ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅನುಭಾವದ ನಸುಕಿನಲ್ಲಿ…

ಪ್ರತಿಯೊಂದು ನಸುಕು ಹೊಸ ಹಗಲಿನ ಬೀಜವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಹೊಸ ಸಾಧ್ಯತೆಗಳನ್ನು ತೆರೆಯುತ್ತದೆ- ಪ್ರತಿ ಸಲ, ಪ್ರತಿ ದಿನ. ಹಾಗೆ ನೋಡಿದರೆ ಹೊಸದನ್ನು ಕಾಣಿಸುವ, ಚಿಗುರಿಸುವ ಪ್ರತಿ ಕ್ಷಣವೂ ನಸುಕೇ ಆಗಿದೆ.
ನಸುಕು.ಕಾಂ ನಲ್ಲಿಯೂ ಹೀಗೆ ಹೊಸದನ್ನು ಕಾಣುವ, ಕಾಣಿಸುವ ಆಶಯ-ಸಂಕಲ್ಪ ನಮ್ಮದು.

ಜೂನ್ ಕೊನೆಯಲ್ಲಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಯವರ ಎಂಬತ್ತರ ಸಂಭ್ರಮದ ಕುರಿತಾಗಿನ ವಿಶೇಷ ಸಂಚಿಕೆಯನ್ನು ನಸುಕು ಹೊರತಂದಿತು. ಅದಾಗಿ ಎರಡು ದಿನಗಳ ನಂತರ ನಾನು ಸ್ಥಾಪಕ ಸಂಪಾದಕ ಶ್ರೀ ವಿಜಯ್ ಅವರ ಜೊತೆ ಮಾತನಾಡುತ್ತಿದ್ದೆ.ಅತ್ಯಂತ ಕಡಿಮೆ ಅವಧಿಯಲ್ಲಿ ಮೌಲಿಕ ಸಂಚಿಕೆಯನ್ನು ರೂಪಿಸಿದ ಪುಲಕ, ಆ ಗುಂಗು ನನ್ನಲ್ಲಿ ಇನ್ನೂ ಇತ್ತು.ನನ್ನ ಮಾತುಗಳನ್ನು ಸಾವಧಾನವಾಗಿ ಕೇಳಿಸಿಕೊಂಡ ನಂತರ ಅವರು ಹೇಳಿದರು- ‘ಸರ್, ಒಂದು ಅನುಭಾವ ಸಂಚಿಕೆಯನ್ನು ತರೋಣ’.ಮುಗಿದ ಚಂದದ ಕ್ಷಣಗಳಲ್ಲಿ ಮುಳುಗಿ ಮೈ ಮರೆಯುವುದೇ, ಅವುಗಳಲ್ಲಿನ ಖುಷಿಯನ್ನು ಅನುಭವಿಸುತ್ತಲೇ, ಮುಂದಿನದನ್ನು ಕಾಣುವ, ಕಟ್ಟುವ ಅವರ ಕ್ರಿಯಾಶೀಲತೆಗೆ ಹಲವು ಹಿರಿಯರ, ಗೆಳೆಯರ ಸಾಥ್ ಸಿಕ್ಕಿದ್ದರ ಫಲವಾಗಿ ಈ ‘ಅನುಭಾವ’ ವಿಶೇಷ ಸಂಚಿಕೆ ನಿಮ್ಮ ಮುಂದಿದೆ.

