- ವಿದುಷಿ ಸರೋಜಾ ಶ್ರೀನಾಥ್- ಒಂದಿಷ್ಟು ಮಾತುಕತೆ - ಸೆಪ್ಟೆಂಬರ್ 10, 2021
ಚಿತ್ರ ಕೃಪೆ – ಜಯ್ ಸಾಲಿಯಾನ
ಮುಂಬಯಿಯ ಸಾಂಸ್ಕೃತಿಕ ವಲಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡವರಲ್ಲಿ ವಿದುಷಿ ಸರೋಜಾ ಶ್ರೀನಾಥ್ ಅವರೂ ಒಬ್ಬರು. ಮೂಲತಃ ಮೈಸೂರಿನವರಾದ ಸರೋಜಾ ಶ್ರೀನಾಥ್, ಮುಂಬಯಿಯಲ್ಲಿ ಸುಮಾರು ಐದು ದಶಕಗಳ ಕಾಲ ಸಾಂಸ್ಕೃತಿಕ ಪರಿಚಾರಿಕೆಯಲ್ಲಿ ತೊಡಗಿಸಿಕೊಂಡು ಸಂಗೀತ, ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ. ಮುಂಬೈ ವಿಶ್ವವಿದ್ಯಾಲಯದ ನಲಂದಾ ನೃತ್ಯ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಎರಡೂವರೆ ದಶಕಗಳ ಕಾಲ ಕಲಾಸೇವೆ ಮಾಡಿ ನಿವೃತ್ತರಾದ ಇವರಿಗೆ ಈಗ ಎಂಬತ್ತೈದರ ಹರೆಯ. ಕನ್ನಡ ನಾಡು, ನುಡಿ, ಸಾಹಿತ್ಯ ಸಂಸ್ಕೃತಿಯ ಬಗೆಗೆ ವಿಶೇಷ ಅಭಿಮಾನವಿರುವ ಸರೋಜಾ ಶ್ರೀನಾಥ್‍ರ ಓದಿನ ಹರಿವು ಅಗಾಧವಾದದ್ದು. ತಾವು ಓದಿ ಆನಂದಿಸಿದನ್ನು ಇತರರೊಂದಿಗೆ ಹಂಚಿಕೊಳ್ಳುವ ಸಲುವಾಗಿಯೇ ಬರವಣಿಗೆಯನ್ನು ಆರಂಭಿಸಿದ ಇವರು ವೈವಿಧ್ಯಮಯ ವಿಷಯಗಳನ್ನೊಳಗೊಂಡ ನಾಲ್ಕು ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಸಾಹಿತಿಯಾಗಬೇಕು, ಲೇಖಕಿಯಾಗಿ ಪ್ರಸಿದ್ಧಿ ಪಡೆಯಬೇಕೆಂಬ ಹಂಬಲಕ್ಕಿಂತ ಆತ್ಮತೃಪ್ತಿಗಾಗಿ, ಆತ್ಮಸಂತೋಷಕ್ಕಾಗಿ ಬರೆಯುವ ಸರೋಜಾ ಶ್ರೀನಾಥ್‍ರ ಲೇಖನಗಳು ಮಾಹಿತಿಗಳ ಕಣಜದಂತಿದ್ದು ಓದುಗರ ಮನಸ್ಸಿಗೆ ಮುದನೀಡುವಂತಿವೆ. ಸರಳ ಭಾಷಾ ಶೈಲಿ, ನೇರ ನಿರೂಪಣೆ, ಆಡಂಬರವಿಲ್ಲದ ಶಬ್ದ ಪ್ರಯೋಗ, ಅನುಭವ, ಅನುಭಾವವೆಲ್ಲ ಅಕ್ಷರರೂಪ ಪಡೆವ ಸೊಗಸನ್ನು ಅವರ ಕೃತಿಗಳಾದ ‘ಅಮರ ರಾಮಾಯಣ’, ‘ಮೈಸೂರಿನಿಂದ ಮೌಂಟ್ ಟಾಂಬೋರಾವರೆಗೆ’, ‘ಸಂಗೀತ ಸಾಹಿತ್ಯ ಅನುಸಂಧಾನ’ ಹಾಗೂ ‘ಜಗದಗಲ ಕುತೂಹಲ’ದಲ್ಲಿ ಕಾಣಬಹುದಾಗಿದೆ. ಅಮರ ರಾಮಾಯಣದಲ್ಲಿ ವಾಲ್ಮೀಕಿ ರಾಮಾಯಣ, ಕನ್ನಡ ರಾಮಾಯಣ ಕೃತಿಗಳನ್ನಲ್ಲದೆ ಜಪಾನ್, ಶ್ರೀಲಂಕಾ, ಮಂಗೋಲಿಯಾ, ಬರ್ಮಾ, ಇಂಡೋನೇಷಿಯಾ, ಥೈಲ್ಯಾಂಡ್, ಜಪಾನ್ ಮೊದಲಾದ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ ರಾಮಾಯಣಗಳ ತೌಲನಿಕವಾಗಿ ಅಧ್ಯಯನ ಮಾಡಿರುವುದು ಸರೋಜಾ ಶ್ರೀನಾಥ್ ಅವರ ಅಗಾಧ ಓದಿಗೆ ಸಾಕ್ಷಿಯಾಗಿದೆ. ‘ಮೈಸೂರಿನಿಂದ ಮೌಂಟ್ ಟಾಂಬೋರಾವರೆಗೆ ಕೃತಿಯಲ್ಲಿ ಸಂಗ್ರಹವಾಗಿರುವ ಪ್ರವಾಸಕಥನಗಳು ಪ್ರವಾಸಪ್ರಿಯೆ ಸರೋಜಾ ಶ್ರೀನಾಥ್ ಅವರ ತೀಕ್ಷ್ಣದೃಷ್ಟಿ, ಸಂಶೋಧನಾತ್ಮಕ ಅಧ್ಯಯನ, ಆಕರ್ಷಕ ಬರವಣಿಗೆಯನ್ನು ಅನಾವರಣಗೊಳಿಸಿವೆ. ಭರತನ ನಾಟ್ಯಶಾಸ್ತ್ರ, ರಾಮಾಯಣ, ಭಾಗವತ, ಮಹಾಭಾರತ, ಪದ್ಮಪುರಾಣ ಹಾಗೂ ಅನ್ಯ ದೇಶ, ಭಾಷಾ ಕೃತಿಗಳಿಂದ ಆಯ್ದ ಅಪರೂಪದ ಸಂಗತಿಗಳಿರುವ ಪ್ರಬಂಧಗಳು ಜಗದಗಲ ಕುತೂಹಲ ಹಾಗೂ ಸಂಗೀತ ಸಾಹಿತ್ಯ ಅನುಸಂಧಾನ ಕೃತಿಗಳಲ್ಲಿ ಸಂಗ್ರಹಗೊಂಡಿದ್ದು ಓದುಗರಿಗೆ ರಸದೌತಣ ನೀಡುತ್ತವೆ.
85ರ ಹರೆಯದಲ್ಲೂ ಲವಲವಿಕೆಯಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸರೋಜಾ ಶ್ರೀನಾಥ್ ಅವರು ಸಧ್ಯ ಸಿಂಗಾಪೂರದಲ್ಲಿ ನೆಲೆಸಿದ್ದಾರೆ. ಅವರ ಮಗಳು ಡಾ.ಸಿರಿರಾಮ ಅವರು ಹೆಸರಾಂತ ಕಲಾವಿದರಾಗಿ ನೃತ್ಯಪಟುವಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ತಮ್ಮ ‘ಕನಕ ಸಭಾ ಪರ್ಫಾರ್ಮಿಂಗ್ ಆಟ್ರ್ಸ್’ ಸಂಸ್ಠೆಯ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡುತ್ತಿರುವ ಸಿರಿರಾಮ ಅವರ ಮಗಳು ಅಮರ ಸಹ ಸಂಗೀತ, ನೃತ್ಯ ಕ್ಷೇತ್ರಗಳಲ್ಲಿ ಯುವಪ್ರತಿಭೆಯಾಗಿ ಮಿಂಚುತ್ತಿದ್ದಾಳೆ. ಸರೋಜಾ ಶ್ರೀನಾಥ್ ಅವರ ಇಡೀ ಕುಟುಂಬವೇ ಸಾಂಸ್ಕೃತಿಕ ಪರಿಚಾರಿಕೆಯಲ್ಲಿ ತೊಡಗಿಸಿಕೊಂಡಿದ್ದು ಮುಂಬಯಿ ಕನ್ನಡಿಗರ ಹೆಮ್ಮೆಯೆನ್ನಿಸಿದ್ದಾರೆ.
ಸರೋಜಾ ಶ್ರೀನಾಥ್ ಅವರೊಂದಿಗೆ 2018ರಲ್ಲಿ ಮುಂಬಯಿಯ ಚೆಂಬುರಿನ ನಿವಾಸದಲ್ಲಿ ನಡೆಸಿದ ಸಂದರ್ಶನದಲ್ಲಿ ತಮ್ಮ ಬರವಣಿಗೆಯ ಹಿಂದಿನ ಸ್ಫೂರ್ತಿ, ಪ್ರೇರಣೆ, ಜೀವನಾನುಭವಗಳನ್ನು, ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅದರ ಆಯ್ದ ಭಾಗಗಳನ್ನು ಓದುಗರಿಗಾಗಿ ಇಲ್ಲಿ ಸಂಗ್ರಹಿಸಿಕೊಡಲಾಗಿದೆ.
