ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

೨೦೨೦ – ಒಂದು ಪಕ್ಷಿನೋಟ

ಡಾ.ಸುಧಾ ಜೋಷಿ
ಇತ್ತೀಚಿನ ಬರಹಗಳು: ಡಾ.ಸುಧಾ ಜೋಷಿ (ಎಲ್ಲವನ್ನು ಓದಿ)

೨೦೨೦
ಅಬ್ಬ!!!! ಬರೆಯುವಾಗಲೇ ಏನೋ ಖುಷಿ, ಈ ವಷ೯ ಹಾಗಿರತ್ತೆ, ಹೀಗಿರತ್ತೆ ಅಂತ ನುಡಿದ ನೂರಾರು ಭವಿಷ್ಯವಾಣಿಯ ನಡುವೆ ಕಟ್ಟಿದ ಕನಸು ಸಾವಿರಾರು!! ಆ ಕನಸಿನ ಮಹಲು ಹತ್ತಿದೆವೋ?ಇಳಿದೆವೋ?
ನೋಡೋಣ!
೨೦೨೦ ವಿಶೇಷವೆಂದು ಸ್ವಾಗತಿಸಿದ್ದೆವು..!
೨೦೨೦ ದಾಖಲೆಯ ವರ್ಷವಂತೂ ಆಯಿತು.. 
ಮನುಷ್ಯನ ಜೀವನದ ಗತಿಯನ್ನೆ ಅಲ್ಲೋಲ ಕಲ್ಲೋಲ ಮಾಡಿತು..!

೨೧ರ ದಶಕದ ಹೊಸ್ತಿಲಲ್ಲಿ‌ ಕಾಲಿಡುತ್ತಿರುವ ನಮಗೆ ೨೦೨೦ಕ್ಕೆ ವಿದಾಯ ಹೇಳುತ್ತಾ ಹೊಸ ವರ್ಷವನ್ನು ಸ್ವಾಗತಿಸುವ ಸಮಯ ಬಂದಿದೆ…
ವಿದಾಯದ ಸಮೀಕ್ಷೆಯಲ್ಲಿ ಕೆಲವು ಅನಿಸಿಕೆಗಳನ್ನು ಸೆರೆಹಿಡಿಯುವಾಸೆ …!

ಹಿಂದೆ ಕಾಲರಾ ಪ್ಲೇಗ್ ಮುಂತಾದ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಕೇಳಿದ್ದೆವು, ಓದಿದ್ದೆವು ಅದಕ್ಕಿಂತಲೂ ಭಯಂಕರವಾದ ರೋಗವನ್ನು ಕಣ್ಣಾರೆ ಕಂಡದ್ದು ಅದರ ನೋವು ಅನುಭವಿಸಿದ್ದು ಮಾತ್ರ ಈ ವರ್ಷದಲ್ಲಿ .
ಮಾರ್ಚ್ ಮೊದಲ ವಾರದಲ್ಲಿ ಕಾಣಿಸಿಕೊಂಡು ಕ್ಷಿಪ್ರಪ್ರಚಾರ ಕಂಡ “ಕೊರೊನಾ ಎಂಬ ಮಹಾಮಾರಿ ವಿದೇಶಗಳಲ್ಲಿ ರಾರಾಜಿಸಿ ಶರವೇಗದಲ್ಲಿ ನಮ್ಮ ದೇಶಕ್ಕೂ ಲಗ್ಗೆ ಹಾಕಿತು..!

ಮಾರ್ಚ್ ತಿಂಗಳಲ್ಲಿ..ದೇಶದ ಪ್ರಧಾನಿಯವರ ಚಪ್ಪಾಳೆ ಕರೆಗಂಟೆಯಿಂದ ಶುರುವಾದ ಕೊರೊನಾ ಇಡೀ ದೇಶಕ್ಕೆ ಗೃಹ ಬಂಧನ (ಲಾಕ್ ಡೌನ್) ಆದೇಶ ಹೊರಡಿಸಿತು…ಕೊರೋನಾ ಅಥವಾ ಕೋವಿಡ್ ಎನ್ನುವ ಕಣ್ಣಿಗೆ ಕಾಣದ ವೈರಾಣು ಇಡಿ ಪ್ರಪಂಚವನ್ನೆ ಬುಡಮೇಲು ಮಾಡಿತು.ಲಾಕ್ಡೌನ್ ಸಮಯದಲ್ಲಿ ಕೊರೋನಾದ ಜೀವ ಭಯ ಒಂದೆಡೆಯಾದರೆ..ಮಹಾನ್ ಮಾರಿಯಾಗಿ ಒಕ್ಕರಿಸಿ ಮಹಾನ್ ಗುರುವಾಗಿ ಪಾಠ ಕಲಿಸಿತು ಎನ್ನುವುದು ನಿಜವೇ!

