- ಕರ್ಪೂರಿ ಠಾಕೂರ್ - ಮಾರ್ಚ್ 3, 2024
- ಗಝಲ್ ಲೋಕದಲ್ಲೊಂದು ಸುತ್ತು - ಮಾರ್ಚ್ 25, 2023
- ಬಿ. ಜಿ. ಎಲ್. ಸ್ವಾಮಿ ಮತ್ತು ಹೀಗೊಂದು ಪ್ರಣಯ ಪ್ರಸಂಗ - ನವೆಂಬರ್ 5, 2022
‘ನಿನ್ನ ಜಾಗದಲ್ಲಿ ಒಬ್ಬ ಇಂಗ್ಲಿಷ್ ಹುಡುಗಿಯಿದ್ದಿದ್ದರೆ, ಇಷ್ಟುಹೊತ್ತಿಗೆ ಎಲ್ಲಾ ವಿಷಯಗಳನ್ನೂ ಅರಿತಿರುತ್ತಿದ್ದಳು’. ‘ಆದರೆ, ನಮ್ಮ ದೇಶದ ಮಕ್ಕಳು ಪುಸ್ತಕದ ಹುಳುಗಳಾಗಿದ್ದಾರೆ’. ‘ಕೇವಲ ಪರೀಕ್ಷೆಯಲ್ಲಿ ಪಾಸ್ ಮಾಡುವುದೊಂದೇ ಅವರಿಗೆ ಮುಖ್ಯ; ಹಾಗೂ ಜೀವನದ ಗುರಿ’. ‘ಒಂದು ವೇಳೆ ಅವರೇನಾದರೂ ಅನುತ್ತೀರ್ಣರಾದರೋ ಎಲ್ಲವೂ ಮುಗಿದಂತೆಯೇ ಸರಿ’. ‘ಸಾಮಾನ್ಯ ಜ್ಞಾನವನ್ನು ಉತ್ತಮಪಡಿಸಿಕೊಳ್ಳುವ ಕಷ್ಟ ಅವರಿಗೇಕೆ ಬೇಕು ? ಹೇಗಿದ್ದರೂ ಅದು ಪರೀಕ್ಷೆ ಪಾಸ್ ಮಾಡಲು ಸಹಾಯ ಮಾಡುವುದಿಲ್ಲವಲ್ಲ’ ?
ಗಾಂಧೀಜಿ ಸುಶೀಲಾ ನಯ್ಯರ್ ರನ್ನು ತರಾಟೆಗೆ ತೆಗೆದುಕೊಂಡದ್ದು – ಎಚ್ಚಾರೆಲ್ ಅನುವಾದಿಸಿದ ನಾ ಕಂಡಂತೆ ಕಸ್ತೂರ್ ಬಾ -ಸುಶೀಲಾ ನಯ್ಯರ್ ದಿನಚರಿಯ ಪುಟಗಳು – ಅಂಕ – ೧ ರಿಂದ
ಪುಟ ೧.
ನಾನು ಬಾ ರವರನ್ನು ನೋಡಿದ್ದು ೧೯೨೦ ರ ಡಿಸೆಂಬರ್ ನಲ್ಲಿ. ಆಗ ಮಹಾತ್ಮಾ ಗಾಂಧೀಜಿಯವರು ಟೂರ್ ಮಾಡುತ್ತಾ ‘ಅಸಹಕಾರ ಚಳಿವಳಿಯ ಸತ್ಯಾಗ್ರಹದ ಉದ್ಘಾಟನೆ’ ಗೆ ಪಂಜಾಬಿಗೆ ಬಂದಿದ್ದರು. ಬೇರೆ ಸಾವಿರಾರು ಸತ್ಯಾಗ್ರಹಿಗಳ ತರಹ ನನ್ನ ಅಣ್ಣ, ಪ್ಯಾರೇಲಾಲ್ ಸಹ ಬಾಪೂರವರ ತೆಕ್ಕೆಗೆ ಸೇರಿದರು. ಈ ಬೆಳವಣಿಗೆ ನಮ್ಮ ಮನೆಯವರಿಗೆ, ಅದರಲ್ಲೂ ನನ್ನ ತಾಯಿಗೆ ಬೇಸರ ತಂದ ಸಂಗತಿಯಾಗಿತ್ತು ; ನಾವುಗಳು ಸರ್ಕಾರೀ ಕೆಲಸದಲ್ಲಿದ್ದ ಸಂಪ್ರದಾಯಸ್ತ ಕುಟುಂಬಕ್ಕೆ ಸೇರಿದವರು. ‘ಇಂಡಿಯನ್ ಸಿವಿಲ್ ಸರ್ವಿಸ್’ ಗೆ ಸೇರುವ ಆಶೆಯುಳ್ಳವನಾಗಿದ್ದ ನನ್ನ ಅಣ್ಣ ; ಅದರೆ, ಗಾಂಧೀಜಿಯವರ ಜೊತೆ ಸೇರಿ, ಒಬ್ಬ ಸಾಮಾಜಿಕ ಕಾರ್ಯಕರ್ತನಾಗುತ್ತಿರುವುದು ತಾಯಿಯವರಿಗೆ ಅಸಮಾಧಾನಕ್ಕೆ ಕಾರಣವಾಗಿತ್ತು. ಒಮ್ಮೆ ನೇರವಾಗಿ ಗಾಂಧಿಯವರನ್ನೇ ಭೇಟಿಮಾಡಿ, ‘ದಯಮಾಡಿ ನನ್ನ ಮಗನನ್ನು ಸೇರಿಸಿಕೊಳ್ಳಬೇಡಿ’; ಎಂದು ಹೇಳಲು ನಿಶ್ಚಯಿಸಿದರು. ಬಾಪು ‘ಸರಿ, ಲಾಹೋರ್ ಗೆ ಬನ್ನಿ ಮಾತಾಡೋಣ’ ಎಂದು ಹೇಳಿದರು. ಒಂದು ದಿನ ಗಾಂಧಿಯವರ ಜೊತೆಯಲ್ಲಿ ಮಗನನ್ನು ಕಂಡು, ಅವರ ಜತೆ ಬಹಳ ಹೊತ್ತು ಕಳೆದರು. ತಮ್ಮ ಮಮತೆಯ ಮಗನನ್ನು ದೂರಕಳಿಸಿ ಒಬ್ಬಂಟಿಯಾಗಿ ಜೀವನ ಸವೆಸಲು ಆಕೆಗೆ ಆಗುವ ಮಾನಸಿಕ ಆಘಾತವನ್ನು ಬಾಪೂರವರ ಹತ್ತಿರ ಹೇಳಿಕೊಂಡರು. ಗಾಂಧೀಜಿಯವರನ್ನು ಭೇಟಿಯಾಗಿ ಹೊರಗೆ ಬಂದಾಗ, ಆಕೆ ಒಬ್ಬ ಹೊಸವ್ಯಕ್ತಿಯಾಗಿ ಕಾಣಿಸಿದರು. ಬಾಪೂರವರ ಮಾತುಗಳು ಮತ್ತು ಅವರ ಸೂಜಿಕಲ್ಲಿನ ವ್ಯಕ್ತಿತ್ವ, ಅಮ್ಮನ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ‘೪ ತಿಂಗಳು ನಿಮ್ಮ ಬಳಿ ಕಳೆಯಲಿ’. ‘ಆಮೇಲೆ ದಯಮಾಡಿ ಕಳಿಸಿಕೊಡಿ’. ‘ನಾನು ಅವನ ತಾಯಿ’ ; ‘ಒಬ್ಬಳೇ ಇದ್ದೇನೆ’. ‘ಇದನ್ನು ದಯಮಾಡಿ ಅರ್ಥಮಾಡಿಕೊಳ್ಳಿ’. ‘ತಮಗೆ ಪತಿ ಇಲ್ಲ ; ಒಬ್ಬನೇ ಮಗ. ಮಗಳು ಇನ್ನೂ ಚಿಕ್ಕವಳು’. ಅಮ್ಮ ಕಸ್ತೂರ್ ಬಾರವರ ಸಂಪರ್ಕಕ್ಕೆ ಬಂದಾಗ ತಾಯಿಯ ಮಮತೆಯ ಅನುಭವವಾಗಿತ್ತು. ಕಸ್ತೂರ್ ಬಾ ಜೊತೆಯಲ್ಲಿ ಅಮ್ಮ ಮಾತಾಡುತ್ತಿರುವಾಗ ತೆಗೆಸಿಕೊಂಡ ಒಂದು ಫೋಟೋ ಮನೆಯಲ್ಲಿತ್ತು. ಆಗ ನಾನು ತುಂಬಾ ಚಿಕ್ಕವಳಿದ್ದೆ. ಸರಿಯಾಗಿ ನೆನಪಿಲ್ಲ. ಕಸ್ತೂರ್ ಬಾ ಮತ್ತು ನನ್ನ ಅಮ್ಮ ಒಟ್ಟಿಗೆ ನಿಂತು ಮಾತಾಡುತ್ತಿದ್ದ ದೃಶ್ಯ ನನ್ನ ಸ್ಮೃತಿಪಟಲದಮೇಲೆ ಅಚ್ಚೊತ್ತಿದಂತಿತ್ತು. ವಿದೇಶಿ ಉಡುಪಿನಲ್ಲಿದ್ದ ಅಮ್ಮ, ನನಗೂ ವಿದೇಶಿ ಡ್ರೆಸ್ ಹಾಕಿಸಿ ತೆಗೆಸಿದ ಫೋಟೋ ನೋಡಿ, ಬಾಪು ಟಿಪ್ಪಣಿ ಮಾಡಿದ್ದರು. ಬಾ ಸಹಿತ ತಮ್ಮ ಅಭಿಪ್ರಾಯ ಹೇಳಿದ್ದರು. ಅದು ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯ ಭಾವನೆಗೆ ಸ್ಪಂದಿಸುವ ತರಹದ್ದಾಗಿತ್ತು.