ಸರೋಜಾ ಮೇಡಂ, ನಿಮ್ಮ ಬಾಲ್ಯದ ದಿನಗಳು ಹೇಗಿದ್ದವು?
ನಾನು ಹುಟ್ಟಿದ್ದು, ಬೆಳೆದಿದ್ದು ಮೈಸೂರಿನಲ್ಲಿ. ನನ್ನ ಪ್ರಾಥಮಿಕ ಹಾಗೂ ಪದವಿ ಶಿಕ್ಷಣ ಸಹ ಮೈಸೂರಿನಲ್ಲೇ ಆಯಿತು. ಅಜ್ಜಿಯ ಮನೆಯ ಕೂಡು ಕುಟುಂಬದಲ್ಲಿ ಬೆಳೆದಿದ್ದರಿಂದ ಸದಾ ಎಂಟು ಹತ್ತು ಮಕ್ಕಳು ಒಟ್ಟಿಗೇ ಇರುತ್ತಿದ್ದವು. ಸಾಂಸ್ಕೃತಿಕನಗರ ಮೈಸೂರಿನ ಪ್ರಭಾವ ನಮ್ಮ ಕುಟುಂಬದ ಮೇಲೆ ಸಾಕಷ್ಟು ಆಗಿದ್ದರಿಂದ ನಮಗೆ ಬಾಲ್ಯದಿಂದಲೇ ಸಂಗೀತ, ನೃತ್ಯ, ಸಾಹಿತ್ಯದ ಜೊತೆಗೆ ಭಾರತೀಯ ಸಂಸ್ಕೃತಿಯ ಪರಿಚಯ ಚೆನ್ನಾಗಿ ಆಗಿತ್ತು.
ಸಂಗೀತ ಶಾಸ್ತ್ರಜ್ಞೆ, ವಿದುಷಿಯಾಗಿರುವ ನಿಮಗೆ ಸಂಗೀತದ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ?
ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಅಜ್ಜಿಯವರ ಅಣತಿಯಂತೆ ಮಕ್ಕಳೆಲ್ಲರೂ ಕಡ್ಡಾಯವಾಗಿ ಶಾಸ್ತ್ರೀಯ ಸಂಗೀತ ಕಲಿಯಬೇಕಿತ್ತು. ಪ್ರತಿನಿತ್ಯ ಮನೆಗೆ ಬರುತ್ತಿದ್ದ ಸಂಗೀತ ಮೇಷ್ಟ್ರು ಒಬ್ಬೊಬ್ಬರಿಗೂ ಪ್ರತ್ಯೇಕವಾಗಿ ಸಂಗೀತ ಕಲಿಸುತ್ತಿದ್ದರು. ಅಷ್ಟಲ್ಲದೆ ದಿನಾ ಬೆಳಗಿನ ಜಾವ ಸೈಕಲ್ಲಿನಲ್ಲಿ ನಮ್ಮ ಮನೆಯ ಹೊರಗೆ ಒಂದು ಸುತ್ತು ಹಾಕಿ. ಮಕ್ಕಳು ಸಂಗೀತ ಅಭ್ಯಾಸ ಮಾಡುತ್ತಿದ್ದಾರೋ ಇಲ್ಲವೋ ಎಂದು ಪರೀಕ್ಷಿಸುತ್ತಿದ್ದರು. ಹೀಗೆ ಬಾಲ್ಯದಲ್ಲಿ ಶುರುವಾದ ಕಲಿಕೆ ಪದವಿ ತರಗತಿಯಲ್ಲಿ ಸಂಗೀತವನ್ನೇ ಮುಖ್ಯ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಲು ಪ್ರೇರಣೆಯಾಯಿತು.
ಸಾಂಸ್ಕೃತಿಕ ನಗರ ಮೈಸೂರಿನಿಂದ ವಾಣಿಜ್ಯನಗರ ಮುಂಬಯಿಗೆ ಬಂದದ್ದು ಹೇಗೆ? ನಿಮ್ಮ ವೃತ್ತಿ, ಹವ್ಯಾಸಗಳಿಗೆ ಮುಂಬಯಿ ಹೇಗೆ ಪ್ರೇರಣೆಯಾಗಿದೆ?
ಮೈಸೂರಿನಲ್ಲಿ ಪದವಿ ಪಡೆದ ನಂತರ ಬೆಂಗಳೂರಿನ ‘ಡ್ರಾಮಾಟಿಕ್ ಆಟ್ರ್ಸ್ ಅಂಡ್ ಕ್ರಾಫ್ಟ್’ ತರಗತಿಗೆ ಡಿಪ್ಲೋಮಾ ಮಾಡಿಕೊಂಡೆ. ಮದುವೆಯಾಗಿ ಚೆನೈಗೆ ಹೋದ ನಂತರ ‘ಸೆಂಟ್ರಲ್ ಕಾಲೇಜ್ ಆಫ್ ಕರ್ನಾಟಿಕ್ ಮ್ಯೂಸಿಕ್’ ಸಂಸ್ಥೆಯಲ್ಲಿ ಸಂಗೀತ ವಿದ್ವಾನ್ ಡಿಪ್ಲೋಮಾ ಕೋರ್ಸ್ ಮಾಡಿಕೊಂಡು ವಿದುಷಿಯಾದೆ. 1972 ರಲ್ಲಿ ಮುಂಬಯಿಗೆ ಬಂದು ನೆಲೆಸಿದಾಗ ಇಲ್ಲಿನ ನಲಂದಾ ನೃತ್ಯಕಲಾ ಮಹಾವಿದ್ಯಾಲಯದಲ್ಲಿ ಸಂಗೀತಜ್ಞೆಯಾಗಿ ವೃತ್ತಿ ಆರಂಭಿಸಿದೆ. ಇಪ್ಪತ್ತೆಂಟು ವರ್ಷಗಳ ಸೇವೆಯ ನಂತರ ಭರತನಾಟ್ಯ ವಿಭಾಗದ ಮುಖ್ಯಸ್ಥೆಯಾಗಿ ನಿವೃತ್ತಿ ಹೊಂದಿದೆ. ಅಲ್ಲಿಸುಮಾರು 20 ವರ್ಷಗಳ ಕಾಲ ವಿಭಾಗದ ಮುಖ್ಯಸ್ಥೆಯಾಗಿ ಕೆಲಸ ಮಾಡಿದ್ದು ನನ್ನ ಜೀವನದ ಅತ್ಯಂತ ಮಹತ್ವದ ಕ್ಷಣಗಳೆಂದು ಹೇಳಿಕೊಳ್ಳಬಹುದು. ವೃತ್ತಿಯ ದಿನಗಳಲ್ಲಿ ಓದು, ಅಧ್ಯಯನಕ್ಕೆ ಅವಕಾಶವಿದ್ದುದ್ದರಿಂದ ಮುಂಬಯಿ ವಿಶ್ವವಿದ್ಯಾಲಯದ ಗ್ರಂಥಾಲಯದ ಪುಸ್ತಕಗಳು ಬಹಳ ಸಹಕಾರಿಯಾದವು. ಆ ದಿನಗಳಲ್ಲೇ ಬರವಣಿಗೆಯನ್ನು ಸಹ ರೂಢಿಸಿಕೊಳ್ಳಲು ಸಾಧ್ಯವಾಯಿತು.
ಬಾಲ್ಯದಿಂದ ಪದವಿಯವರೆಗೆ ಸಂಗೀತವನ್ನೇ ಅಭ್ಯಾಸ ಮಾಡಿದ ನಿಮಗೆ ನೃತ್ಯದ ಬಗ್ಗೆ ಪಾಠ ಮಾಡಲು ಕಷ್ಟವಾಗಲಿಲ್ಲವೇ?
ಸಂಗೀತ ನನ್ನ ಮೆಚ್ಚಿನ ಕ್ಷೇತ್ರವಾದರೂ ನೃತ್ಯದ ಬಗ್ಗೆ ಅಲ್ಪಸ್ವಲ್ಪ ವಿಷಯ ತಿಳಿದುಕೊಂಡಿದ್ದೆ. ಎರಡೂ ಕ್ಷೇತ್ರಗಳಲ್ಲಿ ನನಗೆ ಸಮಾನವಾದ ಆಸಕ್ತಿ ಅಭಿರುಚಿ ಇದ್ದುದ್ದರಿಂದ ಭರತನಾಟ್ಯ ವಿಭಾಗದ ಮುಖ್ಯಸ್ಥೆಯಾದಾಗ ಅನುಕೂಲವಾಯಿತು. ಸಂಗೀತ ಮತ್ತು ನೃತ್ಯ ಎರಡೂ ಅವಳಿ ಜವಳಿ ಇದ್ದಂತೆ ಎನ್ನುವುದು ನನ್ನ ಭಾವನೆ. ಎರಡೂ ಭಾವನಾತ್ಮಕ ಲಲಿತ ಪ್ರಕಾರಗಳೇ ಆಗಿವೆ. ಭರತನ ನಾಟ್ಯಶಾಸ್ತ್ರವನ್ನು ನಾವು ಸಂಗೀತದ ಥಿಯರಿಯಲ್ಲಿ ಓದಿದಂತೆ ಡ್ರಾಮಾಟಿಕ್ ಆಟ್ರ್ಸ್‍ನಲ್ಲಿ ಭರತನ ನಾಟ್ಯ ಶಾಸ್ತ್ರವನ್ನು ಅಭ್ಯಾಸ ಮಾಡುತ್ತೇವೆ. ಜೊತೆಗೆ ನೃತ್ಯದ ಇತಿಹಾಸವನ್ನು ಪಾಠ ಮಾಡುವಾಗ ನೃತ್ಯದ ಆಳ ವಿಸ್ತಾರವನ್ನು ತಿಳಿದುಕೊಂಡಿರುವುದು ಅವಶ್ಯಕ. ಆಗ ಮುಂಬಯಿ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿನ ವೈವಿಧ್ಯಮಯ ಪುಸ್ತಕಗಳ ಅಧ್ಯಯನದಿಂದಾಗಿ ನೃತ್ಯಕಲೆಯ ಬಗ್ಗೆ ನನ್ನ ಓದಿನ ಹರವು ಹೆಚ್ಚಾಯಿತು.