ದೇಶದಲ್ಲಿ ಸ್ವಚ್ಛತೆ ಮೊದಲ ಸ್ಥಾನ ಪಡೆಯಿತು.ಹಿಂದಿನ ಕಾಲದವರ ಮಡಿವಂತಿಕೆಯ ಅರ್ಥ ಏನೆಂದು ಮನದಟ್ಟು ಮಾಡಿತು.ಜನರು ಬಹುಶಃ ಪ್ರಥಮಬಾರಿಗೆ ಸರ್ಕಾರದ ನಿಯಮ ಪಾಲಿಸುತ್ತಾ ಜನ ಮಾಸ್ಕ್ ಧಾರಿಗಳಾಗಿದ್ದು ಮೆಚ್ಚಲೇಬೇಕು.  ಪಾಪ.. ಮೇಕಪ್ ಕಿಟ್ ಗಳಿಗೆ ನಿಜವಾದ ಗೃಹಬಂಧನ ವಾಯಿತು..‌!

ತಿಂದು ಚೆಲ್ಲಾಡುತಿದ್ದ ಜನರಿಗೆ ಅನ್ನದ ಬೆಲೆ ಏನೆಂದು ತೋರಿಸಿತು.ದುಡ್ಡಿದ್ದರೆ ಸಾಲದು ಅನ್ನವನ್ನೇ ತಿನ್ನಬೇಕು ಎಂಬುದರ ಅರಿವು ಮೂಡಿಸಿತು.ಸರ್ಕಾರವು ಬಡಬಗ್ಗರಿಗೆ, ದಿನಗೂಲಿ ಕಾರ್ಮಿಕರಿಗೆ ಎಲ್ಲ ವರ್ಗದ ಶ್ರಮಜೀವಿಗಳಿಗೆ ಧವಸಧಾನ್ಯ ವಿತರಣೆ ಮಾಡಿತು! ಇಂದಿನ ವ್ಯವಸ್ಥೆಯಲ್ಲಿ ಎಷ್ಟರ ಮಟ್ಟಿಗೆ ಅದು ವಿನಿಯೋಗವಾಯಿತೋ ಗೊತ್ತಿಲ್ಲ..!

ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ದೇಗುಲಗಳು ಮುಚ್ಚಿದವು. ದೇವರಿರುವುದು ಗುಡಿಯಲ್ಲಿ ಮಾತ್ರ ಅಲ್ಲ. ಪ್ರತಿ ಮನುಷ್ಯನಲ್ಲಿ ಇದ್ದಾನೆ ಎಂಬ ಸತ್ಯದ ಅರಿವಾಯಿತು! ದೀನ ದಲಿತರ ಸೇವೆಯೆ ಜನಾರ್ಧನ ಸೇವೆ ಎಂಬ ಮಾತನ್ನ ಪಾಲಿಸಿದರು.ಉಳ್ಳವರು ಅನ್ನದಾನ ಮಾಡಿದರು.

ಪ್ರಯಾಣಿಸುವ ಎಲ್ಲಾ ವಾಹನಗಳಿಂದ ಹಿಡಿದು ಗಗನದಲ್ಲಿ ಹಾರಾಡುವ ವಿಮಾನಗಳು ಕೂಡ ಸ್ಥಗಿತಗೊಂಡವು….!
ಇತ್ತ ವಾಹನ ಸಂಚಾರದ ಸ್ಥಗಿತದಿಂದಾಗಿ ಮಾಲಿನ್ಯವೂ ಕಡಿಮೆಯಾಯಿತು.ಪ್ರಕೃತಿ ಉಸಿರಾಡಿತು!
ಗಗನದಲ್ಲಿ ಧಾರಾಳವಾಗಿ ಹಕ್ಕಿ ಪಕ್ಷಿಗಳು ಸ್ವಚ್ಛಂದ ಹಾರಾಡಿದವು.ರಸ್ತೆ ರಸ್ತೆಯಲ್ಲಿ ನವಿಲು ನೃತ್ಯ ಮಾಡಿದವು…! 
ಪ್ರಕೃತಿ ಮಾತೆಯು ಜನರ ಅಹಂ ಮೆಟ್ಟಿ ತನ್ನ ಮಕ್ಕಳಿಗೆ ಸ್ವತಂತ್ರ ತಂದುಕೊಟ್ಟಳು..
ಮನುಷ್ಯ ಮಾತ್ರ ಮನೆಯಲ್ಲಿ ಬಂಧಿಯಾಗಿ ಸ್ವಾತಂತ್ರ್ಯವಿದ್ದು ಬಂದಿಯಾದನು.
ಬಸ್ ಸಂಚಾರವಿಲ್ಲದೆ ಜನಗಳಿಗೆ ತೊಂದರೆಯಾದರೂ ದೇಶಕ್ಕೆ ಉಳಿತಾಯವೂ ಆಯಿತು.

