ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎಲ್ಲರ ಕನ್ನಡಕ್ಕಾಗಿ ಹೊಸ ಬರಹ

ಮಾಲತಿ ಭಟ್
ಇತ್ತೀಚಿನ ಬರಹಗಳು: ಮಾಲತಿ ಭಟ್ (ಎಲ್ಲವನ್ನು ಓದಿ)

ಇತ್ತೀಚಿಗೆ ‘ಎಲ್ಲರ ಕನ್ನಡ’ ಬಗ್ಗೆ ದಿನಪತ್ರಿಕೆ ಹಾಗೂ ಸೋಶಿಯಲ್ ಮಿಡಿಯಾಗಳಲ್ಲಿ ಅನೇಕ ಚರ್ಚೆಗಳು ಕೇಳಿ ಬರುತ್ತಿವೆ. ಅದರಲ್ಲಿ ನನ್ನ ತಂದೆಯಾದ ಡಾ.ಡಿ.ಎನ್. ಶಂಕರ ಬಟ್ ಅವರ ಬಗ್ಗೆ ಹಾಗೂ ಈ ‘ಎಲ್ಲರ ಕನ್ನಡ’ ಎಂಬ ಬಗ್ಗೆ ಅನೇಕ ಟಿಪ್ಪಣಿಗಳು ಕೇಳಿಬಂದವು. ನನಗೆ ‘ಎಲ್ಲರ ಕನ್ನಡ’ ಎಂದರೆ ಏನು ಅನ್ನುವುದು ಗೊತ್ತಿರಲಿಲ್ಲ. ತಂದೆಗೆ ಕೇಳಿದಾಗ, “ಅದು ಸ್ಟಾಂಡರ್ಡ್ ಕನ್ನಡಕ್ಕೆ ನಾನು ಇಟ್ಟ ಹೆಸರು. “ಸ್ಟಾಂಡರ್ಡ್ ಕನ್ನಡ ಎಂದರೆ ಶಾಲೆಗಳಲ್ಲಿ, ದಿನಪತ್ರಿಕೆಗಳಲ್ಲಿ ಮತ್ತು ಆಫೀಸಿನಲ್ಲಿ ಉಪಯೋಗಿಸುವ ಕನ್ನಡ. ಜನರು ಮಾತನಾಡುವ ಭಾಷೆ ಹೇಗೇ ಇರಲಿ, ಶಾಲೆಯಲ್ಲಿ, ದಿನಪತ್ರಿಕೆಯಲ್ಲಿ ಮತ್ತು ಆಫೀಸಿನಲ್ಲಿ ಉಪಯೋಗಿಸುವ ಕನ್ನಡ ಎಲ್ಲರ ಕನ್ನಡ” ಎಂದು ಅವರು ಹೇಳಿದರು.

ಕನ್ನಡಕ್ಕೆ ಮಹಾಪ್ರಾಣ ಮತ್ತು ಷ, ಋ, ವಿಸರ್ಗ ಮೊದಲಾದ ಬೇರೆಯೂ ಕೆಲವು ಅಕ್ಷರಗಳು ಬೇಕಾಗಿಲ್ಲ ಎಂಬುದಾಗಿ ನನ್ನ ತಂದೆ ಡಿ.ಎನ್.ಶಂಕರ ಬಟ್ ಅವರು ತಾವು ಬರೆದ ಕನ್ನಡ ಬರಹವನ್ನು ಸರಿಪಡಿಸೋಣ ಮತ್ತು ಮಾತು ಮತ್ತು ಬರಹದ ನಡುವಿನ ಗೊಂದಲ ಎಂಬ ಪುಸ್ತಕಗಳಲ್ಲಿ ತೋರಿಸಿ ಕೊಟ್ಟಿದ್ದಾರೆ. ಅವರು ಹೇಳುವುದು ಏನೆಂದರೆ ಕನ್ನಡದ್ದೇ ಆದ ಪದಗಳನ್ನು ಬರೆಯಲು ಬರಿಯ ೩೧ ಅಕ್ಷರಗಳು ಸಾಕಾಗುತ್ತವೆ. ೩೧ ಅಕ್ಷರಗಳನ್ನು ಉಪಯೋಗಿಸಿ ಬರೆದ ಕನ್ನಡದ ಬರಹವನ್ನು ಅವರು ‘ಹೊಸ ಬರಹ’ ಎಂದು ಕರೆಯುತ್ತಾರೆ. ಅವರು ಕನ್ನಡ ಬರಹವನ್ನು ಸರಿಪಡಿಸಲು ಹೊರಟಿದ್ದಾರೆ ಹೊರತು ಕನ್ನಡ ಭಾಷೆಯನ್ನಲ್ಲ.