ಸಂಗೀತದ ಜೊತೆಗೆ ನೃತ್ಯಪ್ರಕಾರಗಳಲ್ಲಿ ಕೂಡ ನಿಮಗೆ ವಿಶೇಷ ಒಲವು ಇದೆ. ಇದಕ್ಕೆ ಪ್ರೇರಣೆಯೇನು?
ಚಿಕ್ಕವರಿದ್ದಾಗ ಹಾಡು, ನೃತ್ಯ, ಹರಿಕಥೆ, ನಾಟಕ ಎಲ್ಲವನ್ನೂ ನಾವೇ ರಚಿಸಿ ಪ್ರದರ್ಶಿಸುತ್ತಿದ್ದೆವು. ಮನೆಯಲ್ಲಿದ್ದ ಏಳೆಂಟು ಮಕ್ಕಳು ಸೇರಿ ಕಿಟಕಿಯಿಂದ ಕಿಟಕಿಗೆ ಪರದೆ ಕಟ್ಟಿ, ಟೇಬಲ್ಲು, ಬೆಂಚು, ಮಂಚಗಳನ್ನು ಜೋಡಿಸಿ ವೇದಿಕೆ ಸಿದ್ಧ ಮಾಡುತ್ತಿದ್ದೆವು. ನಾವೇ ರಚಿಸಿ ಸಂಯೋಜಿಸಿದ ನೃತ್ಯಗಳನ್ನು ನಮ್ಮ ಕಲ್ಪನೆಗೆ ತಕ್ಕಂತೆ ಆ ಪುಟ್ಟ ವೇದಿಕೆ ಮೇಲೆ ಪ್ರದರ್ಶನ ಮಾಡುತ್ತಿದ್ದೆವು. ಶಾಸ್ತ್ರೀಯ ನೃತ್ಯ ಪೂರ್ಣವಾಗಿ ತಿಳಿಯದೇ ಇದ್ದರೂ ಅದರಂತೆ ಅನುಕರಣೆ ಮಾಡಿ ಕುಣಿಯುತ್ತಿದ್ದೆವು. ಜಾನಪದ ನೃತ್ಯಗಳನ್ನು ಹೆಚ್ಚು ನೋಡುತ್ತಿದ್ದುದ್ದರಿಂದ ಅದರ ಪ್ರಭಾವವೂ ನಮ್ಮ ನೃತ್ಯದ ಮೇಲೆ ಆಗ್ತಿತ್ತು. ಒಟ್ಟಾರೆಯಾಗಿ ಸುಸ್ವರವೋ, ಅಪಸ್ವರವೋ ಮನೇಲಿದ್ದ ಹರ್ಮೋನಿಯಂ ಬಾರಿಸಿಕೊಂಡು ಕನ್ನಡ ಶಾಲೆಯ ಪಠ್ಯದಲ್ಲಿದ್ದ ಕನ್ನಡ ಪದ್ಯಗಳನ್ನು ಆರಿಸಿಕೊಂಡು ನಮ್ಮದೇ ರಾಗ, ನಮ್ಮದೇ ತಾಳ ಹಾಕಿಕೊಂಡು ಥೈತಕ ಥೈತಕ ಅಂತ ಕುಣಿದ ನೆನೆಪು ಇಂದಿಗೂ ಇದೆ. ಬಹುಶಃ ಸಂಗೀತ, ನೃತ್ಯದಲ್ಲಿ ನನ್ನನ್ನು ಹೆಚ್ಚು ತೊಡಗಿಸಿಕೊಳ್ಳಲು ಬಾಲ್ಯದ ಈ ಚಟುವಟಿಕೆಗಳೇ ಮುಖ್ಯ ಕಾರಣವೆನಿಸುತ್ತದೆ.
ಸಂಗೀತ, ನೃತ್ಯದ ಜೊತೆಗೆ ಸಾಹಿತ್ಯದ ಅಭಿರುಚಿ ನಿಮ್ಮಲ್ಲಿ ಬೆಳೆದು ಬಂದದ್ದು ಹೇಗೇ?
ಸಾಹಿತ್ಯಕ್ಕೆ ಮುಖ್ಯ ಪ್ರೇರಣೆಯೆಂದರೆ ನಮ್ಮ ಮನೆಗೆ ಆಗಾಗ ಬರುತ್ತಿದ್ದ ಪ್ರಸಿದ್ಧ ಸಾಹಿತಿ ದೇವುಡು ನರಸಿಂಹಶಾಸ್ತ್ರಿಗಳು. ಇವರು ಮೈಸೂರು ಅರಮನೆಯ ಆಸ್ಥಾನ ವಿದ್ವಾನ್ ಆಗಿದ್ದರು. ನಮ್ಮ ಮನೆಗೆ ಬಂದಾಗಲೆಲ್ಲಾ ಭಗವದ್ಗೀತೆಯ ವ್ಯಾಖ್ಯಾನ ಮಾಡುತ್ತಿದ್ದರು. ಆಗ ಅವರನ್ನು ಭೇಟಿ ಮಾಡಲು ಸುತ್ತಮುತ್ತಲಿನ ಹಳ್ಳಿಗಳಿಂದ ಅನೇಕ ಪಂಡಿತರು ಬಂದು ರಾತ್ರಿಯೆಲ್ಲಾ ಕುಳಿತು ಅವರೊಡನೆ ಚರ್ಚೆ ಸಂವಾದ ನಡೆಸುತ್ತಿದ್ದರು. ತರಾಸು, ಆನಂದ, ಜಿ.ಪಿ ರಾಜರತ್ನಂ ಮುಂತಾದ ಅನೇಕ ಪ್ರಸಿದ್ಧ ಸಾಹಿತಿಗಳು ಸಹ ನಮ್ಮ ಮನೆಗೆ ಬರುತ್ತಿದ್ದರು. ಚಿಕ್ಕವರಿದ್ದ ನಮಗೆ ಅವರ ಮಾತುಗಳು ಸಂಪೂರ್ಣವಾಗಿ ಅರ್ಥವಾಗದಿದ್ದರೂ ಅವುಗಳ ಪ್ರಭಾವ ಖಂಡಿತಾ ನಮ್ಮ ಮೇಲಾಗುತ್ತಿತ್ತು.ಇವೆಲ್ಲದರ ಜೊತೆಗೆ ನನ್ನ ಸೋದರಮಾವನವರು ಓದಲು ಸಾಕಷ್ಟು ಒಳ್ಳೆಯ ಪುಸ್ತಕಗಳನ್ನು ತಂದುಕೊಟ್ಟಿದ್ದು ಸಾಹಿತ್ಯದಲ್ಲಿ ಅಭಿರುಚಿ ಮೂಡಲು ಕಾರಣವಾಯಿತು.
ಕುವೆಂಪು ಅವರು ನಿಮ್ಮ ಅಚ್ಚುಮೆಚ್ಚಿನ ಸಾಹಿತಿ, ಕವಿ. ಅವರ ಬಗ್ಗೆ ಒಂದೆರಡು ವಿಷಯ ತಿಳಿಸಿ.