ಪುಟ 3
ವಿಶ್ವ ಬದಲಾಗಿದೆ. ಪ್ರತಿಯೊಬ್ಬರೂ ಯಾವುದೊ ಒಂದು ಮಾನಸಿಕ ಒತ್ತಡಕ್ಕೆ ಸಿಕ್ಕು ಮಾನಸಿಕ ಸಂತುಲನವನ್ನು ಕಳೆದುಕೊಂಡು ನರಳುತ್ತಿದ್ದಾರೆ. ಅವರೇ ಎಲ್ಲವನ್ನು ಅನುಭವಿಸಬೇಕು. ಹೀಗೆಲ್ಲ ಅನೇಕ ವಿಷಯಗಳನ್ನು ಕಸ್ತೂರ್ ಬಾರವರ ಜತೆ ಮಾತಾಡುವಾಗ ಅಮ್ಮನಿಗೆ ಹಲವು ಸತ್ಯ ಸಂಗತಿಗಳು ತಿಳಿದವು. ಅಮ್ಮ ನಮ್ಮ ಜತೆ ಮಾತಾಡುವಾಗ ಗಾಂಧೀಜಿಯವರು ಹಾಗೂ ಕಸ್ತೂರ್ ಬಾರವರ ಜತೆ ಮಾತಾಡಿದ ವಿವರಗಳನ್ನೂ ಹೇಳುತ್ತಿದ್ದರು. ಬಾ ರವರಿಗಿದ್ದ ಪತಿಭಕ್ತಿ, ದೇಶಭಕ್ತಿ, ಸಮರ್ಪಣಾ ಭಾವಗಳು ಅವರಿಗೆ ಬಹಳ ಮುದನೀಡಿದವು. ತಾವು ಆ ಧ್ಯೇಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧವೆಂದು ಸ್ಪಷ್ಟವಾಗಿ ಹೇಳುತ್ತಿದ್ದ ಬಾರವರನ್ನು ಸೀತಾ ಮಾತೆ, ಸತಿ-ಸಾವಿತ್ರಿಯರ ತರಹ, ಒಬ್ಬ ಮಹಾನ್ ಮಹಿಳೆಯ ರೂಪದಲ್ಲಿ ಕಲ್ಪಿಸಿಕೊಂಡಿದ್ದರು. ಬಾ ರವರ ಅನುಕಂಪ, ಅರ್ಥಮಾಡಿಕೊಳ್ಳುವ ಉತ್ಸಾಹ, ಅವರಿಗೆ ಶಕ್ತಿಕೊಟ್ಟಿತು. ಅಮ್ಮ ತಮ್ಮ ಪ್ರೀತಿಯ ಮಗ ಪ್ಯಾರೇಲಾಲ್ ಬಗ್ಗೆಯೇ ಯೋಚಿಸುತ್ತ, ರಾತ್ರಿಯೆಲ್ಲ ನಿದ್ದೆಮಾಡುತ್ತಿರಲಿಲ್ಲ. ಎಂತಹ ಭವಿಷ್ಯ ಮಾರ್ಗವನ್ನು ಪ್ಯಾರೇಲಾಲ್ ಆರಿಸಿಕೊಂಡಿದ್ದಾನೆ, ಎಂದು ಬೇಸರ ಒಂದು ಕಡೆಯಾದರೆ, ಆಶ್ರಮದ ತಮ್ಮ ಜಾಗದಲ್ಲಿ ತಾಯಿಯ ಪ್ರೀತಿಯನ್ನು ಕೊಡುವ ಬಾ ಇರುವುದು ಅವರಿಗೆ ಸಮಾಧಾನ ತಂದಿತ್ತು.
೧೯೨೯ ರ ಬೇಸಿಗೆಯ ರಜೆಯಲ್ಲಿ ನಾನು ಸಾಬರ್ಮತಿ ಆಶ್ರಮಕ್ಕೆ ಬಾ ರವರ ಸಾನ್ನಿಧ್ಯಕ್ಕೆ ಬಂದೆ. ಮೊದಲಿನಿಂದಲೂ ನಮ್ಮಣ್ಣ ಪ್ಯಾರೇಲಾಲ್ ಗಾಂಧೀಜಿಯವರ ಆಶ್ರಮಕ್ಕೆ ನನ್ನನ್ನು ಕರೆದುಕೊಂಡು ಹೋಗಲು ಇಷ್ಟಪಟ್ಟಿದ್ದ. ಆದರೆ ನಮ್ಮ ತಾಯಿಯವರಿಗೆ ಇದು ಇಷ್ಟವಾಗಿರಲಿಲ್ಲ. ಒಂದು ವೇಳೆ ನನಗೆ ಅನುಮತಿಕೊಟ್ಟರೆ, ನಾನು ಅಣ್ಣನ ತರಹ ಕೈಬಿಟ್ಟು ಹೋಗಿ ತಮಗೆ ದಕ್ಕುವುದಿಲ್ಲವೆಂಬ ಹೆದರಿಕೆ ಅವರಿಗಿತ್ತೆಂದು ನನಗನ್ನಿಸುತ್ತಿದೆ.
ಆಶ್ರಮದ ಕಷ್ಟದ ಜೀವನವನ್ನು ಮಗನಲ್ಲದೆ ಬೇರೆಯವರಿಂದಲೂ ಕೇಳಿ ತಿಳಿದಿದ್ದರು. ತಾವು ಅಲ್ಲಿಗೆ ಹೋಗಲು ತಯಾರಿರಲಿಲ್ಲ. ಅಣ್ಣ ಮಾತ್ರ ನನಗೂ ಒಮ್ಮೆ ಆಶ್ರಮಕ್ಕೆ ಹೋಗಿ ಅಲ್ಲಿನ ಜೀವನವನ್ನು ಕಣ್ಣಿನಲ್ಲಿ ನೋಡಿ ನಿರ್ಧರಿಸಲಿ. ಒಬ್ಬಳೇ ಹೋದರಂತೂ ಇನ್ನೂ ಒಳ್ಳೆಯದೆಂದು ಹೇಳುತ್ತಿದ್ದನು.
ಸದಾ ಅಮ್ಮನ ಜತೆಯಲ್ಲೇ ಇರುತ್ತಿದ್ದ ನನಗೆ, ಒಬ್ಬಳೇ ಎಲ್ಲಿಗೂ ಹೋಗದಿರುವುದು ಅವನಿಗೆ ಸರಿಬೀಳುತ್ತಿರಲಿಲ್ಲ. ಅವನ ಪ್ರಕಾರ ಪ್ರತಿಯೊಂದು ಮಗುವೂ ಮನೆಬಿಟ್ಟು ದೂರಹೋದರೇನೇ ಜೀವನವನ್ನು ರೂಪಿಸಿಕೊಳ್ಳುವ ಕಲೆಯನ್ನು ಕಲಿಯಲು ಸಾಧ್ಯವೆಂದು. ಕೊನೆಗೆ ಅಮ್ಮ ಅಣ್ಣನ ಸಂಗಡ ನನ್ನನ್ನು ಹೋಗಲು ಸ್ವಲ್ಪದಿನಗಳ ಮಟ್ಟಿಗೆ ಮಾತ್ರ ಅನುಮತಿಯಿತ್ತರು. ಅಣ್ಣ ನಾನು, ರಾತ್ರಿ ರೈಲಿನಲ್ಲಿ ಸಾಬರ್ಮತಿ ಆಶ್ರಮಕ್ಕೆ ಹೊರಟೆವು. ನನಗಂತೂ ಮನೆಯಿಂದ ಅಮ್ಮನನ್ನು ಬಿಟ್ಟು ಅಷ್ಟೊಂದು ದಿನ ಮನೆಯಿಂದ ಹೊರಗಿರುವುದು ಒಂದು ಅತ್ಯಂತ ದುಗುಡ ತರುವ ಆಲೋಚನೆಯಾಗಿತ್ತು. ಇದಲ್ಲದೆ ಒಂದು ಹೊಸ ಜೀವನ ಶೈಲಿಯನ್ನು ಕಣ್ಣಾರೆ ಕಾಣುವ ಒಂದು ಅನಾಯಾಸವಾಗಿ ದೊರೆತ ಸಾಧ್ಯತೆ, ಮನಸ್ಸಿಗೆ ಪುಳಕನೀಡಿತು. ಗಾಂಧೀಜಿಯವರ ಆಶ್ರಮದ ಬಗ್ಗೆ ಯಾರೋ ಮಾತಾಡಿಕೊಳ್ಳುವುದು ನನ್ನ ಕಿವಿಗೆ ಬಿದ್ದಿತ್ತು. ಬಹುಶಃ ಅಂತಹ ಕಾಲ ಒದಗಿಬಂತು. ದೇವರಿಗೆ ಮನಸ್ಸಿನಲ್ಲಿಯೇ ಅಂತಹ ಪುಣ್ಯ ಪುರುಷರನ್ನು ಆಶ್ರಮದಲ್ಲಿ ಕಾಣುವ ಅವಕಾಶಕ್ಕೆ ಮನಸಾರೆ ಸ್ಮರಿಸಿದೆ. ಭುವಿಯ ಮೇಲಿನ ದೇವತೆಗಳನ್ನು ನೋಡಲು ನನಗೆ ಮೈ ಪುಳಕಗೊಂಡಿತ್ತು. ಆಶ್ರಮಕ್ಕೆ ಹೋದಾಗ ಬಹಳ ಶ್ರದ್ಧಾವಂತ ಮತ್ತು ಬುದ್ಧಿವಂತ ಜನರ ಮಧ್ಯೆ ನಾನು ಚಿಕ್ಕವಳಾಗಿ, ಏನೂ ಗೊತ್ತಿಲ್ಲದವಳಂತೆ ಕಾಣಿಸಬಾರದೆಂಬ ಆತಂಕ ಮನಸ್ಸಿನಲ್ಲಿ ಕಾಡುತ್ತಿತ್ತು. ಅಣ್ಣ ನನ್ನ ವಯಸ್ಸಿನ ಆಶ್ರಮದ ಮಕ್ಕಳು ಮಾಡಿದ ಸಾಧನೆಗಳ ಬಗ್ಗೆ ಕಥೆಯ ರೂಪದಲ್ಲಿ ಅನೇಕ ಸುಂದರ ಸನ್ನಿವೇಶಗಳನ್ನು ವಿವರಿಸಿ ಹೇಳಿದ್ದ. ಸಾಧ್ಯವಾದಷ್ಟು ಬೇಗ ಆಶ್ರಮದ ಪ್ರಾರ್ಥನಾ ಶ್ಲೋಕಗಳ ಬಾಯಿಪಾಠವನ್ನಾದರೂ ಮಾಡಲು ಕರೆಯಿತ್ತ. ಇದರಿಂದ ಆಶ್ರಮದ ಶ್ರದ್ಧಾಳುಗಳ ಮನಸ್ಸಿನಲ್ಲಿ ನಿನ್ನ ಬಗ್ಗೆ ಒಳ್ಳೆಯ ಭಾವನೆ ಮೂಡಲು ಅವಕಾಶವಾಗುತ್ತದೆ, ಎಂದು ಪದೇ ಪದೇ ಹೇಳುತ್ತಿದ್ದ.