ಲಾಕ್ಡೌನ್ ನಿಂದಾಗಿ ಕೆಲವರು ಇದ್ದ ಬಳಿಯಲ್ಲೆ ಇರಬೇಕಾದಾಗ ಸಂಬಂಧಗಳ ಬೆಲೆ ಗೊತ್ತಾಗಿ
ತಹತಹಿಕೆ ಶುರುವಾಗಿ ತವರೂರ ಸೇರಲು ಸಜ್ಜಾದರು. ಮತ್ತೊಂದೆಡೆ ಕೊರೋನಾದಿಂದ ಕೆಲವರು ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎಂಬಂತೆ ಕೊರೋನಾದ ನೆಪವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡರು.ಜನಸಂದಣಿಯಿಲ್ಲದೆ ಕಡಿಮೆ ಖರ್ಚಿನಲ್ಲಿ ಮದುವೆ ಮಾಡಿ ಎಂಬ ಅರಿವು ಮೂಡಿಸಿತು.ಸಂಘ ಸಂಸ್ಥೆಗಳು ಆನ್ ಲೈನ್ ನಲ್ಲಿ ತಮ್ಮ ಕಾರ್ಯ ಕ್ರಮ ನಡೆಸಿ ತಮ್ಮ ಪ್ರೋತ್ಸಾಹದ ನಿಲುವನ್ನು  ತೋರಿಸಿದವು.

ಕೊರೋನಾದ ಭಯದಲ್ಲಿಯೇ ಮಕ್ಕಳಾದವು.ಕೊರೋನಾ ಮಾತ್ರ ಹುಟ್ಟಿದ ಯಾವ ಮಕ್ಕಳಿಗೂ ಹಾನಿ ಮಾಡಲಿಲ್ಲ ಎಂಬುದು ಅಷ್ಟೇ ಸತ್ಯವಾಯಿತು. ಮಕ್ಕಳು ಆರೋಗ್ಯಕರವಾಗಿ ಹುಟ್ಟಿದವು.

ಮಾಧ್ಯಮದವರಿಗೆ ಸುಲಭವಾಗಿ ಟಿವಿ ಮುಂದೆ ಕುಳಿತು ಕದಲದೆ ನೋಡುವಷ್ಟು ಬಿಸಿ ಬಿಸಿ ಸುದ್ದಿಗಳು, ಆದರೂ ಜನರ ಕಣ್ಣು ತೆರೆಸಲು ಮಾದ್ಯಮಗಳು ನೆರವಾಗಿದ್ದಂತೂ ನಿಜ. ಎಡಬಿಡದ ಪ್ರಚಾರದಿಂದಾಗಿ ಜನ ಸ್ವಲ್ಪ ಮಟ್ಟಿಗಾದರೂ ಜಾಗೃತರಾಗಲು ಅವಕಾಶವಾಯಿತು.

೪೦ರ ದಶಕದ ಹಿಂದೆ ಬಂದ ರಾಮಾಯಣ, ಮಹಾಭಾರತ ಮೆಗಾ ಧಾರಾವಾಹಿಗಳು ಮರು ಪ್ರಸಾರವಾಗಿ ನಿರ್ಮಾಪಕರ ಜೇಬು ತುಂಬಿದವು.ವೇಗದ ಒತ್ತಡದ ಬದುಕಿನ ಜೊತೆ ಏಗುತ್ತಿದ್ದ ಜನರಿಗೆ ಈ ಎರಡು ಧಾರಾವಾಹಿಗಳು ನೆಮ್ಮದಿಯ ಜೊತೆಗೆ ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡುವ ಭಾಗ್ಯ ಕೊಟ್ಟಿತು.ಮನೆಯಲ್ಲಿನ ಊಟತಿಂಡಿ ರುಚಿ ಹೊಸ ಬಗೆ ಕಂಡಿತು.. !  ಸಮಯ ಕಳೆಯಲು ಹೊಸ ರುಚಿಯ ಪ್ರಯೋಗವು ನಡೆದು ಪ್ರತಿದಿನ ಮುಖಪುಟದಲ್ಲಿ ರಾರಾಜಿಸಿದವು.
ಮನೆ ಅಡಿಗೆ ತಿನ್ನುವ ಪರಿಸ್ಥಿತಿಯಿಂದಾಗಿ ಬ್ಯಾಚುಲರ್ ಹುಡುಗ ಹುಡುಗಿಯರು ನಳಪಾಕದಲ್ಲಿ ಪರಿಣಿತಿ ಪಡೆದು
ವಿವಿಧ ಅಡಿಗೆಗಳ ಸೆಲ್ಫಿ ರಾರಾಜಿಸಿತು.