ಹೌದು, ಕುವೆಂಪು ನನ್ನ ಅತ್ಯಂತ ಪ್ರಿಯವಾದ ಕವಿ. ಪದವಿ ತರಗತಿಯಲ್ಲಿ ಐಚ್ಛಿಕಗಾಗಿ ಮೂರು ವಿಷಯಗಳನ್ನು ಆರಿಸಿಕೊಳ್ಳಬೇಕಿತ್ತು. ಆಗ ನಾನು ಇತಿಹಾಸ, ವಿಶೇಷ ಕನ್ನಡ ಮತ್ತು ಸಂಗೀತವನ್ನು ತೆಗೆದುಕೊಂಡಿದ್ದೆ. ಆದರೆ ಮೈಸೂರಿನ ನಮ್ಮ ಮಹಾರಾಣಿ ಕಾಲೇಜಿನಲ್ಲಿ ವಿಶೇಷ ಕನ್ನಡ ತರಗತಿಗಳು ನಡೆಯುತ್ತಿರಲಿಲ್ಲ. ಅದಕ್ಕಾಗಿ ಬೇರೆ ಕಾಲೇಜಿಗೆ ಹೋಗುವ ಪರಿಸ್ಥಿತಿ ಇತ್ತು. ಆಗ ವೈಸ್ ಚಾನ್ಸಲರ್ ಆಗಿದ್ದ ಕುವೆಂಪು ಅವರ ಬಳಿ ಹೋಗಿ ನಾನು ನನ್ನ ಗೆಳತಿ ಧೈರ್ಯದಿಂದ ಮನವಿ ಸಲ್ಲಿಸಿದ್ವಿ. ಸರಳತೆಯ ಮೂರ್ತಿಯಂತಿದ್ದ ಕುವೆಂಪು ಅವರು ನಮ್ಮನ್ನು ಕರೆದು ಕೂಡಿಸಿ ಆತ್ಮೀಯವಾಗಿ ಮಾತನಾಡಿಸಿದ್ದರು. ಕನ್ನಡ ಭಾಷೆಯ ಮೇಲೆ ನಮಗಿದ್ದ ಅಭಿಮಾನವನ್ನು ಕಂಡು ಅವರು ನಮ್ಮ ಕಾಲೇಜಿನಲ್ಲೇ ತರಗತಿಗಳು ನಡೆಯುವಂತೆ ಒಪ್ಪಿಗೆ ನೀಡಿದ್ದು ನನ್ನ ಜೀವನದ ಅವಿಸ್ಮರಣೀಯ ಘಟನೆಗಳಲ್ಲಿ ಒಂದಾಗಿದೆ. ನಂತರ ಕುವೆಂಪು ಅವರ ಅನೇಕ ಭಾಷಣಗಳನ್ನು, ಉಪನ್ಯಾಸಗಳನ್ನು ಕೇಳುವ ಸದಾವಕಾಶ ಸಹ ಒದಗಿ ಬಂದಿತ್ತು. ಪದವಿಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಆಳವಾಗಿ ಅಧ್ಯಯನ ಮಾಡುವ ಅವಕಾಶ ದೊರೆತದ್ದು ನನ್ನ ಮುಂದಿನ ಸಾಹಿತ್ಯಿಕ ಜೀವನಕ್ಕೆ ದಾರಿದೀಪವಾಯಿತು. ಕುವೆಂಪು ಅವರ ವರ್ಚಸ್ಸು ನನ್ನ ವ್ಯಕ್ತಿತ್ವದ ಮೇಲೆ ಇಂದಿಗೂ ಗಾಢವಾಗಿ ಪ್ರಭಾವ ಬೀರಿರುವುದು ನಿಜ.
ನೃತ್ಯಕ್ಕಾಗಿ ಸಾಕಷ್ಟು ಸಂಗೀತ ಕೃತಿಗಳನ್ನು ರಚಿಸಿದ್ದೀರಿ ಅಲ್ಲವೇ?
ಹೌದು, ಕಾಲೇಜಿನಲ್ಲಿ ನೃತ್ಯ ಸ್ಪರ್ಧೆಗಳಿಗೆ ಸ್ವಂತ ಸಂಗೀತ ಕೃತಿಗಳನ್ನು ರಚಿಸಿ ಸಂಗೀತ ಸಂಯೋಜಿಸಬೇಕಾಗಿತ್ತು. ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ, ತೆಲುಗು, ತಮಿಳು ಭಾಷೆಗಳಲ್ಲಿ ಸಹ ನೃತ್ಯ ರೂಪಕಗಳನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಸ್ಪರ್ಧೆಗಳಿಗೆ ತಯಾರು ಮಾಡಬೇಕಿತ್ತು. ವೃತ್ತಿ ಜೀವನದಲ್ಲಿ ನನ್ನೊಳಗಿನ ಸೃಜನಶೀಲತೆ ಹೊರಬರಲು ವಿಭಾಗದಲ್ಲಿ ದೊರೆತ ಇಂತಹ ಸಾಕಷ್ಟು ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಅನೇಕ ಸಂಗೀತ ರಚನೆ, ರಾಗ ಸಂಯೋಜನೆ, ನೃತ್ಯರೂಪಕಗಳನ್ನು ರಚಿಸಿದ್ದೇನೆ. ಈ ರಚನೆಗಳನ್ನು ಇಂದಿಗೂ ಭರತನಾಟ್ಯ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ.
ನೀವು ಲೇಖನಗಳನ್ನು ಬರೆಯಲು ಆರಂಭಿಸಿದ ಗಳಿಗೆ ಯಾವುದು?
ತುಂಡು ಕಾಗದ ಸಿಕ್ಕರೂ ಓದುವ ಅಭ್ಯಾಸವಿದ್ದ ನಾನು ಬರವಣಿಗೆಗೆ ಅಷ್ಟಾಗಿ ಗಮನ ಕೊಟ್ಟಿರಲಿಲ್ಲ. ಶಾಲಾದಿನಗಳಲ್ಲಿ ಪ್ರವಾಸ ಲೇಖನ ಮಾತ್ರ ತಪ್ಪದೆ ಬರೆಯುತ್ತಿದ್ದೆ. ಮದುವೆಯ ನಂತರ ಪತಿ ಶ್ರೀನಾಥರು ಬರೆಯುವಂತೆ ಪ್ರೆರೇಪಿಸುತ್ತಿದ್ದರಿಂದ 1962 ರಲ್ಲಿ ಬರೆದ ‘ಗಮಕ ಕಲೆಯಲ್ಲಿ ನವರಸಗಳು’ ಎಂಬ ಮೊತ್ತ ಮೊದಲ ಲೇಖನವನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಕಳುಹಿಸಿದ್ದೆ. ಅದನ್ನು ಅವರು ಪ್ರಕಟ ಸಹ ಮಾಡಿದ್ದರು. ನಂತರ ‘ಪ್ರಜಾಮತ’ ಪತ್ರಿಕೆಗೆ ‘ಕರ್ನಾಟಕ ಸಂಗೀತ ಲಿಪಿ’ ಎಂಬ ಟೈಪ್ರೈಟರ್ ಭಾಷೆಯನ್ನು ಲೇಖನ ಮಾಡಿ ಕೊಟ್ಟಿದ್ದೆ. ಸಂಗೀತಕ್ಕೆ ಬೇಕಾದ ಭಾಷೆಯನ್ನು ಟೈಪ್‍ರೈಟರ್‍ಗೆ ಅಳವಡಿಸುವ ವಿಧಾನವನ್ನು ವಿವರಿಸಿ ಬರೆದ ಲೇಖನ ಸಂಗೀತ ಅಕಾಡಮಿಯವರ ಗಮನ ಸೆಳೆದಿತ್ತು. ಅವರು ತಮ್ಮ ಸಮ್ಮೇಳನವೊಂದರಲ್ಲಿ ಈ ವಿಷಯವನ್ನು ಪ್ರಸ್ತುತ ಪಡಿಸಲು ಸಹ ಕೇಳಿಕೊಂಡಿದ್ದರು. ಆದರೆ ಅನಾರೋಗ್ಯದ ಕಾರಣದಿಂದಾಗಿ ಆ ಅವಕಾಶ ತಪ್ಪಿಹೋಯಿತು. ಹೀಗೆ ಆರಂಭದಲ್ಲಿ ಸಂಗೀತಕ್ಕೆ ಸಂಬಂಧಪಟ್ಟ ಲೇಖನಗಳನ್ನೇ ಹೆಚ್ಚು ಬರೆಯಲು ಆರಂಭಿಸಿದ್ದೆ.
ಈಗ ಬರವಣಿಗೆಯನ್ನೇ ಮುಖ್ಯ ಪ್ರವೃತ್ತಿಯನ್ನಾಗಿ ಮಾಡಿಕೊಂಡಿದ್ದೀರಿ. ಇದು ಹೇಗೆ ಸಾಧ್ಯವಾಯಿತು?
ವೃತ್ತಿಯಲ್ಲಿದ್ದಾಗ ಸಾಕಷ್ಟು ಅಧ್ಯಯನ ಮಾಡುವ ಅವಕಾಶ ದೊರೆತಾಗ ನನ್ನ ಕುತೂಹಲ ಕೆರಳಿಸಿದ ಸಂಗತಿಗಳನ್ನು ಟಿಪ್ಪಣಿ ಮಾಡಿಟ್ಟುಕೊಂಡಿದ್ದೆ. ದೇಶ ವಿದೇಶಗಳಿಗೆ ಪ್ರವಾಸ ಹೋದಾಗ ಅಲ್ಲಿನ ವೈಶಿಷ್ಟ್ಯಗಳನ್ನು ಗುರುತು ಮಾಡಿಕೊಳ್ಳುತ್ತಿದೆ. ನಿವೃತ್ತಿಯ ನಂತರ ಬಿಡುವಿನ ಸಮಯವನ್ನು ಸಂಪೂರ್ಣವಾಗಿ ಅಧ್ಯಯನ, ಬರವಣಿಗೆಗಾಗಿ ಮೀಸಲಿಟ್ಟಿರುವುದರಿಂದ ನಾನಾ ಪುಸ್ತಕಗಳನ್ನು ಹುಡುಕಾಡಿ ನನಗೆ ಬೇಕಾದ ವಿಷಯಗಳನ್ನು ಸಂಗ್ರಹಿಸಿ ಲೇಖನ ಸಿದ್ಧಪಡಿಸುತ್ತೇನೆ. ಇದಕ್ಕೆಲ್ಲಾ ಸಾಕಷ್ಟು ಶ್ರಮ, ಸಮಯ ಬೇಕಾಗುತ್ತದೆ.
ನೀವೇಕೆ ಬರೆಯುತ್ತೀರಿ?