ಪುಟ ೪
ಅಹಮದಾಬಾದ್ ಪ್ರಯಾಣ ಬಹಳ ದೂರವೆಂದು ನನಗೆ ಆನಿಸಿತು. ನಾನು ಲಾಹೋರ್ ನಿಂದ ದೆಹಲಿಗೆ ಕೇವಲ ಒಂದು ರಾತ್ರಿಯ ಪ್ರಯಾಣಕ್ಕೆ ಒಗ್ಗಿಕೊಂಡಿದ್ದೆ. ಈಗ ರಾತ್ರಿಯೆಲ್ಲಾ ಮತ್ತು ಪೂರ್ತಿದಿನದ ಪ್ರಯಾಣ ಬೇರೆಯೇ ಅನುಭವ ಕೊಟ್ಟಿತು.ಕಿಟಕಿಯಿಂದ ಹೊರಗೆ ನೋಡಿದಾಗ, ದೂರದಲ್ಲಿ ಕಾಣುತ್ತಿದ್ದ ಮಿಣುಕು ದೀಪಗಳನ್ನು ನೋಡಿ, ಅಣ್ಣ ‘ಅಹಮದಾಬಾದ್ ಬಂದೇಬಿಟ್ಟಿತು’ ಎಂದು ಹೇಳಿದ. ಆಶ್ರಮದಲ್ಲಿ ಹೇಳಬೇಕಾಗಿದ್ದ ದೇವರ ಶ್ಲೋಕಗಳ ಬಗ್ಗೆ ಅಣ್ಣ ಮಾಹಿತಿ ಕೊಟ್ಟಿದ್ದ. ಪ್ರಾರ್ಥನಾ ಶ್ಲೋಕಗಳು ಕ್ಲಿಷ್ಟವಾಗಿದ್ದವು. ನನಗೆ ಅವೆಲ್ಲಾ ಹೊಸದು. ಉಚ್ಚಾರಣೆ ಸರಿಯಾಗಿ ಪ್ರಯತ್ನಿಸಬೇಕು ನಮ್ಮ ರೈಲು ಅಹಮದಾಬಾದ್ ತಲುಪುವ ತನಕವೂ ನಾನು ಬಾಯಿಪಾಠ ಮಾಡುತ್ತಿದ್ದೆ. ರೈಲ್ವೆ ಸ್ಟೇಷನ್ ನಲ್ಲಿ ಇಳಿದಾಗ ಒಬ್ಬ ಪೊಲೀಸ್ ಪೇದೆ (Secret Police) ನಮ್ಮನ್ನು ಇಳಿಸಿ, ನಮ್ಮ ಸಾಮಾನುಗಳನ್ನು ಒಂದು ಕುದುರೆಗಾಡಿಯಲ್ಲಿ ಇಡಿಸಿದ. ಮತ್ತೊಂದರಲ್ಲಿ ನಾವಿಬ್ಬರು ಕುಳಿತು ಆಶ್ರಮಕ್ಕೆ ಹೊರಟೆವು. ಆಗಲೇ ರಾತ್ರಿ ೧೦ ಗಂಟೆಯಾಗಿತ್ತು. ಆಶ್ರಮದ ಮುಂಭಾಗದಲ್ಲೇ ‘ಮಗನ್ಲಾಲ್ ಗಾಂಧಿ ಕುಟೀರ’ ವಿತ್ತು. ಬಾಪೂಜಿಯವರು ಮಗನಲಾಲ್ ನನ್ನು ತಮ್ಮ ‘ಗುರು’ವೆಂದು ಸಂಬೋಧಿಸುತ್ತಿದ್ದರು. ಮಹಾತ್ಮಾ ಗಾಂಧಿಯವರು ಅವರ ಜೀವಮಾನದಲ್ಲಿ ಹಲವಾರು ಅಹಿಂಸಾ ಚಳುವಳಿಗಳನ್ನು ಹಮ್ಮಿಕೊಂಡಿದ್ದರಷ್ಟೇ ? ಅದಕ್ಕೆ ‘ಸತ್ಯಾಗ್ರಹ’ ವೆಂಬ ನುಡಿಗಟ್ಟನ್ನು ಹೊಂದಿಸಿಕೊಟ್ಟವರು ಮಗನ್ಲಾಲಾರೇ ಆಗಿದ್ದರು. ಗಾಂಧೀಜಿಯವರು ಇಂತಹ, ಹಾಗೂ ಹಲವಾರು ಕಾರ್ಯಕ್ಷಮತೆಗಳಿಂದ ಮಗನ್ಲಾಲ್ ಬಗ್ಗೆ ಬಹಳ ಪ್ರಭಾವಿತರಾಗಿದ್ದರು. ಅಹ್ಮದಾಬಾದಿನ ಸಾಬರ್ಮತಿ ಆಶ್ರಮ, ಹಾಗು ದಕ್ಷಿಣ ಆಫ್ರಿಕದ Phoenix farm ಗಳನ್ನು ಸ್ಥಾಪಿಸಿ, ಅತ್ಯಂತ ಸುವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುತ್ತಿದ್ದ ನಿಷ್ಠಾವಂತ ಯುವಕ-ಮಗನ್ಲಾಲ್ ! ಬಾಪೂರವರ ಮನದಿಂಗಿತಗಳನ್ನು ಸಾಕಾರಗೊಳಿಸಲು ಕಟಿಬದ್ಧನಾಗಿದ್ದುಕೊಂಡು ಅವರ ಬಲಗೈನಂತೆ ಕಾರ್ಯತತ್ಪರನಾಗಿ ಸಾಬರ್ಮತಿ ಆಶ್ರಮದ ಪ್ರಮುಖವ್ಯಕ್ತಿಯಾಗಿದ್ದ. ಮಗನ್ಲಾಲ್ ತುಂಬಾ ಚಿಕ್ಕವಯಸ್ಸಿನಲ್ಲೇ ಮೃತನಾದ. ಈಗ ಗಾಂಧಿಯವರು ಬೆಳಗಿನಿಂದ ಸಾಯಂಕಾಲದವರೆಗೂ ಈ ಕುಟೀರ ಮುಂದೆಯೇ ವರಾಂಡದಲ್ಲಿ ಕುಳಿತಿರುತ್ತಿದ್ದರು. ಮಗನ್ ಲಾಲ್ ಗಾಂಧಿಯ ವಿಧವ-ಪತ್ನಿ, ಮತ್ತು ಮಕ್ಕಳನ್ನು ಬಾಪೂಜಿ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ರೈಲು ಪ್ರಯಾಣದ ಆಯಾಸದಿಂದ ನನಗೆ ತೂಕಡಿಕೆ ಶುರುವಾಗಿತ್ತು. ಆಶ್ರಮವಾಸಿಗಳೆಲ್ಲ ನಿದ್ರಿಸುತ್ತಿದ್ದರು. ವರಾಂಡದಲ್ಲಿ ಮಲಗಿದ್ದ ರಾಮದಾಸ್ ಗಾಂಧಿ, ನಮ್ಮಿಬ್ಬರನ್ನೂ ನೋಡಿ ಸ್ವಾಗತಿಸಿದರು. ಅಣ್ಣ ಒಳಗೆ ಹೋಗಿ ಹಾಸಿಗೆ ತಂದು ಹಾಸಿದರು. ನಾವು ಮಲಗಿದೆವು. ನನಗೆ ಮೊಟ್ಟಮೊದಲು ನೆಲದಮೇಲೆ ಮಲಗುವ ಅನುಭವವಾಯಿತು. ನಿದ್ರೆಬರುವುದು ಸ್ವಲ್ಪ ಕಷ್ಟವಾಯಿತು. ಹೊಸಜಾಗ, Excitement, Nervousness ಇತ್ಯಾದಿ. ಹೀಗೆ ಹೊರಳಾಡುತ್ತಾ ಮಗ್ಗುಲು ಬದಲಾಯಿಸುತ್ತಿರುವಾಗಲೇ ೪ ಗಂಟೆಯ ಪ್ರೇಯರ್ ಗಂಟೆ ಪ್ರತಿಧ್ವನಿಸಿತು. ಅಣ್ಣ ನನ್ನನ್ನು ಎಬ್ಬಿಸಿ, ಬಾ ರವರ ಕೊಠಡಿಗೆ ಕರೆದೊಯ್ದನು. ಮುಖ ತೊಳೆದುಕೊಳ್ಳುತ್ತಿದ್ದ ಬಾಪೂರವರು ನಮ್ಮನ್ನು ನೋಡಿ ಹೇಗಿತ್ತು ಪ್ರಯಾಣ ? ಇತ್ಯಾದಿ ವಿಚಾರಿಸಿದರು. ನಾಳೆಯಿಂದ ನನಗೆ ವರಾಂಡದಲ್ಲಿ ಬಾರವರ ಜೊತೆಯಲ್ಲಿ ಮಲಗಲು ಸಲಹೆಮಾಡಿದರು.
ಪ್ರಾರ್ಥನೆಯ ನಂತರ ಬಾ ನನ್ನನ್ನು ತಮ್ಮ ಕೊಠಡಿಗೆ ಕರೆದುಕೊಂಡು ಹೋದರು. ಇದ್ದ ಸ್ವಲ್ಪ ವಸ್ತುಗಳು ನಿಯಮಿತಜಾಗ ಗಳಲ್ಲಿ ವ್ಯವಸ್ಥಿತವಾಗಿ ಜೋಡಿಸಲ್ಪಟ್ಟಿದ್ದವು. ಎಲ್ಲೂ ಸ್ವಲ್ಪವೂ ಧೂಳಿರಲಿಲ್ಲ. ಇದಾದ ನಂತರ, ಎಲ್ಲರೂ ನೆಲದಮೇಲೆ ಕುಳಿತು ತಿಂಡಿ ತಿನ್ನಲು ಪ್ರಾರಂಭಿಸಿದರು. ಬಾರವರು ಸ್ಟೋವ್ ಹಚ್ಚಿ, ಕಾಫಿ ಮಾಡಲು ಹೊರಟರು. ಇದೇ ಮೊದಲಬಾರಿಗೆ ನಾನು ಕಾಫಿ ರುಚಿಯನ್ನು ಕಂಡುಕೊಂಡೆ. ಮನೆಯಲ್ಲಿ ಅಮ್ಮ ಮಕ್ಕಳಿಗೆ ಟೀ, ಕಾಫಿ ಕೊಡುತ್ತಿರಲಿಲ್ಲ. ಹಾಲು ಕೊಡುತ್ತಿದ್ದರು. ಕೆಲವು ವೇಳೆ ‘ಕೊಕೊ’ ಕೊಡುತ್ತಿದ್ದರು. ಈಗ ನನಗೆ ಬಾ ಕೊಟ್ಟ ಕಾಫಿ ಬಹಳ ಮುದಕೊಟ್ಟಿತ್ತು.
