- ಗಜಲ್ - ಫೆಬ್ರುವರಿ 27, 2024
- ಗಜಲ್ - ಜನವರಿ 19, 2023
- ಬನ್ನಿ,ಮತ್ತೆ ಬನ್ನಿ-ರೂಮಿ ಕವಿತೆಗಳು - ಸೆಪ್ಟೆಂಬರ್ 17, 2022
(ಗಟ್ಟಿ ಅವರಿಗೆ)
ಕಾರ್ಮುಗಿಲಲ್ಲಿ ಮನೆಯ ಕಂಡಿದೆ ಝೇಂಕಾರದ ಹಕ್ಕಿ
ಶಬ್ದಗಳ ಮಿತಿಯ ಪಡಿನುಡಿದಿದೆ ಝೇಂಕಾರದ ಹಕ್ಕಿ
ಕಾಮರೂಪಿಯೇ ಇರಬೇಕು ಈ ಸ್ವರ್ಣಮೃಗ
ಅಂತರಂಗದ ಅತಿಥಿ ಎಂದಿದೆ ಝೇಂಕಾರದ ಹಕ್ಕಿ
ರಸಾತಳವಲ್ಲ ಅದು ನಮ್ಮೊಳಗಿನ ಆಕಾಶ
ಅಶ್ರುತ ಗಾನದ ಪರುಷ ತಂದಿದೆ ಝೇಂಕಾರದ ಹಕ್ಕಿ
ಯುಗಾಂತರದಲ್ಲೂ ನಿರಂತರ ಉರಿದಿದೆ ಕಾಮಯಜ್ಞ
ಗ್ಲಾನಿ ಮರೆತು ಭೂಮಿಗೀತೆಯ ಹಾಡಿದೆ ಝೇಂಕಾರದ ಹಕ್ಕಿ
ಶಿಲಾ ತಪಸ್ವಿಗೆ ಎಲ್ಲಿದೆ ಹೇಳು ಸಾಫಲ್ಯದ ಪರಿಧಿ
ಅರಗಿನ ಅರಮನೆಯ ಮೀರಿ ಹಾರಿದೆ ಝೇಂಕಾರದ ಹಕ್ಕಿ
‘ಪುನರಪಿ ಜನನಂ’ ಸುಖಾಂತವೇನು ‘ಜಂಗಮ’
ಬಿಸಿಲುಗುದುರೆಯ ನೋಡಿ ನಕ್ಕಿದೆ ಝೇಂಕಾರದ ಹಕ್ಕಿ
ಗಜಲ್ (ವಿಷ್ಣು ನಾಯ್ಕ ರ ಬಗ್ಗೆ )
ನನ್ನ ಅಂಬಾರಕೊಡಲಲ್ಲಿತ್ತು ಬೆಳಕಿನ ಕರೆ
ಕಳಕೊಂಡ ಕವಿತೆಯಲ್ಲಿ ಹುದುಗಿತ್ತು ಬೆಳಕಿನ ಕರೆ
ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ ಕಂಡಿರಾ
ನೂರೆಂಟು ಕಿಟಕಿಗಳ ತೆರೆದಿತ್ತು ಬೆಳಕಿನ ಕರೆ
ಆಲ ಮತ್ತು ಬಾಲದಲ್ಲಿ ಕಂಡಿತೇ ವಾಸ್ತವ
ನೋವು ಪ್ರೀತಿಯ ಪ್ರಶ್ನೆಯಲ್ಲಿತ್ತು ಬೆಳಕಿನ ಕರೆ
ಹದ್ದು ಪಾರಿನ ಹಿಂದೆ ಮುಂದೆ ವರ್ತಮಾನದ ಕಣ್ಣು
ಬಿನ್ನಹಕೆ ಬಾಯಿಲ್ಲದೆ ಕುದಿದಿತ್ತು ಬೆಳಕಿನ ಕರೆ
ಆ ರೀತಿ ಈ ರೀತಿಯಲ್ಲೂ ಹೊಸಭತ್ತದ ಹಂಬಲ
ಕಣ್ಣೀರ ಕತೆಗಳ ಆಚೆ ಕಾದಿತ್ತು ಬೆಳಕಿನ ಕರೆ
ಸಾವಿನ ಹಾದಿಯಲ್ಲಿ ಉಳಿದ ಪರಿಮಳ ‘ಜಂಗಮ’
ಕಾಲೋಚಿತ ಭಾವದಲ್ಲಿತ್ತು ಬೆಳಕಿನ ಕರೆ
ಡಾ. ಗೋವಿಂದ ಹೆಗಡೆ
( ವಿಷ್ಣು ನಾಯಕರ 18 ಕೃತಿಗಳ ಹೆಸರುಗಳನ್ನು ಇಲ್ಲಿ ಸಂಯೋಜಿಸಲಾಗಿದೆ, ಈ ಹಿಂದೆ ಪ್ರಕಟಿಸಲಾಗಿದೆ. ಕೃಪೆ – ಅವಧಿ)
★
★ ಡಾ. ಗೋವಿಂದ ಹೆಗಡೆ
4fqaa5