ಸಾಹಿತಿ ಆಗಬೇಕೆಂಬ ಬಯಕೆಯಿಂದ ಎಂದೂ ಬರೆಯಲಿಲ್ಲ. ನಾನು ಓದಿ ಖುಷಿಪಟ್ಟ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಸಲುವಾಗಿಯೇ ಬರೆಯಲು ಆರಂಭಿಸಿದೆ. ಉದಾಹರಣೆಗೆ, ಸ್ತ್ರೀ ಋಷಿಗಳ ಬಗ್ಗೆ ಒಂದೆಡೆ ಮಾಹಿತಿ ಸಿಕ್ಕಾಗ ಅದನ್ನು ಇತರರಿಗೂ ತಿಳಿಸಬೇಕೆನಿಸಿತು. ‘ಋಷಿಕಾ’ ಎಂಬ ಲೇಖನದಲ್ಲಿ ಸ್ತ್ರೀ ಋಷಿಗಳನ್ನು ಕುರಿತು ಅಪರೂಪದ ಮಾಹಿತಿಗಳಿವೆ. ಹಾಗೆಯೇ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿದ್ದಾಗ ಅಲ್ಲಿನ ವಿಶೇಷತೆಗಳನ್ನು ಪ್ರವಾಸಕಥನದ ರೂಪದಲ್ಲಿ ದಾಖಲಿಸುವ ಪ್ರಯತ್ನ ಮಾಡುತ್ತೇನೆ. ಓದುಗರು ಇಂತಹ ಮಾಹಿತಿಪೂರ್ಣ ಲೇಖನಗಳನ್ನು ಓದಿ ಹೊಸ ವಿಷಯಗಳನ್ನು ತಿಳಿದುಕೊಂಡು ಖುಷಿಪಟ್ಟರೆ ನಾನು ಬರೆದದ್ದು ಸಾರ್ಥಕವೆನಿಸುತ್ತದೆ. ಅದರಿಂದ ನನ್ನ ಮನಸ್ಸಿಗೆ ಸಂತೋಷ ಸಿಗುತ್ತದೆ.
ನಿಮ್ಮ ಚೊಚ್ಚಲ ಕೃತಿ ‘ಅಮರ ರಾಮಾಯಣ’ ಮೂಡಿ ಬಂದ ಬಗೆ ಹೇಗೆ?
ನಿವೃತ್ತಿಯ ನಂತರ ಬರೆದ ಅನೇಕ ಲೇಖನಗಳು ಆಗಾಗ ಪತ್ರಿಕೆಗಳಲ್ಲಿ ಬಿಡಿ ಲೇಖನಗಳಾಗಿ ಪ್ರಕಟಗೊಳ್ಳುತ್ತಿದ್ದವು. ಒಮ್ಮೆ ಪ್ರಾದೇಶಿಕ ರಾಮಾಯಣಗಳ ಬಗ್ಗೆ ವಿಮರ್ಶಾ ಲೇಖನ ಸಿದ್ಧ ಪಡಿಸುವ ಪ್ರಯತ್ನದಲ್ಲಿದ್ದಾಗ ಮುಂಬಯಿ ಕರ್ನಾಟಕ ಸಂಘದ ಮಿತ್ರರಾದ ಡಾ. ಭರತ್ ಕುಮಾರ್ ಅವರು ಸ್ವದೇಶದ ಜೊತೆಗೆ ವಿದೇಶಗಳಲ್ಲಿರುವ ರಾಮಾಯಣಗಳ ವಿಚಾರವನ್ನು ಸಹ ಬರೆಯುವಂತೆ ಸಲಹೆ ನೀಡಿದರು. ಪ್ರವಾಸದ ಸಮಯದಲ್ಲಿ ತಿಳಿದುಕೊಂಡ ಮಾಹಿತಿಗಳ ಜೊತೆಗೆ ಹಲವಾರು ಪುಸ್ತಕಗಳ ಆಧಾರ ಮೇಲೆ ವೈವಿಧ್ಯಮಯ ರಾಮಾಯಣ ಕಥನಗಳನ್ನು ದಾಖಲಿಸುವ ಪ್ರಯತ್ನ ಮಾಡಿದೆ. ಅನ್ಯ ದೇಶಗಳ ರಾಮಾಯಣಗಳ ಜೊತೆಗೆ ನನ್ನ ನೆಚ್ಚಿನ ಕುವೆಂಪುರವರ ‘ರಾಮಾಯಣ ದರ್ಶನಂ’ ಹಾಗೂ ಎಂ. ವೀರಪ್ಪ ಮೊಯಲಿಯವರ ‘ಶ್ರೀ ರಾಮಾಯಣ ಅನ್ವೇಷಣಂ’ ಕೃತಿಗಳ ಕುರಿತು ಸಹ ವಿಶ್ಲೇಷಿಸಿದೆ. ಎಲ್ಲವೂ ಒಟ್ಟಾಗಿ ಸಂಗ್ರಹಗೊಂಡು ‘ಅಮರ ರಾಮಾಯಣ’ ಮೂಲಕ ಓದುಗರ ಮುಂದೆ ಪ್ರಸ್ತುತವಾಗಿರುವುದು ನನಗೆ ಅತ್ಯಂತ ಸಂತೋಷ ತಂದುಕೊಟ್ಟಿದೆ.
ರಾಮಾಯಣ ಕುರಿತ ನನ್ನ ಲೇಖನಗಳು ಪುಸ್ತಕ ರೂಪದಲ್ಲಿ ಹೊರಬರುವಂತೆ ಶ್ರಮವಹಿಸಿದವರು ನನ್ನ ಆತ್ಮೀಯ ಸ್ನೇಹಿತರಾದ ಓಂದಾಸ್ ಕಣ್ಣಂಗಾರ್, ಡಾ.ಭರತ್ ಕುಮಾರ್, ಡಾ.ಈಶ್ವರ ಅಲೆವೂರು ಹಾಗೂ ಶ್ರೀನಿವಾಸ ಜೋಕಟ್ಟೆಯವರು. ಇವರೆಲ್ಲರ ನಿರಂತರ ಸಹಕಾರ, ಪ್ರೋತ್ಸಾಹಕ್ಕೆ ನಾನು ಬಹಳ ಆಭಾರಿಯಾಗಿದ್ದೇನೆ. ಜೊತೆಗೆ ತಮ್ಮ ಅಭಿಜಿತ್ ಪ್ರಕಾಶನದ ಮೂಲಕ ಸುಂದರವಾಗಿ ಈ ಕೃತಿಯನ್ನು ಪ್ರಕಟಿಸಿದ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಎನ್.ಉಪಾಧ್ಯ ಅವರಿಗೂ ನಾನು ಈ ಮೂಲಕ ಕೃತಜ್ಞತೆಗಳನ್ನು ತಿಳಿಸಲು ಬಯಸುತ್ತೇನೆ.
ನೀವು ರಾಮಾಯಣವನ್ನೇ ಏಕೆ ಆರಿಸಿಕೊಂಡಿರಿ?
ಇದಕ್ಕೆ ಒಂದು ಹಿನ್ನಲೆ ಇದೆ. ಚಿಕ್ಕವರಿದ್ದಾಗ ಮನೆಯಲ್ಲಿ ನಮ್ಮ ದೊಡ್ಡಪ್ಪನವರು ಪ್ರತಿನಿತ್ಯ ‘ವಾಲ್ಮೀಕಿ ರಾಮಾಯಣ’ ಪಾರಾಯಣ ಮಾಡುತ್ತಿದ್ದರು. ಸಂಸ್ಕೃತದಲ್ಲಿದ್ದ ಶ್ಲೋಕಗಳನ್ನು ಓದಿ ನಂತರ ಕನ್ನಡದಲ್ಲಿ ವ್ಯಾಖ್ಯಾನಿಸುತ್ತಿದ್ದರು. ದಿನವೊಂದಕ್ಕೆ ಒಂದೆರಡು ಶ್ಲೋಕಗಳಂತೆ ವರ್ಷವಿಡೀ ಪಾರಾಯಣ ಮಾಡಿ ವಿಜಯದಶಮಿಗೆ ಸರಿಯಾಗಿ ರಾಮನ ಪಟ್ಟಾಭಿಷೇಕ ಬರುವಂತೆ ಪಠಣ ಮಾಡುತ್ತಿದ್ದರು. ದಸರೆಯ ದಿನದಂದು ನಮ್ಮ ಮನೆಯಲ್ಲಿ ರಾಮ ಪಟ್ಟಾಭಿಷೇಕದ ಸಂಭ್ರಮವಿರುತ್ತಿತ್ತು. ವಿಶೇಷ ಪೂಜೆ, ಹಬ್ಬದ ಅಡುಗೆ ಮಾಡಿ ಸಂಭ್ರಮಿಸುತ್ತಿದ್ದೆವು. ಹೀಗೆ ರಾಮಾಯಣ ನಮ್ಮ ಬಾಲ್ಯದ ಅವಿಭಾಜ್ಯ ಅಂಗವಾಗಿತ್ತು. ಅದರಲ್ಲೂ ಹನುಮಂತ ನಮ್ಮೆಲ್ಲರ ಇಷ್ಟವಾದ ಪಾತ್ರವಾಗಿದ್ದ. ನಂತರ ಕಾಲೇಜು ದಿನಗಳಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಭಾಗವಾಗಿ ಓದಿದ ಪಂಪ ರಾಮಾಯಣ, ಜೈನರಾಮಾಯಣಗಳು ನನ್ನ ಗಮನ ಸೆಳೆದಿದ್ದವು. ಕುವೆಂಪು ಅವರ ‘ರಾಮಾಯಣ ದರ್ಶನಂ’ ನನ್ನನ್ನು ಹೆಚ್ಚು ಆಕರ್ಷಿಸಿದ ಕೃತಿ. ಈ ಎಲ್ಲ ಕಾರಣಗಳಿಂದಾಗಿ ನಾನು ರಾಮಾಯಣವನ್ನು ವಿಶೇಷವಾಗಿ ಆರಿಸಿಕೊಂಡೆ.