ಇಲ್ಲಿ, ಇಹದಲ್ಲಿ, ಈಗ-here and now- ಬದುಕಿದರೆ ಸಾಲದೇ? ಅನುಭಾವದಂತಹ, ಅನುಭವ ಪ್ರಪಂಚಕ್ಕೆ ಅತೀತವಾದ, ಅಮೂರ್ತವಾದ ಸಂಗತಿಗಳಿಗೆ ಕೈಚಾಚಬೇಕೇ- ಎಂಬ ಪ್ರಶ್ನೆ ಹೊಸದೇನಲ್ಲ. “ದೇವರು ಸತ್ತ, ಅವನನ್ನು ನಾವೇ ಕೊಂದಿದ್ದೇವೆ”ಎಂಬ ಮಾತಾಗಲೀ, ‘ದೈವ ಅಂತ ಇಲ್ಲಪ್ಪ, ನಾವೇ ಮಾಡ್ಕೋಬೇಕು’ ಎಂಬ ಪು ತಿ ನ ಅವರ ನುಡಿಯಾಗಲೀ, ‘ಇದು ದೈವೋತ್ತರ ಕಾಲ’ ಎಂಬಂತಹ ಉಲ್ಲೇಖಗಳೇ ಆಗಲಿ ನಮ್ಮ ಆಚೆಗಿನ ಇನ್ನಾವುದೋ ‘ಸಂಗತಿ’ಗೆ (‘ತತ್’) ಕೈ ಚಾಚುತ್ತಿರುವುದನ್ನು ಇಲ್ಲಿ ಗಮನಿಸಬಹುದು. ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯೆಯು ‘ಆರೋಗ್ಯ ಎನ್ನುವುದು ಪೂರ್ಣವಾದ ದೈಹಿಕ ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಯದ ಸ್ಥಿತಿ’ ಎನ್ನುತ್ತಲೇ ಕೆಲವು ತಜ್ಞರ ಪ್ರಕಾರ ‘ಅನುಭಾವದ, ಅಧ್ಯಾತ್ಮದ ನಾಲ್ಕನೆಯ ಆಯಾಮವೂ ಇದೆ’ ಎಂದು ಉಲ್ಲೇಖಿಸುತ್ತದೆ. ಹೀಗೆ ಈ ಹುಡುಕಾಟ,ಈ ಶೋಧನೆ, ನಾವು ‘ಆರೋಗ್ಯವಂತ’ರಾಗಿರುವ ಗುರುತು ಕೂಡ.

ಈ ಅನುಭಾವ ಸಂಚಿಕೆಯಲ್ಲಿ ದೇವರು-ಧರ್ಮ, ಅವುಗಳ ಅವಶ್ಯಕತೆ, ವಿವಿಧ ಆರಾಧನಾ ಪದ್ಧತಿಗಳು, ಇವುಗಳ ಬದಲಾಗಿ ಒಳಗಿನ ಶೋಧನೆಗೆ, ಒಳಮುಖವಾದ ಶೋಧನೆ-ಪರಿಶೀಲನೆಗೆ ಒತ್ತನ್ನು ನೀಡಲಾಗಿದೆ.

ದಿ. ಜಿಡ್ಡು ಕೃಷ್ಣಮೂರ್ತಿ, ಓಶೋ ರಜನೀಶ್, ವಿನೋಬಾ ಭಾವೆ, ಪುತ್ತೂರಜ್ಜ, ಶ್ರೀ ಶ್ರೀ ರವಿಶಂಕರ್ ಗುರೂಜಿಯವರಂತಹ ಸಂತರ ವಿಚಾರಪ್ರಣಾಲಿಗಳನ್ನು ಇಲ್ಲಿ ಕ್ರೋಡೀಕರಿಸಿದೆ.ಕಾವ್ಯ ಮತ್ತು ಅಧ್ಯಾತ್ಮಗಳ ಸಂಬಂಧದ ಬಗ್ಗೆ, ಹಾಗೆಯೇ ಹಿರಿಯ ಕವಿ ಕೆಎಸ್ ನ ಅವರ ದೈವದ ಪರಿಕಲ್ಪನೆಯ ಬಗ್ಗೆ ಬರಹಗಳು ಇಲ್ಲಿವೆ. ಕುಮಾರವ್ಯಾಸನಲ್ಲಿ, ಹರಿದಾಸ ಸಾಹಿತ್ಯದಲ್ಲಿ ,ಮುಂಡಿಗೆಗಳಲ್ಲಿ ಅನುಭಾವದ, ಭಕ್ತಿಯ ಸ್ವರೂಪವನ್ನು ಶೋಧಿಸುವ, ವಿವರಿಸುವ ಲೇಖನಗಳಿವೆ. ವಿಶ್ವವಿಜೇತ ವಿವೇಕಾನಂದರ ಶಿಕಾಗೋ ಉಪನ್ಯಾಸಗಳನ್ನು ಹೊಸ ದೃಷ್ಟಿಯಲ್ಲಿ ಕಾಣುವ, ಕಾಣಿಸುವ ಬರಹವಿದೆ.ನಮ್ಮ ನಡುವಿನ ಸಂತ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳ ಒಡನಾಟದ ಮತ್ತು ಪೂರ್ಣ ಯೋಗಿ ಶ್ರೀ ಅರವಿಂದರ ಶಿಕ್ಷಣದ ಪರಿಕಲ್ಪನೆಯ ಕುರಿತಾದ ವಿಡಿಯೋ ಪ್ರಸ್ತುತಿಗಳಿವೆ. ಕಲೆ ಮತ್ತು ಅಧ್ಯಾತ್ಮದ ಸಂಬಂಧವನ್ನು ಯಕ್ಷಗಾನದ ನೆಲೆಯಲ್ಲಿ ಕಂಡ ವಿಡಿಯೋ ಪ್ರಸ್ತುತಿಯಿದೆ. ಅನುಭಾವವನ್ನು ತಮ್ಮದೇ ನೆಲೆಯಲ್ಲಿ ಕಂಡರಿಸುವ ಕವಿತೆಗಳಿವೆ.

