕಣ್ಣು ತಮ್ಮ ತಾವ ಮುಚ್ಚತಿದ್ವು. ನಾಚಿಕಿಯಿಂದ ಮುಖಾ ಎತ್ತಲಿಕ್ಕಾಗತಿದ್ದಿಲ್ಲಾ. ತನ್ನ ತುಂಟ ನೋಟದಿಂದ ನನ್ನ ಕಾಡಲಿಕತ್ತಾನ ಅನಿಸ್ತಿತ್ತು. ಹುಣ್ಣಿವಿದಿನಾ ತನ್ನ ಕಿರಣಗಳಿಂದ ನನ್ನ ಬಿಗಿಯಾಗಿ ಅಪ್ಪಿಕೊಂಡಾನ, ನಾ ಬಿಡಿಸಿಕೊಂಡಷ್ಟು ತನ್ನ ಅಪ್ಪುಗಿ ಬಿಗಿಯಾಗಸಲಿಕತ್ತಾನ ಅನಿಸಿ ನಾಚಿಕಿಯಾಗ್ತಿತ್ತು. ನನ್ನ ಬಿಡು ಹಿಂಗ ಕಾಡಬ್ಯಾಡಾ, ಯಾರರ ನೋಡಿದ್ರ ಎನ್ಮಾಡ್ಲಿ ಅಂತ ಗೋಗರಿತಿದ್ದೆ. ಆವಾಗೆಲ್ಲಾ ಆಂವಾ ತನ್ನ ತುಂಟ ನೊಟದಿಂದ ನಕ್ಕೊತ ನನ್ನ ಕಾಡಲಿಕತ್ತಾನ ಅನಿಸ್ತಿತ್ತು.

ಮಾಳಗಿಮ್ಯಾಲೆ ಮಲ್ಕೊಂಡಾಗ ಈಡಿ ರಾತ್ರಿ ಅಂಗಾತ ಮಲ್ಕೊಂಡ ಚಂದ್ರನ್ನ ನೋಡಕೊತ ಆಂವನ ಸಾಮಿಪ್ಯನ ಅನುಭವಿಸ್ಕೊತ ಮಲ್ಕೊಳ್ಳೊದ ಅಂದ್ರ ನಂಗ ಸೇರತಿತ್ತು. ಚಳಿಗಾಲದ ಸಂಜಿಮುಂದ ತಂಪಗಾಳಿಗೆ ಮೈಯ್ಯೊಡ್ಡಿ ಚಂದ್ರನ ಮ್ಯಾಲೆ ಇರೊ ರೊಮ್ಯಾಂಟಿಕ್ ಹಾಡುಗೊಳ ಕ್ಯಾಸೆಟ್ ಹಾಕ್ಕೊಂಡ ಹಾಡ ಕೇಳ್ಕೊತ ಚಂದ್ರನ್ನ ನೋಡ್ಕೊತ ಹೊತ್ತ ಕಳಿತಿದ್ದೆ . ಎಷ್ಟೊ ರಾತ್ರಿ ಚಂದ್ರನ ನೋಡಕೊತ ಪ್ರೀತಿ ಮಾಡೊದ್ರಾಗ ರಾತ್ರಿ ಕಳದು ನಸಕಾಗಿರ್ತಿತ್ತು.

ಹಿಂಗ ನನ್ನ ಅವ್ಯಕ್ತ ಬಯಕೆಗಳಿಗೆ ಚಂದ್ರನ ರೂಪಾ ಕೊಡತಿದ್ದೆ. ಒಂದ ದಿನಾನು ಚಂದ್ರನ ಜೋಡಿ ಮಾತಾಡದ ಇರತಿರಲಿಲ್ಲಾ.ಇವೆಲ್ಲಾ ಅನುಭವ ನಂಗ ಎಷ್ಟ ಖುಷಿ ಕೊಡತಿದ್ವು ಅಂದ್ರ, ನಾ ಯಾವದೊ ಒಂದ ಛಂದನ ಲೋಕದಾಗ ಇಧ್ಧಂಗ ಅನಿಸ್ತಿತ್ತು. ಅಮವಾಸಿ ಮುಂದ ಆಂವನ್ನ ನೋಡಲಾರದ ಎಷ್ಟ ವಿಲಿ ವಿಲಿ ಒದ್ದಾಡತಿದ್ದೆ. ಅವನ ವಿರಹದೊಳಗ ಒಂಥರಾ ಸಿಹಿನೋವನ್ನ ಅನುಭವಿಸ್ತಿದ್ದೆ.