ವಿದೇಶಗಳಲ್ಲಿರುವ ರಾಮಾಯಣ ಭಾರತದ ರಾಮಾಯಣಕ್ಕಿಂತ ಹೇಗೆ ಭಿನ್ನವಾಗಿದೆ?
ಎಲ್ಲ ರಾಮಾಯಣಗಳ ಮೂಲ ಒಂದೇ ಆದರೂ ವಿದೇಶಿ ರಾಮಾಯಣಗಳಲ್ಲಿ ಕಥೆ, ಪಾತ್ರ ನಿರ್ವಹಣೆಯಲ್ಲಿ ಭಿನ್ನತೆಯನ್ನು ಗುರುತಿಸಬಹುದು. ಆಂಗ್ಲ ಅನುವಾದ ಪುಸ್ತಕಗಳ ಮೂಲಕ ಹೊರದೇಶಗಳಲ್ಲಿ ಪ್ರಚಲಿತವಿರುವ ರಾಮಾಯಣ ಕುರಿತು ಮಾಹಿತಿ ದೊರೆತಿತ್ತು. ನಂತರ ವಿದೇಶಗಳಿಗೆ ಪ್ರವಾಸ ಹೋದಾಗ ಅಲ್ಲಿನ ರಾಮಾಯಣಗಳ ವೈಶಿಷ್ಟ್ಯತೆಗಳನ್ನು ಕಂಡು ಅಚ್ಚರಿಗೊಡಿದ್ದೆ. ಅಲ್ಲಿ ಲಭ್ಯವಿದ್ದ ಮಾಹಿತಿಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಲು ಆರಂಭಿಸಿದಾಗ ಅನೇಕ ಕೌತುಕಮಯ ಸಂಗತಿಗಳು ಅನಾವರಣಗೊಳ್ಳುತ್ತ ಹೋದವು. ರಾಮಾಯಣ, ಮಹಾಭಾರತ ಮೂಲತಃ ಭಾರತದಿಂದಲೇ ಹೊರದೇಶಗಳಿಗೆ ಹೋಗಿವೆ. ಸುಮಾರು ಎಂಟು, ಒಂಬತ್ತನೆಯ ಶತಮಾನಗಳಲ್ಲಿ ಕಾಂಬೋಡಿಯಾ, ಬರ್ಮಾ, ದೇಶಗಳ ಮೂಲಕ ಇಂಡೋನೇಷಿಯಾ ದೇಶಕ್ಕೆ ಹಿಂದೂ ಧರ್ಮ ಹೋಯಿತು. ನಾನು ಆ ದೇಶಗಳಿಗೆ ಮಗಳೊಂದಿಗೆ ಪ್ರವಾಸ ಹೋದಾಗ ನೋಡಿದ ನೃತ್ಯ ರೂಪಕಗಳ ಮೂಲಕ ಅಲ್ಲಿನ ರಾಮಾಯಣವನ್ನು ಹತ್ತಿರದಿಂದ ತಿಳಿಯುವ ಅವಕಾಶ ದೊರೆಯಿತು. ಅಲ್ಲಿನವರಲ್ಲಿ ರಾಮ ಯಾರನ್ನೇ ಕೊಂದರೂ ಅವರು ಮೋಕ್ಷಕ್ಕೆ ಹೋಗುತ್ತಾರೆ ಎಂಬ ನಂಬಿಕೆಯಿದೆ. ಅಲ್ಲಿ ಹನುಮಂತ ರಾಮನಿಗಿಂತ ಹೆಚ್ಚು ಜನಪ್ರಿಯನಾಗಿದ್ದಾನೆ. ವಿದೇಶಿಯರು ರಾಮಾಯಣವನ್ನು ಧಾರ್ಮಿಕ ಗ್ರಂಥವೆಂದಾಗಲಿ, ರಾಮ, ಸೀತೆ, ಹನುಮಂತರನ್ನು ದೈವೀ ಪುರುಷರೆಂದಾಗಲಿ ಪರಿಗಣಿಸುವುದಿಲ್ಲ. ಆದರೆ ರಾಮಾಯಣವನ್ನು ತಮ್ಮ ಸಾಂಸ್ಕೃತಿಕ ಪರಂಪರೆಯಾಗಿ ಕಾಪಾಡಿಕೊಂಡು ರಾಮನನ್ನು ಅದ್ಭುತ ನಾಯಕನಾಗಿ, ರಾಮಾಯಣವನ್ನು ಶ್ರೇಷ್ಠ ಕೃತಿಯಾಗಿ ಗೌರವಿಸುತ್ತಿದ್ದಾರೆ
ಹೊರದೇಶಗಳಲ್ಲಿರುವ ರಾಮಾಯಣಗಳ ವೈಶಿಷ್ಟ್ಯವೇನು?
ಪ್ರತಿ ದೇಶದ ರಾಮಾಯಣವು ಆಯಾ, ದೇಶದ ಆಚಾರ, ವಿಚಾರ, ಸಂಸ್ಕೃತಿಗೆ ತಕ್ಕ ಹಾಗೆ ಬದಲಾವಣೆಗೊಂಡಿವೆ. ರಾಮಾಯಣದ ಪಾತ್ರಗಳೂ ಕೂಡ ವಿಭಿನ್ನ ಆಯಾಮಗಳನ್ನು ಪಡೆದಿರುವುದು ಅಚ್ಚರಿ ಮೂಡಿಸುತ್ತದೆ. ಕಾಂಬೋಡಿಯಾದಲ್ಲಿ ಹನುಮಂತ ಮತ್ತು ಅಪ್ಸರೆಯ ನಡುವಿನ ಪ್ರಣಯ ಕಥೆ ಬಹಳ ಜನಪ್ರಿಯತೆ ಪಡೆದಿದೆ. ಮತ್ತೊಂದು ದೇಶದಲ್ಲಿ ರಾವಣ ಕೆಟ್ಟವನಲ್ಲ. ಆತ ಸೀತೆಯನ್ನು ಒಮ್ಮೆಯೂ ಮುಟ್ಟುವುದಿಲ್ಲ. ಸೀತಾಪಹರಣದ ಸಮಯದಲ್ಲಿ ಕೂಡ ಸೀತೆ ನಿಂತ ನೆಲದ ಸಮೇತ ಅವಳನ್ನು ಹೊತ್ತೊಯ್ದ ಕಥೆ ಇದೆ. ಇನ್ನೊಂದು ದೇಶದ ರಾಮಾಯಣದಲ್ಲಿ ರಾವಣ ತನ್ನ ಶಲ್ಯದ ಒಂದು ತುದಿಯನ್ನು ಸೀತೆಯ ಕೈಗೆ ಕಟ್ಟಿ ಎಳೆದೊಯ್ದ ಸನ್ನಿವೇಶ ಬರುತ್ತದೆ. ಮುಸ್ಲಿಂ ರಾಷ್ಟವಾದ ಇಂಡೋನೇಷಿಯಾದ ರಾಮಾಯಣದ ಸೊಗಸೇ ಬೇರೆ. ಇಡೀ ರಾಷ್ಟ್ರ ಮುಸ್ಲಿಂ ಆದರೂ ಬಾಲಿಯಲ್ಲಿ ಮಾತ್ರ ಸಂಪೂರ್ಣ ಹಿಂದೂ ಸಮುದಾಯವಿದೆ. ಇಲ್ಲಿ ರಾಮಾಯಣವನ್ನು ನೃತ್ಯರೂಪಕ, ನಾಟಕಗಳ ಮೂಲಕ ಪ್ರತಿವಾರ ಪ್ರದರ್ಶನ ಮಾಡುತ್ತಾರೆ. ರಾಮನನ್ನು ದೇವರ ಸ್ವರೂಪವೆಂದು ಪರಿಗಣಿಸುವ ಇವರು ಹನುಮಂತನನ್ನು ತುಂಬಾ ನಂಬುತ್ತಾರೆ. ಹಾಗೇ ಇಂಡೋನೇಷಿಯಾದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರ ದೇವಾಲಯವಿದೆ. ರಾಮಾಯಣ, ಭಾಗವತ ಪುರಾಣ, ಮಹಾಭಾರತ ಚಿತ್ರಗಳು ಈ ದೇವಾಲಯದ ಮೇಲೆ ನೋಡಲು ಸಿಗುತ್ತದೆ. ಹೊರದೇಶಗಳಲ್ಲಿ ಇಂದಿಗೂ ರಾಮಾಯಣ ಪ್ರಸ್ತುತವಿರುವುದು ಕಂಡು ಸೋಜಿಗವಾಗುತ್ತದೆ.
ಮತ, ಧರ್ಮ, ಪ್ರಾಂತ್ಯ ಯಾವುದೇ ಇರಲಿ, ರಾಮಾಯಣಕ್ಕೆ ಹೊರದೇಶಗಳಲ್ಲಿಯೂ ಸಮಾನವಾದ ಗೌರವ ಸಿಕ್ಕಿದೆ. ಅಲ್ಲವೇ?
