ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಟ್ಟೆವಾಡಲು ಕಂಡುಬರೋಣ

ಗುರುಗಣೇಶ ಭಟ್ ಡಬ್ಗುಳಿ
ಇತ್ತೀಚಿನ ಬರಹಗಳು: ಗುರುಗಣೇಶ ಭಟ್ ಡಬ್ಗುಳಿ (ಎಲ್ಲವನ್ನು ಓದಿ)

ಎಲ್ಲಿರುತ್ತವೆಯೋ ಏನೋ, ಮೊದಲ ಮಳೆಬಿದ್ದ ಮಾರನೇ ದಿನದ ಸಂಜೆಯ ಸುಮಾರಿಗೆ ಜಗುಲಿ ಕಟ್ಟೆ ವಾಡಲುಗಳಿಂದ ಅಪಾರವಾಗಿ ತುಂಬಿಹೋಗಿದ್ದವು.
ಅಷ್ಟಕ್ಕೂ ಅವಕ್ಕೆ ಮಳೆ ಬಂದದ್ದನ್ನ ಹೇಳಿದವರಾರು?
ಚಲಿಸುವ, ಆದರೆ ಎಲ್ಲಿಗೂ ಹೋಗದೆ ಇದ್ದಲ್ಲೇ ಇರುವಂತೆ ಕಾಣುವ ಕ್ರಿಮಿಗಳ ಜಾತಿಗೆ ಸೇರುವ ಒಂದು ನಮೂನೆಯ ಜೀವಿಗಳಿವು. ಬೆಳಕು ಇವರ ಶಕ್ತಿ, ಜೊತೆಗೆ ದೌರ್ಬಲ್ಯ. ಮನೆಯಲ್ಲಿ ದೀಪ ಬೆಳಗಿದ ಜಾಗದಲ್ಲೆಲ್ಲ ಹಾಜರು. ಬಲ್ಬಿನ ಸುತ್ತ ಜಮಾಯಿಸಿದ ಕಟ್ಟೆ ವಾಡಲುಗಳನ್ನು ನೋಡಿದರೆ ಯಾವುದೋ ಚಕ್ರವರ್ತಿಯ ಅಕ್ಷೋಹಿಣಿ ಸೈನ್ಯ ಮುತ್ತಿಗೆ ಹಾಕಿದಂತೆ ಕಾಣುತ್ತದೆ. ಲೈಟ್ ಆಫ್ ಮಾಡಿದರೆ ನಿಧಾನವಾಗಿ ಕತ್ತಲಲ್ಲಿ ಕರಗಿಹೋಗುವ ಅವು ಮನೆಯ ತುಂಬ ಹರಡದಂತೆ ಮಾಡಲು ಒಂದು ಉಪಾಯ ಬಹಳ ಹಿಂದಿನಿಂದ ನಡೆದುಬಂದಿದೆ.  ಕಟ್ಟೆ ವಾಡಲುಗಳು ರಾತ್ರಿ ಮನುಷ್ಯರು ನಿದ್ರಿಸಿದಾಗ ಕಿವಿಯೊಳಗೆ ತೂರಿಕೊಂಡು ತಲೆಬುರುಡೆಯಲ್ಲಿ ಗೂಡು ಕಟ್ಟುತ್ತವಂತೆ! ಅವುಗಳಿಗೆ ಗೂಡು ಕಟ್ಟಲು ಮತ್ತೆಲ್ಲೂ ಜಾಗ ಸಿಗದೇನೋ. ಎಲ್ಲ ಜಾಗಗಳನ್ನೂ ಮನುಷ್ಯರು ದೇಶ ದೇಶಗಳಾಗಿ ಹಂಚಿಕೊಂಡುಬಿಟ್ಟಿದ್ದಾರಲ್ಲ!
ಒಂದೇ ಕಡೆ ದೀಪ ಬೆಳಗಿಸಿ ಬಾಕಿ ಎಲ್ಲ ಬೆಳಕುಗಳನ್ನು ಬಂದುಮಾಡಿದರಾಯಿತು. ರಾತ್ರಿ ಕಿವಿಯಲ್ಲಿ ಹತ್ತಿ ಹಾಕಿ ಮಲಗಿಕೊಂಡರಾಯಿತು. ನಿಶ್ಚಿಂತೆಯ ನಿದ್ದೆ.

ಮತ್ತೊಂದು ದಿನ, ಒಂದೇ ಲೈಟ್ ಹಚ್ಚಿ ಎಲ್ಲ ವಾಡಲುಗಳೂ ಒಂದೇ ಕಡೆ ಸೇರುವಂತೆ ಮಾಡಿದೆ. ರಾತ್ರಿಯೆಲ್ಲ ಎಚ್ಚೆತ್ತು ಒಂದು ವಾಡಲಿನ ಬೆನ್ನುಬಿದ್ದೆ. ಮೊಬೈಲ್ ಸ್ಕ್ರೀನ್ ಆನ್ ಮಾಡಿಕೊಂಡು ಅದು ಚಲಿಸಿತೋ, ಇದ್ದಲ್ಲೇ ಇದೆಯೋ ಎಂದು ಬೇಹುಗಾರಿಕೆ ನಡೆಸಿದೆ. ಆದರೆ ಯಾವ ಮಾಯೆಯಲ್ಲಿ ಅದು ನನ್ನ ಹದ್ದಿನಗಣ್ಣಿಂದ ತಪ್ಪಿಸಿಕೊಂಡಿತು ಎಂದು ಗೊತ್ತೇ ಆಗಲಿಲ್ಲ.