ಪುಟ – ೫
ಆಶ್ರಮದಲ್ಲಿದ್ದಷ್ಟು ದಿನ ಬಾ ರ ಜತೆಯಲ್ಲಿಯೇ ನಾನು ತಿಂಡಿ ತಿನ್ನುತ್ತಿದ್ದೆ. ಅವರು ನನ್ನನ್ನು ಮಗಳ ತರಹ ಪ್ರೀತಿಸುತ್ತಿದ್ದರು. ಅವರ ಜತೆ ತಿಂಡಿ ತಿನ್ನಲು ನಾನು ಸದಾ ಕಾದಿರುತ್ತಿದ್ದೆ. ನನಗೆ ಮನೆ ಕಡೆ ಗೀಳು ಶುರುವಾಯಿತು ತಾಯಿಯ ಮಾತಿಗೆ ವಿರುದ್ಧವಾಗಿ ನಾನು ಬರದಿದ್ದರೆ, ನಾನು ವಾಪಸ್ ಹೋಗಲು ಸಿದ್ಧಳಿರುತ್ತಿದ್ದೆ. ಎಲ್ಲ ಕಡೆಯೂ ಹೊಸಮುಖಗಳು. ಅವರಾಡುವ ಭಾಷೆ ನನಗೆ ಒಂದೂ ಅರ್ಥವಾಗುತ್ತಿರಲಿಲ್ಲ. ಪ್ರತಿಯೊಬ್ಬರೂ ಗುಜರಾತಿ ಇಲ್ಲವೇ ಮರಾಠಿ ಭಾಷೆಯಲ್ಲಿ ಮಾತಾಡುತ್ತಿದ್ದರು. ಅದು ನನಗೆ ಹೊಸದು. ಇದಲ್ಲದೆ ನಾನು ಬಹಳ ನಾಚಿಗೆ ಸ್ವಭಾವದ ಹುಡುಗಿ, ಯಾರ ಜತೆಗೂ ಮಾತಾಡುತ್ತಿರಲಿಲ್ಲ. ಊರಿನಲ್ಲಿದ್ದಾಗಲೂ ಅಮ್ಮನ ಜತೆಗೆ ಮನೆಯಲ್ಲೇ ಇರುತ್ತಿದ್ದೆ. ನನ್ನ ಇಬ್ಬರು ಅಣ್ಣಂದಿರ ವಯಸ್ಸು ನನಗಿಂತ ಹೆಚ್ಚಾಗಿತ್ತು. ನಾನು ಮನೆಯಿಂದ ಹೊರಗೆ ಸ್ಕೂಲಿನಲ್ಲಿ, ಕಾಲೇಜಿನಲ್ಲಿ ಓದುತ್ತಿದ್ದು ರಜದಲ್ಲಿ ಮಾತ್ರ ಮನೆಗೆ ಬರುತ್ತಿದ್ದೆ. ನನ್ನ ಪ್ರಾರಂಭಿಕ ವಿದ್ಯಾಭ್ಯಾಸ ಮನೆಯಲ್ಲೇ ಜರುಗಿತು.
ಒಂಟಿಯಾದ ನಾನು, ಪುಸ್ತಕದ ಹುಳುವಾಗಿದ್ದೆ. ನನ್ನ ಇತರೆ ಕಸಿನ್ಸ್ ಗಿಂತ ಮೊದಲೇ ನಾನು ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು ಪಾಸ್ ಮಾಡಿದೆ. ಬೇರೆ ವಿಷಯಗಳಲ್ಲಿ ನಾನು ನನ್ನ ವಯಸ್ಸಿಗೆ ತಕ್ಕಂತೆ ಇರಲಿಲ್ಲ. ಸ್ನೇಹಿತರನ್ನು ಮಾಡಿಕೊಳ್ಳುವ ಕಲೆ, ನನಗೆ ಕರಗತವಾಗಿರಲಿಲ್ಲ. ಯಾರಾದರೂ ಹೊಸಬರನ್ನು ಮನೆಯಲ್ಲಿ ನೋಡಿದಾಗ, ಕಕ್ಕಾವಿಕ್ಕಿಯಾಗಿ ವರ್ತಿಸುತ್ತಿದ್ದೆ. ಮನೆಯಲ್ಲೇ ಹೆಚ್ಚಾಗಿ ನಾನು ಯಾರ ಹತ್ತಿರವೂ ಮಾತೇ ಆಡುತ್ತಿರಲಿಲ್ಲ. ಆಶ್ರಮಕ್ಕೆ ಬಂದಾಗಲಂತೂ ನಾನು ಬಹಳ ಒಬ್ಬಂಟಿಯಾದೆ. ಏನೋ ಅಧೀರತೆ ನನ್ನನ್ನು ಆವರಿಸಿತ್ತು. ನನಗ್ಯಾರ ಹತ್ತಿರವಾದರೂ ಸಲಿಗೆಯಿದ್ದರೆ, ಅದು ಕಸ್ತೂರ್ ಬಾರವರ ಹತ್ತಿರಮಾತ್ರ.
ಅವರು ನನ್ನ ಬಳಿ ಪ್ರೀತಿಯಿಂದ ಅವರಿಗೆ ತಿಳಿದ ಹರುಕು-ಮುರುಕು ಹಿಂದಿಯಲ್ಲಿ ಮಾತಾಡಿಸುತ್ತಿದ್ದರು. ನನಗೆ ಬೇಕಾದ ಯಾವುದೇ ವಿಷಯಗಳನ್ನು ಅವರ ಹತ್ತಿರ ನಾನು ನಿರ್ಭಯದಿಂದ ಮಾತಾಡಬಹುದಿತ್ತು. ಯಾರ ಮನಸ್ಸನ್ನು ಚುಚ್ಚುವ ಇಲ್ಲವೇ ಹಂಗಿಸುವುದು ಅವರ ಅವರ ಧ್ಯೇಯವಾಗಿರಲಿಲ್ಲ. ಇಂತಹ ವ್ಯಕ್ತಿತ್ವದಿಂದಾಗಿ ಅವರು ಅಲ್ಲಿನ ಎಲ್ಲರ ಹತ್ತಿರವೂ ಗೌರವವನ್ನು ಸಂಪಾದಿಸಿದ್ದರು.
ಆಶ್ರಮದ ಮಹಿಳೆಯರು ಹಾಗೂ ಹುಡುಗಿಯರು, ಸಾಮಾನ್ಯವಾಗಿ ಬೆಳಗಿನ ಹೊತ್ತಿನಲ್ಲಿ ಅಡುಗೆಮನೆಯಲ್ಲೇ ಒಂದು ಗಂಟೆಯ ಸಮಯ ಕೆಲಸಮಾಡುತ್ತಿದ್ದರು. ಎಲ್ಲರೂ ಸೇರಿ ಹರಟೆಹೊಡೆಯುತ್ತ, ತಮಾಷೆಮಾಡುತ್ತಾ, ಹಿಟ್ಟು ಬೀಸುವುದು, ಅಕ್ಕಿಯಲ್ಲಿ ಕಲ್ಲು ಆರಿಸುವುದು, ತರಕಾರಿ ಹೆಚ್ಚುವುದು, ಚಪಾತಿ ಹಿಟ್ಟು ಕಲಸಿ, ಚಪಾತಿ ಮಾಡುವುದು, ಮೊದಲಾದ ಕೆಲಸಗಳಲ್ಲಿ ವ್ಯಸ್ತರಾಗಿರುತ್ತಿದ್ದರು. ಅವರ ಮಧ್ಯೆಯೇ ನಾನೂ ಬಾರವರ ಜತೆಯಲ್ಲಿ ಹೋಗಿ ಏನಾದರೂ ಕೆಲಸ ಹೊಂದಿಸಿಕೊಂಡು ಮಾಡುತ್ತಿದ್ದೆ. ನನಗೆ ‘ಬೋರ್’ ಆಗತೊಡಗಿತು. ಮುಖ್ಯಕಾರಣವೆಂದರೆ ಅವರ ಮಾತುಗಳು ನನಗೆ ಅರ್ಥವಾಗುತ್ತಿರಲಿಲ್ಲ. ಅಲ್ಲದೆ ಆ ಕೆಲಸಗಳು ನನಗೆ ಆಸಕ್ತಿ ಒದಗಿಸಲಿಲ್ಲ. ಬಾ ಅಲ್ಲಿಯೇ ಎಲ್ಲರ ಮಧ್ಯೆ ಕುಳಿತು ನಗುನಗುತ್ತಾ ತಮ್ಮ ಪಾಲಿನ ಕೆಲಸಗಳನ್ನು ಮಾಡಿಮುಗಿಸುತ್ತಿದ್ದರು.