ಶಾಲಾ ಕಾಲೇಜುಗಳು ಮುಚ್ಚಿದವು. ಒಂದೇ ಸೂರಿನಡಿ ಒಟ್ಟಿಗೆ ಕುಳಿತು ಊಟಮಾಡುವ ಮಕ್ಕಳ ಜೊತೆ ಕಾಲಕಳೆಯುತ ಅಂದಿನ ತುಂಬಿದ ಕುಟಂಬದ ನೆನಪು ಮರುಕಳಿಸಿತು. ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಜೀವನ ಕಷ್ಟಕರವಾಯ್ತು. ಆದರೂ, ಶಿಕ್ಷಕರು ಆನ್ಲೈನ್ ಮೂಲಕ ನಿಷ್ಠೆಯಿಂದ ತಮ್ಮ ಕೆಲಸವನ್ನು ಬಿಡದೇ ಮಾಡುತ ಪ್ರಶಂಸೆಗೆ ಪಾತ್ರರಾದರು.

ಮಕ್ಕಳ ಮನಸ್ಸು ಮೊದಲು ಅಯೋಮಯವಾದರೂ ಹೊಂವಕ್೯ ಕಾಟವಿಲ್ಲದೆ ನಿರಾಳವಾದರು. ಪೋಷಕರು ಅನಿರೀಕ್ಷಿತ ಘಟನೆಯಿಂದ ಬೆಚ್ಚಿದರೂ ಸಹ ತಮ್ಮ ಮಕ್ಕಳ ಜೀವ ಮುಖ್ಯಅದರ ಮುಂದೆ ಯಾವುದೂ ಮುಖ್ಯವಲ್ಲ ಎಂಬ ನಿರ್ಧಾರಕ್ಕೆ ಬಂದರು. ಮಕ್ಕಳಿಗೆ ಹೆತ್ತವರ ಸಾಮಿಪ್ಯ ಹೆಚ್ಚು ಖುಷಿಕೊಟ್ಟಿತು. ಎಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯ ಸಿಬ್ಬಂದಿ ವರ್ಗದವರು ಡಾಕ್ಟರ್ ನರ್ಸ್, ತಮ್ಮ ಪ್ರಾಣ ಒತ್ತೆಯಿಟ್ಟು ರೋಗಿಗಳನ್ನು ಕಾಪಾಡಿದರು. ಸರ್ಕಾರವು ಅವರಿಗೆ ಪುಷ್ಪ ಮಳೆಗೆರೆದು ಗೌರವ ಸೂಚಿಸಿತು.

ಪೋಲೀಸ್ ಸಿಂಬಂದಿಗಳ ಕಾರ್ಯದಕ್ಷತೆ ಪೋಲಿಸ್ ನವರ ಮೇಲೆ ಜನರಲಿದ್ದ ಕೆಟ್ಟ ಭಾವನೆ ಹೋಗಲಾಡಿಸಿತು.

ಹತ್ತು ತಿಂಗಳ ಕೊರೋನಾ ಹೋರಾಟದಲ್ಲಿ ಜನರು ಜೀವನ ಸಾಗಿಸಿದರೂ ಕೊರೋನಾದಿಂದ ಇನ್ನು ಸಂಪೂರ್ಣ ಮುಕ್ತರಾಗಿಲ್ಲ.

ಕೊರೋನಾದ ಕ್ಲಿಷ್ಟ ಪರಿಸ್ಥಿತಿಯ ನನ್ನ ಅಚ್ಚಳಿಯದ ಸಿಹಿ ನೆನಪೆಂದರೆ…

೩೭ ನನ್ನ ವಷ೯ದಿಂದ ಸಂಪಕ೯ದಲ್ಲಿ ಇಲ್ಲದಿದ್ದ “ಹೈಸ್ಕೂಲಿನ ಗೆಳೆಯರ ಬಳಗ ಕೈಬೀಸಿ ಕರೆದು ತನ್ನ ಮಡಿಲಿಗೆ ಬಾಚಿ ತಬ್ಬಿಕೊಂಡಿತು” ಇದು ನನ್ನ ಮನಸ್ಸಿನಲ್ಲಿ ಸದಾ ಉಳಿಯುವ ಸುಮಧುರ ಘಳಿಗೆ.

ಮುಂದಿನ ೨೧ರ ದಶಕವು ಎಲ್ಲ ರೋಗ ರುಜಿನಗಳಿಂದ ಮುಕ್ತರನ್ನಾಗಿ ಮಾಡಲಿ. ಜನರಲ್ಲಿ ಆಶಾಭಾವನೆ ತುಂಬಲಿ.
ಎಲ್ಲರಿಗೂ ಎಲ್ಲವೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಾ.. ೨೦೨೦ಕ್ಕೆ ವಿದಾಯ​ ಹೇಳುತ್ತಾ… ಹೊಸ ವರ್ಷವನ್ನು ಸ್ವಾಗತಿಸೋಣ.