ನಮ್ಮ ಕಾಲೇಜಿನ ಸುದ್ದಿ ಎಲ್ಲಾ ಆಂವನ ಮುಂದ ಹೇಳ್ತಿದ್ದೆ. ನಂಗ ಯಾವದರ ಲವ್ ಲೆಟರ್ ಅಥವಾ ಯಾರರ ಪ್ರಪೋಸ್ ಮಾಡಿದ್ರ, ಅವತ್ತ ಚಂದ್ರಗ ” ನೋಡ  ನೋಡ ನೀ ಹಿಂಗ ಮುಗಲ ಮ್ಯಾಲೆ ಥಣ್ಣಗ ಕುತಿರು ಒಂದಿನಾ ನನ್ನ ಯಾರರ ಹಾರಿಸ್ಕೊಂಡ ಹೋಗತಾರ. ಆಮ್ಯಾಲೆ ಝಾಂಗಟಿ ಬಾರಿಸ್ಕೊತ ಕೂಡು “ಅಂತ ಕಾಡಿ ಕಾಡಿ ಇಡ್ತಿದ್ದೆ.

ಒಂದೊಂದ ಸಲಾ ಸುಮ ಸುಮ್ನ “ನೋಡ ನಂಗ ಬ್ಯಾರೆ ಯಾರ ಮ್ಯಾಲೇನೊ ಭಾಳ ಪ್ರೀತಿ ಬಂದದ, ಆಂವಾ ನಿನಗಿಂತ ಬಾಳ ಛಂದ ಇದ್ದಾನ ನೋಡ ಮತ್ತ ನಾ ನಿಂಗ ಕೈ ಕೊಟ್ಟ ಓಡಿಹೋಗತೇನಿ” ಅಂದು ” ಚಂದಿರಾ ಚಂದಿರಾ,ನಿದ್ದೆ ಯಾಕೊ ಬರತಿಲ್ಲಾ, ನಿನಗಿಂತಲು ಒಬ್ಬ ಸುಂದರಾ ನಿದ್ದೆ ಮಾಡೊಕ ಬಿಡತಿಲ್ಲಾ ” ಅಂತ ಸಿನೇಮಾ ಹಾಡ ಹಾಡಿ ಆಂವನ್ನ ಕಾಡಸತಿದ್ದೆ.

ನಾ ಹಿಂಗ ಮಾಡಿದಾಗ ಯಾಕೊ ಆಂವಾ ಸಪ್ಪಗಾದಾ ಅನಿಸ್ತಿತ್ತು. ಬ್ಯಾಸರಾ ಮಾಡಕೊಂಡಾನ ಅನಿಸ್ತಿತ್ತು. ನಾ ಪಟ್ಟನ ಆಂವಗ ತಪ್ಪಾತು ಅಂತ ಹೇಳಿ ಐ ಲವ್ ಯು ಹೇಳತಿದ್ದೆ.  ಊರಿಗೆ ಹೋಗೊ ಮುಂದ ನಾ ಕುತ ಬಸ್ಸಿನ ಹಿಂದ ಆಕಾಶದಾಗ ಓಡಕೊತ ಬರೊ ಚಂದ್ರನ್ನ ನೋಡಿ ಪ್ರೀಯತಮೆಯ ಹಿಂದ ಓಡಿ ಬರೊ ಒಬ್ಬ ಹುಚ್ಚು ಪ್ರೇಮಿ ಅನಿಸ್ತಿತ್ತು.