ಕಸ್ತೂರ್ ಬಾರವರು ಅತ್ಯದ್ಭುತ ವ್ಯಕ್ತಿತ್ವ ಹೊಂದಿದವರು. ಅವರು ಏನೇ ಕೆಲಸಮಾಡಿದರೂ, ಚುರುಕುತನ, ಗರಿಗೆದರಿಕೆಯನ್ನು ವ್ಯಕ್ತಪಡಿಸುತ್ತಿದ್ದರು. ಇದೇ ಲವಲವಿಕೆಯನ್ನು ತಮ್ಮ ಜೀವನದ ಕೊನೆಯವರೆಗೂ ಉಳಿಸಿಕೊಂಡು ಬಂದರು. ಬಾಪು ಹತ್ತಿರ ಅವರು ಕುಳಿತಿದ್ದನ್ನು ನಾನು ನೋಡುತ್ತಿರಲಿಲ್ಲ. ಆದರೆ ಬಾಪು ಏನೇ ಕೆಲಸಮಾಡಿದರೂ ಅವರನ್ನು ದೂರದಿಂದ ಅವಲೋಕಿಸುತ್ತಿದ್ದರು. ಪತಿಯ ಆವಶ್ಯಕತೆಗಳನ್ನೆಲ್ಲ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಿದ್ದರು. ಬೇರೆಯವರೂ ಅವರವರಿಗೆ ಹೊಂಚಿದ ಕೆಲಸಗಳನ್ನು ಸರಿಯಾಗಿ ಮಾಡುವುದರ ಮೇಲ್ವಿಚಾರಣೆ ನಡೆಸುತ್ತಿದ್ದರು. ಒಂದು ದಿನ ಬಾರವರು ಆಶ್ರಮದ ‘ಡೈನಿಂಗ್ ಹಾಲ್’ ಕಡೆ ಉರಿಬಿಸಿಲಿದ್ದರೂ ಲೆಕ್ಕಿಸದೆ ಹೋಗುತ್ತಿರುವುದನ್ನು ನೋಡಿದೆ. ಬಾ ಕುಟೀರದಿಂದ ಡೈನಿಂಗ್ ಹಾಲ್ ಸ್ವಲ್ಪ ದೂರವೇ ಇತ್ತು. ವಿಚಾರಿಸಿದಾಗ, ಅವರು ನಮ್ಮ ಅಣ್ಣ ಪ್ಯಾರೇಲಾಲ್ ರನ್ನು ನೋಡಲು ಹೋಗುತ್ತಿದ್ದಾರೆ, ಎಂದು ತಿಳಿಯಿತು. ಬಾಪು ತಮ್ಮ ಮದ್ಯಾನ್ಹದ ಊಟದನಂತರ ಸ್ವಲ್ಪ ಹೊತ್ತು ಅಡ್ಡಾಗುತ್ತಿದ್ದರು. ದಿನವೂ ಅವರ ಜತೆಯಲ್ಲಿದ್ದು ನೋಡಿಕೊಳ್ಳಲು ನಮ್ಮ ಅಣ್ಣ ಇಂದು ಅಲ್ಲಿರಲಿಲ್ಲ. ನಾನು ನಮ್ಮ ಅಣ್ಣನ ಕೆಲಸಗಳನ್ನು ಮಾಡಿಕೊಡಲು ಅಲ್ಲಿ ಹೋಗಲೇ ? ಎಂದು ಬಾರವರಿಗೆ ನಿನಂತಿಸಿಕೊಂಡಾಗ, ಅವರು ‘ಬೇಡ. ಬೇಡ’. ಬಾಪುರವರ ಸೇವೆಯನ್ನು ಒಂದು ಒಳ್ಳೆಯ ಅವಕಾಶವೆಂದು ಎಣಿಸಿ ಅವನು ಮಾಡುತ್ತಿದ್ದಾನೆ. ಅದನ್ನು ತಪ್ಪಿಸಿಕೊಳ್ಳಲು ಅವನಿಗೆ ಸ್ವಲ್ಪವೂ ಇಷ್ಟವಿಲ್ಲವೆಂದು ಬಾ ಹೇಳಿದರು. “ನೀನು ಹೋಗಿ ಅವನನ್ನು ಕರಿ”. “ನೆನಪಿರಲಿ ; ಅವನು ಊಟಮಾಡುತ್ತಿದ್ದರೆ ಅವನಿಗೆ ಏನೂ ಹೇಳಬೇಡ. ಅವನಿಗೆ ಗೊತ್ತಾದರೆ ಊಟದ ಮಧ್ಯದಲ್ಲೇ ಕೈತೊಳೆದುಕೊಂಡು ಎದ್ದುಬಿಡುತ್ತಾನೆ”. “ನನಗೆ ಅವನು ಊಟಮಾಡದೇ ಹಾಗೆಯೇ ಬರುವುದು ಸರಿಹೋಗುವುದಿಲ್ಲ”
ಪುಟ ೬
ನನಗೆ ಬಟ್ಟೆಗಳನ್ನು ಒಗೆಯುವುದು ತಿಳಿದಿರಲಿಲ್ಲ. (ವಸ್ತ್ರಗಳನ್ನು ತೊಳೆಯುವುದು) ಆಶ್ರಮವಾಸಿಗಳೆಲ್ಲ ತಮ್ಮ ಬಟ್ಟೆಗಳನ್ನು ಅವರೇ ಒಗೆದು ಶುದ್ಧಿಗೊಳಿಸಬೇಕಿತ್ತು. ನಾನು ಬೇರೆ ಮಕ್ಕಳಂತೆ ನನ್ನ ಬಟ್ಟೆಗಳನ್ನು ಒಗೆಯಲು ಇಚ್ಚಿಸಿದೆ. ಮೊದಲು ಆಶ್ರಮದ ಭಾವಿಯಿಂದ ನೀರುಸೇದಿ, ಆ ನೀರಿನಲ್ಲೇ ಬಟ್ಟೆಗಳನ್ನು ನೆನೆಸಿ ಸೋಪುಹಾಕಿ ಉಜ್ಜಿ ಒಗೆಯಬೇಕಾಗಿತ್ತು. ಪಕ್ಕದಲ್ಲೇ ಹರಿಯುತ್ತಿದ್ದ ಸಾಬರ್ಮತಿ ನದಿಯ ನೀರನ್ನು ಬಳಸಿ ಬಟ್ಟೆ ಒಗೆದೆ. ಆದರೆ ಅನುಭವವಿಲ್ಲದ ನಾನು, ನದಿಯ ನೀರು ವಂಡಾಗಿದೆಯೇ ಶುದ್ಧವಾಗಿದೆಯೇ, ಎಂದು ನೋಡದೆ ಬಟ್ಟೆಗಳನ್ನು ಒಗೆದಾಗ, ಅವು ಮಣ್ಣಿನ ಬಣ್ಣವನ್ನು ಹೊಂದಿದ್ದವು. ನನ್ನ ಅಣ್ಣನೂ ಸೇರಿದಂತೆ ಅಲ್ಲಿ ಯಾರಿಗೂ ಇವುಗಳನ್ನು ನೋಡಲು ಪುರುಸೊತ್ತಿರಲಿಲ್ಲ. ಆದರೆ ಅನುಭವಿಯಾದ ಕಸ್ತೂರ್ ಬಾ ರವರ ಕಣ್ಣು ತಪ್ಪಿಸಲು ಸಾಧ್ಯವೇ ? ಇದನ್ನು ಗಮನಿಸಿದ ಬಾ, ಏನೂ ಮಾತಾಡದೇ ನನಗೆ ಬಟ್ಟೆ ಒಗೆಯುವ ಪದ್ಧತಿಯನ್ನು ವಿವರಿಸಿದರು. ನಮ್ಮ ಅಣ್ಣನನ್ನು ಕರೆದು, ‘ನಿನ್ನ ತಂಗಿಗೆ ಆಗಾಗ ಸ್ವಲ್ಪ ಹೇಳಿಕೊಡಲು’ ಕೋರಿದರು. ತಾವೇ ಬಟ್ಟೆಯನ್ನು ಒಗೆಯಲು ಹೋದಾಗ, ನಾನು ಅವರನ್ನು ತಡೆದು, ನನಗೆ ತಿಳಿದಂತೆ ಬಾವಿಯ ನೀರನ್ನು ಸೇದಲು ಪ್ರಯತ್ನಿಸಿದೆ. ನಾನು ಕಷ್ಟಪಡುತ್ತಾ ಭಾವಿಯ ನೀರು ಸೇದುತ್ತಿದ್ದಾಗ, ಅಲ್ಲಿದ್ದ ಆಶ್ರಮವಾಸಿಗಳು ಬಂದು ನನಗೆ ಸಹಾಯಮಾಡುತ್ತಿದ್ದರು. ಆಮೇಲೆ ನನಗೆ ಗೊತ್ತಾಯಿತು. ಅದಕ್ಕೂ ಬಾ ರವರೇ ಯಾರಿಗೋ ಸಹಾಯಮಾಡಲು ಹೇಳಿರಬಹುದೆಂದು !
ನನ್ನ ಆಶ್ರಮಜೀವನದ ಕೊನೆಯಲ್ಲಿ ಒಂದು ದಿನ ಗಾಂಧೀಜಿಯವರು ‘ಮಗನ್ ಲಾಲ್ ಗಾಂಧಿ ಕುಟೀರ’ದ ವರಾಂಡದಲ್ಲಿ ಕುಳಿತು ಅವರ ಮುಂದೆ ಇದ್ದ ಫೈಲ್ ಗಳನ್ನು ಅವಲೋಕಿಸುತ್ತಿದರು. ಒಂದು ಗುಂಪು ಸಂದರ್ಶಕರು ಆಶ್ರಮದ ಒಳಗೆ ಬಂದು ಆಶ್ರಮವನ್ನು ನೋಡಲು ಆಶಿಸಿದರು. ಕಾಣಿಕೆ ಹುಂಡಿಯಲ್ಲಿ ಹಣ ಹಾಕಿ, ಆಶ್ರಮವನ್ನು ತೋರಿಸುತ್ತೀರಾ ? ಎಂದು ವಿಚಾರಿಸಿದರು. ಹತ್ತಿರದಲ್ಲಿ ಯಾರೂ ಕಾಣಿಸಲಿಲ್ಲ. ಗಾಂಧೀಜಿಯವರು ನನ್ನನ್ನು ಕರೆದು,’ಇವರನ್ನು ಕರೆದುಕೊಂಡು ಹೋಗಿ ಆಶ್ರಮವನ್ನು ತೋರಿಸಿಕೊಂಡು ಬರುವೆಯಾ’ ? ಎಂದು ಕೇಳಿದರು. ಇನ್ನೇನು ನಾನು ಹೋಗಲು ಸಿದ್ಧಳಾಗುತ್ತಿದ್ದಂತೆ, ಬಾಪು, ‘ಆಶ್ರಮವನ್ನು ಪೂರ್ತಿಯಾಗಿ ನೀನು ನೋಡಿರುವೆಯಾ’ ? ಎಂದು ಕೇಳಿದಾಗ, ನಾನು ಉತ್ತರಿಸಲು ತಡ್ಬಡಾಯಿಸುತ್ತಿದ್ದೆ. ಅರ್ಥಮಾಡಿಕೊಂಡ ಬಾಪು, ಬೇರೆಯಾರನ್ನೋ, ಚೆನ್ನಾಗಿ ನೋಡಿದ್ದ ಆಶ್ರಮವಾಸಿಯನ್ನು ಕರೆದು ಆ ಕೆಲಸವನ್ನು ಅವನಿಗೆ ಗೊತ್ತು ಮಾಡಿದರು.