ಖಂಡಿತಾ, ಬೌದ್ಧ, ಮುಸಲ್ಮಾನ ಧರ್ಮ ಪ್ರಾಬಲ್ಯವಿರುವ ರಾಷ್ಟ್ರಗಳಾದ ಥೈಲ್ಯಾಂಡ್, ಮಲೇಶಿಯಾ ಇಂಡೋನೇಶಿಯಾದಲ್ಲಿ ರಾಮಾಯಣವನ್ನು ಸಾಂಸ್ಕೃತಿಕ ಪರಂಪರೆಯಾಗಿ ಕಾಪಾಡಿಕೊಂಡು ಬಂದಿದ್ದಾರೆ. ಮಲೇಶಿಯಾದಲ್ಲಿ ರಾಮಾಯಣ ಮಲಯ್ ಭಾಷೆಯಲ್ಲಿದ್ದು ಅಲ್ಲಿನ ಪಪೆಟ್ ಥಿಯೆಟರ್‍ನಲ್ಲಿ ಅದನ್ನು ಅಳವಡಿಸಿಕೊಂಡಿದ್ದಾರೆ. ಇಂಡೋನೇಶಿಯಾದ ದೇವಾಲಯಗಳಲ್ಲಿರುವ ಅದ್ಭುತ ಚಿತ್ರಗಳನ್ನು ಮುಸ್ಲಿಂ ಗೈಡ್ ಅಚ್ಚುಕಟ್ಟಾಗಿ ವಿವರಿಸುತ್ತಾನೆ. ಬಾಲಿಯಲ್ಲಿ ಘಟೋತ್ಕಜನ ಆಳೆತ್ತರದ ಪ್ರತಿಮೆಯನ್ನು ಕಾಣಬಹುದು. ಇನ್ನೂ ವಿಶೇಷವೆಂದರೆ ಬಾಲಿ ಭಾಷೆಯಲ್ಲಿ ಆಧುನಿಕ ರಾಮಾಯಣವನ್ನು ದೂರದರ್ಶನದಲ್ಲಿ ಧಾರವಾಹಿಯಾಗಿ ಪ್ರಸಾರ ಮಾಡುತ್ತಿದ್ದಾರೆ. ಇದೆಲ್ಲಾ ನೋಡಿದಾಗ ರಾಮಾಯಣವನ್ನು ಹೊರದೇಶಗಳು ಎಷ್ಟು ಗೌರವದಿಂದ ಕಾಣುತಿದ್ದಾರೆ ಎಂಬುದು ತಿಳಿಯುತ್ತದೆ.
ಎಂಬತ್ತೊಂದರ ಹರೆಯದಲ್ಲೂ ಹಸನ್ಮುಖಿಯಾಗಿ, ಲವಲವಿಕೆಯಿಂದ ಅರೋಗ್ಯದಿಂದ ಅಧ್ಯಯನ, ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಿರಿ. ನಿಮ್ಮ ಆರೋಗ್ಯದ ಗುಟ್ಟು?
ಇದರಲ್ಲಿ ಗುಟ್ಟೆಂಬುದು ಏನೂ ಇಲ್ಲ. ಈಗ ಸುಮಾರು ಹನ್ನೆರಡು ವರ್ಷಗಳಿಂದ ನನ್ನ ಮಗಳು ಡಾ.ಸಿರಿರಾಮ, ಅಳಿಯ ಡಾ.ರಾಮಸ್ವಾಮಿ ಹಾಗೂ ಮೊಮ್ಮಗಳು ಅಮರ ಅವರೊಟ್ಟಿಗೆ ಸಿಂಗಾಪುರದಲ್ಲಿ ನೆಲೆಸಿದ್ದೇನೆ. ಅಲ್ಲಿ ನನಗಾಗಿ ಓದಲು ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಮನೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಆಂಗ್ಲ ಪುಸ್ತಕಗಳ ಸಂಗ್ರಹವಿರುವ ಗ್ರಂಥಾಲಯವಿದೆ. ಇದು ಬಿಡುವಿನ ಸಮಯವನ್ನು ಓದು ಅಧ್ಯಯನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ಆರೋಗ್ಯವನ್ನು ನೋಡಿಕೊಳ್ಳಲು ಮುಂಬಯಿಯಲ್ಲಿ ಪರಿಣಿತ ಡಾಕ್ಟರಗಳ ಒಡನಾಟವಿದೆ. ಸಿಂಗಾಪುರದಲ್ಲಿ ಮೊಮ್ಮಗಳು ಅಮರ ತನ್ನ ಸಂಗೀತ, ನೃತ್ಯ ಚಟುವಟಿಕೆಗಳಿಂದಾಗಿ ನನ್ನನ್ನು ಸದಾ ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳುತ್ತಾಳೆ. ಸಮಯ ಸಿಕ್ಕಾಗ ಮಗಳೊಂದಿಗೆ ವಿದೇಶ ಪ್ರವಾಸ ಮಾಡುತ್ತೇನೆ. ಒಂದಿಲ್ಲೊಂದು ಕ್ರಿಯಾತ್ಮಕ ಕೆಲಸದಲ್ಲಿ ತೊಡಗಿಸಿಕೊಂಡಿರುವುದರಿಂದ ಆರೋಗ್ಯದಿಂದ ಇದ್ದೇನೆ ಎನ್ನಬಹುದು. ಇದೆಲ್ಲದರ ಜೊತೆಗೆ ವರ್ಷಕ್ಕೆ ಎರಡು ಬಾರಿ ಮುಂಬಯಿಗೆ ಬಂದಾಗ ಆತ್ಮೀಯರ ಒಡನಾಟ, ಕನ್ನಡ ಸಂಘ ಸಂಸ್ಥೆಗಳ ಸ್ನೇಹಿತರೊಟ್ಟಿಗೆ ಮಾತುಕತೆ ನನ್ನಲ್ಲಿ ಹೊಸ ಚೈತನ್ಯ ನೀಡುತ್ತವೆ. ಮಗಳು, ಅಳಿಯ, ಮೊಮ್ಮಗಳ ಪ್ರೀತಿ, ಕಾಳಜಿ. ಬಂಧುಬಾಂಧವರು, ಸ್ನೇಹಿತರ ಅಕ್ಕರೆ, ವಿಶ್ವಾಸಗಳೇ ನನ್ನ ಆರೋಗ್ಯದ ಹಿಂದಿರುವ ನಿಜವಾದ ಶಕ್ತಿ ಎನ್ನುವುದು ನನ್ನ ನಂಬಿಕೆ.
ನಿಮ್ಮ ಜೀವನದಲ್ಲಿ ನಡೆದ ಮರೆಯಲಾರದ ಘಟನೆಗಳು?
ಜೀವನದ ಹಲವು ಘಟ್ಟಗಳಲ್ಲಿ ಅನೇಕ ಆಕಸ್ಮಿಕ ಘಟನೆಗಳು ನಡೆದಿವೆ. ಅವುಗಳಲ್ಲಿ ಕೆಲವು ನೆನಪಿನಲ್ಲಿ ಅಚ್ಚಿಳಿಯದೆ ಉಳಿದುಬಿಟ್ಟಿವೆ. ಸ್ವಾತಂತ್ರ ಪೂರ್ವದ ದಿನಗಳಲ್ಲಿ ನಡೆದ ಒಂದು ಘಟನೆ ಹಾಸ್ಯ ಪ್ರಸಂಗವಾಗಿದೆ. ಬಾಲ್ಯದ ದಿನಗಳಲ್ಲಿ ಸತ್ಯಾಗ್ರಹ, ಚಳುವಳಿಗಳು, ಜೈಲು ಬರೋ ಮುಂತಾದ ಸ್ವಾತಂತ್ರ್ಯ ಸಂಗ್ರಾಮದ ಚಟುವಟಿಕೆಗಳನ್ನು ಪ್ರತಿನಿತ್ಯ ಕಾಣುತ್ತಿದ್ದೆವು. ಅವು ಚಿಕ್ಕ ಮಕ್ಕಳಾಗಿದ್ದ ನಮ್ಮಲ್ಲಿ ಕುತೂಹಲ ಕೆರಳಿಸಿ ಒಮ್ಮೆಯಾದರೂ ಜೈಲಿಗೆ ಹೋಗಿಬರಬೇಕೆಂಬ ವಿಚಿತ್ರ ಬಯಕೆ ಹುಟ್ಟುಹಾಕಿತ್ತು. ಸ್ವಾತಂತ್ರ್ಯ ಚಳುವಳಿಕಾರರಂತೆ ನಾವೂ ಬಾವುಟ ಹಿಡಿದು ಜೈಕಾರ ಕೂಗುತ್ತ ಹೋದರೆ ಪೆÇೀಲಿಸರು ಖಂಡಿತು ನಮ್ಮನ್ನು ಹಿಡಿದು ಜೈಲಿಗೆ ಹಾಕುತ್ತಾರೆ ಎಂಬುದು ನಮ್ಮ ಲೆಕ್ಕಾಚಾರವಾಗಿತ್ತು. ಹಾಗಾಗಿ ಮನೆಯಲ್ಲಿದ್ದ ಒಳ್ಳೆಯ ಬಿಳಿ ಪಂಚೆಯನ್ನು ಹರಿದು ಒಂದು ಉದ್ದನೆ ಕಡ್ಡಿಗೆ ಸಿಕ್ಕಿಸಿ ಬಾವುಟದಂತೆ ಮಾಡಿಕೊಂಡು ಇಬ್ಬರೂ ಮನೆಯ ಹತ್ತಿರವೇ ಇದ್ದ ಪೆÇೀಲಿಸ್ ಸ್ಟೇಷನ್ ಮುಂದೆ ಜೈಕಾರ ಕೂಗುತ್ತಾ ಹೋದೆವು. ನಮ್ಮ ಅವತಾರವನ್ನು ನೋಡಿದ ಪೆÇೀಲಿಸ್ ಅಧಿಕಾರಿಯೊಬ್ಬರು ಒಳಗೆ ಕರೆದಾಗ, ನಾವು ಜೈಲು ಸೇರುವುದು ಗ್ಯಾರೆಂಟಿಯೆಂದುಕೊಂಡು ಖುಷಿಯಿಂದ ಒಳಗೆ ಹೋದೆವು. ಆದರೆ ಆ ಅಧಿಕಾರಿ, ‘ನೀವು ಪಂಡಿತರ ಮನೆಯ ಮಕ್ಕಳಲ್ಲವೇ’ ಎಂದು ಕೇಳಿ ಹೀಗೆಲ್ಲಾ ಮಕ್ಕಳು ರಸ್ತೆಯಲ್ಲಿ ಓಡಾಡಬಾರದು ಎನ್ನುತ್ತಾ ಕೈಯಲ್ಲಿ ಸಿಹಿತಿಂಡಿ ಕೊಟ್ಟು ಕಳುಹಿಸಿ ಜೈಲು ಸೇರುವ ನಮ್ಮ ಆಸೆಗೆ ತಣ್ಣೀರೆರಚಿದರು. ಅಂದು ನಮ್ಮಲ್ಲಿದ್ದ ಮುಗ್ಧತೆ, ಭಂಡ ಧೈರ್ಯ ನೆನೆದಾಗ ಈಗಲೂ ನಗು ಬರುತ್ತದೆ.