ಒಮ್ಮೊಮ್ಮೆ ಪರೀಕ್ಷಾ ಟೆನ್ಶನ್ ನ್ಯಾಗ ಇದ್ದಾಗ, ಮಾರ್ಕ್ಸ್ ಕಡಮಿ ಬಿದ್ದಾಗ ಸಿಟ್ಟು ಬಂದಾಗ ಮಾಳಗಿ ಮ್ಯಾಲೆ ಹೋಗಿ ತಾಸಗಟ್ಟಲೆ ಚಂದ್ರನ ಜೋಡಿ ಜಗಳಾಡಿ ಇದ್ದ ಬದ್ದ ಎಲ್ಲಾರ ಮ್ಯಾಲಿನ ಸಿಟ್ಟೇಲ್ಲಾ ಆಂವನ ಮ್ಯಾಲೆ ಹಾಕಿ ಹರಕೊಂಡ ಒದರಾಡಿ ಅತ್ತ ಬರತಿದ್ದೆ.

ಎರಡಮೂರ ದಿನಾ ಆಂವನ ಭೆಟ್ಟಿಗೆ ಹೋಗತಿದ್ದಿಲ್ಲಾ. ಆಮ್ಯಾಲೆ ಸಿಟ್ಟ ಇಳದಮ್ಯಾಲೆ ಹೋಗಿ ತಪ್ಪಾತ ಅಂತ ಹೇಳಿ ಭಾಳಷ್ಟ ಫ್ಲೈಯಿಂಗ್ ಕಿಸ್ ಕೊಡತಿದ್ದೆ. ಪರಿಕ್ಷಾ ಮುಂದ ಖೊಲ್ಯಾಗ ಕೂತು ಓದಬೇಕಾದ್ರ ಟೆಂಗಿನ ಗಿಡದ ಗರಿ ಸಂದ್ಯಾಗಿಂದ ಕದ್ದು ಕದ್ದು ನನ್ನ ನೋಡಿ ಕಾಡಸತಿದ್ದಾ. ಆವಾಗೆಲ್ಲಾ  ನಾ ” ನೋಡ ನಾ ಓದ್ಕೊಳ್ಳಿಕತ್ತೇನಿ, ನಿ ಹಿಂಗ ಬಂದ ಬಂದ ನನ್ನ ಕಾಡಬ್ಯಾಡಾ,ನನ್ನ ಮನಸ ಚಂಚಲ ಆಗತದ ಮಾರಾಯಾ ಪ್ಲೀಸ್ ಹೋಗು ಅಂದ್ರುನು ಮುದ್ದಾಮ ಟೆಂಗಿನ ಗರಿ ಮರಿಯೋಳಗಿಂದ ಪೂರ್ತಿ ಹೋರಗ ಬಂದು ತುಂಟ ನಗು ನಕ್ಕೊತ, ನಾ ಕಾಡತೆನ ನೋಡ ಎನ ಮಾಡ್ತಿ” ಅಂತ ನನ್ನ ಎದುರಿಗೆ ನಿಲ್ಲತಿದ್ದಾ. ನಾ ಎಷ್ಟ ಬ್ಯೂಸಿ ಇದ್ದರು ಒಂದೈದ ನಿಮಿಷರ ಹೋಗಿ ನೋಡಿ ಲವ್ ಯೂ ಚಾಂದ ಅಂತ ಹೇಳಿ ಬರತಿದ್ದೆ.