ಈಗ ಗಾಂಧೀಜಿಯವರು ಸುಮ್ಮನಿರದೆ ನನ್ನ ಮೌಢ್ಯಕ್ಕೆ ಬೇಸರಿಸಿದರು. ‘ನಿನ್ನ ಜಾಗದಲ್ಲಿ ಒಬ್ಬ ಇಂಗ್ಲಿಷ್ ಹುಡುಗಿಯಿದ್ದಿದ್ದರೆ, ಇಷ್ಟುಹೊತ್ತಿಗೆ ಎಲ್ಲಾ ವಿಷಯಗಳನ್ನೂ ಅರಿತಿರುತ್ತಿದ್ದಳು’. ‘ಆದರೆ, ನಮ್ಮ ದೇಶದ ಮಕ್ಕಳು ಪುಸ್ತಕದ ಹುಳುಗಳಾಗಿದ್ದಾರೆ’. ‘ಕೇವಲ ಪರೀಕ್ಷೆಯಲ್ಲಿ ಪಾಸ್ ಮಾಡುವುದೊಂದೇ ಅವರಿಗೆ ಮುಖ್ಯ; ಹಾಗೂ ಜೀವನದ ಗುರಿ’. ‘ಒಂದು ವೇಳೆ ಅವರೇನಾದರೂ ಅನುತ್ತೀರ್ಣರಾದರೋ ಎಲ್ಲವೂ ಮುಗಿದಂತೆಯೇ ಸರಿ’. ‘ಸಾಮಾನ್ಯ ಜ್ಞಾನವನ್ನು ಉತ್ತಮಪಡಿಸಿಕೊಳ್ಳುವ ಕಷ್ಟ ಅವರಿಗೇಕೆ ಬೇಕು ? ಹೇಗಿದ್ದರೂ ಅದು ಪರೀಕ್ಷೆ ಪಾಸ್ ಮಾಡಲು ಸಹಾಯ ಮಾಡುವುದಿಲ್ಲವಲ್ಲ’ ? ಎಂದು ಹೇಳುತ್ತಲೇ ಇದ್ದರು. ಇದನ್ನು ಕೇಳಿದಮೇಲಂತೂ ನನಗೆ ಬಹಳ ನಾಚಿಕೆಯಾಯಿತು. ಬಾಪು ಹೇಳಿದ್ದರಲ್ಲಿ ತಪ್ಪಿರಲಿಲ್ಲ. ನಾನು ಯಾವಾಗಲೂ ಕೈನಲ್ಲಿ ಒಂದು ಪುಸ್ತಕ ಹಿಡಿದಿರುತ್ತಿದ್ದೆ. ಏತಕ್ಕೆಂದರೆ ಬೇರೆ ಏನೂ ಮಾಡಲು ನನಗೆ ತೋಚುತ್ತಿರಲಿಲ್ಲ.
ಪುಟ ೭
ನನಗೆ ಆಶ್ರಮದ ಬಗ್ಗೆಯಾಗಲೀ ಅಹಮದಾಬಾದ್ ನಗರದ ಬಗ್ಗೆಯಾಗಲಿ ಏನಾದರೂ ಹೆಚ್ಚುವಿಷಯಗಳನ್ನು ತಿಳಿಯಲು ಆಶೆಯಿದ್ದರೂ, ಉದಾಹರಣೆಗೆ ಆ ಸ್ಥಳ, ಹಾಗೂ ಅಲ್ಲಿನ ಜನಗಳ ಬಗ್ಗೆ, ನನ್ನ ನಾಚಿಕೆ ಸ್ವಭಾವ ಯಾರನ್ನಾದರೂ ಕೇಳಿ ತಮ್ಮನ್ನು ತೋರಿಸಿಕೊಂಡು ಬರಲು ಅಡಚಣೆಯಾಗುತ್ತಿತ್ತು. ಇಲ್ಲಿಯೂ ಕಸ್ತೂರ್ ಬಾ ನನ್ನ ನೆರವಿಗೆ ಸಿದ್ಧರಿದ್ದರು. ನನ್ನ ಪರಿಸ್ಥಿತಿಯನ್ನು ಗುರುತಿಸಿ, ಅವರು ತಮ್ಮ ಪತಿಗೆ ವಿವರಿಸಿ, ಆಣ್ಣನಿಗೆ ಹೇಳಿ ಆಶ್ರಮದ ಒಳಗಡೆ ಮತ್ತು ಹಲವು ಆವರಣಗಳನ್ನು ಮುಂತಾದವನ್ನು ತೋರಿಸಿಕೊಂಡು ಬರಲು ಆದೇಶಿಸಿದರು. ಇದಲ್ಲದೆ ಅಹಮದಾಬಾದ್ ನಗರವನ್ನೂ ಸಹಿತ.
ಬಾಪು ಈಗ ಮತ್ತೆ ಟೂರ್ ಹೋಗಬೇಕಾಗಿ ಬಂತು. ನನ್ನ ‘ವೆಕೇಷನ್’ ಸಹಿತ ಇನ್ನೇನು ಕೊನೆಗೊಳ್ಳಲು ಬಂತು. ನಾನೊಬ್ಬಳೇ ನಮ್ಮ ಊರಿಗೆ ಪ್ರಯಾಣ ಮಾಡುವುದು ಸರಿಯಲ್ಲವೆಂದು ಎಲ್ಲರ ಅಭಿಪ್ರಾಯವಾಗಿತ್ತು. ಬಾಪು ಆಗ್ರಾಕ್ಕೆ ಹೋಗುವವರಿದ್ದರಲ್ಲ. ಅವರ ಜತೆಗೆ ನನ್ನನ್ನೂ ಕರೆದುಕೊಂಡು ಹೋಗಲು ಒಪ್ಪಿದರು. ಆಗ್ರಾದಿಂದ ದೆಹಲಿಗೆ ಹೋಗಿ, ಅಮ್ಮನನ್ನು ಸೇರಲು ಅನುಕೂಲವಾಯಿತು.
ಅಹ್ಮದಾಬಾದಿನಿಂದ ನಾವಿಬ್ಬರೂ ಬಾಂಬೆಗೆ ಹೋದೆವು. ಅಲ್ಲಿ ನಾನು ಮೊದಲ ಬಾರಿಗೆ ಭೋರ್ಗರೆಯುತ್ತಿದ್ದ ಕಡಲನ್ನು ಕಂಡೆ. ಎಲ್ಲೆಲ್ಲೂ ಕಣ್ಣಿಗೆ ಕಾಣುವಷ್ಟು ದೂರ, ದೈತ್ಯಾಕಾರದ ಅಲೆಗಳು ನಮ್ಮ ಕಡೆ ಬರುತ್ತಿದ್ದಂತೆಯೇ ತಮ್ಮ ವೇಗವನ್ನು ಕಳೆದುಕೊಂಡು ಸಣ್ಣ-ಸಣ್ಣ ಅಲೆಗಳ ತರಹ ಉರುಳಿ-ಉರುಳಿ ಬಂದು ಕಾಲನ್ನು ತೊಳೆಯುತ್ತಿದ್ದವು. ಕಣ್ಣು ನೋಡುವ ವರೆಗೆ ಎಲ್ಲೆಲ್ಲೂ ನೀರೇ-ನೀರು ! ಆ ದೃಶ್ಯ ಅದ್ಭುತವಾಗಿ ನನಗೆ ಕಾಣಿಸಿತು. ನನ್ನ ಶೂಗಳನ್ನು ಆಶ್ರಮದಲ್ಲೇ ಕಳೆದುಕೊಂಡಿದ್ದೆ. ಒಂದು ಜತೆ ಶೂ ಬೊಂಬಾಯಿನಲ್ಲಿ ಖರೀದಿಸಲು ಯೋಚಿಸಿದ್ದೆ. ನಾನು ಹಾಗೂ ಬಾ ಶಾಪಿಂಗ್ ಗೆ ಹೋದ ದಿನ ಎಲ್ಲಾ ಅಂಗಡಿಗಳೂ ಮುಚ್ಚಿದ್ದವು ; ನಾವು ಅವತ್ತೇ ಭೂಪಾಲಿಗೆ ಆಗ್ರಾ ಮುಖಾಂತರ ಪ್ರಯಾಣಿಸಿದೆವು. ಭೂಪಾಲ್ ರೈಲ್ವೆ ಸ್ಟೇಷನ್ ಸೇತುವೆಯನ್ನು ಕ್ರಾಸ್ ಮಾಡುತ್ತಿರುವಾಗ ಬರಿಗಾಲಿನಲ್ಲಿ ಹೋಗುತ್ತಿದ್ದ ನನ್ನನ್ನು ಕಂಡು ಬಾ, ಒಂದು ಜತೆ ಹೊಸ ಚಪ್ಲಿ ಕೊಡಿಸಿ ಬಳಸಲು ಸೂಚಿಸಿದರು. ನನಗೆ ತಾಯಿಯ ಪ್ರೀತಿ ದೊರೆತಹಾಗೆ ಅನ್ನಿಸಿತು. ನನ್ನ ಪ್ರತಿಯೊಂದು ಆದ್ಯತೆಗಳನ್ನೂ ಸೂಕ್ಷ್ಮವಾಗಿ ಅರಿತು, ನನಗೆ ನೆರವಾಗುತ್ತಿದ್ದ ಬಾ ನನ್ನ ಕಣ್ಣಿನಲ್ಲಿ ಮಹಾನ್ ಮಹಿಳೆಯಾಗಿ ಕಂಡರು.
ಭೂಪಾಲಿನಲ್ಲಿ ಕಸ್ತೂರ್ ಬಾ ರವರನ್ನು ಅಲ್ಲಿನ ನವಾಬ್ ರ ತಾಯಿ ಮತ್ತು ಪರಿವಾರದವರು ಬಂದು ಭೇಟಿಯಾಗಿ ಸ್ವಾಗತಿಸಿದ್ದರು. ಬಾ ನನ್ನನ್ನೂ ತಮ್ಮ ಜತೆಯಲ್ಲಿ ಕರೆದುಕೊಂಡು ಹೋದರು. ಅವರ ಅರಮನೆಯ ಭವ್ಯ ದರ್ಬಾರ್ ಹಾಲ್, ನ ಚಾಂಡ್ಲಿಯರ್ ಮತ್ತು ದಿವಾನ್ ಖಾನೆಯ ಅಂದಚೆಂದಗಳು, ಆಕರ್ಷಣೆಗಳು, ಅವರಿಗೆ ಬೇಕಾಗಿರಲಿಲ್ಲ. ಅವರು ಅಲ್ಲಿನ ಮಹಿಳೆಯರ ಹತ್ತಿರ ಸ್ವಾಭಾವಿಕವಾಗಿ ಮಾತಾಡಿದರು. ಅವರಿಗೆಲ್ಲ ಖಾದಿ ವಸ್ತ್ರಗಳ ಬಗ್ಗೆ ತಮ್ಮ ವಿಚಾರಗಳನ್ನು ವಿವರಿಸಿ, ಅಚ್ಚರಿಯನ್ನು ಉಂಟುಮಾಡಿದರು. ಅವರು ಪ್ರಸ್ತುತಪಡಿಸಿದ ಖಾದಿಬಟ್ಟೆಗಳ ವಿಶೇಷತೆಗಳು, ಹಾಗು ಉಪಯೋಗಗಳ ವಿವರಗಳನ್ನು ಕಂಡ ನನಗೆ, ಅವರು ವಿದ್ಯಾಭ್ಯಾಸ ಮಾಡಿಲ್ಲವೆನ್ನುವುದು ಮರೆತೇ ಹೋಯಿತು. ಓದಿಲ್ಲದೆ ಇರಬಹುದು ಆದರೆ ಅವರ ಸಾಮಾನ್ಯ ಜ್ಞಾನ, ವಿವೇಕ, ಮಾನವೀಯ ಮೌಲ್ಯಗಳು, ಹಾಗೂ ಜೀವನದ ಧ್ಯೇಯಗಳು, ನನ್ನ ಮನಸ್ಸಿನಮೇಲೆ ಮರೆಯಲಾರದ ಪರಿಣಾಮವನ್ನು ಬೀರಿದವು.