          ಸುಮಾರು ಒಂದೂವರೆ ಸಾವಿರ ವರ್ಷಗಳ ಹಿಂದೆ ಕನ್ನಡ ಪಂಡಿತರು ಕನ್ನಡಕ್ಕೆ ಅದರದೇ ಆದ ಲಿಪಿ ಬೇಕು ಎಂದುಕೊಂಡಾಗ ಈ ಹೆಚ್ಚೆನ ಅಕ್ಷರಗಳನ್ನು ಅದರಲ್ಲಿ ಉಳಿಸಿಕೊಂಡಿದ್ದರು.  ನಮಗೆಲ್ಲ ತಿಳಿದ ಹಾಗೆ ಕನ್ನಡದಲ್ಲಿ ೫೦% ರಷ್ಟು ಸಂಸ್ಕೃತದ ಪದಗಳಿವೆ. ಅವುಗಳನ್ನು ಸಂಸ್ಕೃತದಲ್ಲಿ ಇರುವ ಹಾಗೇನೇ ಬರೆಯ ಬೇಕೆಂದರೆ ಅವರಿಗೆ ಈ ಹೆಚ್ಚಿನ ಅಕ್ಷರಗಳು ಬೇಕಾಗಿತ್ತು. ಆದರೆ ಈ ಎರವಲು ಪಡೆದ ಸಂಸ್ಕೃತದ ಪದಗಳನ್ನು ನಾವು ಹೇಗೆ ಉಚ್ಚರಿಸುತ್ತೇವೆಯೋ ಹಾಗೆಯೇ ಬರೆಯಬೇಕೆಂದರೆ ನಮಗೆ ಬರಿಯ ೩೧ ಅಕ್ಷರಗಳು ಸಾಕಾಗುತ್ತವೆ.

          ಇವತ್ತು ಕನ್ನಡ ಬರಹ ಎಲ್ಲರ ಸೊತ್ತಾಗಬೇಕು. ಎಲ್ಲರೂ ಕನ್ನಡ ಬರಹವನ್ನು ಕಲಿಯಬೇಕು. ಹಾಗಾಗಿ ನಾವು ಕನ್ನಡಕ್ಕೆ ಬೇಡದಿರುವ ಅಕ್ಷರಗಳನ್ನು ಬರಹದಿಂದ ತೆಗೆದು ಹಾಕಿದರೆ, ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಭವಾಗುತ್ತದೆ. ಇದರಿಂದ ಕನ್ನಡ ಬರಹವನ್ನು ಎಲ್ಲರ ಕೈಗೆ ಎಟಕುವ ಹಾಗೆ ಮಾಡ ಬಹುದು.

          ಸಂಸ್ಕೃತದಲ್ಲಿ ಬರುವ ಮಹಾಪ್ರಾಣ ಅಕ್ಷರಗಳನ್ನು ನಾವು ಮಾತನಾಡುವಾಗ ಅಲ್ಪಪ್ರಾಣಗಳಾಗಿಯೇ ಉಲಿಯುತ್ತೇವೆ. ಹೀಗಿದ್ದಾಗ ಅವುಗಳನ್ನು ನಾವು ಯಾಕೆ ಮಹಾಪ್ರಾಣ ಅಕ್ಷರಗಳಾಗಿ ಬರೆಯ ಬೇಕು?  ಸಂಸ್ಕೃತದಿಂದ ಎರವಲು ಪಡೆದ ಪದಗಳನ್ನು ನಾವು ಹೇಗೆ ಉಚ್ಚರಿಸುತ್ತೇವೋ ಹಾಗೆಯೇ ಬರೆದರೆ, ಮೇಲೆ ವಿವರಿಸಿದ ಹೆಚ್ಚಿನ ಅಕ್ಷರಗಳನ್ನು ನಾವು ಬಿಟ್ಟುಕೊಡಬಹುದು.

          ಎಲ್ಲರೂ ಕನ್ನಡವನ್ನು ಓದಲು ಮತ್ತು ಬರೆಯಲು ಕಲಿಯಬೇಕು. ಕನ್ನಡ ಭಾಷೆಯಲ್ಲಿ ಹೆಚ್ಚು ಹೆಚ್ಚು ಪುಸ್ತಕಗಳು ಪ್ರಕಟವಾಗಬೇಕು. ಸಮಾಜದ ಎಲ್ಲಾ ಜನರೂ ಈ ಪುಸ್ತಕಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕು ಎಂದರೆ ಕನ್ನಡ ಬರಹ ಸುಲಭವಾಗಿರಬೇಕು. ಅದರಲ್ಲಿ ಸಂಸ್ಕೃತದ ಪದಗಳು ಆದಷ್ಟು ಕಮ್ಮಿ ಇರಬೇಕು. ಈ ನಿಟ್ಟಿನಲ್ಲಿ ಡಾ.ಡಿ.ಎನ್.ಶಂಕರ ಬಟ್ ಅವರು ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಇದರಲ್ಲಿ ಕನ್ನಡದಲ್ಲಿ ನಾವು ಉಪಯೋಗಿಸುವ ಹಲವಾರು ಸಂಸ್ಕೃತ ಎರವಲುಗಳಿಗೆ ಕನ್ನಡದ್ದೇ ಆದ ಪದಗಳಿವೆ. ನಾವು ಈ ಪದಗಳನ್ನು ಬಳಸಲು ಸುರುಮಾಡಿದರೆ ಕನ್ನಡ ಬರಹ ತುಂಬಾ ಸುಲಭ ಮತ್ತು ಸರಳವಾದೀತು.