ಇವೆಲ್ಲಾ ಸುದ್ದಿ ನನ್ನ ಗೆಳತ್ಯಾರಿಗೆ ಗೊತ್ತಾಗಿತ್ತು. ಅವರೆಲ್ಲಾ ನನ್ನ ಎಲಿಯನ ಅಂತ ಕಾಡಸತಿದ್ದರು, ” ನೋಡ ಚಂದ್ರ ಭೂಮಿ ಸಮೀಪ ಬಂದ್ರ ಸುನಾಮಿ ಎಳತದಂತ. ನೀ ಇಷ್ಟ ಚಂದಪ್ಪನ್ನ  ನಿನ್ನ ಪ್ರೀತಿ ಪ್ರೇಮಾ ಅಂತ ಸೇಳಿತಿ ಅಂತನ ಆಂವಾ ಭೂಮಿ ಹತ್ರ ಬರತಾನ, ಸುನಾಮಿ ಆಗತದ. ತಾಯಿ ನಿನ್ನ ಪ್ರೀತಿ ಇಲ್ಲಿಗೆ ಸ್ಟಾಪ ಮಾಡು ನಮಗ ಇನ್ನು ಜೀವನಾ ಮಾಡೊ ಆಸೆ ಅದ, ನಮ್ದ ಇನ್ನು ಎನು ಆಗಿಲ್ಲಾ ಹೋಗಿಲ್ಲ ಸುಧ್ಧಾ ಮತ್ತ” ಅಂತ ಕಾಡಸತಿದ್ಲು,” ಕ್ಯಾ ಯಾರ ತು ಭಿ ಇಸ ಚಾಂದವಾಂದ ಕೆ ಚಕ್ಕರ ಮೇ ಪಡಿ ಹೋ. “ಅನ್ ರೋಮ್ಯಾಂಟಿಕ್ ಫೆಲ್ಲೊ” ಅಪನೆಲಿಯೆ ಕಿಸಿ ಅಚ್ಛೆಸೆ ಹಿರೊ ಕೊ ಧುಂಡಲೆ ಪಾಗಲ್ ಅಂದಿದ್ಲು”  ನನ್ನ ಚಂದ್ರಾ ಎಷ್ಟ ರೋಮ್ಯಾಂಟಿಕ್ ಅಂತ ಇಕಿಗೇನ ಗೊತ್ತು ಅಂತ ಆಕಿ ಮ್ಯಾಲೆ ಸ್ವಲ್ಪ ದಿನಾ ಸಿಟ್ಟಮಾಡಕೊಂಡಿದ್ದೆ.

ಚಂದ್ರನ ಹೆಸರನಿಂದ ನನ್ನ ಎಲ್ಲಾರು ಭಾಳ ಕಾಡತಿದ್ರು. ನಮ್ಮನ್ಯಾಗ ನಮ್ಮ ಮಾಮಾ ಅಂತು “ನಮ್ಮ ಹುಡಗಿಗೆ ವರಾ ನಿಶ್ಚಯ ಆಗೇದ್ರಿಪಾ ಮತ್ತ ವರಾ ಒಂದ ಈಡಿ ಪ್ಲಾನೇಟ್ಟಿಗೆ ಮಾಲಕ ಇದ್ದಾನ” ಅಂತೆಲ್ಲಾ ಕಾಡಸತಿದ್ರು. ಮ್ಯಾಲೆ ಆಕಾಶದ ಕಡೆ ನೋಡಿ ” ಮತ್ತೇನ್ರೀಪಾ ಅಳಿಯಂದ್ರ ಮದವಿ ಯಾವಾಗ ಇಟ್ಕೊಳ್ಳೊಣು,ಮಾತುಕತಿಗೆ ನಾವ ಬರೋಣೊ ಅಥವಾ ನೀವ ಬರತಿರೊ” ಅಂತ ಚಾಷ್ಟಿ ಮಾಡತಿದ್ರು.

ಮನ್ಯಾಗ ಎಲ್ಲಾರ ಮುಂದನ ನಾ ನನ್ನ ಚಂದ್ರಗ ಮುತ್ತು ಕೊಡತಿದ್ದೆ. ಅದನ್ನ ಎಲ್ಲಾರು ನಕ್ಕೊತ ನೋಡತಿದ್ರು. ನಂಗ ವಿಚಿತ್ರ ಅನಿಸ್ತಿತ್ತು ಚಂದಪ್ಪಗ ಮಾಡತೆನಂತ ಸುಮ್ನಿದ್ದಾರ ಇವ್ರೆಲ್ಲಾ.ಇದಾ ನಾ ಯಾವದರ ಹುಡಗಗ ಹೀಂಗ ಮಾದಿದ್ನಂದ್ರ? ಅಂತ ನೆನಿಸ್ಕೊಂಡ ನಗು ಬರತಿತ್ತ.. ಹಿಂಗ ಚಂದಾಮಾಮಾ ನನ್ನ ಜೀವನದಾಗ ಒಂದ ಮಹತ್ವದ ಸ್ಥಾನ ಪಡೆದಿದ್ದಾ. ನನ್ನ ನಗುವಿನೊಳಗ ನಗು ಆಗಿ ಅಳುವಿನೊಳ್ಗ ಅಳು ಆಗಿ ಬೆರತಹೊಗಿದ್ದಾ.