ಆಗ್ರಾದಿಂದ ನಾನು ದೆಹಲಿಗೆ ಹೋದೆ. ನನ್ನ ವೆಕೇಷನ್ ಮುಗಿಯುತ್ತ ಬಂದಿತ್ತು. ಒಂದೆರಡು ದಿನಗಳ ಬಳಿಕ ನಾನು, ಅಮ್ಮ ಇಬ್ಬರೂ ಲಾಹೋರ್ ಗೆ ಹೋದೆವು. ಸಾಬರ್ಮತಿ ಆಶ್ರಮದಲ್ಲಿ ನಾನು ಗಳಿಸಿದ ಜೀವನಾನುಭವ ಮತ್ತು ಬಾರವರ ಜತೆಗಿನ ಒಡನಾಟ, ನನಗೆ ಒಂದು ಹೊಸ ಅನುಭವವನ್ನು ನೀಡಿದ್ದವು. ಈಗ ಲಾಹೋರಿನ ಜೀವನದಲ್ಲಿ ಒಂದು ತರಹ ಅಸಹಜತೆ ಎದ್ದು ಕಾಣಿಸುತ್ತಿತ್ತು. ನಾನು ಖಾದಿ ಸೀರೆಯನ್ನುಟ್ಟು ಆಶ್ರಮದ ಗೆಳತಿಯರ ತರಹ ಸರಳ ಜೀವನ ಶೈಲಿಯನ್ನು ನಡೆಸಬೇಕೆನ್ನುವ ಮನಸ್ಸಾಯಿತು. ಅಮ್ಮ, ನನಗೆ ಅಹಮೆದಾಬಾದಿನ ಆಶ್ರಮಕ್ಕೆ ಹೋಗಲು ಅನುಮತಿ ಕೊಟ್ಟಸಮಯದಲ್ಲಿ ಅಲ್ಲಿ ಯಾವುದನ್ನೂ ಮಾಡಿಯೇ ಮಾಡುತ್ತೇನೆ, ಎನ್ನುವ ಶಪಥವನ್ನಾಗಿ ತೆಗೆದುಕೊಳ್ಳಬೇಡವೆಂದು ಬೆರಳು ತೋರಿಸಿ, ಸ್ಪಷ್ಟಪಡಿಸಿದ್ದಳು. ಖಾದಿ ಬಟ್ಟೆ ಉಡುವುದೂ ಸಹಿತ, ಶಪಥದ ಪಟ್ಟಿಯಲ್ಲಿತ್ತು.
ಖಾದಿಯಲ್ಲದೆ ಬೇರೆ ಯಾವ ಡ್ರೆಸ್ ಗಳನ್ನೂ ಬಳಸುವುದಿಲ್ಲವೆಂದು ನಾನೇನು ಶಪಥ ಮಾಡದಿದ್ದರೂ, ಮಿಲ್ ಬಟ್ಟೆಗಳನ್ನು ಬಳಸಲು ಇಷ್ಟವಾಗುತ್ತಿರಲಿಲ್ಲ. (ನಾನು ಆಶ್ರಮಕ್ಕೆ ಹೋಗಿ ಬಂದಮೇಲಂತೂ ಮನೆಯವರ್ಯಾರೂ ವಿದೇಶಿ ಬಟ್ಟೆಗಳನ್ನು ಉಡುತ್ತಿರಲಿಲ್ಲ) ಮೊದ ಮೊದಲು ಅಮ್ಮನಿಗೆ ಸ್ವಲ್ಪ ಸರಿಹೋಗಿರಲಿಲ್ಲ. ಕ್ರಮೇಣ ಅವರು ಅದಕ್ಕೆ ಹೊಂದಿಕೊಂಡರು.
ಪುಟ ೮
ನನ್ನ ಬಳಿಯಿದ್ದ ಉಡುಪುಗಳಲ್ಲದೆ ಬೇರೆ ಹೊಸದನ್ನು ಅವರು ಕೊಳ್ಳಲು ಒಪ್ಪಲಿಲ್ಲ. ಆಶ್ರಮಕ್ಕೆ ಹೋಗುವಾಗಲೇ ೩-೪ ಜತೆ ಉಡುಪುಗಳನ್ನು ಖರೀದಿಸಿದ್ದೆ. ಒಂದು ಜತೆ ವಸ್ತ್ರಗಳನ್ನು ಪ್ರತಿದಿನವೂ ಒಗೆದು ಅಣಿಮಾಡಿಕೊಳ್ಳುತ್ತಿದೆ. ಹೀಗೆ ಒಂದು ತಿಂಗಳು ಮ್ಯಾನೇಜ್ ಮಾಡಿದೆ. ಬಾ ನನಗೆ ಬಟ್ಟೆ ಒಗೆಯುವುದನ್ನು ಕಲಿಸಿಕೊಟ್ಟಿದ್ದರಲ್ಲಾ ! ಖಾದಿಬಟ್ಟೆಗಳ ವಿಶೇಷತೆ ಎಂದರೆ, ಗಟ್ಟಿಮುಟ್ಟಾದ ವಸ್ತ್ರ. ಇದಲ್ಲದೇ ಇಸ್ತ್ರಿ ಮಾಡದೆಯೇ ಬಳಸಲು ಅನುಕೂಲವಾಗಿತ್ತು. ನೋಡಲೂ ಚೆನ್ನಾಗಿರುತ್ತಿತ್ತು. ಇದನ್ನು ಗಮನಿಸಿದ ತಾಯಿಯವರು ನನಗೆ ಮತ್ತೊಂದು ಜತೆ ಖಾದಿ ಡ್ರೆಸ್ ಗಳನ್ನು ಕೊಡಿಸಿದರು. ಇಸ್ತ್ರಿಮಾಡಿಸಿಕೊಳ್ಳಲು ಅನುಕೂಲವಾಗುವಂತೆ ! ಮೊದಲು ಅಮ್ಮ ನನಗೆ ಖಾದಿಯನ್ನು ವಿರೋಧಿಸಿದ್ದರಿಂದಲೇ ನಾನು ಖಾದಿಯನ್ನು ಧರಿಸಲು ಹಠಹಿಡಿದಿದ್ದೆ.
3
೧೯೩೦ ರಲ್ಲಿ ನನ್ನ ಅಣ್ಣನ ಸಲಹೆಯಂತೆ, ಪುನಃ ನಾನು ನನ್ನ ಕಾಲೇಜಿನ ಬೇಸಿಗೆರಜೆಯಲ್ಲಿ ಆಶ್ರಮಕ್ಕೆ ಹೋದೆ. ಉಪ್ಪಿನ ಸತ್ಯಾಗ್ರಹವನ್ನು ಆಯೋಜಿಸಿದ್ದಕ್ಕಾಗಿ ಸರ್ಕಾರದವರು ಬಾಪು ಮತ್ತು ಪ್ಯಾರೇಲಾಲ್ ರನ್ನು ಜೈಲಿನಲ್ಲಿ ಬಂಬಂಧಿಸಿದ್ದರು. ಬಾರವರು ಸಾಬರ್ಮತಿ ಆಶ್ರಮದ ಹತ್ತಿರವಿದ್ದ ಹಳ್ಳಿ ಹಳ್ಳಿಗಳಿಗೆ ಹೋಗಿ ಅಲ್ಲಿನ ಕೆಲಸಗಾರರನ್ನು ಕಂಡು, ಆಸ್ಪತ್ರೆಗಳಲ್ಲಿ ಪೊಲೀಸ್ ದೌರ್ಜನ್ಯದಿಂದ ಗಾಯಗೊಂಡು ಮಲಗಿರುವ ಕಾರ್ಯಕರ್ತರುಗಳ ಯೋಗಕ್ಷೇಮವನ್ನು ನೋಡುತ್ತಿದ್ದರು. ಜನರಿಗೆ ಧರ್ಯ, ಸಾಂತ್ವನ ನೀಡುವ ಪ್ರಕ್ರಿಯೆ ನಿರಂತರವಾಗಿ ಸಾಗಿತ್ತು. ನಾನು ಆಶ್ರಮದಲ್ಲಿದ್ದಾಗ ಅವರು ಕೆಲವು ದಿನಗಳ ಮಟ್ಟಿಗೆ ಬಂದಿದ್ದರು. ಈಗ ನಾನು ಕಾಣುತ್ತಿರುವ ಬಾ ಬೇರೆಯತರಹವೇ ಇದ್ದಾರೆ. ಹಳ್ಳಿ ಹಳ್ಳಿಗಳಿಗೆ ಕಾಲುನಡಿಗೆ ಮತ್ತು ಎತ್ತಿನಬಂಡಿಯಲ್ಲಿ ಪ್ರವಾಸಮಾಡಿ ಅವರ ಶರೀರಸ್ಥಿತಿ ಹಾಳಾಗಿತ್ತು. ಬಾ ಅವರು ಎಲ್ಲಿ ಹೋದರೂ ಸಾಮಾನ್ಯಜನರು ಪಡುತ್ತಿರುವ ಕಷ್ಟಗಳನ್ನು ಕಂಡು ಅವರ ಮನಸ್ಸು ರೋಸಿಹೋಗಿತ್ತು. ಆದರೂ ಅವರು ಮಾತ್ರ ಸ್ಥಿತಪ್ರಜ್ಞರ ತರಹ ಧೃಢ ಮನಃ ಸಂಕಲ್ಪವನ್ನು ಮಾಡಿದ್ದರು. ಅವರ ಸೋತುಹೋದಂತೆ ಕಾಣಿಸುತ್ತಿದ್ದ ಮುಖ ಅದರ ಪ್ರತೀಕವಾಗಿತ್ತು. ವಯಸ್ಸಾದ ತಾಯಿ, ಈಗ ಸತ್ಯಕ್ಕಾಗಿ ಹೊರಾಡುವ ಒಬ್ಬ ಸತ್ಯಾಗ್ರಹಿ ಯೋಧೆಯಾಗಿದ್ದರು. ಬಾಪೂರವರ ಮೇಲಿನ ನಂಬಿಕೆ, ಅಭಿಪ್ರಾಯ, ಹಾಗೂ ಅದಮ್ಯ ಪ್ರೀತಿ, ಅವರಿಗೆ ಸ್ಫೂರ್ತಿ ನೀಡಿದ್ದವು. ರಾಷ್ಟ್ರದಲ್ಲಿ ಜಾರಿಯಲ್ಲಿದ್ದ ಅನೈತಿಕ ರಾಜಕೀಯ ಬೆಳವಣಿಗೆಗಳು ಅವರಿಗೆ ಅರ್ಥವಾಗುತ್ತಿರಲಿಲ್ಲವಾದರೂ, ಬಾಪುವನು ಪೂರ್ತಿಯಾಗಿ ನಂಬಿದ್ದರು. ಬಾಪುವಿನ ಸ್ವಾತಂತ್ರ್ಯ ಹೋರಾಟದಲ್ಲಿ ಒಬ್ಬ ನಿಷ್ಠಾವಂತ ಪತ್ನಿಯಾಗಿ ಅವರು ತಮ್ಮ ಸರ್ವಸ್ವವನ್ನೂ ರಾಷ್ಟ್ರದ ಏಳಿಗೆಗಾಗಿ ಮುಡಿಪಾಗಿಟ್ಟಿದ್ದರು. ಕೋಟ್ಯಾಂತರ ಮುಗ್ಧ ಭಾರತೀಯರ ಆದರ್ಶಗಳ ಪ್ರತೀಕವಾಗಿದ್ದರು.