1967ರಲ್ಲಿ ಆದ ಕೊಯ್ನಾ ಭೂಕಂಪದ ಸಮಯದಲ್ಲಿ ನಾವು ಪುಣೆಯಲ್ಲಿ ವಾಸಿಸುತ್ತಿದ್ದೆವು. ಕೊಯ್ನಾ ಜಲಾಶಯ ಪ್ರದೇಶದಲ್ಲಿ ನಡೆದ ಭೂಕಂಪನದ ಕಂಪನವು ಪುಣೆಯವರೆಗೂ ತಲುಪಿತ್ತು. ನಾವಿದ್ದ ಬಹುಮಹಡಿ ಕಟ್ಟಡ ಸಹ ಕಂಪಿಸುತ್ತಿದ್ದರಿಂದ ಅಲ್ಲಿದ್ದ ಜನರು ಕೆಳಗೆ ಧಾವಿಸುತ್ತಿದ್ದರು. ಕೆಲವು ನೆರೆಹೊರೆಯವರು ನಮ್ಮನ್ನು ಎಚ್ಚರಿಸಿ ಹೊರಗೆ ಬರುವಂತೆ ಒತ್ತಾಯಿಸಿದರು. ಅದೇ ಸಮಯದಲ್ಲಿ ನಮ್ಮ ಮನೆಯ ಮುಂದಿನ ಬಾಗಿಲು ತೆಗೆಯಲು ಬಾರದಂತೆ ಸಿಕ್ಕಿಹಾಕಿಕೊಂಡಿತ್ತು. ಆಗ ಯಜಮಾನರು ಇದ್ದಬದ್ದ ಶಕ್ತಿ ಉಪಯೋಗಿಸಿ ತಕ್ಷಣ ಬಾಗಿಲು ತೆರೆದಿದ್ದರಿಂದ ಕೆಳಗೆ ಓಡಿ ಹೋಗಲು ಸಾಧ್ಯವಾಯಿತು. ಕೆಳಗೆ ನಿಂತು ನಾವು ವಾಸಿಸುತ್ತಿದ್ದ ಕಟ್ಟಡದತ್ತ ನೋಡಿದರೆ ಅದು ಎಡಕ್ಕೂ ಬಲಕ್ಕೂ ಕೆಲವು ಕ್ಷಣ ಓಲಾಡಿ ನಂತರ ಸ್ಥಿರವಾಗಿ ನಿಂತಿತು. ದೇವರ ದಯೆಯಿಂದ ಅಂದು ಯಾವುದೇ ರೀತಿಯ ಜೀವಹಾನಿಯಾಗದಿದ್ದರೂ ಓಲಾಡುವ ಕಟ್ಟಡ ಮಾತ್ರ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.
ಮತ್ತೊಂದು ಬಾರಿ 1988ರಲ್ಲಿ ಜೈಪುರ ನಗರದಲ್ಲಿ ನಡೆಯುತ್ತಿದ್ದ ಸಮ್ಮೇಳನವೊಂದಕ್ಕೆ ರೈಲಿನಲ್ಲಿ ಹೋಗುತ್ತಿದ್ದೆ. ದಾರಿ ಮಧ್ಯೆಯಲ್ಲಿ ನಾನಿದ್ದ ಬೋಗಿಯ ಪಕ್ಕದ ಬೋಗಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಆಗ ಸುಮಾರು 20 ಅಡಿ ಎತ್ತರದ ದಿಬ್ಬದ ಮೇಲೆ ನಿಂತ ರೈಲಿನಿಂದ ಪುರುಷರು ನನ್ನನ್ನು ಹಾಗೂ ಸಹ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿ ಪ್ರಾಣಾಪಾಯದಿಂದ ಪಾರುಮಾಡಿದ್ದರು. ವಿದೇಶ ಪ್ರವಾಸದ ಸಮಯದಲ್ಲೂ ಮರೆಯಲಾರದ ಘಟನೆಗಳು ಸಾಕಷ್ಟು ನಡೆದಿವೆ. ಒಮ್ಮೆ ಬಾಲಿ ದೇಶದಲ್ಲಿ ಮಂಗನ ಆಕ್ರಮಣದಿಂದಾಗಿ ಸುಮಾರು ಆರು ಅಡಿ ದೂರ ತಳ್ಳಲ್ಪಟ್ಟು ತಲೆ ಒಡೆದು ಮೈಯೆಲ್ಲಾ ರಕ್ತಸಿಕ್ತವಾಗಿತ್ತು. ಆಸ್ಪತ್ರೆಯಲ್ಲಿ ಮೂರು ದಿನವಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು. ಇಂತಹ ಅನೇಕ ಸಿಹಿಕಹಿ ಘಟನೆಗಳು ಜೀವನದುದ್ದಕ್ಕೂ ಘಟಿಸುತ್ತಲ್ಲೇ ಇರುತ್ತವೆ. ಇವುಗಳನ್ನು ಒಂದು ಅನುಭವವಾಗಿ ತೆಗೆದುಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು.
ಸುಮಾರು ಎರಡು ಗಂಟೆಗಳ ಕಾಲ ನಡೆದ ಸಂದರ್ಶನದಲ್ಲಿ ತಾವು ನಡೆದು ಬಂದ ದಾರಿಯನ್ನು ಮೆಲುಕು ಹಾಕಿದ ಲೇಖಕಿಯ ಮುಖದಲ್ಲಿ ಆಯಾಸದ ಬದಲಿಗೆ ಮತ್ತಷ್ಟು ಉತ್ಸಾಹವಿತ್ತು. ಜೀವನದ ಪ್ರತಿಕ್ಷಣವನ್ನು ಸದುಪಯೋಗಿಸಿಕೊಂಡು ವೃತ್ತಿ, ಹವ್ಯಾಸಗಳನ್ನು ಆನಂದಿಸುತ್ತಾ 85 ವಸಂತಗಳ ಸಾರ್ಥಕ ಬದುಕನ್ನು ಕಂಡ ಸರೋಜಾ ಶ್ರೀನಾಥ್ ಅವರಲ್ಲಿ ಮತ್ತಷ್ಟು ತಿಳಿದುಕೊಳ್ಳುವ ಕುತೂಹಲ, ಆರೋಗ್ಯ ಸಹಾಯ ಮಾಡಿದರೆ ಮತ್ತಷ್ಟು ಬರೆಯುವ ಹುಮ್ಮಸ್ಸು, ಇತರರೊಂದಿಗೆ ಹಂಚಿಕೊಳ್ಳುವ ತವಕ ಎಂತಹವರನ್ನೂ ದಂಗುಬಡಿಸುತ್ತದೆ. ಸರೋಜಾ ಶ್ರೀನಾಥ್ ಅವರೊಂದಿಗಿನ ಈ ಮಾತುಕತೆ, ಅವರ ಜೀವನ ಪ್ರೀತಿ, ಯುವಬರಹಗಾರರಿಗೆ, ಓದುಗರಿಗೆ ಪ್ರೇರಣೆಯಾದರೆ ಈ ಸಂದರ್ಶನಕ್ಕೊಂದು ಸಾರ್ಥಕತೆ ಬಂದಂತೆ.
ಹೆಚ್ಚಿನ ಬರಹಗಳಿಗಾಗಿ
“ಖ್ಯಾತ ಕತೆಗಾರರೊಬ್ಬರು ಕರೆ ಮಾಡಿ ನೀವು ಯಾವ ಪಂಥದವರು ಅಂತ ಕೇಳಿದ್ದರು..”
ಎಲ್ಲರ ಕನ್ನಡಕ್ಕಾಗಿ ಹೊಸ ಬರಹ
ತಿರುಮಲೇಶರೊಂದಿಗೆ ಒಂದು ಆಪ್ತ ಸಂವಾದ