ಆವತ್ತ ನನ್ನ ಮದವಿ ಮಾತುಕತಿ ಆದಮ್ಯಾಲೆ ಮ್ಯಾಲೆ ಚಂದ್ರಗ ಹೇಳಬೇಕಂತ ಹೋಗಿದ್ದೆ ಯಾಕೊ ಮಾರಿಮುಚಗೊಂಡ ಅರ್ಧಾ ಆಗಿ ಕೂತ ಬಿಟ್ಟಿದ್ದಾ. ಆಂವಗ ಎಲ್ಲಾ ಸುದ್ದಿ ಗೊತ್ತಾಗಿನ ಹಿಂಗ ಮಾಡ್ಯಾನ ಅನಿಸ್ತಿತ್ತ ನಂಗ. ಯಾಕೊ ನಾ ಆಂವಗ ದ್ರೋಹ ಮಾಡಲಿಕತ್ತೇನಿ ಅನಿಸ್ಲಿಕತ್ತಿತ್ತು. ನನ್ನ ಕೈಯ್ಯಾಗ ಎನು ಇಲ್ಲಾ,ನಾ ನಿಂಗ ಮೋಸಾ ಮಾಡಿಲ್ಲಾ, ನಾ ನಿನ್ನ ಭಾಳ ಪ್ರೀತಿ ಮಾಡತೇನಿ ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದೆ. ಅದನ್ನ ನೋಡಲಿಕ್ಕಾಗಂಗಿಲ್ಲಂತೊ ಅಥವಾ ಆಂವಗು ನನ್ನಷ್ಟ ನೋವಾಗಿತ್ತೊ ಗೊತ್ತಾಗಲಿಲ್ಲಾ, ಮೋಡದ ಮರಿಯೋಳಗ ಅಡಿಕ್ಕೊಂಡಕೂತ ಬಿಟ್ಟಾ.

ಇಡಿ ರಾತ್ರಿ ಹೋರಗ ಬರಲಿಲ್ಲಾ. ಮುಂದ ಮೂರದಿನಾ ಆಂವಾ ನಂಗ ಮಾರಿ ತೋರಸಲಿಲ್ಲಾ. ನಂಗ ಸಮಾಧಾನನ ಇರಲಿಲ್ಲಾ. ಮನ್ಯಾಗ ಎಲ್ಲಾರು ಅಯ್ಯ ತವರಮನಿ ಬಿಟ್ಟಹೋಗಬೇಕಲ್ಲಾ ಅದಕ್ಕ ಬ್ಯಾಸರಾಗೇದ ಆಕಿಗೆ ಅಂತ ತಿಳಕೊಂಡಿದ್ದರು. ಆವತ್ತ ಆಕಾಶ ಎಲ್ಲಾ ಸ್ವಚ್ಛ ಆಗಿತ್ತು.

ಚಂದ್ರ  ಬಂದಿದ್ದಾ, ನಾ ಓಡಕೊತ ಮಾಳಿಗಿ ಮ್ಯಾಲೆ ಓಡಿಹೋದೆ ಸ್ವಚ್ಛ ಆಕಾಶದಾಗ ಶಾಂತ ಆಗಿ ತೇಲಿಕತ್ತಿದ್ದಾ. ಆಂವನು ಪರಿಸ್ಥಿತಿನ ಒಪ್ಕೊಂಡ ಸಮಾಧಾನ ಆಗ್ಯಾನ ಅನಿಸ್ತು. ಮದವಿ ಹಿಂದಿನ ದಿನಾ ರಾತ್ರಿ ಮಲ್ಕೊಂಡಾಗ ಖಿಡಕಿ ಒಳಗಿಂದ ಕಾಣಸಲಿಕತ್ತಿದ್ದಾ.