ಆಶ್ರಮದಿಂದ ಬಾ ತಮ್ಮ ಮಕ್ಕಳನ್ನು ನೋಡಲು ಹೋದರು, ಮಣಿಲಾಲ್ ಗಾಂಧಿ, ರಾಮದಾಸ್ ಗಾಂಧಿ, ಮತ್ತು ಕೆಲವು ಜನ ಬಂದಿಗಳು ಸಾಬರ್ಮತಿ ಜೈಲಿನಲ್ಲಿ ಮೊಕದ್ದಮೆಗಾಗಿ ಜೈಲಿನಲ್ಲಿ ಬಂಧಿತರಾಗಿದ್ದರು. ನನ್ನನ್ನೂ ತಮ್ಮ ಜತೆಯಲ್ಲಿ ಕರೆದುಕೊಂಡು ಹೋದರು. ನಾನು ಎಂದೂ ಜೈಲಿನಲ್ಲಿ ಹೆಜ್ಜೆ ಇಟ್ಟಿರಲಿಲ್ಲ. ಬೆಳಕಿಲ್ಲದ ಕೊಳಕು ವಾಸನೆಯ ಪರಿಸರದಲ್ಲಿ ಉಸುರುಕಟ್ಟುವ ವಾತಾವರಣವಿತ್ತು. ರಾಮದಾಸ್ ಗಾಂಧಿ, ಮತ್ತು ಮಣಿಲಾಲ್ ಗಾಂಧಿ, ಜೈಲರ್ ಆಫೀಸಿಗೆ ತರಲ್ಪಟ್ಟರು, ಜೈಲರ್ ಹಾಗೂ ಪೊಲೀಸ್ ಆಫಿಸರ್ ಮಧ್ಯೆ ಇಂಟರ್ವ್ಯೂ (ಸಂವಾದ) ನಡೆದಿತ್ತು.
ಪುಟ ೯
ಜೈಲುವಾಸದ ಕಷ್ಟ ಕೋಟಲೆಗಳು, ಕೈದಿಗಳ, ಮುಖದಮೇಲೆ ಸ್ಪಷ್ಟವಾಗಿ ಅಚ್ಚೊತ್ತಿದ್ದವು. ಅವರನ್ನು ಅಪರಾಧಿಗಳ ವರ್ದಿಯಲ್ಲಿ (ಬಟ್ಟೆಯಲ್ಲಿ) ನೋಡಲು ಬೇಸರವಾಗುತ್ತಿತ್ತು. ಕಸ್ತೂರ್ ಬಾ ಗಾಂಧಿಯವರು ಇಂತಹ ಅಹಿತಕರ ಪ್ರಸಂಗಗಳಲ್ಲಿ ಸಿಕ್ಕು ಸಾಕಷ್ಟು ದುಖಃವನ್ನು ಅನುಭವಿಸಿದ್ದರು. ಬಾ ಜೈಲಿನಲ್ಲಿ ಹಲವಾರು ಬಾರಿ ಬಂಧಿಸಲ್ಪಟ್ಟಿದ್ದರು. ಅಲ್ಲಿನ ಕಷ್ಟಗಳನ್ನು ಕಣ್ಣಾರೆ ಕಂಡು ಅದರ ತೀವ್ರತೆಯನ್ನು ಅನುಭವಿಸಿದ್ದಾರೆ. ಬಾ ತಮ್ಮ ಮಕ್ಕಳ ಬಿಳಿಚಿಕೊಂಡ ಮುಖಗಳನ್ನು ಕಂಡು, ಅವರು ಯಾರ ಗುಂಪಿನ ಜತೆಯಲ್ಲಿದ್ದರು ? ಎಂದು ವಿಚಾರಿಸಿದರು. ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಇವೆಲ್ಲ ಸ್ವಾಭಾವಿಕ. ಇದಕ್ಕಾಗಿ ತಾನು ತನ್ನ ಪತಿ ಮತ್ತು ಮಕ್ಕಳಿಗೆ ಜೈಲುವಾಸ ಅನಿವಾರ್ಯವೆಂದು ನನ್ನ ನಂಬಿಕೆ. ರಾಷ್ಟ್ರಕ್ಕಾಗಿ ಸಾವಿರಾರು ದೇಶಭಕ್ತರು ಜೈಲಿನ ಕಬ್ಬಿಣದ ಸಲಾಕೆಗಳ ಹಿಂದೆ ಬಂಧಿಸಲ್ಪಟ್ಟಿದ್ದಾರೆ. ಕೇವಲ ನಮ್ಮ ಮಕ್ಕಳ ಬಗ್ಗೆ ಯೋಚನೆ ಏಕೆ ? ಎನ್ನುವುದು ಕಸ್ತೂರ್ ಬಾ ರವರ ನಿಲುವಾಗಿತ್ತು.
1 Organized manufacture of salt without Government licence, in civil defiance of the fiscal laws as a part of civil disobedience movement for Indian freedom.
೧೯೩೦ರಲ್ಲಿ ಬಾ ರವರ ಕಿರಿಯ ಮಗ ದೇವದಾಸ್ ಗಾಂಧಿ ಯನ್ನು ಗುಜರಾತ್ ಜೈಲಿನಲ್ಲಿ (ಪಂಜಾಬ್) ಬಂಧಿಸಲಾಯಿತು. ಬಾಪು-ಬಾರವರ ಆದರ್ಶಗಳಿಗೆ ಸಿಕ್ಕು, ಅವರ ಪರಿವಾರದ ಜನಗಳ ಕಷ್ಟಗಳು ಬೇರೆಯವರಿಗೂ ವಿಸ್ತಾರವಾಗುವುದನ್ನು ಕಂಡಿದ್ದರು. ದೇವದಾಸ್ ಅವರ ಪ್ರೀತಿಯ ಮಗ ; ಆದರೆ ಅವರು ಪಂಜಾಬ್ ಗೆ ಒಂದು ಸಲವೇ ಮಗನನ್ನು ಜೈಲಿನಲ್ಲಿ ‘ಇಂಟರ್ ವ್ಯೂ’ ಮಾಡಲು ಬಂದಿದ್ದರು. ನಮ್ಮ ಅಣ್ಣ ಮತ್ತು ಬೇರೆಯವರನ್ನು ಸಾಬರ್ಮತಿ ಆಶ್ರಮದಲ್ಲಿದ್ದವರು ನೋಡಲು ಸುಮಾರಾಗಿ ಬರ್ತಾನೇ ಇದ್ದರು. ಈ ತರಹ ಮಾಡುವುದರಿಂದ ತಮ್ಮ ಮಕ್ಕಳನ್ನು ನೋಡಿ ಮಾತಾಡಿಸಿದ ತರಹ ಸಮಾಧಾನ ಆಗುತ್ತಿತ್ತು. ಎಂದು ಬಾ ನಂಬಿದ್ದರು.
ಸ್ಥಾನೀಯ ಆಂದೋಳನಕಾರರು, ಇದರ ಅನುಭವ ಹೊಂದಿ ಅವರ ಜತೆಗಿರುವ ಹೊಸಬರನ್ನು ಪ್ರೇರೇಪಿಸಲು ಕಸ್ತೂರ್ ಬಾ ಅವರ ಕಾರಿನ ಹಿಂದೆ ಹಾಗು ಮುಂದುಗಡೆ ದೊಡ್ಡ ‘ಜುಲೂಸ್’ ಮಾಡಲು ಇಚ್ಛಿಸುತ್ತಿದ್ದರು. ಕಸ್ತೂರ್ ಬಾ ಗೆ ಇದು ಇಷ್ಟವಾಗುವುದಿಲ್ಲವೆನ್ನುವುದು ಅವರಿಗೆ ಗೊತ್ತಿದ್ದರೂ, ಬಿಡುತ್ತಿರಲಿಲ್ಲ. ಆದರೆ ನೇತಾರರೆಲ್ಲ ಸಾಮಾನ್ಯವಾಗಿ ಇಂತಹ ಕಾರ್ಯಾಚರಣೆಗಳನ್ನು ಇಷ್ಟಪಡುತ್ತಾರೆ, ಎನ್ನುವುದು ಅವರ ವಾದ. ಆದರೆ ನಿಜವಾಗಿಯೂ ಬಾ ಇದನ್ನು ನಂಬುತ್ತಿರಲಿಲ್ಲ ವೆಂದು ತಿಳಿದಮೇಲೆ ಅವರು ಸುಮ್ಮನಾದರು.
ಪುಟ ೧೦
೧೯೩೧ ರಲ್ಲಿ ನಾನು ಆಶ್ರಮಕ್ಕೆ ಬೇಸಿಗೆ ರಜೆಯಲ್ಲಿ ಬಂದಿದ್ದೆ. ಗಾಂಧೀಜಿ ಆಗ ಬಹುಶಃ ಜೈಲುವಾಸದಲ್ಲಿದ್ದರು ಅನ್ನಿಸುತ್ತದೆ…. (ಮುಂದುವರೆಯುವುದು )
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