ಅತ್ಯಂತ ಪ್ರೀತಿಯಿಂದ ಸಕಾಲಕ್ಕೆ ಬರಹಗಳನ್ನು ನೀಡಿ, ವಿಡಿಯೋ ಪ್ರಸ್ತುತಿಗಳನ್ನು ನೀಡಿ ಉಪಕರಿಸಿದ ಎಲ್ಲ ಲೇಖಕರಿಗೆ, ಸ್ನೇಹಿತರಿಗೆ ನಸುಕು ಬಳಗ ಋಣಿಯಾಗಿದೆ. ಅವರ ಮೌಲಿಕ ಕೊಡುಗೆಗಳಿಂದಲೇ ಈ ಸಂಚಿಕೆ ರೂಪು ತಳೆದಿದ್ದು. ವಿಶ್ವವ್ಯಾಪಿಯಾದ ಕೋವಿಡ್ ಪಿಡುಗಿನಿಂದ ಸಂತ್ರಸ್ತವಾಗಿರುವ ಈ ಸಂದರ್ಭದಲ್ಲಿ, ಇಂದು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಕತ್ತಲು-ಬೆಳಕು ಕೂಡಿಯೇ ಇರುವಂತೆ… ಸ್ವಾತಂತ್ರ್ಯ ಎಂದರೆ ಬಿಡುಗಡೆ. ನಮ್ಮನ್ನು ನಾವು ಕಟ್ಟಿ ಹಾಕಿಕೊಂಡಿರುವ, ಹಾಗೆ ತಿಳಿದುಕೊಂಡಿರುವ ಹಲವು ಸಂಗತಿಗಳಿಂದ ಬಿಡುಗಡೆ, ಅನುಭಾವದ ಹಾದಿ. ಅದರ ಅರ್ಥ ‘ಇರುವುದೆಲ್ಲವ ಬಿಟ್ಟು ಏನಾದರೂ ಮಾಡುತಿರು, ಆಗುತ್ತಲೇ ಇರು’ ಎನ್ನುವ ಒತ್ತಡವಲ್ಲ. ಇದ್ದ ಹಾಗೆ, ಇರುವಲ್ಲಿಯೇ ಇರುವ ಆಯ್ಕೆ, ಆಳದ ಅರಿವಿನಿಂದ ಕೂಡಿರುವ ಆಯ್ಕೆ ಕೂಡ ಬಿಡುಗಡೆಯೇ.ಇಂಥ ಬಿಡುಗಡೆಯ ಹಾದಿಯಲ್ಲಿ ನಡೆಯಲು ಬಯಸುವವರಿಗೆ ಇಲ್ಲಿ ಸಂಕಲಿಸಿರುವ ಅನೇಕ ವಿಚಾರಗಳು ಕೈ ದೀಪವಾಗಿ, ಊರುಗೋಲಾಗಿ ಒದಗಿಬರಲಿ ಎಂದು ಆಶಿಸುವೆ.

ಆಗಸ್ಟ್ 15, ಪೂರ್ಣ ಯೋಗಿ ಶ್ರೀಅರವಿಂದರ ಜನ್ಮದಿನ. ನಾಡು ಕಂಡ ಅಪೂರ್ವ ಸಂತ ಶ್ರೀರಾಮಕೃಷ್ಣರ ಮಹಾಸಮಾಧಿಯ ದಿನವೂ ಹೌದು. ಇಂಥದೊಂದು ಪರ್ವದಿನ ಎಲ್ಲರಿಗೂ ಶುಭವನ್ನು ಕೋರುತ್ತಾ ಈ ವಿಶೇಷ ಸಂಚಿಕೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಎಲ್ಲರಿಗೂ ಅಭಿವಂದನೆಗಳು. ಶುಭಾಶಯಗಳು.

ಗೋವಿಂದ ಹೆಗಡೆ- ಸಂಪಾದಕರು