ನಾಳೆಯಿಂದ ನೀ ನನ್ನಾಕಿಯಾಗಿರಂಗಿಲ್ಲಾ, ಇವತ್ತ ನಾ ನಿನ್ನ ಒಂದಸಲಾ ಅಫ್ಕೊತೇನಿ ಅಂತ ಯಥಾಪ್ರಕಾರ ತನ್ನ ಕಿರಣಗಳಿಂದ ನನ್ನ ಬಿಗಿಯಾಗಿ ಅಪ್ಪಿಕೊಂಡಾ. ಅವತ್ತ ನಾ ಎನ ಬಿಡಿಸ್ಕೊಳ್ಳಿಲ್ಲಾ.

ಇಡಿ ರಾತ್ರಿ ನಾ ಅಂವನ ಎದಿಮ್ಯಾಲೆ ತಲಿ ಇಟ್ಟು ಆರಾಮ ನಿದ್ದಿ ಮಾಡಿದೆ. ಮದುವ್ಯಾದ ದಿನಾ ಸಂಜಿಮುಂದ ಮನಿಗೆ ಬರಬೇಕಾದ್ರ ತಂಪಸೂಸ ಗಾಳಿ ಬಿಸಲಿಕತ್ತಂತ ಕಾರಿನ ಖಿಡಕಿ ಒಳಗಿಂದ ಹೊರಗ ಹಣಿಕಿ ಹಾಕಿ ನೋಡಿದೆ ನಮ್ಮ ಕಾರಿನ ಜೋಡಿನ ತೇಲಿ ಬರ್ಲಿಕತ್ತ ಆಕಾಶದಾಗಿನ ನನ್ನ ಚಂದ್ರನ್ನ ನೋಡಿ ನಂಗ ಭಾಳ ಖುಷಿ ಆತು.

ತವರನ್ನೆಲ್ಲಾ ಬಿಟ್ಟಬಂದ ಬ್ಯಾಸರಾ ಒಂದ ಘಳಿಗ್ಯಾಗ ಹೋತು.ನನ್ನ ಬಾಲ್ಯದ ಸಂಗಾತಿ ನನ್ನ ಉಸಿರಿನ ಗೇಳೆಯ ನನ್ನ ಜೋತಿಗೆನ ಬಂದಾನಲ್ಲಾ ಅಂತ ಕಣ್ಣ ತುಂಬ ಆಂವನ್ನ ತುಂಬಕೊಂಡು ಅವನಿಗೆ ಥ್ಯಾಂಕ್ಸ ಹೇಳಿದೆ.

ನನ್ನ ಹೊಸಾ ಜೀವನದ ಅನುಭವಗಳನ್ನ ಆಂವನ ಮುಂದ ಬಂದ ಹೇಳ್ತಿದ್ದೆ. ಒಂದೊಂದ ಸಲಾ ನಡದ ನೋವಿನ ಕ್ಷಣಗಳನ್ನ ಅವನ ಮುಂದ ಹೇಳ್ಕೊಂಡ ಅಳತಿದ್ದೆ. ಒಂದೊಂದ ಸಲಾ ನಾ ಅವರ ಜೋಡಿ ಎಕಾಂತದಾಗ ಇದ್ದಾಗ ಖಿಡಕ್ಯಾಗಿಂದ ಹಣಿಕಿ ಹಾಕಿ ನೋಡೊ ಪ್ರಯತ್ನನು ಮಾಡತಿದ್ದಾ.