ನನ್ನ ಪಕ್ಕದ ಮನೆಯ ದೊಡ್ಡಜ್ಜನ ಪ್ರಾಣವೂ ಹೀಗೆ ಗೊತ್ತಾಗದೇ ಹಾರಿಹೋಗಿತ್ತು.‌ ದೊಡ್ಡಜ್ಜನಿಗೆ ವಯಸ್ಸಾಗಿ ಆಗಲೋ ಈಗಲೋ ಹೋಗುವ ತಯಾರಿ ನಡೆಸಿದ್ದ.  ಈ ಪ್ರಾಣ ಎಂಬೋ ಪಕ್ಷಿ ಹೇಗೆ ಹಾರಿಹೋಗುತ್ತೆ ಎಂದು ಕಾಯಲು ಸಂಬಂಧಿಯೊಬ್ಬ ರಾತ್ರಿಯಿಡೀ ಬ್ಯಾಟರಿ ಹಿಡಿದುಕೊಂಡು ಕೂತಿದ್ದನಂತೆ. ನಸುಕಿನಲ್ಲಿ ಅಜ್ಜನ ಪ್ರಾಣ ಹೋಯಿತು. ನಮ್ಮ ಪತ್ತೆದಾರಿಗೆ ಆಗ ಒಳ್ಳೆ ನಿದ್ದೆ. ಅಮ್ಮ ನನ್ನ ಕಟ್ಟೆವಾಡಲಿನ ಕಥೆ ಕೇಳಿ ಅಜ್ಜನ ಪ್ರಾಣಪಕ್ಷಿ ಹಾರಿ ಹೋಗುವುದನ್ನು ಕಾದ ಮಾವನ ಕಥೆ ಹೇಳಿದಳು.

ಕಟ್ಟೆ ವಾಡಲುಗಳು ಮಳೆಗಾಲದ ಶುರುವಿಗೆ ಬೆಟ್ಟದ ಸಾಲಿಗೆ ತಾಗಿಯೇ ಇರುವ ಮನೆಗಳತ್ತ ಧಾವಿಸುತ್ತವೆ. ಇತರ ಕಾಲಗಳಲ್ಲಿ ಕಣ್ಣು ಚೂಪು ಮಾಡಿಕೊಂಡು ಭೂತಕನ್ನಡಿ ಹಾಕಿ ಹುಡುಕಿದರೂ ನನಗಂತೂ ಸಿಕ್ಕಿಲ್ಲ. ಎಲ್ಲಿರುತ್ತವೆ ಅವು? ವರ್ಷದ ಇತರ ಕಾಲಗಳಲ್ಲಿ ಎಲ್ಲಿರುತ್ತವೆ ಉಂಬಳಗಳು? ಸಹಸ್ರಪದಿಗಳ ಅಸ್ತಿತ್ವವೆಲ್ಲಿ? ತೆಂಗಿನ ಸಿಪ್ಪೆ, ಅಡಿಕೆ ಸಿಪ್ಪೆಗಳ ರಾಶಿಗಳ ಅಡಿಯಿಂದ ಮಳೆಗಾಲದ ಬಾಲ್ಯದಲ್ಲಿ ಖಾಲಿಯಾಗದ ವರತೆಯಂತೆ ಎದ್ದು ಬರುವ ಕಟ್ಟೆ ವಾಡಲುಗಳನ್ನು ರೂಪ ಬಹುತೇಕರಿಗೆ ಆಗಿಬರದು. ಆದರೆ ಅಮ್ಮ  ಒಬ್ಬೊಂಟಿ ಕಟ್ಟೆ ವಾಡಲುಗಳು ಸಿಕ್ಕರೆ ಅವತಾರ ಪುರುಷಿಯಂತೆ ಕಾಲಲ್ಲೇ ಮೆಟ್ಟಿ ಸಂಹರಿಸುತ್ತಾಳೆ. ನಾವೆಲ್ಲ ‘ಶೀ ಶೀ ಬರಿಗಾಲಲ್ಲೆಲ್ಲ ಮೆಟ್ಟಬೇಡವೇ ಮಹರಾಯ್ತಿ..’ಎಂದು ಕೂಗುವುದು ಅವಳಿಗೆ ಲೆಕ್ಕಕ್ಕಿಲ್ಲ.
ಎಲ್ಲೇ ಇರಲಿ, ಒಂದು ಕೀಟ ದೃಷ್ಟಿಗೆ ಹಾದರೆ ಸಾಕು ಗಬಕ್ಕನೆ ಮುಕ್ಕುವ ಬೆಕ್ಕಿಗೂ ಕಟ್ಟೆ ವಾಡಲು ಬೇಡ.
ಆ ದಿನ ರಾತ್ರಿ ಮಲಗುವ‌ ಮುನ್ನ ನಮ್ಮ ಕಿವಿಗೆ ಹತ್ತಿಯ ಅಲಂಕಾರವಂತೂ ಖಂಡಿತ. ತಲೆಯೊಳಗೆ ವಾಡಲು ಸಾಕಲಾದೀತೇ..?

ನಮಗೆ ಗೊತ್ತಿಲ್ಲದೆ ನಮ್ಮ ತಲೆಯಲ್ಲಿ ವಾಡಲುಗಳಿರಬಹುದು, ಹುಷಾರು.