samskrutha_padagalige_kannadadde_padagalu

          ಕನ್ನಡದಲ್ಲಿ ಸುಮಾರು ಭಾಷೆಗಳ ಪದಗಳಿವೆ. ಆದರೆ ನಾವು ಸಂಸ್ಕೃತವನ್ನು ಬಿಟ್ಟು ಬೇರೆಲ್ಲಾ ಎರವಲು ಪದಗಳನ್ನೂ ಅವನ್ನು ಹೇಗೆ ಉಚ್ಚರಿಸುತ್ತೇವೋ ಹಾಗೆಯೇ ಬರೆಯುತ್ತೇವೆ. ಆದರೆ ಸಂಸ್ಕೃತದ ಎರವಲು ಪದಗಳನ್ನು ಮಾತ್ರ ಉಚ್ಚರಿಸುವ ಹಾಗೆ ಬರೆಯದೇ, ಸಂಸ್ಕೃತದಲ್ಲಿರುವ ಹಾಗೆ ಬರೆಯುತ್ತೇವೆ.

          ಈ ಹೆಚ್ಚಿನ ಅಕ್ಷರಗಳಿಂದ ಕನ್ನಡ ಕಲಿಯುವ ಮಕ್ಕಳಿಗೆ ಮತ್ತು ಆಮೇಲೆ ಅದನ್ನು ಬಳಸುವ ದೊಡ್ಡವರಿಗೆ ಅನವಶ್ಯಕವಾಗಿ ತೊಂದರೆ ಆಗುತ್ತದೆ. ನನ್ನ ಕ್ಲಾಸಿನಲ್ಲಿ ಇರುವ ಮಕ್ಕಳ ಪ್ರಕಾರ ಅವರಿಗೆ ಯಾವಾಗ ಅಲ್ಪಪ್ರಾಣವನ್ನು ಉಪಯೋಗಿಸಬೇಕು ಮತ್ತು ಯಾವಾಗ ಮಹಾಪ್ರಾಣವನ್ನು ಉಪಯೋಗಿಸಬೇಕು ಎಂದು ಎಷ್ಟು ಕಲಿತರೂ ಗೊತ್ತಾಗುವುದಿಲ್ಲ. ಇದರಿಂದಾಗಿ ಅವರಿಗೆ ಕನ್ನಡದ ಪರೀಕ್ಷೆಯಲ್ಲಿ ಕಮ್ಮಿ ಅಂಕೆ ಸಿಗುತ್ತದೆ. ಹಾಗಾಗಿ ಈ ಹೆಚ್ಚಿನ ಅಕ್ಷರಗಳನ್ನು ಬಿಟ್ಟು ಬರಿಯ ೩೧ ಅಕ್ಷರಗಳನ್ನು ಉಪಯೋಗಿಸಿದರೆ ಮಕ್ಕಳ ಮತ್ತು ದೊಡ್ಡವರ ಈ ಎಲ್ಲಾ ತೊಂದರೆಗಳ ನಿವಾರಣೆಯಾಗುತ್ತವೆ.

          ಈ ರೀತಿ ಒಂದು ಬರಹದಲ್ಲಿ ಬೇಡಗಿರುವ ಅಕ್ಷರಗಳಿದ್ದರೆ ಅವನ್ನು ಬಿಟ್ಟು ಕೊಡೂವುದು ಅಂತಹ ಮಾಡಲಾಗದ ಇಲ್ಲವೇ ಮಾಡಬಾರದ ಕೆಲಸವೇನಲ್ಲ. ಗ್ರೀಕ್, ಜರ್ಮನ್, ಪಂಜಾಬಿ, ಕೋರಿಯನ್, ಟರ್ಕಿಶ್ ಮೊದಲಾದ ಹಲವು ನುಡಿಗಳನ್ನಾಡುವವರು ತಮ್ಮ ಬರಹದಲ್ಲಿ ಇಂತಹ ತೊಂದರೆಗಳಿರುವುದನ್ನುಈ ರೀತಿ ಸರಿಪಡಿಸಿದ್ದಾರೆ.

          ಸಮಾಜದಲ್ಲಿ ಒಂದು ಬದಲಾವಣೆ ತರುವುದು ಅಷ್ಟು ಸುಲಭ ಅಲ್ಲ. ಆದರೆ ಯಾರಾದರೂ ಒಂದು ಹೆಜ್ಜೆ ಮುಂದೆ ಇಡಲೇ ಬೇಕು. ನನ್ನ ತಂದೆ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಒಂದಲ್ಲ ಒಂದು ದಿನ ಜನರು ಈ ಮಾರ್ಪಾಡನ್ನು ಸ್ವೀಕರಿಸುತ್ತಾರೆ ಎಂದು ನನ್ನ ನಂಬಿಕೆ.

ಮಾಲತಿ ಬಟ್, ಮೈಸೂರು