ಎಷ್ಟೊ ವರ್ಷ ನಂಗ ಮಕ್ಕಳಾಗಲಾರದಾಗ ನಾ ಅನಭೊಗಿಸಿದ ನೋವಿನ ಎಳಿ ಎಳಿನು ಆಂವಗ ಗೊತ್ತದ. ” ಎಷ್ಟೊ ಸಲಾ ನನ್ನ ನಿರಾಸೆಯ ನೋವನ್ನ ಸಿಟ್ಟಿನ ರೂಪದಾಗ ಆಂವನ ಮ್ಯಾಲೆ ಹೇರಿ ಆಂವಗ ” ನಿಂಗೇನ ಗೊತ್ತಾಗತದ ನನ್ನ ನೋವು,ಸಂಕಟಾ ನೀ ಒಂದ ಕಲ್ಲ ಇದ್ದಿ, ನಾ ಎಷ್ಟ ಅತ್ತರ ನಿನಗೇನಾಗಬೇಕೆದ. ನೀ ಒಂದ ಆರಾಮ ಇರತಿ ಮುಗಿತ” ಅಂಥೇಳಿ ಸಿಕ್ಕಾಪಟ್ಟೆ ಬೈದಿದ್ದೆ.

ಮುಂದ ಎರಡ ತಿಂಗಳಾ ಮ್ಯಾಲೆ ಸಿಹಿ ಸುದ್ದಿ ಮದಲ ಆಂವಗ ಹೇಳಿ ಖುಷಿ ಪಟ್ಟಿದ್ದೆ. ಅದರ ಅದ ಖುಷಿಯ ಫಲಾನ ನಾ ಮತ್ತ ಹುಟ್ಟಿದ ೩ ತಿಂಗಳಿನಾಗ ಕಳ್ಕೊಂಡ ಗೋಳೊ ಅಂತ ಆಂವನ ಮುಂದ ಅತ್ತಾಗ ನಿನ್ನ ಕಣ್ಣಿರ ಹಾಕಿ ಸಂಕಟಾಪಡೊದ ನನಗ ನೊಡಲಿಕ್ಕಾಗುದಿಲ್ಲಾ ಅಂತ ಒಂದವಾರಾ ಹತ್ತದಿನತನಕಾ ಮಾಡದಾಗ ಮಾರಿ ಮುಚಗೊಂಡಾವಾ ಹೊರಗ ಬಂದಿದ್ದಿಲ್ಲಾ.

ಮುಂದ ಸ್ವಲ್ಪ ದಿನಾ ನಾ ಆಂವನ ಜೋಡಿ ಮಾತಾಡಿದ್ದೆ ಇಲ್ಲಾ. ಸುಮ್ನ ಹೋಗಿ ಕೂತು ಅಂವನ್ನ ದಿಟ್ಟಿಸಿ ನೋಡಿ ಬಂದಬಿಡತಿದ್ದಾ. ನನ್ನ ಮೌನ ವೇದನೆ ಆಂವಾ ಅರ್ಥಾ ಮಾಡಕೊತಿದ್ದಾ. “ಯಾಕ ಬ್ಯಾಸರಾ ಮಾಡಕೊತಿ ಮುಂದ ಇದರಕಿಂತ ಛೊಲೊದೊಂದು ಫಲಾ ಕೋಡಲಿಕ್ಕಂತ ಈಗಿದ್ದದ್ದನ್ನ ದೇವರು ಕಸಗೊಂಡಿರತಾನ. ಈಗ ಸಂಕಟಾಪಡಲಾರದ ತಾಳ್ಮಿಯಿಂದ ಇರು” ಅಂಥೇಳಿ ಸಮಾಧಾನಾ ಮಾಡಲಿಕತ್ತಾನ ಅನಿಸ್ತಿತ್ತು.

ಯಥಾಪ್ರಾಕಾರ ಆಂವಾ ನನ್ನ ನೋವಿನಾಗ ನಲಿವಿನ್ಯಾಗ ಜೋಡಿಯಾಗಿ ತನ್ನ ಗೆಳೆತನಾ ನಿಭಾಯಿಸ್ತಿದ್ದಾ. ಮುಂದ ನನ್ನ ಎರಡನೆ ಖುಷಿ ನನ್ನ ಮಡಿಲಿನಾಗ ಆಡಲಿಕತ್ತಾಗ ಮತ್ತ ಆಂವಾ ಖುಷಿಯಿಂದ ಪ್ರಖರ ಆಗ್ಯಾನ ಅನಿಸ್ಲಿಕತ್ತು. ನಾನ ಕೂಸಿದ್ದಾಗಿಂದ ನನ್ನ ನಗು ನೋಡಿದ ಆಂವಗ ನನ್ನ ಮಗುವಿನ ನಗು ಮುಖಾನೋಡಿ ತೄಪ್ತಿ ಆಧಂಗ ಅನಿಸ್ತಿತ್ತು.

ನನ್ನ ಮಗಾ ಚಂದಪ್ಪನ್ನ ಬಾ ಬಾ ಅಂತ ಕರೆಯೋದ ನೋಡಿ ಮನಸ್ಸು ಖುಷಿಯಿಂದ ಕುಣಿತಿತ್ತು. ಮದಲನೆ ಸಲಾ ನನ್ನ ಮಗಾ ನನ್ನ ಅಮ್ಮಾ ಅಂದಾಗ ಆದಂಥಾ ಸಂತೋಷಕ್ಕ ಮಾಳಗಿ ಮ್ಯಾಲೆ ಹೋಗಿ ಆಂವನ ಮುಂದ ಹೇಳಿ ಕುಣದಾಡಿ ಬಿಟ್ಟಿದ್ದೆ.

ನಾ ಸಣ್ಣಾಕಿದ್ದಾಗಿಂದ ನನ್ನ ಮನಸಿಗಾದ ಸಂತೋಷ,ಆಘಾತ, ಆಶ್ಚರ್ಯಗಳನ್ನ ಆಂವನ ಮುಂದ ಹೇಳ್ಕೊಳ್ಳಿಲ್ಲಂದ್ರ ಸಮಾಧಾನ ಆಗತಿರಲಿಲ್ಲ. ನನ್ನ ಮನಸಿನ ಎಳಿ ಎಳಿನು ಆ ಚಂದ್ರಗ ಗೊತ್ತದ.

ಆಂವಾ ನನ್ನ ಅಂತರಂಗದ ಸಂಗಾತಿ ಇದ್ದಾನ.ಈಗಲೂ ಆಂವಾ ನನ್ನ ಎಲ್ಲಾ ಮಾತುಗಳನ್ನ ಸ್ಥಿರ ಚಿತ್ತದಿಂದ ಕೇಳ್ತಾನ. ಸಂಸಾರದ ಜಂಜಾಟದಿಂದ ಬೆಸತ್ತ ನನ್ನ ಮನ್ಸಿಗೆ ತನ್ನ ತಂಪ ಕಿರಣಗಳಿಂದ ಸಮಾಧಾನ ಮಾಡತಾನ.

ಆಂವನ ಶಿತಲ ಸ್ಪರ್ಷದೊಳಗ ” ನಾನಿದ್ದೇನಿ ನಿನ್ನ ಜೋಡಿ,ಯಾಕ ಚಿಂತಿ ಮಾಡ್ತಿ. ಅಂತ ಅನ್ನೊ ಸಮಾಧಾನ ಇರತದ.ನನ್ನ ಕಡಿ ಉಸರು ಆ ನನ್ನ ಜೀವದ ಗೆಳೆಯನ್ನ ನೋಡಕೊತ ಆಂವನ ಶಿತಲ ಅಪ್ಪುಗೆಯೋಳಗ ಹೋಗಬೆಕು ಅನ್ನೊ ಆಸೆ ಅದ.

ಎಲ್ಲಾರ ಕಣ್ಣಿಗೆ ಯಕಶ್ಚಿತ ಒಂದ ಗ್ರಹ ಅಂತ ಕಾಣೊ ಈ ಚಂದಮಾಮಾ ನನ್ನ ಜೀವನದೊಳಗ ಅವಿರತ ಸ್ನೇಹವನ್ನ ನಿಭಾಯಿಸಿದ ನನ್ನ ಆತ್ಮೀಯ ಮತ್ತ ವಿಶೇಷ ವ್ಯಕ್ತಿ.

*****